ಸಂಕೋಚ ಬೇಡ, ನಿಮ್ಮ ಮನೆಯೆಂದೇ ತಿಳಕೊಳ್ಳಿ..

ಸಂಕೋಚ ಬೇಡ, ನಿಮ್ಮ ಮನೆಯೆಂದೇ ತಿಳಕೊಳ್ಳಿ..

ತೆರೆದಿದೆ ಮನೆ ಓ ಬಾ ಅತಿಥಿ, ಎಂದ ಮನೆ ಯಜಮಾನರುಗಳ ಪಜೀತಿ ಪ್ರಸಂಗಗಳು :


 ೧- ನನ್ನ ಮಿತ್ರನೊಬ್ಬನಿಗೆ ಸಂಗೀತಗಾರರು ಅಂದರೆ ಪ್ರಾಣ. ಆಸುಪಾಸಿನಲ್ಲಿ ಎಲ್ಲೇ ಸಂಗೀತ ಕಚೇರಿ ನಡೆಯಲಿ ಹಾಜರಾಗುತ್ತಿದ್ದನು. ಅಷ್ಟೇ ಅಲ್ಲ, ಕಚೇರಿ ಮುಗಿದ ಬಳಿಕ ಅವರನ್ನು ಭೇಟಿಯಾಗಿ ಅವರನ್ನು ಮನೆಗೆ ಅಹ್ವಾನಿಸುತ್ತಿದ್ದನು. ಹಳ್ಳಿಯಲ್ಲಿ ತೋಟದ ನಡುವೆ ಮನೆ. ಸಂಗೀತಕ್ಕಾಗಿಯೇ (ವಾದ್ಯಗಳನ್ನೆಲ್ಲಾ ಜೋಡಿಸಿ) ಒಂದು ರೂಮು ಮೀಸಲಿಟ್ಟಿದ್ದನು. ‘ಸದ್ಯಕ್ಕೆ ೧೫ ದಿನ ಎಲ್ಲೂ ಕಚೇರಿ ಇಲ್ಲ. ಹಾಗೇ ನಿಮ್ಮಲ್ಲಿರುವ ಎಂದು ಬಂದೆ’, ಎಂದೊಬ್ಬರು ವಾದ್ಯ ನುಡಿಸುವರು, ಇವನು ಅಹ್ವಾನಿಸಿದ ಮಾರನೇ ದಿನವೇ ಹಾಜರಾದರು. ಇವನಿಗೂ ಬಹಳ ಸಂತೋಷವಾಯಿತು. ೧೫ ದಿನ ಅವರ ವಾದ್ಯಸಂಗೀತ ಕೇಳಿ, ಸಾಧ್ಯವಾದರೆ ಸ್ವಲ್ಪ ಕಲಿತು ಧನ್ಯನಾಗುವೆ ಎಂದು ಆಲೋಚಿಸಿದ್ದ. ಆದರೆ.. ಸಂಗೀತ ರೂಮನ್ನು ಅವರು ಇಣುಕಿಯೂ ನೋಡಲಿಲ್ಲ. ಹಗಲೂ-ರಾತ್ರಿಯೂ ಅಮಲಲ್ಲಿ (ಸಂಗೀತದ ಅಲ್ಲ) ತೇಲಿದರು. ಅವರಿಗೆ ಬೇಕಾದ ಬ್ರ್ಯಾಂಡ್‌ನ ಬಾಟಲು ಈತ ಪೇಟೆಗೆ ಹೋಗಿ ತರಬೇಕಿತ್ತು. (ಈಗ ಬಿಡಿ. ಬಾರ್‌ಗೆ ಹೋಗುವುದು ಪ್ರೆಸ್ಟೀಜ್. ಹಿಂದೆ ಹಾಗಿರಲಿಲ್ಲ) ಸಿಗರೇಟು ಎಷ್ಟು ಎಳೆಯುತ್ತಿದ್ದರೆಂದರೆ, ಅವರು ಹೋಗಿ ಒಂದು ವಾರವಾದರೂ ಮನೆಯಲ್ಲಿ ಸಿಗರೇಟು ವಾಸನೆ ಹೋಗಲಿಲ್ಲ..


