ನಾಟಿ "ಇಲಾಜು" - ಒಂದು ಪ್ರಬಂಧ

ನಾಟಿ "ಇಲಾಜು" - ಒಂದು ಪ್ರಬಂಧ


 



ನಾನು ಹೈಸ್ಕೂಲಿನಲ್ಲಿದ್ದಾಗ ಮಣಿಗಂಟಿನ ಉಳುಕು ನೋವಾಗಿತ್ತು. ಫುಟ್ ಬಾಲ್ ಆಡುವಾಗಲೋ, ಕ್ರಿಕೆಟ್ ಆಡುವಾಗಲೋ ಜಾರಿದಾಗ, ಕಾಲಿನ ಪಾದ ಮರಡಿಹೋಗಿ ಮೂಳೆಗೂ ಸ್ವಲ್ಪ ನೋವು. ಸಣ್ಣಗೆ ಬಾತು ಬಂದಿತ್ತು. ರಾತ್ರಿ ಊಟಕ್ಕೆ ನೆಲದಲ್ಲಿ ಕೂತರೆ, ಏಳಲು ಆಗುತ್ತಿರಲಿಲ್ಲ! ಮರುದಿನ ಶಾಲೆಗೆ ರಜಾ ಹಾಕಬೇಕಾಯಿತು. ಕೆ.ಟಿ.ಬಿ. ನೋವಿನ ಎಣ್ಣೆಯನ್ನು ಮಣಿಗಂಟಿಗೆ ಹಚ್ಚಿಕೊಂಡು, ಬಿಸಿನೀರಿನ ಶಾಖವನ್ನು ಕೊಟ್ಟದ್ದಾಯಿತು. ಉಪ್ಪನ್ನು ಬಿಸಿ ಮಾಡಿ, ಆ ಭಾಗಕ್ಕೆ ಸುತ್ತಲೂ ಕಟ್ಟಿದ್ದಾಯ್ತು. ನೋವು ಇದ್ದೇ ಇತ್ತು. ನಮ್ಮ ಹಳ್ಳಿ ಮನೆಯ ಹತ್ತಿರದಲ್ಲೆಲ್ಲೂ ಆಸ್ಪತ್ರೆಗಳಿರಲಿಲ್ಲ.


