ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ನಮ್ಮ ಕಣ್ಣ ಮುಂದಿರುವ ಜ್ವಲಂತ ಸಾಕ್ಷಿಯ ನಡುವೆ ಮಹಿಳೆಯರ ವೇತನ ಸಮಾನತೆಯ ಘೋಷಣೆಯೊಂದಿಗಿನ ನೂರನೇ ವರ್ಷಾಚರಣೆ ವಿಪರ್ಯಾಸವಲ್ಲವೇ?

ಇತ್ತೀಚೆಗೆ ಅಮೆರಿಕವು ಪ್ರಕಟಿಸಿದ "2007 ಜಾಗತಿಕ ನಗರಾಭಿವೃದ್ಧಿ ಪರಿಷ್ಕರಣಾ ವರದಿ"ಯಲ್ಲಿ ಭಾರತದ ಅತೀ ಹೆಚ್ಚು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವೀಗಾಗಲೇ ಓದಿದ್ದೇವೆ. ಪ್ರಸ್ತುತ ವರದಿ ಪ್ರಕಾರ ಭಾರತದ ಜನಸಂಖ್ಯೆಯ 70 ಪ್ರತಿಶತ ಮಂದಿಯೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ ಇನ್ನುಳಿದ 30% ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಅಂದರೆ ಇಲ್ಲಿನ ಬಹುತೇಕ ಮಂದಿಯೂ ಕೃಷಿಯನ್ನು ಅವಲಂಬಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕಾದುದು ಅತೀ ಅಗತ್ಯ ಎಂದಾಯಿತು. ಇದರ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೊಂದಬಹುದೆಂದು ತಜ್ಞರ ಅಭಿಪ್ರಾಯ. ಅದೇನೇ ಇರಲಿ ಗ್ರಾಮೀಣ ಜನರ ಅಥವಾ ಮಧ್ಯಮ ವರ್ಗದ ಜನರ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸಿದರೆ ಅವರ ಉದ್ಯೋಗ ಮತ್ತು ಅವರಿಗೆ ದೊರೆಯುವಂತಹ ವೇತನದ ಬಗ್ಗೆಯೂ ನಾವು ಮನನ ಮಾಡಬೇಕಾಗಿದೆ.

ಕಾರ್ಪೋರೇಟ್‌ಗಳ ಜೀವನ ಶೈಲಿಯಿಂದ ಒಂದು ಕ್ಷಣ ಹೊರಗೆ ಬಂದು ಮಧ್ಯಮ ವರ್ಗದ ಅಥವಾ ಗ್ರಾಮೀಣ ಜನರ ಬದುಕಿನ ಪುಟವನ್ನು ತಿರುವಿ ನೋಡಿದರೆ ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದಿರುವ ಜನರೆಂದು ಬಣ್ಣಿಸಲ್ಪಡುವ ಗ್ರಾಮೀಣ ಜನರಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜನರು ಹಗಲು ರಾತ್ರಿಗಳೆಂದು ದುಡಿಯುತ್ತಿರುತ್ತಾರೆ. ಆದರೆ ತಾವು ಮಾಡುವ ಕೆಲಸಕ್ಕೆ ದೊರೆಯುವ ವೇತನದಲ್ಲಿ ಸಮಾನತೆ ಇದೆಯೇ? ಉದಾಹರಣೆಗೆ ಗ್ರಾಮ ಪ್ರದೇಶದಲ್ಲಿ ತೋಟದ ಕೆಲಸ ಮಾಡುವ ಹೆಂಗಸರನ್ನು ಮತ್ತು ಗಂಡಸರ ವಿಷಯವನ್ನೇ ತೆಗೆದುಕೊಳ್ಳಿ. ಇಬ್ಬರೂ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ಗಂಡಸರಿಗೆ ಅಧಿಕ ವೇತನ, ಹೆಣ್ಣು ಎಷ್ಟೇ ಕೆಲಸ ಮಾಡಿದರು ಹೆಣ್ಣೆಂಬ ನೆಪಕ್ಕೆ ಅವಳಿಗೆ ಕಡಿಮೆ ಸಂಬಳವೇಕೆ? ಹೆಣ್ಣು ಮತ್ತು ಗಂಡು ಇವರ ಕೆಲಸಗಳನ್ನು ಹೋಲಿಸಿದರೆ ಗಂಡು ಮಾಡುವಂತಹ ಕೆಲಸ ತುಸು ಕಠಿಣವಾಗಿದ್ದಿರಬಹುದು, ಹೆಣ್ಣಿಗೆ ಅಷ್ಟು ದೈಹಿಕ ಸಾಮರ್ಥ್ಯವಿಲ್ಲದೇ ಇರಬಹುದು ಆದರೆ ಗ್ರಾಮಗಳಲ್ಲಿ ಗಂಡು ಹೆಣ್ಣಿನ ವೇತನಗಳಿಗೇಕೆ ಸಮಾನತೆ ಕಂಡು ಬಂದಿಲ್ಲ?

