ಕರಡಿ ಮತ್ತು ನರಿಯ ಪಾಲುಗಾರಿಕೆ: ಹಳೆಯ ಮತ್ತು ಹೊಸ ಕಥೆ (ನೀತಿ ಕಥೆ ?!)

ಕರಡಿ ಮತ್ತು ನರಿಯ ಪಾಲುಗಾರಿಕೆ: ಹಳೆಯ ಮತ್ತು ಹೊಸ ಕಥೆ (ನೀತಿ ಕಥೆ ?!)

          ಚಿತ್ರ ಕೃಪೆ: ಸಪ್ತಗಿರಿಯವರ ಪ್ರತಿಕ್ರಿಯೆಲಲ್ಲಿರುವ ಕೊಂಡಿ

ಒಂದಾನೊಂದು ಊರಿನಲ್ಲಿ ಒಂದು ಕರಡಿ ಮತ್ತು ಒಂದು ನರಿ ಗೆಳೆಯರಾಗಿದ್ದವು. ಅವು ಒಮ್ಮೆ ತಮ್ಮ ಜೀವನೋಪಾಯಕ್ಕಾಗಿ ಏನಾದರೂ ಒಂದು ಕೆಲಸವನ್ನು ಮಾಡಬೇಕು ಎಂದು ಆಲೋಚಿಸಿದವು. ಆಗ ಅವೆರಡೂ ಸೇರಿ ಒಂದು ಹೊಲವನ್ನು ಗುತ್ತಿಗೆಗೆ ತೆಗೆದುಕೊಂಡು ವ್ಯವಸಾಯ ಮಾಡಲು ನಿರ್ಧರಿಸಿದವು. ಅದರ ಪ್ರಕಾರ ಒಂದು ಹೊಲವನ್ನು ಆಯ್ಕೆ ಮಾಡಿಕೊಂಡು ಕಳೆ-ಕಸವನ್ನು ತೆಗೆದು ಹೊಲವನ್ನು ಚೆನ್ನಾಗಿ ಉಳುಮೆ ಮಾಡಿದವು. ಆಮೇಲೆ ಅದಕ್ಕೆ ಗೊಬ್ಬರ ಹಾಕಿ ನೆಲವನ್ನು ಹರಗಿ ಹದಮಾಡಿ ಬೀಜ ಬಿತ್ತುವುದಕ್ಕೆ ಸಿದ್ಧತೆ ಮಾಡಿಕೊಂಡವು. ಮೊದಲನೆ ವರ್ಷ ಅವು ಜೋಳದ ಬೆಳೆಯನ್ನು ಬಿತ್ತಲು ನಿರ್ಧರಿಸಿದವು. ಅದರಂತೆ ಜೋಳದ ಬೀಜವನ್ನು ಬಿತ್ತಿ, ಮೊಳೆಕೆಯೊಡೆದು ಪೈರು ಒಂದು ಹಂತಕ್ಕೆ ಬಂದಾಗ ಅದರಲ್ಲಿ ಕಳೆ ತೆಗೆದು; ಕಾಲಕಾಲಕ್ಕೆ ನೀರು ಹಾಯಿಸಿದವು. ಕಾಳಿನಲ್ಲಿ ಹಾಲು ತುಂಬಿ ತೆನೆಗಳು ಗಟ್ಟಿಯಾಗಿ ಖಟಾವು ಮಾಡುವ ಸಮಯ ಬಂದಿತು. ಆಗ ನರಿ ಕರಡಿಗೆ ಹೇಳಿತು, ಗೆಳೆಯಾ ಈಗ ನಾವು ಫಸಲನ್ನು ಹಂಚಿಕೊಳ್ಳುವ ಕಾಲ ಬಂದಿದೆ ಆದ್ದರಿಂದ ಇಬ್ಬರೂ ಸಮಾನವಾಗಿ ಅದನ್ನು ಹಂಚಿಕೊಳ್ಳೋಣ ಎಂದಿತು. ಅದರ ಮಾತಿಗೆ ಕರಡಿ ಸರಿ ಎಂದಿತು. ಆಗ ನರಿ ಒಂದು ಕರಾರು ಮಾಡಿತು ಅದೇನೆಂದರೆ ತೆನೆಯನ್ನು ನಾವು ಒಣಗಿಸಿ ಗುಂಡು ಆಡಿಸಿ ಕಾಳನ್ನು ಬೇರ್ಪಡಿಸಿ ಚೀಲದಲ್ಲಿ ತುಂಬುವುದಕ್ಕೆ ಬಹಳ ಸಮಯ ಹಿಡಿಯುತ್ತದೆ ಆಗ ತೆನೆಗಳನ್ನು ಕಾಯುವುದು ಬಹಳ ಕಷ್ಟವಾಗುತ್ತದೆಯಾದ್ದರಿಂದ ನಾವು ಬೆಳೆಯನ್ನು ಈಗಲೇ ಹಂಚಿಕೊಳ್ಳೋಣ. ಅದರ ಪ್ರಕಾರ ಮೇಲಿನರ್ಧದ್ದನ್ನು ನಾನು ತೆಗೆದುಕೊಳ್ಳುತೇನೆ ಮತ್ತು ನೀನು ಕೆಳಗಿನ ಅರ್ಧ ತೆಗೆದುಕೋ ಎಂದು ಹೇಳಿತು. ಆಗ ಕರಡಿ ಇಬ್ಬರೂ ಸೇರಿ ಹೊಲವನ್ನು ಉತ್ತು, ಬಿತ್ತು, ಕಳೆ ತೆಗೆದಿದ್ದೇವೆ ಆದ್ದರಿಂದ ಇಬ್ಬರೂ ಸೇರಿಯೇ ತೆನೆಗಳಿಂದ ಕಾಳುಗಳನ್ನು ಬೇರ್ಪಡಿಸಿ ಅವುಗಳನ್ನು ಸಮವಾಗಿ ಹಂಚಿಕೊಳ್ಳೋಣವೆಂದಿತು. ಆಗ ನರಿ ಇದಕ್ಕೆ ಒಪ್ಪದೆ ತಾನು ಹೇಳಿದ ಪ್ರಕಾರವೇ ಭಾಗ ಮಾಡಿಕೊಳ್ಳಬೇಕೆಂದು ಕರಡಿಗೆ ತಾಕೀತು ಮಾಡಿ ತನಗೆ ಮೇಲಿನರ್ಧ ಬರುವಂತೆ ನೋಡಿಕೊಂಡಿತು. ಪಾಪ ಕಾಳುಗಳೆಲ್ಲಾ ನರಿಯ ಪಾಲಾದರೆ ಕರಡಿಗೆ ಬರೀ ಮೇವು ಮಾತ್ರ ಉಳಿದುಕೊಂಡಿತು.

         ಮುಂದಿನ ಸಲ ಅವು ನೆಲಗಡಲೆ (ಕಡಲೆಕಾಯಿ/ಕಳ್ಳೇಕಾಯಿ/ಶೇಂಗಾ/ಬುಡ್ಡೆಕಾಯಿ) ಬಿತ್ತಲು ನಿರ್ಧರಿಸಿದವು. ಮೊದಲಿನಂತೆ ನರಿ ಮತ್ತು ಕರಡಿ ಸೇರಿಕೊಂಡು ಬೆಳೆಯನ್ನು ಉತ್ತು,ಬಿತ್ತು, ಕಳೆ ತೆಗೆದು ಬೆಳೆ ಕೊಯ್ಲಿಗೆ ಸಿದ್ಧವಾಯಿತು. ಆಗ ಕರಡಿ ಎಂದಿತು, ನರಿಯಣ್ಣ ನಾವು ಹಿಂದಿನ ಸಾರಿಯಂತೆ ಬೆಳೆಯನ್ನು ಸಮಪಾಲು ಮಾಡಿಕೊಳ್ಳೋಣ; ಅದರ ಪ್ರಕಾರ ನಾನು ಕೆಳಗಿನ ಅರ್ಧ ತೆಗೆದುಕೊಳ್ಳುತ್ತೇನೆ ನೀನು ಮೇಲಿನರ್ಧ ತೆಗೆದುಕೋ ಎಂದಿತು. ಆಗ ಠಕ್ಕ ನರಿ, ಹಾಗೆ ಮಾಡಿದರೆ ನಿನಗೆ ಅನ್ಯಾಯವಾಗುತ್ತದೆ; ನೀನು ಹೋದ ವರ್ಷ ಕೆಳಗಿನ ಅರ್ಧ ತೆಗೆದುಕೊಂಡಿದ್ದರಿಂದ ಈ ಸಾರಿ ನಾನು ಕೆಳಗಿನರ್ಧ ತೆಗೆದುಕೊಳ್ಳುತ್ತೇನೆ ನೀನು ಮೇಲಿನರ್ಧ ತೆಗೆದುಕೋ ಎಂದು ಅದನ್ನು ಒಪ್ಪಿಸಿತು. ಅದರಂತೆ ಪಾಪ, ಕರಡಿಗೆ ನೆಲಗಡಲೆಯ ಹೊಟ್ಟು ಸಿಕ್ಕರೆ ಗುಳ್ಳೇ ನರಿ ಕಡಲೇ ಬೀಜವನ್ನು ತೆಗೆದುಕೊಂಡಿತು. ಮುಂದಿನ ವರ್ಷ ಮತ್ತೆ ಇವೆರಡೂ ಸೇರಿ ಸಜ್ಜೆ ಬೆಳೆಯನ್ನು ಬಿತ್ತಿದವು. ಈ ಸಾರಿಯೂ ಕರಡಿ ತನಗೆ ಹಿಂದಿನಂತೆ ಮೇಲಿನರ್ಧ ಕೊಡೆಂದು ಕೇಳಿದಾಗ ಆ ಮೋಸಗಾರ ನರಿ ನಿನಗೆ ಹಿಂದಿನಂತೆ ಮೇಲಿನದು ಕೊಟ್ಟರೆ ಅನ್ಯಾಯವಾಗುತ್ತದೆ; ಏಕೆಂದರೆ ನೀನು ಹೋದ ವರ್ಷ ಮೇಲಿನದು ತೆಗೆದುಕೊಂಡಿದ್ದರಿಂದ ಈ ಸಾರಿ ಕೆಳಗಿನದನ್ನು ತೆಗೆದುಕೋ ಎಂದು ಹೇಳುತ್ತದೆ. ಇವೆಲ್ಲಾ ಬೇಡ ಇಬ್ಬರೂ ಕೂಡಿಯೆ ಕಷ್ಟ ಪಟ್ಟಿದ್ದೇವೆ ಆದ್ದರಿಂದ ಕಾಳನ್ನು ಮತ್ತು ಮೇವನ್ನು ಸಮನಾಗಿ ಹಂಚಿಕೊಳ್ಳೋಣವೆಂದು ಕರಡಿ ಹೇಳಿದರೆ ಅದನ್ನು ನರಿ ಒಪ್ಪದೆ; ಕರಡಿಗೆ ಬರೀ ಮೇವು ಸಿಗುವಂತೆ ಮಾಡುತ್ತದೆ. ಇದರಿಂದ ಮನನೊಂದ ಕರಡಿ ಇಂಥಹ ಮೋಸಗಾರನ ಸಹವಾಸವೇ ಬೇಡವೆಂದು ಹೊರಟು ಹೋಯಿತು.
ಹಳೆ ಕಥೆಯ ನೀತಿ: ದುಷ್ಟರಿಂದ ದೂರವಿರು. (ಬಹುಶಃ ವಿದೇಶಿ ಕಂಪನಿಗಳಿಗೂ ಮತ್ತು ನಮ್ಮ ಸ್ವದೇಶಿ ಪಾಲುದಾರರಿಗೂ ಇದೇ ರೀತಿಯ ಹೊಂದಾಣಿಕೆ ಇದ್ದರೂ ಇರಬಹುದು)
   
       ಕಾಲ ಚಕ್ರ ಉರುಳಿತು, ಕರಡಿಗೆ ಮದುವೆಯಾಗಿ ಮಕ್ಕಳಾದವು ಅದರಂತೆ ನರಿಗೂ ಮದುವೆಯಾಗಿ ಮಕ್ಕಳಾದವು. ಇಬ್ಬರ ಮಕ್ಕಳೂ ಬೆಳೆದು ದೊಡ್ಡವರಾಗಿ ಶಾಲೆಗೆ ಹೋದವು. ಆ ಮಕ್ಕಳು ತದನಂತರ ಕೃಷಿ ಕಾಲೇಜಿಗೆ ಸೇರಿದವು; ಅಲ್ಲಿ ಮರಿ-ನರಿ ಮತ್ತು ಮರಿ-ಕರಡಿ ಇಬ್ಬರೂ ಒಳ್ಳೆಯ ಸ್ನೇಹಿತರಾದರು. ಅವರೂ ಕೂಡ ತಮ್ಮ ಪದವಿ ಮುಗಿಸಿ ಇಬ್ಬರೂ ಪಾಲುದಾರಿಕೆಯ ವ್ಯವಸಾಯ ಮಾಡಲು ನಿರ್ಧರಿಸಿದವು. ಇಬ್ಬರಿಗೂ ತಮ್ಮ ತಂದೆಯವರ ಕಾಲದಲ್ಲಿ ನಡೆದ ಕಥೆ ಗೊತ್ತಿತ್ತು. ಆದರೂ ಅವನ್ನೆಲ್ಲಾ ಮರೆತು ಈಗ ಇಬ್ಬರೂ ಕೂಡಿಯೇ ವ್ಯವಸಾಯ ಮಾಡಲು ನಿರ್ಧರಿಸಿದ್ದವು. ಮರಿ-ನರಿಯ ಆಲೋಚನೆಯೇನೆಂದರೆ ಈ ದಡ್ಡ ಕರಡಿಗೆ ಮೋಸ ಮಾಡಿ ತನ್ನಪ್ಪನಂತೆ ತಾನೂ ಹಾಯಾಗಿರಬಹುದೆಂದು ಯೋಚನೆ ಮಾಡಿತು. ಆದರೆ ಮರಿ-ಕರಡಿ ತನ್ನ ತಂದೆಗೆ ಉಂಟಾಗಿದ್ದ ಅನ್ಯಾಯವನ್ನು ಸರಿಪಡಿಸಿ ಈ ಮರಿ-ನರಿಗೆ ಬುದ್ಧಿ ಕಲಿಸ ಬೇಕೆಂದು ವಿಚಾರ ಮಾಡಿತು. ಇಬ್ಬರೂ ಕೂತು ಆಲೋಚನೆ ಮಾಡಿ ತಾವು ಕಲಿತಿದ್ದಂತೆ ಮಿಶ್ರ ಬೆಳೆಯನ್ನು ಹಾಕಿದವು. ಅದರ ಪ್ರಕಾರ ನಾಲ್ಕು ಸಾಲು ಶೇಂಗಾ ಬೆಳೆಯನ್ನು ಹಾಕಿದವು ಮತ್ತು ನಾಲ್ಕು ಸಾಲು ಸಜ್ಜೆ ಬೆಳೆಯನ್ನು ಹಾಕಿದವು. ಬೆಳೆ ಬಂದಾಗ ನರಿ ಎಂದಿನಂತೆ ಮೇಲಿನರ್ಧ ಬೇಕೆಂದು ಕೇಳಿತು ಆಗ ಕರಡಿ ಸಲೀಸಾಗಿ ತೆಗೆದುಕೊ ಎಂದಿತು. ಏಕೆಂದರೆ ನಾಲ್ಕು ಸಾಲು ಬೆಳೆದಿರುವ ಸಜ್ಜೆಯನ್ನು ಮಾತ್ರ ತೆಗೆದುಕೊಂಡರೆ ಅದಕ್ಕೆ ಸಜ್ಜೆ ಮಾತ್ರ ಬರುತ್ತಿತ್ತು ಅದನ್ನು ಆಲೋಚಿಸಿ ನರಿ ತನಗೆ ಕೆಳಗಿನರ್ಧ ಕೊಡು ಎಂದು ಕೇಳಿತು. ಅದಕ್ಕೂ ಕರಡಿ ಸಿದ್ಧವಾಯಿತು ಏಕೆಂದರೆ ಕೆಳಗಿನ ಶೇಂಗಾ ಮಾತ್ರ ನರಿಗೆ ಹೋಗುತ್ತಿತ್ತು. ಅಗ ನರಿ ಯೋಚಿಸಿತು ಅರ್ಧ ಹೊಲ ನಂದು ಅರ್ಧ ಹೊಲ ನಿಂದು ಎಂದು ಹೇಳಿ ಮೋಸ ಮಾಡೋಣವೆಂದರೆ ಅದಕ್ಕೂ ಅವಕಾಶವಿರಲಿಲ್ಲ ಏಕೆಂದರೆ ಅವು ಮಿಶ್ರ ಬೆಳೆಯನ್ನು ಬೆಳೆದಿದ್ದವು. ಆಗ ನರಿಗೆ ಬುದ್ಧಿ ಭೆಟ್ಟಿಯಾಗಿ (ಬುದ್ಧಿ ಬಂದು) ಇಬ್ಬರೂ ಸೇರಿ ಖಟಾವು ಮಾಡಿ ಬೆಳೆಯನ್ನು ಮಾರಾಟ ಮಾಡಿ ಬಂದ ಹಣವನ್ನು ಸಮನಾಗಿ ಹಂಚಿಕೊಂಡವು.
ಹೊಸ ಕಥೆಯ ನೀತಿ: ಮೋಸಕ್ಕೆ ಆಸ್ಪದ ಕೊಡದಂತೆ ವ್ಯವಹಾರ ಕುಶಲತೆಯನ್ನು ಬೆಳೆಸಿಕೊ.
-----------------------------------------------------------------------------------------------------------------------------
ವಿ.ಸೂ: ಹಳೆಯ ಕತೆ ನಮಗೆ ಎರಡೋ ಅಥವಾ ಮೂರನೇ ತರಗತಿಯಲ್ಲಿ ಪಠ್ಯಾವಗಿತ್ತು. ಅದಕ್ಕೊಂದು ಹೊಸ ರೂಪ ಕೊಡುವ ಪ್ರಯತ್ನವೇ ಈ ಬರಹ.

Comments