ಎರಡನೆಯ ದಿನ, ಕಾಲು ನೋವನ್ನು ವಾಸಿ ಮಾಡಲೆಂದು ಬಂದವಳು ರಾಧಾಬಾಯಿ. ನಮ್ಮ ಮನೆಯಿಂದ ಒಂದೆರಡು ಫರ್ಲಾಂಗು ದೂರವಿದ್ದ ಗಾಣದಡಿಯ ರಾಧಾಬಾಯಿ ಮಾತನಾಡುತ್ತಲೇ ನಮ್ಮ ಮನೆಯತ್ತ ಬಂದಳು. ಉಳುಕು ನೋವನ್ನು ತಿಕ್ಕಿ ತೀಡಿ ವಾಸಿ ಮಾಡುವಲ್ಲಿ ಅವಳು ಪರಿಣಿತಳು. ಒಂದು ಪುಟ್ಟ ತಟ್ಟೆಯಲ್ಲಿ ತೆಂಗಿನ ಎಣ್ಣೆಯನ್ನು ಕೇಳಿ ತೆಗೆದುಕೊಂಡಳು. "ನೋವಿನ ಎಣ್ಣೆ ಈಗ ಹಚ್ಚುದು ಬೇಡ. ಅದನ್ನು ಬೇಕಾದರೆ, ನೀವು ಆ ಮೇಲೆ ಹಚ್ಚಿ. ಈಗ ಈ ತೆಂಗಿನ ಎಣ್ಣೆ ಸಾಕು. ಎಲ್ಲಿ, ಅಯ್ಯಾ, ನಿಮ್ಮ ಕಾಲ ಈ ಬದಿಗೆ ಚಾಚಿ ಕಾಂಬ" ಎಂದು, ತನ್ನದೇ ರಾಗವಾದ ಮಾತಿನ ಧಾಟಿಯಲ್ಲಿ, ನನ್ನ ಪಾದವನ್ನು ಮೃದುವಾಗಿ ತನ್ನ ಹತ್ತಿರಕ್ಕೆ ಎಳೆದುಕೊಂಡು, ಸೂಕ್ತವಾದ ಆನಿಕೆಯಲ್ಲಿ ಇಟ್ಟುಕೊಂಡಳು. ಅವಳು ಮಾತನಾಡುವುದನ್ನು ಕೇಳುವುದೇ ಚಂದ - ಅವಳ ಮಾತೃ ಭಾಷೆ ಕನ್ನಡವಾಗಿರಲಿಲ್ಲ. ಮನೆಯಲ್ಲಿ ಕುಡುಬಿ ಭಾಷೆಯನ್ನಾಡುವ ರಾಧಾಬಾಯಿ, ತಡೆ ತಡೆದು ಕನ್ನಡವನ್ನು ಆಡುತ್ತಲೇ ನನ್ನ ಕಾಲನ್ನು ತಿಕ್ಕತೊಡಗಿದಳು. ಎಣ್ಣೆಯನ್ನು ಸ್ವಲ್ಪ ಸ್ವಲ್ಪವಾಗಿ, ಮಣಿಗಂಟಿನ ಮೇಲೆ ಬಿಟ್ಟುಕೊಂಡಳು. ಉಳುಕಿನಿಂದಾಗಿ ಇಡೀ ಪಾದ ಮತ್ತು ಮಣಿಗಂಟಿನ ಭಾಗ ಸ್ವಲ್ಪ ಊದಿಕೊಂಡಿತ್ತು. ನಿಧಾನವಾಗಿ, ಎಣ್ಣೆಯನ್ನು ಪಾದ ಮತ್ತು ಮಣಿಗಂಟಿಗೆ ಹಚ್ಚತೊಡಗಿದಳು.


ರಾಧಾಬಾಯಿ ಮೂಳೆ ನೋವನ್ನು ಸರಿಪಡಿಸುವುದರಲ್ಲಿ ಎತ್ತಿದ ಕೈ ಎಂದು ನಮ್ಮ ಬೈಲಿಗೆಲ್ಲಾ ಗೊತ್ತಿತ್ತು. ಯಾರಿಗೇ ಉಳುಕಿನ ಅಥವಾ ಮೂಳೆಯ ನೋವಾದರೂ, ರಾಧಾಬಾಯಿ ತಿಕ್ಕಿದರೆ ಗುಣವಾಗುತ್ತದೆ ಎಂದು ಅವಳ ಚಿಕಿತ್ಸೆಯನ್ನೇ ಪಡೆಯುತ್ತಿದ್ದರು. ಅವಳು ಅಷ್ಟು ಪ್ರಖ್ಯಾತವಾದದ್ದನ್ನು ಕೇಳಿ, ನನ್ನ ಊಹೆ ಎಂದರೆ, ಅವಳು ಕಾಲನ್ನು ಒತ್ತಿ ಒತ್ತಿ ಗಸ ಗಸ ತಿಕ್ಕುತ್ತಾಳೆ ಎಂದುಕೊಂಡಿದ್ದೆ. ನೋವಾದ ಕಾಲು ತನ್ನದೇ ಎಂಬಷ್ಟು ಜತನದಿಂದ, ನಿಧಾನವಾಗಿ ಕಾಲನ್ನು ನೀವಿ ನೀವಿ ತಿಕ್ಕಿದಳು. ಪುಟ್ಟ ತಟ್ಟೆಯಲ್ಲಿದ್ದ ಎಣ್ಣೆ ಪೂರ್ತಿ ಖಾಲಿಯಾಗುವ ತನಕ ತಿಕ್ಕಿದಳು. ಸುಮಾರು ಅರ್ಧ ಗಂಟೆಯ ಕಾಲ ಕಾಲನ್ನು ತಿಕ್ಕಿ, "ಪುನಾ ನಾಳೆ ಬತ್ತೆ" ಎಂದು ಹೋದಳು. ಮರುದಿನವೂ ಎಣ್ಣೆ ಹಚ್ಚಿ ತಿಕ್ಕಿದಳು. ಉಳುಕಿನ ನೋವು ಕ್ರಮೇಣ ವಾಸಿ ಆಯ್ತು. ಅವಳ ಚಿಕಿತ್ಸೆಗೆ ಪ್ರತಿಫಲವಾಗಿ ನಾವು ಅವಳಿಗೆ ನೀಡಿದ್ದೆಂದರೆ, ತಿನ್ನಲು ಎಲೆ, ಅಡಕೆ ಮತ್ತು ಒಂದು ತೆಂಗಿನ ಕಾಯಿ ಮಾತ್ರ ಎಂದು ನೆನಪು.


