ಸಾಹಿತಿ ಸಹವಾಸ..

ಸಾಹಿತಿ ಸಹವಾಸ..

"ನಮಸ್ಕಾರ ರೀ.. ಮಾರ್ಕೆಟ್‌ಗೆ ಹೊರಟಿರಾ?"


ತಿರುಗಿ ನೋಡಿ- "ನಮಸ್ತೆ, ನಮಸ್ತೆ. ತಮ್ಮ ಪರಿಚಯವಾಗಲಿಲ್ಲ.."ಅಂದೆ.


"ಹೋ.. ನೀವು ಈ ಬೀದಿಗೆ ಹೊಸದಾಗಿ ಬಂದವರಲ್ವಾ? ಪತ್ರಿಕೆ ಓದುವವರಾಗಿದ್ದರೆ ನನ್ನ ಪರಿಚಯವಿರುತ್ತಿತ್ತು. ನಾನು ಪ್ರೇಮಕವಿ ತಮ್ಮಣ್ಣ. ಅಲ್ಲೊಂದು, ಅದೇ..ದೊಡ್ಡ ಬಂಗ್ಲೆ ಕಾಣಿಸುತ್ತಾ..ಅದರ ಪಕ್ಕದ ಶೀಟ್ ಮನೇನೆ ನನ್ನದು. ಬಾಗಿಲಲ್ಲೇ ದೊಡ್ಡ ಬೋರ್ಡ್ ಇದೆ. "ಪ್ರೇಮಕವಿ ತಮ್ಮಣ್ಣ, ಸಾಹಿತಿ". ಈ ಬೀದಿ ಜನ ಶಾರ್ಟ್ ಅಂಡ್ ಸ್ವೀಟಾಗಿ ಪ್ರೇತ ಸಾಹಿತಿ ಅಂತಾರೆ. ಹ್ಹ ಹ್ಹ ಹ್ಹ.."


ಒಳ್ಳೆ ಬಕರಾ ಸಿಕ್ಕಿದ. ಹೇಗೂ ಕ್ರಿಸ್‌ಮಸ್ ರಜೆಗೆಂದು ನನ್ನ ಮನೆಯಾಕೆ ಮಕ್ಕಳೊಂದಿಗೆ ಊರಿಗೆ ಹೋಗಿದ್ದಾಳೆ. ಪತ್ರಿಕೆಗೆಗಾಗಿ ತಮ್ಮ ಸಂದರ್ಶನ ಕೊಡಿ ಎಂದು ಇವರ ಮನೆಗೆ ಹೋದರೆ ಒಂದು ಹೊತ್ತಿನ ಕಾಫಿ, ತಿಂಡಿ, (ಸಂದರ್ಶನ ಜಾಸ್ತಿ ಹೊತ್ತಾದರೆ) ರಾತ್ರಿಯ ಊಟಾನೂ ಅಲ್ಲೇ ಮುಗಿಸಿ ಬಿಡಬಹುದಲ್ವಾ! ತಡಯಾಕೆ, ಕೇಳಿಯೇಬಿಟ್ಟೆ ..


"ಬಹಳ ಸಂತೋಷ, ಆದರೆ ನನ್ನದೆರಡು ಕಂಡೀಶನ್. ಸಂದರ್ಶನ ರಾತ್ರಿ ೧೨ ಗಂಟೆಗೆ! ನನಗೆ ಸನ್ಮಾನಿಸಲೆಂದು ಹೂ ಹಣ್ಣು ತರಬೇಡಿ. ಒಂದು ಕೆ.ಜಿ. ಈರುಳ್ಳಿ, ಒಂದು ಬಾಟ್ಲ್......, ಎರಡು ಕಟ್ಟು ...ಬೀಡಿ ತಂದರೆ ಸಾಕು." ಅಂದರು!


ಅಲ್ಲಿಗೆ ನನ್ನ ಕಾಫಿ, ತಿಂಡಿ, ಊಟದ ಪ್ಲಾನ್ ಎಲ್ಲಾ ಗೋತಾ... ಕುಡಿತದ ಕಟ್ಟಾ ವಿರೋಧಿ... ನಾನಲ್ಲ, ನನ್ನ ಪತ್ನಿ. ಬಾಟ್ಲ್ ಹೇಗೆ ಪರ್ಚೇಸ್ ಮಾಡಲಿ? ಬೆಂಗಳೂರ ಚಳಿ ನನಗೆ ಸಹಾಯ ಮಾಡಿತು. ಜರ್ಕಿನ್, ಮಫ್ಲರ್, ಮಂಕೀಕ್ಯಾಪ್, ಕೂಲಿಂಗ್ ಗ್ಲಾಸ್ ಎಲ್ಲಾ ಹಾಕಿಕೊಂಡು, ವೈನ್ ಸ್ಟೋರ್ ಬಳಿ ಬಂದು, ಎಲ್ಲೋ ನೋಡುತ್ತಾ, ಬ್ರಾಂಡ್ ಹೆಸರು ಹೇಳಿದೆ. ಅವನು ರೇಟು ಹೇಳಿದಾಗ ಬಾಟ್ಲು ಮುಟ್ಟದೇ ತಲೆ ಸುತ್ತಲು ಶುರುವಾಯಿತು." ಮನೆಯವರು ಊರಿಗೆ ಹೋದಲೆಕ್ಕದಲ್ಲಿ ಪಾರ್ಟಿ ಜೋರಾ.." ಪಕ್ಕದ ಮನೆ (ಶನಿ)ನಾರಾಯಣನ ಸ್ವರ. ಗೋ..ವಿಂದ..,


ನನ್ನಾಕೆಯ ಕ್ರಿಸ್‌ಮಸ್ ರಜೆ ಸಂಕ್ರಾಂತಿವರೆಗೆ ಎಕ್ಸ್‌ಟೆಂಡ್ ಆದ ಹಾಗೆ..


ಅಯ್ಯೋ..ಬೇಕಿತ್ತಾ ಈ ಪ್ರೇತ ಸಾಹಿತಿಯ ಸಹವಾಸ..


(ಸಂದರ್ಶನ ಮುಂದಿನ ಭಾಗದಲ್ಲಿ)


-ಗಣೇಶ.

Rating
No votes yet

Comments