ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ " ಎಸ್.ಬಂಗಾರಪ್ಪ "

ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ " ಎಸ್.ಬಂಗಾರಪ್ಪ "

             ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ' ಎಸ್.ಬಂಗಾರಪ್ಪ '


     ಕರ್ನಾಟಕದ ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ಧೀಮಂತ ನಾಯಕ,ಹೋರಾಟಗಾರ, ಬ್ಯಾಡ್ಮಿಂಟನ್ ಆಟಗಾರ, ನಾಟಕ, ಸಿನಿಮಾ, ಸಂಗೀತ ಮತ್ತು ಸಾಹಿತ್ಯ ಪ್ರೇಮಿ ಮಂತಾದ ಬಹುಮುಖ ಪ್ರತಿಭೆಯ ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ರಾಜಕೀಯ ಆಖಾಡದ ಕೊನೆಯ ಪರಸಿ ಪೈಕಿ ಕುಸ್ತಿ ಮುಗಿಸಿ ತಿರುಗಿ ಬಾರದ ಲೋಕಕ್ಕೆ ಎದ್ದು ಹೋಗಿದ್ದಾರೆ. ಸನ್ 1932  ರ ಅಕ್ಟೋಬರ್ 26 ರಿಂದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಗ್ರಾಮ ವಾದ ಕುಬಟೂರಿನಿಂದ ಪ್ರಾರಂಭವಾದ ಅವರ ಜೀವನ ಪಯಣ 2011 ರ ಡಿಸೆಂಬರ್ 25 ರ ಮಧ್ಯರಾತ್ರಿ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಕಟ್ಟ ಕಡೆಯ ಹೋರಾಟ ನಡೆಸಿ ಕೊನೆಯ ಪಯಣ ಮುಗಿಸಿ ತಿರುಗಿ ಬಾರದ ಲೋಕಕ್ಕೆ ಎದ್ದು ಹೋಗಿದ್ದಾರೆ.
     ಬಂಗಾರಪ್ಪ ಎಂದೊಡನೆ ನಮ್ಮ ಕಣ್ಮುಂದೆ ಬರುವ ಚಿತ್ರ ಸಧೃಢ ಮೈಕಟ್ಟಿನ ನೀಟಾಗಿ ಬಾಚಿದ ಗುಂಗುರು ಕೂದಲಿನ, ಆಕರ್ಷಕವಾಗಿ ಡ್ರೆಸ್ ಮಾಡಿದ ಕಣ್ಣಿಗೆ ಸದಾಕಾಲ ಕಪ್ಪು ಕನ್ನಡಕ ಧರಿಸಿರುತ್ತಿದ್ದ ಒಬ್ಬ ಆಕರ್ಷಕ ವ್ಯಕ್ತಿತ್ವದ ವ್ಯಕ್ತಿ ಚಿತ್ರಣ. ಆದರೆ ವಯಸ್ಸಾಗುತ್ತ ಸಾಗಿದಂತೆ ಅವರಿಗ ತಗುಲಿ ಕೊಂಡದ್ದು ಲಘು ಪಾಶ್ರ್ವವಾಯು. ಅದಕ್ಕೆ ಚಿಕಿತ್ಸೆ ಪಡೆದು ಮತ್ತೆ ರಾಜಕಾರಣದಲ್ಲಿ ಮುಂದುವರಿದು ತಮ್ಮ ಗುರಿ ಸಾಧಿಸಿದ ಛಲವಾದಿ ವ್ಯಕ್ತಿ ಅವರು. ಕ್ರಮೇಣ ವರ್ಷಗಳು ಗತಿಸಿದಂತೆ ಅವರು ಕಿಡ್ನಿ ವೈಫಲ್ಯ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಬಳಲಿದರು. ಈ ಬಗ್ಗೆ ಅವರ ಅತ್ಮೀಯರು ಆತಂಕ ವ್ಯಕ್ತ ಪಡಿಸಿದಾಗ ಅದು ನಮ್ಮ ಜನ್ಮಜಾತ ಅದರೊಂದಿಗೆ ಬದುಕಬೇಕು ಎಂದು ಮುನ್ನಡೆದ ದಿಟ್ಟ ಮನಸಿನ ವ್ಯಕ್ತಿ ಅವರು


 


 