ಕಾಲಿನ ಪಾದ, ಮಣಿ ಗಂಟು, ಕೈ ಮಣಿಗಂಟು ಇವುಗಳಲ್ಲಿ ನೋವು ಬಂದರೆ, ಆ ನೋವನ್ನು ದೂರ ಮಾಡಲು ನಾನಾ ರೀತಿಯ ನಾಟಿ "ಇಲಾಜು" ಪದ್ದತಿಗಳು ನಮ್ಮ ಹಳ್ಳಿಯಲ್ಲಿ ಪ್ರಚಲಿತದಲ್ಲಿದ್ದವು. ಅವುಗಳಲ್ಲಿ ಮುಷ್ಠ ಎಂಬ ಪದ್ದತಿಯೂ ಒಂದು. ಈ ಮುಷ್ಠ ಎಂಬುದು ಬಹಳ ವಿಚಿತ್ರ. ಒಂದೊಂದು ಸನ್ನಿವೇಶಕ್ಕೆ ಒಂದೊಂದು ರೀತಿಯ ಮುಷ್ಠ ಇತ್ತು. ಕಾಲು ನೋವಾದರೆ, ನೋವಾದ ಕಾಲಿನ ಪಾದದ ಹತ್ತಿರ, ಗೆಜ್ಜೆ ಕಟ್ಟಿಕೊಳ್ಳುವ ರೀತಿ, ಒಂದು ಒಣ ಹುಲ್ಲಿನ ಎಸಳನ್ನು ಕಟ್ಟಿಕೊಳ್ಳಬೇಕು. ಮತ್ತು ಕುಂಟುತ್ತಲೇ, ಆಚೀಚೆ ಮನೆಗಳಿಗೆ ಓಡಾಡಿ, ಎಲ್ಲರ ಗಮನ ಸೆಳೆಯಬೇಕು. ಯಾರಾದರೂ ಕುತೂಹಲದಿಂದ, " ಆ ಕಾಲಿಗೆ ಹುಲ್ಲಿನ ಎಸಳನ್ನು ಯಾಕೆ ಕಟ್ಟಿಕೊಂಡಿದೀಯಾ?" ಎಂದು ಕೇಳಿದ ತಕ್ಷಣ, ಆ ಒಣ ಹುಲ್ಲನ್ನು ಕಿತ್ತು ಬಿಸುಟು, "ಎಂತಕಿಲ್ಲ, ಸುಮ್ಮನೆ" ಎಂದು ಹೇಳಬೇಕು. ಆಗ, ಕಾಲಿನ ನೋವು ವಾಸಿಯಾಗುತ್ತದಷ್ಟೇ ಅಲ್ಲ, ಕುತೂಹಲದಿಂದ ಕೇಳಿದ ಭೂಪರ ಕಾಲಿಗೆ ಆ ನೋವು ವರ್ಗಾವಣೆಯಗುತ್ತದಂತೆ! ಹೇಗಿದೆ ಮುಷ್ಠದ ಹಿಕ್ಮತ್ತು!!


