ಜಾಗರಣೆಯ ಮಹಾ ಶಿವರಾತ್ರಿ
ಭೂಖಂಡದ ಜೀವಿಗಳಲ್ಲಿ ಮನುಷ್ಯ ಜೀವಿ ಅತಿ ಶ್ರೇಷ್ಟ, ಯಾಕೆ ಗೊತ್ತೆ? ಆತ ಪಶು ಪಕ್ಷಿಗಳಿಗಿಂತ ಭಿನ್ನ. ಹೇಗೆಂದರೆ ಆತನಿಗೆ ಯೋಚಿಸುವ ಶಕ್ತಿ ಇದೆ. ಮಾನವ ಆದಿ ಮಾನವನ ಸ್ಥಿತಿಯಿಂದ ನಾಗರಿಕ ಮಾನವ ನಾಗುವ ವರೆಗೆ ಆತ ಸಾಗಿಬಂದ ದಾರಿ ಬಹಳ ಕುತೂಹಲಕರ ಮತ್ತು ರಂಜನೀಯ. ಒಂಟಿ ಜೀವನದಿಂದ ಸಂಘ ಜೀವನದ ವರೆಗೆ ಸಾಗಿಬಂದ ಆದಿ ಮಾನವ ನಾಗರಿಕ ಬದುಕಿನೆಡೆಗೆ ಸಾಗಿಬಂದತೆ ಪ್ರಕೃತಿ ಆತನಲ್ಲಿ ಕುತೂಹಲ ಮೂಡಿಸಿರ ಬಹುದು. ಭೂಮಿ ಆಕಾಶ ಸೂರ್ಯ ಚಂದ್ರರು ನಕ್ಷತ್ರಗಳು ಮಳೆ ಗಾಳಿ ಬಿಸಿಲು ಬಿರುಗಾಳಿ ಮುಂತಾದ ಪ್ರಕೋಪ ಗಳು ಆತನಲ್ಲಿ ಆಸಕ್ತಿ ಮೂಡಿಸಿರಲು ಸಾಕು. ಆತನ ಈ ಆಸಕ್ತಿ ಇನ್ನಷ್ಟು ಕುತೂಹಲವಾಗಿ ಅವು ಮಾಡುವ ಒಳಿತು ಕೆಡಕುಗಳು ಆತನಲ್ಲಿ ಭಯ ಆಸಕ್ತಿ ಮತ್ತು ಆರಾಧನಾ ಭಾವವನ್ನು ಹುಟ್ಟುಹಾಕಿರಬಹುದು. ಸಂಘಜೀವಿ ಯಾದ ಮನುಷ್ಯ ಕ್ರಮೇಣ ತನ್ನ ಜೀವನದ ನಿಯಂತ್ರಣಕ್ಕೆ ದೇವರು ಮತ್ತು ದೈವಗಳನ್ನು ಸೃಷ್ಟಿಸಿ ಕೊಂಡಿರ ಬಹುದು. ಜೀವ ವಿಕಾಸವಾದಂತೆ ಮನುಷ್ಯನ ಬೌದ್ಧಿಕ ವಿಕಾಸವೂ ಆಯಿತು. ಎಲ್ಲ ರಂಗಗಳಲ್ಲಿಯೂ ಸುಧಾರಣೆ ಮತ್ತು ಆವಿಷ್ಕಾರಗಳು ನಡೆದವು. ಧಾರ್ಮಿಕರಲ್ಲಿ ಸ್ವರ್ಗ ಮತ್ತು ಪರ ಲೋಕದ ಕಲ್ಪನೆಗಳು ಹುಟ್ಟಿಕೊಂಡವು. ಹುಟ್ಟು ಸಾವು ಗಳ ಕುರಿತು ಆತೀತವಾಗಿ ಯೋಚಿಸುವ ಒಂದು ಜನ ವರ್ಗ ಆರಾಧನಾ ಮಾರ್ಗದೆಡೆಗೆ ಹೊರಳಿ ತಪಶ್ಚರ್ಯದ ಮಾರ್ಗವನ್ನು ಅನುಸರಿಸಿ ದೈವದ ಪರಿಕಲ್ಪನೆಯ ದಿಗಂತಗಳನ್ನು ಹೆಚ್ಚಿಸಿದರು. ದೈಹಿಕ ಬಲವುಳ್ಳವರು ಮಹತ್ವಾಕಾಂಕ್ಷಿಗಳು ಜನ ನಾಯಕರಾದರು. ಜನ ಸಾಮಾನ್ಯರ ರಕ್ಷಣೆಗೆ ರಾಜ್ಯಗಳನ್ನು ಕಟ್ಟಿ ಆಳಿದರು. ಜನಗಳನ್ನು ಒಂದು ಶಿಸ್ತುಬದ್ಧ ಜೀವನಕ್ಕೆ ಒಳಪಡುಸುವ ಯೋಚನೆ ಆಳುವ ವರ್ಗಕ್ಕೆ ಬಂದಾಗ ಅವರು ದೇವರನ್ನು ಸೃಷ್ಟಿಸಿ ಸಾಮಾಜಿಕ ಸುವ್ಯವಸ್ಥೆಗೆ, ಮನುಷ್ಯನ ಶಕ್ತಿ ಹುಟ್ಟು ಮತ್ತು ಸಾವುಗಳ ಬಗ್ಗೆ ದೇವರು ಕಾರಣವೆಂದು ಜನಸಾಮಾನ್ಯ ರಲ್ಲಿ ಬಿಂಬಿಸಿದರು. ಕೊನೆಗ ಸ್ವರ್ಗ ನರಕ ಮತ್ತು ಮುಕ್ತಿ ಮಾರ್ಗದ ಕಲ್ಪನೆ ಹುಟ್ಟಿರಬಹುದು. ಈ ರೀತಿಯಾಗಿ ದೇವಾನು ದೇವತೆಗಳು ಮತ್ತು ದೈವ ಮಾರ್ಗದ ಕಲ್ಪನೆಗಳು ಹುಟ್ಟಿ ಬೆಳೆದು ಬಂದಿರಬಹುದು. ಋಷಿ ಮುನಿ ಪ್ರಮಥರು ತಮ್ಮ ಬುದ್ಧಿಶಕ್ತಿ ಬಲದಿಂದ ದೇವರುಗಳನ್ನು ಪ್ರಕೃತಿಯೊಂದಿಗೆ ತಳಕು ಹಾಕಿ, ದೈವ ಮತ್ತು ಪ್ರಕೃತಿಗಳ ಒಂದು ರೀತಿಯ ಅವಿನಾಭಾವ ಸಬಂಧವನ್ನು ಹುಟ್ಟು ಹಾಕಿದರು. ಪುರಾಣ ಪುಣ್ಯ ಕಥೆಗಳು ಸೃಷ್ಟಿಯಾದವು. ಭೂಲೋಕ ಪಾತಾಳಲೋಕಗಳು ಮತ್ತು ಅನಂತ ಆಕಾಶದಲ್ಲಿ ಸ್ವರ್ಗ ನರಕಗಳು ಇವೆ. ಓಳ್ಳೆಯವರಿಗೆ ಸ್ವರ್ಗಪ್ರಾಪ್ತಿ ಕೆಟ್ಟವರಿಗೆ ನರಕ ಪ್ರಾಪ್ತಿಯಾಗುತ್ತವೆ ಎಂಬ ಪರಿಕಲ್ಪನೆಯನ್ನು ಬೆಳೆಸಿದರು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳನ್ನು ಹುಟ್ಟುಹಾಕಿ ಅವರಿಗೆ ಕ್ರಮವಾಗಿ ಸರಸ್ವತಿ ಲಕ್ಷ್ಮೀ ಮತ್ತು ಪಾರ್ವತಿ ಎಂಬ ಹೆಂಡತಿಯರನ್ನು ಸೃಷ್ಟಿ ಸಿದರು. ಮುಕ್ಕೋಟಿ ದೇವಾನು ದೇವತೆಗಳ ಸೃಷ್ಟಿ ಭರತ ಖಂಡದಲ್ಲಾಯಿತು. ಆ ದೇವತೆಗಳ ಆರಾಧನೆಯ ಅಂಗವಾಗಿ ಹಬ್ಬ ಹರಿದಿನಗಳು ಸೃಷ್ಟಿಯಾದವು. .ಜಗತ್ತಿನ ಇತರೆ ದೇಶಗಳು ಅನಾಗರಿಕ ಸ್ಥಿತಿಯಿಂದ ಹೊರ ಬರದೆ ಇದ್ದಂತಹ ಕಾಲದಲ್ಲಿ ಭಾರತ ನಾಗರೀಕತೆಯೆಡೆಗೆ ಸಾಗಿತ್ತು. ಸತ್ಯ ಧರ್ಮ ಅಹಿಂಸೆ ತ್ಯಾಗ ಪರೋಪಕಾರ ಮತ್ತು ಕಾಯಕಗಳು ಭಾರತದ ಜೀವನ ಧರ್ಮವಾಗಿದ್ದವು.
