ಹರಿದ ಪುಸ್ತಕ - ಭಾಗ ೨
ಅಪ್ಪ ಎಂದೆ ಅಷ್ಟೇ ಕೆನ್ನೆಗೆ ಎರಡು ಏಟು ಕೊಟ್ಟು ಮನೆಗೆ ಬರೋದು ಬಿಟ್ಟು ಇಲ್ಲಿ ಶೂಟಿಂಗ್ ನೋಡ್ತಾ ನಿಂತಿದ್ಯ. ನಡಿ ಮನೆಗೆ ಓದಿಲ್ಲ ಕಥೆಯಿಲ್ಲ ನಿನಗೆ ಸಿನೆಮಾ ಬೇಕಾ ಎಂದು ದರದರ ಎಳೆದುಕೊಂಡು ಮನೆಗೆ ಕರೆದುಕೊಂಡು ಬಂದರು.
ಅಂದು ರಾತ್ರಿ ನನಗೆ ಊಟ ಹಾಕಲಿಲ್ಲ. ನಾನು ನನ್ನ ಕೋಣೆಯಲ್ಲಿ ಅಳುತ್ತಾ ಮಲಗಿದ್ದೆ. ಆಚೆ ಹಾಲಿನಲ್ಲಿ ಅಪ್ಪ ಅಮ್ಮ ಮಾತಾಡುತ್ತಿದ್ದರು. ಇವಳನ್ನು ಹೀಗೆ ಬಿಟ್ಟರೆ ಮುಂದೆ ಬಹಳ ಕಷ್ಟ. ಮೊದಲು ಇವಳಿಗೊಂದು ಗಂಡು ತಂದು ಮದುವೆ ಮಾಡಿಬಿಡಬೇಕು. ನಾಳೆನೆ ಹೋಗಿ ವಿಚಾರಿಸಿ ನೋಡುತ್ತೇನೆ ಎಂದು ಅಪ್ಪ ಹೇಳುತ್ತಿದ್ದರು. ನನಗೆ ಒಂದು ಕಡೆ ಸಿನೆಮಾ ಮತ್ತೊಂದು ಕಡೆ ಮದುವೆ ನೆನೆಸಿಕೊಂಡು ಅಳು ಇನ್ನೂ ಜಾಸ್ತಿ ಆಯಿತು. ಮಾರನೆ ದಿನ ಅಪ್ಪ ನನ್ನನ್ನು ಕರೆದುಕೊಂಡು ಟೌನ್ ನಲ್ಲಿರುವ ಅಪ್ಪನ ಪರಿಚಯಸ್ಥರ ಮನೆಗೆ ಕರೆದೊಯ್ದು ಅವರಿಗೆ ನನ್ನನ್ನು ತೋರಿಸಿ ನೋಡಪ್ಪ ಇವಳಿಗೊಂದು ಗಂಡು ಇದ್ದರೆ ನೋಡು. ಆದಷ್ಟು ಬೇಗ ಮದುವೆ ಮಾಡಿಬಿಡಬೇಕು ಎಂದರು. ಅದಕ್ಕೆ ಆ ವ್ಯಕ್ತಿ ಏನಪ್ಪಾ ಇಷ್ಟೊಂದು ಆತುರ ಎಂದಿದ್ದಕ್ಕೆ ನಡಿ ಮಾತಾಡೋಣ ಎಂದು ಒಳಗೆ ಹೋದರು. ನಾನು ಅಲ್ಲೇ ಇದ್ದ ದಿನಪತ್ರಿಕೆಯನ್ನು ಕೈಗೆತ್ತಿಕೊಂಡು ಓದುತ್ತಿದ್ದೆ. ಅಂದು ಶುಕ್ರವಾರವಾದ್ದರಿಂದ ಸಿನೆಮಾ ಸುದ್ದಿಗಳು ಹೆಚ್ಚಿದ್ದವು. ಹಾಗೆ ಹೊಸ ಸಿನೆಮಾಗಳ ಪೋಸ್ಟರ್ ಗಳನ್ನೂ ನೋಡುತ್ತಾ ಪುಟ ತಿರುಗಿಸಿದೆ. ಹೊಸ ಸಿನೆಮಾಗೆ ನಟ ನಟಿಯರು ಬೇಕಾಗಿದ್ದಾರೆ ಎಂಬ ಪ್ರಕಟಣೆ ಕಂಡಿತು. ತಕ್ಷಣ ಆ ಕಡೆ ಈ ಕಡೆ ನೋಡಿ ಆ ಹಾಳೆಯನ್ನು ಹರಿದುಕೊಂಡು ಸಣ್ಣದಾಗಿ ಮಡಚಿ ನನ್ನ ಕೈಯಲ್ಲಿ ಇಟ್ಟುಕೊಂಡೆ. ಅಷ್ಟರಲ್ಲಿ ಒಳಗಿನಿಂದ ಬಂದ ಅಪ್ಪ ಅವರ ಸ್ನೇಹಿತರನ್ನು ಕುರಿತು ಆದಷ್ಟು ಬೇಗ ಒಂದು ಗಂಡು ನೋಡಿ ಪುಣ್ಯ ಕಟ್ಟಿಕೋ ಎಂದು ಹೇಳಿ ಅಲ್ಲಿಂದ ಹೊರಟು ಹಳ್ಳಿಗೆ ಬಂದೆವು. ಅಂದು ರಾತ್ರಿ ಊಟ ಮಾಡಿ ನನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಆ ಹಾಳೆಯನ್ನು ತೆರೆದೆ. ಎಂ.ಎ.ಷಾ ಅರ್ಪಿಸುತ್ತಿರುವ ರೈಸಿಂಗ್ ಫಿಲಂಸ್ ರವರ ಹೊಸ ಸಿನೆಮಾಗೆ ಹೊಸ ನಟ ನಟಿಯರು ಬೇಕಾಗಿದ್ದಾರೆ. ಸಂಪರ್ಕಿಸಿ : ರೂಂ ನಂಬರ್ ೪೨೦, ಎಸ.ಕೆ.ಲಾಡ್ಜ್, ಗಾಂಧಿನಗರ, ಬೆಂಗಳೂರು. ಎಂದಿತ್ತು. ಅಂದು ನಾನು ನನ್ನ ಜೀವನದ ಅತಿ ದೊಡ್ಡ ಕೆಟ್ಟ ನಿರ್ಧಾರ ತೆಗೆದುಕೊಂಡು ಬಿಟ್ಟೆ. ಬೆಳಿಗ್ಗೆ ಕೋಳಿ ಕೂಗುವ ಮುಂಚೆಯೇ ಎದ್ದು ಮೆಲ್ಲಗೆ ಅಡಿಗೆ ಮನೆಗೆ ಹೋಗಿ ಅಮ್ಮ ದುಡ್ಡು ಇಡುತ್ತಿದ್ದ ಡಬ್ಬಿಯಲ್ಲಿ ಕೈ ಹಾಕಿ ಎಷ್ಟು ಸಿಕ್ಕಿತೋ ಅಷ್ಟನ್ನು ತೆಗೆದುಕೊಂಡು ಹಳ್ಳಿಯನ್ನು ಬಿಟ್ಟು ಬೆಂಗಳೂರಿನ ಕಡೆ ಬಸ್ಸನ್ನು ಹತ್ತಿಬಿಟ್ಟೆ. ಮೊದಲನೇ ಬಸ್ ಆದ್ದರಿಂದ ನನ್ನ ಪುಣ್ಯಕ್ಕೆ ಹಳ್ಳಿಯವರು ಯಾರೂ ಇರಲಿಲ್ಲ. ಬಸ್ ಹಳ್ಳಿಯನ್ನು ದಾಟಿ ಹೈವೇಗೆ ಬರುತ್ತಿದ್ದಂತೆ ಮತ್ತೆ ಆ ಹಾಳೆಯನ್ನು ಬಿಡಿಸಿ ಕನಸು ಕಾಣಲು ಶುರು ಮಾಡಿದೆ. ನಾನು ಶಿವಣ್ಣ, ಉಪೇಂದ್ರ, ಗಣೇಶ್, ವಿಜಯ್ ಇವರ ಜೊತೆಯಲ್ಲ ನಾಯಕಿಯಾಗಿ ನಟಿಸಿ ದೊಡ್ಡ ಹೆಸರು ಹಣ ಸಂಪಾದಿಸಿ ಮತ್ತೆ ಹಳ್ಳಿಗೆ ಬಂದು ಅಪ್ಪ ಅಮ್ಮನ ಮುಂದೆ ನನಗೆ ಬಂದ ಅವಾರ್ಡ್ ಗಳನ್ನೆಲ್ಲ ತೋರಿಸಿ ಅವರು ಹೆಮ್ಮೆ ಪಡುವ ಹಾಗೆ ಆಗಬೇಕು ಎಂದೆಲ್ಲ ಕನಸು ಕಾಣುತ್ತಿದ್ದ ಹಾಗೆ ಬಸ್ ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ನಿಂತಿತು.
