ಅಜ್ಜನ ಫೋಟೊ ( ಕಥೆ ) ಭಾಗ 1
ಶ್ರಾವಣ ಮಾಸ ಬಿಡದೆ ಸುರಿಯುತ್ತ ರೇಜಿಗೆ ಹುಟ್ಟಿಸುತ್ತಿರುವ ಮಳೆ. ವೈಶಾಖದ ಕಡು ಬಿಸಿಲಿನ ಧಗೆ ತಪ್ಪಿಸಿ ಕೊಳ್ಳಲು ಹಂಬಲಿಸುತ್ತಿದ್ದ ಮನ ಈಗ ಬಿಸಿಲಿಗಾಗಿ ಕಾತರಿಸುತ್ತಿದೆ. ಋತುಮಾನಗಳು ಪ್ರಕೃತಿಯ ಕಾಲಮಾನಕ್ಕೆ ತಕ್ಕಂತೆ ಬಂದು ಹೋಗುವಂತಹವು. ಆ ಸತ್ಯ ಗೊತ್ತಿದ್ದೂ ನಾವು ಅವುಗಳಿಗೆ ಹೊಂದಿಕೊಂಡು ಹೋಗುವಂತಹ ವರಲ್ಲ. ಅವೆಲ್ಲ ನಮ್ಮ ಅನುಕೂಲಕ್ಕೆ ತಕ್ಕಂತೆ ಬರಬೇಕೆಂದು ಬಯಸುವವರು ನಾವು. ವರಕವಿ ಬೇಂದ್ರೆಯವರಿಗೆ ಶ್ರಾವಣ ವೆಂದರೆ ಬಹಳ ಅಕ್ಕರಾಸ್ತೆ. ಶ್ರಾವಣ ಕುರಿತಂತೆ ಅವರದು ಸ್ವಚ್ಛಂದ ಲಹರಿ. ಅದಕೆ ಅಲ್ಲವೆ ಅವರು ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ ಎಂದು ಹಾಡಿದ್ದು. ಪಶ್ಚಿಮ ದಿಗಂತದಿಂದ ಮೇಲೇರಿ ಬರುತ್ತಿ ರುವ ದಟ್ಟ ಕಾರ್ಮೋಡಗಳ ಸಾಲು, ಬಿಡದೆ ಸುರಿಯುತ್ತಿರುವ ಜಡಿಮಳೆ, ಆಗಾಗ ಸುಳಿದು ಹೋಗುವ ಕೋಲ್ಮಿಂಚು ಗಳು, ಎದೆ ನಡುಗಿಸುವ ಸಿಡಿಲು ಗುಡುಗುಗಳ ಆರ್ಭಟ, ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು. ವರುಣ ತನ್ನೆಲ್ಲ ಓಘವನ್ನು ಒಗ್ಗೂಡಿಕೊಂಡು ಸುರಿಯುತ್ತಿದ್ದಾನೆ. ಭೂರಮೆ ಹಸಿರುಡುಗೆಯನ್ನು ತೊಟ್ಟು ಸಂತೃಪ್ತಿಯಿಂದ ನಲಿಯುತ್ತಿದ್ದಾಳೆ. ಶ್ರಾವಣ ವೆಂದರೆ ಹಬ್ಬಗಳ ಮಾಸ, ಭಾರತೀಯು ಪರಂಪರೆಯ ಮಹಿಳೆಗೆ ಮೈಮುರಿಯ ದುಡಿತ ತರುವ ಜೊತೆಗೆ ಮನೋಲ್ಲಾಸ ತರುವ ಮಾಸ.
ನಾನು ಮನೆಗೆ ಬಂದು ಹೊರ ಹಜಾರದ ಗೋಡೆಯ ಗೂಟಕ್ಕೆ ರೇನ್ ಕೋಟನ್ನು ನೇತು ಹಾಕಿ ಕೈಕಾಲು ಮುಖ ತೊಳೆಯಲು ಬಚ್ಚಲು ಮನೆಗೆ ತೆರಳಿದೆ.
' ಗುರು ಒಲೆಯ ಮೇಲಿನ ಹಂಡೆಯಲ್ಲಿ ಬಿಸಿ ನೀರಿದೆ ತೆಗೆದುಕೋ ' ಎಂದು ದೊಡ್ಡಮ್ಮ ನುಡಿದಳು.
ಸುಖೋಷ್ಣವಾದ ನೀರನು ತಂಬಿಗೆಯಲ್ಲಿ ತೆಗೆದುಕೊಂಡು ಕೈಕಾಲು ಮುಖ ತೊಳೆದೆ. ದೇಹಕ್ಕೆ ಹಾಯೆನಿ ಸಿತು. ದೇವರಿಗೆ ಕೈಮುಗಿದು, ಅಡುಗೆ ಮನೆಯಲ್ಲಿ ಊಟ ಮುಗಿಸಿ ಹೊರ ಹಜಾರಕ್ಕೆ ಬಂದು ಕುಳಿತು ಟಿವಿ ಆನ್ ಮಾಡಿದೆ. ರಿಮೋಟ್ ಸಹಾಯದಿಂದ ಎಲ್ಲ ಚಾನಲ್ ಗಳನ್ನು ಒಂದು ಬಾರಿ ಬದಲಾಯಿಸಿ ನೋಡಿದೆ. ಚಾನಲ್ ವೊಂದರಲ್ಲಿ ಹಳೆಯ ಕಪ್ಪು ಬಿಳುಪು ಜಮಾನಾದ ಹಿಂದಿ ಚಲನಚಿತ್ರ ವೊಂದರ ಟೈಟಲ್ ಕಾರ್ಡ ಬಿತ್ತರಗೊಳ್ಳುತಿತ್ತು.
ಪುಸ್ತಕವೊಂದನ್ನು ಎದುರಿಗಿಟ್ಟುಕೊಂಡು ಓದುವ ನಾಟಕ ಮಾಡುತ್ತಿದ್ದ ಮಗ ಅವಿನಾಶ ' ಅಪ್ಪ ಸ್ಟಾರ್ ಮೂವ್ಹೀಸ್ ನಲ್ಲಿ ಒಂದು ಕಾರ್ಟೂನ್ ಚಿತ್ರ ಬರುತ್ತಿದೆ, ಅದನ್ನು ಹಾಕು ಎಂದ '
ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅವನ ಅಮ್ಮ ಅಲ್ಲಿಂದಲೆ ' ಟಿವಿ ಮುಂದೆ ಕುಳಿತು ಅದೆಂತಹ ಓದೋ ನಿಂದು ಒಳ ಕೋಣೆಗೆ ಹೋಗಿ ಓದಿಕೋ ' ಎಂದು ಅಲ್ಲಿಂದಲೆ ಮಗನನ್ನು ರಿಮೋಟ್ ಮಾಡಿದಳು.
ಚಲನಚಿತ್ರ ವೀಕ್ಷಣೆಗೆ ಮಗನ ರೂಪದಲ್ಲಿ ಬಂದಿದ್ದ ಕಂಟಕ ತಂತಾನೆ ನಿವಾರಣೆ ಯಾದಂತಾಯಿತು. ಟೈಟಲ್ ಕಾರ್ಡಮುಗಿದು ಚಲನಚಿತ್ರ ಪ್ರಾರಂಭವಾಯಿತು. ಅದು ದಿಲೀಪಕುಮಾರ, ಮೀನಾಕುಮಾರಿ ಯವರ ಅಭಿನಯದ ಆಜಾದ ಎಂಬ ಚಿತ್ರ ಅದಾಗಿತ್ತು. ಅಡುಗೆ ಮನೆಯ ದೃಶ್ಯ, ತರಕಾರಿ ಹೆಚ್ಚುತ್ತ ಕುಳಿತಿರುವ ತಾಯಿಗೆ ಎದುರಾಗಿ ಕುಳಿತು ವೀಣೆ ನುಡಿಸುತ್ತ
' ನಾ ಬೋಲೆ, ನಾ ಬೋಲೆ, ನಾ ಬೋಲೆರೆ, ಘುಂಘಟಕೆ ಪಟಲಾ ಖೋಲೆರೆ ' ಎಂದು ಪಾತ್ರಧಾರಿ ಮೀನಾ ಕುಮಾರಿ ಹಾಡುತ್ತಿದ್ದಾಳೆ.
ಎಂತಹ ಅದ್ಭುತ ನಟಿ ಈಕೆ ! ಎಂತಹ ಪಾತ್ರವಾದರೂ ಎಷ್ಟು ಲೀಲಾ ಜಾಲವಾಗಿ ನಟಿಸುತ್ತಾಳೆ. ಸುಮಾರು ನಾಲ್ವತ್ತೈದು ವರ್ಷಗಳ ಹಿಂದಿನ ಹಳೆಯ ಚಿತ್ರವಾದರೂ ಇನ್ನೂ ನೋಡಿಸಿ ಕೊಳ್ಳುವ ಗುಣ ಅದಕ್ಕಿದೆ, ಆ ನಟ ನಟಿಯರ ಅಭಿನಯಕ್ಕಿದೆ. ಚಿತ್ರದ ಸಂಗೀತಕ್ಕಿದೆ. ಲತಾ ಮಂಗೇಶಕರ್ ಎಷ್ಟು ಸುಶ್ರಾವ್ಯವಾಗಿ ಹಾಡಿದ್ದಾಳೆ !
ರಾಮಚಂದ್ರ ಚಿತಲ್ಕರರ ಸಂಗೀತರದ ಮೋಡಿಯೇ ಅಂತಹುದು. ಹೃದಯ ಮುಟ್ಟುವ ಸಂಗೀತ.ಅಪರೂಪಕ್ಕೊಂದು
ಒಳ್ಳೆಯ ಸುಂದರ ಚಲನಚಿತ್ರವೊಂದನ್ನು ನೋಡು ಅವಕಾಶ ಸಿಕ್ಕಿದೆ ಎಂದು ಅರಾಮ ಖುರ್ಚಿಗೆ ಅಂಟಿಕೊಳ್ಳು ವಷ್ಟರಲ್ಲಿ ಅಡುಗೆ ಮನೆಯಿಂದ ಅಶರೀರ ವಾಣಿಯೊಂದು ಕೇಳಿಬಂತು.
'ಹೇಗೂ ಅರಾಮವಾಗಿ ಕುಳಿತಿದ್ದೀರಿ ವಟಸಾವಿತ್ರಿ ವೃತ ಹತ್ತಿರ ಬರುತ್ತಿದೆ, ಫೋಟೋಗಳನ್ನು ತೆಗೆದು ಕೊಡಿ' ಎಂದು. ಅಪರೂಪಕ್ಕೆ ಒಖಳ್ಳೆಯ ಚಲನಚಿತ್ರವೊಂದನ್ನು ನೋಡುತ್ತ ಕುಳಿತರೆ ಇದೊಳ್ಳೆ ವರಾತ ಆಯಿತಲ್ಲ ಎಂದು ಮನದಲ್ಲಿ ಗೊಣಗಿಕೊಂಡು
' ಆ ಫೋಟೋಗಳು ಎಲ್ಲಿವೆಯೋ ನನಗೆ ಗೊತ್ತಿಲ್ಲ, ನಿನಗೆ ಪುರಸೊತ್ತಾದಾಗ ನೀನೇ ಹುಡುಕಿಕೋ ' ಎಂದು ನುಡಿದು ಚಲನಚಿತ್ರ ವೀಕ್ಷಣೆಯಲ್ಲಿ ತೊಡಗಿದೆ.
' ನನಗೆಲ್ಲಿದೆ ಪುರಸೊತ್ತು ಮೈತುಂಬ ಕೆಲಸ ಅಲ್ಲಿಯೇ ಎಲ್ಲಿಯೋ ನಾಗೊಂದಿಗೆಯ ಮೇಲೆ ಯಾವುದೋ ಫೋಟೋಗಳ ಕಟ್ಟಿನಲ್ಲಿರಬೇಕು ಸ್ವಲ್ಪ ತೆಗೆದುಕೊಡಿ ' ಎಂದು ವಿನಯ ಪೂರ್ವಕವಾಗಿ ಮರು ಮನವಿ ಸಲ್ಲಿಸಿದಳು.
ನಾನೂ ಅಷ್ಟೆ ಸುಲಭಕ್ಕೆ ಜಗ್ಗುವವನಲ್ಲ ' ಅನೇಕ ಫೋಟೊ ಕಟ್ಟುಗಳಿವೆ ಯಾವಕಟ್ಟಿನಲ್ಲಿ ಆ ಫೋಟೋ ಗಳಿವೆಯೋ ಗೊತ್ತಿಲ್ಲ, ಅಮ್ಮ ಎದ್ದ ನಂತರ ಅವಳನ್ನು ಕೇಳಿ ತೆಗೆದು ಕೊಡುತ್ತೇನೆ ಎಂದು ಮಾರ್ನುಡಿದು ಚಲನ ಚಿತ್ರದಲ್ಲಿ ತಲ್ಲೀನನಾದೆ.
