ರಾಜರತ್ನಂ ಅವರೊಡನೆ...
ಡಾ. ಟಿ. ಎನ್. ವಾಸುದೇವಮೂರ್ತಿಗಳ ಲೇಖನ "ಗೌತಮ ಬುದ್ಧ - ಜಿ.ಪಿ. ರಾಜರತ್ನಂರನ್ನು ನೆನೆದು" ಓದಿ ಪ್ರತಿಕ್ರೆಯೆ ಹಾಕುವಾಗ ಈ ಸಂಗತಿಯನ್ನು ಹಂಚಿಕೊಳ್ಳಬಹುದು ಎನಿಸಿತು.
ಬೆಂಗಳೂರು ರಾಜಾಜಿನಗರದ ವಿದ್ಯಾವರ್ಧಕ ಸಂಘ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಬೌದ್ಧ ಧರ್ಮದ ಕುರಿತಾದ ಒಂದು ಅಂತರಶಾಲಾ ಭಾಷಣ ಸ್ಪರ್ಧೆಗೆ ನಮ್ಮ ಶಾಲೆಯಿಂದ ನನ್ನನ್ನು ನೇಮಿಸಿದ್ದರು. ಹಾಗಾಗಿ ಬೌದ್ಧಧರ್ಮದ ಬಗ್ಗೆ ವಿಶಯ ಸಂಗ್ರಹ ಮಾಡುತ್ತಿದ್ದಾಗ ಶಾಲೆಯ ಶಿಕ್ಷಕರೊಬ್ಬರು ರಾಜರತ್ನಂ ಅವರ ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿದರು. ಅವರು ಆ ಮಾತನ್ನು ನಿಜವಾಗಿ ಸೀರಿಯಸ್ಸಾಗಿ ಹೇಳಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ... ಆದರೆ ನಾನಂತೂ ರಾಜರತ್ನಂ ಅವರನ್ನು ಕಂಡುಬರಲು ಹುಡುಗತನ ಹುರುಪಿನಲ್ಲಿ ನಿರ್ಧರಿಸಿಯೇಬಿಟ್ಟೆ.
ಮಲ್ಲೇಶ್ವರದ ಗಾಂಧಿಸಾಹಿತ್ಯ ಸಂಘದಲ್ಲಿ ರಾಜರತ್ನಂ ಅವರು ಭಾನುವಾರ ಬೆಳಗ್ಗೆ ಚಿಕ್ಕ ಮಕ್ಕಗಳಿಗೆ ಕಥೆ ಹೇಳುವುದು, ಶ್ಲೋಕ ಹೇಳಿಕೊಡುವುದು ರೂಢಿಯಲ್ಲಿತ್ತು. ಸಮೀಪದಲ್ಲೇ ನಾವು ವಾಸವಾಗಿದ್ದಿದ್ದರಿಂದ ನಾನೂ ಅಲ್ಲಿಗೆ ಚಿಕ್ಕಂದಿನಲ್ಲಿ ಕೆಲವೊಮ್ಮೆ ಹೋಗಿದ್ದ ನೆನಪಿತ್ತು. ಅವರಿವರನ್ನು ಕೇಳಿ ರಾಜರತ್ನಂ ಅವರ ಮನೆ ಮಲ್ಲೇಶ್ವರದ ೧೭ನೇ ಅಡ್ಡರಸ್ತೆಯಲ್ಲಿದೆ ಎಂದು ತಿಳಿದುಕೊಂಡು ಒಂದು ದಿನ ಮಧ್ಯಾಹ್ನ ಅವರ ಮನೆಗೆ ಹೋದೆ.
ತುಂಬಾ ಅಕ್ಕರೆಯಿಂದ ಮಾತಾಡಿಸಿ, ಬೌದ್ಧ ಧರ್ಮದ ತತ್ತ್ವಗಳು ತುಂಬಾ ಗಹನವಾಗಿರುವುದಾಗಿಯೂ, ಆ ನನ್ನ ವಯಸ್ಸಿಗೆ ಅದರ ನೀತಿಕತೆಗಳು ಸಮರ್ಪಕವಾಗಿದೆಯೂ ಎಂದು ಹೇಳಿ ತಮ್ಮ ಹಲವಾರು ಮಕ್ಕಳ ಕಥೆ ಪುಸ್ತಕಗಳ ಮೇಲೆ ಆಶೀರ್ವಾದಗಳನ್ನು ಬರೆದು, ಸಹಿ ಹಾಕಿ ಕೊಟ್ಟರು. ನಾನು ತೆರಳುವ ಮೊದಲು ಸಂಕೋಚಕ್ಕೆ ನಾನು ಬೇಡ ಎಂದರೂ ಒಂದು ಲೋಟ ಹಾಲನ್ನು ಕೊಟ್ಟು ಉಪಚರಿಸಿದರು. ಈಗಲೂ ಅವರು ತೊಟ್ಟಿದ್ದ ಬಿಳಿಪಂಚೆ, ಅರೆತೋಳಿನ ಬಿಳಿಯ ಖಾದಿ ಬನಿಯನ್, ಅವರ ಕಂಠ, ವಾತ್ಸಲ್ಯದ ದನಿ ಅವಿಸ್ಮರಣಿಯವಾಗಿವೆ.
