ಕಥೆ : ಚೆಲುವೆ

ಕಥೆ : ಚೆಲುವೆ

ನನ್ನದು ಮಾರ್ಕೆಟಿಂಗ್ ವೃತ್ತಿ ಆದ್ದರಿಂದ ಊರೂರು ತಿರುಗುವುದು ಮಾಮೂಲಾಗಿತ್ತು. ತಿಂಗಳಲ್ಲಿ ಅರ್ಧ ಪರ ಊರುಗಳಲ್ಲೇ ಕಳೆದು ಬಿಡುತ್ತಿದ್ದೆ. ಸಾಧಾರಣವಾಗಿ ಬಸ್ಸಿನಲ್ಲೇ ನನ್ನ ಪ್ರಯಾಣ ಸಾಗುತ್ತಿತ್ತು. ಟ್ರೈನಿಗಾದರೆ ತಿಂಗಳುಗಟ್ಟಲೆ ಮುಂಚೆಯೇ ಕಾದಿರಿಸಬೇಕಾದ್ದರಿಂದ ಬಸ್ಸಿನ ಪ್ರಯಾಣವೇ ಹೆಚ್ಚು ಸೂಕ್ತವಾಗಿತ್ತು. ಹೆಚ್ಚು ಕಡಿಮೆ ಭಾರತದ ಎಲ್ಲ ಊರುಗಳು ತಿರುಗಿಬಿಟ್ಟಿದ್ದೆ. ಈ ಬಾರಿ ತಿರುಪತಿಯಲ್ಲಿ ಒಂದು ಕಂಪನಿಗೆ ಹೋಗಬೇಕಿತ್ತು.

ಅದರಂತೆಯೇ ಸೋಮವಾರ ರಾತ್ರಿ ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಮೊದಲೇ ಕಾಯ್ದಿರಿಸಿದ್ದ ರಾಜಹಂಸ ಬಸ್ಸನ್ನು ಏರಿ ಕಿಟಕಿಯ ಪಕ್ಕ ಕುಳಿತು ಕಿಟಕಿ ತೆರೆದು ಆಚೆ ನೋಡುತ್ತಾ ಬಸ್ ಹೊರಡುವುದನ್ನು ಕಾಯುತ್ತ ಕುಳಿತೆ.

ಸೋಮವಾರವಾದ್ದರಿಂದ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿ ಜನ ಇರಲಿಲ್ಲ. ಆದರೂ ನಾನು ಹೊರಡುತ್ತಿದ್ದ ಬಸ್ ತಿರುಪತಿಗೆ ಆದ್ದರಿಂದ ಬಸ್ ನಿಧಾನವಾಗಿ ತುಂಬುತ್ತ ಹೆಚ್ಚು ಕಡಿಮೆ ಪೂರ್ತಿ ಆಗಿತ್ತು. ಆದರೆ ನನ್ನ ಪಕ್ಕದ ಸೀಟ್ ಗೆ ಇನ್ನು ಯಾರೂ ಬಂದಿರಲಿಲ್ಲ. ನಾನು ಕೆಳಗಿಳಿದು ಕಂಡಕ್ಟರ್ ನ ಊಟಕ್ಕೆ ಎಲ್ಲಿ ನಿಲ್ಲಿಸುತ್ತೀರ ಎಂದು ಕೇಳಿದೆ ಅದಕ್ಕೆ ಆತ ಚಿತ್ತೂರ್ ಎಂದು ಹೇಳಿದ. ಸರಿ ಎಂದು ಹೇಳಿ ಮತ್ತೆ ಬಸ್ ಹತ್ತಿ ಕುಳಿತೆ. ಸರಿಯಾಗಿ ೯.೧೫ ಕ್ಕೆ ಮಜೆಸ್ಟಿಕ್ ನಿಂದ ಹೊರಟ ಬಸ್ ಬೆಂಗಳೂರಿನ ಟ್ರಾಫಿಕ್ ಅನ್ನು ಭೇಧಿಸಿಕೊಂಡು ಕೆ.ಆರ್ ಪುರಂ ಬರುವ ಹೊತ್ತಿಗೆ ೧೦.೧೫ ಆಗಿತ್ತು. ಅಲ್ಲಿಂದ ಬಸ್ ನ ವೇಗ ಹೆಚ್ಚಿತು. ನಾನು ಕಿಟಕಿ ಮುಚ್ಚಿ ಲ್ಯಾಪ್ ಟಾಪ್ ಓಪನ್ ಮಾಡಿ ಯಾವುದಾದರೂ ಸಿನೆಮಾ ನೋಡೋಣ ಎಂದುಕೊಂಡು ಒಂದೆರಡು ಸಿನೆಮಾ ಸ್ವಲ್ಪ ಸ್ವಲ್ಪ ನೋಡಿ ಯಾಕೋ ನೋಡಲು ಮನಸಾಗದೆ ಹಾಗೆ ಮುಚ್ಚಿಟ್ಟು ಕಣ್ಣು ಮುಚ್ಚಿದೆ.

