ಅಜ್ಜನ ಫೋಟೊ ( ಕಥೆ ) ಭಾಗ 3

ಅಜ್ಜನ ಫೋಟೊ ( ಕಥೆ ) ಭಾಗ 3

  


                                                                   6


     ರಜೆಯಲ್ಲಿ ಮೊದಲ ಬಾರಿಗೆ ಎಂ ಟು ವರ್ಷಗಳ ನಂತರ ಬೈಲಮಲ್ಲಾಪುರ ಗ್ರಾಮಕ್ಕೆ ತೆರಳಿದೆ. ನನಗೆ ಬುದ್ಧಿ ಬಂದ ಮೇಲೆ ಅದೂ ನನ್ನೂರಿಗೆ ನನ್ನ ಮೊದಲ ಪಯಣವದಾಗಿತ್ತು. ಬಾಲ್ಯದ ಅಸ್ಪಷ್ಟ ನೆನಪುಗಳು, ಧರ್ಮ ಶಾಲೆಯ ರಸ್ತೆಯಾಚೆಗಿನ ಒಂದು ಸಣ್ಣ ಕೊಠಡಿಯಲ್ಲಿ ನನ್ನ ತಂದೆ ತಾಯಿ ತಂಗಿ ತಮ್ಮಂದಿರ ವಾಸ್ತವ್ಯ. ಅಲ್ಲಿಂದ ಸುಮರು ಮುನ್ನೂರು ಗಜ ದೂರದಲ್ಲಿ ನಾವು ಹಿಂದೆ ವಾಸವಾಗಿದ್ದ ಹಳೆಯ ಮನೆ. ಈಗ ಬೇರೆಯವರು ಅದನ್ನು ಖರೀದಿಸಿದ್ದು ಅದಕ್ಕೆ ಬೀಗ ಹಾಕಲಾಗಿತ್ತು. ಈಗ ಆ ಮನೆಯನ್ನು ಖರೀದಿಸಿದ ಗೌಡಪ್ಪ ಸಹ ಗುರುಸಿದ್ದ ಮಠದ ಸ್ವಾಮಿಗಳ ಅನುಯಾಯಿಯೆ. ಗೌಡಪ್ಪನಿಗೆ ಅದು ಐಮೂಲಿ ಮನೆಯಾಗಲಿಲ್ಲವೆ? ನಮ್ಮ ಒಳಿತಿಗಾಗಿ ಆ ಐಮೂಲಿ ಯ ಮನೆಯನ್ನು ಖರೀದಿಸ ಬಾರದೆಂದು ನಮಗೆ ಹೇಳಿದ್ದ ಸ್ವಾಮಿಗಳು ಗೌಡಪ್ಪನ ಒಳಿತಿಗಾಗಿ ಆ ಮನೆ ಖರೀದಿ ಮಾಡಬೇಡವೆಂದು ಯಾಕೆ ಹೇಳಲಿಲ್ಲ? ತಮ್ಮ ಸಮುದಾಯದ ಒಬ್ಬರಿಗೆ ಆ ಮನೆ ಖರೀದಿ ಮಾಡಿಸಿ ಕೊಡಬೇಕೆಂಬ ದೂರದರ್ಶಿತ್ವದಿಂದ ನಮ್ಮ ಕುಟುಂಬದ ಹಿರಿಯರ ಧರ್ಮಭೀರುತನ ಮತ್ತು ನಂಬುಗೆಯನ್ನು ದುರುಪಯೋಗ ಪಡಿಸಿ ಕೊಂಡರೆ? ಇಲ್ಲವೆ ನಮ್ಮ ಕುಟುಂಬದ ಯಜಮಾನಿಕೆಯನ್ನು ಹೊತ್ತವರಿಗೆ ಆ ಮನೆ ಖರೀದಿ ಬೇಡವಾಗಿತ್ತೆ? ವಿಷಯವೇನೆ ಇರಲಿ ನಮ್ಮ ಏಕತ್ರ ಕುಟುಂಬ ಬಾಳಿ ಬದುಕಿದ ಮನೆ ನಮ್ಮ ಕೈತಪ್ಪಿ ಬೇರೆಯವರ ಪಾಲಾಗಿತ್ತು. ನನ್ನ ಬಾಲ್ಯದ ಚದುರಿದ ನೆನಪುಗಳು, ನೋವು ನಲಿವುಗಳು ಮತ್ತು ಗತಿಸಿಹೋದ ಹಿರಿಯರ ಕನಸುಗಳು ಆ ಬಿಗ ಹಾಕಿದ ಮನೆಯಲ್ಲಿದ್ದವು. ನಮ್ಮ ಕುಟುಂಬದ ದುರ್ಗತಿ ನೆನೆದು ವ್ಯಾಕುಲತೆ ಯುಂಟಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನನ್ನ ಹೈಸ್ಕೂಲು ವಿದ್ಯಾಭ್ಯಾಸದ ಗತಿ ಏನು ಎಂಬ ಬಗ್ಗೆ ಚಿಂತನೆ ಯುಂಟಾಗಿತ್ತು. ಆ ನಮ್ಮ ಹಳೆಯ ಮನೆಯ ಮುಂದೆ ಅಡ್ಡಾಡುವ ಯಾವುದೆ ಪ್ರಡಸಂಗವನ್ನು ನಾನು ತಪ್ಪಿಸಿ ಕೊಳ್ಳುತ್ತಿರಲಿಲ್ಲ. ಮನೆಯನ್ನು ನೋಡಿ ಕಣ್ತುಂಬಿ ಕೊಂಡು ಸಂತಸ ಪಡುತ್ತಿದ್ದೆ. ಮತ್ತೆ ನಾವು ಆ ಮನೆಗೆ ಹೋಗಿ ಇರುವಂತಾದರೆ ಎಷ್ಟು ಚೆನ್ನ ಎನಿಸುತ್ತಿತ್ತು. ದೂಐವ ಕಣ್ಣು ಬಿಟ್ಟರೆ ಆ ಹಳೆಯ ಮನೆಯನ್ನೆ ಖರೀದಿಸ ಬಹುದು. ಇಲ್ಲವೆ ಆ ಮನೆಯ ಈಗಿನ ಮಾಲಿಕನ ಮನ ಒಲಿಸಿ ಭಾಡಿಗಬೆಗಾದರೂ ಪಡೆಯಬಹುದು. ಗತಕಾಲದ ಆ ಕುಟುಂಬದ ಸದಸ್ಯರು, ಅವರ ಆಗಿನ ಜೀವನ ರೀತಿ ಇವೆಲ್ಲ ವನ್ನು ಎಲ್ಲಿಂದ ತರುವುದು. ಕಾಲಗತಿಯಲಗ್ಲಿ ಎಲ್ಲ ಇತಿಹಾಸ ಸೇರಿ ಹೋಗಿದೆ. ಇತಿಹಾಸವನ್ನು ನೆನೆದು ಭವಿಷ್ಯವನ್ನು ರೂಪಿಸಿ ಕೊಳ್ಳಬಹುದು, ಆದರೆ ವರ್ತಮಾನದಲ್ಲಿ ತಂದು ನಿಲ್ಲಿಸಿ ಕೊಳ್ಳಲು ಆಗುವುದಿಲ. ಇತಿಹಾಸದ ನೆನಪುಗಳು ನಮಗಿರಬೇಕು ಇಲ್ಲದಿದ್ದರೆ ಜೀವನ ಪರಿಪೂರ್ಣವಲ್ಲ.


