ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!
ನಾನು ಊರ್ಮಿಳೆ.
ಆದರೆ ನಾನೀಗ ಲಕ್ಷ್ಮಣನ ಹೆಂಡತಿಯಲ್ಲ:ಅವಳೊಳಗಿನ ಊರ್ಮಿಳೆ.ಹಾಗೆ ನೋಡಿದರೆ ಇದೆಲ್ಲವನ್ನೂ ನಿಮ್ಮೆದುರಿಗೆ
ಹೇಳಿಕೊಳ್ಳಬೇಕೆಂದೇನೂ ಇಲ್ಲ.ಅದು ನನ್ನಿಷ್ಟ.ಯಾಕೆಂದರೆ ಇನ್ನು ಮೇಲೆ ನಾನು ನನ್ನಿಷ್ಟದಂತೆ ನಡೆಯುತ್ತೇನೆ.
ಬದುಕುತ್ತೇನೆ.ಇಷ್ಟುದಿನ ನಿಮ್ಮೆಲ್ಲರ ಇಚ್ಚೆಯಂತೆ ನಡೆದ ನನಗೆ ಬಂದಿದ್ದಾದರೂ ಏನು?
ಎಷ್ಟೆಲ್ಲಾ ನಂಬಿ ಕಟ್ಟಿಕೊಂಡಿದ್ದ ಗಂಡ ಕುರಿಯಂತೆ ಅಣ್ಣನ ಹಿಂದೆ ಹೊರಟುಹೋದ.ಆ ರಾಮನಿಗಾದರೋ,ಜೊತೆಯಲ್ಲಿ
ಸೀತೆಯಿದ್ದಳು.ಇಲ್ಲಿ ಅಖಂಡ ಹದಿನಾಲ್ಕು ವರ್ಷ ನಾನೇನು ಮಾಡಬಹುದಿತ್ತು?ನಿಮಗೆ ಗೊತ್ತ,ಈ ಹದಿನಾಲ್ಕು ವರ್ಷಗಳೆಂದರೆ
ಸುಮ್ಮನೇ ಮಾತಲ್ಲ.ಅವು ಲಕ್ಷ್ಮಣನೊಂದಿಗೆ ಕಳೆದ ದಿನಗಳಂತಲ್ಲ;ಮಲಗಿದ ರಾತ್ರಿಗಳಂತಲ್ಲ.
ಮದುವೆಯ ದಿನ ಹಾರ ಹಾಕುವ ಸಡಗರದಲ್ಲಿ ಆತನ ಕಿವಿಗೆ ಹೆಬ್ಬೆರಳು ತಾಗಿದಾಗ ಉಂಟಾದ ರೋಮಾಂಚತನ
ಅಲ್ಲಿ ಇಲ್ಲವೇ ಇಲ್ಲ.ಅಂಥದೊಂದು ದೀರ್ಘ ವಿರಹವನ್ನು ಹೇಗೆ ವಿವರಿಸಲಿ?
ಕ್ಲುಪ್ತವಾಗಿ ಹೇಳುವದಾದರೆ,ಅದೊಂಥರಾ ಮಧ್ಯಾನ್ಹದ ದೀರ್ಘನಿದ್ದೆಯ ಬಳಿಕ ಉಳಿಯುವ ಮಬ್ಬಿನಂತೆ.
ಮಿಥುನದ ನಂತರ ಬಟ್ಟೆ ಹಾಕಿಕೊಳ್ಳಲಾಗದ ನಿಷ್ಕ್ರೀಯತೆಯಂತೆ!
