ವ್ಯವಹಾರ ಚತುರರಿಗೆ ಮಾತೇ ಭಂಡವಾಳ

ವ್ಯವಹಾರ ಚತುರರಿಗೆ ಮಾತೇ ಭಂಡವಾಳ

ನಮ್ಮ ಊರಿನ ಒಂದು ಬೀದಿಯಲ್ಲಿ ಎರಡು ಬಟ್ಟೆ ಅಂಗಡಿಗಳು. ಮೊದಲನೆಯ ಅಂಗಡಿಗೆ ಹೋದೆವು. "ಏನು ಬೇಕಾಗಿತ್ತು?" ಅಂಗಡಿಯವನ ಪ್ರಶ್ನೆ. "ಸೀರೆ ಬೇಕಾಗಿತ್ತು". ಒಂದೊಂದೇ ಸೀರೆ ತೋರಿಸತೊಡಗಿದ. ಸುಮಾರು ನಲುವತ್ತು ಸೀರೆ ನೋಡಿದ್ದಾಯಿತು. ನಮಗೆ ಯಾವುದೂ ಮೆಚ್ಚಿಗೆಯಾಗಲಿಲ್ಲ. ಅಲ್ಲಿಂದ ಹೊರಟಾಗ "ಏನು, ಸೀರೆ ತಗೊಳ್ಳೋದಿಲ್ವಾ?" ಎಂದು ಕೇಳಿದ. "ಇಲ್ಲ, ನಮಗೆ ಇಲ್ಲಿನ ಡಿಸೈನ್ ಇಷ್ಟವಾಗಲಿಲ್ಲ" ಎಂದೆ. "ಮತ್ಯಾಕೆ ಅಷ್ಟು ಸೀರೆ ತೋರಿಸಲಿಕ್ಕೆ ಹೇಳಿದ್ದು?" ಮುಖ ಗಂಟಿಕ್ಕಿದ್ದ ಆತನಿಂದ ಪ್ರಶ್ನೆ ತೂರಿ ಬಂತು.

ಆಲ್ಲೇ ಹತ್ತಿರದಲ್ಲಿದ್ದ ಇನ್ನೊಂದು ಸೀರೆ ಅಂಗಡಿಗೆ ಹೋದೆವು. ಅಲ್ಲಿ ಕೂಡ ಐವತ್ತು ಸೀರೆ ನೋಡಿದರೂ ಯಾವುದೂ ಇಷ್ಟವಾಗಲಿಲ್ಲ. ಅಲ್ಲಿಂದ ಹೊರಟಾಗಲೂ ಅಂಗಡಿಯವನಿಂದ ಅದೇ ಪ್ರಶ್ನೆ. ನಮ್ಮಿಂದ ಅದೇ ಉತ್ತರ. ಆದರೆ ಈ ಅಂಗಡಿಯವನ ಪ್ರತಿಕ್ರಿಯೆ ಭಿನ್ನ. "ಪರವಾಗಿಲ್ಲ, ಮುಂದಿನ ವಾರ ಹೊಸ ಸ್ಟಾಕ್ ಬರುತ್ತದೆ. ಈ ಕಡೆ ಬಂದರೆ ಖಂಡಿತ ಬನ್ನಿ" ನಸುನಗುತ್ತ ಹೇಳಿದ. ಈ ಎರಡೂ ಪ್ರಸಂಗಗಳನ್ನು , ಎರಡೂ ಅಂಗಡಿಯವರ ಕೊನೆಯ ಮಾತುಗಳನ್ನು ನಾವು ಇತರರಿಗೆ ತಿಳಿಸಲು ಮರೆತಿಲ್ಲ.