     ಬೇಸಿಗೆಯ ರಜೆ ಮುಗಿಯುತ್ತ ಬಂದಿತ್ತು, ಹತ್ತಿರದ ಸಂಬಂಧಿಕರೋರ್ವರ ಊರಿನಿಂದ ಮದುವೆಯ ಕರೆಯೋಲೆ ಬಂದಿತ್ತು. ನನ್ನ ತಂದೆ ಮದುವೆಗೆ ಹೊರಟವರು ನನ್ನನ್ನು ಮತ್ತು  ನನ್ನ ತಂಗಿಯನ್ನು ಜೊತೆಗೆ ಕರೆದೊಯ್ದರು. ಉಡಲು ಗಟ್ಟಿಯಾದ ಬಟ್ಟೆಯಿಲ್ಲದ ಕಾರಣ ನನ್ನ ತಾಯಿಯು ಮದುವೆಗೆ ಬರಲಿಲ್ಲ. ನಮ್ಮವೂ ಸಹ ಹರಕಲು ಬಟ್ಟೆಗಳೆ, ಹುಡುಗರು ಹೇಗಾದರೂ ನಡೆಯುತ್ತೆ ಎನ್ನುವ ಭಾವನೆ ಇದ್ದಿರಬಹುದು. ನಿಜಕ್ಕೂ ನನಗೆ ಮದುವೆಗೆ ಹೋಗಲು ಇಷ್ಟವಿರಲಿಲ್ಲ. ಇನ್ನೊಂದೆಡೆ ಮದುವೆ ಎಂದರೆ ಹೇಗ್ಹೇಗೆ ನಡೆಯುತ್ತೆ ಎಂದು ನೋಡುವ ಕುತೂಹಲವೂ ಇತ್ತು. ಮದುವೆಗೆ ಹೋದೆ ಮದುವೆ ಕಾರ್ಯ ಅದ್ದೂರಿಯಾಗಿಯೇ ನಡೆಯಿತು. ಆ ಮನೆಯ ಯಜಮಾನಿಯ ಒತ್ತಾಯದ ಮೇರೆಗೆ ಮೂರು ನಾಲ್ಕು ದಿನಗಳ ಕಾಲ ಅಲ್ಲಿಯೇ ಉಳಿದೆವು. ಆ ಮನೆಯ ಯಜಮಾನಿ ಲಕ್ಷ್ಮಮ್ಮ ನಮ್ಮನ್ನು ಅಕ್ಕರೆಯಿಂದಲೇ ನೋಡಿ ಕೊಂಡಳು.


