ನೆಲದ ಮರೆಯ ನಿದಾನ-1

ನೆಲದ ಮರೆಯ ನಿದಾನ-1

ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ ಹೊಣೆ ಹೊತ್ತಾಗ ಕೊಟ್ಟ ಒಂದು ಐಡಿಯಾ ಈ ಬರೆಹಗಳಿಗೆ ಕಾರಣ. ಇವುಗಳು ನೆಲದ ಮರೆಯ ನಿದಾನ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿಯ ಕೃಷಿ ಸಂಪದ ಪುಟದಲ್ಲಿ ಪ್ರಕಟವಾಗಿದ್ದವು. ಇವು ನಿಜಕ್ಕೂ ಏನು? ಅದು ನನಗೂ ಗೊತ್ತಿಲ್ಲ. ಇವುಗಳನ್ನು ಹರಿಪ್ರಸಾದ್‌ ಅವರಿಗೆ ಓದಲು ಕೊಟ್ಟಾಗ `ನನಗೆ ಇಷ್ಟವಾಗಲಿಲ್ಲ' ಎಂದಿದ್ದರು. ಹಾಗೆಯೇ ಇನ್ನು ಕೆಲವು ಗೆಳೆಯರು ಇಷ್ಟಪಟ್ಟಿದ್ದರು. ಈಗಲೂ ನಾನೊಂದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ದೇನೆ. ಎಲ್ಲರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ.

 