ಹೂವಿನ ಜೊತೆ ದಾರವೂ ಮುಡಿಗೇರುವುದಂತೆ! ನಾನು ಅವರನ್ನು ಕಂಡ ಆ ಸಂಗತಿ ಹೇಗೋ ಶ್ರೀ ನೀಲತ್ತಹಳ್ಳಿ ಕಸ್ತೂರಿ ಅವರಿಗೆ ತಲುಪಿ, ಅವರು ರಾಜರತ್ನಂ ಅವರ ಜೀವನಕಥೆಯಲ್ಲಿ ಅದನ್ನು ಉಲ್ಲೇಖಿಸಿದ್ದಾರೆ ಎಂದು ಬಹಳ ಹಿಂದೆ ಕೇಳಿದ್ದೆ.
ಕಳೆದ ವರ್ಷ ಬಸವನಗುಡಿಯಲ್ಲಿ ಆದ ಸಾಹಿತ್ಯಸಮ್ಮೇಳನದಲ್ಲಿ ಪುಸ್ತಕಗಳನ್ನು ಕೊಳ್ಳುವಾಗ "ಆರದ ಬೆಳಕು" ಎಂಬ ರಾಜರತ್ನಂ ಅವರ ಜೀವನಕಥೆಯ ಪುಸ್ತಕ ಕಣ್ಣಿಗೆ ಬಿತ್ತು. ಲೇಖಕರು ಶ್ರೀ ನೀಲತ್ತಹಳ್ಳಿ ಕಸ್ತೂರಿ. ಅದನ್ನೂ ಕೊಂಡುಕೊಂಡೆ. ಅದರಲ್ಲಿ ಬರುವ ಮೇಲಿನ ಸಂಗತಿಯನ್ನು ಗಮನಿಸಿ ಖುಷಿಯಾಯ್ತು.
ಶ್ರೀ ಕಸ್ತೂರಿಯವರು ಮಲ್ಲೇಶ್ಚರದಲ್ಲೇ ವಾಸವಾಗಿದ್ದಾರೆ ಎಂದು ಪುಸ್ತಕ ಮಳಿಗೆಯವರು ತಿಳಿಸಿದರು. ಕಸ್ತೂರಿಯವರ ಮನೆಯನ್ನು ಹೇಗೋ ಪತ್ತೆ ಹಚ್ಚಿ, ಹೋಗಿ ಅವರನ್ನು ಮಾತಾಡಿಸಿಕೊಂಡು, ನಮಸ್ಕಾರ ಮಾಡಿಬಂದೆ, "ಆರದ ಬೆಳಕು"ವಿನ ನನ್ನ ಪ್ರತಿಯ ಮೇಲೆ ಅವರ ಆಟೋಗ್ರಾಫ್ ಕೂಡಾ ಮೂಡಿತು!
(ಶ್ರೀ ಕಸ್ತೂರಿ ಅವರಿಗೆ ಈಗ ವಯಸ್ಸು ಎಂಬತ್ತರ ಮೇಲೆ ಆಗಿರಬೇಕು. ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಮನೆಯ ಮಟ್ಟಿಗೆ ಮಾತ್ರ ಇರುತ್ತಾರಂತೆ. ಆದರೂ ಬೆಂಗಳೂರು ಭಾರತೀಯ ವಿದ್ಯಾಭವನದ ಮಹದಾಕಾಂಕ್ಷೆಯ ಯೋಜನೆಯಾದ ಗಾಂಧೀಜಿಯವರ ನೂರಕ್ಕೂ ಹೆಚ್ಚು ಕೃತಿಗಳ ಕನ್ನಡಾನುವಾದದಲ್ಲಿ ಅವರು ತೊಡಗಿರುವುದು ಅಧ್ಯಯನದ ಪುಸ್ತಕಗಳ ನಡುವೆ ಅಂದು ಇದ್ದ ಅವರನ್ನು ಕಂಡಾಗ ತಿಳಿಯಿತು. ಆ ಯೋಜನೆಯ ಬಗ್ಗೆ ಬಹಳ ಮಮತೆಯಿಂದ ಹೇಳಿದರು.)
ಪ್ರಭು
Comments
ಉ: ರಾಜರತ್ನಂ ಅವರೊಡನೆ...
In reply to ಉ: ರಾಜರತ್ನಂ ಅವರೊಡನೆ... by venkatb83
ಉ: ರಾಜರತ್ನಂ ಅವರೊಡನೆ...
ಉ: ರಾಜರತ್ನಂ ಅವರೊಡನೆ...
In reply to ಉ: ರಾಜರತ್ನಂ ಅವರೊಡನೆ... by H A Patil
ಉ: ರಾಜರತ್ನಂ ಅವರೊಡನೆ...