ಶಿವರಾತ್ರಿ ಶಂಕರನಾರಾಯಣ ಯಾತ್ರೆ

ಶಿವರಾತ್ರಿ ಶಂಕರನಾರಾಯಣ ಯಾತ್ರೆ

                                                        ಶಿವರಾತ್ರಿ ವಿಶೇಷ- ಪಂಚ ಶಂಕರನಾರಾಯಣ ಯಾತ್ರೆ

     ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವವರು ಶಿವರಾತ್ರಿಯಂದು ೫ ಶಂಕರನಾರಾಯಣ ದೇವಸ್ಥಾನಗಳಿಗೆ ಯಾತ್ರೆ ಹೋಗುವುದು ಮೊದಲಿನಿಂದಲೂ ನಡೆದು ಬಂದ ಪದ್ದತಿ. ಈ ಪ್ರಸಿದ್ಧ ಪಂಚ ಶಂಕರನಾರಾಯಣ ಯಾತ್ರೆಯ ಮಧುರ ನೆನಪುಗಳನ್ನು ಸಂಪದ ಓದುಗರೊಂದಿಗೆ ಹಂಚಿಕೊಳ್ಳುತಿದ್ದೇನೆ.
      ಹಿಂದೆ ಈ ಯಾತ್ರೆಯನ್ನು ಕಾಲ್ನೆಡಿಗೆಯಲ್ಲಿ ಶಿವರಾತ್ರಿ ದಿನ ಮುಂಜಾನೆ ಪ್ರಾರಂಭಿಸಿ ಮಾರನೇದಿನ ಬೆಳಿಗ್ಗೆ ಮುಗಿಸುತ್ತಿದ್ದರು. ಆದರೆ ಈಗ ವಾಹನದಲ್ಲಿ ಶಿವರಾತ್ರಿಯ ದಿನ ಮುಂಜಾನೆ ಹೊರಟು ಸಂಜೆಗೆ ಹಿಂತಿರುಗುತ್ತಾರೆ. ನಾವು ಕೊಂಡಳ್ಳಿ ಶಂಕರ ಭಟ್ಟರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿ ಸೌಡ ದ ವಾರಾಹಿ ನದಿಯಲ್ಲಿ ಸ್ನಾನ ಮಾಡಿ ಮೆಟ್ಕಲ್ ಗಣಪತಿಗೆ  ನಮಸ್ಕರಿಸಿ ಯಾತ್ರೆ ಆರಂಭಿಸಿದೆವು. ಅಲ್ಲಿಂದ ೫ ಕಿ.ಮೀ ದೂರದ ಕ್ರೋಢ ಶಂಕರನಾರಾಯಣ ದೇವಸ್ಥಾನಕ್ಕೆ ಬಂದೆವು. ಅಲ್ಲಿಯ ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋದೆವು. ಇಲ್ಲಿ ದೇವರು ಸಿದ್ಧಾಮೃತ ತೀರ್ಥದಲ್ಲಿ (ನೀರಿನಲ್ಲಿ) ಲಿಂಗರೂಪಿಯಾಗಿದೆ. ಜಲವನ್ನು ಸ್ವಲ್ಪ ಖಾಲಿಮಾಡಿ ಕನ್ನಡಿಯ ಪ್ರತಿಬಿಂಬದಲ್ಲಿ ದೇವರ  ದರ್ಶನ ಮಾಡಿದೆವು. ಆನಂತರ ಸುಮಾರು ೧೫ ಕಿ.ಮೀ ದೂರದ ಸಿದ್ದಾಪುರದ ಹತ್ತಿರವಿರುವ ಹೊಳೆ ಶಂಕರನಾರಾಯಣಕ್ಕೆ ಬಂದೆವು. ಇಲ್ಲಿ ವಾರಾಹಿ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದೆವು. ವಾರಾಹಿ ನದಿಯು ರಭಸದಿಂದ ಹರಿಯುವ ಈ ಸ್ಥಳದ ಪ್ರಕೃತಿ ಸೌಂದರ್ಯ ನಿಜಕ್ಕೂ ಅದ್ಭುತ. ಸುಮಾರು ೧೯ಕಿ.ಮೀ ಪ್ರಯಾಣದ ನಂತರ ನಾವು ಮಾಂಡವಿ ಶಂಕರನಾರಾಯಣಕ್ಕೆ ಬಂದೆವು. ಅಮಾವಾಸ್ಯೆಬೈಲಿನ ವಿಮಲಾ ನದಿಯ ದಡದಲ್ಲಿರುವ ಈ ದೇವಸ್ಥಾನ ಕಾಡಿನ ಮಧ್ಯದಲ್ಲಿದೆ. ಇಲ್ಲಿಯ ನದಿಯಲ್ಲಿ ಗೋಗರ್ಭವೆನ್ನುವ ಬಂಡೆಯೊಂದಿದ್ದು ಬಂಡೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ರಂದ್ರದ ಮೂಲಕ ಈಜಿ ಬರಬಹುದು.
      