ಮತ್ತೆ ಕಣ್ಣು ಬಿಡುವ ಹೊತ್ತಿಗೆ ಬಸ್ ಚಿತ್ತೂರಿನ ಹೋಟೆಲ್ ಒಂದರ ಮುಂದೆ ನಿಂತಿತ್ತು. ಸುತ್ತಲೂ ನೋಡಿದರೆ ಬಸ್ ನಲ್ಲಿ ಇದ್ದವರೆಲ್ಲ ಕೆಳಗೆ ಇಳಿದು ಹೋಗಿದ್ದರು. ಸರಿ ನಾನು ಕೆಳಗೆ ಇಳಿದು ಹೋಟೆಲ್ ಒಳಗೆ ಹೋಗಿ ಊಟ ಮಾಡಿ ಆಚೆ ಬಂದು ಬಸ್ ಬಳಿ ನಿಂತಿದ್ದೆ. ಡಿಸೆಂಬರ್ ತಿಂಗಳಾದ್ದರಿಂದ ಚಳಿ ಗಾಳಿ ಮೈ ನಡುಗಿಸುತ್ತಿತ್ತು. ಜಾಸ್ತಿ ಹೊತ್ತು ಇಲ್ಲಿ ನಿಲ್ಲಲು ಆಗುವುದಿಲ್ಲ ಎಂದುಕೊಂಡು ಒಳಗೆ ಬಂದು ನನ್ನ ಸೀಟ್ ಬಳಿ ಬಂದೆ. ಅಲ್ಲಿ ನೋಡಿದರೆ ಕಿಟಕಿ ಪಕ್ಕದ ಸೀಟ್ ನಲ್ಲಿ ಯಾರೋ ತಲೆ ತಗ್ಗಿಸಿ ಕೂತಿದ್ದರು. ಮತ್ತೊಮ್ಮೆ ಸೀಟ್ ನಂಬರ್ ಖಚಿತ ಪಡಿಸಿಕೊಂಡು ಹಲೋ ಎಂದೇ. ತಗ್ಗಿಸಿದ ತಲೆಯನ್ನು ನಿಧಾನವಾಗಿ ಮೇಲೆತ್ತಿದರು. ಬಹುಶಃ ಅಷ್ಟು ಸುಂದರವಾದ ಹುಡುಗಿಯನ್ನು ನನ್ನ ಜೀವನದಲ್ಲೇ ನಾನು ನೋಡಿರಲಿಲ್ಲ. ಹಾಲಿನಲ್ಲಿ ಅಭಿಷೇಕ ಮಾಡಿದಂಥಹ ಬೆಳ್ಳನೆ ಮುಖ, ನೀಲಿ ಕಣ್ಣುಗಳು, ಸಂಪಿಗೆಯಂತ ಮೂಗು, ಎಳೆ ತುಟಿಗಳು ಆಹಾ ದೇವರೇ ಇವಳೇ ನನ್ನ ಮಡದಿ ಆಗಿಬಿಟ್ಟರೆ ಎಷ್ಟು ಚಂದ ಅನಿಸಿತು ಆ ಕ್ಷಣಕ್ಕೆ. ಆಕೆ ತೆಲುಗಿನಲ್ಲಿ ಏಮಿಟಿ ಎಂದಳು. ನಾನು ಅಲ್ಪ ಸ್ವಲ್ಪ ತೆಲುಗು ಕಲಿತಿದ್ದೆನಾದ್ದರಿಂದ ನಾನು ತೆಲುಗಿನಲ್ಲೇ ಉತ್ತರಿಸಿದೆ. ಅದು ನನ್ನ ಸೀಟು ನೀವು ಈ ಕಡೆ ಬಂದರೆ ನಾನು ಅಲ್ಲಿ ಕುಳಿತುಕೊಳ್ಳುತ್ತೇನೆ ಎಂದೆ. ಬಸ್ಸಿನಲ್ಲಿದ್ದವರೆಲ್ಲ ಬಿಟ್ಟ ಬಾಯಿ ಬಿಟ್ಟಂಗೆ ನನ್ನನ್ನೇ ನೋಡುತ್ತಿದ್ದರು. ನಾನು ಮನಸಿನಲ್ಲೇ ಅಂದುಕೊಂಡೆ, ಇಷ್ಟು ಸುಂದರವಾದ ಹುಡುಗಿ ನನ್ನ ಪಕ್ಕದಲ್ಲಿ ಕುಳಿತಿರುವುದನ್ನು ನೋಡಿ ತಡೆಯಲಾಗುತ್ತಿಲ್ಲ ಇವರಿಗೆ ಎಂದುಕೊಂಡು ಮನದಲ್ಲೇ ನಕ್ಕೆ.

