"ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಸಾರಸ್ವತ ಬ್ರಾಹ್ಮಣರು (ಗೌಡ ಸಾರಸ್ವತ ಬ್ರಾಹ್ಮಣರು) ೧೬ನೆಯ ಶತಮಾನದಲ್ಲಿ ಗೋವಾ ಬಿಟ್ಟು ದಕ್ಷಿಣದ ರಾಜ್ಯಗಳತ್ತ ಒಲಸೆ ಹೋಗುವ ಹಿನ್ನೆಲೆಯಲ್ಲಿ ಆರಂಭವಾಗುವ "ಸ್ವಪ್ನ ಸಾರಸ್ವತ" ಕಾದಂಬರಿಯಲ್ಲಿ ಒಟ್ಟು ನಾಲ್ಕು ಭಾಗಗಳಿವೆ. ೪೭೪ ಪುಟಗಳ ಈ ಸುದೀರ್ಘ ಕಾದಂಬರಿಯನ್ನು ಓದುವುದೆಂದರೆ, ೧೬-೧೭ನೆಯ ಶತಮಾನಗಳ ಸಂಘರ್ಷಮಯ ದಿನಗಳಲ್ಲಿ ಒಂದು ಸುತ್ತು ಹಾಕಿದ ಅನುಭವ ಪಡೆದಂತೆ.
ಗೋಪಾಲಕೃಷ್ಣ ಪೈಯವರು ಸಾಕಷ್ಟು ಅಧ್ಯಯನ ಮಾಡಿ ಸಾರಸ್ವತ ಬ್ರಾಹ್ಮಣರ (ಗೌಡ ಸಾರಸ್ವತ) ಚರಿತ್ರೆಯ ಹಿನ್ನೆಲೆಯಲ್ಲಿ ನೂರಾರು ಪಾತ್ರಗಳ ಜೀವನ ಸಂಘರ್ಷವನ್ನು ಅಕ್ಷರಗಳಲ್ಲಿ ಹಿಡಿದಿಟ್ಟು, ಆ ಕಥೆಗೆ ಒಂದು ಕಲಾಕೃತಿಯ ಚೌಕಟ್ಟನ್ನು ನೀಡಲು ಯತ್ನಿಸಿ, ಒಂದು ಅಪರೂಪದ ಕಾದಂಬರಿಯನ್ನು ನೀಡಿದ್ದಾರೆ. ಅವರ ಈ ಪ್ರಯತ್ನವನ್ನು ಕನ್ನಡಿಗರು ಗುರುತಿಸಿದ್ದಕ್ಕೆ ಪುರಾವೆ ಎಂದರೆ, ಕಾದಂಬರಿ ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿದ್ದು. ಜೊತೆಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯೂ ಸೇರಿದಂತೆ, "ಸ್ವಪ್ನ ಸಾರಸ್ವತ" ಕಾದಂಬರಿಗೆ ಹಲವು ಪ್ರಶಸ್ತಿ, ಬಹುಮಾನಗಳು ಈಗಾಗಲೇ ದಕ್ಕಿವೆ. ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿರುವ ಗೋಪಾಲಕೃಷ್ಣ ಪೈಯವರ ಈ ಸಾಹಿತ್ಯಕ ಸಾಧನೆಯು ನಿಜಕ್ಕೂ ಅಭಿಮಾನ ಹುಟ್ಟಿಸುವಂತಹದ್ದು. ಅಕಾಡಮಿಕ್ ವಲಯದಿಂದ ಹೊರಗಿನವರೊಬ್ಬರು ಸಾಹಿತ್ಯದಲ್ಲಿ ಈ ಪರಿಯ ಸಾಧನೆ ಮಾಡುತ್ತಿರುವ ವಾಸ್ತವವು, ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಎತ್ತಿ ತೋರುತ್ತಿದೆ ಎನ್ನಬಹುದು.
ಕ್ರಿಶ ೧೬೪೨ ರ ಸುಮಾರಿನಲ್ಲಿ ಆರಂಭವಾಗುವ ಈ ಕೃತಿಯ ಮೊದಲ ಎರಡು ಭಾಗಗಳಲ್ಲಿ ಗೋವಾದ ವಿಪ್ಲವದ ದಿನಗಳ ಚಿತ್ರಣವಿದೆ. ಪೋರ್ಚುಗೀಸರು ಗೋವಾವನ್ನು ಆಕ್ರಮಿಸಿ ನಡೆಸಿದ ದಬ್ಬಾಳಿಕೆಯು ಅಲ್ಲಿನ ಜನರ ಜೀವನವನ್ನೇ ನಲುಗಿಸಿದ ದುರ್ಭರ ದಿನಗಳ ಕಥನ ವಿವರವಾಗಿ ಮೂಡಿ ಬಂದಿದೆ. ಅಂದಿನ ಜನಸಾಮಾನ್ಯರು ಅಶಸ್ತ್ರರು. ಪೊರ್ಚುಗೀಸ್ ಸೈನಿಕರು ಅಮಾಯಕರ ಮೇಲೆ ನಡೆಸುವ ದೌರ್ಜನ್ಯಗಳನ್ನು ಬಿಡಿಸಿಡುವಾಗ ಪೈಯವರ ಲೇಖನಿ ಹರಿತವಾಗಿ ಓಡಾಡಿದೆ. ಕಾದಂಬರಿಯ ಪ್ರಮುಖ ಪತ್ರವಾದ ವಿಠ್ಠು ಪೈ ಜನಿಸುವ ಸಮಯದಲ್ಲಿ ಪೋರ್ಚುಗೀಸರು ಗೋವಾದ ಮೇಲೆ ಎರಗಿದರು. ಗೋವಾದಲ್ಲಿನ ಜನರನ್ನು ಮತಾಂತರಗೊಳಿಸತೊಡಗಿದರು. ಆಮಿಷಗಳಿಂದ ಮತ್ತು ಪವಾಡಗಳಂತಹ ಚಮತ್ಕಾರಗಳ ಪ್ರದರ್ಶನದಿಂದ ಆರಂಭಗೊಂಡ ಮತಾಂತರವು, ನಂತರ ಬಲಾತ್ಕಾರ ಮತ್ತು ಹಿಂಸೆಯ ಮತಾಂತರದತ್ತ ತಿರುಗಿತು. ಇನ್ ಕ್ವಿಶನ್ ಎಂಬ ಹತ್ಯಾಕಾಂಡದ ವಿವರಗಳನ್ನೂ ಪೈಯವರು ಕಾದಂಬರಿಯಲ್ಲಿ ಅಳವಡಿಸಿದ್ದರೂ, ಆ ವಿವರ ನೀಡುವಾಗ ತುಂಬಾ ಸಂಯಮ ತೋರಿದ್ದಾರೆಂದೇ ಹೇಳಬೇಕು. ಇನ್ ಕ್ವಿಷನ್ ಸಮಯದಲ್ಲಿ ನಡೆದ ಭಯೋತ್ಪಾದನೆಯನ್ನು ಅತಿ ರಂಜಿಸುವ ಅಪಾಯದಿಂದ ದೂರ ಉಳಿದು, ಸೂಚ್ಯವಾಗಿ ಅಲ್ಲಲ್ಲಿ ಅದರ ಪ್ರಸ್ತಾಪ ಮಾಡಿ, ಅಂಥದ್ದೊಂದು ಹತ್ಯಾಕಾಂಡ ಗೋವೆಯ ಜನ ಜೀವನದ ಮೇಲೆ ಬೀರಿದ ಪರಿಣಾಮವನ್ನು ಹೇಳಲು ಯತ್ನಿಸಿದ ಸಂಯಮವು , ಲೇಖಕರ ಕುರಿತು ನಿಜಕ್ಕೂ ಗೌರವ ಮೂಡಿಸುತ್ತದೆ. ಪೋರ್ಚುಗೀಸರು ಸಾರಸ್ವತ ಬ್ರಾಹ್ಮಣರ (ಜಿ.ಎಸ್.ಬಿ.) ಮೇಲೆ ನಡೆಸಿದ ದೌರ್ಜನ್ಯ ಮತ್ತು ಅವರಲ್ಲಿ ಕೆಲವರು ವೆರಣೆಯಲ್ಲಿ ನೆಲಸಿ ಸ್ಥಳೀಯರೊಡನೆ ಮುಖಾಮುಖಿಯಾದ ವಿವರಗಳಂತೂ ಸಾಕಷ್ಟು ವಾಚ್ಯವಾಗಿಯೇ ಮೂಡಿಬಂದಿವೆ.
ಪೋರ್ಚುಗೀಸರ ಕ್ರೌರ್ಯತೆಗೆ ಮುಖವಾಣಿಯಾಗುವ ಗೋಯೆಸ್ ಒಂದೆಡೆಯಾದರೆ, ದೂರದ ನಾಡಿನಿಂದ ಬಂದ ಕವಿಹೃದಯದ ಕೋಮೀನೋ , ಆ ಪರಂಗಿಯವರಲ್ಲೂ ಇದ್ದ ಮಾನವೀಯತೆಗೆ ಪ್ರತೀಕವಾಗುತ್ತಾನೆ. ವಿಠ್ಠು ಪೈಯ ಪ್ರೇಯಸಿಯಾದ ಅಲ್ವೀರಾ ಮತ್ತು ಕೋಮಿನೋ ಪಾತ್ರಗಳ ಮೂಲಕ ಪೈಯವರು ನಿಜಕ್ಕೂ ಒಂದು ಚಮತ್ಕಾರವನ್ನೇ ಮಾಡಿ, ಸಂಘರ್ಷದ ಆ ದಿನಗಳ ನಡುವೆಯೂ ಮಾನವೀಯತೆಯ ಸೆಲೆಗಳನ್ನು ಚಿತ್ರಿಸಿ, ಪ್ರೀತಿಯ ಒರತೆಯನ್ನು ಬಿಂಬಿಸಿ, ಕಾದಂಬರಿಯ ಆ ಭಾಗಕ್ಕೆ ಒಂದು ಹೊಸ ಆಯಾಮವನ್ನೇ ತಂದಿದ್ದಾರೆನ್ನಬಹುದು. ವಿಠ್ಠು ಪೈಯು ಪ್ರೇಮದಲ್ಲಿ ಬಿದ್ದು, ಅಲ್ವೀರಾಳನ್ನು ಪ್ರೀತಿಸಿದರೂ, ತನ್ನ ಬ್ರಾಹ್ಮಣ್ಯಕ್ಕೆ ಧಕ್ಕೆ ತಂದುಕೊಳ್ಳದೇ ತನ್ನ ಜೀವನವನ್ನು ಸಮತೋಲನದಲ್ಲಿ ನಡೆಸಿಕೊಂಡು ಹೋಗುವ ಚೋದ್ಯ ಒಂದೆಡೆಯಾದರೆ, ಪ್ಪೋರ್ಚುಗೀಸರ ಕುಲದವಳಾದ ಅಲ್ವೀರಾಳು ಆವರೆಗೆ ಬ್ರಾಹ್ಮಣರನ್ನು ದ್ವೇಷಿಸಿದ್ದರೂ, ವಿಠ್ಠು ಪೈಯನ್ನು ಪ್ರೀತಿಸಿದ ನಂತರ ಪ್ರೀತಿಯ ಮಹಾಪೂರವನ್ನೇ ಹರಿಸಿ, ಅವನಿಗೆ ಯಾವ ರೀತಿಯ ತೊಂದರೆಯನ್ನೂ ನೀಡದೇ ಇರುವ ಪರಿ ಬೆರಗನ್ನು ತರುತ್ತದೆ. ಅದು ಬಹುಷ ಪ್ರೀತಿಯ ಶಕ್ತಿ ಆಗಿರಬಹುದು. ವೆರಣೆ ಎಂಬ ಇಡೀ ಊರನ್ನೇ ಖಾಲಿ ಮಾಡಿ, ದೂರದ ಕನ್ನಡನಾಡಿಗೆ ವಲಸೆ ಹೋಗುವ ಅನಿವಾರ್ಯತೆ ಎದುರಾದಾಗ, ವಿಠ್ಠು ಪೈ ಕೊನೆಯ ಬಾರಿ ತನ್ನ ಪ್ರೇಯಸಿಯೊಂದಿಗೆ ಮಾತನಾಡಲು ಹೋದಾಗ, ಅಲ್ವೇರಾ ಹೇಳುವುದಿಷ್ಟೆ: " ಗೋವೆಗೆ ಹೋಗುತ್ತೇನೆ. ಚರ್ಚು ಸೇರಿ ಸನ್ಯಾಸಿಯಾಗುತ್ತೇನೆ. ಮನುಷ್ಯಳಾಗಿ ಹುಟ್ಟಿದ್ದಕ್ಕೆ ನಾನೂ ಸಮಾಜಕ್ಕಾಗಿ ದುಡಿದು ಸಾರ್ಥಕಳಾಗುತ್ತೇನೆ".