ಪ್ರಾಚೀನ ಭಾರತದ ಋಷಿ ಮುನಿಗಳು ತಮ್ಮ ತಪಃಶಕ್ತಿ ಮತ್ತು ಅಧ್ಯಯನ ಶೀಲತೆ ಕಾರಣಗಳಿಂದ ಜಗತ್ತಿನ ಸೃಷ್ಟಿವಿಕಾಸ ಮತ್ತು ಅಧು ಸಾಗಿಬಂದ ಕಾಲವನ್ನು ಯುಗ ಪ್ರಮಾಣಗಳಲ್ಲಿ ಅಳೆದು ದಾಖಲಿಸಿದರು. ಅವುಗಳಿಗೆ ಕೃತ ತ್ರೇತ ದ್ವಾಪರ ಮತ್ತು ಕಲಿಯೆಂದು ನಾಮಕರಣ ಮಾಡಿದರು. ಈ ನಾಲ್ಕು ಯುಗಗಳು ಸೇರಿದರೆ ಒಂದು ಮಹಾ ಯುಗ. ಎಪ್ಪತ್ತೊಂದು ಮಹಾಯುಗ ಗಳು ಸೇರಿದರೆ ಒಂದು ಮನ್ವಂತರ,ಒಂದು ಸಾವಿರ ಮಹಾಯುಗಗಳಿಂದ ಹದಿನೇಳು ಮನ್ವಂತರಗಳು. ಈ ಹದಿನಾಲ್ಕು ಮನ್ವಂತರಗಳು ಬ್ರಹ್ಮನ ಒಂದು ದಿವಸ, ಮೂವತ್ತು ದಿನಗಳಿಂದ ಒಂದು ಮಾಸ, ಹನ್ನೆರಡು ಮಾಸಗಳಿಂದ ಒಂದು ವರ್ಷ. ಬ್ರಹ್ಮ ದೇವನ ಇಂತಹ ನೂರು ವರ್ಷಗಳ ಪರಿಮಿತಿಗೆ ಮಹಾ ಕಲ್ಪವೆಂದು ಕರೆದರು. ಇದು ಪ್ರಾಚೀನ ಋಷಿಗಳಿಂದ ಆರ್ಷೇಯ ವಾದದ್ದು. ಶ್ವಯಾಭವ, ಉತ್ತಮ, ತಾಪಸ, ದೈವತ, ಚಾಕ್ಷುಷ ಮತ್ತು ವೈವಸ್ವತವೆಂಬ ಏಳು ಮನ್ವಂತರಗಳಿದ್ದು, ಪ್ರಸ್ತುತ ವೈವಸ್ವತ ಮನ್ವಂತರದಲ್ಲಿ ಇಪ್ಪತ್ತೇಳು ಮಹಾಯುಗಗಳು ಕಳೆದು ಇಪ್ಪತ್ತೆಂಟನೆ ಮಹಾಯುಗ ಕಾಲಿರಿಸಿದೆ. ಅದರಲ್ಲಿ ಕೃತ ತ್ರೇತ ದ್ವಾಪರ ಯುಗಗಳು ಕಳೆದು ಈಗ ಕಲಿಯುಗ ನಡೆಯುತ್ತಿದೆ. ಈ ಯುಗದಲ್ಲಿ ಯುದಿಷ್ಟಿರ, ವಿಕ್ರಮ, ಶಾಲಿವಾಹನ, ವಿಜಯಾಭಿನಯನ, ನಾಗಾರ್ಜುನ ಮತ್ತು ಕಲ್ಕಿ ಎಂಬ ಶಕಕರ್ತರು ಇರುತ್ತಾರೆ. ಇಷ್ಟು ದೀರ್ಘಕಾಲದಿಂದ ತ್ರಿಮೂರ್ತಿಗಳು ಅಲ್ಲದೆ ಇತರ ಅನೇಕಾನೇಕ ದೇವ ದೇವತೆಗಳು ಗಂಧರ್ವರು ಮತ್ತು ಋಷಿ ಮುನಿಗಳು ಇವರೆಲ್ಲರನ್ನು ಆಧ್ಯಾತ್ಮಿಕ ಸೂತ್ರದಲ್ಲಿ ಹೆಣೆದು ಋತುಮಾನಕ್ಕೆ ತಕ್ಕಂತೆ ಹಬ್ಬ ಹರಿದಿನಗಳ ಆಚರಣೆಯನ್ನು ಮಾಡಿ ದೇವರುಗಳನ್ನು ಸಂತೃಪ್ತಿ ಪಡಿಸಿದರೆ ನಮಗೆ ಮುಕ್ತಿ ಮುಂತಾದ ಪರಿಕಲ್ಪನೆಗಳು ತಲ ತಲಾಂತರಗಳಿಂದ ನಮ್ಮ ಮಧ್ಯದಲ್ಲಿ ಉಳಿದು ಬಂದಿವೆ. ಪರಧರ್ಮಗಳ ಆಕ್ರಮಣ, ವೈಚಾರಿಕ ಕಟು ವಿಮರ್ಶೆಗಳನ್ನು ಅರಗಿಸಿಕೊಂಡು ಎಲ್ಲ ಧರ್ಮಗಳಿಗೆ ಸವಾಲಾಗಿ ಬೆಳೆದಿರುವುದು ಭಾರತ ಜೀವನ ಧರ್ಮ.