     ಆ ಮದುವೆಗೆ ನನ್ನ ಅಜ್ಜ ಮಹದೇವಯ್ಯ ಸಹ ಬಂದಿದ್ದರು. ಆಗಲೇ ನಮ್ಮ ಅಜ್ಜಿ ಸರಸ್ವತಮ್ಮ ಗತಿಸಿ ಹೋಗಿದ್ದರು. ನಮ್ಮ ಅಜ್ಜಿಯ ವರ್ಷದ ಶ್ರಾದ್ಧ ಕರ್ಮ ಜರುಗಿಸಲು ನನ್ನ ಅಜ್ಜ ಮಗಳು ಲಕ್ಷ್ಮಮ್ಮಳ ಒತ್ತಾಯದ ಮೇರೆಗೆ ಅಲ್ಲಿಯೆ ಉಳಿದಿದ್ದರು. ಮದುವೆಗೆ ಬಂದಿದ್ದ ನೆಂಟರಿಷ್ಟರು ತೆರಳಿ ಮನೆ ಸಹಜ ಸ್ಥಿತಿಗೆ ಮರಳಿತ್ತು. ವಿರಾಮ ದಲ್ಲಿದ್ದಾಗ ಅಜ್ಜ ನನ್ನನ್ನು ಕರೆದು ಪರೀಕ್ಷೆ ಹೇಗೆ ಮಾಡಿದ್ದೇನೆಂದು ವಿಚಾರಿಸಿದ್ದರು, ಚೆನ್ನಾಗಿಯೇ ಮಾಡಿದ್ದೇನೆಂದು ಉತ್ತರಿಸಿದ್ದೆ. ಒಂದು ದಿನ ಬೆಳಿಗ್ಗೆ ಎಂಟು ಗಂಟೆಯ ವೇಳೆಗೆ ಅಜ್ಜ ಮಹದೇವಯ್ಯ ' ಸಂಯುಕ್ತ ಕನರ್ಾಟಕ ' ದಿನ ಪತ್ರಿಕೆಯನ್ನು ಓದುತ್ತ ಕುಳಿತವರು ನನ್ನನ್ನು ಕರೆದು ಮುಲ್ಕಿ ಪರೀಕ್ಷೆಯ ಫಲಿತಾಂಶ ಬಂದಿದೆ ಎಂದು ಹೇಳಿ ನನ್ನ ರಿಸಿಸ್ಟರ್ ನಂಬರು ಕೇಳಿದರು, ನಾನು ಹೇಳಿದೆ. ನಾನು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದೇನೆಂದು ಹೇಳಿ ಅಜ್ಜ ಸಂತಸ ಪಟ್ಟರು. ಅವರ ಕಣ್ಣಾಲಿಗಳು ತುಬಿ ಬಂದಿದ್ದವು. ನನಗೂ ಸಹ ಸಂತಸವಾಗಿತ್ತು. ಅಜ್ಜನ ನಿರೀಕ್ಷೆಯನ್ನು ಹುಸಿ ಗೊಳಿಸಲಿಲ್ಲವೆಂದು ಪತ್ರಿಕೆಯಲ್ಲಿ ನನ್ನ ನಂಬರು ನೋಡಸಿ ಖುಷಿಪಟ್ಟೆ. ನನ್ನ ಸಹಪಾಠಿಗಳಾಗಿದ್ದ ಗಿಡ್ಡೂನವರ, ಕೆರೂರ, ಮಿಶ್ರಿಕೋಟಿ, ಈರನಗೌಡ ಸಹ ಪಾಸಾಗಿದ್ದರು. ಇನ್ನಿಬ್ಬರು ನಪಾಸಾಗಿದ್ದರು.


