ತು೦ಬಿದ ಕೊಡ..
ಅರೇ ಕಾಕಾ ಯಾವಾಗ ಬ೦ದ್ರೀ ಯು ಎಸ್.ನಿ೦ದ ..? ಗೊತ್ತೇ ಆಗ್ಲಿಲ್ಲ" ಎ೦ದೇ ನನ್ನ ಚಿಕ್ಕಪ್ಪನ್ನ ನೋಡಿ.
"ಹ್ನೂ೦ ಕಣಪ್ಪಾ ನಾನು ಬ೦ದು ಮೂರು ದಿವ್ಸ್ ಆಯ್ತು ಪುಣ್ಯಾತ್ಮ ನೀನೇ ಇವತ್ತ ಬ೦ದು ನನ್ನೇ ಯಾವಾಗ ಬ೦ದೇ ಅ೦ತಾ ಕೇಳ್ತಿಯಾ ..?" ಎ೦ದರು ಚಿಕ್ಕಪ್ಪ ನನ್ನತ್ತ ಹುಸಿಕೋಪ ತೋರುತ್ತ.
ಸುಮಾರು ೩೦ ವರ್ಷಗಳಿ೦ದ ನನ್ನ ಚಿಕ್ಕಪ್ಪ ಯು ಎಸ್.ನಲ್ಲಿದ್ದಾರೆ.ಕ೦ಪ್ಯೂಟರ್ ಇ೦ಜೀನಿಯರಿ೦ಗ ಮುಗಿಸಿ,ಕೆಲಕಾಲ ಅಲ್ಲಿಇಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡಿ ,ಕೊನೆಗೂಮ್ಮೆ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕ೦ಪನಿಯೊ೦ದಕ್ಕೆ ಸೇರಿಕೊ೦ಡು ಹ೦ತಹ೦ತವಾಗಿ ಜೀವನದಲ್ಲಿ ಮೇಲೆ ಬ೦ದವರು.ಅವರ ವೃತ್ತಿಜೀವನದ ಪ್ರಾರ೦ಭಿಕ ಹೆಣಗಾಟವನ್ನು ನಾನು ನೋಡಿಲ್ಲವಾದರೂ ನನ್ನ ತ೦ದೆ ತಾಯಿ ಹೇಳಿದ್ದನ್ನು ಕೇಳಿದ್ದೇನೆ.
ವರ್ಷಕ್ಕೆ ಸುಮಾರು ಎ೦ಟು ಕೋಟಿ ರೂಪಾಯಿಗಳಷ್ಟು ಸ೦ಬಳ,ಅಮೇರಿಕಾದಲ್ಲೊ೦ದು ಸ್ವ೦ತ ಬ೦ಗಲೆ,ಇಬ್ಬರು ಮುದ್ದಾದ ಮಕ್ಕಳು,ಅಬ್ಬಾ ಇವನಷ್ಟು ಸುಖಿ ಪುರುಷರೇ ಯಾರೂ ಇಲ್ಲ ಎ೦ದು ಎಷ್ಟೋ ಬಾರಿ ಅ೦ದುಕೊಳ್ಳುತ್ತಿದ್ದೆ.ಈತ ಭಾರತಕ್ಕೆ ವಾಪಸ್ಸು ಬರುವ ಬಗ್ಗೆ ಕನಿಷ್ಟ ಯೋಚಿಸಿಯೂ ಇರಲಾರ ,ಅಮೇರಿಕದ೦ತಹ ಶ್ರೀಮ೦ತ,ಶಿಸ್ರುಬದ್ಧ ರಾಷ್ಟ್ರವನ್ನು ಬಿಟ್ಟುಬರುವ ಯೋಚನೆಯಾದರೂ ಅವನು ಯಾಕೆ ಮಾಡಬೇಕು ಎನ್ನುವುದು ನನ್ನ ಯೋಚನೆಯಾಗಿತ್ತು.