ಇದೆಲ್ಲ ಆ 'ಕುರಿ' ಲಕ್ಷ್ಮಣನಿಗೆ ಹ್ಯಾಗೆ ಗೊತ್ತಾಗಬೇಕು? ಆವತ್ತು ತನ್ನ ಅಣ್ಣನೊಂದಿಗೆ ವನವಾಸಕ್ಕೆಂದು ಹೊರಟು ನಿಂತಾಗ,
ಈ ಲಕ್ಷ್ಮಣ ನನ್ನ ಕಣ್ಣಂಚಿನ ಆಹ್ವಾನವನ್ನು ನೋಡಲಿಲ್ಲ. ತುಟಿಗಳ ಕಂಪನವನ್ನೂ ಗಮನಿಸಲಿಲ್ಲ.ಕೊನೆಕೊನೆಗೆ ನನ್ನ ನೋಡದೆಯೇ
ಹೊರಟುಹೋದ.ಸೂಕ್ಷ್ಮಗ್ರಾಹಿಯಾದ ಆ ರಾಮನಿಗಾದರೂ ಬುದ್ಧಿ ಇರಬೇಡವೇ? ಆವತ್ತು ನನ್ನ ದೇವರೇ ನನ್ನಿಂದ ದೂರ ಹೋದಮೇಲೆ
ನಾನಿಲ್ಲಿ ಒಂಟಿಯಾಗಿ ಹೋದೆ.ದೂರದಲ್ಲೆಲ್ಲೋ ರಾಜ್ಯವಾಳುತ್ತಿದ್ದ ತಂದೆಯಿದ್ದರೂ ತಬ್ಬಲಿಯಾದೆ.ಅರಣ್ಯದಲ್ಲೆಲ್ಲೋ ಗೆಡ್ಡೆಯನ್ನರಸುತ್ತಿದ್ದ
ಗಂಡನಿದ್ದೂ ವಿಧವೆಯಾದೆ.ಪುಟಿಯುತ್ತಿದ್ದ ಯೌವನವಿದ್ದೂ ವೃದ್ಧೆಯಾಗಿಹೋದೆ.
ಥತ್! ಯಾರಿಗೆ ಬೇಕು ಈ ದರಿದ್ರ ಜೀವನ.
ಏನು ಮಾಡಬಹುದಿತ್ತು ನಾನು? ಇದಕ್ಕಾಗಿ ನಾನು ಯಾರನ್ನೂ ದೂಷಿಸಲಾರೆ.ಹಾಗೆ ನೋಡಿದರೆ ಇಲ್ಲಿ ಇರುವವರೆಲ್ಲರೂ ತಪ್ಪಿತಸ್ಥರೇ;
ಮದುವೆಯಾದವರೇ.ಬಯ್ಯುವದಾದರೆ ಯಾರನ್ನು ಬೈಯ್ಯಲಿ?
ಬಿಡಿ,ಈ ಮಧ್ಯೆ ಅದ್ಯಾವಳೋ ಒಬ್ಬಳು ಕಾಡಿನಲ್ಲಿದ್ದ ನನ್ನ ಗಂಡನ ಪ್ರೇಮವನ್ನರಿಸಿ ಬಂದಿದ್ದಳಂತೆ.ಈತ ಆಕೆಯ ಕಿವಿ,ಮೂಗುಗಳನ್ನು
ಕತ್ತರಿಸಿ ಕಳಿಸಿದನಂತೆ.ಶುದ್ಧಮೂರ್ಖ! ಆತನಿಗೇನು ಗೊತ್ತು ಹೆಂಗಸರ ಪ್ರೀತಿಯ ಬಗ್ಗೆ? ಹಾಗೆ ಒರಟಾಗಿ ಕತ್ತರಿಸಿದ ರಭಸಕ್ಕೆ ರಕ್ತ ಸುರಿಯುತ್ತಿದ್ದ
ಅಂಗಗಳನ್ನು ಹೊತ್ತ ಆಕೆ ನೋವಿನಿಂದ ವಿಕಾರವಾಗಿ ಚೀರುತ್ತ ಓಡುತ್ತಿದ್ದರೆ,ಆಕೆಯ ಹೃದಯ ಮೌನವಾಗಿ ರೋದಿಸುತ್ತಿತ್ತೆ?
ಅಥವಾ 'ನನ್ನ ಈ ಪರಿಸ್ಥಿತಿ ನಿನ್ನ ಹೆಂಡತಿಗೂ ಬರಲಿ' ಅಂತೇನಾದರೂ ಶಪಿಸುತ್ತ ಆಕೆ ಲಕ್ಷ್ಮನತ್ತ ಮಣ್ಣು ತೂರಿದಳೆ?
ಹೇ,ಭಗವಂತಾ..ಇದೇನಾಗಿ ಹೋಯಿತು?
