ತಟ್ ಅಂತಾ ಅನಿಸಿದ್ದು

ತಟ್ ಅಂತಾ ಅನಿಸಿದ್ದು

   ನಮ್ಮ ನೆಮ್ಮದಿಯ  ಬದುಕಿಗೆ ಬೇಕಾದ ಮಾಹಿತಿಗಳನ್ನು ನಮ್ಮ ಓದು   ಪೂರೈಸಬೇಕು.   ನಮ್ಮ ಬದುಕಿನ ಅನುಭವವನ್ನು  ನಮ್ಮ  ಬರವಣಿಗೆ  ಪ್ರತಿಬಿಂಭಿಸಬೇಕು. ಓದು ಮತ್ತು ಬರವಣಿಗೆ ಒಂದಕ್ಕೊಂದು ಪೂರಕ ವಾಗಿರಬೇಕು.ಒಟ್ಟಿನಲ್ಲಿ  ಸಮಾಜದ ಅರ್ಥಾತ್ ಜನರ ಹಿತವನ್ನು ಕಾಪಾಡುವ  ಬರವಣಿಗೆ ಸಾಹಿತ್ಯ ಎನಿಸಿಕೊಳ್ಳುತ್ತದೆ . ಇಷ್ಟು ವಿಚಾರದಲ್ಲಿ  ಓದುಗರಾದ ನಿಮ್ಮ ಮತ್ತು ಬರೆಯುತ್ತಿರುವ ನನ್ನ ಮಧ್ಯೆ    ಭಿನ್ನಾಭಿಪ್ರಾಯ ಇಲ್ಲವೆಂದು ಭಾವಿಸುವೆ. ಮುಂದಿನ ನನ್ನ ನಿಮ್ಮ ವಿಚಾರಗಳಲ್ಲಿ ಭೇದ ಬರಬಹುದು, ಬಾರದಿರಲೂಬಹುದು.
ನಮ್ಮ ದೇಶದಲ್ಲಿ ನೂರಾರು ದಾರ್ಶನಿಕರು ಆಗಿಹೋಗಿದ್ದಾರೆ. ಅವರೆಲ್ಲರ ವಿಚಾರಗಳನ್ನು ಕೇಳುವಾಗಲೂ ಅದೇ ಸರಿ ಎನಿಸಲೂ ಬಹುದು. ಆದರೆ ಎಲ್ಲರ ಮಧ್ಯೆ ವೈಚಾರಿಕ ಭಿನ್ನತೆ ಇದ್ದೆ ಇರುತ್ತದೆ. ಆದರೆ ಅಂತಿಮ ಗುರಿ ಎಲ್ಲರದೂ ಒಂದೇ ಆಗಿರುವುದರಿಂದ ನಮಗೆ ಎಲ್ಲವೂ ಹಿತವೇ ಆಗಿ ತೋರುತ್ತದೆ. ಹಾಗಾದರೆ ಅಂತಿಮ ಗುರಿ ಏನು?  ಸಾಮಾನ್ಯವಾಗಿ ಎಲ್ಲರೂ ಹೇಳುವುದು " ಮೋಕ್ಷ". ಹಾಗಾದರೆ ಈ ಮೋಕ್ಷ ಯಾವಾಗ ಸಿಗಬೇಕು? ಸತ್ತಮೆಲೋ , ಬದುಕಿರುವಾಗಲೇ ಸಿಗಬೇಕೋ?  ಬಹುಜನರ ಅಭಿಪ್ರಾಯದಲ್ಲಿ ಸತ್ತನಂತರ ನಮಗೆ ಮೋಕ್ಷ ಸಿಗಬೇಕು, ಅಥವಾ ಸ್ವರ್ಗ ಪ್ರಾಪ್ತಿಯಾಗಬೇಕು, ಎನ್ನುವ ಬಯಕೆಯೊಂದಿಗೆ ಬದುಕಿರುವಾಗ ಹಲವಾರು ಆಕರಣೆಗಳನ್ನು ಮನುಷ್ಯ ಮಾಡುತ್ತಾನೆ. ಇಲ್ಲಿಂದ ನನ್ನ ಭಿನ್ನಾಭಿಪ್ರಾಯ ಆರಂಭಗೊಳ್ಳುತ್ತದೆ.
ನನ್ನ ದೃಷ್ಟಿಯಲ್ಲಿ  ನಾವು ಬದುಕಿರುವಾಗ ಇನ್ನೊಬ್ಬರಿಗೆ ಹಿಂಸೆಕೊಡದೆ, ಸಾಧ್ಯವಾದಷ್ಟೂ  ದುರ್ಬಲರಿಗೆ ಉಪಕಾರಿಯಾಗಿ ಬದುಕು ನಡೆಸಿದರೆ ನಮ್ಮ ಬದುಕಿರುವಾಗಲೇ ನೆಮ್ಮದಿಯಿಂದ ಬದುಕಬಹುದು. ಅದು ಬಿಟ್ಟು  ನೂರಾರು ಜನರ ರಕ್ತ ಹೀರಿ ಧನ ಸಂಗ್ರಹಿಸಿ  ಆನಂತರ ಮುಂದಿನ ಸ್ವರ್ಗ-ನರಕಗಳ ಭಯದಲ್ಲಿ ಪೂಜೆ ಪುನಸ್ಕಾರ, ಹೋಮ, ದಾನ-ಧರ್ಮಗಳನ್ನು ಮಾಡುತ್ತಾ , ಸಮಾಜದಲ್ಲಿ ದೊಡ್ಡವರೆಂದು ಕರೆಸಿಕೊಂಡು ಬದುಕಿದರೆ  ಮುಂದಿನ ಸ್ವರ್ಗ ಅಥವಾ ಮೋಕ್ಷ ವಿರಲಿ, ಸುಖವಾಗಿ ರಾತ್ರಿ ವೇಳೆ ನಿದ್ರೆಯೂ ಬಾರದು.