ಬಸ್ ಇಳಿದು ಯಾರನ್ನೋ ಸಮಯ ಎಷ್ಟು ಎಂದು ಕೇಳಿದ್ದಕ್ಕೆ ಒಂಭತ್ತು ಗಂಟೆ ಎಂದರು. ಅಲ್ಲೇ ಬಸ್ ನಿಲ್ದಾಣದಲ್ಲಿ ಇದ್ದ ಹೋಟೆಲ್ ಗೆ ಹೋಗಿ ಒಂದು ಪ್ಲೇಟ್ ಇಡ್ಲಿ ವಡೆ ತಿಂದು ಬಸ್ ನಿಲ್ದಾಣದಿಂದ ಆಚೆ ಬಂದೆ. ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ಬಂದದ್ದು. ನಮ್ಮ ಹಳ್ಳಿಯಲ್ಲಿ ಎತ್ತ ನೋಡಿದರೂ ಹಚ್ಚ ಹಸಿರು, ಬೆಟ್ಟ ಗುಡ್ಡಗಳು, ಕೆರೆ ಕಾಲುವೆಗಳು, ಹಸುಗಳು, ಸೆಗಣಿ, ಹೊಲಗಳು ಆದರೆ ಇಲ್ಲಿ ಎಲ್ಲಿ ನೋಡಿದರೂ ಎತ್ತರೆತ್ತರದ ಕಟ್ಟಡಗಳು, ಎಲ್ಲಿ ನೋಡಿದರೂ ಜನ ಜನ, ವಾಹನಗಳು, ಧೂಳು, ಹೊಗೆ ನಮ್ಮ ಹಳ್ಳಿಯೇ ಎಷ್ಟೋ ಚೆನ್ನ ಎಂದುಕೊಂಡೆ. ಮರುಕ್ಷಣದಲ್ಲಿ ಅಪ್ಪ ಅಮ್ಮ ನೆನಪಾದರು, ಅವರು ಎಷ್ಟು ನೊಂದುಕೊಂಡಿದ್ದಾರೋ ನಾನು ಇಲ್ಲದೆ ಏನೇನೋ ಯೋಚನೆಗಳು ಸುಳಿದಾಡುತ್ತಿದ್ದವು. ಹಿಂದಿನಿಂದ ಬಸ್ ಹಾರನ್ ಸದ್ದು ಕೇಳಿ ವಾಸ್ತವಕ್ಕೆ ಬಂದೆ. ಅಕ್ಕಪಕ್ಕ ನಿಂತಿದ್ದ ಗಂಡಸರೆಲ್ಲ ಅದೇನೋ ಕೆಟ್ಟದಾಗಿ ನೋಡುತ್ತಿದ್ದಾರೆ ಎಂದೆನಿಸಿತು. ಇದ್ಯಾಕೆ ಹೀಗೆ ನೋಡುತ್ತಾರೆ ಇವರೆಲ್ಲ ಅಂದುಕೊಂಡು ಅಲ್ಲಿ ನಿಂತಿದ್ದ ಒಬ್ಬ ವಯಸ್ಸಾದ ವ್ಯಕ್ತಿಯನ್ನು ನನ್ನ ಕೈಲಿದ್ದ ಪೇಪರ್ ತೋರಿಸಿ ಗಾಂಧಿನಗರ ಎಲ್ಲಿ ಇರುವುದು ಎಂದೆ. ಅದಕ್ಕೆ ಆ ವ್ಯಕ್ತಿ ಅಲ್ಲಿ ಇದ್ದ ಸುರಂಗ ಮಾರ್ಗ ತೋರಿಸಿ ಇದರಲ್ಲಿ ಇಳಿದು ಆ ಕಡೆ ಹತ್ತಿ ನೇರ ಹೋಗಿ ಅಲ್ಲಿ ಯಾರನ್ನಾದರೂ ಕೇಳು ಹೇಳುತ್ತಾರೆ ಎಂದರು. ಸುರಂಗ ಮಾರ್ಗದ ಬಳಿ ಬಂದರೆ ಅಲ್ಲಿ ಒಂದಿಬ್ಬರು ಗಂಡಸರೂ ಅಲ್ಲದ ಹೆಂಗಸರೂ ಅಲ್ಲದ ವ್ಯಕ್ತಿಗಳು ಹೋಗಿ ಬರುತ್ತಿದ್ದ ಜನಗಳ ಹತ್ತಿರ ಕೈ ಚಾಚುತ್ತಿದ್ದರು. ನಾನು ಪಕ್ಕದಿಂದ ಹೋಗಿ ಮೆಟ್ಟಿಲು ಇಳಿದು ಮೇಲಕ್ಕೆ ಹತ್ತಿ ಸೀದಾ ಹೋದೆ ಅಲ್ಲಿ ಒಬ್ಬ ಆಟೋದವನನ್ನು ಗಾಂಧಿನಗರಕ್ಕೆ ಹೇಗೆ ಹೋಗಬೇಕು ಎಂದು ಕೇಳಿದೆ ಆತ ಬನ್ನಿ ಕರೆದುಕೊಂಡು ಹೋಗುತ್ತೇನೆ ಎಂದು ಆಟೋ ಹತ್ತಿಸಿಕೊಂಡು ಅಲ್ಲಿ ಇಲ್ಲಿ ಸುತ್ತಾಡಿಸಿ ಕೊನೆಗೆ ಎಸ.ಕೆ ಲಾಡ್ಜ್ ಮುಂದೆ ತಂದು ನಿಲ್ಲಿಸಿ ಐವತ್ತು ರೂ ತೆಗೆದುಕೊಂಡ.
ನಾನು ಲಾಡ್ಜ್ ಒಳಗೆ ಕಾಲಿಟ್ಟೆ ಅಲ್ಲಿ ಯಾರೊಬ್ಬರೂ ಕಾಣಲಿಲ್ಲ. ಅದೊಂದು ಹಳೆ ಕಾಲದ ಕಟ್ಟಡದ ಹಾಗೆ ಕಾಣುತ್ತಿತ್ತು. ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತುಕೊಂಡು ಸುತ್ತಲೂ ನೋಡುತ್ತಿದ್ದೆ. ಮುಂಗಾರು ಮಳೆ, ಆಕಸ್ಮಿಕ, ಓಂ, ಇನ್ನೊಂದೆರಡು ಚಿತ್ರದ ಪೋಸ್ಟರ್ ಗಳನ್ನು ಅಲ್ಲಿನ ಗೋಡೆಗಳ ಮೇಲೆ ಅಂಟಿಸಿದ್ದರು. ಮೆಟ್ಟಿಲ ಪಕ್ಕದ ಗೋಡೆಯ ಮೇಲೆಲ್ಲಾ ತಂಬಾಕು ಉಗಿದಿರುವ ಕಲೆಗಳು ಕಾಣುತ್ತಿತ್ತು. ಅಷ್ಟರಲ್ಲಿ ಒಂದು ಹೆಂಗಸು ಹಾಗೂ ಗಂಡಸು ಮೆಟ್ಟಿಲು ಇಳಿದುಕೊಂಡು ಬರುತ್ತಿದ್ದರು. ಆ ಹೆಂಗಸು ಗಂಡಸಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಳು. ಕೆಳಗಿಳಿದ ಆ ಹೆಂಗಸು ಲೋ ಸಿದ್ದ,,ಸಿದ್ದ ಲೋ ಬೊ....