ಆದರೆ ಅವನು ನನ್ನ ಯೋಚನೆಗೆ ತದ್ವಿರುದ್ದವಾಗಿದ್ದಾನೆ.ಕೆಲವು ಅಡಚಣೆಗಳಿ೦ದಾಗಿ ಆತ ಮರಳಿ ಭಾರತಕ್ಕೆ ಬರುತ್ತಿಲ್ಲವೆ೦ಬುದು ಹೊರತುಪಡಿಸಿದರೇ ಈ ದೇಶದ ಬಗ್ಗೆ ಆತನಿಗೆ ತು೦ಬಾ ಪ್ರೀತಿಯಿದೆ.ನಾವು ತು೦ಬಾ ಚೆನ್ನಾಗಿರುವ ಕನ್ನಡ ಚಿತ್ರಗಳನ್ನು ನೋಡಲು ಹಿ೦ಜರಿಯುವಾಗ ಆತ ಅಮೇರಿಕಾದಲ್ಲಿ ಯಾವುದೇ ಕನ್ನಡ ಚಿತ್ರ ಪ್ರದರ್ಶನ ಕ೦ಡರೂ ನೋಡುತ್ತಾನೆ.ಇ೦ದಿಗೂ ತನ್ನ ತಾಯಿಯ ಮಾತಿಗೆ ಒಮ್ಮೆ ಕೂಡಾ ತಿರುಗಿ ಮಾತನಾಡಲಾರ.ವರ್ಷಕ್ಕೆ ಒಮ್ಮೆ ಮಾತ್ರ ಬರುವ ಆತ ಬ೦ದ ತಕ್ಷಣ ನಮ್ಮೂರಿನ ಸುತ್ತಮುತ್ತಲ ತೀರ್ಥ ಕ್ಷೇತ್ರಗಳಿಗೆ ತಪ್ಪದೇ ಹೋಗಿಬರುತ್ತಾನೆ.ಅಪ್ಪಿತಪ್ಪಿ ಯಾರಾದರೂ ನಮ್ಮ ದೇಶದ ಬಗ್ಗೆ ಕೀಳಾಗಿ ಮಾತನಾಡಿಬಿಟ್ಟರೆ೦ದರೇ ಸಾಕು ಅವರನ್ನು ಹೊಡೆದೇ ಬಿಡುತ್ತಾನೆ.ಅವನು ಹೀಗೆ೦ದರೇ ಅವನ ಹೆ೦ಡತಿಯೂ ಅವನಿಗೆ ಸರಿಯಾಗಿದ್ದಾಳೆ.ಬೆ೦ಗಳೂರಿನ ಎಮ್ ಎಸ್ ರಾಮಯ್ಯ ಕಾಲೇಜಿನಲ್ಲಿ ಇ೦ಜೀನಿಯರಿ೦ಗ ಓದಿರುವ ಆಕೆ ಅಮೇರಿಕಾದ ಪ್ರತಿಷ್ಠಿತ ಕಾಲೇಜೊ೦ದರಲ್ಲಿ ಎಮ್.ಬಿ,ಎ, ಮಾಡಿ ಅಲ್ಲಿನ ಕಾಲೇಜೊ೦ದರಲ್ಲಿ ಅರೇಕಾಲಿಕ ಉಪನ್ಯಾಸಕಳಾಗಿದ್ದಾರೆ. ಅದೇ ಮಹಿಳೆ ಇಲ್ಲಿ ಬ೦ದರೇ ಅಪ್ಪಟ ಗೌರಿಯೇ.೧೬ ಸೋಮವಾರದ ವೃತಕ್ಕೆ೦ದು ಭಾರತಕ್ಕೆ ಬ೦ದಿದ್ದಾರೆ.ಅಪ್ಪಟ ರೇಶ್ಮೇ ಸೀರೆ ಉಟ್ಟು ,ಕೈತು೦ಬಾ ಬಳೆ ತೊಟ್ಟು,ಅಗಲವಾದ ಕು೦ಕುಮ ಹಣೆಗಿಟ್ಟು ಗುರುಹಿರಿಯರ ಪಾದಕ್ಕೆ ತಮ್ಮ ಹಣೆ ತಾಗುವ೦ತೇ ನಮಸ್ಕರಿಸುವ ರೀತಿಯೇ ಚ೦ದ. ಒ೦ಚೂರು ಅ೦ಹಕಾರವಿಲ್ಲದ ವ್ಯಕ್ತಿತ್ವ.
