೨೦೧೧...ಹೀಗಿತ್ತು

೨೦೧೧...ಹೀಗಿತ್ತು

ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣಯಗಳ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಸಂದು ಹೋದ ವರ್ಷ ನಮಗೆ ನೀಡಿದ ಹರ್ಷ, ಭರವಸೆ ಮತ್ತು ದುಃಖ ದುಮ್ಮಾನಗಳ ಕುರಿತು ಸ್ವಲ್ಪ ಓದಿ.
ಈ ವರ್ಷ ಸರ್ವಾಧಿಕಾರದ ಉಸಿರು ಗಟ್ಟಿಸುವ ವಾತಾವರಣದಿಂದ ಕೆಲವು ದೇಶಗಳ ಜನರಿಗೆ ಮುಕ್ತಿ ಸಿಕ್ಕಿದರೆ ತಮ್ಮ ಬದುಕಿನಲ್ಲಿ ಅಮೋಘವಾದದ್ದನ್ನು ಸಾಧಿಸಿ ಸಾರ್ಥಕ ಬದುಕು ಸಾಗಿಸಿ ಕಣ್ಮರೆಯಾದ ಚೇತನಗಳು ಹಲವು.
ಉತ್ತರ ಆಫ್ರಿಕಾದ ಪುಟ್ಟ ದೇಶ ಟುನೀಸಿಯಾದಲ್ಲಿ ಅರಬ್ ಕ್ರಾಂತಿ. “ಅರಬ್ ವಸಂತ” ಎಂದು ಬಣ್ಣಿಸಲ್ಪಟ್ಟ ಈ ಕ್ರಾಂತಿ ೨೩ ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಜೈನುಲ್ ಆಬಿದೀನ್ ರ ಕುರ್ಚಿ ಪಲ್ಲಟ ಮಾಡಿತು. ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿ ಜನಸಾಮಾನ್ಯರನ್ನು ಬಾಧಿಸಿತು. ಲಂಚಗುಳಿತನದಿಂದ ಬೇಸತ್ತ ನಿರೋದ್ಯೋಗಿ ಯುವಕ “ಮುಹಮ್ಮದ್ ಬೂ ಅಜೀಜಿ” ಆತ್ಮಹತ್ಯೆ ಮಾಡಿಕೊಂಡಾಗ ಬಂತು ಸರಕಾರಕ್ಕೆ ಸಂಚಕಾರ. ಜನ ಸಿಡಿದೆದ್ದರು, ಪ್ರದರ್ಶನಗಳು ನಡೆದವು. ಅಲ್ಲಿನ ಅಧ್ಯಕ್ಷನ ಯಾವ ಸಾಂತ್ವನದ ಮಾತುಗಳೂ ಜನರ ಆಕ್ರೋಶ ತಣಿಸಲು ವಿಫಲವಾದವು. ದಾರಿಗಾಣದೆ ಆಬಿದೀನ್ ದೇಶ ಬಿಟ್ಟು ಓಡಿದ. ಟುನೀಸಿಯಾ ಸರಕಾರ ಪತನವಾಗುತ್ತಿದಂತೆಯೇ ಈಜಿಪ್ಟ್, ಲಿಬಿಯಾ, ಸಿರಿಯಾ, ಯೆಮೆನ್, ಬಹರೇನ್, ದೇಶಗಳಿಗೂ ಕಾಲಿಟ್ಟಿತು ಅರಬ್ ವಸಂತ. ಮೂರು ದಶಕಗಳ ಕಾಲ ಈಜಿಪ್ಟ್ ದೇಶವನ್ನು ಆಳಿದ ಮುಬಾರಕ್ ಕೊನೆಗೂ ಅಧಿಕಾರ ತ್ಯಜಿಸಿದ. ರಕ್ತದ ಕೊನೇ ತೊಟ್ಟಿನ ವರೆಗೂ ಹೋರಾಡುವೆ ಎಂದ ಬಲಿಷ್ಠ ಮುಅಮ್ಮರ್ ಗದ್ದಾಫಿ ಕ್ರಾಂತಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಹತನಾದ. ಲಿಬ್ಯಾ ವಸಂತದ ಸಂಭ್ರಮದ ಕುಣಿತ ಕಂಡಿತು. ಅರಬರಿಗೆ ಸ್ವಾತಂತ್ರ್ಯ ಎಂದರೇನು ಎಂದು ಗೊತ್ತಿಲ್ಲ ಎಂದು ಮೂಗು ಮುರಿಯುತ್ತಿದ್ದ ವಿಶ್ವ ಅರಬರ ಸ್ವಾತಂತ್ರ್ಯಕ್ಕಾಗಿನ ತುಡಿತ ನೋಡಿ ಮೂಗಿನ ಮೇಲೆ ಬೆರಳಿಟ್ಟು ಕೊಂಡಿತು.


ಅರಬ್ ದೇಶಗಳ ಈ ರಾಜಕೀಯ ವಿದ್ಯಮಾನಗಳಿಗೆ ಒತ್ತು ಕೊಟ್ಟ, ಕುಮ್ಮಕ್ಕು ನೀಡಿದ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಯೂ ಟ್ಯೂಬ್ ಗಳು ರಾರಾಜಿಸಿದವು. ಸಾಮಾನ್ಯವಾಗಿ ತಂತ್ರಜ್ಞಾನ ಉಳ್ಳವರ ಸೊತ್ತು. ಆದರೆ ಸಾಮಾಜಿಕ ತಾಣಗಳು ಈ ಅಸಮಾನತೆಯನ್ನು ಅಮೋಘವಾಗಿ ಹೋಗಲಾಡಿಸಿದವು.  ಕಂಪ್ಯೂಟರ್ ತಂತ್ರಜ್ಞಾನ ಜನರನ್ನು ದಾಸ್ಯದ ಸಂಕೋಲೆಯಿಂದ ಹೊರಬರಲು ದೊಡ್ಡ ರೀತಿಯಲ್ಲಿ ಸಹಾಯ ಮಾಡಿತು. 
ಎರಡನೇ ವಿಶ್ವ ಯುದ್ಧದಲ್ಲಿ ಅಮೆರಿಕೆಯ ಕೆಂಗಣ್ಣಿಗೆ ಸಿಕ್ಕು ನುಚ್ಚು ನೂರಾದ ಜಪಾನ್ ಪ್ರಕೃತಿಯ ವಿಕೋಪಕ್ಕೆ ತುತ್ತಾಯಿತು ಮಾರ್ಚ್ ೨೦೧೧ ರಲ್ಲಿ. ತ್ಸುನಾಮಿ ಅಲೆಗಳು ಜಪಾನ್ ದ್ವೀಪವನ್ನು ನಿರ್ದಯವಾಗಿ ಗುಡಿಸಿ ಹಾಕಿತು. ೧೬,೦೦೦ ಕ್ಕೂ ಮಿಕ್ಕು ಜನ ಸತ್ತರು. ನಿಸರ್ಗ ತಮ್ಮ ಮೇಲೆ ಈ ರೀತಿ ಎರಗಿ ಬಂದರೂ ಧೃತಿಗೆಡದೆ, ದುರಾದೃಷ್ಟವನ್ನು ಶಪಿಸದೆ, ಜಪಾನೀಯರು ತಾಳ್ಮೆಯಿಂದ ಅಳಿದುಳಿದುದನ್ನು ಹೆಕ್ಕಿ ತಮ್ಮ ಬದುಕಿನ ಮರುನಿರ್ಮಾಣದ ಕಡೆ ಗಮನ ನೆಟ್ಟರು.  