ಆದರೆ ಬೇರೆಲ್ಲ ಕಡೆ ಪೂರ್ಚುಗೀಸರಿಂದ ಭಾರೀ ವಿಪ್ಲವಗಳೇ ನಡೆಯುತ್ತಿರುತ್ತವೆ. ದೂರದ ಪೋರ್ಚುಗಲ್ ನಿಂದ ರಾಜಾಜ್ಞೆ ತಂದು ಇಲ್ಲಿನ ದೇವಾಲಯಗಳನ್ನು ನಾಶ ಮಾಡುತ್ತಾರೆ. ಮಹಾಲಸಾ ದೇವಾಲಯವನ್ನು ಅವರು ಬೀಳಿಸಿ ನೋಡಿದಾಗ, ಅಲ್ಲಿನ ದೇವತಾ ಮೂರ್ತಿ ಕಾಣೆಯಾಗಿರುತ್ತದೆ! ವೆರಣೆ ಎಂಬ ಆ ಹಳ್ಳಿಯ ಜನರನ್ನು ಚಿತ್ರಹಿಂಸೆ ಮಾಡಿ, ವಿಗ್ರಹ ಎಲ್ಲಿ ಎಂದು ಸೈನಿಕರು ಕೇಳುತ್ತಾರೆ. ಅವರ ಬಡಿತಗಳನ್ನು ತಾಳಲಾರದೇ, ವಿಗ್ರಹವನ್ನು ಧಡ್ಡ ಎಂಬಾತ ಬಚ್ಚಿಟ್ಟಿದ್ದಾನೆ ಎಂದು ಬಾಯಿ ಬಿಟ್ಟವನೇ ವಿಠ್ಠು ಪೈ. ಕಾದಂಬರಿಯ ಪ್ರಮುಖ ಪಾತ್ರ ಮತ್ತು ಮಹಾ ವಲಸೆಗೆ ನಾಯಕನಾದ ವಿಠ್ಠು ಪೈಯಲ್ಲಿರುವ ದೌರ್ಬಲ್ಯತೆಗಳು ಮನುಷ್ಯ ಸಹಜವಾದ ಕೊರತೆಗಳ ಸಂಕೇತ ಎನ್ನಬಹುದು.
ನಾಗ್ಡೊ ಭೇತಾಳನ ಸಲಹೆಯಂತೆ ಧಡ್ಡನು ದೇವಿಯ ವಿಗ್ರಹವನ್ನು ಹುಲ್ಲಿನ ಮೆದೆಯಲ್ಲಿ ಬಚ್ಚಿಟ್ಟ ಘಟನೆಯು, ಈ ಎರಡು ಅಪೂರ್ವ ವ್ಯಕ್ತಿಗಳ -ಧಡ್ಡ ಮತ್ತು ನಾಗ್ಡೊ ಭೇತಾಳ -ಪಾತ್ರಗಳನ್ನು ಮುಂಚೂಣಿಗೆ ತಂದು ನಿಲ್ಲಿಸುತ್ತದೆ. ನಾಗ್ಡೊ ಭೇತಾಳನು ಸಾವಿಲ್ಲದ ಅವಧೂತ ಎನ್ನಬಹುದು. ಸಾರಸ್ವತ ಬ್ರಾಹ್ಮಣರು ಯಾವುದೇ ಕಷ್ಟವನ್ನು ಎದುರಿಸುವಾಗಲೂ ಧುತ್ತೆಂದು ಪ್ರತ್ಯಕ್ಷವಾಗುವ ನಾಗ್ಡೊ ಭೇತಾಳನು ಸೂಕ್ತ ಪರಿಹಾರವನ್ನು ಸೂಚಿಸಿ, ಅವರಿಗೆ ಮಾರ್ಗದರ್ಶನ ನೀಡುತ್ತಾನೆ ಮತ್ತು ಅವನಿಗೆ ಸಾವಿಲ್ಲವೆಂಬ ನಂಬಿಕೆ ಇದೆ. ಪೂರ್ಣ ನಗ್ನನಾಗಿ ಓಡಾಡುವ ಈತನಿಗೆ ಅದಾಗಲೇ ಗುಡಿ ಗೋಪುರಗಳನ್ನು ಕಟ್ಟಿರುತ್ತಾರೆ. ಅದೆಷ್ಟೊ ತಲೆಮಾರುಗಳ ಹಿಂದಿನಿಂದಲೂ ಈತ ಬದುಕಿದ್ದಾನಂತೆ! ಕಳ್ಳನ್ನು ಕುಡಿದು, ಮೀನು ತಿನ್ನುತ್ತಾ, ತನ್ನ ದಪ್ಪನೆಯ ಗಡ್ಡವನ್ನು ನೀವುತ್ತಾ ದೊಡ್ಡ ದನಿಯಲ್ಲಿ ಮಾತನಾಡುವ ನಾಗ್ಡೊ ಭೇತಾಳ, ಕೆಲವು ಬಾರಿ ಗದ್ದೆಗಳಲ್ಲಿ ಕೆಲಸ ಮಾಡುವುದೂ ಉಂಟು! ಗೋವಾದ ಆಗಿನ ವಿಪ್ಲವ ದಿನಗಳ ನಡುವೆ, ಅಲ್ಲಲ್ಲಿ ಪ್ರತ್ಯಕ್ಷನಾಗುವ ನಾಗ್ಡೊ ಭೇತಾಳನು ಕಾದಂಬರಿಯ ಆ ಭಾಗದ ಕಥಾನಕಕ್ಕೆ ಅಪರೂಪದ ಆಯಾಮವನ್ನೇ ನೀಡುತ್ತಾನೆ.