                      ಮಧುಮೇಹ ನೀ ಒಲಿದು ಬಂದು
                    ಸಮಾಹಿತಳಾದೆ ಅಣು ಅಣುವಿನಲಿ
                    ರಕ್ತಗತವಾಗಿ' ಪ್ರೀತಿಸಿದೆ ನಿನ್ನ
                    ಕೈಹಿಡಿದ ಹೆಂಡತಿಗೂ ಮಿಗಿಲಾಗಿ
                    ನಮ್ಮಿಬ್ಬರದೂ ಅವಿವಾಭಾವ ಸಂಬಂಧ
                    ಬದುಕು ಸಾವೂ ಒಟ್ಟೊಟ್ಟಿಗೆ


     ಎಂಬಂತೆ ಮಧುಮೇಹ ದೊಟ್ಟಿಗೆ ಬದುಕು ಸಾಗಿಸಿದವರು ರಾಜಕೀಯ ಚಟುವಟಿಕೆಗಳಲ್ಲಿ ಗಂಭೀರವಾಗಿ ತೊಡಗಿಸಿ ಕೊಂಡಿದ್ದರು. ಈಗ್ಗೆ ಹಲವು ತಿಂಗಳುಗಳ ಹಿಂದೆ ಜೆಡಿಎಸ್ ಪಕ್ಷ ಸೇರಿ ಕ್ರಿಯಾಶೀಲರಾಗಿದ್ದರು. ಅವರು ಎಷ್ಟು ಕ್ರಿಯಾಶೀಲರಾಗಿದ್ದರೆಂದರೆ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿ ಮತ್ತೆ ರಾಜಕೀಯ ಪ್ರವಾಸಕ್ಕೆ ಸಜ್ಜಾಗು ತ್ತಿದ್ದರು.


     ಬಿ.ಎ.ಎಲ್ಎಲ್ಬಿ ಪದವೀಧರ ಬಂಗಾರಪ್ಪ ಪ್ರಾರಂಭದಲ್ಲಿ ವಕೀಲಿ ವೃತ್ತಿ ಕೈಗೊಂಡವರು 1967 ರಲ್ಲಿ ಲೋಹಿಯಾವಾದಕ್ಕೆ ಮನಸೋತು ಲೋಹಿಯಾ ಅವರ ಅನುಯಾಯಿ ಶಾಂತವೇರಿ ಗೋಪಾಲಗೌಡರ ' ಪ್ರಜಾ ಸೋಷಲಿಷ್ಟ್ ' ಪಕ್ಷ ಸೇರಿ ಸೊರಬ ಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ದಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಿಧಾನ ಸಭೆಗೆ ಹೋದವರು ಮತ್ತೆ ಹಿಂದೆ ನೋಡಲಿಲ್ಲ. ಅವರು ಕೊನೆಯ ಎರಡು ಎಂ.ಪಿ.ಚುನಾವಣೆಗಳಲ್ಲಿ ಸೋತಿದ್ದು ಬಿಟ್ಟರೆ ಅಖಂಡ 42 ವರ್ಷಗಳ ಕಾಲ ರಾಜ್ಯ ಮತ್ತೂ ರಾಷ್ಟ್ರೀಯ ರಾಜಕಾರಣದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು. ಅವರದು ಕಾಂಗ್ರೆಸ್ ಪಕ್ಷದ್ದು ಒಂದು ರೀತಿ ಬಿಟ್ಟೆನೆಂದರೆ ಬಿಡದೀ ಬಂಧ ಎಂಬಂತಹದು.ದೇವರಾಜ ಅರಸ, ಆರ್.ಗುಂಡೂರಾವ್ ಮತ್ತು ವೀರೇಂದ್ರ ಪಾಟೀಲರ ಕ್ಯಾಬಿನೆಟ್ ಗಳಲ್ಲಿ ಗೃಹಖಾತೆ, ಲೋಕೋಪಯೋಗಿ, ಕೃಷಿ ಮತ್ತು ತೋಟಗಾರಿಕೆ ಖಾತೆಗಳಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದರು. 1979 - 1980 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. 1985 - 1987 ರ ಅವಧಿಗೆ ವಿಪಕ್ಷ ನಾಯಕರಾಗಿದ್ದರು. 1990 - 1992 ರ ಅವಧಿಯಲ್ಲಿ ಅವರು ಕನರ್ಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದರು.


