ಕಥೆ - ದೇವರು ವರವನು ಕೊಟ್ರೆ

ಕಥೆ - ದೇವರು ವರವನು ಕೊಟ್ರೆ

ಮಾದಯ್ಯ ಸೋಮನಹಳ್ಳಿಯ ಒಬ್ಬ ಸಾಮಾನ್ಯ ರೈತ. ಮಾದಯ್ಯನಿಗೆ ಕೆಂಪವ್ವ ಎಂಬ ಹೆಂಡತಿ ಹಾಗೂ ಸಿದ್ದೇಶ ಎಂಬ ಒಬ್ಬ ಮಗನೊಂದಿಗೆ ಕೂಡಿದ ಸುಖೀ ಕುಟುಂಬ. ತನಗೆ ಇದ್ದ ಮೂರೆಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಮನೆಗೆ ಬೇಕಾದಷ್ಟು ಉಳಿಸಿಕೊಂಡು ಮಿಕ್ಕಿದ್ದನ್ನು ಮಾರಿ ಬಂದ ದುಡ್ಡಿನಲ್ಲಿ ಸುಖವಾದ ಜೀವನ ನಡೆಸಿಕೊಂಡಿದ್ದ ಮಾದಯ್ಯ. ತೀರ ಉತ್ತಮ ಸ್ಥಿತಿಯಲ್ಲಿ ಅಲ್ಲದಿದ್ದರೂ ಕೆಟ್ಟ ಸ್ಥಿತಿಯಂತೂ ಇರಲಿಲ್ಲ. ತನ್ನ ಹುಟ್ಟಿನಿಂದ ಹಳ್ಳಿಯನ್ನೇ ಬಿಟ್ಟು ಹೋಗದ ಮಾದಯ್ಯ ಒಮ್ಮೆ ಅನಿವಾರ್ಯ ಕಾರಣಗಳಿಂದ ಬೆಂಗಳೂರಿಗೆ ಬರಬೇಕಾಯಿತು.

 

ಬೆಂಗಳೂರಿಗೆ ಬಂದ ಮಾದಯ್ಯ ಬೆಂಗಳೂರಿನ ತಳುಕು ಬಳುಕು ನೋಡಿ ದಂಗು ಬಡಿದು ಹೋದ. ಎತ್ತರೆತ್ತರದ ಕಟ್ಟಡಗಳು, ಕಾರುಗಳು, ಇಲ್ಲಿನ ಜನ ಅವರ ವೈಭೋಗ ಕಂಡು ಹುಚ್ಚನಂತೆ ಆಗಿ ಹೋಗಿದ್ದ. ಬೆಂಗಳೂರಿಂದ ಹಳ್ಳಿಗೆ ವಾಪಸ್ ಹೋದರು ಅವನಿಗೆ ತಲೆಯಲ್ಲಿ ಬರೀ ಬೆಂಗಳೂರಿನ ಗುಂಗೆ ತುಂಬಿ ಹೋಗಿತ್ತು. ಹೇಗಾದರೂ ಹಣ ಸಂಪಾದಿಸಿ ತಾನೂ ಬೆಂಗಳೂರಿಗೆ ಹೋಗಿ ನೆಲೆಸಬೇಕು ಎಂದು ಯೋಚಿಸುತ್ತಿದ್ದ.

 

ಒಂದು ದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ.ಊಟದ ಸಮಯಕ್ಕೆ ಕೆಂಪವ್ವ ಬುತ್ತಿ ತೆಗೆದುಕೊಂಡು ಬಂದಳು. ಮಾದಯ್ಯ ಊಟ ಮಾಡುತ್ತಾ ಕೆಂಪವ್ವಳ ಮುಂದೆ ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದಾಗ ಕೆಂಪವ್ವ ' ನೋಡಿ ನಮಗೆ ಭಗವಂತ ಸಾಕಷ್ಟು ಕೊಟ್ಟಿದ್ದಾನೆ, ಇದ್ದಿದ್ದರಲ್ಲಿ ನಾವು ಸಂತೋಷವಾಗೆ ಇದ್ದೇವೆ. ನಮಗೇಕೆ ಅತಿ ಆಸೆ" ಎಂದಳು. ಅದಕ್ಕೆ ಮಾದಯ್ಯ ಏನೂ ಮಾತಾಡದೆ ಊಟ ಮಾಡಿ ಸುಮ್ಮನೆ ಮರಕ್ಕೆ ಒರಗಿದ.