ಮುಪ್ಪಿನೊಂದಿಗೆ ಶೃಂಗಾರ ಚಟುವಟಿಗಳು ಸಾಮಾನ್ಯವಾಗಿ ಕೊನೆಯಾಗುತ್ತವೆ ಅಥವಾ ಹಂಪ್ ಗಳನ್ನು ದಾಟುವ ವಾಹನಗಳಂತೆ ನಿಧಾನವಾಗುತ್ತವೆ. ಆದರೆ ಚಿರ ರಸಿಕ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲಸ್ಕೊನಿ ಯ ಹಾರ್ಮೋನುಗಳು ಯುವಜನರನ್ನು ನಾಚಿಸುತ್ತವೆ. ಉರುಳುವ ವರ್ಷಗಳು ಪಂಚಾಂಗಕ್ಕೆ ಮಾತ್ರ ಸೀಮಿತ, ತನ್ನ ಲೈಂಗಿಕ ಚಪಲಕ್ಕಲ್ಲ ಎಂದು ಹದಿ ಹರೆಯದ ಪೋರಿಯರೊಂದಿಗೆ ಸಲ್ಲಾಪ ಆಡಿ ಕಷ್ಟಕ್ಕೆ ಸಿಕ್ಕಿಕೊಂಡ ಪ್ರಧಾನಿ. ಲೈಂಗಿಕ ಹಗರಣಕ್ಕೆ ಬಲಿಯಾಗದೆ ಅಚ್ಚರಿದಾಯಕವಾಗಿ ಬದುಕುಳಿದ ಬೆರ್ಲೋ ಅಧಿಕಾರ ತ್ಯಜಿಸಿದ್ದು ಆರ್ಥಿಕ ಸಮಸ್ಯೆ ಕಾರಣ.
ಏಪ್ರಿಲ್ ತಿಂಗಳ ಮೊದಲ ದಿನ ಮೂರ್ಖರ ದಿನ. ಕೇಂದ್ರ ಸರಕಾರ ಭ್ರಷ್ಟಾಚಾರದ ಮೂಲಕ ಲಂಗು ಲಗಾಮಿಲ್ಲದೆ ದೇಶವನ್ನು ಒಂದು ಮೂರ್ಖರ ಸಂತೆ ರೀತಿ ನಡೆಸಿ ಕೊಳ್ಳಲು ತೊಡಗಿದಾಗ ಸಿಡಿದೆದ್ದರು “ಇಳಿ ಚೇತನ” ಅಣ್ಣಾ ಹಜಾರೆ. ತನ್ನ ಸ್ವ ಪ್ರಯತ್ನದಿಂದ ಮಹಾರಾಷ್ಟ್ರದ ಹಳ್ಳಿಯೊಂದನ್ನು ಅಭಿವೃದ್ಧಿ ಗೊಳಿಸಿದ ಈ ಸ್ವಾತಂತ್ರ್ಯ ಹೋರಾಟಗಾರ ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೂ ಆವರಿಸಿಕೊಂಡ ಲಂಚಗುಳಿತನವನ್ನು ಇಲ್ಲವಾಗಿಸಲು ಉಪವಾಸ ಸತ್ಯಾಗ್ರಹ ಶುರು ಮಾಡಿದರು. ಐದು ಸಾವಿರ ಮೈಲು ದೂರದಿಂದ ವ್ಯಾಪಾರಕ್ಕೆ ಎಂದು ಬಂದು ನಮ್ಮನ್ನು ಒದ್ದು, ದಬ್ಬಾಳಿಕೆಯಿಂದ ಆಡಳಿತ ನಡೆಸಿದ ಪರದೇಸೀ ಬ್ರಿಟಿಷರೂ ಉಪವಾಸ ಸತ್ಯಾಗ್ರಹಕ್ಕೆ ಮಣಿದರು. ಆದರೆ ನಮ್ಮ ದೇಸೀ ನಾಯಕರು ಜಪ್ಪಯ್ಯ ಎನ್ನಲಿಲ್ಲ. ಬ್ರಿಟಿಷರಿಗಿದ್ದ ನಾಚಿಕೆ, ಔದಾರ್ಯ ಇವ್ಯಾವುವೂ ನಮ್ಮ ನಾಯಕರಲ್ಲಿ ಕಾಣದಾಯಿತು. ಅಣ್ಣಾರವರ ಆಂದೋಲನವನ್ನು ಮೊದ ಮೊದಲು ಅವಗಣನೆ ಮಾಡಿ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಭಯ ಬಿದ್ದು ಲೋಕಪಾಲ್ ಮಸೂದೆಗೆ ಒಪ್ಪುವ ನಾಟಕ ಆಡಿ ಅಣ್ಣಾ ರಿಗೆ ಸೊಗಸಾಗಿ ನಾಮ ಬಳಿದರು. ಅದೂ ಸಾಲದು ಎಂಬಂತೆ ಅಣ್ಣಾ ಜೊತೆ ವೇದಿಕೆಯಲ್ಲಿರುವವರ ಪೂರ್ವಾಪರ ಚರಿತ್ರೆ ತೆಗೆದು ಅಣ್ಣಾ ದೇಶ ಎಣಿಸಿದ ಮುಗ್ಧ ಅಣ್ಣಾ ಅಲ್ಲ, ಆರೆಸ್ಸೆಸ್ ಏಜೆಂಟ್ ಎಂದು ಪ್ರಚಾರ ಮಾಡಿ ಲಂಚದ ವಿರುದ್ಧದ ಅಂದೋಲನದ ದಿಕ್ಕನ್ನೇ ದಿಕ್ಕಾ ಪಾಲು ಮಾಡಿತು ಕೇಂದ್ರ ಸರಕಾರ. ತುನೀಸಿಯಾದ ಬೂ ಅಜೀಜಿ ಯ ಆತ್ಮ ಹತ್ಯೆ ಮತ್ತು ಜನರ ಪ್ರತಿಭಟನೆಗೆ ಅಲ್ಲಿನ ಅಧ್ಯಕ್ಷ ಲಂಚಗುಳಿಯಾದರೂ, ಮರ್ಯಾದಸ್ಥನಂತೆ ತಲೆ ಬಾಗಿ ಹೊರನಡೆದ.  ನಮ್ಮಲ್ಲಿ ಹಾಗಾಗಲಿಲ್ಲ. ನಮ್ಮ ಕೇಂದ್ರ ಸರಕಾರಕ್ಕೆ ತಲೆ ಇದ್ದರಲ್ಲವೇ ಬಾಗುವ ಪ್ರಶ್ನೆ ಏಳೋದು.         
ನಾರ್ವೆ ದೇಶದಲ್ಲಿ ನರಸಂಹಾರ: ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾದ ಅಇರೋಪ್ಯ ಖಂಡದ “ನಾರ್ವೆ” ಪುಟ್ಟ ದೇಶ. ಇಲ್ಲಿನ ಸಾಲ್ಮನ್ ಜಾತಿಯ ಮೀನು ಜಗತ್ಪ್ರಸಿದ್ಧ. ಸಾಲ್ಮನ್ ಮೀನು ಹೃದಯಕ್ಕೆ ತುಂಬಾ ಒಳ್ಳೆಯದಂತೆ. land of midnight sun ಎಂದೂ ಅರಿಯಲ್ಪಡುವ ಈ ದೇಶದಲ್ಲಿ ವರ್ಷದ ಕೆಲವೊಂದು ತಿಂಗಳು ಸೂರ್ಯ ಮಧ್ಯ ರಾತ್ರಿ ಉದಯಿಸುತ್ತಾನೆ. ೩೨ ವರ್ಷ ಪ್ರಾಯದ ಸುಂದರ ಯುವಕ ‘ಆಂಡರ್ಸ್ ಬೆಹ್ರಿಂಗ್ ಬ್ರೆವಿಕ್’ ಪ್ರಶಾಂತ ನಾರ್ವೆ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದ ತನ್ನ ನಿರ್ದಯೀ ಹಿಂಸೆಯ ಮೂಲಕ. ರಾಜಧಾನಿ ಓಸ್ಲೋ ನಗರದಲ್ಲಿ ಬಾಂಬಿಟ್ಟು ನಗರದ ಸಮೀಪದಲ್ಲೇ ಇದ್ದ ದ್ವೀಪಕ್ಕೆ ಹೋಗಿ ಅಲ್ಲಿ ನೆರೆದಿದ್ದ ನೂರಾರು ಜನರ ಮೇಲೆ ಎರ್ರಾಬಿರ್ರಿ ಗುಂಡು ಹಾರಿಸಿ ೮೦ ಕ್ಕೂ ಹೆಚ್ಚು ಜನರನ್ನು ಕೊಂದ. ಕ್ರೈಸ್ತ ಮೂಲಭೂತವಾದಿಯಾಗಿದ್ದ ಈತನ ಕ್ರೌರ್ಯಕ್ಕೆ ವಿಶ್ವ ಬೆಚ್ಚಿತು, ರಾತ್ರಿ ಉದಯಿಸುತ್ತಿದ್ದ ಸೂರ್ಯ ಹಾಡು ಹಗಲೇ ಅಸ್ತಮಿಸಿದ ಇವನ ಕ್ರೌರ್ಯಕ್ಕೆ ಬೆಚ್ಚಿ. 
ಯಾವುದೇ ಕಾರಣವಿಲ್ಲದೆ ಇರಾಕಿನ ಮೇಲೆ ಧಾಳಿ ಮಾಡಿ, ಆ ದೇಶವನ್ನು ಆಕ್ರಮಿಸಿಕೊಂಡು ಎರಡು ದಶಲಕ್ಷಕ್ಕೂ ಜನರನ್ನು ಕೊಂದ ಅಮೇರಿಕಾ ತನ್ನ ಸೈನ್ಯ ಹಿಂದಕ್ಕೆ ಕರೆಸಿಕೊಳ್ಳಲು ಕೊನೆಗೂ ತೀರ್ಮಾನಿಸಿತು. ಇರಾಕಿನ ಮೇಲಿನ ಯುದ್ಧ ಯಾವ ರೀತಿ ಅಮೇರಿಕಾ, ಇಂಗ್ಲೆಂಡ್ ನಂಥ ಬಲಿಷ್ಠ ದೇಶಗಳು ಜನರ ಕಣ್ಣಿಗೆ ಬೂದಿ ಎರಚಿ ತಮ್ಮ ಸ್ವಾರ್ಥ ಸಾಧಿಸಲು ತಯಾರು ಎನ್ನುವುದಕ್ಕೆ ಇರಾಕ್ ಜ್ವಲಂತ ನಿದರ್ಶನವಾಯಿತು.
ಆಫ್ರಿಕಾ ಖಂಡದ ಸುಡಾನ್ ದೇಶದಿಂದ ದಕ್ಷಿಣ ಸುಡಾನ್ ಎನ್ನುವ ದೇಶ ಪ್ರತ್ಯೇಕಗೊಂಡು ಸ್ವಾತಂತ್ರ್ಯವಾಯಿತು. 
೨೦೧೧ ರ ನೊಬೆಲ್ ಶಾಂತಿ ಪುರಸ್ಕಾರ ಈ ಸಲ ಮೂರು ಮಹಿಳೆಯರು ಹಂಚಿಕೊಂಡರು. ಸ್ವಾತಂತ್ರ್ಯ, ಸೌಹಾರ್ದ, ಮತ್ತು ಲಿಂಗ ಬೇಧ ನಿವಾರಣೆಗೆ ಶ್ರಮಿಸಿದ ಈ ಮಹಿಳೆಯರಲ್ಲಿ ಇಬ್ಬರು ಆಫ್ರಿಕಾ ಖಂಡದ ಲೈಬೀರಿಯ ದೇಶದವರು, ಮತ್ತೊಬ್ಬರು ಅರಬ್ ಪ್ರಾಂತ್ಯದ ಯೆಮೆನ್ ದೇಶದವರು. ಸಾಂಪ್ರದಾಯಿಕ ಅರಬ್ ಮುಸ್ಲಿಂ  ಸಮಾಜದಿಂದ ಬಂದ “ತವಕ್ಕುಲ್ ಕರ್ಮಾನ್” ಯಾವ ತೊಡಕುಗಳಿಗೂ ಅಂಜದೆ ತನ್ನ ದೇಶದ ಸರ್ವಾಧಿಕಾರಿಯನ್ನು ಧೈರ್ಯವಾಗಿ ಎದುರಿಸಿ ಯಶಸ್ವಿಯಾದರು. ಮಹಿಳೆ ಧೈರ್ಯವಾಗಿ ಮುನ್ನುಗ್ಗಿದರೆ ಯಾವ ಮೂಲಭೂತವಾದಿಗಳಾಗಲೀ, ಸಮಾಜದ ಯಾವ ನಿರ್ಬಂಧಗಳೇ ಆಗಲಿ ಲೆಕ್ಕಕ್ಕೆ ಬರದು ಎಂದು ವಿಶ್ವಕ್ಕೆ ಸಾರಿದ ೩೨ ರ ಹರೆಯದ ತವಕ್ಕುಲ್ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ಮುಸ್ಲಿಂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇರಾನಿನ ಶಿರೀನ ಇಬಾದಿ ನೊಬೆಲ್ (೨೦೦೩) ವಿಜೇತ ಮತ್ತೊಬ್ಬ ಮಹಿಳೆ.  
