ಗಜಲ್

ಗಜಲ್

ಕವನ

 ನಿನ್ನ ಆ ಸಂಜೆಗಳಿಗೆ ನನ್ನ ಪರಿಚಯವಿದೆ ಸಾಕಿ...

ನಿನ್ನ ಹರಡಿದ ಆ ಕೇಶಗಳಿಗೆ ನನ್ನ ಪರಿಚಯವಿದೆ ಸಾಕಿ.


ಮೋಡಗಳು ಇಳಿದಂತೆ ಬಾನು ಭಾರವಾಗುತ್ತದೆ....

ನಿರುಮ್ಮಳವಾಗಿ ಹರಿಯುತ್ತಿರುವ ನದಿಗೆ ನನ್ನ ಪರಿಚಯವಿದೆ ಸಾಕಿ.


ಅದೆಶ್ಟೋ ಕವಲುಗಳು ಸಮುದ್ರದೊಡಲಲ್ಲಿವೆ ನಿಜ..

ಆ ಉಪ್ಪಾದ ನೀರಿಗೆ ನನ್ನ ಪರಿಚಯವಿದೆ ಸಾಕಿ.


ಉಸ್ಸೆಂದು ಉಸುರುವ ಗಳಿಗೆಗಳಿವೆ ನಿನ್ನಲ್ಲೂ...

ಮಿಂಚುವ ನಿನ್ನ ಮೂಗಿನ ಮೂಗುತಿಗೆ ನನ್ನ ಪರಿಚಯವಿದೆ ಸಾಕಿ.


ಕತ್ತಲುಗಳಿಗೆ ಅಪರಿಚಿತನಾದರೂ ಚಿಂತೆಯಿಲ್ಲ..

ನಿನ್ನ ಮುಖದ ಮೇಲಿನ ಸುಕ್ಕುಗಳಿಗೆ ನನ್ನ ಪರಿಚಯವಿದೆ ಸಾಕಿ.


ಎಲ್ಲೋ ಹರಡಿದ ಎದೆಯಲ್ಲಿ ನಿನ್ನ ನೋವುಗಳಿವೆ...

ಒಂದರೆಗಳಿಗೆ ಮುಗುಳ್ನಕ್ಕ ಕ್ಷಣಗಳಿಗೆ ನನ್ನ ಪರಿಚಯವಿದೆ ಸಾಕಿ.

Comments