ಕಾದಂಬರಿಯ ಮೊದಲ ಎರಡು ಭಾಗಗಳಲ್ಲಿ ವ್ಯಾಪಕವಾಗಿ ಕಾಣಬರುವ ನಾಗ್ಡೊ ಭೇತಾಳನು ಸಾರಸ್ವತ ಬ್ರಾಹ್ಮಣರಿಗೆ ವಲಸೆ ಹೋಗುವಂತೆ ಸಲಹೆ ನೀಡುತ್ತಾನೆ - ಇಲ್ಲೇ ಇದ್ದು ಕಿರಿಸ್ತಾನರಾಗುವ ಬದಲು, ದೂರದ ಊರಿಗೆ ವಲಸೆ ಹೋಗಿ, ಧರ್ಮವನ್ನು ಮುಂದುವರಿಸಿ ಎಂದು ಸಲಹೆ ನೀಡುವ ಆತನು, ವಿಠ್ಠು ಪೈಯ ನಾಯಕತ್ವದಲ್ಲಿ ಹತ್ತೈವತ್ತು ಕುಟುಂಬಗಳನ್ನು ಹೊನ್ನಾವರ, ಕುಂಬಳೆ, ಕೊಚ್ಚಿಯತ್ತ ಕಳುಹಿಸಿಕೊಡುತ್ತಾನೆ. ನಾಗ್ಡೊ ಭೇತಾಳನು ಚಿರಂಜೀವಿ ಎಂಬಂತೆ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ನಂತರ ಎರಡು ಭಾಗಗಳಲ್ಲೂ ಆತನ ಬರವನ್ನು ಕಾಯುವ ಕುಟುಂಬಗಳ ಆಶಯ ವ್ಯಕ್ತವಾಗಿದೆ. ಒಂದು ಜನಾಂಗವನ್ನು ಹಲವಾರು ತಲೆಮಾರುಗಳ ತನಕ ಕಾದು, ರಕ್ಷಿಸಿ, ಮಾರ್ಗದರ್ಶನ ನೀಡಿ, ಅವರ ಧರ್ಮ ಉಳಿಯಬೇಕಾದರೆ, ಇರುವುದೆಲ್ಲವನ್ನೂ ಬಿಟ್ಟು ದೂರದ ನಾಡಿಗೆ ವಲಸೆ ಹೋಗುವುದೊಂದೇ ದಾರಿ ಎಂದು ಸಲಹೆ ನೀಡಿ, ಊರಿಗೆ ಊರನ್ನೇ ಖಾಲಿ ಮಾಡಿಸಿ, ತಾನೊಬ್ಬನೇ ಹಿಂದೆ ಉಳಿದುಕೊಳ್ಳುವ ಈ ನಗ್ನ ಭೇತಾಳನು ಒಂದು ಅಪರೂಪದ ಪಾತ್ರವಾಗಿ ಕಾದಂಬರಿಯುದ್ದಕ್ಕೂ ಚಿತ್ರಣಗೊಂಡಿದ್ದು, ಓದುಗರ ಮನವನ್ನು ಕಾಡುತ್ತಾನೆ. ಕನ್ನಡ ಕಾದಂಬರಿ ಪ್ರಪಂಚದಲ್ಲಿ ನಾಗ್ಡೊ ಭೇತಾಳನಂತಹ ಪಾತ್ರ ತೀರ ಅಪರೂಪದ್ದಂತೂ ನಿಜ.
ಕಾದಂಬರಿಯ ಎರಡನೆಯ ಭಾಗದಲ್ಲಿ ತಮ್ಮ ದೇವತೆಯಾದ ಮಹಾಲಸಾ ವಿಗ್ರಹವನ್ನು ಹುಲ್ಲಿನ ಮೆದೆಯಲ್ಲಿ ಬಚ್ಚಿಟ್ಟು ಅದಕ್ಕಾಗಿ ಪೋರ್ಚುಗೀಸರಿಂದ ಬಂಧನಕ್ಕೊಳಗಾಗಿ, ಚಿತ್ರಹಿಂಸೆ ಅನುಭವಿಸಿ, ಸತ್ತು ಹೋಗುವ ಧಡ್ಡನು ಮತ್ತೊಂದು ವಿಶೇಷ ಪಾತ್ರ. ಈ ಧಡ್ಡ ಎಂಬಾತ ಮೂಕ, ಮಾತನಾಡಲಾರ. ಕಾದಂಬರಿಯ ಮೊದಲ ಎರಡು ಭಾಗಗಳಲ್ಲಿ ವಿವರವಾಗಿ ಮೂಡಿ ಬಂದಿರುವ ಗೋವೆಯ ಮೇಲಿನ ಪೋರ್ಚುಗೀಸರ ದಬ್ಬಾಳಿಕೆಯ ಚಿತ್ರಣದಲ್ಲಿ , ಹೀರೋ ಆಗಿ ಹೊರಹೊಮ್ಮಿ ಹುತಾತ್ಮನಾಗುವ ಧಡ್ಡನದು ಒಂದು ವಿಶಿಷ್ಟ ಅವತಾರ. ವಿಠ್ಠು ಪೈಯ ಮನೆಯ ಮಕ್ಕಳಂತೆ ಬೆಳೆದ ಧಡ್ಡನು, ಅವರಿಗೆ ದೊರತದ್ದಕ್ಕೆ ಒಂದು ವಿಚಿತ್ರ ಕಥೆ ಇದೆ. ಮಾಳಪ್ಪಯ್ಯನ ಮಗನಾದ ವಿಠ್ಠು ಪೈ ಹುಡುಗನಾಗಿದ್ದಾಗ ವಿಪರೀತ ಕಾಯಿಲೆ ಬಿದ್ದ. ಕೊನೆಯ ದಾರಿ ಎಂಬಂತೆ ಅವನನ್ನು ಉಳಿಸಿಕೊಳ್ಳಲೆಂದು, ಮಾಳಪ್ಪಯ್ಯ ಓರ್ವ ಕಿರಿಸ್ತಾನರ ಸನ್ಯಾಸಿಯ ಬಳಿ ಕರೆದುಕೊಂಡು ಹೋಗುತ್ತಾನೆ. ಬಾಲಕ ವಿಠ್ಠು ಪೈಯನ್ನು ಕೈಯಲ್ಲಿ ಹಿಡಿದು, ಮಣ ಮಣ ಮಂತ್ರಹೇಳಿದಂತೆ ಏನನ್ನೋ ನುಡಿದು, ಆ ಸನ್ಯಾಸಿಯು ಮಗುವನ್ನು ವಾಪಸು ಮಾಳಪ್ಪಯ್ಯನಿಗೆ ಕೊಡುತ್ತಾನೆ. ಮಗು ಹುಷಾರಾಗುತ್ತದೆ. ಗಂಡ ಹೆಂಡತಿ ಮತ್ತು ಕಾಯಿಲೆಯಿಂದ ವಾಸಿಯಾದ ಮಗು ವಿಠ್ಠು ಪೈ ಮನೆಗೆ ಹಿಂತಿರುಗು ಬಂದು ನೋಡಿದರೆ, ಮನೆಯ ಜಗುಲಿಯ ಮೇಲೆ ಒಂದು ಪುಟ್ಟ ಹುಡುಗಗನ್ನು ಯಾರೋ ಬಿಟ್ಟು ಹೋಗಿರುತ್ತಾರೆ. ಮಾತನಾಡಲು ಬಾರದ ಆ ಮಗುವನ್ನು ಜತನದಿಂದ ಸಾಕಿದಾಗ, ವಿಠ್ಠು ಪೈಯ ರಕ್ಷಕನಂತೆ ಬೆಳೆದು ದೊಡ್ಡವನಾಗುವ ಅವನನ್ನು ಎಲ್ಲರೂ ಕರೆಯುವುದು ಧಡ್ಡ ಎಂದೇ.
ಪೋರ್ಚುಗೀಸರು ಗೋವೆಯ ಮಹಾಲಸಾ ದೇವಸ್ಥಾನವನ್ನು ಬೀಳಿಸುವಷ್ಟರಲ್ಲಿ, ಯಾರಿಗೂ ಗೊತ್ತಾಗದಂತೆ ದೇವಿಯ ಮೂರ್ತಿಯನ್ನು ಧಡ್ಡನು ಹುಲ್ಲಿನ ಮೆದೆಯಲ್ಲಿ ಬಚ್ಚಿಡುತ್ತಾನೆ; ವಿಠ್ಠು ಪೈಯ ಬಾಯಿಂದಲೇ ಆ ಸತ್ಯವನ್ನು ಹೊರತೆಗೆಯುವ ಪೋರ್ಚುಗೀಸರು, ಧಡ್ಡನನ್ನು ಇನ್ನಿಲ್ಲದಂತೆ ಚಿತ್ರಹಿಂಸೆಗೊಳಿಸಿ ಸಾಯಿಸುತ್ತಾರೆ. ಧರ್ಮ ರಕ್ಷಣೆಯ ಪ್ರಯತ್ನದಲ್ಲಿ ಹುತಾತ್ಮನಾದ ಧಡ್ಡನಿಗೆ ಗೌಡ ಸಾರಸ್ವತ ಜನರ ಎಲ್ಲಾ ಶುಭಕಾರ್ಯಗಳಲ್ಲೂ ಗೌರವ ದೊರೆಯುವ ಒಂದು ಸಂಪ್ರದಾಯವೇ ಬೆಳೆದು ಬಂದು, ಧಡ್ಡನು ಅಲೌಕಿಕನಾಗುವ ಪರಿ ಬೆರಗು ತರುತ್ತದೆ.
