ರಾತ್ರಿ ವಿಧವೆ, ನಾನು ವಿಧುರ

ರಾತ್ರಿ ವಿಧವೆ, ನಾನು ವಿಧುರ

ಕವನ

ಈ ರಾತ್ರಿಗಳಲ್ಲಿ ನಾನೂ ರಾತ್ರಿಯೂ ದಿವ್ಯ ಮೌನ ಮರೆತು,
ಒಬ್ಬರನ್ನೊಬ್ಬರು ನೋಡುತ್ತೇವೆ.
ನಾನೂ ಮಾತಾಡೊಲ್ಲ, ರಾತ್ರಿಯೂ ಮೂಗಿ
ಆದರೂ ಕಳೆಯುತ್ತೇವೆ ಒಂದಾಗಿ.

ಒಂದು ರಾತ್ರಿ, ನಾನು ರಾತ್ರಿಗೆ ಕೇಳಿದೆ
ಎಲ್ಲಿ ನಿನ್ನ ಪ್ರಿಯತಮ? ರಾತ್ರಿ ಹೇಳಿದಳು,
ನಾನು ಒಬ್ಬಂಟಿ ವಿಧವೆ,
ನಿನ್ನೆ ಸಂಜೆಯಷ್ಟೇ ನನ್ನ ಹಗಲುರಾಯ ತೀರಿಹೋದ.
ನಾನು ಕೇಳಿದೆ, ಆದರೂ ಯಾರಿಗಾಗಿ ಬದುಕಿರುವೆ?
ರಾತ್ರಿ ಹೇಳಿತು, ಯಾರಿಗಾಗಿ ಬದುಕದಿರುವುದಕ್ಕೆ ನನಗೆ ರಾತ್ರಿ ಎನ್ನುವರು,
ನಿಮ್ಮವರಾರೋ ಸತ್ತರೆ ನನಗೆ ಹೋಲಿಸುತ್ತೀರಿ
ನಾನು ಸತ್ತರೆ ಬೆಳಗಾಯಿತೆಂದು ಸಂಭ್ರಮಿಸುತ್ತೀರಿ.

ನಾನು ಮೂಕನಾದೆ, ಮತ್ತೇ ರಾತ್ರಿಯೇ ಕೇಳಿದಳು,
ನಾನು ಸಾಯುವುದರೊಳಗಾಗಿ ನೋಡಬೇಕಿದೆ ಹಗಲನ್ನ ತೋರಿಸುವೆಯಾ?
ನಾನು ಬರಿದೇ ನಕ್ಕೆ,
ನಾನು ಬೆಳಗನ್ನು ನೋಡೇನೇ?

Comments