     ಬಂಗಾರಪ್ಪ ಯಾವುದೇ ಹುದ್ದೆಯನ್ನಲಂಕರಿಸಲಿ ಅದಕ್ಕೆ ಘನತೆ ತಂದವರು. ಅವರ ಅವಧಿಯಲ್ಲಿ ಕಾವೇರಿ ನೀರಿಗಾಗಿ ತಮಿಳ್ನಾಡು ತಕರಾರು ಮಾಡಿದಾಗ ಮುಖ್ಯಮಂತ್ರಿಯ ಪರಮಾಧಿಕಾರ ಚಲಾಯಿಸಿ ಕರ್ನಾಟಕದ ಹಿತ ಕಾಪಾಡಿದಂತಹವರು. ಅದಕ್ಕಾಗಿ ತಮ್ಮ ಪಕ್ಷದ ಕೇಂದ್ರದ ಹೈಕಮಾಂಡನ ಅವಕೃಪೆಗೆ ಪಾತ್ರರಾದರು. ಅವರು ಹೈಕಮಾಂಡಿಗೆ ವಿದೇಯರಾಗಿದ್ದರೂ ಸಾಕಿತ್ತು ಅವರು ಇನ್ನೊಂದು ಅವಧಿಗೆ ಮುಖ್ಯಮಂತ್ರಿಯಾಗ ಬಹುದಿತ್ತು. ಆದರೆ ಆತ ಮಹಾ ಸ್ವಾಭಿಮಾನಿ ಅಧಿಕಾರ ಬಯಸುವವರಾದರೂ ಅದರ ಹಿಂದೆ ಹೋದವರಲ್ಲ. ಅವರು ದಲಿತ ಮತ್ತು ಹಿಂದುಳಿದ ವರ್ಗದವರು ನಂಬುವ ಏಕೈಕ ರಾಜಕಾರಣಿಯಾಗಿದ್ದರು. ಅವರು ತಮ್ಮ ಸ್ವಬಲದ ಮೇಲೆ ನೇರ ಅಧಿಕಾರದ ಚುಕ್ಕಾಣಿ ಹಿಡಿಯಲಾಗದಿದ್ದರೂ, ಅವರು ಅಧಿಕಾರಸ್ಥ ಪಕ್ಷದ ಬಲ ಕುಗ್ಗಿಸುವಷ್ಟು ಶಕ್ತಿಶಾಲಿ ಆಗಿದ್ದರು. ಅವರು ಯಾವುದೇ ಪಕ್ಷದ ಬೆಂಬಲಕ್ಕೆ ನಿಂತರೆ ಮೂವತ್ತು ಸೀಟುಗಳನ್ನು ಗೆಲ್ಲಿಸುವಲ್ಲಿ ವಿರೋಧಿಸಿದರೆ ಅಷ್ಟೇ ಸಂಖ್ಯೆಯ ಸೋಲಿಗೆ ಕಾರಣಕರ್ತರಾಗುತ್ತಿದ್ದರು.  ಹೀಗಾಗಿ ಬಂಗಾರಪ್ಪ ಮೂರು ಬಾರಿ ಕಾಂಗ್ರೆಸ ತೊರೆದಾಗ ಮತ್ತೆ ಸೇರಿದಾಗ ಈ ವ್ಯತ್ಯಾಸಗಳನ್ನು ಮಾಡಿ ತೋರಿಸಿದ್ದಾರೆ.