ನಡುಮನೆಯಲ್ಲಿ ಓದುತ್ತ ಕುಳಿತಿದ್ದ ಮಗ ಅವಿನಾಶ ತನಗೆ ಕಾರ್ಟುನ ಮೂವ್ಹಿ ನೋಡಲು ಬಿಡದೆ ಓದಲು ಹಚ್ಚಿದ ಕಾರಣಕ್ಕೊ ಅಥವಾ ನಾನು ಅರಾಮವಾಗಿ ಚಲನಚಿತ್ರ ನೋಡುತ್ತ ಕುಳಿತರಿರುವೆನೆಂಬವ ಕಾರಣಕ್ಕೊ ಇಲ್ಲವೆ ತನ್ನ ಅಮ್ಮನನ್ನು ಮೆಚ್ಚಿಸಬೇಕೆಂಬ ಇರಾದೆಯಿಂದಲೋ
' ಅಪ್ಪ ನೀನು ಕುಳಿತಲ್ಲಿಯೇ ಮೇಲೆ ನಾಗೊಂದಿಗೆ ಮೇಲೆ ಇರುವ ಫೋಟೋಗಳ ಕಟ್ಟಿನಲ್ಲಿ ಅಮ್ಮ ಹೇಳಿದ ಫೋಟೋಗಳು ಇವೆಯೆಂದು ' ನುಡಿದು ತನ್ನ ಓದಿನಲ್ಲಿ ತೊಡಗಿಕೊಂಡ. ಅವನ ಫಿತೂರಿ ಕೆಲಸ ಮಾಡಿತು.
' ಒಂದು ನಿಮಿಷದ ಕೆಲಸ ಫೋಟೋಗಳನ್ನು ತೆಗೆದು ಕೊಟ್ಟರೆ ಅಗದೆ '? ಎಂದು ನನ್ನವಳು ಸಣ್ಣಗೆ ಆಕ್ಷೇಪಿ ಸಿದಳು. ಇನ್ನು ತಪ್ಪಿಸಿಕೊಳ್ಳಲು ಬೇರೆ ಮಾರ್ಗವಿಲ್ಲವೆಂದು ಖುರ್ಚಿಯಿಂದ್ದದ್ದು ನನ್ನ ಹಿಂದೆ ನಾಗೊಂದಿಗೆಯ ಮೇಲಿದ್ದ ಫೋಟೋಗಳ ಕಟ್ಟನ್ನು ಕೆಳಗಿಳಿಸಿ ಧೂಳು ಹೊಡೆದು ಕಟ್ಟನ್ನು ಬಿಚ್ಚಿ ಮೇಲ್ಗಡೆಯ ಫೋಟೋ ತಿರುಗಿಸಿ ನೋಡಿದೆ. ಮೇನಕೆಯ ಕೈಗೆ ಮಗು ಶಕುಂತಲೆಯನ್ನು ಕೊಟ್ಟು ಟಾಟಾ ಹೇಳಿ ಹೋಗುತ್ತಿರುವ ವಿಶ್ವಾಮಿತ್ರನ ಫೋಟೋ ಅದು. ಇನ್ನೊಂದು ಫೋಟೋ ತಿರುಗಿಸ ನೋಡಿದೆ. ಅದು ಯಮುನಾ ನದಿಯ ತೀರದಲ್ಲಿ ಜಲಕ್ರೀಡೆ ಯಾಡುತ್ತಿರುವ ಗೋಪಿಕಾ ಸ್ತ್ರೀಯರ ವಸ್ತರ್ರಗಳನ್ನು ಅಪಹರಿಸಿ ಮರದ ಮೇಲೆ ಕುಳಿತು ಮೋಜು ನೋಡುತ್ತಿರುವ ಕೃಷ್ಣನ ಫೋಟೊ. ಸೀತಾ ಸ್ವಯಂವರ, ದುಷ್ಯಂತನ ಬರುವಿಕೆಯ ಕನಸಿನಲಿ ಮಗ್ನಳಾಗಿರುವ ಶಕುಂತಲೆಯ ಫೋಟೋಗಳು . ಒಟ್ಟಿನಲ್ಲಿ ರಸಿಕ ಭಾವವನ್ನು ಬಡಿದೆಬ್ಬಿಸುವ ಪೌರಾಣಿಕ ಘಟನೆಗಳ ಸುಂದರ ಫೋಟೋಗಳು.ಪೂರ್ವಿಕರು ಎಂತರಹ ರಸಿಕರು ! ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳನ್ನು ಬಿಂಬಿಸುವ ಎಂತೆಂತಹ ಸುಂದರ ಫೋಟೋಗಳು ಅವು ! ಈಗೆಲ್ಲ ವಿಶಾಲಮನೆ ಐತಿಹಾಸಿಕ ತುಂಬು ಕುಟುಂಬದ ಸಂಸಾರಗಳು ಹೋಗಿ, ನಾವು ನಮ್ಮಷ್ಟಕ್ಕೆ ಎಂಬಂತಹ ಕಾಲಮಾನ ಬಂದಿರು ವುದರಿಂದ ಹಳೆಯ ಫೋಟೋಗಳೆಲ್ಲ ನಾಗೊಂದಿಗೆಗೆ ಸೇರಿದಂತೆ ಹಳೆಯ ಕಾಲದ ಆಚಾರ ವಿಚಾರ ವಿಶಾಲ ಮನೋಭಾವ ಹೃದಯವಂತಿಕೆ ಮುಂತಾದ ಸದ್ಗುಣಗಳೆಲ್ಲ ಅಟ್ಟ ಸೇರಿವೆ. ಶಕುಂತಲೆ ಮೇನಕೆಯರ ಸೌಂದರ್ಯೋಪಾಸನೆಯಲ್ಲಿ ಮಗ್ನನಾಗಿದ್ದ ನಾನು ನನ್ನ ಹಿಂದೆ ಬಂದು ನಿಂತ ಸೀತೆಯನ್ನು ಗಮನಿಸಿರಲಿಲ್ಲ.
' ನಾನು ಕೇಳಿರುವ ಫೋಟೋಗಳನ್ನು ಹುಡುಕುವುದು ಬಿಟ್ಟು ಬೇರೆ ಯಾವುದೋ ಫೋಟೋಗಳನ್ನು ನೋಡುತ್ತ ಕುಳಿತಿರುವಿರಲ್ಲ ' ಎಂದು ಸಣ್ಣಗೆ ಆಕ್ಷೇಪಿಸಿದಳು.
ಮೇನಕೆ ಶಕುಂತಲೆಯರ ಗುಂಗಿನಲ್ಲಿದ್ದ ನಾನು ಅವಳನ್ನುದ್ದೇಶಿಸಿ ಈಗಲೂ ಈ ರಂಭೆ ಊರ್ವಸಿ ಮೇನಕೆ ತಿಲೋತ್ತಮೆಯರು ಸ್ವರ್ಗದಲ್ಲಿ ಇರುವರೆ ಎಂದು ಪ್ರಶ್ನಿಸಿದೆ. ನನಗೆ ಗೊತ್ತಿಲ್ಲ ಎಂದು ಮುನಿಸಿಗೊಂಡು ಫೋಟೋ ಗಳನ್ನು ಹುಡುಕಿಡಲು ತಾಕೀತು ಮಾಡಿ ಒಳ ಸರಿದು ಹೋದಳು.