ಕಾಲು ನೋವನ್ನು ವಾಸಿ ಮಾಡುವ ಪರಿಣಿತೆ, ಗಾಣದಡಿ ರಾಧಾಬಾಯಿಯ ಮಗ ದ್ಯಾವಣ್ಣ ಎಂಬಾತ ಮತ್ತೊಂದು ಇಲಾಜಿಗೆ ಹೆಸರುವಾಸಿ. ನಮ್ಮ ಬೈಲಿನಲ್ಲಿ ಯಾರಿಗೆ ಹಲ್ಲು ನೋವು ಬಂದರೂ, ಮೊದಲು ನೆನಪಾಗುವುದು ದ್ಯಾವಣ್ಣನದು. ಅವನ ಔಷಧಿಯು, ಕೇವಲ ಹಲ್ಲುನೋವನ್ನು ವಾಸಿ ಮಾಡುವುದು ಮಾತ್ರವಲ್ಲ, ಹುಳ ತಿಂದ ಹುಳುಕು ಹಲ್ಲುಗಳಿಂದ, ಬಿಳಿ ಹುಳಗಳನ್ನು ತೆಗೆಯಬಲ್ಲದು! ಸಧ್ಯ, ನನಗೆ ಆಗ ಹಲ್ಲು ನೋವು ಇರಲಿಲ್ಲ. ನನ್ನ ತಂಗಿ ಇಂದಿರಾಳ ಹಲ್ಲು ಹುಳುಕಾಗಿ, ಅವಳಿಗೆ ಆಗಾಗ ಹಲ್ಲುನೋವು ಬರುತ್ತಿತ್ತು. "ಅದಕ್ಕೇನು ಮಹಾ, ಗಾಣದಡಿ ದ್ಯಾವಣ್ಣನ ಹತ್ತಿರ ಔಷಧಿ ಹಾಕಿಸಿಕೊಂಡರೆ, ಹಲ್ಲಿನ ಹುಳ ತೆಗೆದು, ಹಲ್ಲು ನೋವನ್ನು ಗುಣ ಮಾಡ್ತಾನೆ" ಎಂದು, ಅಮ್ಮಮ್ಮ ಚಿಕಿತ್ಸೆಯ ದಾರಿ ತೋರಿದರು. ಹಲ್ಲಿನ ಹುಳ ತೆಗೆಸಿಕೊಳ್ಳಬೇಕಾದರೆ, ಹಿಂದಿನ ದಿನವೇ ದ್ಯಾವಣ್ಣನಿಗೆ ವಿಚಾರ ತಿಳಿಸಿರಬೇಕು. ಏಕೆಂದರೆ, ಅವನು ಯಾವುದೋ ಎಲೆಯನ್ನು ಜಜ್ಜಿ, ಸಗಣಿಯಲ್ಲಿಟ್ಟು ಔಷಧವನ್ನು ತಯಾರಿಸಿಕೊಳ್ಳಬೇಕಲ್ಲವೆ! ನಂತರ, ಮರುದಿನ ಬೆಳಿಗ್ಗೆ ಬೇಗನೆ ಗಾಣದಡಿಗೆ ಹೋಗಬೇಕು.