ಮಗನೆ ಸಿದ್ದ ಬಾರೋ ಇಲ್ಲಿ.. ಇನ್ನೊಂದು ಸಲ ಇಂಥವರನ್ನು ಕರೆದುಕೊಂಡು ಬಂದರೆ ಸಾಯಿಸಿಬಿಡ್ತೀನಿ ಎಂದು ಬಾಯಲ್ಲಿದ್ದ ತಂಬಾಕನ್ನು ಗೋಡೆಯ ಮೇಲೆ ಉಗಿದು ಆಚೆ ಹೊರಟು ಹೋದಳು. ಆ ಗಂಡಸು ಸುಮ್ಮನೆ ತಲೆ ತಗ್ಗಿಸಿ ಹೊರಟು ಹೋದ. ನನಗೆ ಒಂದು ಕ್ಷಣ ಭಯವಾಯಿತು. ಎದ್ದು ಹೊರಟು ಹೋಗೋಣ ಎಂದೆನಿಸಿದರೂ ಮತ್ತೆ ಸಮಾಧಾನ ತಂದು ಕೊಂಡು ಆ ಹುಡುಗನನ್ನು ಕರೆದು ಕೈಲಿದ್ದ ಚೀಟಿ ತೋರಿಸಿ ಈ ರೂಂ ಗೆ ಯಾವ ಕಡೆ ಹೋಗಬೇಕು ಎಂದು ಕೇಳಿದೆ. ಆ ಹುಡುಗ ಆ ಚೀಟಿ ನೋಡಿ ನಕ್ಕು ಮೂರನೇ ಫ್ಲೋರಿಗೆ ಹೋಗಿ ಎಂದು ಹೇಳಿ "ಕುರಿ....ಕುರಿ" ಎಂದುಕೊಂಡು ಹೊರಟು ಹೋದ.
ನಾನು ಮೆಟ್ಟಿಲನ್ನು ಏರಿಕೊಂಡು ಮೂರನೇ ಮಹಡಿಗೆ ಬಂದೆ. ಆ ಇಡೀ ಮಹಡಿ ಒಂದು ರೀತಿ ಕೆಟ್ಟ ದುರ್ನಾತ ಬೀರುತ್ತಿತ್ತು. ಅಲ್ಲಲ್ಲಿ ತಂಬಾಕು ಪಟ್ಟಣಗಳು, ಬೀಡಿ ತುಂಡುಗಳು, ಖಾಲಿ ಬಾಟಲಿಗಳು ಬಿದ್ದಿದ್ದವು. ನಾನು ಹೆದರಿಕೊಂಡೇ ರೂಂ ನಂಬರ್ ೪೨೦ ಹುಡುಕುತ್ತ ಬಂದೆ. ಆ ಮಹಡಿಯ ಕೊನೆಯಲ್ಲಿ ಇತ್ತು ಆ ಕೊಠಡಿ. ಆಚೆ ಇಂದ ಕದವನ್ನು ತಟ್ಟಿದೆ. ಎರಡು ಮೂರು ಬಾರಿ ತಟ್ಟಿದ ಮೇಲೆ ಕದ ತೆರೆದುಕೊಂಡಿತು. ಒಳಗಿನಿಂದ ಸಿಗರೇಟ್ ನ ಹೊಗೆ ಆಚೆ ಬಂತು. ಒಳಗಿನಿಂದ ಕಪ್ಪಗೆ ದಪ್ಪಗೆ ಇದ್ದ ವ್ಯಕ್ತಿಯೊಬ್ಬ ಆಚೆ ಬಂದು ಏನು ಬೇಕು ಎಂದ. ಆತನ ಬಾಯಿಂದ ಸಾರಾಯಿ ವಾಸನೆ ಹೊಡೆಯುತ್ತಿತ್ತು. ಆತನಿಗೆ ಕೈಲಿದ್ದ ಚೀಟಿ ತೋರಿಸಿದೆ. ಆತ ತೂರಾಡುತ್ತ ಚೀಟಿ ನೋಡಿ ನನ್ನನ್ನು ಅಡಿಯಿಂದ ಮುಡಿವರೆಗೂ ನುಂಗುವ ಹಾಗೆ ನೋಡಿ ಈಗಲ್ಲ. ಡೈರೆಕ್ಟರ್ ಸಾಯಂಕಾಲ ಬರ್ತಾರೆ ಅವಾಗ ಬಾ ಎಂದ. ತಕ್ಷಣ ಅಲ್ಲಿಂದ ಹೊರಟು ಕೆಳಗಿಳಿದು ಬಂದು ಇದ್ಯಾಕೋ ಸರಿ ಹೋಗುತ್ತಿಲ್ಲ ಸುಮ್ಮನೆ ಹಳ್ಳಿಗೆ ಹೋಗಿಬಿಡೋಣ ಎಂದು ನೇರ ಬಸ್ ಸ್ಟ್ಯಾಂಡ್ ಗೆ ಬಂದೆ. ಅಲ್ಲಿ ನಮ್ಮ ಹಳ್ಳಿಗೆ ಹೋಗುವ ಬಸ್ ಬಂದಿತ್ತು. ಅದರಿಂದ ನಮ್ಮಪ್ಪ ಇಳಿಯುತ್ತಿದ್ದರು. ಅವರು ನನ್ನನ್ನು ಗಮನಿಸಿರಲಿಲ್ಲ. ಅವರ ಮುಖ ಕೆಂಪಾಗಿ ಕೋಪಗೊಂಡಂತೆ ಕಂಡು ಬರುತ್ತಿತ್ತು. ಯಾಕೋ ಅವರನ್ನು ಎದುರಿಸುವ ಶಕ್ತಿ ನನಗಿಲ್ಲ ಎನಿಸಿ ಅಲ್ಲಿಂದ ಮತ್ತೆ ಓಡಿ ಲಾಡ್ಜ್ ಬಳಿ ಬಂದು ಬಿಟ್ಟೆ. ಅಲ್ಲೇ ಕುರ್ಚಿಯ ಮೇಲೆ ಕುಳಿತು ಹೋಗಿ ಬರುವವರನ್ನೆಲ್ಲ ನೋಡುತ್ತಿದ್ದೆ. ಎಲ್ಲರೂ ಒಂದು ರೀತಿ ವಿಚಿತ್ರವಾಗಿ ನೋಡುತ್ತಿದ್ದರು. ಎಲ್ಲೋ ತಪ್ಪು ಮಾಡುತ್ತಿದ್ದೇನ ಎಂದು ಅನಿಸಿದರೂ ಅಪ್ಪನ ಕೋಪವನ್ನು ನೆನೆಸಿಕೊಂಡು ಇದೆ ಪರವಾಗಿಲ್ಲ ಎಂದುಕೊಂಡೆ. ಎಲ್ಲಿ ಆಚೆ ಹೋದರೆ ಅಪ್ಪನ ಕೈಗೆ ಸಿಕ್ಕು ಬಿಡುತ್ತೀನೋ ಎಂಬ ಭಯದಿಂದ ಊಟ ಸಹ ಮಾಡದೆ ಅಲ್ಲೇ ಕುಳಿತಿದ್ದೆ.
ಮು೦ದುವರಿಯುವುದು.....
Comments
ಉ: ಹರಿದ ಪುಸ್ತಕ - ಭಾಗ ೨
In reply to ಉ: ಹರಿದ ಪುಸ್ತಕ - ಭಾಗ ೨ by venkatb83
ಉ: ಹರಿದ ಪುಸ್ತಕ - ಭಾಗ ೨