ಮರುಕ್ಷಣದಲ್ಲಿ ಆ ಹುಡುಗಿ ನನಗೆ ಕಿಟಕಿಯ ಪಕ್ಕ ಎಂದರೆ ತುಂಬಾ ಇಷ್ಟ ನೀವು ಇಲ್ಲಿ ಪಕ್ಕದಲ್ಲಿ ಕುಳಿತುಕೊಳ್ಳುತ್ತೀರಾ ಎಂದಳು. ಅಷ್ಟು ಸುಂದರವಾದ ಹುಡುಗಿ ಕೇಳುತ್ತಿರುವಾಗ ಇಲ್ಲ ಎನ್ನಲು ಆಗುವುದೇ ಸರಿ ಎಂದು ನಕ್ಕು ಇನ್ನೊಂದು ಸಲ ನನ್ನ ಸಹ ಪ್ರಯಾಣಿಕರಿಗೆ ಹೊಟ್ಟೆ ಉರಿಸಲೆಂದು ಎಲ್ಲರನ್ನೂ ಒಮ್ಮೆ ನೋಡಿ ಸುಮ್ಮನೆ ಕಣ್ಣಂಚಿನಿಂದ ಒಬ್ಬನನ್ನು ಏನೆಂದು ಕೇಳಿದೆ ಅದಕ್ಕೆ ಆತನೂ ಸುಮ್ಮನೆ ತಲೆ ಆಡಿಸಿ ಏನೂ ಇಲ್ಲ ಎಂದು ಸುಮ್ಮನಾದ. ನಾನು ಅವಳ ಪಕ್ಕ ಕುಳಿತೊಡನೆ ಏನೋ ಒಂದು ರೀತಿ ಪುಳಕವಾಯಿತು. ಇಷ್ಟು ದಿನದ ನನ್ನ ಯಾವುದೇ ಪ್ರವಾಸದಲ್ಲೂ ಇಂಥಹ ಅತಿಲೋಕ ಸುಂದರಿ ಜೊತೆ ಪ್ರಯಾಣ ಮಾಡುವ ಸಂದರ್ಭ ಬಂದಿರಲಿಲ್ಲ. ಪ್ರತಿ ಬಾರಿ ಯಾವುದಾದರೂ ವಯಸ್ಸಾದ ವ್ಯಕ್ತಿಗಳು ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹೇಗಾದರೂ ಆಕೆಯೊಂದಿಗೆ ಮಾತನಾಡಿ ತಿರುಪತಿ ಬರುವ ಹೊತ್ತಿಗೆ ಆಕೆಗೆ ನನ್ನ ಪ್ರೇಮವನ್ನು ನಿವೇದಿಸಿಕೊಳ್ಳಬೇಕು ಎಂದುಕೊಂಡು ಆಕೆಯ ಜೊತೆ ಮಾತಾಡಬೇಕು ಎಂದುಕೊಳ್ಳುತ್ತಿದ್ದೆ.