ಇದು ನಡೆದದ್ದು 50 ಕೋಟಿ ವರ್ಷಗಳ ಹಿಂದೆ. ಒಂದು ಹುಲ್ಲು ಕೂಡಾ ಗಾಳಿಗೆ ಅಲುಗುತ್ತಿರಲಿಲ್ಲ. ಹಕ್ಕಿಗಳ ಗುಂಪು ಆಕಾಶದಲ್ಲಿ ಚಿತ್ರ ಬರೆಯುತ್ತಿರಲಿಲ್ಲ. ಒಂದು ಜೀರುಂಡೆಯ ಸದ್ದೂ ಇರಲಿಲ್ಲ. ಇವೆಲ್ಲಾ ಕೋಟ್ಯಂತರ ವರ್ಷಗಳಷ್ಟು ಮುಂದಿನ ಭವಿಷ್ಯದ ಗರ್ಭದಲ್ಲಿ ಅಡಗಿದ್ದವು. ಮನುಷ್ಯನೆಂಬವನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಎಲ್ಲಡೆಯೂ ಗಾಳಿಗೆ ಹಾರುವ ದೂಳು ಮಾತ್ರ. ಇಂಥ ದಿನಗಳಲ್ಲಿ ಒಬ್ಬ ಮಾನವಶಾಸ್ತ್ರಜ್ಞ ಯಾರನ್ನಾದರೂ ಸಂದರ್ಶಿಸಿ ತನ್ನ ಸಂಶೋಧನೆ ಆರಂಭಿಸುವ ಉದ್ದೇಶದಿಂದ ಅಲೆಯುತ್ತಿದ್ದ.(ಮನುಷ್ಯ ಇರಲಿಲ್ಲ ಎಂದ ಮೇಲೆ ಈ ಮಾನವಶಾಸ್ತ್ರಜ್ಞ ಎಲ್ಲಿಂದ ಬಂದ ಎಂಬ ಪ್ರಶ್ನೆ ಬೇಡ. ಮಾನವಶಾಸ್ತ್ರಜ್ಞನಿಲ್ಲದೆ ಪ್ರಪಂಚ ಪೂರ್ಣವಾಗುವುದಿಲ್ಲ, ಅಷ್ಟೆ!)
ಹೀಗೆ ಅಲೆಯುತ್ತಿದ್ದ ಈ ಸಂಶೋಧಕನಿಗೆ ಸಿಕ್ಕದ್ದು ಲೋಳೆ ಮೀನು. ವಿಶಾಲವಾಗಿ ಹರಡಿದ್ದ ಸಮುದ್ರದ ದಂಡೆಯಲ್ಲಿ ಕಂಡ ಈ ಲೋಳೆ ಮೀನನ್ನು ಸಂಶೋಧಕ ಮಾತನಾಡಿಸಿದ. ಉಭಯ ಕುಶೋಲಪರಿ ಆಯಿತು. ಕೆಲವೇ ಕ್ಷಣಗಳಲ್ಲಿ ಇಬ್ಬರೂ ಗೆಳೆಯರಾಗಿಬಿಟ್ಟರು. ಸಂಶೋಧಕ ತನ್ನ ಪ್ರಶ್ನಾವಳಿಯನ್ನು ಹೊರತೆಗೆದು ವಿಜ್ಞಾನಿಯ ಗತ್ತಿನಲ್ಲಿ ಮಾತಿಗಾರಂಭಿಸಿದ.
`ನಾನೊಬ್ಬ ಅಂತ್ರೋಪಾಲಜಿಸ್ಟ್‌. ನನ್ನ ಪ್ರಶ್ನೆಗೆ ಉತ್ತರಿಸಿದರೆ ಸಂಶೋಧನೆಗೆ ಅನುಕೂಲವಾಗುತ್ತೆ'
`ಹೌದೇ, ಕೇಳಿ'
`ಜಗತ್ತಿನ ಸೃಷ್ಟಿಯ ಬಗ್ಗೆ ನಿಮಗೆ ಗೊತ್ತಿರುವ ಕಥೆ ಹೇಳಿ'
`ಕಥೆ...?'
`ಅದೇ ಜಗತ್ತು ಹೇಗೆ ಸೃಷ್ಟಿಯಾಯಿತು ಎಂಬುದರ ಬಗ್ಗೆ ನೀವು ಹೇಳುವ ಕಥೆಗಳು'
`ಅಂಥ ಕಥೆಗಳೇನೂ ಇಲ್ಲ. ಯಾಕೆಂದ್ರೆ ನಾವು ತುಂಬಾ ತಾರ್ಕಿಕರು. ನಮ್ಮದೇನಿದ್ದರೂ ವೈಜ್ಞಾನಿಕವಾದ ತಿಳುವಳಿಕೆ ಮಾತ್ರ'
`ಸರಿ ಅದನ್ನೇ ಹೇಳಿ'
`ಕೋಟ್ಯಂತರ ವರ್ಷಗಳ ಕಾಲ ಇಲ್ಲಿ ಯಾವ ಜೀವಿಗಳೂ ಇರಲಿಲ್ಲ. ಕೊನೆಗೆ ಜೀವಿ ಕಾಣಿಸಿಕೊಂಡಿತು'
`ಸರಿ ನಿಮ್ಮ ಕಥೆಯ ಪ್ರಕಾರ... ಕ್ಷಮಿಸಿ.. ನಿಮ್ಮ ವೈಜ್ಞಾನಿಕ ತಿಳುವಳಿಕೆಯ ಪ್ರಕಾರ ಆ ಜೀವಿ ಎಲ್ಲಿ ಕಾಣಿಸಿಕೊಂಡಿತು'
ಈ ಪ್ರಶ್ನೆಯಿಂದ ಸ್ವಲ್ಪ ಗೊಂದಲಕ್ಕೆ ಸಿಲುಕಿದ ಲೋಳೆ ಮೀನು `ಅಂದರೆ ನಿಖರವಾಗಿ ಯಾವ ಜಾಗದಲ್ಲಿ ಕಾಣಿಸಿಕೊಂಡಿತು ಎಂದೇ?' ಎಂದು ಪ್ರಶ್ನಿಸಿತು.
ಮಾನವಶಾಸ್ತ್ರಜ್ಞ ವಿವರಿಸಿದ; `ಹಾಗಲ್ಲ ಈ ಜೀವಿ ಕಾಣಿಸಿಕೊಂಡದ್ದು ನೀರಿನಲ್ಲೋ ಅಥವಾ ಭೂಮಿಯ ಮೇಲೋ?'
`ಭೂಮಿ..? ಹಾಗಂದ್ರೆ'
ಮಾನವ ಶಾಸ್ತ್ರಜ್ಞ ತಾನು ಕುಳಿತಿದ್ದ ನೆಲ ಮತ್ತು ಸುತ್ತ ಮುತ್ತಲಿನ ಪ್ರದೇಶವನ್ನು ತೋರಿಸಿ `ಅದು' ಎಂದ.
`ಓ ಅದನ್ನು ಭೂಮಿ ಎನ್ನುತ್ತೀರಾ... ಅದು ಈ ನೀರು ತುಂಬಿರುವ ಬೋಗುಣಿಯ ಅಂಚು'.
`ಸರಿ ಅಥವಾಯ್ತು. ಮುಂದುವರಿಸಿ...'
ಲಕ್ಷಾಂತರ ವರ್ಷಗಳ ಕಾಲ ಈ ಏಕಕೋಶ ಜೀವಿಗಳು ನೀರಿನಲ್ಲಿ ಅಸಹಾಯಕವಾಗಿ ಅಲೆಯುತ್ತಿದ್ದವು. ಅಮೀಬಾಗಳಂಥ ಜೀವಿಗಳು. ಮತ್ತೆ ನಿಧಾನವಾಗಿ ಸ್ವಲ್ಪ ಸಂಕೀರ್ಣ ಜೀವಿಗಳು ಬಂದವು ಹೀಗೆ... ಕೊನೆಗೊಮ್ಮೆ ಲೋಳೆಮೀನು ಬಂತು...'
ಮಾತು ಮುಗಿಯುವ ವೇಳೆಗೆ ಲೋಳೆ ಮೀನು ಹೆಮ್ಮೆಯಿಂದ ಬೀಗುತ್ತಿತ್ತು. ಇದು ಡ್ಯಾನಿಯಲ್‌ ಕ್ವಿನ್‌ನ ಕಾದಂಬರಿಯೊಂದರಲ್ಲಿರುವ ಕಥೆ. ಇದು ಕಥೆಯಷ್ಟೇ ವಾಸ್ತವ ಕೂಡಾ. ವೈಜ್ಞಾನಿಕವಾಗಿ ಚಿಂತಿಸುವ, ಕಾರ್ಯ ಕಾರಣಗಳನ್ನು ಹುಡುಕುವ ಮನುಷ್ಯ ವಿಶ್ವದ ಕುರಿತು ಅರಿತಿರುವುದು ಲೋಳೆಮೀನಿನಷ್ಟೇ. ಮನುಷ್ಯನ ವೈಜ್ಞಾನಿಕ ತಿಳುವಳಿಕೆಯಲ್ಲೂ ಕೊನೆಗೆ ಮನುಷ್ಯ ಬರುತ್ತಾನೆ. ಉಳಿದೆಲ್ಲವೂ ತನಗಾಗಿ ಸೃಷ್ಟಿಯಾಗಿವೆ ಎಂದು ಭಾವಿಸುತ್ತಾನೆ. ಇದಕ್ಕೆ ಭಿನ್ನವಾಗಿ ಅಖಿಲಾಂಡಕೋಟಿ ಬ್ರಹ್ಮಾಂಡದ ಒಂದು ಭಾಗವಾಗಿ ನಿಂತು ಗ್ರಹಿಸಹೊರಟರೆ ಅರ್ಥವಾಗುವುದೇ ಬೇರೆ.

Rating
No votes yet

Comments