ಈ ಸಲದ ಪುರಸ್ಕಾರ ಅರಬ್ ವಿಶ್ವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಬ್ಲಾಗಿಗಳಿಗೆ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸ್ವಾತಂತ್ರ್ಯದೊಂದಿಗೆ ಸಮಾನತೆಯ ಕಹಳೆ ಮೊಳಗಿಸಿದ ಧೀರ ಮಹಿಳೆಯರ ಪಾಲಾಯಿತು ನೊಬೆಲ್. 
ಕಾಲನ ಕರೆಗೆ ವಿಧೇಯರಾಗಿ ಓಗೊಟ್ಟು ಕಣ್ಮರೆಯಾದವರು
ವಿವಾದಾಸ್ಪದ ಕಲಾವಿದ ಮಕ್ಬೂಲ್ ಫಿದಾ ಹುಸೇನ್ ನಿಧನ. ಹುಸೇನರ ಕುಂಚಗಳು ತನ್ನ canvas ಗಡಿ ಮೀರಿ ಜನರ ನಂಬಿಕೆಗಳ ಮೇಲೆ ಹರಿದಾಡ ತೊಡಗಿಡಾಗ ಗಡೀ ಪಾರಾಗಬೇಕಾಯಿತು. ಕತಾರ್ ದೇಶದ ಪೌರತ್ವ ಪಡೆದರೂ ಮಾತೃ ಭೂಮಿಗಾಗಿ ಮಿಡಿಯಿತು ಹುಸೇನ್ ಮನ. ಹುಸೇನ್ ಅಂತ್ಯ ಲಂಡನ್ನಿನಲ್ಲಿ. ಹುಸೇನ್ ಮರಣಕ್ಕೆ ಪ್ರಧಾನಿ, ರಾಷ್ಟ್ರಪತಿ ಶೋಕ. ಹುಸೇನ್ ಸಾವು ರಾಷ್ಟ್ರೀಯ ನಷ್ಟ ಎಂದು ಪ್ರಧಾನಿ ಹೇಳಿದರೆ, ರಾಷ್ಟ್ರಪತಿ ಗಳು ಹೇಳಿದ್ದು ಹುಸೇನ್ ಇಲ್ಲದ ಕಲೆ ಶೂನ್ಯ ಎಂದು.