 

ಸ್ವಲ್ಪ ಹೊತ್ತಿನ ನಂತರ ಬೆನ್ನಿಗೆ ಏನೋ ತಗುಲಿದಂತಾಗಿ ಎದ್ದು ನೋಡಿದರೆ ಮರದ ಬುಡದಲ್ಲಿದ್ದ ಗಣೇಶನ ವಿಗ್ರಹಕ್ಕೆ ಒರಗಿದ್ದ ಇವನು. ತಕ್ಷಣ ಅಲ್ಲಿಂದ ಎದ್ದು ಸ್ವಾಮಿ ಇನ್ನು ಎಷ್ಟು ವರ್ಷ ಇದೆ ವ್ಯವಸಾಯ ಮಾಡಿಕೊಂಡು ಬದುಕಬೇಕು. ನನಗೂ ಉತ್ತಮ ಸ್ಥಿತಿಗೆ ತಲುಪಬೇಕು ಎನ್ನುವ ಆಸೆ ಇದೆ. ದಯವಿಟ್ಟು ನನಗೆ ಆಸ್ತಿ ಐಶ್ವರ್ಯ ಕರುಣಿಸು ಸ್ವಾಮಿ ಎಂದು ಕೇಳಿಕೊಂಡ. ಕೂಡಲೇ ಅಶರೀರ ವಾಣಿಯೊಂದು ಕೇಳಿ ಬಂತು. ಭಕ್ತ ನಿನಗೆ ಎಷ್ಟು ಪ್ರಾಪ್ತವೋ ಅಷ್ಟನ್ನು ನಿನಗೆ ಕರುಣಿಸಿದ್ದೇನೆ. ಈಗ ನೀನು ಸುಖ ಶಾಂತಿ ನೆಮ್ಮದಿ ಇಂದ ಇದ್ದೀಯಲ್ಲ ಅಷ್ಟು ಸಾಲದೇ. ಎಲ್ಲರಿಗೆ ಎಲ್ಲವನ್ನೂ ಕೊಡುವುದಿಲ್ಲ ನಾನು. ನೀನು ಕೇಳಿದ ವಾರದಿಂದ ನೀನು ನಿನ್ನ ನೆಮ್ಮದಿ ಕಳೆದುಕೊಳ್ಳುತ್ತೀಯ ಎಂದ. ಆದರೆ ಮಾದಯ್ಯ ದೇವರಿಗೆ ಮಾರುತ್ತರ ನೀಡಿದ. ಇಲ್ಲ ದೇವರೇ ನನಗೆ ಅಪಾರ ಆಸ್ತಿ ಬೇಕೇ ಬೇಕು ಎಂದ. ದೇವರು, ಸರಿ ನಿನ್ನ ಹಣೆ ಬರಹ ಅನುಭವಿಸು. ನಿನ್ನ ಹೊಲದ ಕೊನೆಯಲ್ಲಿ ಮರದ ಬುಡದಲ್ಲಿ ಅಗೆದು ನೋಡು ಅಲ್ಲಿ ನಿನಗೆ ಬೇಕಾದ್ದು ಸಿಗುತ್ತದೆ. ಆದರೆ ಇನ್ನೆಂದು ನನ್ನನ್ನು ಏನೂ ಕೇಳಬಾರದು ಎಂದು ಹೇಳಿ ಆ ಅಶರೀರ ವಾಣಿ ಕೊನೆಗೊಂಡಿತು.

 