     ಮದುವೆ ಕಾರ್ಯದ ನಂತರ ಬೈಲಮಲ್ಲಾಪುರಕ್ಕೆ ಬಂದು ನಂತಗರ ಹಿರೆಕೆರೆಗೆ ಮರಳಿ ಹೋದೆ. ನಾನು ಮುಲ್ಕಿಯಲ್ಲಿ ಉತ್ತೀರ್ಣ ವಾಗಿದ್ದುದು ಅಜ್ಜಿ ಮಾವ ದೊಡ್ಡಮ್ಮರಿಗೆ ಸಂತಸ ತಂದಿತ್ತು. ಊರಲೆಲ್ಲ ನಮ್ಮದೆ ವಿಷಯ. ಗ್ರಾಮದಲ್ಲಿ ಯಾವುದೆ ಸಂತಸದ ಕಾರ್ಯ ನಡೆಯಲಿ ಜಾತಿ ಕುಲ ಗೋತ್ರ ನೋಡದೆ ಸಂತಸ ಪಡುವ ಪ್ರವೃತ್ತಿ ಆ ಕಾಲದ ಸಾಮಾಜಿಕ ಜೀವನದಲ್ಲಿತ್ತು. ಪರಿಚಯದವರೆಲ್ಲ ಮಾತನಾಡಿಸಿ ಹೊಗಳುವವರೆ. ನಿಜಕ್ಕೂ ಸಂತಸ್ದ ಕಡಲಲ್ಲಿ ತೇಲಿದ ಅನುಭವ. ಎಲ್ಲರೂ ಹೈಸ್ಕೂಲಿಗೆ ಎಲ್ಲಿಗೆ ಹೋಗುವಿ ? ಎಂದು ಕೇಳುವವರೆ. ಏನೆಂದು ಉತ್ತರಿಸ ಬೇಕಿತ್ತು? ನನ್ನ ಭವಿಷ್ಯದ ಬಗೆಗೆ ನನಗೆ ಗೊತ್ತಿರಲಿಲ್ಲ. ಸ್ಪಷ್ಟವಾದ ಗುರಿಯಿರಲಿಲ್ಲ, ಭವಿಷ್ಯದ ದಾರಿ ಸುಗಮವಾಗಿರಲಿಲ್ಲ. ಹಿರೆಕೆರೆ ಗ್ರಾಮಕ್ಕೆ ವಿದಾಯ ಹೇಳಿ ಶಾಶ್ವತ ನೆಲೆಗಾಗಿ ಬೈಲಮಲ್ಲಾಪುರಕ್ಕೆ ಬಂದೆ. ಒಂದು ನೆಲದಿಂದ ಕಿತ್ತು ಬೇರೊಂದು ನೆಲದಲ್ಲಿ ನೆಟ್ಟ ಸಸಿಯಂತಹ ಸ್ಥಿತಿ ನನ್ನದಾಗಿತ್ತು. ಹೊಸ ಮಣ್ಣು ಗಾಳಿ ನೀರು ವಾತಾವರಣಕ್ಕೆ ಹೊಂದಿ ಕೊಳ್ಳಬೇಕಿತ್ತು, ಮಣ್ಣಿನಾಳದಲ್ಲಿ ಬೇರುಬಿಟ್ಟು ಬೆಳೆಯಬೇಕಿತ್ತು. ಪೂರ್ವಾಶ್ರಮದ ನೆನಪು, ಮಣ್ಣಿನ ವಾಸನೆ ಅಷ್ಟು ಸುಲಭಕ್ಕೆ ಮರೆತು ಬಿಡುವಂತಹವಲ್ಲ. ಗತಕಾಲದ ನೆನಪುಗಳನ್ನು ಅರಗಿಸಿ ಕೊಂಡು ವರ್ತಮಾನದ ಕನಸುಗಳನ್ನು ಕಟ್ಟಬೇಕಿತ್ತು. ಆ ದಿಶೆಯೆಡೆಗೆ ನನ್ನ ಪ್ರಯತ್ನ ಸಾಗಿತ್ತು. ಹೊಸ ಊರು ಹೊಸ ವಾತಾವರಣ. ನನ್ನ ತಂದೆ ಮನೆಯನ್ನು ಬದಲಾಯಿಸಿ ಕುರುಬಗೇರಿಯ ಮನೆಗೆ ವಾಸ್ತವ್ಯಕ್ಕೆ ಬಂದರು. ಆ ಮನೆಗೆ ಗಟ್ಟಿಯಾದ ಬಾಗಿಲುಗಳು ಸಹ ಇರಲಿಲ್ಲ. ಪೂರ್ವದಲ್ಲಿ ದನದ ಕೊಟ್ಟಿಗೆ ಯಾಗಿದ್ದಿರಬಹುದಾದ ಮನೆ, ಅಲ್ಲಿಯೇ ಬದುಕು ಮುಂದುವರಿಸ ಬೇಕಾದ ಅನಿವಾರ್ಯತೆ ನಮಗಿತ್ತು. ಹಿರೆಕರೆಯಲ್ಲಿಯದೂ ಸಹ ಬಡತನದ ಜೀವನವೆ, ಆದರೆ ಅಲ್ಲಿ ಮಾವನಿಗೆ ಸಣ್ಣದಾದರೂ ಸ್ವಂತದ ಮನೆಯಿತ್ತು, ತಮಗಿಲ್ಲದಿದ್ದರೂ ಸಣ್ಣವನೆಂದು ನನಗೆ ಪ್ರೀತಿಯಿಂದ ಉಣಿಸಿ ಬೆಳೆಸಿದರು, ಒಳ್ಳೆಯ ಸಂಸ್ಕಾರ ನೀಡಿದರು. ಆಗ ನಾನು ಸಣ್ಣವನಿದ್ದೆ, ಬದುಕಿನ ಗೋಳು ಕಷ್ಟಗಳೇನೆಂದು ನನಗೆ ತಿಳಿಯುತ್ತಿರ ಲಿಲ್ಲ. ದೊಡ್ಡವನಾಗುತ್ತ ಬಂದಂತೆ ಬದುಕಿನ ಕಷ್ಟಗಳು ತಿಳಿಯಲು ಪ್ರಾರಂಭ ವಾದವು. ನಮ್ಮ ಕುಟುಂಬದ ಸ್ಥಿತಿ ನನ್ನನ್ನು ವಿವಂಚನೆಗೀಡು ಮಾಡಿತ್ತು. ನನ್ನ ಮುಂದಿನ ವಿದ್ಯಾ ಭ್ಯಾಸದ ಭವಿತವ್ಯ ತೂಗುಯ್ಯಾಲೆಯಲ್ಲಿತ್ತು. ಜೂನ್ ತಿಂಗಳ ಮೊದಲ ವಾರ ನನ್ನ ತಂದೆ ನನ್ನನ್ನು ಗೌಡಗೇರಿಯ ಮುನಸಿಪಲ್ ಹೈಸ್ಖೂಲಿಗೆ ಸೇರಿಸಿದರು. ಕುಟುಂಬದ ಸ್ಥಿತಿ ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿತ್ತು. ಹೈಸ್ಕೂಲಿನಲ್ಲಿ ನನ್ನ ವಿದ್ಯಾಭ್ಯಾಸ ಮುಂದುವರೆದಿತ್ತು.