ನನಗೆ ತಿಳಿದಂತೆ ತೋಟದಲ್ಲಿ(ಗ್ರಾಮಗಳಲ್ಲಿ) ಕೆಲಸ ಮಾಡುವ ಪುರುಷರಿಗೆ ದಿನಕ್ಕೆ 120ರೂ. ಸಂಬಳ ನೀಡುತ್ತಿದ್ದರೆ, ಹೆಂಗಸರಿಗೆ 80 ರೂ. ನೀಡಲಾಗುತ್ತದೆ. ಇವರಿಬ್ಬರ ಕೆಲಸಗಳನ್ನು ತಾರತಮ್ಯ ಮಾಡಿದರೆ ಗಂಡಸರು ಮಾಡುವ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ಹೆಂಗಸರು ಮಾಡುತ್ತಿದ್ದು, ಅದೂ ಮಾತ್ರವಲ್ಲ ಹೆಂಗೆಳೆಯರು ಮಾಡುವ ಕೆಲಸಗಳು ಹೆಚ್ಚು ನಿಖರ ಮತ್ತು ಅಚ್ಚುಕಟ್ಟಾಗಿರುತ್ತದೆ. ಎಷ್ಟೇ ಚುರುಕಿನಿಂದ ಕೆಲಸ ಮಾಡಿದರೂ ಮಹಿಳೆಗೆ ಸಿಗುವ ವೇತನ ಯಾವಾಗಲೂ ಕಡಿಮೆಯೇ. ಗಂಡಸರಿಗೆ ಕುಟಂಬದವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ತನ್ನ ಮಡದಿ ಮಕ್ಕಳ ಜೀವನ ಸಾಗಿಸಲು ಅವರಿಗೆ ಹೆಚ್ಚಿನ ಸಂಬಳವನ್ನು ನೀಡಲಾಗುತ್ತಿದೆ ಎಂದು ವಾದಿಸಿದರೂ ಗಂಡನನ್ನು ಕಳೆದುಕೊಂಡು ಬೇರೆ ಯಾರನ್ನೂ ಅವಲಂಬಿಸದೆ, ತನ್ನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ ಉತ್ತಮವಾಗಿ ಜೀವನ ನಿರ್ವಹಿಸುವ ಒಂಟಿ ಮಹಿಳೆಯರು ನಮ್ಮಲ್ಲಿಲ್ಲವೇ ? ಕೃಷಿ ಕುಂಠಿತಗೊಂಡಾಗ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ವಿಧವೆಯರು ತನ್ನ ಗಂಡನ ಕಾಯಕವನ್ನೇ ಮುಂದುವರಿಸಿದರೂ ಪುರುಷ ಸಮಾನವಾದ ವೇತನವನ್ನು ನೀಡಲಾಗುತ್ತಿದೆಯೇ ? ಭಾರತದಲ್ಲಿ 30 ಮಿಲಿಯನ್ ವಿಧವೆಯರು