"ಕಂಡರೂ ಸಾವು, ನೀ ಬದುಕು" ಎನ್ನುವ ಸಿದ್ಲಿಂಗು

"ಕಂಡರೂ ಸಾವು, ನೀ ಬದುಕು" ಎನ್ನುವ ಸಿದ್ಲಿಂಗು

ಸಿದ್ಲಿಂಗು - ಉದ್ದದ ಕಥೆ. ಆತನ ಹುಟ್ಟಿನಿಂದ ಶುರುವಾಗುವ ಕಥೆ. ಹುಟ್ಟುತ್ತಲೇ ಅಮ್ಮನನ್ನು ಕಳೆದುಕೊಂಡು ಅನಾಥನಾಗುವ ಸಿದ್ಲಿಂಗು. ಮಾಮೂಲೀ ಕಥೆಗಳಲ್ಲಿನ ಮಲತಾಯಿಯಂತಲ್ಲದೆ, ಅಪ್ಪನ ಪ್ರೇಯಸಿ, ಅಮ್ಮನೇ ಆಗುತ್ತಾಳೆ.  ಆದರೂ ಮಗು ಸಿದ್ಲಿಂಗು ಅಳು ನಿಲ್ಲಿಸುವುದು ಈ ಹೊಸ ಅಮ್ಮ ಕೈಗೆ ‘ಕಾರ್’ ಗೊಂಬೆಯನ್ನಿತ್ತಾಗ. ಅಂದಿನಿಂದ ‘ಕಾರ್’ ಅನ್ನು ಪಡೆಯುವುದು ಆತನ ಕನಸಾಗಿಬಿಡುತ್ತದೆ. ಆ ಕನಸನ್ನು ಅಪ್ಪ, ಅಮ್ಮ ಇಬ್ಬರೂ ಕೂಡ ಪೋಷಿಸುತ್ತಾರೆ. ಒಟ್ಟಿನಲ್ಲಿ ಸಿದ್ಲಿಂಗುಗೆ ಹುಟ್ಟಿನಿಂದಲೂ ಅತಿಯಾದ ಕಾರಿನ ಹುಚ್ಚು! ಆತ ಅತಿಯಾಗಿ ದ್ವೇಷಿಸುತ್ತಿದ್ದ ಸಹಪಾಠಿ ಕೂಡ ಆಕೆಯ ತಂದೆ ‘ಕಾರ್’ ಕೊಂಡಾಕ್ಷಣ ಪ್ರೀತಿಯ ಗೆಳತಿಯಾಗಿಬಿಡುತ್ತಾಳೆ. ಒಂಟಿ ಲೆಕ್ಚರರ್ ಳಿಗೆ ಈತ ಜೊತೆಯಾಗುವುದು ಕೂಡ ಆಕೆಯ ಬಳಿ ಕಾರ್ ಇದೆಯೆಂದೇ! ಲೆಕ್ಚರರ್ ಳಿಗೆ ನಿಮ್ಮ ‘ಕಾರ್’ ಹಾಗೂ ‘ಎದೆ’ ಇಷ್ಟ ಎಂದು ಹೇಳಿ ಓಡಿಹೋದವನು ಆಕೆಯ ‘ಕಾರ್’ ನನ್ನು ಮರೆಯಲಾಗದೆ ಕ್ಷಮೆ ಕೇಳುತ್ತಾ ವಾಪಾಸಾಗುತ್ತಾನೆ. ಸೋಗು ಹಾಕಿಕೊಂಡು ಬದುಕುವವರಿಗಿಂತ, ಈತನೇ ವಾಸಿ ಎಂದು ಇನ್ನಷ್ಟು ಹತ್ತಿರವಾಗುವ, ಗಂಡನಿಂದ ದೂರವಾಗಿರುವ ಲೆಕ್ಚರರ್ ಗೆ, ಸಿದ್ಲಿಂಗುವಿನ ತರಹವೇ ರೈಲಿನ ಹುಚ್ಚು! ಅವಳ ಒಂಟಿತನವನ್ನು ಅರ್ಥ ಮಾಡಿಕೊಳ್ಳುವ ಸಿದ್ಲಿಂಗು, ಈ ಇಬ್ಬರ ನಡುವಿನ ಒಡನಾಟ, ಬಾಂಧವ್ಯ ಬೆಳೆದು, ಅಕಸ್ಮಾತ್ತಾಗಿ ದೇಹವು ಕೂಡ ಬೆರೆಯುತ್ತದೆ. ಸಿದ್ಲಿಂಗು ಈ ಘಟನೆಯಿಂದ ಚೇತರಿಸಿಕೊಳ್ಳುವಷ್ಟರಲ್ಲಿ, ಆತನ ತಂದೆ ತಾಯಿ ಅಕಸ್ಮಾತ್ತಾಗಿ ತೀರಿಕೊಂಡು, ಆತನ ಜೀವನದ ದಾರಿ ಬೇರೆಯಾಗುತ್ತದೆ. ಹೀಗೆ ಸಿದ್ಲಿಂಗು ಪ್ರತಿ ಬಾರಿ ಕಾರಿನ ಬಗ್ಗೆ ತನ್ನ ಪ್ರೀತಿ ಪ್ರಕಟಪಡಿಸುವಾಗಲೆಲ್ಲಾ, ಆತನ ಜೀವನ ‘ಆಕಸ್ಮಿಕ’ ತಿರುವನ್ನು ಪಡೆದುಕೊಳ್ಳುತ್ತದೆ.