ವಿಶ್ವದ ಕುಖ್ಯಾತ ಭಯೋತ್ಪಾದಕ ಬಿನ್ ಲಾದೆನ್. ಅಮೆರಿಕೆಯ to do list ನಲ್ಲಿ ಆಗ್ರ ಪಂಕ್ತಿಯಲ್ಲಿದ್ದ ಲಾದೆನ್ ನ ಅವಸಾನ ಕೊನೆಗೂ ಕೈಗೂಡಿತು. ಪಾಕ್ ರಾಜಧಾನಿಯ ಸಮೀಪದ ಅಬೋಟ್ಟಾ ಬಾದ್ ನಲ್ಲಿ ಅಡಗಿ ಕೂತಿದ್ದ ಬಿನ್ ಲಾದೆನ್ ನನ್ನು ಅಮೆರಿಕೆಯ ಅತಿ ಪ್ರತಿಷ್ಠಿತ ಕಮಾಂಡೋ ಪಡೆ “ಸೀಲ್” ಬೇಟೆಯಾಡಿ ಅಮೇರಿಕಾ ನಿರಾಳ ಭಾವ ಅನುಭವಿಸುವಂತೆ ಮಾಡಿತು. ಬಿನ್ ಲಾದೆನ್ ಸಾವಿನ ಸುದ್ದಿ ವಿಶ್ವ ಪುರಾವೆ ಬಯಸಿದಾಗ ಅಮೇರಿಕಾ ಹೇಳಿದ್ದು, ಪ್ರದರ್ಶಿಸಲು ಪಾರಿತೋಷಕ ಅಲ್ಲ ನಮಗೆ ಸಿಕ್ಕಿದ್ದು, ನಾವು ಹೇಳಿದ್ದನ್ನು ನಂಬಿ ಎಂದು. ಸಾವಿರಾರು ಜನರ ಭವಿಷ್ಯವನ್ನು ಭೂ ಸಮಾಧಿ ಮಾಡಿದ್ದ ಬಿನ್ ಲಾದೆನ್ ಗೆ ಸತ್ತಾಗ ಸಿಕ್ಕಿದ್ದು ಜಲಸಮಾಧಿ. 
ಕಂಪ್ಯೂಟರ್ ಎಂದರೆ ಆಕರ್ಷಣೆ ಇಲ್ಲದ ಒಂದು bland ಉಪಕರಣ ಅಲ್ಲ, ಅದು ಒಂದು ಮೋಜನ್ನು, ನೀಡುವ ಆಕರ್ಷಕ ಉಪಕರಣ ಎಂದು ಜಗತ್ತಿಗೆ ತೋರಿಸಿದ “ಆಪಲ್” ನ ಒಡೆಯ ಸ್ಟೀವ್ ಜಾಬ್ಸ್ ಯಕೃತ್ತಿನ ಕ್ಯಾನ್ಸರ್ ಗೆ ಬಲಿಯಾದ. ತಂತ್ರಜ್ಞಾನ ಬಡವಾಯಿತು ಎಂದು ಶೋಕಿಸಿದರು ಟೆಕ್ಕಿಗಳು.
ಭಾರತೀಯ ಕ್ರಿಕೆಟ್ ನ ಗತಕಾಲದ ಹೀರೋ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನದಿಂದ ಕ್ರಿಕೆಟ್ ಆಟ ತನ್ನ ಹೊಳಪನ್ನು ಕಳೆದು ಕೊಂಡಿತು. ಟೈಗರ್ ಎಂದು ಕರೆಯಲ್ಪಡುತ್ತಿದ್ದ ಈ ಸ್ಫುರದ್ರೂಪಿ “ಪಟೌಡಿ” ಪ್ರಾಂತ್ಯದ “ನವಾಬ್’ ಭಾರತದ ಯಶಸ್ವೀ ನಾಯಕರಲ್ಲೊಬ್ಬರು. ಅಂದಿನ ಪ್ರಸಿದ್ಧ ನಟಿ ಶರ್ಮಿಳಾ ಟಾಗೋರ್ ರನ್ನು ವರಿಸಿದ ಪಟೌಡಿ ಕ್ರಿಕೆಟ್ ಆಟಕ್ಕೆ ಗ್ಲಾಮರ್ ತಂದು ಕೊಟ್ಟವರು. ಪಟೌಡಿ ನಿಧನರಾದಾಗ ವಯಸ್ಸು ೭೦.
ಭೀಂ ಸೇನ್ ಜೋಶಿ, ಭಜನ್ ಲಾಲ್, ಭೂಪೇನ್ ಹಜಾರಿಕಾ, ಅಂಬಿಕಾ ಚೌಧುರಿ, ಚಿತ್ರನಟ ದೇವ್ ಆನಂದ್, ಶಮ್ಮಿ ಕಪೂರ್, ಸತ್ಯಸಾಯಿ ಬಾಬ, ಅರ್ಜುನ್ ಸಿಂಗ್ ಇತರೆ ಗಣ್ಯರು ಅಗಲಿದವರು.  