ಅಷ್ಟರಲ್ಲಿ ಕಂಡಕ್ಟರ್ ಒಮ್ಮೆ ಒಳಗೆ ಬಂದು ಎಲ್ಲರೂ ಬಂದಿದ್ದಾರ ಎಂದು ಖಚಿತ ಪಡಿಸಿಕೊಂಡು ನನ್ನನ್ನೊಮ್ಮೆ ನೋಡಿ ಸುಮ್ಮನೆ ಹೊರಟು ಹೋದ. ಬಸ್ ನಿಧಾನವಾಗಿ ಮುಖ್ಯ ರಸ್ತೆಗೆ ಬಂದು ವೇಗವನ್ನು ಪಡೆದುಕೊಂಡಿತು. ಚಳಿ ಗಾಳಿ ಒಳಗೆ ಬರಬಾರದೆಂದು ನಾನು ಕಿಟಕಿ ಮುಚ್ಚಿದ್ದೆ. ಆದರೆ ಆ ಚೆಲುವೆ ಕಿಟಕಿ ತೆರೆದು ತನ್ನ ಮುಖವನ್ನು ಗಾಳಿಗೆ ಒಡ್ಡಿ ಕುಳಿತಿದ್ದಳು. ಅವಳನ್ನು ಮಾತಾಡಿಸಲು ಇದೆ ಸರಿಯಾದ ಸಂದರ್ಭ ಎಂದುಕೊಂಡು ಹಲೋ ಸ್ವಲ್ಪ ಕಿಟಕಿ ಹಾಕುತ್ತೀರಾ ತುಂಬಾ ಚಳಿ ಆಗುತ್ತಿದೆ ಎಂದೆ. ಅದಕ್ಕೆ ಅವಳು ನನಗೆ ತಂಗಾಳಿ ಎಂದರೆ ತುಂಬಾ ಇಷ್ಟ ಎಂದು ಕಿಟಕಿ ಮುಚ್ಚಿದಳು. ನೀವು ಎಲ್ಲಿ ಹತ್ತಿದಿರಿ ಬಸ್ ಎಂದು ಕೇಳಿದೆ. ಅದಕ್ಕೆ ಆಕೆ ಚಿತ್ತೂರ್ ಎಂದಳು. ಎಲ್ಲಿಗೆ ಹೋಗುತ್ತಿದ್ದೀರಾ ಎಂದೆ ಅದಕ್ಕವಳು ಏನೂ ಉತ್ತರಿಸದೆ ನೀವು ಎಲ್ಲಿಗೆ ಹೋಗುತ್ತಿರುವುದು ಎಂದಳು. ನಾನು ತಿರುಪತಿ ಎಂದೆ.