ಅಕ್ಷರಶಃ ಒಂಟಿಯಾಗಿಬಿಡುವ ಈತನಿಗೆ ಬದುಕಲು ಕನಸೊಂದೇ ಆಸರೆಯಾಗುತ್ತದೆ.  ಸುಳ್ಳು ಹೇಳಲು ಬರದವನಿಗೆ ಮಾರ್ಕೆಟಿಂಗ್ ಕೆಲಸ. ಹಣ ಸಂಪಾದಿಸುವಾಗ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನ.  ಹಳೇ ಕಾರ್, ಅದರ ಓನರ್ ಕೂಡ ಅಷ್ಟೇ ವಯಸ್ಸಾದವನು. ಆತನಿಗೆ ತನ್ನ ಕಾರಿನ ಮೇಲೆ ಅದಮ್ಯ ಪ್ರೀತಿ, ಮಗನನ್ನು ದೂರ ಮಾಡಿಕೊಂಡ ಈತ ಕೂಡ ಒಂಟಿ, ಸಿದ್ಲಿಂಗು ವಿನ ಕಾರಿನ ಪ್ರೀತಿ ಕಂಡ ಅವನು ತನ್ನ ಕಾರ್ ಅನ್ನು ಮಾರಲು ಮನಸ್ಸು ಮಾಡುತ್ತಾನೆ. ಇವರಿಬ್ಬರ ನಡುವೆ ವ್ಯವಹಾರ ಹೊರತಾಗಿಯೂ  ಒಂದು ಬಾಂಧವ್ಯ ಮೂಡುತ್ತದೆ.  ಸಾಲಕ್ಕಾಗಿ ಓಡಾಡುವ ಸಿದ್ಲಿಂಗು, ಆ ಸಮಯದಲ್ಲಿ ಪರಿಚಯವಾಗುವ, ತನ್ನಂತೆಯೇ ಒಂಟಿಯಾಗಿರುವ ಹುಡುಗಿ (ಟೀಚರ್), ಮಾನವೀಯತೆ ದೃಷ್ಟಿಯಿಂದ ಹತ್ತಿರವಾದರೂ, ಕೊನೆಕೊನೆಗೆ ಅವಳೇ ಈತನ ಆಸೆಗಳಿಗೆ, ಕನಸುಗಳಿಗೆ ಬೆನ್ನೆಲುಬು ಆಗುತ್ತಾಳೆ.  ಕಾರ್ ಕೊನೆಗೂ ಸಿಕ್ಕಿಯೇ ಬಿಟ್ಟಿತು ಅನ್ನುವಷ್ಟರಲ್ಲಿ ಕಾರಿನ ಮಾಲೀಕನ ಸಾವು. ಆ ಘಟನೆಯಿಂದ ಇನ್ನಷ್ಟು ಹತ್ತಿರವಾಗುವ ಇಬ್ಬರೂ, ಎಲುಬಿಲ್ಲದ ನಾಲಿಗೆಯ ಸಿದ್ಲಿಂಗು ಆಕೆಗೆ ಪ್ರೊಪೋಸ್ ಮಾಡುವ ಶೈಲಿ, ಅವನ ಗಲೀಜು ಮಾತಿಗೆ ಒಳಗೊಳಗೆ ಇಷ್ಟ ಪಟ್ಟಿದ್ದರೂ ಮುನಿಸಿಕೊಳ್ಳುವ ಗೆಳತಿ, ಒಲಿಸಿಕೊಳ್ಳಲು ಒದ್ದಾಡುವ ಸಿದ್ಲಿಂಗು.. ಎಲ್ಲಾ ಮುಗಿಯಿತು ಇನ್ನೇನು? ಅನ್ನುವಷ್ಟರಲ್ಲಿ ಹಳೇ ಲೆಕ್ಚರರ್ ಳ ಭೇಟಿ, ಹಳೇ ಕಾರಿನ ಮಾಲೀಕನ ಮಗ ರೌಡಿ ತನಗೆ ಅಪ್ಪನ ಕಾರ್ ಬೇಕೆಂದು ಮಾಡುವ ಗಲಾಟೆ, ಕ್ಲೈಮಾಕ್ಸ್ ನಲ್ಲಿ ಅಕಸ್ಮಾತ್ತಾಗಿ ಸಾಯುವ ಗೆಳತಿ!  ಆಕಸ್ಮಿಕ ಆರಂಭವೂ ಹೌದು, ಅಂತ್ಯವೂ ಹೌದು ಎಂದು ಹಠಾತ್ತನೆ ಮುಗಿಯುವ ಸಿನೆಮಾ.