ಧಡ್ಡನ ಸಾವಿನಂತೆಯೇ ಓದುಗರನ್ನು ಕಾಡುವ ಮತ್ತೊಂದು ಸಾವೆಂದರೆ, ನಾಗಪ್ಪನದು. ಮನೆ ಮಗನಾದ ನಾಗಪ್ಪನಿಗೆ ಕಾಲಿಲ್ಲ. ಅವನು ನಾಗನ ಪ್ರತಿರೂಪ ಎನ್ನಬಹುದು; ಒಂದು ಶುಭಕಾರ್ಯದಂದು ತಾಯಿಯ ಆಸೆಯಂತೆ ಅಕ್ಕನನ್ನು ಕರೆದು ಬರಲು ತೆವಳಿಕೊಂಡೇ ಹೋಗಿ ಬರುವ ಆತ, ಹೋಗಿ ಬಂದ ಆಯಾಸದಿಂದ, ಹಾವು ಸಿಂಬಿ ಸುತ್ತಿದಂತೆ ಸುತ್ತಿಕೊಂಡು, ಒಲೆಯ ಹಿಂದೆ ಮಲಗಿದ. ಅಡುಗೆಮನೆಯ ಕತ್ತಲಲ್ಲಿ ಅವನನ್ನು ಸರಿಯಾಗಿ ಗಮನಿಸದೇ, ಕುದಿಯುತ್ತಿರುವ ಬಿಸಿ ಪಾಯಸದ ದೊಡ್ಡ ಪಾತ್ರೆಯನ್ನು ಒಲೆಯ ಮೇಲಿನಿಂದ ಕೆಳಗಿಳಿಸಿ, ನೇರವಾಗಿ ಅವನ ಮೇಲೆ ಇಟ್ಟದ್ದರಿಂದ, ಕೂಗಲೂಆಗದೇ,ಮಿಸುಕಾಡಲೂ ಆಗದೇ, ಆತ ಉಸಿರುಗಟ್ಟಿ ಸತ್ತುಹೋಗುತ್ತಾನೆ. ಪಾಯಸ ಬಡಿಸಲು ಬಿಸಿ ಪಾತ್ರೆಯನ್ನು ಈಚೆಗೆ ತೆಗೆದು ನೋಡಿದಾಗ, ನಾಗಪ್ಪನ ಬೆಂದ ದೇಹ ಪಾತ್ರೆಯ ತಳಭಾಗದಲ್ಲಿ ಅಂಟಿಕೊಂಡಿತ್ತು. ಪಾತ್ರೆಯಲ್ಲಿದ್ದ ಪಾಯಸ ನೀಲಿಯಾಗಿತ್ತು. ಅಂದಿಗೆ ಇಪ್ಪತ್ತೆರಡನೆಯ ತಲೆಮಾರಿನಲ್ಲಿ ಮತ್ತೆ ಹುಟ್ಟಿ ಬರುತ್ತೇನೆ ಎಂದು, ಸಾಯುವ ಮುಂಚೆನುಡಿದ ನಾಗಪ್ಪನ ಮಾತುಗಳನ್ನು ಆ ಕುಟುಂಬದ ಎಲ್ಲರೂ ನೆನಪಿಟ್ಟುಕೊಂಡು, ಅವನ ಮರುಹುಟ್ಟುಗಾಗಿ ಕಾಯುವ ಪ್ರಕ್ರಿಯೆಯೂ ಕಾದಂಬರಿಯ ಕಥಾನಕಕ್ಕೆ ಹೊಂದಿಕೊಂಡಿದೆ.
ದೀರ್ಘ ಕಥನವನ್ನು ಹೊಂದಿರುವ "ಸ್ವಪ್ನ ಸಾರಸ್ವತ" ಕಾದಂಬರಿಯ ಮೂರನೆಯ ಮತ್ತು ನಾಲ್ಕನೆಯ ಭಾಗಗಳು ಕುಂಬಳೆಯ ಸೀಮೆಯ ಹಿನ್ನೆಲೆಯಲ್ಲಿ ಹರಡಿಕೊಂಡಿವೆ. ವಿಠ್ಠು ಪೈ ವ್ಯಾಪಾರದಲ್ಲಿ ಅಭಿವೃದ್ಧಿಗೊಂಡ ಕಥೆ; ಕೇವಲ ವಿಠ್ಠು ಪೈ ಮಾತ್ರವಲ್ಲ, ಗೋವೆಯಿಂದ ಉಟ್ಟ ಬಟ್ಟೆಯಲ್ಲೇ ಆ ದೂರದ ನಾಡಿಗೆ ಅವನ ಜೊತೆ ಬಂದವರೆಲ್ಲರೂ ಯಶಸ್ವಿಯಾಗಿ ವ್ಯಾಪಾರ ಮಾಡಿ, ಒಂದಲ್ಲ ಒಂದು ಕಡೆ ನೆಲೆ ಕಂಡುಕೊಳ್ಳುವ ಕಥೆ; ಕೆಲವರು ಜಮೀನು ಖರೀದಿಸಿ ಕೃಷಿಯಲ್ಲಿ ತೊಡಗಿಕೊಳ್ಳುವ ಕಥೆ; ಮತ್ತೆ ಕೆಲವರು ಯಾವ ಅಭಿವೃದ್ಧಿಯನ್ನೂ ಕಾಣದೆ ಹೋರಾಡುತ್ತಿರುತ್ತಾರೆ. ಈ ರೀತಿ ಮೂರನೆಯ ಭಾಗದಲ್ಲಿ ಆ ಸಮುದಾಯ ಒಂದೆಡೆ ಬೇರು ಕಂಡುಕೊಳ್ಳುವ ದಿನಗಳ ಚಿತ್ರಣ.
ವಿಠ್ಠು ಪೈ ತನಗೆ ತಿಳಿದಿದ್ದ ತಮ್ಮ ಕುಲದ ಎಲ್ಲಾ ಸಂಘರ್ಶಗಳನ್ನು, ಗೋವೆಯ ವಿವರಗಳನ್ನು, ತಮ್ಮ ಹೋರಾಟವನ್ನು, ತಮ್ಮ ಕುಲಕ್ಕೆ ಇರುವ ಭಾಗ್ಯ ಮತ್ತು ಅಂಟಿದ ಶಾಪವನ್ನು, ನಾಲ್ಕು ನೂರು ವರ್ಷಗಳ ನಂತರ ಮುಂದಿನ ತಲೆಮಾರು ಗೋವೆಗೆ ಹಿಂದಿರುಗಬೇಕೆಂಬ ವಿಚಾರವನ್ನು ತನ್ನ ಮೊಮ್ಮಗ ರಾಮಚಂದ್ರ ಪೈ ಗೆ ಹೇಳಿ, ಕಣ್ಮುಚ್ಚುತ್ತಾನೆ.