ಗಂಡಿನ ಆಸರೆಯಿಲ್ಲದೆ ಬದುಕು ಸಾಗಿಸುತ್ತಿಲ್ಲವೇ ? ಕೃಷಿಕಾರ್ಯಗಳಲ್ಲಿ ಅತೀ ಹೆಚ್ಚು ತಾಳ್ಮೆಯನ್ನುಪಯೋಗಿಸಿ ಕೆಲಸ ಮಾಡುವವರು ಮಹಿಳೆಯರಲ್ಲವೇ ? ಕಳೆ ಕೀಳುವುದು, ಜೊಳ್ಳು ತೆಗೆಯುವುದು ಮೊದಲಾದ ಚಿಕ್ಕ ಕೆಲಸಗಳನ್ನು ಮಹಿಳೆಗೆ ವಹಿಸಿಕೊಡಲಾಗಿದ್ದರೂ ಅದನ್ನು ಅತೀ ತಾಳ್ಮೆಯಿಂದ ಚೊಕ್ಕಟವಾಗಿ ಕೆಲಸ ಮಾಡಲು ಸಾಧ್ಯವಿರುವುದು ಮಹಿಳೆಯರಿಗೆ ಮಾತ್ರ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಕೈಗಾರಿಕಾ ಕ್ಷೇತ್ರದತ್ತ ಗಮನ ಹರಿಸಿದರೆ ಬಹುತೇಕ ಮಂದೆ ಕೈಗಾರಿಕಾ ಉದ್ಯಮಿಗಳು ಮಹಿಳೆಯರೇ ಆಗಿರುವುದನ್ನು ಕಾಣಬಹುದು. ಅದು ಗುಡಿ ಕೈಗಾರಿಕೆ ಇರಲಿ, ಕಾರ್ಖಾನೆಯಾಗಿರಲಿ ಅಲ್ಲಿ ಮಹಿಳೆಯರದ್ದೇ ಹೆಚ್ಚು ಪಾಲು. ನೇಯ್ಗೆಯಾಗಲಿ, ಕಸೂತಿ ಕೆಲಸವಿರಲಿ ಅಥವಾ ಮನೆ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಾಕೆಯೇ ಆಗಿರಲಿ, ಅತೀ ತಾಳ್ಮೆಯಿಂದ ಮಾಡಬೇಕಾದಂತಹ ಏನೇ ಕೆಲಸವಿರಲಿ ಮಹಿಳೆಯರೇ ಅಂತಹ ಕಾರ್ಯಗಳಿಗೆ ನಿಯೋಜಿಸಲ್ಪಡುತ್ತಾರೆ. ಅವರು ಮಾಡುವ ಕಾರ್ಯದಲ್ಲಿ ಅಷ್ಟೇ ಪ್ರಾಮಾಣಿಕತೆ, ವಸ್ತು ನಿಷ್ಠೆಗಳು ಮೈಗೂಡಿಸಿಕೊಂಡಿರುವುದರಿಂದಲೇ ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಆದರೂ ವೇತನದಲ್ಲಿ ಸಮಾನತೆ ಎಂಬುದು ಇಂದಿಗೂ ಬಗೆಹರಿಯಲಾರದ ಪ್ರಶ್ನೆಯಾಗಿದೆ.