ಇಡೀ ಸಿನೆಮಾದುದ್ದಕ್ಕೂ ನಮಗೆ ಕಂಡುಬರುವುದು ಒಂಟಿ ಜೀವಗಳು.  ಒಂಟಿತನದಿಂದ ನೊಂದು ಬೇಸತ್ತ ಇವರು, ಮತ್ತೊಬ್ಬರ ಒಂಟಿತನದ ನೋವನ್ನು ಅರ್ಥ ಮಾಡಿಕೊಂಡು ಜೊತೆಗೂಡುವರು. ಹೀಗೆ ಸಿದ್ಲಿಂಗುಗೆ ಜೊತೆಯಾಗುವ ಪ್ರತಿಯೊಬ್ಬರೂ ಆತನಿಗೆ ತಾವು ಅರ್ಥೈಸಿಕೊಂಡಿರುವ ಒಂದೊಂದು ಪಾಠವನ್ನು ಕಲಿಸಿ ಹೋಗುತ್ತಾರೆ. ಸಿನೆಮಾ ಶುರುವಾಗುವುದು ಸಿದ್ಲಿಂಗುವಿನ ಹುಟ್ಟಿನಿಂದ, ತಾಯಿಯ ಸಾವಿನಿಂದ. ಆದರೆ ಮುಗಿಯುವುದು ಗೆಳತಿಯ ಸಾವಿನಿಂದ. ಪ್ರತಿ ಬಾರಿಯೂ ಈತ ಸಾವೊಂದನ್ನು ನೋಡಿದಾಗ, ಈತನ ಜೀವನ ತಿರುವುಗಳನ್ನು ಕಾಣುತ್ತದೆ, ಈತ ಮೆಚ್ಯೂರ್ ಆಗುತ್ತಾ ಹೋಗುತ್ತಾನೆ.  ಹಾಗಾಗಿ ಗೆಳತಿಯ ಸಾವು ಆಕಸ್ಮಿಕವಾಗಿದ್ದರೂ, ಇದು ಅಂತ್ಯವಲ್ಲ. ಸಿದ್ಲಿಂಗುವಿನ ಜೀವನ ಮತ್ತೊಂದು ತಿರುವನ್ನು ಕಾಣುತ್ತದೆ, ಈತನ ಜೀವನದ ಮತ್ತೊಂದು ಆರಂಭ ಇರಬಹುದೇನೋ ಎನ್ನುವ ಆಶಾಭಾವನೆ ಬಿತ್ತುತ್ತದೆ.  ಸಿದ್ಲಿಂಗು ತಾನು ಸತ್ತಾಗ ಕಣ್ಣೀರಿಡಲು ತನ್ನವರು ಯಾರಾದರೂ ಇರಬೇಕೆಂದು ಯಾವಾಗಲೂ ಯೋಚಿಸುತ್ತಾನೆಯೇ ಹೊರತು, ಜೀವನದಲ್ಲಿ ಜೊತೆಯಾಗಿರಲಲ್ಲ. ಈತ ಕಾರನ್ನು ಪ್ರೀತಿಸಿದಷ್ಟು, ಅದನ್ನು ಪಡೆಯಬೇಕೆಂದು ಪ್ರಯತ್ನ ಪಡುವಷ್ಟು, ಯಾರ ಪ್ರೀತಿಯನ್ನು ಗಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ.  ಈತನ ಬಿಚ್ಚು ಮಾತಿನಲ್ಲಿನ ಸತ್ಯಕ್ಕೆ ಮಾರು ಹೋದವರೆಲ್ಲ ಈತನನ್ನು ಪ್ರೀತಿಸಲು ಶುರು ಮಾಡುತ್ತಾರೆ, ಈತನಿಗೆ ಹತ್ತಿರವಾಗುತ್ತಾರೆ. ಹಾಗೆಯೇ ಆಕಸ್ಮಿಕಗಳಲ್ಲಿ  ದೂರವಾಗುತ್ತಾರೆ. "ನಾನು, ನನ್ನದು ಎನ್ನುವ ನಿನ್ನಯ ತರ್ಕವೇ, ಬಾಲಿಶ, ಎಲ್ಲಾ ಶೂನ್ಯ ಎನ್ನುವ ನಿನ್ನಯ ವರ್ಗವೇ ಅಂಕುಶ" ಎಂದು ಮನಸ್ಸಿಗೆ ಸಮಾಧಾನ ಹೇಳುತ್ತಾ, "ಕಂಡರೂ ಸಾವು, ನೀ ಬದುಕು" ಎಂದುಕೊಳ್ಳುತ್ತಾ ಈತ ನಿರ್ಲಿಪ್ತನಾಗಿ ಜೀವನದ ಮತ್ತೊಂದು ಅಂಕಕ್ಕೆ ರೆಡಿಯಾಗುತ್ತಾನೆ. ತನ್ನ ಕನಸನ್ನು ಸಾಕಾರ ಮಾಡಿಕೊಳ್ಳುವತ್ತ ಗಮನ ಹರಿಸುತ್ತಾನೆ.  