ತ್ರಿಮೂರ್ತಿಗಳಲ್ಲಿ ಚತುರ್ಮುಖ ಬ್ರಹ್ಮ ಸೃಷ್ಟಿಕರ್ತನಾದರೂ ಆತನನ್ನು ಪೂಜಿಸುವವರು ಗೌಣವೆಂದರೂ ನಡೆದೀತು. ಆತನಿಗೆ ಕೆಲವು ದೇಗುಲಗಳಿರಬಹುದು. ಮೇಲ್ಛಾವಣಿಯಿಲ್ಲದ ನಾಲ್ಕು ಗೋಡಗಳ ಆವರ್ಣವೆ ಆತನಿಗೆ ದೇಗುಲ. ಆತನ ಪೂಜಾ ಕೈಂಕರ್ಯ ಬಹಳ ಕಠಿಣ. ಹೀಗಾಗಿ ಈತ ಜನಸಾಮಾನ್ಯರ ಆರಾಧ್ಯ ದೈವವಾಗಿ ಅಸ್ತಿತ್ವದಲ್ಲಿ ಬರಲಿಲ್ಲ. ಇನ್ನು ವಿಷ್ಣು ಕ್ಷೀರಸಾಗರದಲ್ಲಿ ಶೇಷಶಯನನಾಗಿ ಲಕ್ಷ್ಮಿಸಹಿತ ತನ್ನ ಲೋಕದಲ್ಲಿ ಪ್ರತಿಷ್ಟಾಪಿಸಲ್ಪಟ್ಟ. ಭೂಮಿಯ ಮೇಲೆ ದಶಾವತಾರಗಳನ್ನು ಎತ್ತಿದ ಈತ ಈಗ ಈ ಜಗತ್ತನ್ನು ಸಲಹುವ ದೇವರು. ಹೀಗಾಗಿ ಈತ ಪ್ರಚಲಿತ ದೇವರು. ಇನ್ನು ಲಯಕರ್ತ ಶಿವ ಜಟಾಜೂಟ ಮೃಗ ಚರ್ಮಾಂಬರ ವಿಭೂತಿಧಾರಿ .ಕೈಯಲ್ಲಿ ಡಮರುಗ ತ್ರಿಶೂಲ, ಜಟೆಯಲ್ಲಿ ಗಂಗೆ ಚಂದ್ರರನ್ನು ಧರಿಸಿದ ಕೈಲಾಸದ ಅಧಿಪತಿ ಸ್ಮಶಾನವಾಸಿ, ದಕ್ಷಬ್ರಹ್ಮನ ಮಗಳು ಗಿರಿಜೆಯನ್ನು ವರಿಸಿದಾತ. ಈತನಿಗೆ ಭಕ್ತಪ್ರಿಯನೆಂದು ಹೆಸರು. ಭಕ್ತರು ಕೇಳಿದ ವರಗಳನ್ನು ಹಿಂದೆ ಮುಂದೆ ನೋಡದೆ ದಯಪಾಲಿಸಿ ಅನೆಕ ಸಾರಿ ವಿಪತ್ತಿಗೆ ಸಿಲುಕಿ ಕೊಂಡವ. ಜಗದ ಓಳಿತಿಗಾಗಿ ಸಮುದ್ರ ಮಥನ ಕಾಲದಲ್ಲಿ ಹೊರ ಹೊಮ್ಮಿದ ಹಾಲಾಹಲವನ್ನು ಕುಡಿದ ನೀಲಕಂಠ . ದೇವ ಲೋಕದ ಗಂಗೆಯನ್ನು ಮಹರ್ಷಿ ದಧೀಚಿ ಭೂಮಿಗೆ ತರಲು ನಿಶ್ಚಯಿಸಿದಾಗ ಆಕೆಯನ್ನು ಜಟೆಯಲ್ಲಿರಿಸಿ ಕೊಂಡು ಭೂಮಿಗೆ ಹರಿಸಿ ಭೂಮಿಗೆ ಗಂಗಾವತರಣ ವಾಗಲು ಮಧ್ಯವರ್ತಿಯಾಗಿ ಗಂಗಾಧರನೆಂಬ ಅಭಿದಾನ ವನ್ನು ಪಡೆದವ. ರಾವಣನಿಗೆ ಆತ್ಮ ಲಿಂಗವನ್ನೆ ಕೊಟ್ಟವ, ಕಾಲ ಭೈರವನಾಗಿ ರುದ್ರ ನರ್ತನ ಗೈದವ, ಬೇಡರ ಕಣ್ಣಪ್ಪನಿಗೆ ಮೋಕ್ಷ ನೀಡಿದವ, ಕೋಳೂರು ಕೊಡಗೂಸನ್ನು ತನ್ನಲ್ಲಿ ಐಕ್ಯವಾಗಿಸಿ ಕೊಂಡವ, ಭಕ್ತ ಮಾರ್ಕಾಂ ಡೇಯನಿಗೆ ಆಯುಷ್ಯ ನೀಡಿದವ.