ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ರಾವಬಹಾದ್ದೂರರ 'ಗ್ರಾಮಾಯಣ'ದ ಹೆಸರು ಅಲ್ಲಲ್ಲಿ ಕೇಳಿದ್ದೆ. ಸುಮಾರು ಒಂದು ವರುಷದ ಹಿಂದೆ ಧಾರವಾಡದ ಪುಸ್ತಕದ ಅಂಗಡಿಯಲ್ಲಿ ಅದು ಕಂಡಾಗ ಓದೋಣ ಅಂತ ಖರೀದಿಸಿದ್ದೆ. ಮುಂಬೈಗೆ ಪುಸ್ತಕ ಹೊತ್ತುಕೊಂಡು ಯಾಕೆ ಬರೋದು, ಅಲ್ಲೇ ಇರಲಿ. ಧಾರವಾಡಕ್ಕೆ ಹೋದಾಗ ಓದಿದರಾಯಿತು ಅಂತ ಅಲ್ಲೇ  ಬಿಟ್ಟಿದ್ದೆ. ಮೂರು ತಿಂಗಳಿಗೊಮ್ಮೆ ಮೂರ್ನಾಲ್ಕು ದಿನ ಧಾರವಾಡಕ್ಕೆ ಹೋಗುವೆನಾದರೂ , ಅಲ್ಲಿ ಒಂದಿಷ್ಟು ಸಮಯ ಸಿಗುವದಾದರೂ, ಓದಲು ಪ್ರಯತ್ನಿಸಿದೆನಾದರೂ ಪೂರ್ತಿ ಓದಲಾಗಿರಲಿಲ್ಲ. ಒಂದು ಊರಿನ ಕತೆ ಇದು.  ಪಾತ್ರಗಳು ಬಹಳ. ಮುಖ್ಯಪಾತ್ರಗಳು ಯಾವವು ? ಮೂರನೇ ಒಂದು ಭಾಗ ಓದಿದರೂ  ಕಥೆಯ ಮುಖ್ಯ ವಿಷಯ ಅಥವಾ ಕೇಂದ್ರ  ಯಾವದು ಗೊತ್ತಾಗಲಿಲ್ಲ.ಹಾಗಾಗಿ ಓದಿ ಮುಗಿಸಲು ಯಾವದೇ ಅವಸರ ಅನಿಸಲಿಲ್ಲ. ಹಾಗಾಗಿ ಕಾದಂಬರಿಯನ್ನು ಅಲ್ಲೇ ಬಿಟ್ಟಿದ್ದೆ.  ಮತ್ತೆ ಧಾರವಾಡಕ್ಕೆ ಹೋದಾಗಲೆಲ್ಲ ಅದನ್ನು ಕೈಗೆತ್ತಿಕೊಂಡು ಓದಲು ಪ್ರಯತ್ನಿಸುತ್ತಿದ್ದೆ. ಅಂತೂ ಅರ್ಧಕ್ಕೂ ಹೆಚ್ಚು ಭಾಗದ ನಂತರ ಕಥೆಯು   ಒಬ್ಬ ಬ್ರಿಟಿಷ ಅಧಿಕಾರಿ,  ಮತ್ತೆ ಒಬ್ಬ ಮುಸ್ಲಿಂ ಅಧಿಕಾರಿ, ಒಬ್ಬ ಸಣ್ಣ ರಾಜನ ಪ್ರವೇಶವಾದಂತೆ  ಆಸಕ್ತಿಕರವಾಯಿತು. ಮುಂದೆ ಓದಿಸಿಕೊಂಡು ಹೋಯಿತು.

ಇದಕ್ಕೆ   ಪ್ರಸಿದ್ಧ ವಿಮರ್ಶಕ  ಕೀರ್ತಿನಾಥ ಕುರ್ತಕೋಟಿಯವರು ಮುನ್ನುಡಿಯನ್ನು ಬರೆದಿದ್ದಾರೆ.

ಇರಲಿ. ಈಗ ಈ ಪ್ರಸಿದ್ಧ ಕಾದಂಬರಿಯ ಕೊನೆಯ ಪುಟದ ಒಂದು ಭಾಗವನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ.


    ದಾದಾನಿಗೆ ದುಃಖ ತಡೆಯಲಿಲ್ಲ. ಚಿಮಣಾಳ ದುರ್ಮರಣ , ಬಾಳಾಚಾರ್ಯರ ಸಾವು, ಲಕ್ಷ್ಮಣ ಪರದೇಶಿಯಂತೆ ಬೇರೆ ಊರು ಸೇರಿದ್ದು ಇವು ಅವನ ವೈಯಕ್ತಿಕ ದುಃಖಗಳಾಗಿದ್ದವು. ಅವುಗಳನ್ನು  ನೆನೆದು ಕಣ್ಣೀರು ಸುರಿಸಹತ್ತಿದ."ಯಾರ ಸಲುವಾಗಿ ಬದುಕಬೇಕಾಗೇತಿ, ಹೇಳು ಕರಿಯಪ್ಪಾ ? " ಎಂದು ಗೋಳಾಡಿದ.
    "ಹುಚ್ಚ ಅದೀ ನೋಡು ದಾದಾ. ನಾ ಊರಿಂದ ಬರೂದರಾಗ ನನ್ನ ಹೇಣತಿ, ಮೂರು ಮಕ್ಕಳು ಸತ್ತು ಹೋದರಂತ ಕೇಳಿದರೂ ನಾ  ನಿನ್ಹಾಂಗ ಹುಚ್ಚಾಗಲಿಲ್ಲ. ಮನಶ್ಯಾ ಇರೂತನಾ ಸಾಯತೀನಿ ಅಂತ ಅನಬಾರದು ನೋಡು.  ಇದ್ದಾಗ ಸತ್ತಾಂಗ ಇರಬಾರದು ನೋಡು. ನಾ ಇರೊಮಟಾ  ತ್ವಾಟಾ ಸಾಗಮಾಡಿ, ಧಣೇರ ಸೇವಾ ಮಾಡೂದುಲ್ಲs? ಹಾಂಗs  ನೀನೂ ಇರಬೇಕು. ಆಚಾರೆಪ್ಪಹೇಳತಿದ್ದರು, 'ದೇವರು ಜನ್ಮಾ ಕೊಟ್ಟಾಗ ನಮ್ಮಿಂದ ಏನೋ ಕೆಲಸ ಆಗ ಬೇಕಾಗಿರತೈತಿ ಅಂತ ಕೊಟ್ಟಿರತಾನು. ಯಾರ ಕೆಲಸಾನೂ ದೇವರಿಗೆ ಬ್ಯಾಡಾಗೂದುಲ್ಲ', ಸಾಯಾಕs ನಾವು ಹುಟ್ಟಿದ್ದರ, ಈಟ ದಿನಾ ಬಾಳೇ ಯಾಕ ಮಾಡಬೇಕು? ಏಳ , ಏಳ " ಎಂದು ಎಲ್ಲಿಲ್ಲದ ಅಕ್ಕರತೆಯಿಂದ ಎಬ್ಬಿಸಿದ.



ಹೌದೂ , ಆದರ ನನ್ನಿಂದ ಆಗಬೇಕಾದ ಕೆಲಸ ಏನೋ ? ಅದನ್ನ ತಿಳಕೊಳ್ಳೋದು ಹೆಂಗ ?

 

Rating
No votes yet

Comments