ಮುರಿದು ಬಿದ್ದ ಸ್ನೇಹ: ಹರೀಶ ಮತ್ತು ಗಿರೀಶ ಸ್ನೇಹಿತರು. ಹರೀಶನ ಮನೆಗೆ ಸಂಜೆ ಬರುತ್ತೇನೆಂದಿದ್ದ ಗಿರೀಶ ಬರಲೇ ಇಲ್ಲ. ಗಿರೀಶನಿಗಾಗಿ ಕಾದುಕಾದು ಬೇಸತ್ತ ಹರೀಶ ಅಸಹನೆಯಿಂದ ಕುದಿಯುತ್ತಿದ್ದ. ಮರುದಿನ ಭೇಟಿಯಾದಾಗ "ಯಾಕೋ ನಿನ್ನೆ ಬರ್ತೇನೆಂದು ಬರಲೇ ಇಲ್ಲ, ನಂಗೇನೂ ಬೇರೆ ಕೆಲಸ ಇಲ್ಲ ಅಂದ್‍ಕೊಂಡಿದ್ದೀಯಾ" ಎಂದು ಸಿಡುಕಿದ ಹರೀಶ. "ಹಾಗಲ್ಲ. ನಾನು ..." ಎನ್ನುತ್ತಿದ್ದ ಗಿರೀಶನ ಮಾತು ಕೇಳಿಸಿಕೊಳ್ಳದೆ, "ಸೊಕ್ಕು ನಿಂಗೆ. ನನ್ನ ಇಡೀ ದಿನ ಹಾಳು ಮಾಡಿದೆ" ಎಂದು ಹರಿಹಾಯ್ದ ಹರೀಶ. ಬಿಸಿಬಿಸಿ ಮಾತು ಜಗಳಕ್ಕೆ ತಿರುಗಿ, ಅವರ ಸ್ನೇಹ ಮುರಿದು ಬಿತ್ತು. ಇದಾಗಿ ಎರಡು ವರುಷಗಳಾದರೂ ಅವರು ಮತ್ತೆ ಮಾತಾಡಿಲ್ಲ.

ಈ ಎರಡೂ ಪ್ರಕರಣಗಳು ವ್ಯವಹಾರ ಕೌಶಲ್ಯವಿಲ್ಲದವರ, ಹಳಿ ತಪ್ಪಿದ ಒಂದು ಮಾತಿನ ಮತ್ತು ವರ್ತನೆಯ ದುಷ್ಪರಿಣಾಮಗಳನ್ನು ಎತ್ತಿ ತೋರಿಸುತ್ತವೆ.

ಆಕರ್ಷಣೆಯ ಕೇಂದ್ರ ಬಿಂದು: ಕೆಲವರಿರುತ್ತಾರೆ ನೋಡಿ. ಸುತ್ತಲಿದ್ದವರನ್ನು ತಮ್ಮ ಒಂದೇ ಮಾತಿನಿಂದ ಆಕರ್ಷಿಸುತ್ತಾರೆ. ಅಂಗಡಿಗಳಲ್ಲಿ, ಕಚೇರಿಗಳಲ್ಲಿ, ಸಭೆಗಳಲ್ಲಿ, ಸಂಸ್ಥೆಗಳಲ್ಲಿ ಇಂಥವರು ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ.  ಮಂಗಳೂರಿನ ಬಿಎಸ್‍ಎನ್‍ಎಲ್‍ನ ಪ್ರಧಾನ ಕಚೇರಿಯಲ್ಲಿ "ಗ್ರಾಹಕರ ದೂರು ವಿಭಾಗ"ದಲ್ಲಿ ಇಂಥ ವ್ಯಕ್ತಿಯೊಬ್ಬರಿದ್ದರು. ಸದಾ ಹಸನ್ಮುಖ, ಲವಲವಿಕೆಯ ಮಾತು. ತಮ್ಮ ದೂರಿನೊಂದಿಗೆ ಬುಸುಗುಡುತ್ತ ಬಂದ ಗ್ರಾಹಕರ ದೂರನ್ನು ತಾಳ್ಮೆಯಿಂದ ಕೇಳಿ, ನಿಯಮಗಳನ್ನು ಸರಳವಾಗಿ ವಿವರಿಸಿ, ಕೆಲವೇ ನಿಮಿಷಗಳಲ್ಲಿ ಸಮಾಧಾನ ಮಾಡಿ ಕಳಿಸುತ್ತಿದ್ದರು. ಇಂಥವರು ತಮ್ಮ ಮಾತಿನ ಕೌಶಲ್ಯದಿಂದ ಯಾರನ್ನಾದರೂ ಗೆದ್ದು ಬಿಡುತ್ತಾರೆ.

