ಕತೆಗಾರನ ಮಾತು

ಕತೆಗಾರನ ಮಾತು

ನಿನ್ನೆ ಮುಗಿಸಿದ ಶ್ರೀಗಂಧದ ಧೂಪ ಕತೆಬರೆಯುವಾಗ ನನ್ನ ಮನಸ್ಸು ಹಲವು ಚಿಂತನೆಗಳ ಮನೆಯಾಯಿತು. ಅದನ್ನೆಲ್ಲ ಏಕೊ ಹಂಚಿಕೊಂಡರೆ ಚೆನ್ನ ಅನ್ನಿಸಿತು.  ನಾವು ಬರಹಗಳನ್ನು ಬರೆಯುವಾಗ ಬೇರೆ ಬೇರೆ ವಿದಗಳಿವೆ. ಬ್ಲಾಗ್ ಬರೆಯುವಾಗ ಬಹುತೇಕ ನಮ್ಮ ಯೋಚನೆಗಳನ್ನು ಹಂಚಿಕೊಳ್ಳುವ ಉದ್ದೇಶವಿರುತ್ತದೆ. ಕವನಗಳನ್ನು ಬರೆಯುವಾಗ ಯಾವುದೊ ಭಾವನೆಗಳ ಬಂದಿಯಾಗಿರುತ್ತೇವೆ. ಹಾಸ್ಯ ಲೇಖನ ಮುಂತಾದವು ಬರೆಯುವಾಗ ಮನ ಪ್ರಪುಲ್ಲಿತವಾಗಿರುತ್ತದೆ. ಹೇಗೊ ನಮ್ಮ ಮನ ತನ್ನ ಭಾವನೆಗಳ ತೂಕ ಕಡಿಮೆ ಮಾಡಿಕೊಂಡು ಹಗುರವಾಗುತ್ತದೆ.

  ಆದರೆ ಕಥೆಗಳನ್ನು ಹಣೆಯುವಾಗ ಮನಸಿನ ಸ್ಥಿಥಿ ಬೇರೆಯೆ ಆಗುತ್ತದೆ. ಮೊದಲಿಗೆ ಕತೆಗೆ ಒಂದು ವಸ್ತುವನ್ನು ಗುರುತಿಸುತ್ತೇವೆ, ಮನದಲ್ಲಿ ಕಥೆಯ ಹಂದರ ಸ್ಥೂಲವಾಗಿ ಚಿತ್ರಿತವಾಗುತ್ತದೆ, ನಂತರ ಬರೆಯಲು ಕೂತಾಗ ಅದು ತನ್ನದೆ ಆದ ರೂಪ ತೆಗೆದುಕೊಳ್ಳುತ್ತ ತಿರುವುಗಳನ್ನು ಪಡೆಯುತ್ತ ತಾರ್ಕಿಕ ಅಂತ್ಯ ಕೊಡಲು ಪ್ರಯತ್ನಿಸುತ್ತ ಕೊನೆಗೆ ಬರುತ್ತೇವೆ.  ಕತೆಗೆ ಯಾವುದೆ ಪ್ರಭಾವ ಇಲ್ಲ ಅಂದುಕೊಳ್ಳುತ್ತೇವೆ. ಅದು ಸುಳ್ಳು ಅನಿಸುತ್ತದೆ. ನಾವೆ ಬರೆದ ಕೆಲವು ಕತೆಗಳನ್ನು ಗಮನಿಸುವಾಗ, ಬರೆದ ನಂತರ ಅದನ್ನು ಓದಿದರೆ, ವಿಷ್ಲೇಶಣೆ ಮಾಡಲು ಪ್ರಯತ್ನಪಟ್ಟಾಗ ಕೆಲವೊಂದು ಸತ್ಯ ಗೋಚರಿಸುತ್ತದೆ. ಅಲ್ಲಿ ನಮಗೆ ಅರಿವಿದ್ದೊ ಅರಿವಿಲ್ಲದೆಯೊ , ನಾವು ನಂಬಿರುವ ಜೀವನದ ತತ್ವಗಳು, ನಂಬಿಕೆಗಳು ಕತೆಯನ್ನು ನಿಯಂತ್ರಿಸುತ್ತಿರುತ್ತವೆ. ಕತೆ ಪ್ರಾರಂಬವಾದ ಮೇಲೆ ಅದು ಯಾವ ದಿಕ್ಕಿನಲ್ಲಿಯಾದರು ಸಾಗಬಹುದೆನ್ನುವುದು ಸುಳ್ಳು, ಬರವಣಿಗೆ ಸರಾಗವಾಗಿ ಸಾಗಿದ್ದರು ಕತೆಯ ಹಂದರದ ಮೇಲೆ ನಮ್ಮ ಮನಸಿನ ಭಾವನೆಗಳ ಅಭಿಪ್ರಾಯಗಳ ಹೊರೆ ಖಂಡೀತ ಇರುತ್ತದೆ. ಅಷ್ಟೆ ಅಲ್ಲ ಗಂಭೀರ ಕತೆಗಳನ್ನು ಬರೆಯುವಾಗ ಅದೇಕೊ ನಮ್ಮ ಮನ ಪ್ರಚಂಡ ಒತ್ತಡದಲ್ಲಿರುತ್ತದೆ.