                                                                      7


          ಅವು ಬದುಕಿನ ನಿರಾಶೆಯ ದಿನಗಳು, ಒಂದು ದಿನ ಸಾಯಂಕಾಲ ನನ್ನ ಅಜ್ಜ ಮಹದೇವಯ್ಯ ಬಂದರು. ನನ್ನ ಕೈಗೆ ಎರಡಾಣೆ ಕೊಟ್ಟು ಚುರಮರಿ ತರಲು ಹೇಳಿದರು. ನಾನು ತಂಗಿಯೊಟ್ಟಿಗೆ ಹೋಗಿ ಅಂಗಡಿಯಿಂದ ಚುರ ಮರಿ ತಂದೆ. ಅಜ್ಜನ ಕಣ್ಣಲ್ಲಿ ನೀರಿತ್ತು, ಅಮ್ಮನ ಕಣ್ಣಾಲಿಗಳೂ ಸಹ ತುಂಬಿ ಬಂದಿದ್ದವು. ಅಮ್ಮ ಚುರಮರಿ ಯನ್ನು ಹಚ್ಚಿ ಎಲ್ಲರಿಗೂ ಕೊಟ್ಟಳು. ಅಜ್ಜ ಅಮ್ಮನನ್ನುದ್ದೇಶಿಸಿ


     ' ನನಗೂ ಈಗ ಮೊದಲಿನಂತೆ ತಿರುಗಾಟ ಮಾಡಲು ಆಗುವುದಿಲ್ಲ, ಬದುಕಿನ ಕೊನೆಯ ಹಂತ ತಲುಪಿದ್ದೇನೆ ಇನ್ನು ಹೆಚ್ಚು ದಿನ ಬದುಕಲಾರೆ ಎನಿಸುತ್ತದೆ. ಬದುಕಿನಲ್ಲಿ ಧೈರ್ಯ ಕಳೆದುಕೊಳ್ಳಬೇಡಿ. ಮಗನ ಬದುಕಿಗೆ ಸರಿಯಾದ ವ್ಯವಸ್ಥೆ ಮಾಡುವಲ್ಲಿ ನಾನು ವಿಫಲನಾದೆನೆಂದು ಎನಿಸುತ್ತದೆ, ಆ ಕೊರಗು ಇತ್ತೀಚಿನ ದಿನಗಳಲ್ಲಿ ನನ್ನನ್ನು ಬಹಳ ಕಾಡುತ್ತ ಬಂದಿದೆ, ಯಾರಲ್ಲಿ ಹೇಳುವುದು? ನನ್ನದು ಅರಣ್ಯ ರೋದನ ! ನಿಮ್ಮಲ್ಲಿಗೆ ನ್ನದು ಕೊನೆಯ ಭೇಟಿಯೆಂದು ಕಾಣಿಸುತ್ತದೆ. ಹರಿನಾಥ ಬಂದ ಮೇಲೆ ನಾನು ಬಂದು ಹೋದೆ ಎಂದು ಹೇಳು ಎಂದು ಹೇಳಿ ಹೊಗುತ್ತ ನಿಂತಿದ್ದ ನನ್ನ ತಲೆ ಸವರಿ ಚೆನ್ನಾಗಿ ಓದು ನಿನ್ನ ಅಪ್ಪ ಅಮ್ಮಂದಿರನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ ಹೋದರು..'


       ಅಮ್ಮನ ಆಣತಿಯಂತೆ ರೈಲು ನಿಲ್ದಾಣದ ವರೆಗೆ ಅಜ್ಜನ ಜೊತೆಗೆ ಹೋಗಿ ಗಾಡಿ ಹತ್ತಿಸಿ ಮರಳಿಬಂದೆ. ನನ್ನಜ್ಜನ ಬಗ್ಗೆ ನನ್ನಲ್ಲಿ ಕೃತಜ್ಞತಾ ಭಾವ ಮೂಡಿ ಬಂದಿತ್ತು. ಅದೆ ಕೊನೆ ಅಜ್ಜ ಮರಳಿ ಬೈಲಮಲ್ಲಾಪುರಕ್ಕೆ ಬರೆಲೆ ಇಲ್ಲ. ಮುಂದೆ ಒಂದು ವರ್ಷದಲ್ಲಿಯೇ ವಾಸಿಯಗದ ದಮ್ಮಿನ ಕಾಯಿಲೆ ಮತ್ತು ವೃದ್ಧಾಪ್ಯದ ಕಾರಣಗಳಿಂದ ಅಜ್ಜ ಮಾಲಿಂಗಪುರದಲ್ಲಿ ತಮ್ಮ ಮೂರ್ನೆ ಮಗ ಹರನಾಥರ ಮನೆಯಲ್ಲಿ ತೀರಿಕೊಂಡ ವರ್ತಮಾನ ಬಂತು. ನನ್ನ ತಂದೆ ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದರು. ಅವರ ವೈದಿಕ ಕರ್ಮಾನುಷ್ಟಾನಗಳನ್ನು ಮಾಲಿಂಗಪುರ ದಲ್ಲಿಯೇ ಇಟ್ಟು ಕೊಂಡಿದ್ದು ನಾವೂ ಸಹ ಹೋಗಿ ಬಂದೆವು. ಅಜ್ಜ ಕೊನೆಯ ಪಯಣ ಬೆಳೆಸಿಯಾಗಿತ್ತು, ಆದರೆ ನೆನಪು ಮಾತ್ರ ಶಾಶ್ವತವಾಗಿ ಉಳಿಯಿತು.