ಮತ್ತೆ ನಮ್ಮಿಬ್ಬರ ಮಧ್ಯೆ ಮೌನ. ನನಗೆ ಚಳಿ ಜಾಸ್ತಿ ಆಗುತ್ತಿತ್ತು ಮೇಲ್ಗಡೆ ಬ್ಯಾಗಿನಿಂದ ಸ್ವೆಟರ್ ತೆಗೆಯೋಣ ಎಂದು ಎದ್ದು ನಿಂತೆ. ನನ್ನ ಹಿಂದಿಯ ಸೀಟಿನವ ನನ್ನ ಸೀಟಿನ ಮೇಲೆ ತಲೆ ಇಟ್ಟು ಬಗ್ಗಿ ನೋಡುತ್ತಿದ್ದವನು ಸಡನ್ನಾಗಿ ತನ್ನ ತಲೆಯನ್ನು ಹಿಂದಕ್ಕೆ ತೆಗೆದುಕೊಂಡು ತನ್ನ ಸೀಟಿನಲ್ಲಿ ಕುಳಿತ. ನಾನು ಅವನನ್ನು ಕುರಿತು ಏನು ಬೇಕಿತ್ತು ಎಂದು ಕೇಳಿದೆ. ಅದಕ್ಕೆ ಅವನು ನನ್ನನ್ನು ವಿಚಿತ್ರವಾಗಿ ಮೇಲಿನಿಂದ ಕೆಳಗಡೆ ನೋಡುತ್ತಾ ಏನೂ ಇಲ್ಲ ಎಂದ. ನನಗೆ ಗೊತ್ತಾಯಿತು ನಾನು ಆ ಚೆಲುವೆಯ ಜೊತೆ ಮಾತಾಡುತ್ತಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು.

ನಾನು ಸ್ವೆಟರ್ ಹಾಕಿಕೊಂಡು ಕುಳಿತು ಅವಳನ್ನು ಕೇಳಿದೆ ನಿಮಗೆ ಚಳಿ ಆಗುತ್ತಿಲ್ಲವ ಎಂದು ಅದಕ್ಕೆ ಅವಳು ಇಲ್ಲ ಎಂದಳು. ನಿಮಗೇನು ಬೇಕು ಯಾಕೆ ಪದೇ ಪದೇ ನನ್ನನ್ನು ಮಾತಾಡಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಕೇಳಿದಳು ಅವಳು. ನನಗೆ ಕೂಡಲೇ ಏನು ಉತ್ತರ ಕೊಡಬೇಕೆಂದು ಗೊತ್ತಾಗದೆ ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಬಿಟ್ಟೆ. ಅದಕ್ಕೆ ಅವಳು ಒಮ್ಮೆ ಜೋರಾಗಿ ನಕ್ಕು ( ಆ ನಗುವಿಗೆ ನನಗೆ ಭಯ ಆಯಿತು, ಎಲ್ಲಿ ಅಕ್ಕ ಪಕ್ಕದವರು ಎದ್ದು ಅವಳು ಅವರಿಗೆ ನನ್ನ ಬಗ್ಗೆ ಹೇಳಿ ಎಲ್ಲಿ ಹೊಡೆಯುವರೋ ಎಂದು) ಇದ್ದಕ್ಕಿದ್ದಂತೆ ಕಿರುಚಾಡಲು ಶುರು ಮಾಡಿದಳು. ನಿಮಗೇನು ಗೊತ್ತು ನನ್ನ ಬಗ್ಗೆ, ಇದೇನಾ ನಿಮ್ಮ ಸಭ್ಯತೆ, ಒಂದು ಹುಡುಗಿ ಕಂಡರೆ ಸಾಕು ಅವಳ ಬಗ್ಗೆ ಹಿಂದು ಮುಂದೆ ಯೋಚನೆ ಮಾಡದೆ ಪ್ರೀತಿಸುತ್ತಿದ್ದೇನೆ ಎನ್ನುತ್ತೀರಲ್ಲ, ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು, ನಾನು ದಯವಿಟ್ಟು ಕಿರುಚಬೇಡಿ ಎಂದು ಒಮ್ಮೆ ಎದ್ದು ಯಾರಾದರೂ ನೋಡುತ್ತಿದ್ದಾರ ಎಂದು ಪರೀಕ್ಷಿಸಿದೆ ನನ್ನ ಹಿಂದಿನ ಸೀಟಿನವನನ್ನು ಬಿಟ್ಟು ಉಳಿದವರೆಲ್ಲರೂ ಗಾಢ ನಿದ್ರೆಯಲ್ಲಿದ್ದರು. ತಕ್ಷಣ ಅವಳ ಕೈ ಹಿಡಿದುಕೊಂಡು ದಯವಿಟ್ಟು ಕಿರುಚಬೇಡಿ ತಪ್ಪಾಯಿತು ಎಂದು ಹೇಳಿ ಸುಮ್ಮನಾದೆ.

ಇವಳ ಸಹವಾಸವೇ ಬೇಡ ಎಂದುಕೊಂಡು ಸುಮ್ಮನೆ ಕಣ್ಣು ಮುಚ್ಚಿ ಮಲಗಿಕೊಂಡೆ. ಇದ್ದಕ್ಕಿದ್ದಂತೆ ಒಂದು ಹೊತ್ತಿನಲ್ಲಿ ಕಪಾಳಕ್ಕೆ ಯಾರೋ ಜೋರಾಗಿ ಹೊಡೆದಂತಾಗಿ ಅಮ್ಮಾ ಎಂದು ಜೋರಾಗಿ ಕೂಗಿಕೊಂಡು ಕಣ್ಣು ಬಿಟ್ಟೆ. ಬಸ್ಸು ಆಗಷ್ಟೇ ತಿರುಪತಿ ಪ್ರವೇಶಿಸಿತ್ತು. ತಕ್ಷಣ ನನ್ನ ಹಿಂದಿನ ಸೀಟಿನವ ಯಾಕೆ ಸರ್ ಏನಾಯಿತು ಎಂದು ಕೇಳಿದ. ಏನೂ ಇಲ್ಲ ಎಂದು ಸುಮ್ಮನಾದೆ. ಆದರೆ ಅವನು ಯಾಕೆ ಸರ್ ನಿಮ್ಮ ಎಡಗಡೆ ಕೆನ್ನೆ ಕೆಂಪಾಗಿದೆ ಎಂದ. ನಾನು ಕೆನ್ನೆ ಮುತ್ತಿ ನೋಡಿಕೊಂಡೆ ಕಪಾಳಕ್ಕೆ ಬಿದ್ದ ಏಟಿನಿಂದ ಕೆನ್ನೆ ಇನ್ನು ಬಿಸಿ ಹಾಗೆಯೇ ಇತ್ತು. ರಾತ್ರಿ ನಡೆದ ಘಟನೆಯಿಂದ ಅವಳೇನಾದರೂ ಹೊಡೆದಿರಬಹುದ ಎಂದು ಪಕ್ಕ ಸೀಟಿನ ಕಡೆ ನೋಡಿದರೆ ಅಲ್ಲಿ ಯಾರೂ ಇರಲೇ ಇಲ್ಲ. ಒಂದು ಸಲ ಬಸ್ ಪೂರ್ತಿ ಅವಲೋಕಿಸಿದೆ. ಎಲ್ಲೂ ಅವಳು ಕಾಣಲಿಲ್ಲ.

ತಕ್ಷಣ ನನ್ನ ಹಿಂದಿನ ಸೀಟಿನವನನ್ನು ಸರ್ ಇಲ್ಲಿ ನನ್ನ ಪಕ್ಕದಲ್ಲಿ ಒಬ್ಬಳು ಹುಡುಗಿ ಕುಳಿತಿದ್ದಳಲ್ಲ ಅವಳು ಎಲ್ಲಿ ಹೋದಳು, ಯಾವಾಗ ಇಳಿದಳು ಎಂದು ಕೇಳಿದೆ. ಅದಕ್ಕೆ ಆತ ಹುಡುಗಿನ ಯಾವ ಹುಡುಗಿ ಎಂದ. ಅದಕ್ಕೆ ನಾನು ಅದೇ ಸರ್ ರಾತ್ರಿ ಚಿತ್ತೊರಿನಲ್ಲಿ ಊಟಕ್ಕೆಂದು ನಿಲ್ಲಿಸಿದಾಗ ಹತ್ತಿದಳಲ್ಲ ಆ ಸುಂದರ ಹುಡುಗಿ ಎಂದೆ. ಅದಕ್ಕೆ ಆತ ಸರ್ ಯಾವ ಹುಡುಗಿಯೂ ಹತ್ತಲಿಲ್ಲ. ಅದು ಸರಿ ಬೆಂಗಳೂರಿನಿಂದ ಕಿಟಕಿಯ ಪಕ್ಕ ಕುಳಿತ ನೀವು ಚಿತ್ತೊರಿನಲ್ಲಿ ಊಟ ಆದ ಮೇಲೆ ಯಾಕೆ ಪಕ್ಕದ ಸೀಟಿನಲ್ಲಿ ಕುಳಿತಿರಿ ಎಂದು ಕೇಳಿದೆ. ಅದಕ್ಕೆ ನಾನು ಅದೇ ಆ ಹುಡುಗಿ ಇಲ್ಲಿ ಕುಳಿತಿದ್ದಳಲ್ಲ ಅದಕ್ಕೆ ಪಕ್ಕ ಕುಳಿತೆ ಎಂದೆ. ತಕ್ಷಣ ಪಕ್ಕ ಸೀಟಿನಿಂದ ಇನ್ನೊಂದು ಧ್ವನಿ ಕೇಳಿ ಬಂತು. ಏನ್ ಸರ್ ರಾತ್ರಿ ಎಲ್ಲ ಒಬ್ಬರೇ ಏನೇನೋ ಮಾತಾಡುತ್ತ ಇದ್ರಿ ಎಂದ. ಬಹುಷಃ ಏನೋ ಕನಸು ಕಂಡಿರಬೇಕು ಎಂದು ನಕ್ಕರು ಆ ವ್ಯಕ್ತಿ.