     ಅವರು ತಮ್ಮ ಮುಖ್ಯಮಂತ್ರಿತ್ವದ ಅವಧಿಯಲ್ಲಿ ರೈತರಿಗೆ ಉಚಿತ ವಿದ್ಯತ್, ಬಡತನದ ರೇಖೆಗಿಂತ ಕೆಳಗಿರು ವವರಿಗೆ ಜನತಾ ಮನೆ, ಕಡಿಮೆ ದರಗಳಲಿ ಪಡಿತರ ಪೂರೈಕೆ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ಮೀಸಲಾತಿಯಲ್ಲಿ ಹಲ ಉಪಯುಕ್ತ ಬದಲಾವಣೆ ಮುಂತಾದ ಜನಪರ ಕಾರ್ಯಗಳನ್ನು ಕೈಗೊಂಡರು. ಅವರ ಜೀವನದ ಒಂದು ವಿಶೇಷತೆಯೆಂದರೆ ಅವರು ಕ್ಯಾಬಿನೆಟ್ ಸಚಿವ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ಸ್ಥಾನ, ಮುಖ್ಯಮಂತ್ರಿ ಸ್ಥಾನ ಗಳನ್ನು ಪಡೆದದ್ದು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೆ. ಅವರು ಕಾಂಗ್ರೆಸ್ ಬಿಟ್ಟು ಕ್ರಾಂತಿರಂಗ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷಗಳನ್ನು ಸ್ಥಾಪಿಸಿದರು. ಅವುಗಳನ್ನು ಬೆಳೆಸಿ ಅಧಿಕಾರಕ್ಕೆ ತರುವ ತಾಳ್ಮೆ ಅವರಿಗಿರಲಿಲ್ಲ. ಬೀಜ ನೆಟ್ಟ ಕೂಡಲೆ ಅದರ ಫಲ ಅಪೇಕ್ಷಿಸುವ ಅವಸರದ ವ್ಯಕ್ತಿತ್ವ ಅವರದಾಗಿತ್ತು. ಹೀಗಾಗಿ ಅವು ಬೆಳವಣಿಗೆ ಹೊಂದಲಿಲ್ಲ.ತಮ್ಮ ವಿಧಾನಸಭಾ ಕ್ಷೇತ್ರ ಸೊರಬದಿಂದ ಅವರು ಸೋಲನ್ನೆ ಕಾಣಿಲಿಲ್ಲ. ಒಂದು ಸಲ ಅವರು ಅಲ್ಲಿಗೆ ಪ್ರಚಾರಕ್ಕೆ ಹೋಗದೆ ಗೆದ್ದದ್ದು ಇಂದಿಗೂ ದಾಖಲೆ. ನಂತರ ತಮ್ಮ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿ ಮತ್ತೆ ಕಾಂಗ್ರೆಸ್ ಮೆಲೆ ಸಿಟ್ಟು ಮಾಡಿಕೊಂಡು ಬಿಜೆಪಿ, ಆನಂತರ ಜೆಡಿಎಸ್ ಸೇರಿದರು. ಅವರ ಪಕ್ಷಾಂತರಗಳಿಗೆ ಅವರವೆ ಆದ ಕಾರಣಗಳನ್ನು ಕೊಡುತ್ತಿದ್ದರು. ರಾಜಕೀಯಕ್ಕೆ ಹಣದ ಅಗತ್ಯತೆ ಇದ್ದರೂ ಇಂದಿನ ರಾಜಕಾರಣಿಗಳಿ ಗಿರು ವಂತೆ ಹಣ ಮಾಡುವ ಹಪಾಹಪಿ ಇರಲಿಲ್ಲ. ಯಾವ ಸಂಧರ್ಭದಲ್ಲೂ ಅಧಿಕಾರಕ್ಕೆ ಅಂಟಿ ಕೊಳ್ಳಲು ಶಾಸಕರ ಖರೀದಿ ವ್ಯವಹಾರ ಮಾಡಲಿಲ್ಲ. ಇಂದುಳಿದ ನಾಯಕನೆಂದು ಬಿಂಬಿಸಲ್ಪಟ್ಟಿದ್ದರೂ ಎಲ್ಲ ವರ್ಗಗಳಲ್ಲಿ ಅವರ ಸ್ನೇಹಿತರು ಅಭಿಮಾನಿಗಳು ಇದ್ದರು. ಜಾತಿ ಸಂಘಟನೆಯನ್ನು ಒಂದು ದುಷ್ಟಕೂಟವಾಗಿ ಯಾವತ್ತೂ ಮಾಡಲಿಲ್ಲ. 