     ಇಂದಿಗೂ ನನ್ನ ಮನದಾಳದಲ್ಲಿ ಶಾಶ್ವತವಾಗಿ ಅಚ್ಚಳಿಯದೆ ನೆಲೆ ನಿಂತಿರುವ ಬೆರಳೆಣಿಕೆಯ ವ್ಯಕ್ತಿಗಳ ಪೈಕಿ ನನ್ನಜ್ಜ ಕೂಡ ಒಬ್ಬರು. ಅವರು ತಮ್ಮ ಜೀವಿತದ ಕೊನೆಯ ಗಳಿಗೆಯ ವರೆಗೂ ಬದುಕಿಗಾಗಿ ತಮ್ಮ ಕುಟುಂಬದ ಆಸ್ತಿಯ ಹಕ್ಕಿಗಾಗಿ ಏಕಾಂಗಿಯಗಿ ಹೋರಾಡಿದವರು. ವಿಶ್ರಾಂತ ಜೀವನವನ್ನು ಯಾರೋ ಒಬ್ಬ ಅನುಕೂಲಸ್ಥ ಮಗನ ಮನೆಯಲ್ಲಿ ಕಳೆದು ಬಿಡಬಹುದಿತ್ತು. ಯಾಕೋ ಆ ದಿಕ್ಕಿನಲ್ಲಿ ಅವರು ಯೋಚನೆಯನ್ನು ಮಾಡಲೇ ಇಲ್ಲ. ಅವರು ಕೊನೆಯ ಬಾರಿಗೆ ನಮ್ಮೂರಿಗೆ ಬಂದಾಗ ಕಣ್ಣೀರು ಹಾಕಿದ್ದು ಯಾಕೆ? ನಮ್ಮ ದುಸ್ಥಿತಿ ನೆನೆದೆ!ಇದ್ದಿರಬಹುದು. ನಂತರದಲ್ಲಿ ನಾನು ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿ ನನ್ನ ಕೊನೆಯ ಚಿಕ್ಕಪ್ಪ ಗುರುನಾಥ ರವರ ಸಹಾಯದಿಂದ ಒಂದು ಸರಕಾರಿ ಚಾಕರಿಯನ್ನು ಪಡೆದು ಗತ ಕಾಲದ ನೆನಪುಗಳನ್ನು ಬೈಲಮಲ್ಲಾಪುರ ದಲ್ಲಿಯೆ ಬಿಟ್ಟು ಕಂಡು ಕೇಳರಿಯದ ಗೊತ್ತಿಲ್ಲದ ಊರಿಗೆ ಬಂದು ಬದುಕಿನ ಡೇರೆ ಹಾಕಿರುವೆ. ಮುಂದಿನ ಪಯಣದ ವರೆಗೆ ನನ್ನದು ಇದೇ ಊರು ಸರ್ವಸ್ವ ಎಲ್ಲ. ನನ್ನ ಅಜ್ಜ ಬಿಡಿ ನನ್ನ ತಂದೆ ಗತಿಸಿಯೇ ಅನೇಕ ವರ್ಷಗಳು ಸಂದಿವೆ. ಅಜ್ಜನ ನೆನಪು ಇಂದಿಗೂ ಉಲ್ಲಾಸ ಕರವೆ. ನನ್ನ ತಂದೆ ಗತಿಸಿದ ಸರ್ಂಧರ್ಭ. ಅವರ ಅಸ್ತಿ ವಿಸರ್ಜನಾ ಸಂಧರ್ಭದಲ್ಲಿ ಹಾಜರಿದ್ದ ನನ್ನ ಕೊನೆಯ ಚಿಕ್ಕಪ್ಪ ಗುರುನಾಥ ರವರು ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಇಲ್ಲಿ ಬಂದು ಮಣ್ಣಾಗುವ ಪ್ರಸಂಗ ಬಂತು ಎಂದು ಖೇದ ವ್ಯಕ್ತ ಪಡಿಸಿ ಒಂದು ಘಟನೆಯನ್ನು ಮೆಲುಕು ಹಾಕಿದ್ದರು.