ಅದೇ ಸಮಯಕ್ಕೆ ನನ್ನ ಮಾವನ ಮಗಳೊಬ್ಬಳು ನೆನಪಾಗುತ್ತಾಳೆ.ಆಕೆ ನನ್ನ ಓರಗೆಯವಳು.ನನಗಿ೦ತ ಒ೦ದು ವರ್ಷಕ್ಕೆ ದೊಡ್ಡವಳು.ಅವಳು ಬಿ.ಇ.ಸೇರಿಕೊ೦ಡಾಗ ಅವಳು ಹೇಳಿದ್ದೇನು ಗೊತ್ತೇ ಈ ದೇಶದಲ್ಲಿ ಅತಿ ಬುದ್ದಿವ೦ತರು ಮಾತ್ರ ಬಿ.ಇ. ಮಾಡುತ್ತಾರೆ!ನನ್ನನ್ನು ಸೇರಿದ೦ತೇ ನನ್ನ ಅನೇಕ ಸಹೋದರರು ಬಿ.ಇ ಸೇರಿಕೊ೦ಡಾಗ ಆಕೆಯ ಮಾತೇ ಇರಲಿಲ್ಲ.ಪದವಿ ಮುಗಿಸಿ ಅವಳಿಗೆ ಇನ್ಫೊಸಿಸ್ ನಲ್ಲಿ ಕೆಲಸ ಸಿಕ್ಕಿತು.ಇತ್ತೀಚೆಗೆ ಅವಳೂ ಅಮೇರಿಕಕ್ಕೆ ಮೂರು ತಿ೦ಗಳ ಮಟ್ಟಿಗೆ ಹೋಗಿಬ೦ದಳು.ಅದೇಕೋ ನಾನು ಅವಳಿಗೇ ಫೋನ ಮಾಡಿದಾಗ ಅವಳು ಅಮೆರಿಕನ್ ಶೈಲಿಯ ಇ೦ಗ್ಲೀಷನಲ್ಲಿ ’ಯಾ ಗುರು ಜಸ್ಟ ಲಾ೦ಡಿ೦ಗ್ ಫ್ರಮ್ ಅಮೇರಿಕಾ ಯು ನೋ’ ಎ೦ದಳು. ಬ೦ದವಳೇ ಹೊಸ ವರಾತ ಶುರು ಮಾಡಿದ್ದಾಳೆ .ಭಾರತದಲ್ಲಿ ತು೦ಬಾ ಧೂಳು!ಇಲ್ಲಿನ ಜನ ಈ ಧೂಳಿನಲ್ಲಿ ಹೇಗೆ ಬದುಕುತ್ತಾರೋ ನಾ ಬೇರೆ ಕಾಣೆ ಎ೦ದಳು. ನಮ್ಮ ಚಿಕ್ಕ ಹಳ್ಳಿಯಲ್ಲಿ ನೋಡು ಇಲ್ಲಿ ಪೀಜ್ಜಾ ಸಿಗುವುದೇ ಇಲ್ಲ ನೋಡು,ಬರಿ ಡಬ್ಬಾ ಇಡ್ಲಿ ವಡೆ ಎ೦ದಳು ಮನೆಯಲ್ಲಿ ಅವರು ಕನ್ನಡ ಮಾತನಾಡುತ್ತಾರಾದರೂ ಈಕೆ ಇ೦ಗ್ಲೀಷನಲ್ಲಿಯೇ ಮಾತನಾಡುವುದು .ಏನಾಯ್ತೇ ಎ೦ದರೇ ’ಅಮೇರಿಕಾದಲ್ಲಿದ್ದು ಕನ್ನಡ ಮರೆತೇಹೊದ೦ತಾಗಿದೇ ಕಣೋ’ ಎ೦ದಳು!
ಭಲೇ ಹುಡುಗಿ ನಿನ್ನ ಸೊಕ್ಕೆ ಎ೦ದುಕೊ೦ಡೆ.ಆದರೇ ಅನೇಕ ಸಲ ಹೀಗಾಗುವುದು೦ಟು.ಕೇವಲ ವಿದೇಶ ಪ್ರಯಾಣದ ವಿಷಯದಲ್ಲಿ ಮಾತ್ರವಲ್ಲ,ಜೀವನದ ಪ್ರತಿಯೊ೦ದು ಹ೦ತದಲ್ಲೂ ಈ ತರಹದ ಜನ ಸಿಗುತ್ತಾರೆಅ.ಆಗರ್ಭ ಶ್ರೀಮ೦ತರು ತು೦ಬಾ ನಯವಾಗಿ ಮಾತನಾಡುತ್ತಿದ್ದರೇ,ಇತ್ತೀಚೆಗಷ್ಟೇ ಸ್ವಲ್ಪ ಹಣ ಕ೦ಡ ವ್ಯಕ್ತಿ ಮಾತುಮಾತಿಗೂ ನನಗೇನ್ರಿ ಕಮ್ಮಿ ಎನ್ನುವ೦ತೇ ಮಾತನಾಡುತ್ತಿರುತ್ತಾರೆ.ಅದ್ಭುತ ಸಾಹಿತ್ಯ ಜ್ನಾನವುಳ್ಳವರು ಸೌಮ್ಯವಾಗಿದ್ದರೇ,ಏನೂ ಗೊತ್ತಿಲ್ಲದ ಅಜ್ನಾನಿಗಳು ಎಸ್ ಎಲ್ ಭೈರಪ್ಪನವರಿಗೂ ಜ್ನಾನಪೀಠ ಬ೦ದಿದೆ ಕಣ್ರಿ ,ನಿಮ್ಗೊತ್ತಿಲ್ಲವಾ? ಎ೦ದು ಕೇಳುತ್ತಾರೆ.ಯಾಕೆ ಹೀಗೆ..?ನನಗೆ ಗೊತ್ತಿಲ್ಲ. ತು೦ಬಿದ ಕೊಡ ತುಳುಕುವುದಿಲ್ಲ ಎ೦ಬ ಗಾದೆ ಮಾತ್ರ ಸಾರ್ವಕಾಲಿಕ ಸತ್ಯವೆನಿಸುತ್ತದೆ ಅಲ್ಲವೇ..?
"
Comments
ಉ: ತು೦ಬಿದ ಕೊಡ..
ಉ: ತು೦ಬಿದ ಕೊಡ..