ಚುಮು ಚುಮು ನಸುಕಿನಲ್ಲೇ ಗಾಣದಡಿಗೆ ಹೋದಾಗ, ಹಲ್ಲು ನೋವು ಬಂದ ಕಡೆಯ ಕಿವಿಯ ಅಡಿ ಸಗಣಿಯ ಒಂದು ಉಂಟೆಯನ್ನು ದ್ಯಾವಣ್ಣ ಇಡುತ್ತಾನೆ. ಆ ಸಗಣಿಯ ಉಂಡೆಯಲ್ಲಿ ಅವನೇ ಹಿಂದಿನ ರಾತ್ರಿ ತಯಾರಿಸಿದ ಔಷಧಿ ಇರುತ್ತದೆ. ಮಗ್ಗುಲಾಗಿಸಿ, ಇನ್ನೊಂದು ಕಿವಿಗೆ ಅದ್ಯಾವುದೋ ಸೊಪ್ಪಿನ ರಸವನ್ನು ಒಂದೆರಡು ಹನಿ ಬಿಡುತ್ತಾನೆ. ಹಾಗೆಯೇ ಸ್ವಲ್ಪ ಹೊತ್ತು ಮಲಗಿದ್ದು, ನಂತರ ಏಳಲು ಹೇಳುತ್ತಾನೆ. ಕೆಳಭಾಗದ ಕಿವಿಯ ಅಡಿ ಇಟ್ಟಿದ್ದ ಹಸಿರು ಬಣ್ಣದ ಔಷಧದ ಉಂಡೆಯನ್ನು ಬಿಡಿಸಿ ನೋಡಿದರೆ, ಒಂದೆರಡು ಪುಟ್ಟ ಬಿಳೀ ಹುಳುಗಳು ಹರಿದಾಡುವುದನ್ನು ಕಾಣಬಹುದು! ಹಲ್ಲನ್ನು ತಿಂದು ಹುಳುಕುಹಲ್ಲು ಮಾಡುವ ಹುಳಗಳನ್ನು ಕಿವಿಯ ಮೂಲಕ ತೆಗೆಯುವ ಚಿಕಿತ್ಸಾ ಕ್ರಮ ಇದು! ಹಲ್ಲು ನೋವು ಬಂದಾಗಲೆಲ್ಲಾ, ಈ ರೀತಿ ನಾಲ್ಕಾರು ಬಾರಿ ಔಷಧ ಹಾಕಿಸಿಕೊಂಡು ಹುಳ ತೆಗೆಸಿಕೊಂಡರೂ, ಮತ್ತೆ ಮತ್ತೆ ಹಲ್ಲು ನೋವು ಬಂದಿದ್ದರಿಂದ, ದೂರದ ತಾಲೂಕು ಕೇಂದ್ರಕ್ಕೆ ಹೋಗಿ, ಹಲ್ಲಿಗೆ "ಸಿಮೆಂಟ್" ಹಾಕಿಸಿಕೊಂಡು ಬಂದ ನಂತರವಷ್ಟೇ, ನನ್ನ ತಂಗಿ ಇಂದಿರಾಳ ಹಲ್ಲುನೋವು ನಿಯಂತ್ರಣಕ್ಕೆ ಬಂತು.ಹೊಟ್ಟೆನೋವು! ಹೊಟ್ಟೆ ನೋವು!!" ಎಂದು ಮಕ್ಕಳು ನರಳಿದರೆ ಅಥವಾ ದೊಡ್ಡವರು ಹೊಟ್ಟೆ ತಿಕ್ಕುತ್ತಾ ನೋವು ಅನುಭವಿಸಿದರೆ, ನಾನಾ ರೀತಿಯ "ಇಲಾಜು"ಗಳು ನಮ್ಮ ಹಳ್ಳಿಯಲ್ಲಿ ಚಾಲ್ತಿಯಲ್ಲಿದ್ದವು. ಹೊಕ್ಕಳಿಗೆ ತುಪ್ಪ ಹಚ್ಚುವುದು, ಬೆಳ್ಳುಳ್ಳಿ ಹಾಕಿದ ಮಜ್ಜಿಗೆ ಕುಡಿಯುವುದು ಇತ್ಯಾದಿ. "ಆದ್ರೆ, ಕೊದಿ ಆಗಿ ಹೊಟ್ಟೆನೋವು ಬಂದ್ರೆ, ಇವೆಲ್ಲಾ ಸಾಕಾಗುವುದಿಲ್ಲ . . . . . . " ಎನ್ನುತ್ತಾ ಮತ್ತೊಂದು ವಿಚಿತ್ರವೆನಿಸುವ ಚಿಕಿತ್ಸೆ ಮುಂಚೂಣಿಗೆ ಬರುತ್ತಿತ್ತು. ಇಲ್ಲಿ, "ಕೊದಿ" ಎಂದರೆ, ಊಟ ಮಾಡುವಾಗ ಮನೆಯವರಲ್ಲದವರು ನೋಡಿ, ದೃಷ್ಟಿ ಹಾಕಿದರು ಎಂದರ್ಥ.