ನಮ್ಮ ರಾಜ್ಯದ ವರ್ಣರಂಜಿತ ವ್ಯಕ್ತಿತ್ವ ಕಣ್ಮರೆ. ಎಸ್, ಬಂಗಾರಪ್ಪ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ ರಾಜಕೀಯ ಕ್ಷೇತ್ರದಲ್ಲಿ ದುಡಿದವರು. ಒಂದು ಕಾಲದಲ್ಲಿ ನಾನು ಅವರ ಅಭಿಮಾನಿ. ಪಕ್ಷದಿಂದ ಪಕ್ಷಕ್ಕೆ ಜಿಗಿದು ಅಭಿಮಾನಿಗಳಿಗೆ ಇರುಸು ಮುರುಸು ಕಸಿವಿಸಿ ತರುತ್ತಿದ್ದ ಬಂಗಾರಪ್ಪ ಟೆನ್ನಿಸ್ ಮತ್ತು ಯೋಗ ಪ್ರೇಮಿ. ತಂದೆಯ ಹೆಸರು ಎಷ್ಟಿ ಆಕರ್ಷಕ, ಜನಪ್ರಿಯ  ಎಂದರೆ ಅವರ ಮಗನಿಗೆ ಸ್ವಂತದ ಹೆಸರಿನ ಅವಶ್ಯಕತೆಯೇ ಬರಲಿಲ್ಲ. ಕುಮಾರ್ ಬಂಗಾರಪ್ಪ ಎಂದು ಪ್ರಸಿದ್ಧನಾದ. 
ಸಾಹಿತ್ಯ ಲೋಕದಲ್ಲಿ “ಸಂಪದ” ಜೇಡ ತಾಣ ದೊಡ್ಡ ಹೆಸರನ್ನು ಮಾಡುತ್ತಿದ್ದು ಅನೇಕ ಉದಯೋನ್ಮುಖ ಲೇಖಕ ಲೇಖಕಿಯರನ್ನು ಪರಿಚಯಿಸಿ, ಪ್ರೋತ್ಸಾಹಿಸಿ ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ರೀತಿಯಲ್ಲಿ ಎಲೆಮರೆ ಕಾಯಿಯಾಗಿ ಸೇವೆ ಸಲ್ಲಿಸುತ್ತಿದೆ. ಇನ್ನೂ ಯೌವನದಲ್ಲಿರುವ ಸಂಪದಕ್ಕೆ ಎಲ್ಲಾ ಯುವಜನರ ರೀತಿ ಕನ್ನಡಿಯ ಮುಂದೆ ನಿಂತು ಶೃಂಗರಿಸಿಕೊಳ್ಳುವ ಆಸೆ ಏನೋ. ಈ ವರ್ಷ ಒಂದೆರಡು “ಫೇಸ್ ಲಿಫ್ಟ್” ಗಳನ್ನು ಕಂಡ “ಸಂಪದ” ನಮಗಂತೂ ಹೇಗಿದ್ದರೂ ಸುಂದರವೇ, ಚೆಂದವೇ. ೨೦೧೨ ರಲ್ಲಿ ಸಂಪದದ ಕೀರ್ತಿ ಇನ್ನಷ್ಟು ಹೆಚ್ಚಲಿ ಮತ್ತು ಸಂಪದ ಸಮುದಾಯ ಬಾಂಧವರು, ವಿಶೇಷವಾಗಿ ಹರಿಪ್ರಸಾದ್ ದಂಪತಿಗಳು ಮತ್ತು ಸಂಪದ ನಿರ್ವಹಣಾ ತಂಡ, ತಮ್ಮ ತಮ್ಮ ಕ್ಷೇತ್ರಗಳಲ್ಲಿ, ವೈಯಕ್ತಿಕ, ಕೌಟುಂಬಿಕ ಜೀವನದಲ್ಲಿ, ಅಭೂತಪೂರ್ವ ಯಶಸ್ಸನ್ನು ಕಾಣಲಿ ಎನ್ನುವ ಶುಭ ಹಾರೈಕೆ ಯೊಂದಿಗೆ ೨೦೧೧ ಕ್ಕೆ ತೆರೆ ಎಳೆಯುತ್ತೇನೆ.
 


 

Comments