ಜಿ.ಎಸ್. ಶಿವರುದ್ರಪ್ಪನವರ ಸಹೋದ್ಯೋಗಿಯಾಗಿ ಮೊದಲ ಅನುಭವ - ಕಿರಂ ಅನುಭವ ಕಥನ

ಜಿ.ಎಸ್. ಶಿವರುದ್ರಪ್ಪನವರ ಸಹೋದ್ಯೋಗಿಯಾಗಿ ಮೊದಲ ಅನುಭವ - ಕಿರಂ ಅನುಭವ ಕಥನ

ನಾನು ಕನ್ನಡ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕನಾಗಿ ಹೊಸದಾಗಿ ಕೆಲಸಕ್ಕೆ ಸೇರಿದಾಗ ಜಿ.ಎಸ್. ಶಿವರುದ್ರಪ್ಪನವರು ನಮ್ಮ ವಿಭಾಗದ ನಿರ್ದೇಶಕರಾಗಿದ್ದರು. ಒಂದು ದಿನ  ಮಲ್ಲೇಶ್ವರದ ಎಂ.ಇ.ಎಸ್. ಕಾಲೇಜಿನಲ್ಲಿ ನನ್ನ ಒಂದು ಉಪನ್ಯಾಸವಿತ್ತು. ಆ ದಿನ ನಾನು ಮಧ್ಯಾಹ್ನದ ಮೇಲೆ ಅರ್ಧದಿನದ ಸಾಂದರ್ಭಿಕ ರಜೆಯನ್ನು ಕೋರಿ ಅರ್ಜಿ ಬರೆದು ನಿರ್ದೇಶಕರ ಕೋಣೆಗೆ ಹೋದೆ. “ನಿರ್ದೇಶಕರು ಕ್ಲಾಸ್ ತೆಗೆದುಕೊಂಡಿದ್ದಾರೆ” ಎಂದು ಜವಾನ ಹೇಳಿದ್ದರಿಂದ ಅರ್ಜಿಯನ್ನು ಅವರ ಟೇಬಲ್‍ನ ಮೇಲೆ ಇರಿಸಿ ನಾನು ನನ್ನ ಬೆಳಗಿನ ತರಗತಿಗಳನ್ನು ತೆಗೆದುಕೊಳ್ಳಲು ಹೋದೆ. ಇದಾದ ಒಂದು ಗಂಟೆಯ ತರುವಾಯ ನಿರ್ದೇಶಕರಿಂದ ನನಗೆ ಕರೆ ಬಂದಿತು. ಶಿವರುದ್ರಪ್ಪನವರು "ರಜೆ ಏಕೆ ಬೇಕು" ಎಂದು ಕಾರಣ ಕೇಳಿದರು. ನಾನು ಅಂದು ಮಧ್ಯಾಹ್ನ ಮೂರು ಗಂಟೆಗೆ ಎಂ.ಇ.ಎಸ್. ಕಾಲೇಜಿನಲ್ಲಿ ನನ್ನ ಉಪನ್ಯಾಸ ಇದ್ದುದನ್ನು ವಿವರಿಸಿದೆ. ಆಗ ಅವರು ಟೇಬಲ್‍ನ ಮೇಲಿದ್ದ ನನ್ನ ರಜೆ ಚೀಟಿಯನ್ನು ತೆಗೆದುಕೊಂಡು ಹರಿದು ಕಸದ ಬುಟ್ಟಿಗೆ ಹಾಕಿದರು. ಅವರ ಆ ವರ್ತನೆ ಆ ಕ್ಷಣದಲ್ಲಿ ನನಗೆ ಅರ್ಥವಾಗಲಿಲ್ಲ. ಆಗ ಜಿ.ಎಸ್.ಎಸ್. “ನೀವು ಅಲ್ಲಿ ಹೋಗಿಯೂ ಅಧ್ಯಯನ ಕೇಂದ್ರದ ಕೆಲಸವನ್ನೆ ತಾನೆ ಮಾಡುತ್ತಿರುವುದು; ಹಾಗಾಗಿ ರಜೆ ಹಾಕಬೇಕಾದ ಅಗತ್ಯವಿಲ್ಲ. ಹೋಗಿ ಬನ್ನಿ” ಎಂದು ಕಳಿಸಿದರು. ಒಂದು ಆಡಳಿತಶಾಹಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಪಾಠವನ್ನು ಅಂದು ನಾನು ಅವರಿಂದ ಕಲಿತಿದ್ದೆ.
Rating
No votes yet

Comments