೩ ಸೂತ್ರಗಳು; ಇಂಥ ವ್ಯಕ್ತಿಗಳನ್ನು ಹತ್ತಿರದಿಂದ ಗಮನಿಸಿದರೆ, ಯಶಸ್ವಿ ವ್ಯವಹಾರ ಕೌಶಲ್ಯದ ೩ ಸೂತ್ರಗಳು ಸಿಪ್ಪೆ ತೆಗೆದ ಕಿತ್ತಳೆಯ ತೊಳೆಗಳಂತೆ ಬಿಚ್ಚಿಕೊಳ್ಳುತ್ತವೆ:
* "ಆ ಮದುವೆಗೆ ಎಷ್ಟು ಜನ ಬಂದಿದ್ದರು?" ಎಂದು ಕೇಳಿದರೆ, "ಐನೂರಕ್ಕಿಂತ ಜಾಸ್ತಿ ಜನ ಬಂದಿದ್ದರು" ಎನ್ನುವುದೇ ಸಾಮಾನ್ಯ ಉತ್ತರ. ಹಾಗೆಂದರೆ ಎಷ್ಟು? ಕೇಳಿದವನಿಗೆ ಅರ್ಥವಾಗುತ್ತದೆಯೇ? ಇಂಥ ಸಂದರ್ಭಗಳಲ್ಲಿ ಎಷ್ಟು ಜನರು ಬಂದಿದ್ದರೆಂದು ಸುಲಭವಾಗಿ ಅಂದಾಜು ಮಾಡಬಹುದು - ಅಲ್ಲಿರುವ ಕುರ್ಚಿಗಳನ್ನು ಎಣಿಸಿದರೆ ಸಾಕು. ವ್ಯವಹಾರ ಕೌಶಲ್ಯದ ವ್ಯಕ್ತಿಗಳು ಇದನ್ನು ಕರಗತ ಮಾಡಿಕೊಂಡಿರುತ್ತಾರೆ. ನಿಖರವಾಗಿ ವಿಷಯ ತಿಳಿಸುತ್ತಾರೆ. ಅದಕ್ಕಾಗಿ ಉದ್ದ, ಅಗಲ, ಎತರ, ಆಳ, ವಸ್ತುಗಳು ಇವನ್ನೆಲ್ಲ ಅಂಕೆಸಂಖ್ಯೆಗಳಿಂದ ತಿಳಿಸುತ್ತಾರೆ.

* ಅವರು ಚುಟುಕಾಗಿ ಮಾತನಾಡುವುದನ್ನೂ ಅಭ್ಯಾಸ ಮಾಡಿಕೊಂಡಿರುತ್ತಾರೆ. ಹೇಳಬೇಕಾದ್ದನ್ನು ಕಡಿಮೆ ಪದಗಳಲ್ಲಿ, ಸೂಜಿಮೊನೆಯಂತಹ ಶಬ್ದಗಳಲ್ಲಿ ಹೇಳಿಬಿಡುತ್ತಾರೆ. ಡಿವಿಜಿಯವರ "ಮಂಕುತಿಮ್ಮನ ಕಗ್ಗ"ದ ಮುಕ್ತಕಗಳು ಅಗಾಧ ಅರ್ಥವನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಹುದುಗಿಡುವ ಹಾಗೆ.

* ಅಂಥವರು ಸ್ಪಷ್ಟವಾಗಿ ಮಾತನಾಡುತ್ತಾರೆ. "ಅವನು ಭಾಷೆಗೆಟ್ಟವನು", "ಅವಳು ಚೆಲ್ಲು ಹುಡುಗಿ" ಎಂಬ ಅಸ್ಪಷ್ಟ ಮಾತುಗಳನ್ನು ಅಪ್ಪಿತಪ್ಪಿ ಕೂಡ ಆಡುವುದಿಲ್ಲ. ಅಂತಹ ಅಪಾಯಕಾಗಿ ಹೇಳಿಕೆಗಳಿಂದ ಆ ವ್ಯಕ್ತಿಗಳ ಬಾಳು ಹಾಳಾದೇತೆಂಬ ಅರಿವು ಅವರಿಗಿರುತ್ತದೆ. ಇತರರೂ ಇದನ್ನು ಸಾಧಿಸಬೇಕಾದರೆ ಏನು ಮಾಡಬೇಕು?