    ಶೀಗಂಧದ ಧೂಪದ ಪ್ರತಿಕ್ರಿಯೆಗಳ ಹಿನ್ನಲೆಯಲ್ಲಿ ಯೋಚಿಸುವಾಗ ವಿಚಿತ್ರವೆನಿಸುತ್ತದೆ. ಶೀನಾಥರು ’ಶ್ರೀಗಂಧ’ ಎಂದು ಹೆಸರಿಟ್ಟಾಗಲೆ ಕೊನೆ ಹೀಗೆ ಎಂದು ಊಹಿಸಿದ್ದೆ ಎಂದಿದ್ದಾರೆ, ವಿಚಿತ್ರ ಕಥೆ ಪ್ರಾರಂಬಿಸಿದಾಗ ಅದರ ಅಂತ್ಯ ನನ್ನ ಕಲ್ಪನೆಯಲ್ಲಿರಲಿಲ್ಲ.
 
   ತುಂಬಾ ಹಿಂದೆ ಎಂ.ಕೆ. ಇಂದಿರಾರವರ ಕಥೆ ಒಂದನ್ನು ಓದಿದ್ದೆ, ಅದರಲ್ಲಿ ನಾಯಕಿಯ ಮನೆಯಲ್ಲಿ ವಾರನ್ನ ಮಾಡಿಕೊಂಡಿರುವ ಹುಡುಗನೊಬ್ಬ, ಆಕೆಯನ್ನು ಚಿಕ್ಕವಯಸಿನಲ್ಲಿ ಮೆಚ್ಚುತ್ತಾನೆ, ಅವಳು ಸಹ, ಆದರೆ ಎಂದು ಅವರಿಬ್ಬರು ತಮ್ಮ ನಡುವೆ ಪ್ರೀತಿಯಿದೆ ಎಂದು ಯೋಚಿಸುವದಿಲ್ಲ, ಹುಡುಗ ಮುಂದಿನ ಓದಿಗಾಗಿ ಹೊರಟುಹೋಗುತ್ತಾನೆ, ಇಂಜಿನೀಯರ್ ಆಗಿ , ಎಷ್ಟೋ ವರ್ಷಗಳ ನಂತರ ತನಗೆ ಆಶ್ರಯ ಕೊಟ್ಟಿದ ಮನೆಯ ಯಜಮಾನನನ್ನು ನೆನೆದು ಬರುತ್ತಾನೆ, ನಾಯಕಿ ತನ್ನ ಜಾತಕ ದೋಷದಲ್ಲಿನ ಕಾರಣದಿಂದ ಮದುವೆಯಾಗದೆ ಉಳಿದಿರುತ್ತಾಳೆ , ನಂತರ ಅವರಿಬ್ಬರ ಮದುವೆ ನಡೆಯುತ್ತದೆ. ನನಗೆ ಆ ಕತೆಯ ಸ್ಪೂರ್ತಿ ಇತ್ತು, ಶೀಗಂಧದ ಧೂಪ ಪ್ರಾರಂಬಿಸಿದಾಗ.
    ಆದರೆ ನನ್ನ ಕಥೆಯಲ್ಲಿ ಪ್ರಾರಂಬದಲ್ಲಿಯೆ ನಾಯಕನ ಮದುವೆ ಆಗಿಹೋಗಿರುತ್ತದೆ. ತಾನು ಕಾಲೇಜಿನ ದಿನಗಳಲ್ಲಿ ಮೆಚ್ಚಿದ್ದ ಹುಡುಗಿಯ ದರ್ಶನ ಆಗಬಹುದೆಂದು ನಿರೀಕ್ಷೆಯಲ್ಲಿ ಹೊರಡುತ್ತಾನೆ. ಇಲ್ಲಿ ತ್ರಿಕೋಣ ಪ್ರೇಮದ ಕತೆಗೆ ಅವಕಾಶವಿಲ್ಲ ಎಂದೆ ನನ್ನ ಭಾವನೆ, ನಾಯಕನು ಆಗಲೆ ವಿವಾಹವಾಗಿರುವದರಿಂದ ವಿವಾಹೇತರ ಸಂಬಂದದಂತೆ ನಾಯಕಿ ಅರುಣಳನ್ನು ಚಿತ್ರಿಸಲು, ನನಗೆ ಸಾದ್ಯವಿಲ್ಲ. ಹಾಗೆ ಆದಲ್ಲಿ ಇಬ್ಬರು ತಮ್ಮ ತೂಕವನ್ನು ಕಳೆದುಕೊಳ್ಳುತ್ತಾರೆ. ಇಲ್ಲವೆ ಅರುಣಳು ನಾಯಕನ್ನು ನಿಂದಿಸಿ ಅವನನ್ನು ಒಬ್ಬ ವಿಲನ್ ನಂತೆ ಚಿತ್ರಿಸಲು ಸಾದ್ಯವಿಲ್ಲ ಏಕೆಂದರೆ ಮದುವೆ ಮುಂಚೆ ಹುಡುಗ ಹುಡುಗಿಯರು ಯಾರನ್ನೊ ಮೆಚ್ಚುವುದು ನಂತರ , ವಿವಾಹ ಇವೆಲ್ಲ ಸಾಮಾನ್ಯ. ಅಲ್ಲಿ ಯಾರದೊ ತಪ್ಪನ್ನು ಗುರುತಿಸುವುದು ಹೇಗೆ.
   ನನಗೆ ಸ್ವಲ್ಪ ಗೊಂದಲ ಮೂಡಿದ್ದು ಅರುಣ  , ದತ್ತ ನನ್ನು ಬೇಟಿ ಮಾಡಿದ ನಂತರ ಅವನ ಜೊತೆ ನಡೆದು ಕೊಂಡಿದ್ದು, ಅವಳು ಅವನ ಜೊತೆ ಪ್ರೇಮಿಯಂತೆ ನಡೆದು ಕೊಂಡಳು ಎನ್ನುವುದು ಅರಗಿಸಿಕೊಳ್ಳಲು ನನಗೆ ಕಷ್ಟವಾಯಿತು. ನಾಯಕ ಅವಳಿಗೆ ಮದುವೆಯಾಗಿ ಮಕ್ಕಳಾಗಿರಬಹುದೆಂದು ಭಾವಿಸುತ್ತಾನೆ, ಆದರೆ ಅರುಣಳಂತಹ ಹೆಣ್ಣು ಮದುವೆಯಾಗಿ ಗಂಡನ ಜೊತೆ ಇರುವುದು ನಿಜವಾದರೆ ದತ್ತನ ಜೊತೆ ಅವಳ ನಡತೆಗೆ ಸಮರ್ಥನೆ ಇರಲ್ಲ. ಅಲ್ಲದೆ ಮದುವೆಯಾಗಿರುವ ಒಂದು ಹೆಣ್ಣು ಮತ್ತೊಬ್ಬ ಪರಪುರುಷನಿಗೆ ಹಣೆಗೆ ತನ್ನ ತುಟಿಯೊತ್ತುತ್ತಾಳೆ ಅನ್ನುವುದು ಟೀವಿ ದಾರವಾಹಿಗಳಲ್ಲಿ , ಸಿನಿಮಾಗಳಲ್ಲಿ ತೋರಿಸಬಹುದು.  ಆದರೆ ನನ್ನ ಕಥೆಯಲ್ಲಿ ಅದನ್ನು ಹೇಗೆ ಸಮರ್ಥಿಸುವುದು ಎಂಬ ಗೊಂದಲ ಕಾಡಿತು.