ಮೂರು ಶಂಕರನಾರಾಯಣ ದರ್ಶನದ ಆನಂತರ ಸುಮಾರು ೧೭ ಕಿ.ಮೀ ದೂರದ ಬೆಳ್ವೆಯ ಶಂಕರನಾರಾಯಣ ದೇವಸ್ಥಾನಕ್ಕೆ ಬಂದೆವು.ಇಲ್ಲಿ ದೇವಸ್ಥಾನದ ಬಾವಿ ನೀರಿನಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದೆವು. ಇಲ್ಲಿ ಶಂಕರ ಭಟ್ಟರ ಪರಿಚಿತರ ಮನೆಯಲ್ಲಿ ಫಲಹಾರ ಮಾಡಿದೆವು. ಹಿಂದಿನಿಂದಲೂ ಇವರ ಮನೆಯಲ್ಲಿ ಯಾತ್ರಿಕರಿಗೆ ಫಲಾಹಾರ ನೀಡುವ ಪದ್ಧತಿ ಇದೆಯಂತೆ. ಆನಂತರ ನಾವು ೫ದನೆಯ ಹಾಗೂ ಕೊನೆಯ (೧೫ ಕಿ.ಮೀ ದೂರದ) ಆವರ್ಸೆ ಶಂಕರನಾರಾಯಣ ದೇವಸ್ಥಾನಕ್ಕೆ ಬಂದೆವು. ಸೀತಾನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದೆವು. ಶಾಂತ ಪರಿಸರದಲ್ಲಿರುವ ಈ ದೇವಸ್ಥಾನದ ಸುತ್ತಲೂ ಹಸಿರೋ ಹಸಿರು.
       ಈ ಪಂಚ ಶಂಕರನಾರಾಯಣ ದರ್ಶನದ ಆನಂತರ ಅಗ್ರಹಾರದ ಸಾಂಬಸದಾಶಿವ ದೇವಸ್ಥಾನಕ್ಕೆ (ಅವರ್ಸೆಯಿಂದ ೧೫ ಕಿ.ಮೀ ದೂರ) ಹೋದೆವು. ಇಲ್ಲಿ ವಾರಾಹಿ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದೆವು. ಇಲ್ಲಿ ನದಿಯ ಸೋಪಾನಗಳು ಸುಂದರವಾಗಿದ್ದು ಧ್ಯಾನಮಾಡಲು ಅನುಕೂಲಕರವಾಗಿತ್ತು. ಆನಂತರ ಪುನಃ ಕ್ರೋಢ ಶಂಕರನಾರಾಯಣನನ್ನು ದರ್ಶನ ಮಾಡಿ ಯಾತ್ರೆ ಕೊನೆಗೊಳಿಸಿದೆವು.
ಯಾತ್ರೆಯ ವಿಶೇಷತೆಗಳು   
೧) ಒಂದು ದಿನದ ಯಾತ್ರೆಯಾಗಿದ್ದು ಶಿವರಾತ್ರಿಯಂದು ಮಾತ್ರ ಎಲ್ಲಾ ದೇವಸ್ಥಾನಗಳೂ ಎಲ್ಲಾ ಸಮಯದಲ್ಲೂ ತೆರೆದಿರುತ್ತವೆ.
೨) ಒಟ್ಟು ೭ ನದಿ, ಬಾವಿಗಳಲ್ಲಿ ಸ್ನಾನ ಹಾಗು ದೇವರ ದರ್ಶನ
೩) ಎಲ್ಲಾ ದೇವಸ್ಥಾನಗಳೂ ಪ್ರಕೃತಿಯ ಮಡಿಲನಲ್ಲಿದ್ದು ಶಾಂತವಾತಾವರಣದಲ್ಲಿವೆ.
೪) ಈ ಎಲ್ಲಾ ಪಂಚ ಶಂಕರನಾರಾಯಣ ದೇವಸ್ಥಾನಗಳಲ್ಲಿ ವಿಷ್ಣುವು ಸಹ ಲಿಂಗರೂಪದಲ್ಲಿ ಪೂಜಿಸಲ್ಪಡುತ್ತಿದ್ದಾನೆ.

Comments