ಇದ್ದದ್ದು ಇದ್ದ ಹಾಗೆ: ಪ್ರತಿದಿನ ರಾತ್ರಿ ಮಲಗುವ ಮುನ್ನ, ಆ ದಿನವಿಡೀ ತಾವು ಆಡಿದ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ಅವುಗಳಲ್ಲಿ ಅನಗತ್ಯ ಮಾತುಗಳನ್ನು ಗುರುತಿಸಬೇಕು; ಅಂತಹ ಮಾತುಗಳನ್ನು ಮರುದಿನದಿಂದ ವ್ಯವಹಾರದಲ್ಲಿ ಬಳಸಬಾರದೆಂದು ನಿರ್ಧರಿಸಬೇಕು. ಆಡಿದ ಅಗತ್ಯದ ಮಾತುಗಳನ್ನು ನಿಖರವಾಗಿ, ಚುಟುಕಾಗಿ ಮತ್ತು ಸ್ಪಷ್ಟವಾಗಿ ಹೇಗೆ ಹೇಳಬಹುದಿತ್ತು ಎಂದು ಯೋಚಿಸಬೇಕು. ಉದಾಹರಣೆಗೆ: "ಭಾಷೆಗೆಟ್ಟವನು" ಎನ್ನುವ ಬದಲಾಗಿ, "ಅವನು ಈ ತಿಂಗಳು ಎರಡು ಸಲ ಕಚೇರಿಗೆ ಹತ್ತು ನಿಮಿಷ ತಡವಾಗಿ ಬಂದಿದ್ದ" ಎಂದು ಇದ್ದದ್ದನ್ನು ಇದ್ದ ಹಾಗೆ ಹೇಳಬೇಕು.

ಇದುವೇ ಎಲ್ಲದಕ್ಕಿಂತ ಕಷ್ಟವಾದ ಕೆಲಸ ಅಲ್ಲವೇ? ಆದ್ದರಿಂದ ಇದ್ದದ್ದನ್ನು ಇದ್ದ ಹಾಗೆ ನೋಡಲು ಮತ್ತು ಕೇಳಲು ಕಲಿಯಬೇಕು. ಇದಕ್ಕಾಗಿ ಪ್ರತಿದಿನ ಅರ್ಧ ತಾಸು  ನಿರಾಳವಾಗಿರಲು ಧ್ಯಾನ, ವಾಕಿಂಗ್ ಅಥವಾ ಇತರ ವಿಧಾನಗಳನ್ನು ಅಭ್ಯಾಸ ಮಾಡಬಹುದು. ಆಗ ಪ್ರತಿಯೊಂದು ಕ್ಷಣದ ಆಗುಹೋಗುಗಳಿಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ. ಒಮ್ಮೆ ಈ ಕಲೆಯನ್ನು ಸಾಧಿಸಿಕೊಂಡಿರೋ, ನಿಮ್ಮ ಯೋಚನೆಯ ಧಾಟಿಯೇ ಬದಲಾಗುತ್ತದೆ. "ಯೋಚನೆಯಂತೆ ಮಾತು, ಮಾತಿನಂತೆ ಕೆಲಸ" ಎಂಬ ರೀತಿಯಲ್ಲಿ ವ್ಯವಹರಿಸಲು ಸಾಧ್ಯವಾಗುತ್ತದೆ. ಇದೇ ವ್ಯವಹಾರ ಕೌಶಲ್ಯ ಬೆಳೆಸಿಕೊಂಡ ವ್ಯಕ್ತಿಗಳ ಯಶಸ್ಸಿನ ಗುಟ್ಟು.

ಮಾತಲ್ಲದ ಮಾತು: ವ್ಯವಹಾರ ಕೌಶಲ್ಯದಲ್ಲಿ ಎಲ್ಲದಕ್ಕಿಂತ ಮುಖ್ಯ ಅಂಶ "ಮಾತು" ಅಂತೀರಾ? ಅಲ್ಲ. ಕಣ್ಣನೋಟ, ಹುಬ್ಬು ಮತ್ತು ತುಟಿಗಳ ಕೊಂಕು, ಮುಖದ ಭಾವ, ಬೆರಳುಗಳ ಹಾಗೂ ಕೈಗಳ ಚಲನೆ, ನಿಂತ ಅಥವಾ ಕುಳಿತ ಭಂಗಿ, ಧ್ವನಿಯ ಏರಿಳಿತ ಇವೆಲ್ಲ ಪ್ರಧಾನ ಪಾತ್ರ ವಹಿಸುತ್ತವೆ. ಒಂದು ಯೋಚನೆ ಅಥವಾ ಘಟನೆಯನ್ನು ಇತರರಿಗೆ ತಿಳಿಸುವಾಗ, ಶೇಕಡಾ ೮೦ರಷ್ಟು ವಿವರಗಳನ್ನು ಇಂತಹ "ಮಾತಲ್ಲದ ಮಾತು"ಗಳಿಂದ ತಿಳಿಸುತ್ತೇವೆ.