ಪಾತ್ರ ಚಿಕ್ಕದಾಗಿದ್ದರೂ, ಚೊಕ್ಕದಾಗಿ ನಟಿಸಿರುವ ಸ್ಕೂಲ್ ಆಯಾಳ ಪಾತ್ರದಲ್ಲಿ ಗಿರಿಜಾ ಲೋಕೇಶ್, ಲೆಕ್ಚರರ್ ಪಾತ್ರದಲ್ಲಿನ ಸುಮನ್ ರಂಗನಾಥ್, ಈ ಇಬ್ಬರ ಒಂಟಿತನ ಚಿತ್ರ ಕೊನೆಯಾದ ನಂತರವೂ ಕಾಡುತ್ತದೆ. ಯೋಗೇಶ್, ರಮ್ಯಾ ರಿಂದ ಹಿಡಿದು ಪ್ರತಿಯೊಬ್ಬರೂ ಕೂಡ ತಮ್ಮತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.  ಎಲ್ಲೆಲ್ಲೋ ಓಡುವ ಮನಸೇ ಹಾಡಂತೂ ಮತ್ತೆ, ಮತ್ತೆ ಕೇಳಬೇಕೆನಿಸುತ್ತದೆ.  ಚಿತ್ರದ ಕೊನೆ ೧೫ ನಿಮಿಷಗಳು ಚಿತ್ರದ ಲಯವನ್ನು ತಪ್ಪಿಸಿ, ಅರ್ಥವೇ ಆಗದಂತೆ ಮಾಡಿಬಿಡುತ್ತದೆ.  ಅಂತ್ಯವಂತೂ ನಿರೀಕ್ಷಿಸಿಯೇ ಇರದಂಥದ್ದು ಆಗಿರುವುದರಿಂದ, ಅರಗಿಸಿಕೊಳ್ಳಲು ಕಷ್ಟವಾಗುತ್ತದೆ.  ಆದರೆ ಒಳ್ಳೆಯ ಪ್ರಯತ್ನ.

Rating
No votes yet

Comments

Submitted by ಶ್ರೀಕಾಂತ Thu, 10/18/2012 - 23:25

ಕೆಲವು ಸಿನೆಮಾಗಳು, ಪುಸ್ತಕಗಳು ಅ ಕಾಲದ ವಿಚಾರಧಾರೆಯಿಂದ, ಸಂವೇದನೆಗಳಿಗಿಂದ ಭಿನ್ನವಾಗಿರ್ತಾವೆ, ತನ್ನದೇ ಆದ ಪರಿಧಿಯಲ್ಲಿ ಉತ್ಕೃಷ್ಟವಾಗಿರ್ತಾವೆ -- 'ಸಿದ್ಲಿಂಗು' ಈ ಸಾಲಿಗೆ ಸೇರುತ್ತೆ. ನವ್ಯಸಾಹಿತ್ಯಕಾಲದ ವಸ್ತುವಿನಂತೆ 'ಕಾರು' ಒಂದು cornerstone ಅಷ್ಟೆ. ಇಂಗ್ಲಿಷ್ ಸಿನೆಮಾದ್ದ ಒಂದು claasic ಟೆಕ್ನಿಕ್ಕು -- 'ಪದೇ ಪದೇ ಸಂಬಂಧವಿಲ್ಲದೆ ಬರುವ ಒಂದು ವಸ್ತು'. ಕಾರು ಸಿದ್ಲಿಂಗುವಿನ attachmentನ ಸಂಕೇತ. ಸಾಮಾನ್ಯವಾಗಿ ಯಾವುದಕ್ಕೂ ಅಂಟುಕೊಂಡಿರದ ಅವನ ಮನಸ್ಸು, ನೇರವಾಗಿ ಮಾತನಾಡುವ ಅವನ ಸ್ವಭಾವ ... ಇವೆಲ್ಲವಕ್ಕೂ ವ್ಯತಿರಿಕ್ತವಾಗಿ ಕಾರಿನ(object) ಬಗೆಗಿನ ಮಿತಿಮೀರಿದ ವ್ಯಾಮೋಹ, ಅವನ dual personalityಯ ಇಣುಕುನೋಟ, sometime it has to snap ಅನ್ನೋ ಹಾಗೆ. ಯಾವ ಭಾವದ ಉತ್ಕಟೆಯನ್ನೂ ಅವನು ಸಹಿಸಲಾರ ... ತನ್ನೆಲ್ಲ ಹಿಂದಿನ ಸಂಬಂಧಗಳಿಂದ ಓಡ್ತಾನೆ, ಮನಸ್ಸು ಮತ್ತಿನೊಂದಕ್ಕೆ ಹಾರತ್ತೆ. ಕೊನೆಯಲ್ಲಾಗುವ ಸಾವು ಸಿನೆಮಾದ್ದ ವಿಲಕ್ಷಣತೆಯನ್ನು, ಅದೊರೊಳಗಿನ ಅಪೂರ್ಣತೆಯನ್ನು, ಬದುಕಿನ ಅರ್ಥ ಹುಡುಕದಿದ್ದರೂ ಆಳವಾಗಿ ಏನನ್ನೋ ಹೇಳಬಯಸುವ ಉತ್ಕಟತೆಯನ್ನು ಬಿಚ್ಚಿಡುತ್ತಾ ಹೋಗುತ್ತದೆ ...

ಸಿನೆಮಾ ನೋಡಿದ ಸ್ವಲ್ಪ ಹೊತ್ತಿನ ನಂತರ, ಇದು ಕನ್ನಡ ಸಿನೆಮಾ ಅನ್ನೋದನ್ನೇ ಮರೆತುಬಿಟ್ಟಿದ್ದೆ, acclaimed ಇಂಗ್ಲಿಶ್ ಸಿನೆಮಾ ನೋಡಿದ ಅನುಭವವಾಯಿತು. ಈ ಚಿತ್ರ ಸಾಮಾನ್ಯರಿಗಲ್ಲ. ಕನ್ನಡದ ಮಟ್ಟಿಗೆ ಇದು landmark.