ಸಖೀಗೀತ - ಒಂದು ಹೊಸ ಓದು

ಸಖೀಗೀತ - ಒಂದು ಹೊಸ ಓದು

          ಶ್ರೇಷ್ಠ ಕಾವ್ಯಗಳ ಮರು ಓದು ನಿಂತಾಗ ಅವು ಗೊಡ್ಡು ಅಕಾಡೆಮಿಕ್ ವಿಶ್ಲೇಷಣೆ, ಕಸರತ್ತುಗಳಲ್ಲಿ ನವೆಯುತ್ತವೆ ಇಲ್ಲವೆ ವಸ್ತು ಪ್ರದರ್ಶನಾಲಯದ ಸ್ಪೆಸಿಮನ್ ಆಗಿಬಿಡುತ್ತವೆ. ಬೇಂದ್ರೆಯವರ ಸಖೀಗೀತದ ಇಂದಿನ ಪ್ರಸ್ತುತತೆಯನ್ನು ಮತ್ತೆ ನೆನೆಯುವ ಅನುಮತಿಗಾಗಿ ಈ ಪೂರ್ವಪೀಠಿಕೆಯನ್ನು ಹೇಳಬೇಕಾಯಿತು. ಬೇಂದ್ರೆಗೆ ಕನ್ನಡ ಮೇಘದೂತವನ್ನು ಬರೆದೂ ತೃಪ್ತಿಯಾಗದೇ ಸಖೀಗೀತವನ್ನು ಕೈಗೆತ್ತಿಕೊಂಡಿರಬಹುದು ಎಂದು ಒಮ್ಮೊಮ್ಮೆ ಅನುಮಾನ ಉಂಟಾಗುತ್ತದೆ (ಕಾಲಾನುಕ್ರಮಣಿಕೆಯ ದೃಷ್ಟಿಯಿಂದಲೂ ಮೊದಲು ರಚನೆಯಾದದ್ದು ಕನ್ನಡ ಮೇಘದೂತವೇ, ಅನಂತರ ಸಖೀಗೀತದ ರಚನೆಯಾಯಿತು. ಪ್ರಕಟಣೆಯಾದ ಇಸವಿಗಳಲ್ಲಿ ವ್ಯತ್ಯಾಸವಿದೆ).

          ಈವರೆಗಿನ ಎಲ್ಲ ಪ್ರೇಮಕಾವ್ಯಗಳೂ ವಿಪ್ರಲಂಭ ಶೃಂಗಾರವನ್ನು (ವಿಪ್ರಲಂಭ ಶೃಂಗಾರ: ಗಂಡು-ಹೆಣ್ಣುಗಳು ಬೇರ್ಪಟ್ಟ ಸ್ಥಿತಿಯ ವರ್ಣನೆ, ಸಂಭೋಗ ಶೃಂಗಾರ: ಗಂಡು ಹೆಣ್ಣುಗಳು ಸೇರಿದ ಸ್ಥಿತಿಯ ವರ್ಣನೆ) ವರ್ಣಿಸುವ ಕಾವ್ಯಗಳಾಗಿವೆ. ಗಂಡು ಹೆಣ್ಣುಗಳು ಬೇರ್ಪಟ್ಟಾಗ ಮಾತ್ರ ಅವರ ನಡುವಿನ ಪ್ರೀತಿ ದೊಡ್ಡದಾಗಿ ಕಾಣಿಸಿಕೊಳ್ಳುವುದು ಎಂದು ಹಿಂದಿನ ಕವಿಗಳು ಭಾವಿಸಿದರು. ಕಾವ್ಯದಲ್ಲಿ ಒಂದು ವೇಳೆ ಗಂಡು ಹೆಣ್ಣುಗಳು ಸೇರಿಬಿಟ್ಟರೆ ಅಲ್ಲಿಂದಾಚೆ ಸ್ವಾರಸ್ಯವಿರುವುದಿಲ್ಲ. ಸಂಭೋಗ ಶೃಂಗಾರದಲ್ಲಿಯೂ ಸ್ವಾರಸ್ಯ ಇರುವುದಾದರೂ ಅದು ವೈಯಕ್ತಿಕ ನೆಲೆಯದ್ದಾಗಬಹುದು ಎಂದು ಭಾವಿಸಿದ ಹಿಂದಿನ ಎಲ್ಲ ಕವಿಗಳೂ ಅದನ್ನು ಕಾವ್ಯದ ವಸ್ತುವನ್ನಾಗಿ ಮಾಡಿಕೊಳ್ಳಲು