ನಾನು ಶಾಕ್ ನಿಂದ ಸೀಟ್ ಮೇಲೆ ಕುಳಿತೆ. ಇದು ಕನಸಂತೂ ಖಂಡಿತ ಅಲ್ಲ. ಯಾಕೆಂದರೆ ನಾನು ಅವಳ ಜೊತೆ ಮಾತಾಡಿದ್ದು ನಿಜ, ಅವಳು ನನಗೆ ಕೆನ್ನೆಗೆ ಹೊಡೆದದ್ದು ನಿಜ, ಯಾಕೆಂದರೆ ಆ ಏಟಿನ ಬಿಸಿ ಇನ್ನು ಹಾಗೆಯೇ ಇದೆ. ಆದರೆ ನನ್ನ ಬಿಟ್ಟು ಬೇರ್ಯಾರಿಗೂ ಆಕೆ ಕಾಣಿಸಿಲ್ಲ ಏಕೆ ಎಂದು ಆಲೋಚಿಸುತ್ತಿರುವಾಗಲೇ ಬಸ್ ನಿಲ್ದಾಣಕ್ಕೆ ಬಂದು ತಲುಪಿತು. ಇಳಿಯುವಾಗ ಕಂಡಕ್ಟರ್ ಬಳಿ ಹೋಗಿ ಸರ್ ನೆನ್ನೆ ರಾತ್ರಿ ಚಿತ್ತೂರ್ ಬಳಿ ಊಟ ಮುಗಿಸಿ ಹೊರಟಾಗ ನೀವು ಒಳಗಡೆ ಬಂದು ಸೀಟ್ ಚೆಕ್ ಮಾಡಿದ್ರಲ್ಲ ಅವಾಗ ನನ್ನ ಪಕ್ಕ ಯಾರಾದರೂ ಕುಳಿತಿದ್ರ ಎಂದು ಕೇಳಿದ್ದಕ್ಕೆ ಅವನು ಇಲ್ಲಾರಿ ಯಾರು ಇರಲಿಲ್ಲ ಯಾಕೆ ಏನಾದರೂ ಕಳೆದುಕೊಂಡಿದ್ದೀರ ಎಂದು ಕೇಳಿದ. ಹೌದು ಸರ್ ಆದ್ರೆ ಏನನ್ನ ಅಂತ ಗೊತ್ತಿಲ್ಲ ಎಂದು ಹೊರಟೆ. ಕಂಡಕ್ಟರ್ ಯಾವ್ದೋ ಮೆಂಟಲ್ ಗಿರಾಕಿ ಅಂದುಕೊಂಡು ರೈಟ್ ರೈಟ್ ಎಂದ.....

Rating
No votes yet

Comments