ಬರಹ ಮತ್ತು ಓದುಗ

ಬರಹ ಮತ್ತು ಓದುಗ

       ಕನಿಷ್ಠ ದಿನಕ್ಕೊಮ್ಮೆ ಪೋಸ್ಟು ಪೋಸ್ಟು ಎಂದು ಹೇಗ್ರೀ ಕೂಗೋದು? ಈಗ ಎಲ್ಲಿದೆ ಪೋಸ್ಟು ಗೀಸ್ಟು, ಈಗ ಎಲ್ಲಾ ಮೇಲು ಗೀಲು ಎಂದಿರಾ? ಪೋಸ್ಟ್ ಅಂದಿದ್ದು ವರ್ಡ್ ಪ್ರೆಸ್ ಬ್ಲಾಗ್ ತಾಣಕ್ಕೆ ನಾವು ಬರೆದು ಪ್ರಕಟಿಸುವ ಬರಹದ ಬಗ್ಗೆ.  ದಿನಕ್ಕೊಂದು ಪೋಸ್ಟ್ ಕಳಿಸಿ ಎಂದು ಉತ್ತೇಜಿಸುತ್ತದೆ ವರ್ಡ್ ಪ್ರೆಸ್ ಬ್ಲಾಗ್ ತಾಣ  ವರ್ಡ್ ಪ್ರೆಸ್ ತಾಣವನ್ನು ಹೊಕ್ಕ ಕೂಡಲೇ freshly pressed ವಿಭಾಗದಲ್ಲಿ ಇರುವ ಲೇಖನದ ಮೇಲೆ ಕಣ್ಣಾಡಿಸಿ ಪ್ರಕಟವಾದ ಲೇಖನಗಳಿಗೆ ಬರುವ ಸ್ವಾರಸ್ಯಕರ ಪ್ರತಿಕ್ರಿಯೆ ಓದುವುದು ನನ್ನ ಅಭ್ಯಾಸ. ಕೇಕ್ ಹೇಗೇ ಮಾಡೋದು ಎನ್ನುವುದರಿಂದ ಹಿಡಿದು ವಾಕ್ ಹೇಗೇ ಮಾಡೋದು, ಪೇರೆಂಟಲ್ (ಪಾಲಕತ್ವ?) ಬಗ್ಗೆ, ಪ್ರವಾಸದ ಬಗ್ಗೆ, ಬರೆಯಲು ಏನೂ ಹೊಳೆಯದಾದಾಗ ವಿಷಯ ಕಂಡು ಕೊಳ್ಳುವುದು ಹೇಗೆ.........ಹೀಗೆ ಬ್ಲಾಗ್ ಪೋಸ್ಟ್ ಗಳ ಸುಗ್ಗಿ ಕಾಣಲು ಸಿಗುತ್ತದೆ. ಒಂದೊಂದು ಪೋಸ್ಟ್ ಗೂ ನೂರಾರು ಪ್ರತಿಕ್ರಿಯೆಗಳು. ವಿಷಯ ಎಷ್ಟೇ trivial ಆಗಿರಲಿ ಆಸ್ಥೆಯಿಂದ ತಮ್ಮ ಅಭಿಪ್ರಾಯ ಪ್ರಕಟಿಸುತ್ತಾರೆ ಓದುಗರು. ಅದೇ ವೇಳೆ ನಮ್ಮ ಕನ್ನಡ ತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳ ಕಡೆ ಸ್ವಲ್ಪ ನೋಡಿ. ಪ್ರತಿಕ್ರಿಯೆ ಗಳಿಲ್ಲದೆ ಆಹಾರ, ಪೋಷಕಾಂಶ ಇಲ್ಲದೆ, ಕೃಶರಾಗಿ  ನರಳುವ ಸೊಮಾಲಿಯಾ ದೇಶದ ಮಕ್ಕಳ ಥರ ಕಾಣುತ್ತದೆ ಬ್ಲಾಗ್ ಪೋಸ್ಟು. ಈ ಅಸಡ್ಡೆಗೆ, indifference ಗೆ ಕಾರಣವಾದರೂ ಏನಿರಬಹುದು? ಥಟ್ಟನೆ ಸೋಮಾರಿತನ ಕಾರಣ ಎಂದು ತೋರಿದರೂ ಕೆಲವೊಮ್ಮೆ ಮತ್ತೊಂದು ಕಾರಣ ತಲೆಗೆ ತೂರಿ ಕೊಳ್ಳುತ್ತದೆ. ಅದೇನೆಂದರೆ ಓದಿದ ಬರಹಕ್ಕೆ   ಪ್ರತಿಕ್ರಯಿಸಬೇಕೆಂದರೆ ಕೀಲಿ ಮಣೆ ಕುಟ್ಟಲೇ ಬೇಕಲ್ಲವೇ? ಹೀಗೆ ಪ್ರತೀ ಬರಹಕ್ಕೂ ಕೀಲಿಗಳನ್ನು ಕುಟ್ಟುತ್ತಾ ಕೂತರೆ ಕೀಲಿಗಳು ಕೀಲು ಬಿಟ್ಟುಕೊಂಡು ಉದುರಿದರೆ? ಕಂಪ್ಯೂಟರ್ ಹತ್ತಾರು ಸಾವಿರ ಬೆಲೆಬಾಳುವ ಉಪಕರಣ ತಾನೇ? ಸುಮ್ಮ ಸುಮ್ಮನೆ ಅದನ್ನು ಹಾಳುಗೆಡವಲು ಸಾಧ್ಯವೇ? ನಿಮಗೆ ಗೊತ್ತೇ ಇರಬಹುದು, ಟೀವೀ ಬಂದಾಗ ಅದರೊಂದಿಗೆ ಬರುವ ರಿಮೋಟ್ ಕಂಟ್ರೋಲ್ ಉಪಕರಣವನ್ನು ನಾವು ಜೋಪಾನ ಮಾಡೋ ರೀತಿ. ಕೆಲವರು ಪ್ಲಾಸ್ಟಿಕ್ ಕವರ್ ಹೊದಿಸಿದರೆ ಮತ್ತೆ ಕೆಲವರು ಪ್ಲಾಸ್ಟಿಕ್ ಕವಚ ಹಾಕುತ್ತಾರೆ, ಒತ್ತಿ ಒತ್ತಿ ಎಲ್ಲಿ ಬಟನ್ನುಗಳು ಕಿತ್ತು ಬರುತ್ತೋ ಎಂದು. ಈ ತೆರನಾದ ಕಾರಣವೇನಾದರೂ ಇರಬಹುದೇ ಪ್ರತಿಕ್ರಿಯೆಗಳ ಬರಗಾಲಕ್ಕೆ? ಕೆಲಸವಿಲ್ಲದವನು ಏನೋ ಬರೆದು ಹಾಕಿದ್ದಕ್ಕೆ ನಾವೇಕೆ ಪ್ರತಿಕ್ರಯಿಸಿ ನಮ್ಮ ಕೀ ಬೋರ್ಡ್ ಹಾಳು ಗೆಡವಬೇಕು ಎನ್ನುವ ಧೋರಣೆಯೋ? ಹೊಸತಾಗಿ ಬರಹ ಕೈಗೆತ್ತಿ ಕೊಂಡು ಈ ರೀತಿಯ ಓದುಗ ಸಮೂಹದ ಅಸಡ್ಡೆಗೆ expose ಆದನೋ, ಅವನ ಗತಿ ದೇವರಿಗೇ ಪ್ರೀತಿ. ಬರಹನೂ ಬೇಡ ಏನೂ ಬೇಡ, ಇದು ನನ್ನ ಕೈಗೆ ಹೇಳಿಸಿದ ಕೆಲಸ ಅಲ್ಲ ಎಂದು ಮುದುಡಿ ಕೊಳ್ಳುತ್ತಾನೆ. ಆದರೆ ನನ್ನಂಥ ದಪ್ಪ ಚರ್ಮದ ಜನರಿಗೆ ಓದುಗರ “ಅಸಡ್ಡೆ” ಯೇ ಒಂದು ರೀತಿಯ ಮೂಕಿ (ಮೂಕಿ ಟಾಕಿ ಗೊತ್ತಲ್ಲ?) ಪ್ರತಿಕ್ರಿಯೆ.


·         ನನ್ನ “ಹಳೇ ಸೇತುವೆ” ಬ್ಲಾಗ್ ಗೆ ಇದುವರೆಗೆ ಭೇಟಿ ಕೊಟ್ಟವರ ಸಂಖ್ಯೆ ೨೦,೦೦೦ ದಾಟಿದ “ಅವಿಸ್ಮರಣೀಯ ಅನುಭವ” ಕ್ಕೆ ಅರ್ಪಣೆ ಈ ಲಘು ಬರಹ. ಎಲ್ಲರಿಗೂ ವಂದನೆಗಳು.
·         ಸೂಚನೆ: ಬೇಡ, ಬೇಡ, ಪ್ರತಿಕ್ರಿಯೆ ಬೇಡ, ನೀವು ಓದುವಾಗ ನಿಮ್ಮ ಕಣ್ಣುಗಳಲ್ಲೇ ನನಗೆ ಕಾಣುತ್ತಿದೆ ಶುಭಾಶಯಗಳು ಎನ್ನುವ ಹಾರೈಕೆ.                

 

Rating
No votes yet

Comments