ಕೂಡಲೇ ಎದ್ದೆನೋ ಬಿದ್ದೆನೋ ಎಂದು ಆ ಮರದತ್ತ ಓಡಿ ಸುತ್ತಲೂ ಅಗೆಯಲು ಶುರು ಮಾಡಿದ. ಸ್ವಲ್ಪ ಹೊತ್ತಿನಲ್ಲೇ ಗುದ್ದಲಿಗೆ ಟನ್ ಎದ್ದು ಸದ್ದಾಯಿತು, ಚಕಚಕನೆ ಅಗೆಯಲು ಶುರು ಮಾಡಿದ. ತನ್ನ ಕಣ್ಣನ್ನು ತಾನೇ ನಂಬದಾದ. ಒಂದು ಕೊಪ್ಪರಿಗೆ ತುಂಬಾ ಹಣ, ಆಭರಣಗಳು. ಕೂಡಲೇ ಅದನ್ನು ಹಾಗೆ ಮುಚ್ಚಿತ್ತು ಮನೆಗೆ ಓಡಿ ಬಂದು ಕೆಂಪವ್ವನಿಗೆ ನಡೆದ ವಿಷಯ ತಿಳಿಸಿ ಬೇಗನೆ ಗಂಟು ಮೂಟೆ ಕಟ್ಟು ಇಲ್ಲಿಂದ ಬೆಂಗಳೂರಿಗೆ ಓಡಿ ಹೋಗೋಣ ಎಂದ. ಅದಕ್ಕೆ ಕೆಂಪವ್ವ ನೋಡು ಅತೀ ಆಸೆ ಒಳ್ಳೇದಲ್ಲ. ನಾನು ಎಲ್ಲೂ ಬರಲ್ಲ ನೀನು ಹೋಗಬೇಡ ಎಂದಳು. ಅದಕ್ಕೆ ಮಾದಯ್ಯ ನಿನ್ನ ಹಣೆ ಬರಹ ಇಲ್ಲೇ ಬಿದ್ದಿರು ಎಂದು ಹೇಳಿ ಎರಡು ಮೂರು ಗೋಣೀ ಚೀಲಗಳನ್ನು ತೆಗೆದುಕೊಂಡು ಹೊಲದ ಕಡೆ ಓಡಿದನು. ಅಲ್ಲಿ ಬಂದು ಇದ್ದ ಹಣವನ್ನೆಲ್ಲ ಬಾಚಿಕೊಂಡು ಬೆಂಗಳೂರಿಗೆ ಹೋಗಿಬಿಟ್ಟ.

 

 

ಬೆಂಗಳೂರಿಗೆ ಬಂದು ಕೆಲವೇ ದಿನಗಳಲ್ಲಿ ತನ್ನದೇ ಆದ ಸ್ವಂತ ಬಂಗಲೆ ಕಾರು ಎಲ್ಲವನ್ನೂ ಖರೀದಿಸಿಬಿಟ್ಟ ಮಾದಯ್ಯ. ಜೊತೆಯಲ್ಲಿ ಕೈಗೊಂಡು ಆಳು, ಕಾಲಿಗೊಂದು ಆಳು ಎಂಬಂತೆ ಮನೆ ತುಂಬಾ ಕೆಲಸದವರನ್ನು ನೇಮಿಸಿಕೊಂಡು ಎಲ್ಲವೂ ಕೂತಲ್ಲೇ ಆಗುವ ಹಾಗೆ ಮಾಡಿಕೊಂಡು ಬಿಟ್ಟ. ಹಳ್ಳಿಯ ಜೀವನವನ್ನೇ ಮರೆತುಬಿಟ್ಟ.

ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಅವನ ಮೊಬೈಲ್ ಗೆ ಕರೆಯೊಂದು ಬಂತು. ' ಹೇಯ್, ನಾನು ಈ ಊರಿಗೆ ದೊಡ್ಡ ಡಾನ್. ಏನು ಏತಕ್ಕೆ ಎಂದು ಕೇಳದೆ ಇನ್ನು ಒಂದು ವಾರದೊಳಗೆ ಒಂದು ಕೋಟಿ ಹಣ ನೀಡಬೇಕು. ಒಂದು ಪಕ್ಷ ನೀನೇನಾದರೂ  ವಿಷಯವನ್ನು ಪೋಲಿಸ್ ಗೆ ತಿಳಿಸುವುದುಅಥವಾ ಬೇರೆ ಏನಾದರೂ ಯೋಚನೆ ಮಾಡಿದರೆ ನಿನ್ನ ಪ್ರಾಣಕ್ಕೆ ಕುತ್ತು. ಹುಷಾರ್" ಎಂದು ಹೇಳಿ ಇಟ್ಟುಬಿಟ್ಟ. ಮಾದಯ್ಯನಿಗೆ ಏನು ಮಾಡುವುದೆಂದು ಭಯ ಆಗತೊಡಗಿತು. ಅವನಿಗೆ ಒಂದು ಕೋಟಿ ಕೊಡುವ ಮನಸಾಗದೆ ಸೀದಾ ಪೋಲಿಸ್ ಗೆ ಫೋನ್ ಮಾಡಿ ಈ ರೀತಿ ನನ್ನ ಜೀವಕ್ಕೆ ಕರೆ ಬಂದಿತ್ತು ನನಗೆ ದಯವಿಟ್ಟು ನನಗೆ ರಕ್ಷಣೆ ಬೇಕು ಎಂದು ಮನವಿ ಮಾಡಿಕೊಂಡ. ಮರುದಿನದಿಂದ ಅವನ ಬಂಗಲೆಗೆ ಪೋಲಿಸ್ ರಕ್ಷಣೆ ಒದಗಿತ್ತು. ಇನ್ನೇನು ತೊಂದರೆ ಇಲ್ಲ ಎಂದು ಸಮಾಧಾನ ಮಾಡಿಕೊಂಡು ಆರಾಮಾಗಿ ಇದ್ದ. ಒಂದು ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ಮನೆಗೆ ಯಾರೋ ಒಂದು ಐದಾರು ಜನ ಬಂದರು. ಅವರು ಯಾರೆಂದು ವಿಚಾರಿಸಿದಾಗ ನಾವು ಆದಾಯ ತೆರಿಗೆ ಇಲಾಖೆ ಇಂದ ಬಂದಿರುವುದಾಗಿ ನಿಮ್ಮ ಆಸ್ತಿಯ ಮಾಹಿತಿ ಬೇಕಿತ್ತು ಎಂದಾಗ ಮಾದಯ್ಯನಿಗೆ ಜಂಘಾಬಲವೇ ಉಡುಗಿ ಹೋಯಿತು. 