ಗ್ರಾಮಗಳಿಂದ ನಗರಗಳತ್ತ ಮುಖ ಮಾಡಿದರೆ ಐಟಿ ಬಿಟಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಂತೂ ಗಣನೀಯ ವರ್ಧನೆ ಕಂಡು ಬರುತ್ತಿರುವುದು ಕಾಣಬಹುದು. ರಾತ್ರಿ ಹಗಲು ದುಡಿಯುವುದರಲ್ಲೂ ಮಹಿಳೆ ಸೈ ಎಂದೆನಿಸಿಕೊಂಡಿದ್ದಾಳೆ. ಐಟಿ-ಬಿಟಿ ಕ್ಷೇತ್ರಗಳಲ್ಲಿ, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ, ಕಾಲ್ ಸೆಂಟರ್‌ಗಳಲ್ಲಿ ಅತೀ ತಾಳ್ಮೆಯಿಂದ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ, ಕಂಪೆನಿಗಳಲ್ಲಿ ಹೆಚ್ ಆರ್( ಮಾನವ ಸಂಪನ್ಮೂಲ ಕಾರ್ಯನಿರ್ವಾಹಣಾಧಿಕಾರಿ) ಈ ಎಲ್ಲಾ ಹುದ್ದೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಮಹಿಳೆಯರು ತಮ್ಮ ಜಾಣತನವನ್ನು ಮೆರೆದಿದ್ದಾರೆ. ಯಾವುದೇ ನೌಕರಿ ಆಗಿದ್ದರೂ ತಮಗೆ ದೊರೆಯುವ ಕನಿಷ್ಠ ಸಂಬಳದಿಂದ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿಯೂ ಮಹಿಳೆ ಪುರುಷ ವರ್ಗಕ್ಕಿಂತ ಒಂದು ಹೆಜ್ಜೆ ಮುಂದಿದ್ದಾಳೆ ಎಂದು ಹೇಳಬಹುದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತಿಸಿದರೆ ಜಗತ್ತಿನ ಆಹಾರೋತ್ಪಾದನೆಯಲ್ಲಿ ಬಹುಪಾಲು ಮಹಿಳೆಯೆರೇ ಶ್ರಮ ವಹಿಸುತ್ತಾರೆ. ಆಫ್ರಿಕಾ ಮತ್ತು ಕೆರೆಬಿಯನ್ ರಾಷ್ಟ್ರಗಳಲ್ಲಿ 80% ಆಹಾರೋತ್ಪಾದನೆಯಲ್ಲಿ ಮಹಿಳೆಯರು ದುಡಿದರೆ, ಏಷ್ಯಾದಲ್ಲಿ 50% ಮಹಿಳೆಯರು ದುಡಿಯುತ್ತಾರೆ. ಲ್ಯಾಟಿನ್ ಅಮೆರಿಕದಲ್ಲಿ ಬಹುತೇಕ ಮಹಿಳೆಯರು ಕೃಷಿ, ಜೇನುಸಾಕಣೆ, ಪಶು ಪಾಲನೆ ಮೊದಲಾದ ಕಾರ್ಯಗಳಲ್ಲಿ ದುಡಿದು ದೇಶದ ಅಭಿವೃದ್ದಿಗೆ ಬೆನ್ನೆಲುಬಾಗಿದ್ದಾರೆ. ಯುನಿಸೆಫ್ ಸಂಘಟನೆಯು 2007ರಲ್ಲಿ ಪ್ರಕಟಿಸಿದ ವರದಿಯಲ್ಲಿ ವಿಶ್ವದ ಮಕ್ಕಳ ಸ್ಥಿತಿಗತಿಯು ಮಹಿಳೆಯರ ಸ್ಥಿತಿಗತಿಗಳಿಗೆ ಅನುರೂಪವಾಗಿದ್ದು, ಮಹಿಳೆಯ ಆರ್ಥಿಕ ಸ್ವಾವಲಂಬನೆಯು ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಯುನಿಸೆಫ್ ಸಂಘಟನೆಯ ಮಾಹಿತಿ ಪ್ರಕಾರ ವಿಶ್ವದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆಂಬುದನ್ನು ಉಲ್ಲೇಖಿಸಿದ್ದು ಪ್ರಸ್ತುತ ಕೆಳಗೆ ನೀಡಿದಂತಹ ಅಂಕಿ ಅಂಶವು ಇದಕ್ಕೆ ಪೂರಕವಾಗಿದೆ.