ಛೇ,ಛೇ,ಹಾಗಾಗಿರಲಿಕ್ಕಿಲ್ಲ.ನನಗೆ ಗೊತ್ತು,ಅವಳು ಯಾರೇ ಆಗಿರಲಿ,ಆಕೆಯ ಪ್ರೀತಿಯನ್ನು ನಂಬುತ್ತೇನೆ.ಗೌರವಿಸುತ್ತೇನೆ.ಒಟ್ಟಿನಲ್ಲಿ ಅವಳು
ಚೆನ್ನಾಗಿದ್ದರೆ ಸಾಕು.ಅದೇನೇ ಇರಲಿ,ದೂರದಲ್ಲಿರುವ ನನ್ನ ಪತಿಯನ್ನು ನಾನು ಕೇಳುವದಿಷ್ಟೇ: ಆರ್ಯ,ನೀನಿರುವ ಕಾಡಿನಲ್ಲಿ ನಮ್ಮ ಮೊದಲ
ರಾತ್ರಿಯ ಸುಖದ ನರಳಾಟ ನಿನಗೆ ಕೇಳಿಸಲಿಲ್ಲವೇ?ನಿನ್ನನ್ನು ಯಾವಾಗಲೂ ಸೋಲಿಸುತ್ತಿದ್ದ ನನ್ನ ಮಾದಕತೆ ನಿನಗೆ ನೆನಪಾಗಲೇ ಇಲ್ಲವೇ?
ನಿನಗೇನು ಗೊತ್ತು,ನಾನಿಲ್ಲಿ ಪ್ರತಿಕ್ಷಣವೂ ನಿನ್ನ ವಾಸನೆಗಾಗಿ ಹಂಬಲಿಸುತ್ತಿದ್ದೆ.ಅರಮನೆಯ ರಾಜಭಟರ ಮಧ್ಯೆ ನಿನ್ನನ್ನರಸುತ್ತಿದ್ದೆ.
ಅಮಾವಾಸ್ಯೆಯ ಕಾರ್ಗತ್ತಲಿನಲ್ಲಿ ಹುಚ್ಚಳಂತೆ ನಿನ್ನ ಮೋಹಕ ನಗುವನ್ನು ಹುಡುಕುತ್ತಿದ್ದೆ.ಎಂಥ ತಮಾಷೆ ನೋಡು,ಕೊನೆಕೊನೆಗೆ ಇದ್ಯಾವುದೂ
ಬೇಡಾಂತ ರಾಜವೈಭೋಗದ ಮಧ್ಯೆ ನಿನ್ನನ್ನು ಮರೆಯಲೆತ್ನಿಸಿದೆ.ಆದರೆ ನನ್ನ ದುರಂತ:ಇದ್ಯಾವುದೂ ನನ್ನ ನಿರೀಕ್ಷೆಯನ್ನು ನಿಜಗೊಳಿಸಲಿಲ್ಲ.
ಕೊನೆಗೂ ನಿನ್ನ ಮರೆಯಲಾಗಲಿಲ್ಲ;ನೀನು ಬರಲಿಲ್ಲ.
ಆದರೆ ಇದೆಲ್ಲದರ ಮಧ್ಯೆ ನನಗಿಲ್ಲಿ ಸಂತೃಪ್ತಿ ಸಿಗತೊಡಗಿತು.ಅದು ನನ್ನ ಸ್ನಾನದ ಕೋಣೆ! ಸುತ್ತೆಲ್ಲ ಮಿಂಡರಿದ್ದರೂ ರಂಡೆಯಾಗದ ನಾನು
ಇದೇ ಸ್ನಾನದ ಕೋಣೆಯಲ್ಲಿ ನನ್ನೆಲ್ಲ ವಿರಹದ ಕಲೆಗಳನ್ನು ಉಜ್ಜತೊಡಗಿದೆ.ಕತ್ತಲಿನ ಬಚ್ಚಲಿನಲ್ಲಿ ಊರ್ಧ್ವಮುಖಿಯಾಗಿ ಮನಸಿನ ಭಾವನೆಗಳನ್ನು
ಹರಿಬಿಡತೊಡಗಿದೆ.ದೇಹದ ಕಾಮನೆಗಳನ್ನು ಅರ್ಥೈಸತೊಡಗಿದೆ.ಇದೇ ಕೋಣೆಯಲ್ಲಿ ನನ್ನೆಲ್ಲ ತಬ್ಬಲಿತನ,ವಿಧವೆ,ವೃದ್ಧಾಪ್ಯದ ವೇಷಗಳು
ಕಳಚತೊಡಗಿದವು.ಬಹುಶಃ ಇದಕ್ಕೆಂದೇ ದಿನದ ಬಹಳಷ್ಟು ಸಮಯವನ್ನು ಇಲ್ಲಿಯೇ ಕಳೆಯತೊಡಗಿದೆ.ಆದರೆ ನೀವು ಮಾತ್ರ ನನ್ನ ದೇಹದಲ್ಲಿರುವ
ಕೊಳೆಯ ಬಗ್ಗೆ ಮಾತನಾಡತೊಡಗಿದಿರಿ.ನಗತೊಡಗಿದಿರಿ.ತೀರ ಕೊನೆಕೊನೆಗೆ ನಿಮ್ಮ ವ್ಯಂಗ್ಯನೋಟ ಯಾವ ಮಟ್ಟಕ್ಕಿಳಿಯಿತೆಂದರೆ,
ತುಂಬ ಹೊತ್ತು ಸ್ನಾನ ಮಾಡುವವರ ಕುರಿತು 'ಊರ್ಮಿಳೆಯ ಸ್ನಾನ' ವೆಂಬ ರೂಪಕ ಕೂಡ ಸೃಷ್ಟಿಯಾಗಿ ಹೋಯಿತು.
