ಕವನ: ನಿಯಮ
- ೧ -
ಅದ್ಯಾವುದೋ ಒಂದು
ದಿನ ನೆನಪಾಗುತ್ತಿಲ್ಲ
ಇತಿಹಾಸ.
ಮಾಲಂಗಿ ಮಡುವಾಗಲಿ
ಅಂತ ಶಾಪ ಕೊಡುತ್ತೇನೆ
ಅಂದಳು.
ಅವಳು ಹೆಣ್ಣು
ಅಂಥ ನೂರೊಂದು ಮಡುಗಳು
ಈಗಾಗಲೇ ನಿನ್ನಲ್ಲಿವೆ
ಅಂದ.
ಅವನು ಕವಿ
ಒಪ್ಪಿಕೊಂಡಳು.
ಒಪ್ಪಿಸಿಕೊಂಡಳು.
ಪೆನ್ನಿಗೆ ಇಂಕು
ಹೂಜಿಗೆ ನೀರು
ಪೆಗ್ಗಿಗೆ ಬೀರು
ತುಂಬಿಸುತ್ತಾ
ತ್ತಾ...
ತ್ತಾ...
ತ್ತಾ...
ಅವಳು ಎದೆಯಲ್ಲೊಂದಷ್ಟು ಹಾಲು
ತುಂಬಿಸಿಕೊಂಡಳು ಧ್ಯಾನಿಸಿ
ಅದಕ್ಕೊಂದಿಷ್ಟು ಅಕ್ಕರೆ
ಯ ಸಕ್ಕರೆಯನ್ನೂ ಬೆರೆಸಿಕೊಂಡಳು.
ಅವಳು ಒಪ್ಪಿ ಒಪ್ಪಿಸಿ
ಕೊಂಡವಳು.
- ೨ -
ಈಗೆಲ್ಲ ನಿಚ್ಚಳ
ವರ್ತಮಾನ.
ಒಪ್ಪಿ
ಕೊಂಡವಳ ಲೆಕ್ಕ
ತಪ್ಪಿ
ಹೋಗಿ ಅದೇನೋ ಧ್ಯಾನದಲ್ಲಿ
ಉದುರಲೇ ಇಲ್ಲ ಮಾಗಿಯಲ್ಲಿ
ಎಲೆಗಳು ಅಂದು
ಕೊಂಡಳು.
ಅವು ವಸಂತದಲ್ಲಿ ಚಿಗುರಿ
ರಲೇ ಇಲ್ಲ ಎಂದವಳಿಗೆ ಅವನು
ಹೇಳಿರಲೇ ಇಲ್ಲ.
ಅವನ ಕವನಗಳೆಲ್ಲಾ ಬಿಸಿ ಬೆವರು
ಹಸೀ ಮಣ್ಣು.
ಬೆವರು ಕಾಸಿಗೆ ಸಿಕ್ಕಿ
ದ ಯಾರದ್ದಾದರೂ ಆದೀತು.
ಮಣ್ಣು...?
ಅವನ ಕಾಲಡಿಯದಾಗಿದ್ದರೆ ಮಾತ್ರ
ಎಲೆ ಉದುರುವುದು
ಕಣ್ಣವೆಗಳ ಹಿಂದೆ ಮಾತ್ರ.
ರವಿ ಕಂಡ
ಕವಿಗೆ ಕಾಣಿಸಲೇ ಇಲ್ಲ.
ಅವಳು ಅತ್ತಳು.
ಕಣ್ಣುಗಳಿದ್ದೆಡೆ ಕಣ್ಣೀರಿರಲೇಬೇಕು
ಅಂತ ನಿಯಮ.
Comments
ಉ: ಕವನ: ನಿಯಮ
In reply to ಉ: ಕವನ: ನಿಯಮ by H A Patil
ಉ: ಕವನ: ನಿಯಮ