                                                                      *


     ನನ್ನ ಅಜ್ಜ ಮಹದೇವಯ್ಯ ಗೋಗೇರಿ ತಾಲೂಕು ಕéಛೇರಿಯಲ್ಲಿ 1925 - 30 ರಲ್ಲಿ ಶಿರಸ್ತೆದಾರರಾಗಿ ಕರ್ತವ್ಯ  ನಿರ್ವಹಿಸುತ್ತಿದ್ದ ಕಾಲ. ನನ್ನ ತಂದೆ ಹರಿನಾಥರನ್ನು ಅಲ್ಲಿಯ ಮುನಿಸಿಪಲ್ ಹೈಸ್ಕೂಲಿಗೆ ಸೇರಿಸಿ ದ್ದರಂತೆ, ಅವರ ಕೈಕೆಳಗಿನ ಸಿಪಾಯಿ ಯೊಬ್ಬರ ಮಗ ತನ್ನ ಮಗನ ಕ್ಲಾಸ್ನಲ್ಲಿ ಓದುತ್ತಿರುವ ವಿಷಯ ತಿಳಿದು, ತನ್ನ ಕೈಕೆಳಗಿನ ಸಿಪಾಯಿ ಯೊಬ್ಬನ ಮಗನ ಜೊತೆ ತನ್ನ ಮಗ ಕುಳಿತು ಓದುವುದು ಸರಿ ಕಾಣದ ಅವರು ತನ್ನ ಮಗನನ್ನು ಹೈಸ್ಕೂಲಿಗೆ ಹೋಗುವುದನ್ನು ಬಿಡಿಸಿದರು. ಒಂದು ದುರ್ಬಲ ಮನಸ್ಥಿತಿಯ ಸಂಧರ್ಭದಲ್ಲಿ ತಾವು ತೆಗೆದುಕೊಂಡ ನಿರ್ಣಯ ಅವರಿಗೆ ಕೊನೆ ಕೊನೆಗೆ ಕಾಡಿದ್ದಿರಬಹುದೆ? ಕೊನೆಯ ಬಾರಿಗೆ ಅಜ್ಜ ನಮ್ಮೂರಿಗೆ ಬಂದಾಗ ಹಾಕಿದ ಕಣ್ಣೀರಿನ ಕಾರಣ ಇದೆ ಇದ್ದಿರಬಹುದೇ? ಕ್ಷಣದ ಭಾವಾವೇಶಕ್ಕೆ ಬಲಿಯಾಗದೆ ಬದಲಾಗು ತ್ತಿದ್ದ ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಅರ್ಥಿಕ ಸನ್ನಿವೇಶಗಳನ್ನು ಸರಿಯಾಗಿ ಗ್ರಹಿಸದೆ ತನ್ನ ಮಗನೊಬ್ಬನ ಜಿವನವನ್ನು ಕಾಲಚಕ್ರದ ಸ್ಥಿತಿ ಗತಿಯಲ್ಲಿ ತಟಸ್ಥ ಗೊಳಿಸಿ ಅವನ ಮತ್ತು ಅವನ ಕುಟುಂಬದ ದುರ್ದೆಶೆಗೆ ಕಾರಣನಾದೆನೆ ಎಂಬ ಅಪರಾಧಿ ಪ್ರಜ್ಞೆ ಅವರನ್ನು ಕಾಡಿದ್ದಿರಬಹುದು. ಅದೇನೇ ಇದ್ದರೂ ಅವರ ಬಗೆಗಿನ ನನ್ನ ಗೌರವಭಾವ ಇಂದಿಗೂ ಕಿಂಚಿತ್ತು ಕಡಿಮೆಯಾಗಿಲ್ಲ.  ಬೇಸರದ ಕ್ಷಣಗಳು ಬಂದೆರಗಿದಾಗ, ಮನ ವನ್ನು ದುಗುಡ ಆವರಿಸಿದಾಗ ಅವರ ಮುಖ ಕಣ್ಮುಂದೆ ತೇಲಿ ಬರುತ್ತದೆ, ನಾನಿದ್ದೇನೆ ಎಂದು ನುಡಿದಂತಾ ಗುತ್ತದೆ. ಆವರಿಸಿದ ದುಗುಡ ದುಮ್ಮಾನಗಳು ಕ್ಷಣಾರ್ಧ ದಲ್ಲಿ ಮಾಯ.


     ಅವರ ಆಯಿಲ್ ಪೇಂಟಿಂಗ್ ನ ಫೋಟೋದ ಮೇಲೆ ಕೈಯಾಡಿಸಿದೆ. ಎಲ್ಲ ಪುರಾಣ ಪುರುಷರು, ದೇವ ದೇವತೆಗಳು ಮತ್ತು ಐತಿಹಾಸಿಕ ಫೋಟೋಗಳಿಗಿಂತ ನನ್ನಜ್ಜನ ಫೋಟೋ ನನಗೆ ಮೇಲು ಎನಿಸಿತು. ಅವರೆ ನನಗೆ ಪುರಾಣ ಪುರುಷ, ದೇವರು ಮತ್ತು ಐತಿಹಾಸಿಕ ವ್ಯಕ್ತಿ ಎಲ್ಲ ಆಗಿ ಗೋಚರಿಸಿದರು. ಅವರ ಫೋಟೋವನ್ನು ನಡುಮನೆಯಲ್ಲಿ ನೇತು ಹಾಕಬೇಕೆನಿಸಿ ತೆಗೆದಿಟ್ಟು ಕೊಂಡೆ. ಆ ಫೋಟೋ ಸಂಗ್ರಹದ ಕೆಳಬದಿಯಲ್ಲಿ ವಟ ಸಾವಿತ್ರಿ ವೃತದ ಫೋಟೋಗಳಿದ್ದು ಅವುಗಳನ್ನು ತೆಗೆದಿರಿಸಿದೆ.