ಮಾತಲ್ಲದ ಮಾತಿನಲ್ಲಿ ಮೌನ ಎಂಬುದು ಪರ್ವತಗಳ ಗುಂಪಿನಲ್ಲಿ ಹಿಮಾಲಯವಿದ್ದಂತೆ. ಅತ್ಯಂತ ಉತ್ಕಟ ಭಾವನೆಯ ಕ್ಷಣಗಳಲ್ಲಿ (ಉದಾಹರಣೆಗೆ ತಾಯಿ-ಮಗುವಿನ ವಾತ್ಸಲ್ಯ, ಹೆಣ್ಣು-ಗಂಡಿನ ಒಲವು, ಸಾವಿನ ನೋವು) ಮಾತು ಬೇಕಾಗಿಯೇ ಇಲ್ಲ. ಮೌನವೇ ಎಲ್ಲವನ್ನೂ ಹೇಳಿಬಿಡುತ್ತದೆ.

ಪರಿಣಾಮಕಾರಿಯಾಗಲು...: > ನಿಮ್ಮ ವ್ಯವಹಾರ ಕೌಶಲ್ಯ ಪರಿಣಾಮಕಾರಿಯಾಗ ಬೇಕಾದರೆ - ಕ್ಷಮಿಸಿ, ಉಪಕಾರವಾಯಿತು, ದಯವಿಟ್ಟು ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ - ಎಂಬ ಮಾತುಗಳನ್ನು ಅಗತ್ಯವಿದ್ದಾಗೆಲ್ಲ ಬಳಸಿ.
> ನಾನು, ನನ್ನಿಷ್ಟ, ನನ್ನ ಹಕ್ಕು ಎಂಬ ಪದಗಳನ್ನು ಇತರರೊಂದಿಗೆ ವ್ಯವಹರಿಸುವಾಗ ಬಳಸಬೇಡಿ. ಬದಲಾಗಿ ದರ್ಪ ಮತ್ತು ಅಹಂಕಾರದ ಸೋಂಕಿಲ್ಲದ ಪದಗಳನ್ನು ಬಳಸಿ.
> ನಿಮ್ಮ ಯೋಚನೆಯ ಧಾಟಿಯನ್ನೇ ಸಕಾರಾತ್ಮಕವಾಗಿಸಿ. ಆಗ ಇತರರ ಬಗ್ಗೆ ವ್ಯಂಗ್ಯ, ಅವಹೇಳನ, ಹೀನಾಯ ಭಾವ ನಿಮ್ಮ ಮಾತಿನಲ್ಲಿ ನುಸುಳುವುದಿಲ್ಲ.
> ಇತರರು ನಿಮ್ಮೊಂದಿಗೆ ಹೇಗೆ ಮಾತಾಡಬೇಕು ಮತ್ತು ವರ್ತಿಸಬೇಕೆಂದು ನೀರೀಕ್ಷಿಸುತ್ತೀರೋ, ಇತರರೊಂದಿಗೆ ನೀವೂ ಹಾಗೆಯೇ ವ್ಯವಹರಿಸಿ.
> ಯಾವಾಗಲೂ ಇತರರ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳಿ. ಅವರ ನೆಲೆಯಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಿ.
> ಮೊದಲ ಮಾತಿನಲ್ಲೇ ಅಂತಿಮ ಪರಿಣಾಮದ ಚಿಂತನೆಯಿರಲಿ. ಹೊಸ ವ್ಯಕ್ತಿ, ಕಚೇರಿ ಅಥವಾ ಸಂಸ್ತೆಯ ಪ್ರತಿನಿಧಿಗಳೊಂದಿಗೆ ಮೊದಲ ಭೇಟಿಯ ಮೊದಲ ಮಾತು ಆಡುವಾಗಲೇ ಅವರನ್ನು ಬೀಳ್ಗೊಡುವಾಗ ಸಕಾರಾತ್ಮಕ ಭಾವ ಇಬ್ಬರಲ್ಲೂ ತುಂಬಿರಬೇಕೆಂದು ನಿರ್ಧರಿಸಿ. ಅದನ್ನು ಸಾಧಿಸಲು ಮೊದಲ ಹಾಗೂ ನಂತರದ ವರ್ತನೆಗಳನ್ನು ರೂಪಿಸಿಕೊಳ್ಳಿ.  
 

Comments