ಹರಿದ ಪುಸ್ತಕ - ಭಾಗ ೩
ಎಲ್ಲರೂ ಒಂದು ರೀತಿ ವಿಚಿತ್ರವಾಗಿ ನೋಡುತ್ತಿದ್ದರು. ಎಲ್ಲೋ ತಪ್ಪು ಮಾಡುತ್ತಿದ್ದೇನ ಎಂದು ಅನಿಸಿದರೂ ಅಪ್ಪನ ಕೋಪವನ್ನು ನೆನೆಸಿಕೊಂಡು ಇದೆ ಪರವಾಗಿಲ್ಲ ಎಂದುಕೊಂಡೆ. ಎಲ್ಲಿ ಆಚೆ ಹೋದರೆ ಅಪ್ಪನ ಕೈಗೆ ಸಿಕ್ಕು ಬಿಡುತ್ತೀನೋ ಎಂಬ ಭಯದಿಂದ ಊಟ ಸಹ ಮಾಡದೆ ಅಲ್ಲೇ ಕುಳಿತಿದ್ದೆ. ಅಷ್ಟರಲ್ಲಿ ಮೇಲಿಂದ ಒಬ್ಬ ವ್ಯಕ್ತಿ ಕೆಳಗೆ ಬಂದು ನನ್ನ ಬಳಿ ಬಂದು ನೀನೆನ ಸಿನೆಮಾದಲ್ಲಿ ನಟಿಸಲು ಬಂದಿರುವುದು ಬಾ ಮೇಲೆ ನಿರ್ದೇಶಕರು ಬಂದಿದ್ದಾರೆ ನಿನ್ನನು ಕರೆಯುತ್ತಿದ್ದಾರೆ ಎಂದು ನನ್ನನ್ನು ಕರೆದುಕೊಂಡು ಕೊಠಡಿಗೆ ಕರೆದುಕೊಂಡು ಹೋದ.
ಅಷ್ಟರಲ್ಲಿ ನನಗೆ ನಿದ್ದೆ ಎಳೆಯುತ್ತಿತ್ತು. ಸಮಯ ನೋಡಿದರೆ ಹನ್ನೆರಡಕ್ಕೆ ಐದು ನಿಮಿಷ ಎಂದು ತೋರಿಸುತ್ತಿತ್ತು. ಓಹೋ ಇದರಲ್ಲಿ ಮುಳುಗಿ ಸಮಯವೇ ಗೊತ್ತಾಗಿಲ್ಲ. ಮೊದಲು ಮಲಗೋಣ ನಾಳೆ ಹೇಗಿದ್ದರೂ ಭಾನುವಾರ ಬೇರೆ ಏನೂ ಕೆಲಸವಿಲ್ಲ ನಾಳೆ ಓದಿದರಾಯಿತು ಎಂದು ಡೈರಿಯನ್ನು ಮುಚ್ಚಿಟ್ಟು ಮಲಗಿಬಿಟ್ಟೆ. ತೇರಿ ಮೇರಿ ಮೇರಿ ತೇರಿ ಪ್ರೇಂ ಕಹಾನಿ ಹೇ ಮುಶ್ಕಿಲ್ ಎಂದು ನನ್ನ ಮೊಬೈಲ್ ಹೊಡೆದುಕೊಳ್ಳುತ್ತಿತ್ತು. ಕಣ್ಣು ಬಿಟ್ಟು ಗಡಿಯಾರದ ಕಡೆ ನೋಡಿದರೆ ಹತ್ತು ಗಂಟೆ ತೋರಿಸುತ್ತಿತ್ತು. ರಾತ್ರಿ ತಡವಾಗಿ ಮಲಗಿದ್ದರಿಂದ ಬಹಳ ಹೊತ್ತು ಮಲಗಿಬಿಟ್ಟಿದ್ದೆ. ಫೋನ್ ನೋಡಿದರೆ ನಾಲ್ಕು ಮಿಸ್ಡ್ ಕಾಲ್ ಇತ್ತು. ನಾಲ್ಕೂ ಸಹ ಏರ್ಟೆಲ್ ಕಸ್ಟಮರ್ ಕೇರ್ನಿಂದ ಬಂದಿದ್ದಾಗಿತ್ತು. ಇವರಿಗೆ ಬೇರೆ ಕೆಲಸವೇ ಇಲ್ಲ. ಭಾನುವಾರವೂ ಬಿಡುವುದಿಲ್ಲ ಎಂದುಕೊಂಡು ಹಾಸಿಗೆಯಿಂದ ಎದ್ದೆ. ಸ್ನಾನ ತಿಂಡಿ ಎಲ್ಲ ಮುಗಿಸಿ ರೂಮಿಗೆ ಬಂದು ಮತ್ತೆ ಡೈರಿ ಕೈಗೆ ತೆಗೆದುಕೊಂಡೆ. ಅಷ್ಟರಲ್ಲಿ ಮತ್ತೆ ವಿಕ್ರಂ ಕರೆ ಮಾಡಿದ. ನನ್ನ ಮನೆ ಹತ್ತಿರ ಬಾ ಮಜೆಸ್ಟಿಕ್ ಗೆ ಹೋಗಿ ಬರೋಣ ಸ್ವಲ್ಪ ಕೆಲಸ ಇದೆ ಎಂದ. ನಾನು ಸರಿ ನಡಿ ಎಂದೆ. ಇಬ್ಬರೂ ಬೈಕ್ ಏರಿ ಮಜೆಸ್ಟಿಕ್ ಗೆ ಬಂದು ಸಂಗಂ ಕಾಂಪ್ಲೆಕ್ಸ್ ಮುಂದೆ ಗಾಡಿ ನಲ್ಲಿಸಿ ಹಾಗೆ ನಡೆದುಕೊಂಡು ಹೋದೆವು. ಎಲ್ಲೋ ಹೋಗಬೇಕು ಏನೋ ಕೆಲಸ ನಿನಗೆ ಎಂದೆ. ನ್ಯಾಷನಲ್ ಮಾರ್ಕೆಟ್ ಗೆ ಹೋಗಬೇಕು, ಶೂ ತಗೋಬೇಕು ಎಂದು ಕರೆದುಕೊಂಡು ಹೋದ. ನ್ಯಾಷನಲ್ ಮಾರ್ಕೆಟ್ ನ ಬಳಿ ಹೋಗಿ ಅವನಿಗೆ ಹೇಳಿದೆ ನೀನು ಒಳಗೆ ಹೋಗಿ ಬಾ ನಾನು ಇಲ್ಲೇ ಇರುತ್ತೇನೆ ಎಂದು. ಅವನು ಒಳಗೆ ಹೋಗುತ್ತಿದ್ದ ಹಾಗೆ ನಾನು ಗಾಂಧೀ ನಗರದ ಕಡೆ ನುಗ್ಗಿದೆ. ಎಸ.ಕೆ. ಲಾಡ್ಜ್ ಎಲ್ಲಿ ಇರುವುದು ಎಂದು ಹುಡುಕುತ್ತ ಹೋದೆ. ಅಲ್ಲೇ ರಸ್ತೆಯ ಕೊನೆಯಲ್ಲಿ ಕಂಡಿತು ಆ ಲಾಡ್ಜ್. ಡೈರಿಯಲ್ಲಿ ಆ ಹುಡುಗಿ ಬರೆದಿರುವ ಹಾಗೆಯೇ ಇದೆ ಆ ಕಟ್ಟಡ. ಹಳೆ ಕಾಲದ, ಬಣ್ಣ ಮಾಸಿದ ಕಟ್ಟಡ. ಒಳಗೆ ಹೋಗಿ ನೋಡಿದರೆ ಆ ಕಟ್ಟಡ ಬರೀ ಅವ್ಯವಹಾರಗಳಿಗೆ ಮಾತ್ರ ಬಳಸುವ ಹಾಗೆ ಕಾಣುತ್ತಿತ್ತು. ನಾನು ಮೆಟ್ಟಿಲೇರಿ ಕೊಂಡು ಮೂರನೇ ಮಹಡಿಗೆ ಬಂದು ರೂ ನಂಬರ್೪೨೦ ರ ಮುಂದೆ ನಿಂತೆ. ಆ ಕೊಠಡಿಗೆ ಬೀಗ ಜಡಿದಿತ್ತು. ಅಷ್ಟರಲ್ಲಿ ನನ್ನ ಮೊಬೈಲ್ ರಿಂಗಣಿಸಿತು. ಎಲ್ಲಿದ್ಯೋ ಎಂದು ಕಿರುಚುತ್ತಿದ್ದ ವಿಕ್ರಂ. ಇಲ್ಲೇ ಇದ್ದೀನಿ ಬಂದೆ ಎಂದು ಚಕಚಕನೆ ಮೆಟ್ಟಿಲು ಇಳಿದು ನ್ಯಾಷನಲ್ ಮಾರ್ಕೆಟ್ ಬಳಿ ಬಂದೆ. ಎಲ್ಲೋ ಹೋಗಿದ್ದೆ ಇಷ್ಟು ಹೊತ್ತು ಎಂದ. ನಾನು ಏನೂ ಇಲ್ಲ ಸುಮ್ಮನೆ ಒಂದು ವಾಕ್ ಹೋಗಿದ್ದೆ ಎಂದು ಹೇಳಿ ಅಲ್ಲಿಂದ ಹೊರಟು ಹೋಟೆಲ್ ಗೆ ಹೋಗಿ ಊಟ ಮಾಡಿ ಅವನು ನನ್ನನ್ನು ರೂಂ ಬಳಿ ಬಿಟ್ಟು ಹೊರಟು ಹೋದ.