೨- ಸ್ವಾಮೀಜಿಯೊಬ್ಬರ ಭಕ್ತರಿಗೆ, ತಮ್ಮ ಊರಿಗೆ ಸ್ವಾಮೀಜಿಯವರು ದಯಮಾಡಿಸುತ್ತಾರೆ ಎಂದು ತಿಳಿದಾಗ ಕಾಲು ನೆಲದಲ್ಲಿರಿರಲಿಲ್ಲ. ಸ್ವಾಮೀಜಿ ಹಾಗು ಅವರ ಶಿಷ್ಯರ ವಾಸ್ತವ್ಯದ ಪೂರ್ತಿ ಜವಾಬ್ದಾರಿ ತಾವೇ ತೆಗೆದುಕೊಂಡರು. ಅವನು ಹೇಳಿದ ಪ್ರಕಾರ-ಸ್ವಾಮೀಜಿಯವರು ಬಹಳ ಸಿಂಪ್‌ಲ್, ಒಳ್ಳೆಯವರು. ಅವರ ಶಿಷ್ಯರು ಒಂದುವಾರದಲ್ಲಿ ಆತನನ್ನು ಆಸ್ತಿಕನಿಂದ ಮಹಾನ್ ನಾಸ್ತಿಕನನ್ನಾಗಿ ಮಾಡಿದರು.


೩- ಹೊಸದಾಗಿ ಅಧಿಕಾರಿಯೊಬ್ಬರು ಆ ಊರಿಗೆ ವರ್ಗವಾಗಿ ಬಂದರು. ಅಧಿಕಾರಿಗಳೆಂದರೆ ದೇವರೇ ಎಂದು ತಿಳಿದ ಹಳ್ಳಿಗನೊಬ್ಬ, ಹೊಸ ಮನೆ ಸಿಗುವವರೆಗೆ ತನ್ನ ಮನೆಯಲ್ಲಿ ಇರಲು ಕೇಳಿಕೊಂಡನು. ‘ಸಂಕೋಚ ಬೇಡ. ತಮ್ಮ ಮನೆಯೆಂದೇ ತಿಳಕೊಳ್ಳಿ’ ಎಂದನು. ಹಳ್ಳಿಯಲ್ಲಿ ಹಂಡೆ(೬-೮ ಬಕೆಟ್ ನೀರು ಹಿಡಿಯುವ ಪಾತ್ರೆ)ಯಲ್ಲಿ ಬೆಳಗ್ಗೆಯೇ ನೀರು ಕಾಯಿಸಿಡುವ ಪದ್ಧತಿ. ಇಡೀ ದಿನ ಟೈಮ್ ಸಿಕ್ಕ ಹಾಗೇ ಒಬ್ಬೊಬ್ಬರೇ ಸ್ನಾನ ಮಾಡಿಕೊಂಡು ಬರುವರು. ಈ ಪುಣ್ಯಾತ್ಮ ಬೆಳಗ್ಗೆನೇ ಬಚ್ಚಲು ಮನೆ ಒಳಹೊಕ್ಕ.. ಅಲ್ಲೇ ಹೋಮ ಹವನ ನಡೆಯುತ್ತಿದೆಯೋ ಎಂಬಂತೆ ಮಂತ್ರೋಚ್ಚಾರಣೆ, ಜತೆಗೆ ಸ್ನಾನ, ಮಂತ್ರ, ಸ್ನಾನ.. ಇವರು ಹೊರಬರುವುದನ್ನು ಕಾದೂ ಕಾದೂ ಮಕ್ಕಳು ನಂತರ ಬಾವಿಕಟ್ಟೆಯಲ್ಲೇ ತಣ್ಣೀರು ಸ್ನಾನ ಮಾಡಿಕೊಂಡು ಸ್ಕೂಲ್‌ಗೆ ಹೋದರು. ಕೈಗೆಟುಕದ ಪಾತಾಳದಲ್ಲಿರುವ ನೀರು ಉಳಿಸಿ, ಸ್ನಾನ ಮುಗಿಸಿ, ನಾಸ್ಟಾನೂ ಖಾಲಿ ಮಾಡಿ ‘ಭಾಳಾ ಮಾಡಿದಿರಿ, ಭಾಳಾ ಸಂತೋಷ’ಎಂದ. ತಿಂಗಾಳಾನುಗಟ್ಟಲೆ ಕಳೆದರೂ ಹೊಸಮನೆ ಸುದ್ದಿಯೇ ಇಲ್ಲ.


-ಗಣೇಶ.

Rating
No votes yet

Comments