2
ಮತ್ತೊಂದು ಫೋಟೊ ಕಟ್ಟನ್ನು ಕೆಳಗಿಳಿಸಿ ನೋಡಿದೆ. ಎಲ್ಲ ಹಳೆಯ ಕಾಲದ ಪೂರ್ವಿಕರ ಫೊಟೋಗಳು.ಅವು ಯಾರ ಯಾರ ಫೋಟೋಗಳು ಎಂಬುದು ತಿಳಿಯಲೊಲ್ಲದು. ಆದರೆ ಅವುಗಳ ಪೈಕಿ ಒಂದು ಫೋಟೋ ಮಾತ್ರ ನನ್ನ ಗಮನ ಸೆಳೆಯಿತು. ಅದು ನನ್ನ ಅಜ್ಜ ಮಹದೇವಯ್ಯನವರ ಫೋಟೊ. ಕಾಲಚಕ್ರ ಕಳೆದಂತೆ ಅನೇಕರು ನನ್ನ ನೆನಪಿನಿಂದ ಜಾರಿ ಹೋಗಿದ್ದರೂ ನನ್ನ ಅಜ್ಜ ಮಾತ್ರ ಹಾಗೆಯೇ ಮನದಲ್ಲಿ ನೆಲೆ ಗೊಂಡಿದ್ದಾರೆ. ಅವರ ನೆನಪು ನನ್ನನ್ನು ಆರ್ದ ಗೊಳಿಸಿತು. ಮಹದೇವಯ್ಯ ಸಾಧಾರಣ ಎತ್ತರದ ತೆಳುವಾದ ಮೈಕಟ್ಟಿನವರು, ಎಣ್ಣೆಗೆಂಪು ಮೈಬಣ್ಣ ಗೋಪಾಲಕೃಷ್ಣ ಗೋಖಲೆಯವರಂತಹ ಪೊಗದಸ್ತಾದ ಬಿಳಿಮೀಸೆ, ಕನ್ನಡಕದಲಿ ಹೊಳೆಯುವ ಚುರುಕುಕಣ್ಣುಗಳು, ನೀಳನಾಶಿಕ ಗುಳಿಬಿದ್ದ ಕಣ್ಣುಗಳು ತಲೆಗೆ ಬಿಳಿರುಮಾಲು ಮಲ್ಲಿನ ಬಟ್ಟೆಯ ಧೋತರ ಬಿಳಿಯ ಕಫ್ ಶರ್ಟ ಮೇಲೆ ಬೂದು ಬಣ್ಣದ ಕೋಟು, ಅದರ ಒಳ ಜೋಬಿನಲ್ಲಿ ಒಂದು ಸ್ವಿಸ್ ಕಂಪನಿಯ ಸ್ತಾಪ್ವಾಚ್, ಕೈಯಲ್ಲಿ ಬಾಗಿದ ಹಿಡಿಯ ಒಂದು ಬೆತ್ತದ ಕೋಲು ವಾಕಿಂಗ್ ಸ್ಟಿಕ್ ಎಂದರೂ ನಡೆದೀತು. ಅವರು ಸ್ವಲ್ಪ ಅಸ್ತಮಾ ಪ್ರಕೃತಿಯವ ರಾಗಿದ್ದು ಆಗಾಗ ಕೆಮ್ಮು ಅವರನ್ನು ಬಾಧಿಸುತ್ತಿತ್ತು . ಮಳೆಗಾಲ ಮತ್ತು ಚಳಿಗಾಲಗಳಲಿ ಅದರ ಕಾಟ ಜಾಸ್ತಿ ಎಂದೇ ಹೇಳಬೇಕು. ಅವರದೊಂದು ಸಣ್ಣ ಪಟಗ್ಟಿಗೆಯಿದ್ದು ಅದರಲ್ಲಿ ಸಣ್ಣ ದೊಡ್ಡ ಖಾನೆಗಳು ಅದರ ಪಕ್ಕ ಕುಳಿತು ಬರೆ ಯಲು ಅನುಕೂಲ ವಾಗುವಂತೆ ಮುಚ್ಚಿ ತೆಗೆಯಬಹುದಾದಂತೆ ಮಾಡಿಸಿದ ಒಂದು ಡೆಸ್ಕ್. ಆಗಾಗ ಅವರು ಆ ಡೆಸ್ಕಿನ ಮೇಲೆ ಬರೆಯುತ್ತ ಕುಳಿತಿರುತ್ತಿದ್ದುದನ್ನು ಆಗ ನೋಡ ಬಹುದಿತ್ತು. ಅವರು ಏನು ಬರೆಯುತ್ತ್ತಿದ್ದರು ಎನ್ನು ವುದು ಈಗ ನಮಗೆ ಅಸ್ಪಷ್ಟ. ಅವರು ಬರವಣಿಗೆಯಲ್ಲಿ ಮಗ್ನರಾದಾಗ ಸಣ್ಣವರಾದ ನಮ್ಮನ್ನು ಹತ್ತಿರಕ್ಕೆ ಬಿಟ್ಟುಕೊಳ್ಳು ತ್ತಿರಲಿಲ್ಲ. ಆ ಸ್ಥಳದಲ್ಲಿ ಯಾವಾಗಲೂ ಒಂದು ಗುಡಾರದ ಹಾಸು ಇದ್ದೇ ಇರುತ್ತಿತ್ತು. ಗೋಡೆಗೆ ಆನಿಸಿ ಎರಡು ಮೂರು ದಿಂಬುಗಳನ್ನು ಇಟ್ಟಿರುತ್ತಿದ್ದರು. ಯಾರಾದರೂ ಗಣ್ಯರು ಇಲ್ಲವೆ ನಂಟರು ಬಂದರೆ ಅರಾಮವಾಗಿ ಕುಳಿತು ಕೊಳ್ಳಲು ಎಂದು. ಊರಿಗೆ ಹೋಗುವ ಸಂಧರ್ಭದಲ್ಲಿ ಹೆಗಲಿಗೆ ಒಂದು ಹಸಿಬಿ ಚೀಲ ಇದು ಅವತರ ಸ್ಥೂಲ ವ್ಯಕ್ತಿ ಚಿತ್ರಣ.