 


ಅವನು ನಡೆದ ವಿಷಯವೆಲ್ಲ ತಿಳಿಸಿ ಇದೆಲ್ಲ ದೇವರು ಕೊಟ್ಟ ವರ ಎಂದು ಎಷ್ಟೇ ಹೇಳುತ್ತಿದ್ದರೂ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಮಾದಯ್ಯನಿಗೆ ಇದ್ದಕ್ಕಿದ್ದಂತೆ ಕಣ್ಣು ಮಂಪರಾಗಿ ಬಿದ್ದು ಬಿಟ್ಟ. ಮತ್ತೆ ಕಣ್ಣು ಬಿಟ್ಟಾಗ ಆಟ ಆಸ್ಪತ್ರೆಯಲ್ಲಿ ಮಲಗಿದ್ದ. ಪಕ್ಕದಲ್ಲಿದ್ದ ಡಾಕ್ಟರ ಅವನನ್ನು ನೋಡಿ 'ನಿಮಗೆ ತೀವ್ರ ಹೃದಯಾಘಾತವಾಗಿದೆಅದೂ ಅಲ್ಲದೆ ನಿಮಗೆ ಸಕ್ಕರೆ ಖಾಯಿಲೆ ಜಾಸ್ತಿಯಾಗಿ ನಿಮ್ಮ ಕಾಲನ್ನು ಕತ್ತರಿಸ ಬೇಕಾಗುತ್ತದೆಹಾಗೆಯೇ ನಿಮ್ಮ ಕಿಡ್ನಿ ಸಹ ಕಾರ್ಯ ನಿರ್ವಹಿಸುತ್ತಿಲ್ಲ. ಮೊದಲು ಕಾಲನ್ನು ಕತ್ತರಿಸಿಬಿಡೋಣ ಎಂದು ಪಕ್ಕದಲ್ಲಿದ್ದ ದೊಡ್ಡ ಗರಗಸ ಕೈಗೆ ಎತ್ತಿಕೊಂಡರು. ತಕ್ಷಣ ಮಾದಯ್ಯ ಅಯ್ಯೋ ಬೇಡ ಬೇಡ ನನ್ನ ಕಾಲು ಎಂದು ಜೋರಾಗಿ ಬಡಬಡಿಸುತ್ತಿದ್ದ, ತಕ್ಷಣ ಕೆಂಪವ್ವ ಮಾದಯ್ಯನನ್ನು ಎಬ್ಬಿಸಿ ಯಾಕ್ರೀ ಏನೇನೋ ಕನವರಿಸುತ್ತಿದ್ದೀರಿ, ಏನಾದರೂ ಕೆಟ್ಟ ಕನಸು ಬಿತ್ತ ಎಂದು ಕೇಳಿದಳು. ಕಣ್ಣು ಬಿಟ್ಟು ಸುತ್ತಲೂ ನೋಡಿದ ಮಾದಯ್ಯ ತಾನು ಊಟ ಮಾಡಿ ಮಲಗಿದ್ದಾಗ ಕನಸು ಕಂಡಿದ್ದೇನೆ ಎಂದು ಅರಿವಾಗಿ ಮನದಲ್ಲೇ ದೇವರೇ ನಾನು ಹೀಗೆ ಇರುತ್ತೀನಿ, ನನಗೆ ಯಾವುದೇ ಆಸ್ತಿ ಆಗಲಿ ಐಶ್ವರ್ಯ ಆಗಲಿ ಬೇಡ ಎಂದುಕೊಂಡ

Rating
No votes yet

Comments