ನಾನು ರೂಂ ಗೆ ಬಂದು ಡೈರಿ ಕೈಗೆತ್ತಿಕೊಂಡೆ.
ರೂಂ ನಂಬರ್ ೪೨೦ ಬೆಳಿಗ್ಗೆ ಇದ್ದ ಹಾಗೆ ಇರಲಿಲ್ಲ. ಒಳಗಿನಿಂದ ಹೊಗೆ ಬರುತ್ತಿತ್ತು ಆದರೆ ಈ ಬಾರಿ ಗಂಧದ ಕಡ್ಡಿಯ ವಾಸನೆ. ರೂಂ ನ ಒಳಗೆ ಹೋದರೆ ಸುತ್ತ ಗೋಡೆಗಳ ಮೇಲೆ ಕೆಲವೊಂದು ಸಿನೆಮಾ ಪೋಸ್ಟರ್ ಗಳು ಕಾಣುತ್ತಿದ್ದವು. ರೂಂ ನ ಒಂದು ಬದಿಯಲ್ಲಿ ಒಂದು ಮಂಚ ಇತ್ತು. ಆ ಮಂಚದ ಮೇಲಿದ್ದ ಹಾಸಿಗೆಯ ಮೇಲಿದ್ದ ಬಟ್ಟೆ ನೋಡಿದರೆ ವಾಂತಿ ಬರುವ ಹಾಗಿತ್ತು. ಇನ್ನೊಂದು ಬದಿಯಲ್ಲಿ ಒಂದು ಟೇಬಲ್, ಅದರ ಮೇಲೆ ಒಂದಷ್ಟು ಪೇಪರ್ ಗಳು, ಪೆನ್ನುಗಳು ಒಂದೆರಡು ಫೋಟೋ ಆಲ್ಬಮ್ ಗಳು ಪಕ್ಕದ ಕುರ್ಚಿಯ ಮೇಲೆ ಒಬ್ಬ ವ್ಯಕ್ತಿ ಸುಮಾರು ೪೦-೪೫ ವರ್ಷದ ವ್ಯಕ್ತಿ ತಲೆಯ ಮೇಲೊಂದು ಟೋಪಿ ಹಾಕಿಕೊಂಡು ಕುಳಿತಿದ್ದಾನೆ. ಇನ್ನೊಂದು ತುದಿಯಲ್ಲಿ ಮೂರು ನಾಲ್ಕು ಜನ ನಿಂತಿದ್ದರೆ. ಆ ಇಡೀ ಕೊಠಡಿಯಲ್ಲಿ ನಾನೊಬ್ಬಳೆ ಹುಡುಗಿ. ನನಗೆ ಒಳಗೊಳಗೇ ಭಯವಾಗುತ್ತ್ತಿತ್ತು. ಆದರೂ ಅದನ್ನು ಮುಖದ ಮೇಲೆ ತೋರದೆ ನಗು ನಗುತ್ತ ನಿಂತಿದ್ದೆ. ಆ ಟೋಪಿ ವ್ಯಕ್ತಿ ನನ್ನನ್ನು ಕರೆದು ತನ್ನೆದುರಿನ ಕುರ್ಚಿಯಲ್ಲಿ ಕೂರಿಸಿ ನನ್ನ ವಿವರಗಳನ್ನೆಲ್ಲ ಕೇಳಿ ತಿಳಿದುಕೊಂಡ. ನಂತರ ನಿಮ್ಮ ಫೋಟೋಗಳು ಇದ್ದರೆ ಕೊಡಿ ಎಂದ. ನಾನು ಇಲ್ಲ ಎಂದೆ. ಏನೂ ಯೋಚನೆ ಇಲ್ಲ ಎಂದು ಪಕ್ಕದಲ್ಲಿ ನಿಂತಿದ್ದ ಒಬ್ಬನನ್ನು ಕರೆದು ಇವರ ಫೋಟೋಗಳನ್ನು ತೆಗಿ ಎಂದು ಹೇಳಿದ. ಆ ವ್ಯಕ್ತಿ ನನ್ನನ್ನು ಅಲ್ಲೇ ಪಕ್ಕದ ಇನ್ನೊಂದು ಕೊಠಡಿಯಲ್ಲಿ ಬಿಟ್ಟು ಒಂದಷ್ಟು