ಅದು ನನ್ನ ಬಾಲ್ಯದ ಕಾಲ ಆಗ ನಾವೆಲ್ಲ ಇದ್ದುದು ಬೈಲಮಲ್ಲಾಪುರದಲ್ಲಿ. ನಮ್ಮದು ತುಂಬು ಕುಟುಂಬ ವಾಗಿತ್ತು. ಸಣ್ಣವರು ದೊಡ್ಡವರು ಎಲ್ಲ ಸೇರಿ ಸುಮಾರು ಮೂವತ್ತು ನಾಲ್ವತ್ತು ಜನರಿದ್ದಿರಬಹುದು. ದೊಡ್ಡಪ್ಪ ಗಿರಿನಾಥರವರದೆ ಮನೆಯ ಯಜಮಾನಿಕೆ, ನಮ್ಮದು ವ್ಯವಸಾಯ ಪ್ರಧಾನವಾದ ಕುಟುಂಬವಾಗಿತ್ತು. ಸುಮಾರು ಐವತ್ತು ಎಕರೆ ಜಮೀನು ಇದ್ದು ದೈನಂದಿನ ವ್ಯವಸಾಯ ಮತ್ತು ದನಕರುಗಳನ್ನು ನೋಡಿಕೊಳ್ಳು ಎರಡು ಜನ ಆಳುಗಳು. ನನ್ನ ತಂದೆ ಹರಿನಾಥರದು ವ್ಯವಸಾಯದ ಉಸ್ತುವಾರಿ ಕೆಲಸ. ಚಿಕ್ಕಪ್ಪಂದಿರಾದ ಹರನಾಥ ಮತ್ತು ಗುರುನಾಥ ರವರಿಗೆ ಸರ್ಕಾರಿ ನೌಕರಿಯಿದ್ದು, ಅವರು ಊರ ಹತ್ತಿರದ ಮಾಲಿಂಗಪುರ ದಲ್ಲಿದ್ದರು. ಆಗಾಗ ರಜಾ ಕಾಲದಲ್ಲಿ ಊರಿಗೆ ಬಂದು ಹೋಗುತ್ತಿದ್ದರು. ನಾನು ನಾಲ್ಕು ವರ್ಷದವನಿರುವಾಗಲೇ ನನ್ನ ಸೋದರಮಾವ ಹಿರೆಕೆರೆ ಗ್ರಾಮದ ಸೋಮಯ್ಯ ನವರಲ್ಲಿಗೆ ಹೋದೆ. ಸೋಮಯ್ಯ ಭಾರತ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಚಳುವಳಿಯಲ್ಲಿ ಸೇರಿದ್ದರಿಂದ ಆಗ ಬ್ರಟೀಶ್ ಸರಕಾರ ಅವರನ್ನು ಎರಡು ವರ್ಷಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂದಿಯಾಗಿರಿಸಿತ್ತು. ಅವರು ಮದುವೆ ಯಾಗಿರಲಿಲ್ಲ. ಅವರ ಮನೆಯಲ್ಲಿ ಅವರ ಚಿಕ್ಕಮ್ಮ ನಾಗಮ್ಮ ಮತ್ತು ಹಿರಿಯ ತಂಗಿ ಗಂಗಮ್ಮ ಎಂಬ ವಿಧವೆಯರಿದ್ದರು. ಹೀಗಾಗಿ ಅವರ ಯೋಗಕ್ಷೇಮದ ಹೊರೆಹೊತ್ತು ತಾವು ಅವಿವಾಹಿತ ರಾಗಿಯೆ ಉಳಿದರು. ಹಿರೆಕೆರೆ ಗ್ರಾಮದ ಅವರ ಬಹುಪಾಲು ಆಸ್ತಿಯನ್ನು ಆಗಿನ ಬ್ರಿಟೀಷ್ ಸರಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಅವರ ತಾಬಕ್ಕೆ ಬಿಟ್ಟಿದ್ದ ಬರಿ ಹತ್ತು ಎಕರೆ ಜಮೀನಿನಲ್ಲಿ ಬರುವ ಹುಟ್ಟುವಳಿ ಯಿಂದಲೇ ಅವರ ಜೀವನ ನಡೆಯಬೇಕಿತ್ತು. ನಾನು ನಾಲ್ಕು ವರ್ಷದವನಿರುವಾಗ್ಲೇ ಮಾವನಮನೆಯ ಆಶ್ರಯಕ್ಕೆ ಯಾಕೆ ಹೋದೆ ಎಂಬ ಬಗ್ಗೆ ನನಗೆ ಇನ್ನೂ ಸ್ಪಷ್ಟ ಕಾರಣಗಳು ದೊರಕಿಲ್ಲ. ಯಾರೂ ಆ ಕಾರಣಗಳನ್ನು ನನಗೆ ಹೇಳಿಲ್ಲ. ಈ ಬಗ್ಗೆ ನಾನು ಯಾರನ್ನೂ ಕೇಳಲು ಹೋಗಿಲ್ಲ. ಹೀಗಾಗಿ ಬೈಲಮಲ್ಲಾಪುರದ ನನ್ನ ನೆನಪುಗಳು ಅಸ್ಪಷ್ಟ. ಕ್ರಮೇಣ ನಾನು ಆ ಗ್ರಾಮಕ್ಕೆ ಮತ್ತು ಆ ಮನೆಯ ವಾತಾವರಣಕ್ಕೆ ಹೊಂದಿಕೊಂಡುಬಿಟ್ಟೆ. ಮಾವ ಅಜ್ಜಿ ದೊಡ್ಡಮ್ಮ ಅವರುಗಳೆ ನನಗೆ ಸರ್ವಸ್ವವಾದರು. ಕೆಲ ವರ್ಷಗಳ ನಂತರ ಕಾರಣಾಂತರಗಳಿಂದ ಎಲ್ಲ ಅವಿಭಕ್ತ ಕುಟುಂಬಗಳಂತೆ ಬೈಲಮಲ್ಲಾಪುರದ ನನ್ನ ಅಜ್ಜ ಮಹದೇವಯ್ಯನವರ ಅವಿಭಕ್ತ ಕುಟುಂಬ ಒಡೆಯಿತು. ನನ್ನ ತಂದೆ ತಾಯಿ ಅನಿವಾರ್ಯವಾಗಿ ಬೈಲಮಲ್ಲಾಪುರದಿಂದ ನೆರೆಯ ಮಾಲಿಂಗಪುರದಲ್ಲಿದ್ದ ನನ್ನ ಚಿಕ್ಕಪ್ಪ ಹರನಾಥರವರಲ್ಲಿಗೆ ಆಶ್ರಯಕ್ಕೆ ಬಂದು ನಿಲ್ಲ ಬೇಕಾಯಿತು. ನಾನೂ ಸಹ ಆಗಾಗ ಅಲ್ಲಿಗೆ ಬೇಸಿಗೆಯ ರಜಾ ದಿನಗಳಲ್ಲಿ ಹೋಗಿ ಬರುತ್ತಿದ್ದೆ. ಆಗ ನಾನು ಅಲ್ಲಿ ಹಲವು ಬಾರಿ ನನ್ನ ಅಜ್ಜ ಮಹದೇವಯ್ಯನವರನ್ನು ನೋಡಿದ ನೆನಪು.