ರಾಮಚಂದ್ರ ಪೈ ಬೆಳೆದು, ಧರ್ಮಸ್ಥಳದ ದೇವರನ್ನು ಆಶ್ರಯಿಸಿ, ದೂರದ ಬಳ್ಳಂಬೀಡೆಂಬ ಕಾಡು ಪ್ರದೇಶದಲ್ಲಿ ಜಮೀನು ಖರೀದಿಸುತ್ತಾನೆ. " ರಾಮಚಂದ್ರ ಪೈ ಒಂದು ಶುಭ ಮುಹೂರ್ತದಲ್ಲಿ ತನ್ನ ಹೆಂಡತಿ ಪಾರ್ವತಿ ಬಾಯಿಯನ್ನೂ ತನ್ನೆರಡು ಮಕ್ಕಳಾದ ಅಂತು ಪೈ ಮತ್ತು ತಿಮ್ಮ ಪೈ ಅವರನ್ನೂ , ಇಬ್ಬರು ತಮ್ಮಂದಿರನ್ನೂ ಸೇರಿಸಿಕೊಂಡು, ಎರಡು ಎತ್ತಿನ ಗಾಡಿಗಳಲ್ಲಿ ಪಾತ್ರೆ ಪರಡಿ ಹಾಸಿಗೆ ಗದ್ದಡಿ ಎಲ್ಲ ಪೇರಿಸಿ, ಬಳ್ಳಂಬೀಡಿನ ದಾರಿ ಹಿಡಿದು, ಕುಂಬಳೆಯನ್ನು ಬಿಟ್ಟ."
ಕಾದಂಬರಿಯ ನಾಲ್ಕನೆಯ ಭಾಗದಲ್ಲಿ, ರಾಮಚಂದ್ರ ಪೈ ಬಳ್ಳಂಬೀಡಿನಲ್ಲಿ ಅಭಿವೃದ್ಧಿಗೊಂಡು, ತುಂಬಿದ ಮನೆಯ ಯಜಮಾನಿಕೆಯನ್ನು ನಡೆಸುವ ವಿವರಗಳೊಂದಿಗೆ ಆರಂಭಗೊಂಡು, ಸಮಾಜವು ಬೇರುಬಿಡುವ ಪ್ರಕ್ರಿಯೆಯನ್ನು ಚಿತ್ರಿಸುತ್ತದೆ. ಕ್ರಮೇಣ, ಯಾವುದೋ ಶಾಪಕ್ಕೆ ಒಳಗೊಂಡಂತೆ, ಹಲವಾರು ಸಾವುಗಳ ವಿವರಗಳಿಂದ ತುಂಬಿ ಹೋಗಿದೆ ಈ ಭಾಗ. ಅಣ್ಣ - ತಮ್ಮ ಬೇರಾಗುವಿಕೆ, ಅಪ್ಪ-ಮಗ ದೂರಾಗುವಿಕೆ, ಮಾಟ-ಮಂತ್ರಗಳು, ದಾಯಾದಿ ಮತ್ಸರಗಳು, ಹಗೆತನ, ದಾರಿ ತಪ್ಪುವ ಯುವಕರು, ಒಬ್ಬೊಬ್ಬರಾಗಿ ದುರಂತ ಸಾವು ಕಾಣುವ ಪರಿ - ಈ ರೀತಿ ಎಲ್ಲೆಡೆ ವಿಷಾದದ ವಾತಾವರಣವನ್ನು ಚಿತ್ರಿಸುತ್ತದೆ. ಕೆಲವು ದುರಂತಗಳ ವಿವರಣೆಗಳಂತೂ, ತೀವ್ರವಾಗಿದ್ದು, ಒಮ್ಮೊಮ್ಮೆ ಕಾದಂಬರಿಯ ಒಟ್ಟೂ ಹಂದರದ ಚೌಕಟ್ಟನ್ನು ಮೀರಿ, ಬೇರೆಯಾಗಿ ನಿಲ್ಲುತ್ತವೆ. ಜೊತೆಗೆ, ಈ ದುರಂತಗಳ ವಿವರಗಳು ಕಾದಂಬರಿಗೆ ಹೇಗೆ ಹೊಂದಿಕೆಯಾದೀತೆಂಬ ಅಚ್ಚರಿ ಓದುಗರಲ್ಲಿ ತಂದರೂ ತಂದೀತು.
ತಮ್ಮ ಕಷ್ಟಗಳ ಪರಿಹಾರಕ್ಕಾಗಿ, ಗೋವಿಂದಭಟ್ಟರ ಮೂಲಕ ಅಂಜನ ಹಾಕಿಸಿ, ನಾಗಬಿಂಬವನ್ನು ಪತ್ತೆ ಮಾಡಿ, ನಾಗದೇವರ ಪ್ರತಿಷ್ಠಾಪನೆ ಮಾಡಿಸುವ ರಾಮಚಂದ್ರ ಪೈ ಪ್ರಯತ್ನದಲ್ಲಿ, ತಮ್ಮ ಕುಟುಂಬಕ್ಕೆ ಅಂಟಿದ ನಾಗನ ಶಾಪದಿಂದ ಪಾರಾಗುವ ಪ್ರಯತ್ನವಿದೆ. ಆ ನಾಗ ಬಿಂಬವನ್ನು ನಾಶ ಪಡಿಸಲು ಯತ್ನಿಸುವ ದಾಯಾದಿಕುಟುಂಬದ ಭುಜಂಗ ಪೈ ಮತ್ತು ರಂಗ ಪೈ ಇಬ್ಬರ ಸಾವೂ ದಾರುಣವಾಗಿದೆ. ರಾಮಚಂದ್ರ ಪೈ ಮಗ ತಿಮ್ಮ ಪೈ, ತಂದೆಯೊಡನೆ ಜಗಳವಾಡಿ, ಹೆಂಡತಿಯೊಂದಿಗೆ ಮನೆಬಿಟ್ಟು ಹೋದದ್ದಾರೂ ಎಲ್ಲಿಗೆ - ಸರ್ಪದಿಂದ ಕಚ್ಚಿಸಿಕೊಂಡು ನೇರವಾಗಿ ಪರಲೋಕಕ್ಕೆ. "ಈ ಮನೆಯಿಂದ ಹೊರಗೆ ಹೋಗಬೇಡ" ಎಂದು ಗಂಡ ಹೇಳಿದ್ದನ್ನು ಅಕ್ಷರಶ: ಪಾಲಿಸುವ ಹೆಂಡತಿ ಜಾಹ್ನವಿಯು, ಕಾಡಿನ ಮಧ್ಯ ಇದ್ದ ಆ ಭೂತ ಬಂಗಲೆಯಲ್ಲಿ ಏಕಾಂಗಿಯಾಗಿ, ಜೀವಂತ ಪಿಶಾಚಿಯಂತೆ ಹತ್ತಾರು ವರ್ಷ ಬದುಕಿ, ಕೆಲಸದಾಕೆಯನ್ನೇ ಭಕ್ಷಿಸಿ, ನಂತರ ಬೆಂಕಿಗೆ ಸಿಕ್ಕು ಬೂದಿಯಾಗುವ ದಾರುಣತೆಯಾದರೂ ಎಂತಹದ್ದು? ಯಾಕಾಗಿ? ಇಂತಹ ಚಿತ್ರವಿಚಿತ್ರ ಘಟನೆಗಳಿಗೆ ನಾಗನ ಶಾಪದ ನೆಪ ನೀಡಬಹುದಾದರೂ, ಒಟ್ಟೂ ಕಥೆಯ ಓಘಕ್ಕೆ ಅವು ಹೊಂದಿಕೊಳ್ಳದೆ, ಬೇರೆಯಾಗಿಯೇ ನಿಲ್ಲುತ್ತವೆ. ಕೆಲವು ದುರಂತಗಳ ತೀವ್ರತೆಯು ಕಾದಂಬರಿಯ ಬಂಧಕ್ಕೆ ಹೊಂದುವುದೇ ಇಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಕಾದಂಬರಿಯ ನಾಲ್ಕನೆಯ ಭಾಗವು ಮೊದಲ ಮೂರು ಭಾಗಗಳಿಗಿಂತ ಭಿನ್ನವಾಗಿ ಮೂಡಿ ಬಂದಿದೆ. ಸಾಲು ಸಾಲಾಗಿ ಘಟಿಸುವ ಸಾವುಗಳ ಚಿತ್ರಣವೇ ಈ ಭಾಗವನ್ನು ಪ್ರತ್ಯೇಕಗೊಳಿಸಿವೆ ಎನ್ನಬಹುದು.
