ಇಬ್ಬರು ಗಾಂಧೀವಾದಿಗಳ ಭೇಟಿ - ಕಿರಂ ಅನುಭವ ಕಥನ

ಇಬ್ಬರು ಗಾಂಧೀವಾದಿಗಳ ಭೇಟಿ - ಕಿರಂ ಅನುಭವ ಕಥನ

ಎಂ.ಎ. ತೇರ್ಗಡೆಯಾದ ಹೊಸದರಲ್ಲಿ ನಾನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದೆ. ಆ ಸಂದರ್ಭದಲ್ಲಿ ಶಿವರಾಮಕಾರಂತರು ಬೆಂಗಳೂರಿಗೆ ಭೇಟಿ ನೀಡಿದ್ದರು. ಇಂತಹ ಸಂದರ್ಭಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಚೆನ್ನಾಗಿ ಬಲ್ಲವರಾಗಿದ್ದ ನಮ್ಮ ಪ್ರಿನ್ಸಿಪಾಲರಾದ ಎಚ್.ನರಸಿಂಹಯ್ಯನವರು ’ಕಿರಂ, ಹೇಗಾದರೂ ಮಾಡಿ ನಿಮ್ಮ ವಿಭಾಗದ ವತಿಯಿಂದ ಕಾರಂತರನ್ನು ನಮ್ಮ ಕಾಲೇಜಿಗೆ ಆಹ್ವಾನಿಸಿ’ ಎಂದು ಹೇಳಿದರು. ನನಗೋ ಕಾರಂತರ ಪರಿಚಯವಿರಲಿಲ್ಲ, ಬೆಂಗಳೂರಿನಲ್ಲಿ ಅವರು ಯಾರ ಮನೆಯಲ್ಲಿ ಉಳಿದುಕೊಳ್ಳುತ್ತಾರೋ ಗೊತ್ತಿರಲಿಲ್ಲ. ನನ್ನಂಥವನು ಹೋಗಿ ಕರೆದರೆ ಅವರು ಒಪ್ಪುವರೋ ಇಲ್ಲವೋ ಎಂಬ ಅನುಮಾನ ಬೇರೆ. ಅಲ್ಲದೆ ಪ್ರಿನ್ಸಿಪಾಲರ ಮಾತುಗಳಿಗೆ ಇಲ್ಲ ಎನ್ನುವಂತೆಯೂ ಇಲ್ಲ. ಹಾಗಾಗಿ ಅಂದು ಸಂಜೆ ಕಾಲೇಜು ಮುಗಿದ ಮೇಲೆ ನೇರವಾಗಿ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣಕ್ಕೆ ಹೋದೆ. ಅಲ್ಲಿ ಅವರ ಒಂದು ಭಾಷಣವಿದೆ ಎಂದು ಮುಂಜಾನೆಯ ದಿನಪತ್ರಿಕೆಯಲ್ಲಿ ಓದಿದ್ದೆ. ಆ ದಿನ ಸೆನೆಟ್ ಹಾಲ್‍ ಕಿಕ್ಕಿರಿದ ಜನಸಂದಣಿಯಿಂದ ತುಂಬಿ ತುಳುಕುತ್ತಿತ್ತು. ಕಾರಂತರು ಸತತವಾಗಿ ಎರಡು ಗಂಟೆಗಳ ಕಾಲ ಉಪನ್ಯಾಸ ನೀಡಿದರು. ಅವರನ್ನು ಹತ್ತಿರದಿಂದ ಮಾತನಾಡಿಸಿ ಕಾಲೇಜಿಗೆ ಆಹ್ವಾನಿಸಬೇಕೆಂದು ಅವರು ಕೆಳಗಿಳಿದು ಹೋಗುವ ಮೆಟ್ಟಿಲಿನ ಬಳಿಯೇ ಬಹಳ ಹೊತ್ತಿನಿಂದ ನಿಂತಿದ್ದೆ. ಭಾಷಣ ಮುಗಿದ ಮೇಲೆ ಅವರು ಹೊರಬಂದು ಮೆಟ್ಟಿಲುಗಳನ್ನಿಳಿದು ನಾನು ನಿಂತಿದ್ದ ಜಾಗವನ್ನು ಸಮೀಪಿಸಿದರು. ಆಗ ನಾನು “ಸರ್, ನಾನು ನ್ಯಾಷನಲ್ ಕಾಲೇಜಿನ ಕನ್ನಡ ಉಪನ್ಯಾಸಕ, ಎಚ್. ನರಸಿಂಹಯ್ಯನವರು ನಿಮ್ಮನ್ನು ಕಾಲೇಜಿಗೆ ಆಹ್ವಾನಿಸಿದ್ದಾರೆ,..” ಎಂದು ನನ್ನ ಬಿನ್ನಹವನ್ನು ಪ್ರಾರಂಭಿಸುವ ಮುನ್ನವೇ “ನಾಳೆ ಮೂರುವರೆ ಗಂಟೆಗೆ ನಿಮ್ಮ ಕಾಲೇಜಿಗೆ ಬರುತ್ತೇನೆ ಎಂದು ಅವರಿಗೆ ತಿಳಿಸಿ” ಎಂದು ಹೇಳಿ ನನ್ನ ಪ್ರತಿಕ್ರಿಯೆಗೂ ಕಾಯದೇ ಹೊರಟುಬಿಟ್ಟರು. ನಾನು ಕೂಡಲೆ ಹಾಸ್ಟೆಲ್‍ಗೆ ತೆರಳಿ ನರಸಿಂಹಯ್ಯನವರಿಗೆ ವಿಷಯ ತಿಳಿಸಿದೆ. ಆ ದಿನಗಳಲ್ಲಿ ಕನ್ನಡ ವಿಭಾಗದ ಸಂಪೂರ್ಣ ಹೊಣೆಗಾರಿಕೆ ನನ್ನ ಮೇಲೆಯೇ ಇತ್ತು, ಸಾಲದ್ದಕ್ಕೆ ಆಗಷ್ಟೇ ಎಂ.ಎ. ಮುಗಿಸಿದ್ದ ಅನನುಭವಿಯಾಗಿದ್ದ ನಾನು ಕೊಂಚ ಆತಂಕಿತನಾಗಿದ್ದೆ. “ನಾಳೆ ಅವರು ನಮ್ಮ ಕಾಲೇಜಿಗೆ ಬರುವ ಸುದ್ದಿ ದಿನಪತ್ರಿಕೆಗಳ ’ನಗರದಲ್ಲಿ ಇಂದು’ ಕಾಲಂನಲ್ಲಿ ಪ್ರಕಟವಾಗಬೇಕು” ಎಂದು ನರಸಿಂಹಯ್ಯನವರು ಆಜ್ಞಾಪಿಸಿದರು. ಅಂತೆಯೇ ನಾನು ಒಂದು ಒಕ್ಕಣೆಯನ್ನು ಸಿದ್ಧಪಡಿಸಿ ಪತ್ರಿಕೆಗಳ ಕಛೇರಿಗಳಿಗೆ ತಲುಪಿಸಿದೆ. ಆ ದಿನಗಳಲ್ಲಿ ನನ್ನ ಬಳಿ ಒಂದು ಸೈಕಲ್ ಇತ್ತು. ಮರುದಿನ ಮೂರು ಗಂಟೆಗೆ ವಿದ್ಯಾರ್ಥಿಗಳಷ್ಟೇ ಸಂಖ್ಯೆಯ ಸಾರ್ವಜನಿಕರೂ ನಮ್ಮ ಕಾಲೇಜು ಸಭಾಂಗಣದಲ್ಲಿ ನೆರೆದಿದ್ದರು. ನಮ್ಮ ಕಾಲೇಜಿಗೆ ಎರಡು ಗೇಟುಗಳು ಇದ್ದುದರಿಂದ ಅವರನ್ನು ಸ್ವಾಗತಿಸಲು ಯಾವ ಗೇಟಿನ ಬಳಿ ನಿಲ್ಲಬೇಕೋ, ಅವರು ಎಷ್ಟು ಹೊತ್ತಿಗೆ ಬರುವರೋ ಎಂದು ತಿಳಿಯದೆ ಚಡಪಡಿಸುತ್ತಿದ್ದಾಗ ಅವರ ಅಂಬಾಸಿಡರ್ ಕಾರು ಮುಂಭಾಗದ ಗೇಟಿನಿಂದ ನೇರವಾಗಿ ಪ್ರಿನ್ಸಿಪಾಲರ ಕಛೇರಿಯ ಮುಂದೆಯೇ ಬಂದು ನಿಂತಿತು. ಕಾರಿನಿಂದ ಕೆಳಗಿಳಿದ ಕಾರಂತರ ಕೈಲಿ ಸಿಗರೇಟು ಉರಿಯುತ್ತಿತ್ತು. ಹೊಗೆ ಸೇದುತ್ತಲೇ ಅವರು ನಿಷ್ಠಾವಂತ ಗಾಂಧೀವಾದಿಗಳಾದ ನಮ್ಮ ಪ್ರಾಂಶುಪಾಲರ ಕಛೇರಿಯತ್ತ ಹೆಜ್ಜೆ ಹಾಕಿದರು. ನಾನು ಕೂಡಲೆ ನನ್ನ ಉಪಯೋಗಕ್ಕೆಂದು ಸ್ಟಾಫ್ ರೂಮಿನಲ್ಲಿ ಗುಪ್ತವಾಗಿರಿಸಿದ್ದ ಆಷ್ ಟ್ರೇಯನ್ನು ಓಡಿ ಹೋಗಿ ತೆಗೆದುಕೊಂಡು ಬಂದೆ. ನರಸಿಂಹಯ್ಯನವರು ಇಲ್ಲದಿದ್ದಾಗ ನಾನು ಸ್ಟಾಫ್ ರೂಮಿನಲ್ಲೋ, ಶೌಚಾಲಯದಲ್ಲೋ ಆಗಾಗ ಸಿಗರೇಟು ಸೇದುತ್ತಿದ್ದುದುಂಟು. ಒಳಗೆ ಕಾರಂತರು ನರಸಿಂಹಯ್ಯನವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಹೊಗೆಯನ್ನು ಎಲ್ಲಿ ಕೊಡವಬೇಕೆಂದು ತಿಳಿಯದೆ ಚಡಪಡಿಸುತ್ತಾ ಎದ್ದು ನಿಂತಾಗ ಅವರ ಮೇಜಿನ ಮೇಲೆ ನಾನು ನನ್ನ ಅಷ್ ಟ್ರೇಯನ್ನಿಟ್ಟೆ. ಅಂದು ಅವರು ನನ್ನ ಸಮಯಪ್ರಜ್ಞೆಯನ್ನು ಮೆಚ್ಚಿ ನನ್ನ ತಲೆಯನ್ನು ನೇವರಿಸಿದ್ದರು. ಆ ದಿನವೂ ನಮ್ಮ ಕಾಲೇಜಿನಲ್ಲಿ ಅವರು ಯಥಾ ಪ್ರಕಾರ ಅದ್ಭುತವಾಗಿ ಭಾಷಣ ಮಾಡಿದರು. ಇದಾದ ಹತ್ತಾರು ವರ್ಷಗಳ ನಂತರ ಒಮ್ಮೆ ನಾನು ನನ್ನ ಸ್ನೇಹಿತರು ಸಹೋದ್ಯೋಗಿಗಳೊಂದಿಗೆ ಅವರ ಸ್ವಂತಸ್ಥಳವಾದ ಕೋಟಗೆ ಭೇಟಿ ನೀಡಿದ್ದೆ. ಆಗ ಕಾರಂತರು ’ನೀವು ನ್ಯಾಷನಲ್ ಕಾಲೇಜಿನ ಉಪನ್ಯಾಸಕರಲ್ಲವೇ?’ ಎಂದು ನನ್ನನ್ನು ಕಂಡು ಗುರುತಿಸಿದಾಗ ನಾನು ನಿಜಕ್ಕೂ ಹಿಗ್ಗಿಹೋದೆ.

(ಸಂದರ್ಭದ ಸ್ವಾರಸ್ಯ ಕೆಡಬಾರದೆಂದು ಕಿರಂ ಮೇಷ್ಟರ ಮಾತುಗಳಲ್ಲೇ ನಿರೂಪಿಸಿದ್ದೇನೆ)

Comments