3
ನನ್ನ ಅಜ್ಜ ಮಹದೇವಯ್ಯ ಬ್ರಿಟೀಷರ ಆಡಳಿತಾವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಶಿರಸ್ತೆದಾರಹುದ್ದೆಯನ್ನು ನಿರ್ವಹಿಸಿ ನಿವೃತ್ತರಾದವರು. ಅವರು ತಮ್ಮ ನಿವೃತ್ತ ಜೀವನವನ್ನು ಅನುಕೂಲಸ್ಥರಾಗಿರುವ ತಮ್ಮ ಮಕ್ಕಳೊಬ್ಬರಲ್ಲಿ ಇದ್ದು ಕಳೆಯ ಬಹುದಿತ್ತು. ಆದರೆ ಅವರ ಪಿತ್ರಾರ್ಜಿತ ಆಸ್ತಿ ಸುಮಾರು ಇಪ್ಪತ್ತು ಎಕರೆ ಜಮೀನು ಕೆರೆಹಳ್ಳಿ ಗ್ರಾಮದಲ್ಲಿ ಇದ್ದು, ಆ ಆಸ್ತಿಯನ್ನು ಪಡೆಯುವುದಕ್ಕಾಗಿ ಕೋರ್ಟ್ ಕéಛೇರಿ ಎಂದು ಹೋರಾಟವನ್ನು ಮಾಡುತ್ತ ನಿವೃತ್ತ ಜೀವನದ ತಮ್ಮ ಆಯುಷ್ಯ ವನ್ನು ಏಕಾಂಗಿಯಾಗಿ ಕೆರೆಹಳ್ಳಿ ಗ್ರಾಮದಲ್ಲಿ ಕಳೆದರು. ನನಗೆ ತಿಳಿದ ಮಟ್ಟಿಗೆ 1956 ನೇ ಇಸವಿಯ ಮಳೆಗಾಲದ ಒಂದು ಮಧ್ಯಾನ್ಹ ಎರಡು ಗಂಟೆಯ ವೇಳೆಗೆ ಹಿರೆಕೆರೆ ಗ್ರಾಮದ ಹನುಮಂತ ದೇವರ ಗುಡಿ ಓಣಿಯನ್ನು ದಾಟಿ ಮುಖ್ಯ ರಸ್ತೆಗೆ ಬಂದು ರಾಮ ಭವನದ ಮುಂದೆ ಬಲಕ್ಕೆ ತಿರುಗಿ ಶಾಲೆಗೆ ಹೋಗುತ್ತಿರುವಾಗ ಹಿರೆಕೆರೆ ಗ್ರಾಮದ ಪೋಲೀಸ್ ಕಛೇರಿ ಕಡೆಯಿಂದ ಬಂದ ನನ್ನ ಅಜ್ಜ ಮಹದೇವಯ್ಯ ನನ್ನನ್ನು ನೋಡಿ ನಗುತ್ತ ಶಾಲೆಗೆ ಹೊಂಟೆಯೇನೋ ? ಎಂದು ಪ್ರಶ್ನಿಸಿದರು. ಅನಿರೀಕ್ಷಿತವಾಗಿ ಅವರನ್ನು ಅಲ್ಲಿ ಕಂಡ ನನಗೆ ತಬ್ಬಿಬ್ಬಾಗಿ ಏನೆಂದು ಉತ್ತರಿಸುವುದು ಎಂದು ಗೊತ್ತಾಗಲಿಲ್ಲ. ಹೂಂ ಎಂದು ಹೂಂ ಗುಟ್ಟಿದೆ.
' ಎಷ್ಟನೇ ತರಗತಿಯಲ್ಲಿ ಓದುತ್ತಿದ್ದೀಯಾ ' ಎಂದು ಮರು ಪ್ರಶ್ನಿಸಿದರು.
' ಎರಡನೆ ತರಗತಿ ' ಎಂದು ಉತ್ತರಿಸಿ ' ಮನೆಗೆ ಹೋಗೋಣ ಬಾ ' ಎಂದು ಕರೆದೆ. ಅದಕ್ಕೆ ಅವರು
'ನಾನು ಇಲ್ಲಿಗೆ ಕಛೇರಿ ಕೆಲಸಕ್ಕೆ ಬಂದಿದ್ದೆ , ಈಗ ತುರ್ತಾಗಿ ಮರಳಿ ಕೆರೆಹಳ್ಳಿಗೆ ಹೋಗ ಬೇಕಾಗಿದೆ, ಇನ್ನೊಮ್ಮೆ ಇಲ್ಲಿಗೆ ಬಂದಾಗ ಮನೆಗೆ ಬರುತ್ತೇನೆ, ನೀನು ಈಗ ಶಾಲೆಗೆ ಹೋಗು ' ಎಂದರು.
ನಾನು ಶಾಲೆಗೆ ಹೋದವನು ಸಾಯಂಕಾಲ ಆರು ಗಂಟೆಗೆ ಶಾಲೆ ಬಿಟ್ಟ ನಂತರ ಮನೆಗೆ ಹೋದವನು ಅಜ್ಜ ಭೇಟಿಯಾದ ವಿಷಯವನ್ನು ಎಲ್ಲರಿಗೂ ತಿಳಿಸಿದೆನು. ಆಗ ನನ್ನ ಅಜ್ಜಿ ನಾಗಮ್ಮ
' ನಿಮ್ಮ ಅಜ್ಜ ಈ ಮನೆಗೆ ಬರುವುದಿಲ್ಲ ' ಎಂದಳು. ಆಗ ನಾನು ಅವರಿಗೆ ತುರ್ತು ಕೆಲಸವಿದೆ ಎಂದು ಹೇಳಿ ಹೋಗಿದ್ದಾರೆ ಇನ್ನೊಮ್ಮೆ ಬಂದಾಗ ಬರುವುದಾಗಿಹೇಳಿದ್ದಾರೆಂದು ನುಡಿದೆ. ಆಗ ನನ್ನ ಅಜ್ಜಿ ನಾಗಮ್ಮ ನಿನ್ನ ಹತ್ತಿರ ಸುಳ್ಳುಸುಳ್ಳೇ ಹೇಳಿದ್ದಾರೆ. ನಿನ್ನಮ್ಮನ ಮದುವೆಗೆ ಈ ಮನೆಗೆ ಬಂದವರು ತಿರುಗಿ ಇಲ್ಲಿಗೆ ಬಂದಿಲ್ಲ ಎಂದಳು. ಯಾಕೆ? ಎಂದು ನಾನು ಮರು ಪ್ರಶ್ನಿಸಿದೆ. ಆಗ ಅಜ್ಜಿ ಹೇಳಿದಳು.