     ಮತ್ತೆ ಬಂದ ಸೀತೆ ' ಫೋಟೋ ತೆಗೆದಿಟ್ಟಿರೇನ್ರಿ ಎಂದು ' ಕೇಳಿದಳು ಅವಳ ಕೈಗೆ ಅವಳ ನಂಬಿಕೆಯ ದೈವಗಳ ಫೋಟೋಗಳನ್ನು ಕೊಟ್ಟೆ.


     ದೂರದರ್ಶನದಲ್ಲಿ ' ಆಜಾದ್ ' ಚಲನಚಿತ್ರ ಮುಂದುವರೆದಿತ್ತು   ಜಾರಿ ಜಾರಿ ವೋ ಕಾರಿ ಬದರಿಯಾ  ಎಂಬ ಹಾಡಿನ ಸನ್ನಿವೇಶ ಬಿತ್ತರ ಗೊಳ್ಳುತ್ತಿತ್ತು. ಲತಾ ಮಂಗೇಶಕರ್ ತನ್ನ ಸೊಗಸಾದ ಕಂಠದಿಂದ ಇಂಪಾಗಿ ಹಾಡಿದ್ದಳು. ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ. ಅದಕ್ಕೆ ಪೂರಕವಾಗಿ ಮೀನಾ ಕುಮಾರಿಯ ಹೃದಯಂಗಮ ಅಭಿನಯ.ಚಲನಚಿತ್ರ ಕೊನೆಯ ಹಂತದೆಡೆಗೆ ಸಾಗುತ್ತಿತ್ತು. ಇದ್ದಕಿದ್ದಂತೆ ಕರಂಟ ಹೋಯಿತು. ಟಿವ್ಹಿಯನ್ನು ಬಂದ್ ಮಾಡಿ ನನ್ನ ಅಜ್ಜನ ಫೋಟೋವನ್ನು ಕೈಗೆತ್ತಿಕೊಂಡು ಅದನ್ನು ಒಂದು ಬಟ್ಟೆಯಿಂದ ಸ್ವಚ್ಛವಾಗಿ ಒರೆಸಿ ನಡು ಮನೆಯ ಬಾಗಿಲ ಚೌಕಟ್ಟಿನ ಮೇಲ್ಭಾಗದ ಗೋಡಗೆ ತೂಗು ಹಾಕಿದೆ. ಇದು ನಾನು ನನ್ನ ಅಜ್ಜನಿಗೆ ಸಲ್ಲಿಸುವ ಸೂಕ್ತ ಗೌರವವೆನಿಸಿ ಧನ್ಯತಾಭಾವ ಮೂಡಿಬಂತು. ಅಜ್ಜನ ಫೋಟೋ ಜೀವನದ ಮೌಲ್ಯದ ಸಂಕೇತವೆನಿಸಿ, ನನ್ನ ನೈತಿಕ ಬೆಂಬಲಕ್ಕೆ ಅವರು ಆಸರೆಯಾಗಿದ್ದಾರೆ ಎನ್ನಿಸಿ ಮನಸ್ಸು ಹಗುರವಾಯಿತು. ಮಗ ನನ್ನನ್ನು ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿ ತನ್ನ ಓದಿನಲ್ಲಿ ತೊಡಗಿಕೊಂಡ. ನಾನು ನನ್ನ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಂಡೆನು. ಸೂರ್ಯ ಪಡುವಣದಂಚಿಗೆ ಸರಿಯುತ್ತಿದ್ದ, ಕಾರ್ಮೋಡಗಳು ದಟ್ಟೈಸಿ ಬರು ತ್ತಿದ್ದವು, ಗಾಳಿ ರಭಸವಾಗಿ ಬೀಸು ತ್ತಿತು, ಮಳೆ ಸಣ್ಣದಾಗಿ ಹನಿಯಲು ಪ್ರಾರಂಭಿಸಿ ತಾರಕಕ್ಕೇರಿತು. ರಸ್ತೆ ಬದಿಯ ಚರಂಡಿಯಲ್ಲಿ ಕೆನ್ನೀರು ತುಂಬಿ ಹರಿದು ಹೋಗುತ್ತಿತ್ತು. ಮಗ ಅವಿನಾಶ ಮೆಲ್ಲಗೆ ಪುಸ್ತಕ ಮುಚ್ಚಿಟ್ಟು ಚರಂಡಿಯ ನೀರಿನಲ್ಲಿ ಕಾಗದದ ಡೋಣಿಯನ್ನು ತೇಲಿ ಬಿಡುತ್ತಿದ್ದ, ಹಗಲು ಕಾಲ ಗರ್ಭಸೇರಿ ಕತ್ತಲು ಭುವಿ ಯನ್ನಾವರಿಸುತ್ತಿತ್ತು. ಅಜ್ಜನ ಫೋಟೋ ಗೋಡೆಯನ್ನಲಂಕರಿಸಿತ್ತು, ಗತ ಕಾಲದ ಮೌಲ್ಯಗಳನ್ನು ವರ್ತಮಾನದ ಕಾಲಕ್ಕೆ ಮುಖಾಮುಖಿ ಮಾಡಿದ ತೃಪ್ತಿ ನನಗಾಗಿತ್ತು.


                                                                                                                ( ಮುಗಿಯಿತು )
 

Rating
No votes yet

Comments