ಹಿಂಜರಿದರು. ಇದುವೆ ಬೇಂದ್ರೆಗೆ ಕಾಳಿದಾಸನ ಮೇಘದೂತದಲ್ಲಿ ಕಂಡು ಬಂದ ಲೋಪ. ಈ ಲೋಪವನ್ನು ತುಂಬಿಕೊಡಲೆಂದೇ ಅವರು ’ಸಖೀಗೀತ’ವನ್ನು ಬರೆದದ್ದು. ಸಾಮಾನ್ಯ ಕವಿಗಳು ಅನ್ಯಭಾಷೆಯ ಕಾವ್ಯದ ಚೆಲುವನ್ನು ಕಂಡು ಬೆರಗಾಗಿ ಅದನ್ನು ಕನ್ನಡಕ್ಕೆ ತರಲು ಆಶಿಸಿದರೆ, ಕುವೆಂಪು, ಬೇಂದ್ರೆಯಂತಹ ಕವಿಗಳು ಆ ಉದ್ದೇಶಕ್ಕಾಗಿ ಕಾವ್ಯಗಳನ್ನು ಅನುವಾದಿಸಲಿಲ್ಲ. ಕನ್ನಡದ ಮೂಲಕವೇ ಅನ್ಯಭಾಷೆಯ ಕಾವ್ಯಗಳ ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನಿಸಿದರು (ಕುವೆಂಪು ಅವರ ರಾಮಾಯಣ ದರ್ಶನಂ ಕೂಡ ವಾಲ್ಮೀಕೀ ರಾಮಾಯಣದ ದಾರ್ಶನಿಕ ಕೊರತೆಗಳನ್ನು ನಿವಾರಿಸುವ ಪ್ರಯತ್ನವಾಗಿದೆ). ಹಾಗೆಯೇ ಬೇಂದ್ರೆಯವರು ಕಾಳಿದಾಸನ ಮೇಘದೂತವನ್ನು ಸಂಭೋಗ ಶೃಂಗಾರದ ನೆಲೆಯಲ್ಲಿ ಮುಂದುವರೆಸಲು ಸಖೀಗೀತವನ್ನು ಬರೆದದ್ದು. ಸಖೀಗೀತವು ’ಯಕ್ಷ-ಯಕ್ಷಿ’ಯರು ಸೇರುವ ಘಟನೆಯಿಂದ ಆರಂಭವಾಗುತ್ತದೆ. ’

          ಕರುಳಿನ ತೊಡಕನ್ನು ಕುಸುರಾಗಿ ಬಿಡಿಸಿಟ್ಟು ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ?’ ಎಂಬ ತರಹದ ಸಾಲಗಳನ್ನು ಮೆಚ್ಚಿಕೊಳ್ಳುವಾಗಲೂ ತುಂಬ ಸಲ ’ತೊಡವು’ (ಒಡವೆ) ಎಂಬ ಪದ ನಮ್ಮ ಲೋಭ ಹಾಗು ಕೃಪಣ ಪ್ರವೃತ್ತಿಗಳನ್ನು ಜಾಗೃತಗೊಳಿಸಿರುತ್ತದೆ. ಇಂದು ಈ ಲೋಭಬುದ್ಧಿಯೇ ಬಹುತೇಕ ಗಂಡು ಹೆಣ್ಣುಗಳ ಸಂಬಂಧದ ಗೌರವವನ್ನು ಸುಲಭವಾಗಿ ಛಿದ್ರಗೊಳಿಸುತ್ತಿರುವುದು. ’ಸಖೀಗೀತ’ ಕಾವ್ಯದುದ್ದಕ್ಕೂ ಬಡತನದ ನಿರೂಪಣೆ ಬರುವುದಾದರೂ ಅಲ್ಲಿ ಬಡತನ ಸಂಬಂಧದ ವ್ಯವಸಾಯಕ್ಕೆ ಬಾಧಕವಾಗುವುದಿಲ್ಲ. ನಾವಿಂದು ಬದುಕುತ್ತಿರುವ ಕಾಲಮಾನದಲ್ಲಿ ’ಸಖೀಗೀತ’ದಿಂದ ಏನನ್ನು ಕಲಿಯಬಹುದು ಎಂಬುದು ನಮಗೆ ಮುಖ್ಯವಾಗಬೇಕು. ಬೇಂದ್ರೆ ತನ್ನ ಕೈಹಿಡಿದವಳನ್ನು ಸತಿ ಎನ್ನದೆ ’ಸಖಿ’ ಎಂದು ಏಕೆ ಕರೆಯುತ್ತಾರೆ ಎಂಬ ಜಿಜ್ಞಾಸೆ ತುಂಬ ಕುತೂಹಲಕಾರಿ. ಲೋಕದ ಜನ ’ಗರ್ಲ್‌ಫ್ರೆಂಡ್’ನ್ನು ಹೆಂಡತಿಯರನ್ನಾಗಿಸಿಕೊಳ್ಳುತ್ತಿದ್ದರೆ ಸಖೀಗೀತದಲ್ಲಿ ಬೇಂದ್ರೆ ಹೆಂಡತಿಯನ್ನೇ ’ಗರ್ಲ್‌ಫ್ರೆಂಡ್’ ಆಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ’ ಸಖೀಗೀತಕ್ಕೆ ಇದು ತುಂಬ ಲಘುವಾದ ವ್ಯಾಖ್ಯಾನ ಅನ್ನಿಸಬಹುದಾದರೂ ಬೇಂದ್ರೆಯ ಈ ಸಖಿಯನ್ನಾಗಿಸಿಕೊಳ್ಳುವ ಪ್ರಯತ್ನದ ಹಿಂದೆ ಗಹನವಾದ ತಾತ್ವಿಕ ಸ್ಪಷ್ಟತೆ ಹಾಗು ನಿಷ್ಟೆ ಇದೆ.

          ಪುಸ್ತಕ ಓದುವುದರಿಂದ, ದೇಶ ಸುತ್ತುವುದರಿಂದ ಮನುಷ್ಯನ ಉದ್ಧಾರವಾಗುವುದಿಲ್ಲ (ಜಿಜ್ಞಾಸೆ - ಗಂಗಾವತರಣ), ಬದಲಿಗೆ ತಂದೆ, ತಾಯಿ, ಹೆಂಡತಿ, ಮಗ, ಇತ್ಯಾದಿ ಸಂಬಂಧಗಳ ವ್ಯವಸಾಯದಲ್ಲಿ, ಈ ಸಂಬಂಧಗಳನ್ನು ಸರಿಯಾಗಿ ನಡೆಸಿಕೊಳ್ಳುವುದರಲ್ಲಿ ಮನುಷ್ಯನ ನಿಜವಾದ ವಿಕಾಸವಿದೆ ಎಂದು ಬೇಂದ್ರೆ ನಂಬಿದ್ದರು. ಇಲ್ಲಿ ’ಸರಿಯಾಗಿ’ ಎಂದರೆ ನೈತಿಕವಾಗಿ, ಕೌಟುಂಬಿಕವಾಗಿ ’ಸರಿಯಾಗಿ’ ಎಂದರ್ಥವಲ್ಲ. ಎಲ್ಲ ಕೌಟುಂಬಿಕ, ಸಾಮಾಜಿಕ, ಆಧ್ಯಾತ್ಮಿಕ ಸಂಬಂಧಗಳೂ ಕೊನೆಗೆ ಸಖ್ಯವಾಗಿ ಮಾರ್ಪಡಬೇಕು ಎಂದು ಬೇಂದ್ರೆ ತಿಳಿದಿದ್ದರು. ಅವರ ದೃಷ್ಟಿಯಲ್ಲಿ ಸಖ್ಯ ಎಂಬುದು ಅಸಾಮಾಜಿಕವಾದುದು, ಅದು ಎಲ್ಲ ಮಾನವೀಯ ಸಂಬಂಧಗಳ ಅಂತಿಮ ಸ್ವರೂಪವಾಗಿದೆ. ಗಂಡ-ಹೆಂಡತಿ, ತಂದೆ-ಮಗ, ಗುರು-ಶಿಷ್ಯ ಇವೇ ಮೊದಲಾದ ಸಂಬಂಧಗಳು ಕೊನೆಯವರೆಗೂ ಅದದೇ ರೂಪದಲ್ಲಿ ಉಳಿದುಕೊಂಡಿದ್ದರೆ ಆಂತಹ ಸಂಬಂಧಗಳು ಬೆಳವಣಿಗೆ ನಿಲ್ಲಿಸಿ ಕೊಳೆತು ನಾರುತ್ತಿವೆ ಎಂದು ಬೇಂದ್ರೆ ಭಾವಿಸುತ್ತಾರೆ. ಕೊನೆಗೆ ಭಕ್ತ-ಭಗವಂತನ ಸಂಬಂಧವೂ ಸಖ್ಯವಾಗಬೇಕು ಎಂಬುದು ಬೇಂದ್ರೆ ಕಾವ್ಯದ ಅಂತಿಮ ವಿವೇಕವಾಗಿದೆ. ಏಕೆಂದರೆ ಸಖ್ಯವಲ್ಲದ ಎಲ್ಲ ಮಾನವ ಸಂಬಂಧಗಳೂ ಆಂತರ್ಯದಲ್ಲಿ ಕೆಲವು ಬಗೆಹರಿಯದ ವೇದನೆಗಳನ್ನು ಹೊಂದಿರುತ್ತವೆ. ಪ್ರಾಮಾಣಿಕನಾದ ಪ್ರತಿಯೊಬ್ಬ ತಂದೆಗೂ, ಮಗನಿಗೂ, ಗಂಡನಿಗೂ, ಗುರುವಿಗೂ ತನ್ನ ಸಂಬಂಧಿಗೆ ತನ್ನಿಂದ ಸಲ್ಲಬೇಕಾದ್ದು ನ್ಯಾಯವಾಗಿ ಸಂದಿಲ್ಲ ಎಂದು ತಿಳಿದಿರುತ್ತದೆ. ಈ ವೇದನೆಯೇ ಅವರ ನಡುವೆ ಬಗೆಹರಿಯದ ಘರ್ಷಣೆ ಉಂಟು ಮಾಡುವುದು. ಸಖೀಗೀತದಲ್ಲಿಯೂ ತಂದೆ, ಮಗ, ತಾಯಿ, ಹೆಂಡತಿ, ಇತ್ಯಾದಿ ಪಾತ್ರಗಳು ವಿವಿಧ ಸಂಬಂಧಗಳಲ್ಲಿ ಸಿಗುವ ಸುಖದ ತೃಪ್ತಿಗೆ ತಣಿಯದೇ, ದುಃಖದ ಜಿಗುಪ್ಸೆಗೆ ಹೇಸದೆ, ಸುಖದುಃಖವಲ್ಲದ ಇನ್ನಾವುದೇ ಸ್ಥಿತಿಯಲ್ಲೂ ಸ್ಥಾವರಗೊಳ್ಳದೇ ಒಂದೇ ಸಮನೆ ಸಂಚಾರೀ ಸ್ಥಿತಿಯಲ್ಲಿ ಇರುತ್ತದೆ.

          ಎಲ್ಲ ಸಾಮಾಜಿಕ, ಕೌಟುಂಬಿಕ ಸಂಬಂಧಗಳೂ ಮನುಷ್ಯ ಸಹಜ ಪ್ರೀತಿಯ ಜೊತೆಗೆ ಕೆಲವು ಹೊಣೆಗಾರಿಕೆಗಳನ್ನು ಕೂಡ ಹೊರಿಸಿ ಹೃದಯಗಳ ನಡುವೆ ಯಾರಿಗೂ ಗೆಲುವಿರದ ಯುದ್ಧಗಳನ್ನು ಘೋಷಿಸಿಬಿಟ್ಟಿರುತ್ತವೆ. ಆದರೆ ಸಖ್ಯ ಹಾಗಲ್ಲ. ಅದು ಮಾನವ ಸಹಜ ಪ್ರೀತಿಯನ್ನು ಈ ಕೊನೆಯಿರದ ಯುದ್ಧದಿಂದ ಪಾರು ಮಾಡುತ್ತದೆ. ಸಖ್ಯದಲ್ಲಿ ಮನುಷ್ಯನು ಹಂಗು, ಹೊಣೆಗಾರಿಕೆಗಳಿಂದ ಬಿಡುಗಡೆ ಪಡೆದು ಮೊದಲ ಬಾರಿಗೆ ಸಹಜ ಪ್ರೀತಿಯ ರುಚಿ ನೋಡುತ್ತಾನೆ. ಹೀಗೆ ಲೋಕದ ಹಂಗು, ಹೊಣೆಗಾರಿಕೆಗಳಿಂದ ಮುಕ್ತನಾದ ಮನುಷ್ಯನ ಪಾಲಿಗೆ ಇಡೀ ಅಸ್ತಿತ್ವವೇ ಸಖ್ಯಭಾವದ್ದಾಗುತ್ತದೆ. ಈ ದೃಷ್ಟಿಯಿಂದ ’ಸಖೀಗೀತ’ ಬೇಂದ್ರೆಯ ಆಧ್ಯಾತ್ಮಿಕ ಸಾಧನೆಯ ಒಂದು ಅನಿವಾರ್ಯವಾದ ಹಂತವಾಗಿದೆ. ಬುದ್ಧ ಕಠೋರ ಮನಸ್ಸಿನಿಂದ ಹೆಂಡತಿಯನ್ನು ತೊರೆದು ಅವಳಿಂದ ಬಿಡುಗಡೆ ಪಡೆದರೆ, ಬೇಂದ್ರೆ ಸಖ್ಯದ ನೆರವಿನಿಂದ ಹೆಂಡತಿಯಿಂದ ಬಿಡುಗಡೆ ಪಡೆಯಲು ಪ್ರಯತ್ನಿಸುತ್ತಾರೆ. ಸಖೀಗೀತ ಕವಿಯಾದವನು ಹೆಂಡತಿಗೆ ಬರೆಯುವ ’ಡೈವೋರ್ಸ್ ನೋಟೀಸ್’ ಆಗಿದೆ. ಅದು ಲೀಗಲ್ ಅಲ್ಲ, ಬಟ್ ಎ ಪೊಯೇಟಿಕ್ ನೋಟೀಸ್.

          ಈ ಸಖ್ಯವನ್ನು, ಈ ಬಿಡುಗಡೆಯನ್ನು ಬೇಂದ್ರೆ ಸಖೀಗೀತದಲ್ಲಿ ಸಾಧಿಸಿಕೊಂಡರೇ ಇಲ್ಲವೇ ಎಂಬುದನ್ನು ಇನ್ನೂ ವಿವರವಾಗಿ ಬಗೆಯಬೇಕಿದೆ. ಏಕೆಂದರೆ ನಾವು ಯಾವುದನ್ನು ಸಂಭೋಗ ಶೃಂಗಾರ ಎಂದು ಕರೆಯುವೆವೋ ಅಲ್ಲಿಯೂ ಗಂಡು ಹೆಣ್ಣುಗಳ ಐಕ್ಯ ಸಂಭವಿಸುವುದಿಲ್ಲ ಅವರ ನಡುವೆಯೂ ಅಂತರ (ಸ್ಪೇಸ್) ಇದ್ದೇ ಇರುತ್ತದೆ ಎಂಬುದು ಸಖೀಗೀತದ ನಿಲುವಾಗಿದೆ. ಇದು ವಿಷಾದಕರ ನಿಲುವಲ್ಲ, ಸ್ಪೇಸ್ ಇಲ್ಲದೇ ಯಾವುದೇ ಬೆಳವಣಿಗೆ ಸಂಭವಿಸದು. ಹಾಗಾಗಿ ಸಖೀಗೀತ ಹಿಂದಿನ ವಿಪ್ರಲಂಭದ ಶೃಂಗಾರದ ಮುಂದುವರೆದ ರೂಪವಾಗಿದೆ, ವಿಪ್ರಲಂಭದ ಆಧ್ಯಾತ್ಮಿಕ ಆಯಾಮವಾಗಿದೆ. ಆದರೆ ’ಸಖೀಗೀತ’ ಒಂದು ಅಪೂರ್ಣಕಾವ್ಯ ಎಂದು ಹೇಳುವ ಮೂಲಕ ಬೇಂದ್ರೆ ಇಂತಹ ಗೊಡ್ಡು ತೀರ್ಮನಗಳಿಗೆ ಕೂಡ ಆಸ್ಪದ ನೀಡದೇ ಹೋಗುತ್ತಾರೆ. * ೨೦೧೧, ಡಿಸೆಂಬರ್ ಕೊನೆಯ ವಾರದಲ್ಲಿ ಚಳ್ಳಕೆರೆಯ ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಬೇಂದ್ರೆ ಕುರಿತು ನೀಡಿದ ಉಪನ್ಯಾಸದ ಕೆಲವು ಟಿಪ್ಪಣಿಗಳು.

Comments