ಏಳು ಸುತ್ತಿನ ಕೋಟೆ ( ಕವನ )

ಏಳು ಸುತ್ತಿನ ಕೋಟೆ ( ಕವನ )

ಕವನ

 


ದಟ್ಟ ಕಾನನದ ಮಧ್ಯೆ ಶಿಥಿಲ ಕೋಟೆ


ನೆಲದಭಿಮಾನದ ಏಳು ಸುತ್ತಿನ ಕೋಟೆ


ಇಂದು ಇತಿಹಾಸ ಮರೆತ


ಗೊತ್ತು ಗುರಿಯಿಲ್ಲದೆ ಮಿತಿಯಲಿ ಸುತ್ತಿ


ನಿಂತ ನೀರಾಗಿ ಕೊಳೆಯುತ್ತಿರುವ


ತಲೆಸುತ್ತು ಬರಿಸುವ ಬರಿ ಸುತ್ತು ಕೋಟೆ


 


ವೀರಗಲ್ಲುಗಳು ಮಾಸತಿ ಕಲ್ಲುಗಳು


ತ್ಯಾಗ ಬಲಿದಾನಗಳ ನಗ್ನ ಸಂಕೇತಗಳು


ಅವುಗಳ ಕೂಗು ಮನಕೆ ಇಳಿಯುತ್ತಿಲ್ಲ


ತ್ಯಾಗ ನಿಷ್ಟೆಗಳ ಚಣ ನಿಂತು ನೆನೆಯುತ್ತಿಲ್ಲ


ಸುಮ್ಮನೆ ನೋಡಿ ಮುಂದೆ ಸಾಗಿದ್ದೇವೆ


ಭಾವನೆಗಳೆ ಸ್ಪುರಿಸದ ಕೊರಡುಗಳ ಹಾಗೆ


 


ಪಾಳು ಕೋಟೆಯ ದ್ವಾರ ಮಿಥುನ ಶಿಲ್ಪಗಳು


ಕಾಮವನು ಕೆರಳಿಸುವ ಭಾವ ಭಂಗಿಗಳು


ಕುಣಿಯುತಿವೆ ಮನದ ತುಂಬ ನಗ್ನ ಚಿತ್ರಗಳು


ಎದೆ ಬಡಿತ ಜೋರಾಗಿ ರಕ್ತ ಕಣ ಕುದಿದು


ವಿಜೃಂಭಿಸಿ ಬೆಂಕಿ ನರನಾಡಿ ಗಳಿಗಿಳಿದು


ಸ್ಕಲನ ಗೊಳ್ಳುತ್ತ ನಿರರ್ಥಕ ಗೊಳ್ಳುತಿದೆ


ಯೌವನದ ಅಮೂರ್ತ ಕಾಲ


 


ತ್ಯಾಗ ಬಲಿದಾನಗಳ ದೃಷ್ಟಾಂತ ಬೇಕಿಲ್ಲ


ವಿಷಯ ಲೋಲುಪತೆ ಬೆಳೆಸಿ ಕೊಳ್ಳುತ್ತ


ರಂಗು ರಂಗಿನ ಕನಸು ಕಾಣುತ್ತ ಬರಿ


ಹಗಲು ಗನಸುಗಳಿಗೆ ಸೀಮಿತ ಗೊಳ್ಳುತ್ತ


ವಾಸ್ತವದ ಕಟುತ್ವ ಎದುರಿಸಲು ಹೆದರಿ


ಕಳೆದು ಹೋಗುತ್ತ ತ್ರಿಶಂಕು ಲೋಕದಲಿ


 


ಬರಿ ಅಕ್ಷರಸ್ಥರು ನಾವು ಹೃದಯವಂತಿಕೆಯಿಲ್ಲ


ಸರಿ ತಪ್ಪು ಗುರುತಿಸುವ ಛಾತಿ ನಮಗಿಲ್ಲ


ಮನಸು ಮನಸುಗಳ ನಡುವೆ ಬೇಲಿಯನು ಕಟ್ಟುತ


ಸ್ವಂತಿಕೆಯ ಅವನತಿಯ ಬಲೆಯ ಹೆಣೆಯುತ್ತ


ಆ ಬಲೆಯಜೇಡವಾಗುತ್ತ ಪಳೆಯುಳಿಕೆಯಾಗುತ್ತ


ಮುಂದೆ ಸಾಗಿದ್ದೇವೆ ಭವಿಷ್ಯವಿಲ್ಲದ ಭವಿಷ್ಯದೆಡೆಗೆ


ಗೋಚರಿಸದ ಅಗೋಚರದೆಡೆಗೆ


 


ಕಡುಗತ್ತಲಲಿ ಮುಳುಗಿ ಕೊಚ್ಚೆಯಲಿ


ಉರುಳುವ ಕೊಚ್ಚೆ ಹುಳುಗಳು ನಾವು


ನೂರಿಪ್ಪತ್ತು ಕೋಟಿ ಸರಳತೆಯ ಮರೆತು


ಜಡ ಬದುಕು ಬದುಕುತ್ತ ವೈಭೋಗದ ಕನಸು


ಕಾಣುತ್ತ ಕಾಮದ ಸುತ್ತು ಕೋಟೆ ಯಾಗಿದ್ದೇವೆ


ಏಳು ಸುತ್ತಿನ ಕೋಟೆ ಸ್ಮೃತಿಯಾಚೆಗಟ್ಟಿದ್ದೇವೆ


 


ತ್ಯಾಗ ಬಿಟ್ಟಿದ್ದೇವೆ ಬಲಿದಾನಕ್ಕೆ ಹೆದರಿದ್ದೇವೆ


ಅವನತಿ ಹೊಂದುತ್ತ ಅಧಃಪತನ ಗೊಳ್ಳುತ್ತ


ನಮ್ಮದೆ ಮಿತಿಯ ಪರಿಧಿಯಲಿ ಸುತ್ತುತ್ತ


ಸುತ್ತು ಕೋಟೆ ಯಾಗುತ್ತ ನಶಿಸಿ ಹೋಗುತ್ತಿದ್ದೇವೆ


ಹೇಳ ಹೆಸರಿಲ್ಲದಂತೆ ಸಾಗಿದ್ದೇವೆ


ಪೂರ್ಣದಿಂದ ಅಪೂರ್ಣಕ್ಕೆ ಅಪೂರ್ಣದಿಂದ ಶೂನ್ಯಕ್ಕೆ


ಸಾಗಬೇಕಿದೆ ಮತ್ತೆ ಪೂರ್ಣತೆಗೆ ಸಾಗುವ ಪರಿಧಿ ಯೆಡೆಗೆ


 


 

Comments