ಸುಮಾರು ಹನ್ನೆರಡು ವರ್ಷಗಳ ಹಿಂದಿನ ಮಾತು, ನಿನ್ನ ಅಜ್ಜ ಅವರ ಎರಡನೆಯ ಮಗ ಹರಿನಾಥರಿಗೆ ಹೆಣ್ಣು ನೋಡಲು ಅಂದರೆ ನಿನ್ನಮ್ಮಳನ್ನು ನೋಡಲು ಬಂದಿದ್ದರು. ಹೆಣ್ಣು ನೋಡುವ ಶಾಸ್ತ್ರ ಮುಗಿಸಿ ನಿನ್ನ ಅಜ್ಜ ಹೊರಡಲು ಎದ್ದು ನಿಂತರು. ಆಗ ನಮ್ಮ ಮನೆಯ ಕೆಲಸದಾಳು ರಾಮ ಮೇಯಲು ಕಾಡಿಗೆ ಹೋಗಿದ್ದ ದನಕರು ಗಳನ್ನು ಹೊಡೆದು ಕೊಂಡು ಬಂದ. ಅದನ್ನು ಶುಭ ಶಕುನವೆಂದು ಭಾವಿಸಿ ನಿಮ್ಮ ಮನೆಯ ಹೆಣ್ಣು ಮಗಳನ್ನು ನನ್ನ ಮಗನಿಗೆ ತಂದು ಕೊಳ್ಳುತ್ತೇವೆ ಎಂದು ಹೇಳಿ ಹೋದವರು ಅದರಂತೆ ನಡೆದುಕೊಂಡ ಗ್ರಹಸ್ಥ ಕೂಡ ಆದರೆ ಮದುವೆ ಮುಗಿಸಿಕೊಂಡು ಮರಳಿ ದಿಬ್ಬಣ ಹೊರಟ ಸಂಧರ್ಭದಲ್ಲಿ ಯಾರೋ ಮಾಡಿದ ಸಣ್ಣ ಕುಚೋದ್ಯ ಅವರ ಮನಸನ್ನು ಮುರಿದು ಹಾಕಿತು, ನಂತರದಲ್ಲಿ ಅವರು ಈ ಮನೆಗೆ ಕಾಲು ಹಾಕಲಿಲ್ಲ ಎಂದಳು.
' ಅದು ಏನು ಅಜ್ಜಿ ' ಎಂದು ನಾನು ಪ್ರಶ್ನಿಸಿದೆ.
ನಿನ್ನಮ್ಮಳ ಮದುವೆಗೆ ಕೊಲ್ಲಾರಿ ಕಟ್ಟಿದ ಎತ್ತಿನ ಗಾಡಿಗಳಲ್ಲಿ ನಿನ್ನಜ್ಜ ಮಹದೇವಯ್ಯ ಮದುವೆ ದಿಬ್ಬಣ ಕರೆ ತಂದಿದ್ದರು. ಪ್ರಸಂಗ ಬಿದ್ದರೆ ಆಳು ಕಾಳುಗಳ ಊಟೋಪಚಾರಕ್ಕೆ ಇರಲಿ ಎಂದು ಒಂದು ಬಾಯಿ ಕಟ್ಟಿದ ಚೀಲದಲ್ಲಿ ಅಕ್ಕಿ ಮತ್ತು ಒಂದು ಮೂಟೆ ಸಕ್ಕರೆ ತಂದಿದ್ದರು. ಆದರೆ ಅವುಗಳನ್ನು ಅವರಿಗೆ ಉಪಯೋಗಿಸುವ ಪ್ರಮೇಯವೆ ಬರಲಿಲ್ಲ. ನಿನ್ನ ಮಾವ ತಂಗಿಯ ಮದುವೆಗೆ ಕೆರೆ ದಂಡೆಯ ಹೊಲವನ್ನು ಮಾರಾಟ ಮಾಡಿ ಮದುವೆ ಮಾಡಿದ್ದ. ಯಾವುದೇ ರೀತಿಯ ಕೊರತೆಯಾಗದಂತೆ ಬೀಗರ ಅವರ ಜೊತೆ ಬಂದಿದ್ದ ಅವರ ಆಳು ಕಾಳುಗಳ ಊಟೋಪ ಚಾರದ ವ್ಯವಸ್ಥೆ ನೋಡಿಕೊಂಡ. ಮದುವೆ ಮುಗಿದು ದಿಬ್ಬಣ ಮರಳಿ ಹೊರಟ ಸಂಧರ್ಭ ಪೋಲೀಸಿನವರು ಊರ ಹೊರಗೆ ಮದುವೆಯ ದಿಬ್ಬಣವನ್ನು ನಿಲ್ಲಿಸಿ ಎತ್ತಿನ ಗಾಡಿಗಳನ್ನು ತಲಾಶ್ ಮಾಡಿ ಬೀಗರು ತಂದಿದ್ದ ಅಕ್ಕಿಚೀಲ ಮತ್ತು ಸಕ್ಕರೆ ಮೂಟೆಗಳನ್ನು ಹಿಡಿದರು. ಅದು ಕಂಟ್ರೋಲ್ ಜಾರಿಯಲ್ಲಿದ್ದ ಕಾಲ. ಆಗ ನಿಮ್ಮಜ್ಜ ಮಹದೇವಯ್ಯ ಅವರಿಗೆ ನಿಜ ಸ್ಥಿತಿಯನ್ನು ತಿಳಿಸಿ ಮದುವೆ ದಿಬ್ಬಣ ಬಂದಿದ್ದು ಸಂಧರ್ಭ ಬಂದರೆ ಇರಲಿ ಎಂದು ಊರಿನಿಂದ ತಂದಿದ್ದು ಅವುಗಳನ್ನು ಉಪಯೋಗಿಸುವ ಸಂಧರ್ಭ ಬರಲಿಲ್ಲ ಮರಳಿ ಊರಿಗೆ ಒಯ್ಯುತ್ತಿದ್ದೇವೆ ಎಂದರು. ಆದರೆ ಫೌಜದಾರ ದಂಡವನ್ನು ಕಟ್ಟಿಸಿಕೊಂಡು ಮದುವೆ ದಿಬ್ಬಣವನ್ನು ಹೋಗ ಬಿಟ್ಟರು. ಈ ಘಟನೆಯಿಂದ ಮನನೊಂದ ನಿನ್ನ ಅಜ್ಜ ನಂತರ ಈ ಮನೆಗೆ ಕಾಲಿಡಲಿಲ್ಲ. ಈ ಕುಚ್ಯೋದ್ಯದ ಘಟನೆಗೆ ಕಾರಣರಾದವರು ನಿನ್ನ ಮಾವನ ದಾಯವಾದಿ ವೆಂಕಟೇಶಯ್ಯನ ಮಕ್ಕಳು ಎಂದು ನಂತರ ತಿಳಿಯಿತು. ಆದರೆ ಏನು ಮಾಡುವುದು ನಡೆಯ ಬಾರದ ಘಟನೆ ನಡೆದು ಹೋಗಿತ್ತು ಯಾರದೋ ಕುಚ್ಯೋದ್ಯದಿಂದಾದ ಘಟನೆಯನ್ನು ನಿನ್ನ ಅಜ್ಜ ಮರೆಯಲೇ ಇಲ್ಲ ಎಂದಳು. ನನ್ನ ಕಣ್ಮುಂದೆ ಬೈಲಮಲ್ಲಾಪುರದ ನಮ್ಮ ಮನೆಯ ಅಸ್ಪಷ್ಟವಾಗಿ ನೆನಪಿದ್ದ ಕೆಲವು ಘಟನೆಗಳು ನನ್ನ ಕಣ್ಮುಂದೆ ಸುಳಿದು ಹೋದವು. ಆದರೆ ನನ್ನಜ್ಜ ನನ್ನಮ್ಮಳನ್ನು ತನ್ನ ಎಲ್ಲ ಸೊಸೆಯರಂತೆಯೆ ಘನತಗೆಯಿಂದ ನಡೆಸಿ ಕೊಂಡರು. ಆದರೆ ಇದೇ ಮಾತನ್ನು ಆ ಮನೆಯ ನನ್ನ ಅಜ್ಜಿ ಸರಸ್ವತಮ್ಮ ಮತ್ತು ಇತರೆ ಹೆಂಗಳೆಯರ ಬಗೆಗೆ ಹೇಳುವಂತಿಲ್ಲ. ಆ ಮನೆಯ ಹೆಂಗಸರು ನನ್ನ ದೊಡ್ಡಪ್ಪ ಮತ್ತು ಇತರರ ಮಕ್ಕಳನ್ನು ನೋಡಿ ಕೊಳ್ಳುವ ರೀತಿ ಯಲ್ಲಿಯೆ ತಾರ್ತಮ್ಯವಿದೆ ಎನಿಸುತ್ತಿತ್ತು. ನಾನು ಆ ಮನೆಯಲ್ಲಿ ಕಡೆಗಣಿಸಲ್ಪಟ್ಟ ಮಗು ಎಂದೆನಿಸುತ್ತಿತ್ತು. ಆ ಮನೆಯ ಹಿರಿಯೆ ಅಜ್ಜಿ ಸರಸ್ವತಮ್ಮ ಮತ್ತು ಇನ್ನೊಬ್ಬ ಹೆಣ್ಣು ಮಗಳು ಲಕ್ಷ್ಮೀದೇವಮ್ಮ ನನ್ನನ್ನು ನಡೆಸಿಕೊಳ್ಳುವ ರೀತಿಯೇ ಬೇರೆ ತರಹ ಇತ್ತು. ಉಳಿದ ಮಕ್ಕಳು ತಪ್ಪು ಮಾಡಿದರೆ ತಪ್ಪಲ್ಲ ಆದರೆ ನಾನು ತಪ್ಪು ಮಾಡಿದರೆ ತಪ್ಪು ಎಂಬ ಧೋರಣೆ ಇರುತ್ತಿತ್ತು. ಆ ಮನೆಯಲ್ಲಿ ನಾನು ಮತ್ತು ನನ್ನ ಅಮ್ಮ ಅನ್ಯರು ಎಂಬ ಭಾವನೆ ಆ ಮೆನಯ ಹೆಂಗಸರಲ್ಲಿತ್ತು ಎನಿಸುತ್ತಿತ್ತು. ನನ್ನ ದೊಡ್ಡಪ್ಪ ಗಿರಿನಾಥ ಮತ್ತು ಚಿಕ್ಕಪ್ಪ ಹರನಾಥರಿಗೆ ಅವರ ಹತ್ತಿರದ ರಕ್ತ ಸಂಬಂಧ ದಲ್ಲಿಯೇ ಹೆಣ್ಣುಗಳನ್ನು ತಂದಿದ್ದು ಅವರ ಬಗ್ಗೆ ನನ್ನ ಅಜ್ಜಿ ಸರಸ್ವತಮ್ಮಳಿಗೆ ಒಲವು ಜಾಸ್ತಿ ಇತ್ತೆಂಬುದು ಅವರ ವರ್ತನೆಯಿಂದ ಕಂಡು ಬರುತ್ತಿತ್ತು. ಹೀಗಾಗಿ ನಾನು ನಾಲ್ಕು ವರ್ಷದವನಿರುವಾಗಲೇ ನನ್ನಮ್ಮ ನನ್ನನ್ನು ನನ್ನ ಸೋದರ ಮಾವನ ಮನೆಯಲ್ಲಿ ಬಿಟ್ಟು ಹೋದಳು. ಅಲ್ಲಿ ನನ್ನ ಮಾವ ಅಜ್ಜಿ ಹಾಗೂ ದೊಡ್ಡಮ್ಮ ನನ್ನನ್ನು ಬಹಳ ಚೆನ್ನಾಗಿಯೆ ನೋಡಿ ಕೊಂಡರು. ಹೀಗಾಗಿ ಬೈಲಮಲ್ಲಾಪುರ ನನ್ನ ಗ್ರಾಮ, ಅಲ್ಲಿಯ ಮನೆ ನನ್ನ ಮನೆ ಎಂಬ ಭಾವನಾತ್ಮಕ ಸಂಬಂಧ ನನಗೆ ಬರಲೆ ಇಲ್ಲ.
( ಮುಂದುವರೆಯಲಿದೆ )
Comments
ಉ: ಅಜ್ಜನ ಫೋಟೊ ( ಕಥೆ ) ಭಾಗ 1
In reply to ಉ: ಅಜ್ಜನ ಫೋಟೊ ( ಕಥೆ ) ಭಾಗ 1 by swara kamath
ಉ: ಅಜ್ಜನ ಫೋಟೊ ( ಕಥೆ ) ಭಾಗ 1
ಉ: ಅಜ್ಜನ ಫೋಟೊ ( ಕಥೆ ) ಭಾಗ 1
In reply to ಉ: ಅಜ್ಜನ ಫೋಟೊ ( ಕಥೆ ) ಭಾಗ 1 by partha1059
ಉ: ಅಜ್ಜನ ಫೋಟೊ ( ಕಥೆ ) ಭಾಗ 1
ಉ: ಅಜ್ಜನ ಫೋಟೊ ( ಕಥೆ ) ಭಾಗ 1
In reply to ಉ: ಅಜ್ಜನ ಫೋಟೊ ( ಕಥೆ ) ಭಾಗ 1 by venkatb83
ಉ: ಅಜ್ಜನ ಫೋಟೊ ( ಕಥೆ ) ಭಾಗ 1
ಉ: ಅಜ್ಜನ ಫೋಟೊ ( ಕಥೆ ) ಭಾಗ 1
In reply to ಉ: ಅಜ್ಜನ ಫೋಟೊ ( ಕಥೆ ) ಭಾಗ 1 by padma.A
ಉ: ಅಜ್ಜನ ಫೋಟೊ ( ಕಥೆ ) ಭಾಗ 1