ಆದರೇನು, ನನ್ನ ಬಚ್ಚಲಲ್ಲಿ ಬೆಳಕಾಗುತ್ತಿದೆ.
ನಾನಿಲ್ಲಿ ಸಂತೃಪ್ತೆ!
*****
ಪ್ರಿಯ ಗೆಳೆಯರೇ,
ನನಗೆ ಬುದ್ಧಿ ಬಂದಾಗಿನಿಂದಲೂ ಈ 'ಊರ್ಮಿಳೆ' ಯೆಂಬ ರಾಮಾಯಣದ ಮುಗ್ಧಜೀವಿಯ ಬಗ್ಗೆ ಅಪಾರ ಕುತೂಹಲ ಮೂಡಿದೆ.
ಆಕೆಯ ಭಯಂಕರ ಸಹನೆ,ನಿರೀಕ್ಷೆಗಳು ನನ್ನಲ್ಲಿ ಅನಂತ ಆಶ್ಚರ್ಯಗಳನ್ನು ಹುಟ್ಟುಹಾಕಿವೆ.ಅದ್ಯಾಕೋ ಏನೋ,ಆಕೆಯ ಗಂಡ
ಲಕ್ಷ್ಮಣನೆಂಬ ಆಸಾಮಿ ವನವಾಸಕ್ಕೆಂದು ಹೊರಟುನಿಂತಾಗ ಇವಳು ಮಾತ್ರ ಬಾಗಿಲ ಮರೆಯಲ್ಲಿ ನಿಂತುಕೊಂಡು
'ಹೋಗದಿರು ನಲ್ಲ ನನ್ನ ಬಿಟ್ಟು' ಎನ್ನುತ್ತಾ ಕೈ ಮುಂದೆ ಮಾಡಿರುವ ದೃಶ್ಯ ನನ್ನ ಮನದಿಂದ ಅಳಿಸಲಾಗುತ್ತಲೇ ಇಲ್ಲ!
ಎಂಥ ವಿಚಿತ್ರ ನೋಡಿ.ರಾಮಾಯಣ ಎಂದ ಕೂಡಲೇ ಬರೀ ರಾಮ,ಲಕ್ಷ್ಮಣ,ಸೀತೆ,ಹನುಮಂತ,ರಾವಣ ಇತ್ಯಾದಿಗಳ ಮುಖ
ನಮ್ಮ ಕಣ್ಣ ಮುಂದೆ ಬರುತ್ತದೆಯೇ ಹೊರತು,ನಮಗೆ ಈ ಊರ್ಮಿಳೆಯೆಂಬ ಹೆಂಗಸಿನ ರೂಪ ಗೊತ್ತೇ ಇಲ್ಲ.ಆಕೆಯ ಛಿದ್ರಗೊಂಡ
ಕನಸುಗಳು,ನಡುರಾತ್ರಿಯ ಕನವರಿಕೆಗಳು ನಮಗ್ಯಾರಿಗೂ ಗೋಚರಿಸಿಲ್ಲ.ಆಕೆಯ ದೀರ್ಘಕಾಲದ ನಿರೀಕ್ಷೆ,ಆಕೆಯ ಶಯ್ಯಾಗೃಹದ
ಒದ್ದೆಯಾದ ತಲೆದಿಂಬು-ಯಾವುದೂ ನಮ್ಮಲ್ಲಿ ಕೊಂಚವೂ ಕದಲಿಕೆಯನ್ನುಂಟು ಮಾಡಿಲ್ಲ!
ಇಷ್ಟಕ್ಕೂ ನಾವು ಆಕೆಯನ್ನು ಮರೆತಿದ್ದಾದರೂ ಎಲ್ಲಿ?