ಹೊಟ್ಟೆನೋವು ಇರುವವರು ಚಕ್ಕಳ ಮಕ್ಕಳ ಹಾಕಿ ಕೂರಬೇಕು. ಅವರ ಎದುರಿಗೆ ಅಥವಾ ಅವರ ಹೊಟ್ಟೆಯ ಎದುರಿಗೆ ಒಂದು ದೊಡ್ಡ ಬೋಗುಣಿ. ಅದರಲ್ಲಿ ಒಂದೆರಡು ಇಂಚು ನೀರು ಹಾಕುತ್ತಾರೆ. ಒಂದೆರಡು ಎಸಳು ಒಣಗಿದ ತೆಂಗಿನ ಗರಿಗೆ ಬೆಂಕಿ ಹಚ್ಚಿ, ಒಂದು ತಲೆಕೆಳಗಾದ ಚೊಂಬಿನಲ್ಲಿ ಅದನ್ನು ಇರಿಸಿ, ತೆಂಗಿನ ಗರಿಯು ಜೋರಾಗಿ ಉರಿಯುತ್ತಿರುವಾಗಲೇ, ಖಾಲಿ ಚೊಂಬನ್ನು ದೊಡ್ಡ ಬೋಗುಣಿಯಲ್ಲಿ ಬೋರಲಾಗಿಡುತ್ತಾರೆ. ಒಂದೆರಡು ಕ್ಷಣಗಳಲ್ಲಿ, " ಸರ್, ಚೊಂಯ್, ಸರ್, ಸೊರ್" ಎಂದು ಸದ್ದು ಮಾಡುತ್ತಾ, ಬೋಗುಣಿಯಲ್ಲಿರುವ ನೀರು ಸ್ವಲ್ಪ ಸ್ವಲ್ಪವಾಗಿ ಚೊಂಬಿನೊಳಗೆ ಸೇರಿಕೊಳ್ಳುತ್ತದೆ. ಜಾಸ್ತಿ ನೀರು ಚೊಂಬಿನೊಳಗೆ ಹೋದಷ್ಟೂ, ಜಾಸ್ತಿ "ಕೊದಿ" ಆಗಿದೆ ಎಂಬ ಭಾವನೆ. " ಕಾಣಿ, ಹ್ಯಾಂಗೆ ಶಬ್ದ ಆತಾ ನೀರು ಒಳಗೆ ಹೋತಿತ್. ಜಾಸ್ತಿ ಕೊದಿ ಆಯ್ತಾ ಕಾಣತ್. ನೀರು ಸೊರ್ ಅಂತ ಶಬ್ದ ಮಾಡ್ತಾ ಚೊಂಬಿನ ಒಳಗೆ ಹೋಯ್ತ್. ಈಗ ದೃಷ್ಟಿ ಎಲ್ಲಾ ತೆಗೆದ ಹಾಂಗೆ" ಎನ್ನುತ್ತಾ ಕೊದಿ ತೆಗೆಯುವ "ಶಾಸ್ತ್ರ"ಕ್ಕೆ ಮಂಗಳ ಹಾಡುತ್ತಿದ್ದರು. ಹೊಟ್ಟೆ ನೋವಿದ್ದವರು, ಚಿಕಿತ್ಸೆ ಪಡೆದ ಸಮಾಧಾನದಿಂದ, ಹೊಟ್ಟೆ ನೀವುತ್ತಾ ಎದ್ದು ಹೋಗುತ್ತಿದ್ದರು. ಚಿತ್ರ ಕೃಪೆ: ಶಾಪ್ ಇಂಡಿಯಾಆನ್ ಡಿಮಾಂಡ್.ಕಾಂ



 



 


"


 


 


 


 


 

Comments