     ಬಂಗಾರಪ್ಪ ತಮ್ಮ ಒತ್ತಡದ ರಾಜಕಾರಣದ ಧಾವಂತದ ಬದುಕಿನಲ್ಲೂ ಕ್ರೀಡೆ ಕಲೆ ಸಂಗೀತ ಸಾಹಿತ್ಯಗಳಿಗೆ ಸಮಯ ಕೊಡುತ್ತಿದ್ದರು. ಆರೋಗ್ಯ ತೀರ ಕೈಕೊಡುವ ವರೆಗೂ ಅವರು ಬೆಳಗಿನ ಜಾವ ಟೆನಿಸ್ ಆಡುತ್ತಿದ್ದರು. ಅವರು ಸಂಗೀತ ವಿಶೇಷವಾಗಿ ಹಿಂದುಸ್ತಾನಿ ಸಂಗಿತದ ಅಭಿಮಾನಿ ಯಾಗಿದ್ದರು, ಅದನ್ನು ಕೆಲ ಕಾಲ ಶಾಸ್ತ್ರೀಯ ಸಂಗೀತ ಕಲಿತಿದ್ದು ರಾಗಗಳನ್ನು ಗುರುತಿಸ ಬಲ್ಲವರಾಗಿದ್ದರು. ಸೊರಬದಲ್ಲಿ ಪ್ರತಿವರ್ಷ ಕುಪಗಡ್ಡಿ ನಾಡಿಗೇರರು ಹಾಗೂ ಸೊರಬದ ಉತ್ತರಾದಿ ಮತ್ತು ದಕ್ಷಣಾದಿ ಸಂಗೀತ ಬಲ್ಲವರಾಗಿದ್ದ ಚಾಮರಾಜಪೇಟೆಯ ವಾಸಿ ನಾರಾಯಣಪ್ಪ ರವರ ಜೊತೆ ಸೇರಿ ಸಂಯುಕ್ತ ಆಶ್ರಯದಲ್ಲಿ ಗುರು ಶಾಂತಗವಾಯಿಗಳ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಿ ಒಬ್ಬ ಹಿರಿಯ ಮತ್ತು ಉದಯೋನ್ಮುಖ ಸಂಗೀತ ಸಾಧಕರನ್ನು ಗೌರವಿಸುವ ಪರಂಪರೆ ರೂಡಿ ಸಿದ್ದರು. ಅವರ ಸಾಹಿತ್ಯ ಜ್ಞಾನ ಬಹಳ ಗಹನವಾದುದಾಗಿತ್ತು. ಈಗ್ಗೆ ಸುಮಾರು ಹದಿನೈದು ವರ್ಷಗಳ ಹಿಂದೆ  ಇಲ್ಲಿಯ ವಿನಾಯಕ ದೇವಸ್ಥಾನದ ಹಿಂದೆ ಕುವೆಂಪು ರವರ ವ್ಯಕ್ತಿತ್ವ ಮತ್ತು ಸಾಹಿತ್ಯ ಕುರಿತು ಮಾಡಿದ ಭಾಷಣ ಯಾವುದೇ ಅಕಾಡೆಮಿಕ್ ಉಪನ್ಯಾಸಕ್ಕೆ ಕಡಿಮೆ ಇರಲಿಲ್ಲ. ಸಾಂದರ್ಭಿಕವಾಗಿ ಕುವೆಂಪು ರವರ ಕವನಗಳ ಸಾಲು ಗಳನ್ನು ಉದ್ಘರಿಸುತ್ತ ಒಂದು ಘಂಟೆಕಾಲ ಮಾಡಿದ ನಿರರ್ಗಳ ಉಪನ್ಯಾಸ ಎಂದಿಗೂ ಮರೆಯಲಾಗದಂತಹುದು.


     ಅವರು ಅನೇಕ ಲೋಪ ದೋಷಗಳ ಮಧ್ಯೆಯೂ ಅವರೊಬ್ಬ ಖಂಡಿತವಾದಿ ನೇರ ನಡೆ ನುಡಿಯ ಪ್ರಾಮಾಣಿಕ ರಾಜಕಾರಣಿ ಯಾಗಿದ್ದರು. ಅವರು ತಮ್ಮ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿ ತಮ್ಮ ಮಕ್ಕಳಾದ ಕುಮಾರ ಮತ್ತು ಮಧು ರಾಜಕೀಯ ರಂಗದ ಉತ್ತರ ಮತ್ತು ದಕ್ಷಿಣ ಧ್ರುವಗಳಾದದ್ದು ಒಂದು ದುರಂತ. ಬಂಗಾರಪ್ಪ ಇದನ್ನು ತಪ್ಪಿಸಬಹುದಿತ್ತು ಎಂಬುದು ಅವರ ಕೆಲ ಅಭಿಮಾನಿಗಳ ಅನಿಸಿಕೆಯಾಗಿತ್ತು. ಬಂಗಾರಪ್ಪ ಒಬ್ಬ ಜಿದ್ದಿನ ರಾಜಕಾರಣಿ ಜಿದ್ದಿಗೆ ಬಿದ್ದರೆ ಅವರು ಮಕ್ಕಳೆ ಆಗಿರಲಿ ಎಲ್ಲರೂ ಒಂದೆ. ಅವರೊಬ್ಬ ನಿರ್ಮಮಕಾರದ ರಾಜಕಾರಣಿ. ಬಂಗಾರಪ್ಪ ಒಂದು ಒಂಟಿ ಸಲಗ, ಅದು ನಡೆದದ್ದೆ ದಾರಿ. ದಟ್ಟ ಕಾರ್ಗತ್ತಲಿನ ದಂಡಕಾರಣ್ಯದಲ್ಲಿ ಸಾಗಿಹೋಗಿದೆ. ಅಲ್ಲಾದರೂ ಆ ಸಲಗದ ಮಹತ್ವಾಕಂಕ್ಷೆಗಳು ಪೂರೈಸಲಿ. ಬರೆದರೆ ಇನ್ನೂ ಪುಟಗಳಷ್ಟು ವಿಷಯಗಳಿವೆ ಈಗಿಷ್ಟು ಸಾಕು,ಅವರ ಆತ್ಮಕ್ಕೆ ಶಾಂತಿ ದೊರಕಲಿ.

Comments