ಈ ವಿಚಾರದಲ್ಲಿ  ನೂರು ಪ್ರತಿಶತ ನನಗೆ ನಂಬಿಕೆ ಬಂದಿದೆ. ಮೋಕ್ಷ ವೇನಿದ್ದರೂ ಬದುಕಿರುವಾಗಲೇ ಪಡೆಯಬೇಕಾದ್ದು, ಸತ್ತಮೇಲಲ್ಲ. ಪುನರ್ಜನ್ಮ-ಪೂರ್ವಜನ್ಮದ ಬಗ್ಗೆ ನಾನಿಲ್ಲಿ ಮಾತನಾಡುತ್ತಿಲ್ಲ. ಈ ಜನ್ಮದಲ್ಲಿ ನಮ್ಮ ಬದುಕಿನ ಬಗ್ಗೆ ಮಾತನಾಡುತ್ತಿರುವೆ. ನನಗೆ ಅರ್ಥವಾಗದ ವಿಷಯವೆಂದರೆ ಬಹುಪಾಲು ಜನರು ಬೇರೆಯ ದಿಕ್ಕಿನಲ್ಲೇ ಯೋಚಿಸುತ್ತಾರೆ, ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದ ಹೆಸರಲ್ಲಿ ಪೂಜೆ ಪುನಸ್ಕಾರಗಳು, ವ್ರತ ಕಥೆಗಳು, ಹಬ್ಬ ಹರಿದಿನಗಳು, ಸತ್ತವರಿಗಾಗಿ ಶ್ರಾದ್ಧಕರ್ಮಗಳು ,ಹೀಗೆ ಆಸ್ತಿಕನಾದವನು ಒಂದಿಲ್ಲೊಂದು ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಜೊತೆಗೆ ಅನ್ಯಾಯ ಮಾರ್ಗದಲ್ಲೂ ಹಣ ಸಂಗ್ರಹ ಮಾಡುತ್ತಲೇ ಇರುತ್ತಾನೆ. [ ಅಪವಾದವೂ ಇದೆ] ಜೀವನವಿಡೀ ಹೀಗೆಯೇ ಧನ ಸಂಗ್ರಹಿಸುತ್ತಾ,ಸ್ವರ್ಗ ನರಕಗಳ ಭಯದಿಂದ  ಒಂದಿಲ್ಲೊಂದು ಕರ್ಮಗಳನ್ನು ಮಾಡುತ್ತಲೇ ಜೀವನ ಕಳೆದೆ ಹೋಗುತ್ತದೆ. ಆದರೆ ಬದುಕಿರುವ ಈ ಜನ್ಮದಲ್ಲಿ ನೆಮ್ಮದಿಯಿಂದ ಬದುಕು ಸಾಗೀತೆ? ಎಂಬುದಕ್ಕೆ ಉತ್ತರ ಕಷ್ಟವಾಗುತ್ತದೆ. ಇದೆಲ್ಲವನ್ನೂ ಗಂಭೀರವಾಗಿ ಗಮನಿಸಿದಾಗ ನನ್ನ ದೃಷ್ಟಿಯಲ್ಲಿ " ನಾವು ಬದುಕಿರುವಾಗ ಇನ್ನೊಬ್ಬರಿಗೆ ಹಿಂಸೆಕೊಡದೆ, ಸಾಧ್ಯವಾದಷ್ಟೂ  ದುರ್ಬಲರಿಗೆ ಉಪಕಾರಿಯಾಗಿ ಬದುಕು ನಡೆಸಿದರೆ ನಮ್ಮ ಬದುಕಿರುವಾಗಲೇ ನೆಮ್ಮದಿಯಿಂದ ಬದುಕಬಹುದು".ಎನಿಸುತ್ತದೆ. ನೀವೇನಂತೀರಿ?
ಮರೆತ ಮಾತು:
ಸಾಹಿತ್ಯದ ವಿಚಾರದಲ್ಲೂ ಅಷ್ಟೇ. ನಮಗೆ ಅರ್ಥವಾಗದ ಸಿದ್ಧಾಂತಗಳನ್ನೆಲ್ಲಾ     ಬಲವಂತವಾಗಿ ಅರ್ಥಮಾಡಿಕೊಳ್ಳಲು ನಮ್ಮ ತಲೆಯನ್ನು ಹೋಳು ಮಾಡಿಕೊಳ್ಳದೆ  ನಮ್ಮ  ಆತ್ಮಸಾಕ್ಷಿಗನುಗುಣವಾಗಿ  ಬದುಕು ನಡೆಸುತ್ತಾ  ನಮ್ಮ ಮಿತಿಯಲ್ಲಿ ನಮಗೆ ಅರ್ಥವಾಗುವ ಸಾಹಿತ್ಯವನ್ನು ಓದುತ್ತಾ ಬದುಕುಸಾಗಿಸಿದರೆ ಬದುಕು ಹಗುರವಾಗಿರತ್ತದೆನ್ನುವುದು ನನ್ನ ಅಭಿಪ್ರಾಯ.
 
 
  
 


 

Rating
No votes yet

Comments