ಒಂದು ವಿಷಯ ನೆನಪಿಡಿ:ಅವಳೇನೂ ಸೀತೆಯಂತೆ ದೇವತೆಯಲ್ಲ.ಮಂಡೋದರಿಯಂತೆ ಪತೀವೃತೆಯಲ್ಲ.ಅವಳೊಬ್ಬ ತೀರ
ಆರ್ಡಿನರಿ ಗೃಹಿಣಿ! ಒಬ್ಬ ಸಾಮಾನ್ಯ ಗೃಹಿಣಿಗಿರಬೇಕಾದ ಸಹಜ ಕೋಪ,ತಾಪ,ಆಸೆ,ನಿರಾಸೆಗಳು ಅವಳಿಗೂ ಇದ್ದಿರಬಹುದು.
ಅವಳ ದಾಂಪತ್ಯ ಜೀವನದ ವಿಸ್ಮಯ,ಸೊಬಗು,ಸಡಗರಗಳೆಲ್ಲ ಅಲ್ಲಲ್ಲೇ ಕಮರುತ್ತಿದ್ದರೂ ಆಕೆ ಮಾತ್ರ ಯಾವತ್ತೂ ಅವುಗಳನ್ನು
ವ್ಯಕ್ತಪಡಿಸಲಿಲ್ಲ.ಬಹುಶಃ ರಾಜಮನೆತನದ ಘನತೆ,ಗೌರವಗಳು ಆಕೆಯನ್ನು ವಿಚಲಿತಗೊಳಿಸಿರಬಹುದು.ಆ ಕಾರಣಕ್ಕೆ ಆಕೆ
ಗೊಂದಲದಲ್ಲಿ ಬಿದ್ದಿರಲೂಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಆಕೆಗೆ ತಾನು ಸುದ್ದಿಯಾಗುವದು ಬೇಡವಾಗಿತ್ತೇನೋ.ಅದಕ್ಕಾಗಿ ತನ್ನ ಸುತ್ತ ಅದೆಂಥದ್ದೋ ಅದೃಶ್ಯ
ಗೋಡೆಯನ್ನು ನಿರ್ಮಿಸಿಕೊಂಡು ಬಿಟ್ಟಳು.ಅದೇನೇ ಇರಲಿ,ಊರ್ಮಿಳೆಯೆಂಬ ಮುಗ್ಧ ಜೀವಿಯ ಗಂಡ ಲಕ್ಷ್ಮಣ,ತನ್ನ ಅಣ್ಣನೊಂದಿಗೆ
ವನವಾಸಕ್ಕೆಂದು ಹದಿನಾಲ್ಕು ವರ್ಷ ಕಾಡಿಗೆ ಹೋದಾಗ ಅವಳಲ್ಲಿ ಇದ್ದಿರಬಹುದಾದ ಕಾತರ,ತಳಮಳ,ಸಿಟ್ಟು-ಸೆಡವುಗಳ ಬಗ್ಗೆ
ಯೋಚಿಸಿದಾಗ ಮೂಡಿ ನಿಂತ ಚಿತ್ರಣವಿದು.ಇಂಥದೊಂದು ಬರಹದಿಂದ ನನಗೆ ಸಮಾಧಾನವಾಗುತ್ತದೆಯೋ ಇಲ್ಲವೋ ಅದು
ಬೇರೆ ಮಾತು.ಇನ್ನು ಮೇಲಾದರೂ ನಾವು ಅವಳಿಗೆ ಪ್ರಾಮುಖ್ಯತೆ ಕೊಡಬಹುದು ಅಥವಾ ಕೊಡಲಿಕ್ಕಿಲ್ಲ.ಆದರೆ ಒಂದು
ಮಾತ್ರ ಖಚಿತ.ಅವಳೇ ನನ್ನ ಪಾಲಿಗೆ ನಿಜವಾದ ನಾಯಕಿ:ದುರಂತ ನಾಯಕಿ!
ನನಗೆ ಅವಳ ಪುಟ್ಟ ಹೃದಯದ ಗೋಗರೆತ ಕೇಳಿಸಿದಂತಾಗುತ್ತದೆ.
ಮತ್ತು ಅದು ಅತ್ಯಂತ ದೀನ ಸ್ವರದಲ್ಲಿ ಪಿಸುಗುಡುತ್ತಿದೆ:
"ನನಗೊಂದಿಷ್ಟು ನ್ಯಾಯ ಕೊಡಿ..!"
---
Comments
ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!
In reply to ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ! by venkatb83
ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!
ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!
In reply to ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ! by prasannakulkarni
ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!
ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!
In reply to ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ! by makara
ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!
ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!
In reply to ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ! by kamala belagur
ಉ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!