ಬಟ್ಟೆಗಳನ್ನು ಕೊಟ್ಟು ಇದನ್ನು ಹಾಕಿಕೊಂಡು ಬಾ ಫೋಟೋ ತೆಗೆಯುತ್ತೇನೆ ಎಂದು ಹೇಳಿ ಹೊರಟು ಹೋದ. ನಾನು ಆ ಬಟ್ಟೆಗಳನ್ನು ಧರಿಸಿ ಕನ್ನಡಿಯಲ್ಲಿ ನೋಡಿಕೊಂಡು ಕನಸಿನ ಲೋಕದಲ್ಲಿ ಮುಳುಗಿ ಹೋದೆ. ಮತ್ತೆ ಬಾಗಿಲು ತಟ್ಟುವ ಸದ್ದು ಕೇಳಿ ಎಚ್ಚೆತ್ತುಗೊಂಡು ಆಚೆ ಬಂದೆ. ಮತ್ತೆ ರೂಂ ನಂಬರ್ ೪೨೦ಕ್ಕೆ ಕರೆದುಕೊಂಡು ಬಂದ ಆ ವ್ಯಕ್ತಿ ನನ್ನನ್ನು ಒಂದು ಮೂಲೆಯಲ್ಲಿ ನಿಲ್ಲಿಸಿ ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ತೆಗೆದು ಮತ್ತೆ ತನ್ನೆದುರಿನ ಕುರ್ಚಿಯಲ್ಲಿ ಕೂರಲು ಹೇಳಿದ.
ನೋಡಿ ನಾನೇ ಈ ಸಿನಿಮಾದ ನಿರ್ದೇಶಕ ಷಾ ಎಂದು. ನಾನೇ ಈ ಚಿತ್ರದ ನಿರ್ಮಾಪಕ, ನಿರ್ದೇಶಕ, ಗಾಯಕ, ಕಥೆ, ಎಲ್ಲ ನಂದೇ. ನೀವು ನೋಡಲು ಚೆನ್ನಾಗೇನೋ ಇದ್ದೀರಿ ಆದರೆ ನಿಮಗೆ ಅಭಿನಯದಲ್ಲಿ ಏನಾದರೂ ಪರಿಣತಿ ಇದೆಯಾ ಎಂದು ಕೇಳಿದ. ನಾನು ಇಲ್ಲ ಸರ್ ನಾನು ಯಾವುದೇ ಸಿನೆಮಾದಲ್ಲಿ ನಟಿಸಿಲ್ಲ. ನೀವು ಅವಕಾಶ ಕೊಟ್ಟರೆ ಖಂಡಿತ ಚೆನ್ನಾಗಿ ನಟಿಸುತ್ತೇನೆ ಎಂದೆ. ಅದಕ್ಕೆ ಅವನು ಸರಿ ನೀವು ಎಲ್ಲಿರುವುದು ಎಂದು ಕೇಳಿದ. ನಾನು ಏನು ಉತ್ತರ ಕೊಡಬೇಕೋ ಗೊತ್ತಾಗದೆ ಆಕಡೆ ಈಕಡೆ ನೋಡುತ್ತಿದ್ದೆ. ಅವನೇ ಮತ್ತೆ ಶುರು ಮಾಡಿದ. ಒಂದು ಕೆಲಸ ಮಾಡಿ ಮುಂದಿನ ವಾರದಿಂದ ಶೂಟಿಂಗ್ ಶುರುವಾಗುತ್ತದೆ. ಅಲ್ಲಿಯವರೆಗೂ ನೀವು ಇದೆ ಕೊಠಡಿಯಲ್ಲಿ ಇರಬಹುದು ಎಂದ. ನನಗೆ ಬಹಳ ಖುಷಿಯಾಯಿತು. ಸರ್ ಈ ಸಿನೆಮಾದ ಹೆಸರು ಎಂದು ಕೇಳಿದೆ. ಅದಕ್ಕೆ ಅವನು ಗೊತ್ತಿಲ್ಲ ಎಂದ. ಸರ್ ನೀವೇ ನಿರ್ದೇಶಕರು ಎನ್ನುತ್ತೀರಾ ನಿಮಗೆ ಹೆಸರು ಗೊತ್ತಿಲ್ಲವ ಎಂದೆ. ಅದಕ್ಕವನು ಅಲ್ಲರಿ ನಮ್ಮ ಸಿನೆಮಾದ ಹೆಸರೇ "ಗೊತ್ತಿಲ್ಲ" ಅಂತ ಅಂದ. ನಾನು ಓಹ್ ಹಾಗೋ ಎಂದುಕೊಂಡು ಸರ್ ನಾಯಕ ಯಾರು ಎಂದು ಕೇಳಿದೆ. ಅದಕ್ಕವನು ನೋಡಿ ನಾವು ಪೇಪರ್ ನಲ್ಲಿ ಪ್ರಕಟಣೆ ಕೊಟ್ಟು ಸುಮಾರು ಒಂದು ತಿಂಗಳಾಗಿದೆ. ಇದುವರೆಗೂ ನಮಗೆ ಸರಿ ಹೊಂದುವ ಯಾವೊಬ್ಬ ನಟರೂ ಸಿಗಲಿಲ್ಲ. ಇನ್ನು ದೊಡ್ಡ ದೊಡ್ಡ ನಟರಿಗೆ ಅಷ್ಟು ಸಂಭಾವನೆ ಕೊಡಲು ನಮಗೆ ಸಾಧ್ಯವಿಲ್ಲ. ಹಾಗಾಗಿ ನಾನೇ ನಾಯಕನಾಗಿ ನಟಿಸಬೇಕು ಎಂದುಕೊಂಡಿದ್ದೇನೆ ಎಂದ. ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ನೋಡಿ ಒಂದು ಸಿನೆಮಾದಲ್ಲಿ ಗುರುತಿಸಿಕೊಂಡರೆ ಸಾಕು ನಾಳೆ ನೀವು ಯಾವ ಮಟ್ಟಿಗೆ ಬೆಳೆಯುತ್ತೀರ ಎಂದರೆ ನಾನೇ ಮತ್ತೊಮ್ಮೆ ನಿಮ್ಮ ಮನೆಯ ಮುಂದೆ ನಿಮ್ಮ ಕಾಲ್ ಶೀಟ್ ಗಾಗಿ ಕಾಯುತ್ತ ನಿಲ್ಲುವ ದಿನ ಬರುತ್ತದೆ ಎಂದು ನಗುತ್ತಾ ಎದ್ದ. ಸರಿ ಇನ್ನು ಒಂದು ವಾರ ನೀವು ಇದೆ ಕೋಣೆಯಲ್ಲಿ ಇರಬಹುದು. ಊಟ ತಿಂಡಿ ಎಲ್ಲ ಇಲ್ಲಿಗೆ ಬರುತ್ತದೆ. ಇನ್ನು ನಾವು ಹೊರಡುತ್ತೇವೆ ಎಂದು ಹೇಳಿ ಎಲ್ಲರೂ ಹೊರಟು ಹೋದರು.
ಅವರಂದಂತೆ ರಾತ್ರಿ ಒಂಭತ್ತು ಗಂಟೆಗೆ ಊಟ ಬಂತು. ಊಟ ಮಾಡಿ ಹಾಸಿಗೆಯ ಮೇಲೆ ಮಲಗಲು ಮನಸಾಗದೆ ಅಲ್ಲೇ ಕೆಳಗೆ ಮಲಗಿಕೊಂಡು ಛೆ ನನ್ನ ಮೊದಲ ಸಿನೆಮಾ ಈ ಮುದುಕನ ಜೊತೆ ಮಾಡಬೇಕ. ಆದರೇನಂತೆ ಒಂದು ಸಲ ಈ ಸಿನೆಮಾ ಮುಗಿದರೆ ನಂತರ ನನ್ನ ಕನಸಿನ ನಟರ ಜೊತೆ ನಟಿಸಬಹುದು. ಆಮೇಲೆ ಊರಿಗೆ ಹೋಗಿ ಅಪ್ಪ ಅಮ್ಮನನ್ನು ನನ್ನೊಡನೆ ಬೆಂಗಳೂರಿಗೆ ಕರೆದುಕೊಂಡು ಬಂದು ಬಿಡಬಹುದು. ಇಲ್ಲೇ ಒಂದು ದೊಡ್ಡ ಬಂಗಲೆ ತೆಗೆದುಕೊಂಡು ಒಂದು ಒಳ್ಳೆ ಕಾರ್ ತೆಗೆದುಕೊಂಡು, ಯಾವುದಾದರೂ ಸಿನೆಮಾ ನಟನನ್ನು ಮದುವೆ ಮಾಡಿಕೊಂಡು ಹಾಯಾಗಿ ಜೀವನ ಕಳೆಯಬಹುದು ಎಂದು ಆಲೋಚಿಸುತ್ತಾ ನಿದ್ದೆ ಹತ್ತತೊಡಗಿತು. ಅಷ್ಟರಲ್ಲಿ ರೂಮಿನ ಬಾಗಿಲು ತಟ್ಟುವ ಸದ್ದಾಯಿತು. ಸಮಯ ನೋಡಿದರೆ ಹತ್ತೂವರೆ ತೋರಿಸುತ್ತಿದೆ. ಇಷ್ಟು ಹೊತ್ತಿನಲ್ಲಿ ಯಾರು ಎಂದು ಭಯ ಪಟ್ಟುಕೊಂಡೆ. ಸ್ವಲ್ಪ ಹೊತ್ತಿನ ನಂತರ ಆಚೆಯಿಂದ ನಾನು ಷಾ ನಿಮ್ಮ ಸಿನೆಮಾದ ನಿರ್ದೇಶಕ ಎಂದರು. ನನಗೆ ಧೈರ್ಯ ಬಂದು ಬಾಗಿಲು ತೆಗೆದೆ...
ಅರೆ ಇದೇನಿದು ನಂತರದ ಎರಡು ಪುಟಗಳು ಕಾಣುತ್ತಿಲ್ಲ. ನಾನು ಡೈರಿಯನ್ನು ಹಿಂದೆ ಮುಂದೆ ತಿರುಗಿಸಿ ಎಲ್ಲಾದರೂ ಎರಡು ಪುಟ ಇಟ್ಟಿದ್ದಾಳೇನೋ ಎಂದು ನೋಡಿದೆ. ಆದರೆ ಎಲ್ಲೂ ಕಾಣಲಿಲ್ಲ. ಇದೇನಿದು ಮಧ್ಯದಲ್ಲಿ ಎರಡು ಪುಟ ಕಾಣುತ್ತಿಲ್ಲ. ನಂತರ ಏನಾಗಿರಬಹುದು ಎಂಬ ಕುತೂಹಲದಿಂದ ಮತ್ತೊಂದು ಪುಟ ತಿರುಗಿಸಿದೆ. ಅಲ್ಲಿಂದ ಮತ್ತೆ ಬರವಣಿಗೆ ಶುರುವಾಗಿತ್ತು.
ಇವೆರಡು ಪುಟಗಳು ನನ್ನ ಬಾಳಿನಲ್ಲಿ ನಡೆಯಬಾರದಿದ್ದ ಅತೀ ದುರ್ಘಟನೆಯ ಪುಟಗಳು. ಆದ್ದರಿಂದ ಈ ಎರಡು ಪುಟಗಳನ್ನು ನನ್ನ ಬಾಳಿನಿಂದ ಕಿತ್ತು ಹಾಕಿದ್ದೇನೆ. ಬಹುಷಃ ಈ ಎರಡು ಪುಟಗಳು ಬೇರೆ ಯಾವ ಹೆಣ್ಣು ಮಗಳ ಜೀವನದಲ್ಲೂ ಬರಬಾರದೆಂದು ದೇವರಲ್ಲಿ, ದೇವರಿದ್ದಾರ ಇದ್ದರೆ ಕೇಳಿಕೊಳ್ಳುತ್ತೇನೆ.
ಆ ಲಾಡ್ಜಿನಿಂದ ನನ್ನ ಜೀವ ಉಳಿಸಿಕೊಂಡು ಆಚೆ ಬಂದದ್ದೆ ಹೆಚ್ಚಾಗಿತ್ತು. ಅಲ್ಲಿಂದ ಆಚೆ ಬರಲು ನನಗೆ ಸಹಕರಿಸಿದ ಆ ಲಾಡ್ಜಿನ ಹುಡುಗ ಸಿದ್ದನಿಗೆ ಅದೆಷ್ಟು ಬಾರಿ ನಮಸ್ಕಾರ ಹೇಳಿದೆನೋ ಗೊತ್ತಿಲ್ಲ. ಅಲ್ಲಿಂದ ಆಚೆ ಬಂದ ಮೇಲೆ ಮತ್ತೆ ಊರಿಗೆ ಹೋಗಿ ಅಪ್ಪ ಅಮ್ಮನಿಗೆ ಮುಖ ತೋರಿಸುವ ಧೈರ್ಯ ಅಂತೂ ಸತ್ತು ಹೋಗಿತ್ತು. ಏನು ಮಾಡಲು ತೋಚದೆ ಸುರಂಗ ಮಾರ್ಗದಲ್ಲಿ ನಡೆದು ಬರುತ್ತಿದ್ದಾಗ ಯಾಕೋ ಇದ್ದಕ್ಕಿದ್ದಂತೆ ಮೈಯಲ್ಲಿದ್ದ ಶಕ್ತಿಯೆಲ್ಲ ಕಳೆದು ಹೋದಂತಾಗಿ ಕಣ್ಣು ಕತ್ತಲಾಗಿ ಬಿದ್ದು ಬಿಟ್ಟೆ. ನಂತರ ಕಣ್ಣು ಬಿಟ್ಟಾಗ ನಾನೊಂದು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದೆ. ಅದೊಂದು ಸರ್ಕಾರಿ ಆಸ್ಪತ್ರೆಯ ಹಾಗೆ ಕಂಡಿತು. ಪಕ್ಕದಲ್ಲಿ ಇಬ್ಬರು ಅದೇ ಸುರಂಗ ಮಾರ್ಗದತ್ತ ನಿಂತು ಜನರತ್ತ ಕೈಚಾಚಿ ಹಣ ಬೇಡುತ್ತಾ ನಿಂತಿದ್ದ ಗಂಡಸೂ ಅಲ್ಲದ ಹೆಂಗಸು ಅಲ್ಲದ ವ್ಯಕ್ತಿಗಳು ನಿಂತಿದ್ದರು. ಅವರು ನನ್ನ ತಲೆ ಮೇಲೆ ಕೈಯಾಡಿಸಿ ಸರಿ ಇನ್ನು ನಾವು ಹೊರಡುತ್ತೇವೆ. ಮಧ್ಯಾಹ್ನ ಡಾಕ್ಟರ ಬರುತ್ತಾರೆ ಎಂದು ಹೇಳಿ ನನ್ನ ಕೈಯಲ್ಲಿ ನೂರರ ಮೂರು ನೋಟುಗಳನ್ನು ಇಟ್ಟು ಹೊರಟು ಹೋದರು. ಮಧ್ಯಾಹ್ನ ಬಂದ ಡಾಕ್ಟರ ನನ್ನನ್ನು ಒಳಗೆ ಕರೆದು ನನ್ನನ್ನು ಒಂದು ಸಲ ವಿಚಿತ್ರವಾಗಿ ನೋಡಿ ನೋಡಮ್ಮ ನಿನಗೆ ಒಂದು ವಿಷಯ ಹೇಳುತ್ತೇನೆ. ಧೈರ್ಯ ಕಳೆದುಕೊಳ್ಳಬೇಡಿ ಎಂದ. ನಾನು ಡಾಕ್ಟರ ನಾನು ಜೀವನದಲ್ಲಿ ಎಲ್ಲ ಕಳೆದುಕೊಂಡು ಬಿಟ್ಟಿದ್ದೇನೆ. ಇನ್ನು ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಹೇಳಿ ಪರವಾಗಿಲ್ಲ ಎಂದೆ. ನಿನಗೆ "ಎಡ್ಸ್" ಖಾಯಿಲೆ ಬಂದಿದೆ. ಇನ್ನು ಮುಂದೆ ನೀವು ಎಷ್ಟು ಜಾಗರೂಕರಾಗಿ ಇರುತ್ತೀರೋ ಅಷ್ಟು ಒಳ್ಳೆಯದು ಎಂದರು.
ನನಗೆ ಈ ಬದುಕೇ ಬೇಡವೆಂದೆನಿಸಿ ಎರಡು ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದೆ ಆದರೆ ಪ್ರತಿ ಬಾರಿ ಯಾರಾದರೊಬ್ಬರು ಬಂದು ತಡೆಯುತ್ತಿದ್ದರು. ಮುಂದೇನು ಮಾಡಬೇಕೋ ಗೊತ್ತಾಗದೆ ಬಸ್ ಸ್ಟ್ಯಾಂಡ್ ಅನ್ನೇ ನನ್ನ ಮನೆ ಮಾಡಿಕೊಂಡೆ. ಊಟ ತಿಂಡಿ ಎಲ್ಲವನ್ನೂ ಬಿಟ್ಟೆ. ಎರಡು ಮೂರು ಬಾರಿ ಬಸ್ ಸ್ಟ್ಯಾಂಡ್ ನಲ್ಲಿ ಅಪ್ಪ ಹಾಗೂ ಅಣ್ಣನನ್ನು ಕಂಡೆ ಆದರೆ ಅವರಿಗೆ ಮುಖ ತೋರಿಸುವ ಅರ್ಹತೆಯನ್ನು ನಾನು ಕಳೆದುಕೊಂಡು ಬಿಟ್ಟಿದ್ದೆ. ಭಗವಂತ ಇನ್ನೆಷ್ಟು ದಿನ ನನ್ನನ್ನು ಪರೀಕ್ಷಿಸುತ್ತಾನೋ ಗೊತ್ತಿಲ್ಲ. ಆದರೆ ಒಂದೇ ಒಂದು ಸಲ ಅಪ್ಪ ಅಮ್ಮನನ್ನು ನೋಡುವ ಆಸೆ ಆಗುತ್ತಿದೆ. ನಾಳೆ ಬೆಳಿಗ್ಗೆ ನನ್ನ ಊರಿಗೆ ಹೋಗಿ ಅಪ್ಪ ಅಮ್ಮನ ಕಾಲ ಬಳಿ ಬಿದ್ದು ಗಳಗಳನೆ ಅತ್ತುಬಿಡುತ್ತೇನೆ. ಆಮೇಲೆ ಅವರು ಕ್ಷಮಿಸಿದರೂ ನಾನು ಬದುಕುವುದಿಲ್ಲ....
ಮುಂದೆ ಬರವಣಿಗೆ ನಿಂತು ಹೋಗಿತ್ತು. ಬಹುಷಃ ಅವತ್ತೇ ಸತ್ತು ಹೋಗಿದ್ದಾಳೆ ಅನಿಸುತ್ತೆ. ನನ್ನ ಕಣ್ಣಿನಿಂದ ನನಗೆ ಅರಿವಿಲ್ಲದೇನೆ ಎರಡು ಹನಿಗಳು ಉದುರಿತ್ತು.
(ಈ ಕಥೆಯಲ್ಲಿ ಬರುವ ಯಾವುದೇ ಪಾತ್ರಗಳು, ಸನ್ನಿವೇಶಗಳು ಎಲ್ಲವೂ ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿ ಅಥವಾ ಸಂದರ್ಭಕ್ಕೆ ಸಂಭಂಧ ಪಟ್ಟಿಲ್ಲ. ಹಾಗೇನಾದರೂ ಆಗಿದ್ದಲ್ಲಿ ಅದು ಬರೀ ಕಾಕತಾಳೀಯವಷ್ಟೇ)
Comments
ಉ: ಹರಿದ ಪುಸ್ತಕ - ಭಾಗ ೩
In reply to ಉ: ಹರಿದ ಪುಸ್ತಕ - ಭಾಗ ೩ by kamath_kumble
ಉ: ಹರಿದ ಪುಸ್ತಕ - ಭಾಗ ೩
ಉ: ಹರಿದ ಪುಸ್ತಕ - ಭಾಗ ೩
In reply to ಉ: ಹರಿದ ಪುಸ್ತಕ - ಭಾಗ ೩ by venkatb83
ಉ: ಹರಿದ ಪುಸ್ತಕ - ಭಾಗ ೩
In reply to ಉ: ಹರಿದ ಪುಸ್ತಕ - ಭಾಗ ೩ by Jayanth Ramachar
ಉ: ಹರಿದ ಪುಸ್ತಕ - ಭಾಗ ೩
In reply to ಉ: ಹರಿದ ಪುಸ್ತಕ - ಭಾಗ ೩ by bhalle
ಉ: ಹರಿದ ಪುಸ್ತಕ - ಭಾಗ ೩
In reply to ಉ: ಹರಿದ ಪುಸ್ತಕ - ಭಾಗ ೩ by venkatb83
ಉ: ಹರಿದ ಪುಸ್ತಕ - ಭಾಗ ೩
In reply to ಉ: ಹರಿದ ಪುಸ್ತಕ - ಭಾಗ ೩ by ಗಣೇಶ
ಉ: ಹರಿದ ಪುಸ್ತಕ - ಭಾಗ ೩
In reply to ಉ: ಹರಿದ ಪುಸ್ತಕ - ಭಾಗ ೩ by ಗಣೇಶ
ಉ: ಹರಿದ ಪುಸ್ತಕ - ಭಾಗ ೩