ಮಹಾ ಭಾರತದ ಅರ್ಜುನನಿಗೆ ಪಾಶುಪತಾಸ್ತ್ರ ನೀಡಿದವ, ಅರ್ಧ ನಾರೀಶ್ವರ. ಈ ಎಲ್ಲ ಕಾರಣಗಳಿಂದ ಶಿವ ಭಾರತಿಯರ ಆರಾಧ್ಯ ದೈವ.
ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲ ದೇವಾನುದೇವತೆಗಳ ಪೂಜಾ ಕೈಂಕರ್ಯಗಳು ಹಗಲಿನಲ್ಲಿ ನಡೆಯುತ್ತವೆ. ಆದರೆ ಮಹಾ ಶಿವರಾತ್ರಿಯಂದು ಶಿವ ಪೂಜೆ ರಾತ್ರಿಯವೇಳೆ ಆಚರಿಸಲ್ಪಡುತ್ತದೆ. ಆ ದಿನ ಭಕ್ತರು ಪುಣ್ಯ ತೀರ್ಥಗಳಲ್ಲಿ ಮಿಂದು ಉಪವಾಸ ಮಾಡಿ ಬಿಲ್ವ ಪತ್ರೆಗಳಿಂದ ಅರ್ಚಿಸಿ ಭಕ್ತಿ ಭಾವಗಳಿಂದ ಜಾಗರಣೆ ಮಾಡಿ ಶಿವನನ್ನು ಸ್ತುತಿಸಿ ಭಜನೆ ಮಾಡಿ ಹರಕೀರ್ತನೆ ಗಳನ್ನು ಕೇಳಿ ಪಾವನ ರಾಗುತ್ತಾರೆ. ಶಿವರಾತ್ರಿ ಪೂಜೆ ರಾತ್ರಿ ಕಾಲವೆ ಪ್ರಶಸ್ತವೇಕೆಂದರೆ ಶಿವನು ತಾನು ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿ ಯಂದು ರಾತ್ರಿ ಸಮಯದಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತೇನೆ ಎಂದಿದ್ದಾನೆ. ಕಾರಣ ಶಿವರಾತ್ರಿ ದಿನದಂದು ರಾತ್ರಿಯ ವೇಳೆಯಲ್ಲಿ ತನ್ನನ್ನು ಪೂಜಿಸಿದವರ ಪಾಪಗಳು ಪರಿಮಾರ್ಜನೆಯಾಗುತ್ತವೆ ಎಂದು ಸಾರಿದ್ದಾನೆ ಎಂಬ ಬಗ್ಗೆ ಶಾಸ್ತ್ರೋಕ್ತಿ ಯೊಂದಿದೆ. ಸ್ಕಂದ ಪುರಾಣ ದಲ್ಲಿ ಶಿವರಾತ್ರಿ ಹಬ್ಬದಂದು ವೃತ ಪೂಜೆಗೆ ಸಂಮ್ಮಂಧ ಪಟ್ಟಂತೆ ಇರುವ ಉಕ್ತಿಯೊಂದರಲ್ಲಿ ' ಶಿವರಾತ್ರಿಯು ಮಹಾ ಶಿವರಾತ್ರಿ ಏಕೆಂದರೆ ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವಿರುವ ಪರ್ವಕಾಲ ಪೂಜೆಗೆ ಪ್ರಶಸ್ತ.' ರಾತ್ರಿಯ ವೇಳೆ ಯಾವ ಸಮಯ ವೆಂದರೆ ಚತುರ್ದಶಿಯು ಪ್ರದೋಷ ಮತ್ತು ರಾತ್ರಿಸ್ತ ಎರಡೂ ಕಾಲ ಗಳನ್ನು ಒಳಗೊಂಡಿರಬೇಕು.. ತ್ರಯೋದಶಿಯು ಶಕ್ತಿರೂಪವಾದರೆ ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ. ' ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆಯಿರಲಿ, ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆಯಿರಲಿ, ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆಯಿರಲಿ ಎಲ್ಲ ಕಥೆಗಳ ಸಾರಾಂಶ ಒಂದೆ. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರಿಗೆ ಸದ್ಗತಿ ಪ್ರಾಪ್ತವಾಯಿತು. ಅವರುಗಳು ತಿಳಿಯದೆ ಪೂಜೆ ಅಭಿಷೇಕ ಮಾಡಿದ್ದರೂ ಅವರಿಗೆ ಶಿವ ಮುಕ್ತಿಯನ್ನು ಕರುಣಿ ಸಿರಬೇಕಾದರೆ ತಿಳಿದ ನಾವು ಭಕ್ತಿ ಪೂರ್ವಕ ವಾಗಿ ಶಿವರಾತ್ರಿಯಂದು ಶಿವಪೂಜೆ ಮಾಡಿ ಭಕ್ತಿಯಿಂದ ಜಾಗರಣೆ ಮಾಡಿದರೆ ಆ ಶಿವ ನಮಗೂ ಸದ್ಗತಿಯನ್ನು ಕಾಣಿಸದೆ ಇರಲಾರ ಎಂದು ನಂಬಿ ನಾವೂ ಇಲ್ಲಿಯ ವರೆಗೂ ಮಹಾ ಶಿವರಾತ್ರಿ ಪೂಜೆ ಯನ್ನು ಆಚರಿಸುತ್ತ ಬಂದಿದ್ದೇವೆ. ವಿಷ್ಣು ಅಲಂಕಾರ ಪ್ರಿಯನಾದರೆ ಶಿವ ಅತ್ಯಂತ ಮಂಗಳ ಕಾರಕ ನಾಮರೂಪಕ ಗುಣ ಕರ್ಮಗಳುಳ್ಳ ಮಹಾದೇವ. ಅಂತಹ ಕರುಣಾ ಮಯಿಯಾದ ಪರಶಿವನಲ್ಲಿ ಮನಃಪೂರ್ವಕವಾಗಿ ಬೇಡಿಕೊಂಡು ಪೂಜಿಸಿದರೆ ಆತನಿಗೆ ತನ್ನ ಭಕ್ತನ ಬಗ್ಗೆಪ್ರೀತಿಯುಂಟಾಗುತ್ತದೆ. ಉಪವಾಸ ವೆಂದರೆ ಭಗವಂತನನ್ನು ನೆನೆಯುತ್ತ ಆತನ ಹತ್ತಿರವಿರುವುದು ಎಂದು ಅರ್ಥ. ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವನನ್ನು ಮಹಾ ಶಿವರಾತ್ರಿ ಯಂದು ಧ್ಯಾನಿಸಿದರೆ ಧ್ಯಾನಪ್ರಿಯ ಶಿವ ನಮಗೆ ಸದ್ಗತಿಯನ್ನು ಕರುಣಿಸದೆ ಇರಲಾರ.