ಕೊನೆಯಲ್ಲಿ ದೈಹಿಕವಾಗಿ ದುರ್ಬಲನಾಗಿದ್ದ ರಾಮಚಂದ್ರ ಪೈಯ ಕನವರಿಕೆಯನ್ನು ಈಡೇರಿಸಲೋ ಎಂಬಂತೆ, ಅರ್ಧ ಕನಸಿನ ಸ್ಥಿತಿಯಲ್ಲೇ ಅವನಿಗೆ ನಾಗ್ಡೊ ಭೇತಾಳನ ದರ್ಶನ ಆಗುತ್ತದೆ. ಮೂರು ವರ್ಷದ ಮಗು ಸಿದ್ದನ ವೆಂಕಟೇಶನನ್ನು ಆತ ಕಾಪಾಡುತ್ತಾನೆ. ಇನ್ನು ಆತನ ಪೀಳಿಗೆಗೆ ಕಷ್ಟ ಕೋಟಲೆಗಳು ಬರುವುದಿಲ್ಲ ಎಂಬ ಶುಭ ನುಡಿಯೊಂದಿಗೆ, ನಾಗ್ಡೊ ಭೇತಾಳನು ಆ ಮಗುವನ್ನು ಎತ್ತಿಕೊಂಡು ಪೂರ್ವದತ್ತ ಸಾಗುವುದರೊಂದಿಗೆ ಕಾದಂಬರಿಯು ಮುಕ್ತಾಯವಾಗುತ್ತದೆ. ನಾಗ್ಡೊ ಭೇತಾಳನು ಕೊನೆಯಲ್ಲಿ ಈ ರೀತಿ ಪ್ರತ್ಯಕ್ಷನಾಗುವ ಪರಿಯು, ಮುಂದಿನ ಶುಭದಿನಗಳ ಸೂಚನೆ ಎನ್ನಲಾದೀತೆ ಅಥವಾ, ಮಗುವನ್ನು ಎತ್ತಿಕೊಂಡು ಪೂರ್ವದತ್ತ ಸಾಗುವ ಅವನ ನಡೆಯು, ಇನ್ನೂ ಬಾಕಿ ಉಳಿದಿರುವ ಆ ಜನಾಂಗದ ಹೋರಾಟದ ಸೂಚನೆಯನ್ನು ನೀಡುತ್ತದೆಯೆ? ಸಾರಸ್ವತ ಬ್ರಾಹ್ಮಣರ ವಲಸೆಯಿಂದ ಆರಂಭವಾಗುವ ಈ ಸುದೀರ್ಘ ಕಥನವು, ೧೯-೨೦ನೆಯ ಶತಮಾನ ಚಿತ್ರಣವನ್ನೂ ಒಳಗೊಂಡು, ಕನ್ನಡದ್ ಪ್ರಮುಖ ಕಾದಂಬರಿಯಾಗಿ ಗಮನ ಸೆಳೆಯುವುದಂತೂ ದಿಟ. (ಇದು ಗೌಡ ಸಾರಸ್ವತ ಬ್ರಾಹ್ಮಣ ಜನಾಂಗದ ವಲಸೆಯ ಕಥೆ . ಕಾದಂಬರಿಯುದ್ದಕ್ಕೂ, "ಸಾರಸ್ವತ ಬ್ರಾಹ್ಮಣರು" ಎಂದೇ ಬಳಸಲಾಗಿದೆ. )
Comments
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by kamath_kumble
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by SRINIVAS.V
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by naveen biddappa
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by lgnandan
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by makara
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by makara
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by sasi.hebbar
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by swara kamath
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by Shreekar
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by Shreekar
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by sasi.hebbar
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ
In reply to ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ by manju787
ಉ: "ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