   ಆಚಾರ್ಯರು ಮೊದಲ ಭಾಗದ ಪ್ರತಿಕ್ರಿಯೆಯಲ್ಲಿ ಕತೆ ಕೆಲವು ಊಹೆಗಳನ್ನು ಮೀರಿದರೆ ಸೂಪರ್ ಎಂದರು. ಆಗ ನನಗೆ ಈ ಚಿಂತನೆ ಪ್ರಾರಂಬವಾಯಿತು. ಅದಕ್ಕಾಗಿ ಕಡೆಯಲ್ಲಿ ದತ್ತ ಹೊರಟನಂತರ ನಿಮಗೆಲ್ಲ ಅರುಣಳ ಕತೆ ಹೇಳಲೆ ಬೇಕಿತ್ತು. ಆದರೆ ಸಪ್ತಗಿರಿಯವರು ಕಥೆಯನ್ನು ಅರುಣಳ ತ್ಯಾಗ ಎಂಬಂತೆ ನೋಡಿದರು ಆದರೆ ಅದು ಸರಿಯಲ್ಲವೇನೊ ಎಂದೆ ನನ್ನ ಅನಿಸಿಕೆ , ಏಕೆಂದರೆ ಅವಳು ಧಾಮಿನಿಗಾಗಿ ದತ್ತನನ್ನು ತ್ಯಾಗಮಾಡುವ ಸಂದರ್ಬವೇನು ಬಂದಿಲ್ಲ, ಅವರ ಜೀವನದ ಘಟನೆಗಳೆ ಹಾಗಿವೆ. ಎಲ್ಲವು ಸಹಜ ಘಟನೆಗಳೆ.
  ಇಷ್ಟಾದ ಮೇಲು ಅರುಣ ಅವಿವಾಹಿತಳಾಗಿ ಇರುವುದು ದತ್ತನ ನೆನಪಲ್ಲಿ ಇರುವುದು ಅಪರೂಪದ ವಿಷಯವಾದರು ಅಸಂಬವ ವೇನು ಅಲ್ಲ. ನಮ್ಮ ಮುಂದೆ ಆರೀತಿ ಇರುವ ಹಲವರನ್ನು ಕಾಣಬಹುದು.
   ಪ್ರೇಮಶೇಖರರ ಕತೆಯಲ್ಲಿಯು ಅಷ್ಟೆ ನಾಯಕಿ (?) ತನ್ನ ಗಂಡನನ್ನು ತೊರೆದು ನಾಯಕನ ಜೊತೆ ಬರುತ್ತಾಳೆ ಅಂತ ನಿರೀಕ್ಷಿಸುವುದು ತಪ್ಪು , ಹಾಗಾದಲ್ಲಿ  ತನ್ನ ಅಕ್ಕ ಸರಸಕ್ಕನ ಕತೆಯ ಹಿನ್ನಲೆಯಲ್ಲಿ ಬಂದಿರುವ ನಾಯಕ , ನಾಯಕಿ ಇರುವ ಹಿನ್ನಲೆಯನ್ನು ಗಮನಿಸಿದರೆ ಕತೆಗೆ ಅಪಚಾರವೆ. ಅದರಿಂದಲೆ ಅವಳ ಆತ್ಮಹತ್ಯೆ ಅನಿವಾರ್ಯವಾಗಿತ್ತು ಕತೆಯ ದೃಷ್ಟಿಯಿಂದ.
    ಇಲ್ಲೆ ನನಗೆ ಅನಿಸುತ್ತಿರುವುದು, ಕತೆ ಎಂದು ಕೊಂಡರು ಅದು ಸ್ವತಂತ್ರವಾಗಿರುವದಿಲ್ಲ, ಕತೆಗಾರನ ಮನೋಧರ್ಮವನ್ನು , ಅವನು ನಂಬಿರುವ ತತ್ವಗಳನ್ನು ಅವನು ರಚಿಸುವ ಕತೆಯ ಕಲ್ಪನೆ ಮೀರಲಾರದು ಎಂದೆ ಅನಿಸುತ್ತದೆ.
ಇಂತಿ ನಿಮ್ಮ
ಪಾರ್ಥಸಾರಥಿ

 
 
  

Rating
No votes yet

Comments