ನಾವು ಭಾರತೀಯರು ವೈಜ್ಞಾನಿಕವಾಗಿ ಎಷ್ಟೆ ಮುಂದುವರಿದಿದ್ದರೂ ಹಬ್ಬ ಹರಿದಿನ ಧರ್ಮ ಕರ್ಮ ಮೋಕ್ಷ ಗಳಲ್ಲಿ ನಂಬಿಕೆ ಇರಿಸಿ ಕೊಂಡಿದ್ದು ಭಕ್ತಿಪುರಸ್ಕಾರವಾಗಿ ಅರ್ಥ ಪೂರ್ಣವಾಗಿ ಆಚರಿಸಿ ನಾವು ಮಾಡಿರ ಬಹುದಾದ ಪಾಪ ಕಾರ್ಯಗಳನ್ನು ಶಿವನಲ್ಲಿ ನಿವೇದಿಸಿಕೊಂಡು ಪಾಪ ಕರ್ಮಗಳನ್ನು ನೀಗಿಕೊಂಡು ಪಶ್ಚಾ ತಾಪದ ಅಗ್ನಿಕುಂಡದಲ್ಲಿ ಅಗ್ನಿಗರ್ಪಿಸಿ ಪುಣ್ಯ ಕಾರ್ಯಗಳಲ್ಲಿ ತೊಡಗಿ ಕೊಳ್ಳಲು ಕಂಕಣ ಬದ್ಧರಾಗೋಣ. ಶಿವನಲ್ಲಿ ರುವ ಸರಳತೆ ತ್ಯಾಗಬುದ್ಧಿ ಕಷ್ಟ ಸಹಿಷ್ಣುತೆ ಜಗಕೆ ತೊಂದರೆ ಬಂದಾಗ ಮುಂದೆ ನಿಲ್ಲುವ, ಪ್ರೀತಿ ಪಾತ್ರರಿಗೆ ವರ ಕೊಡುವ ಉದಾರತನ ಇವು ನಮಗೆ ಆಧರ್ಶಗಳಾಗಲಿ. ಮಹಾ ಶಿವರಾತ್ರಿ ಪೂಜೆ ಜಾಗರಣೆಗಳು ಅರ್ಥ ಪೂರ್ಣ ಆಚರಣೆ ಗಳಾಗಲಿ.
ಚಿತ್ರ ಕೃಪೆ ..ಅಂತರ್ಜಾಲ
***
Comments
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by venkatb83
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by manchenahally
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by venkatb83
ಉ: ಜಾಗರಣೆಯ ಮಹಾ ಶಿವರಾತ್ರಿ
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by swara kamath
ಉ: ಜಾಗರಣೆಯ ಮಹಾ ಶಿವರಾತ್ರಿ
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by gopinatha
ಉ: ಜಾಗರಣೆಯ ಮಹಾ ಶಿವರಾತ್ರಿ
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by makara
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by H A Patil
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by makara
ಉ: ಜಾಗರಣೆಯ ಮಹಾ ಶಿವರಾತ್ರಿ
ಉ: ಜಾಗರಣೆಯ ಮಹಾ ಶಿವರಾತ್ರಿ
In reply to ಉ: ಜಾಗರಣೆಯ ಮಹಾ ಶಿವರಾತ್ರಿ by Aravind M.S
ಉ: ಜಾಗರಣೆಯ ಮಹಾ ಶಿವರಾತ್ರಿ
ಉ: ಜಾಗರಣೆಯ ಮಹಾ ಶಿವರಾತ್ರಿ