ರಾಷ್ಟ್ರಗಳು ಮತ್ತು ಅಲ್ಲಿನ ಸ್ತ್ರೀ- ಪುರುಷ ವಾರ್ಷಿಕ ವೇತನದ ಅಂಕಿ ಅಂಶ(ಅಮೆರಿಕನ್ ಡಾಲರ್‌ಗಳಲ್ಲಿ)

ಕೈಗಾರಿಕಾ ಪ್ರಾಧಾನ್ಯವಿರುವ ರಾಷ್ಟ್ರಗಳು - ಸ್ತ್ರೀ - 21%, ಪುರುಷ - 37%

ಲ್ಯಾಟಿನ್ ಅಮೆರಿಕ ಮತ್ತು ಕರೇಬಿಯನ್ - ಸ್ತ್ರೀ - 4.6%, ಪುರುಷ - 8%

ಐರೋಪ್ಯ ಮತ್ತು ಕಾಮನ್‌ವೆಲ್ತ್ ಸ್ವತಂತ್ರ ರಾಷ್ಟ್ರಗಳು - ಸ್ತ್ರೀ - 4%, ಪುರುಷ - 10%

ಪೂರ್ವ ಏಷ್ಯಾ ಮತ್ತು ಪೆಸಿಫಿಕ್ - ಸ್ತ್ರೀ - 4%, ಪುರುಷ - 6.5%

ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ - ಸ್ತ್ರೀ - 2%, ಪುರುಷ - 7%

ದಕ್ಷಿಣ ಏಷ್ಯಾ - ಸ್ತ್ರೀ - 1%, ಪುರುಷ - 2.5%

ಆಫ್ರಿಕಾ - ಸ್ತ್ರೀ - 1%, ಪುರುಷ - 2%

ಇದು ಮಾತ್ರವಲ್ಲದೆ ಇತ್ತೀಚೆಗೆ ವೇತನ ಸಮಾನತೆಯ ಬಗ್ಗೆ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ಒಕ್ಕೂಟಗಳು ಪ್ರಕಟಿಸಿದ ವರದಿಯಲ್ಲಿ ವಿಶ್ವದಲ್ಲಿ ಮಹಿಳಾ ಉದ್ಯೋಗಿಗಳು ಪುರುಷ ಉದ್ಯೋಗಿಗಳಿಗಿಂತ 16 ಪ್ರತಿಶತ ಕಡಿಮೆ ವೇತನವನ್ನು ಗಳಿಸುತ್ತಿದ್ದಾರೆ ಎಂಬ ಅಂಶವನ್ನು ಎತ್ತಿ ಹಿಡಿದಿದೆ. ಪ್ರಸ್ತುತ ವರದಿಯಲ್ಲಿ ಜಗತ್ತಿನ 63 ದೇಶಗಳಲ್ಲಿನ ವೇತನದ ಅಂತರವನ್ನು ಲೆಕ್ಕ ಹಾಕಲಾಗಿದ್ದು, ಇದರಲ್ಲಿ ಸ್ತ್ರೀಯರ ವೇತನ ಮತ್ತು ಪುರುಷರ ವೇತನದಲ್ಲಿ 15.6 ಪ್ರತಿಶತ ಅಂತರ ಕಂಡು ಬಂದಿದೆ. ಯುರೋಪ್ ,ಒಸೇನಿಯಾ, ಲ್ಯಾಟಿನ್ ಅಮೆರಿಕ, ಏಷ್ಯಾ ಮತ್ತು ಆಫ್ರಿಕಾದಲ್ಲಿ ಅತ್ಯಧಿಕ ವೇತನಗಳಲ್ಲಿ ಅತ್ಯಧಿಕ ಅಂತರವಿರುವುದು ಕಂಡು ಬಂದಿದೆ. ಆದರೆ ಬಹರೈನ್‌ನ ಮಧ್ಯ ಪೂರ್ವ ದೇಶಗಳಲ್ಲಿ ಮಾತ್ರ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ಮಹಿಳೆಯರ ಸಂಖ್ಯೆ ಅತೀ ಕಡಿಮೆಯಾಗಿದ್ದು, ಆದುದರಿಂದಲೇ ಮಹಿಳೆಯರ ವೇತನವು ಪುರುಷರ ವೇತನಕ್ಕಿಂತ 40 ಪ್ರತಿಶತ ಅಧಿಕವಾಗಿದೆ. ಪ್ರಸ್ತುತ ವರದಿಯಲ್ಲಿ ಇಂತಹ ಅಂತರಗಳು ಹೆಚ್ಚಾಗಿ ಸ್ತ್ರೀ ಪ್ರಾಬಲ್ಯವಿರುವ ಕ್ಷೇತ್ರಗಳಾದ ವಿದ್ಯಾಭ್ಯಾಸ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಂಡು ಬರುತ್ತದೆ ಎಂದು ಉಲ್ಲೇಖಿಸಿದ್ದು , ಸಾರ್ವಜನಿಕ ಕಾರ್ಯನಿರ್ವಹಣೆ, ಸಾಮಾಜಿಕ ಮತ್ತು ಸೇವಾಕ್ಷೇತ್ರಗಳಲ್ಲಿ ಹೆಚ್ಚಿನ ಅಂತರಗಳು ಕಂಡು ಬರುವುದಿಲ್ಲ ಎಂದು ಹೇಳಲಾಗಿದೆ. ಜಗತ್ತಿನ ಎಲ್ಲೆಡೆಗಳಲ್ಲೂ ಮಹಿಳೆಯರ ವೇತನದ ಸರಿ ಸಮಾನತೆಯ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆದು ಬರುತ್ತಿದ್ದರೂ ಇಂದಿನ ವರೆಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಮಹಿಳೆಯರು ಮುಂದೆ ಬರಬೇಕಾಗಿದೆ. ಪುರುಷ ಸ್ತ್ರೀ ವೇತನದ ನಡುವೆ ಇರುವ ಈ ಅಂತರಕ್ಕೆ ಪ್ರಧಾನ ಕಾರಣ ಏನೆಂಬುದರ ಬಗ್ಗೆ ಫ್ರೊಫೆಸರ್ ಲಿಂಡಾ ಸಿ.ಬಾಬ್‌ಕೋಕ್ ಅವರು ತಮ್ಮ ಪುಸ್ತಕವಾದ "ವುಮನ್ ಡೋಂಟ್ ಆಸ್ಕ್:ನೆಗೋಶಿಯೇಷನ್ ಏಂಡ್ ದ ಜೆಂಡರ್ ಡಿವೈಡ್ "ನಲ್ಲಿ "ಮಹಿಳೆಯರು ಹೆಚ್ಚಾಗಿ ತಮಗೆ ದೊರೆತ ಉದ್ಯೋಗದಲ್ಲಿ ತೃಪ್ತಿಕಾಣುವವರು ಅದರಂತೆಯೇ ಅವರು ತಮ್ಮ ವೇತನದ ಬಗ್ಗೆ ಸಂಧಾನ ಮಾತುಕತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ.ಇದರಿಂದಾಗಿಯೇ ಸಂಸ್ಥೆಗಳು ನೀಡಿದ ವೇತನದಲ್ಲಿಯೇ ತೃಪ್ತಿಕಂಡುಕೊಳ್ಳುತ್ತಾರೆ "ಎಂದು ಬರೆದಿದ್ದಾರೆ. ಇಲ್ಲಿ ಉಲ್ಲೇಖಿಸಿದಂತಹ ಲಿಂಡಾ ಅವರ ಮಾತು ಅಕ್ಷರಶ ಸತ್ಯ! ಅದಕ್ಕಾಗಿ ಮಹಿಳೆಯರು ತಮ್ಮ ಸಮಾನತೆಗೆ ಹೋರಾಟ ನಡೆಸುವಾಗ ಆರ್ಥಿಕ ಸಮಾನತೆಯ ಬಗ್ಗೆಯೂ ಮಾತೆತ್ತಬೇಕು. ಆಗ ಮಾತ್ರ ಸುದೃಢವಾದ ಆರ್ಥಿಕ ತಳಹದಿಯಲ್ಲಿ ಮಹಿಳೆಯು ಎದ್ದು ನಿಲ್ಲಲು ಸಾಧ್ಯ.

By: ರಶ್ಮಿ.ಪೈ
07/03/08

Rating
No votes yet

Comments