ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ?

ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ?

“ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಪಡಬೇಕಿಲ್ಲ ” – ಈ ಮಾತನ್ನು ಕ್ರೈಸ್ತ ಮೂಲಭೂತವಾದಿ ಇವಾನ್ಜೆಲಿಸ್ಟ್ (ಧರ್ಮಪ್ರಚಾರಕ) ಜೆರ್ರಿ ಫಾಲ್ವೆಲ್, ಅಥವಾ ಟೆರ್ರಿ ಜೋನ್ಸ್ ರಂಥವರು  ಹೇಳಿದ್ದರೆ ಚಿಂತೆ ಇರಲಿಲ್ಲ, ಏಕೆಂದರೆ ಇವರುಗಳು ಹೀಗೆ ಮಾತನಾಡಿದಾಗಲೇ ಚೆನ್ನ. ಅಸಹನೆಯೇ ಅವರ ಉಸಿರು, ಹಾಗಾಗಿ ಅವರ ಬಾಯಲ್ಲಿ ನೀಟ್ ಆಗಿ ಫಿಟ್ ಅಗೋ ಮಾತುಗಳು ಅವು. ಆದರೆ ಈ ಮಾತನ್ನು ಸೆಕ್ಯುಲರ್ ದೇಶ ಎಂದು ಹೆಮ್ಮೆ ಪಡುವ ಬ್ರಿಟನ್ ದೇಶದ ಪ್ರಧಾನಿ ಹೇಳಿದ್ದು ಎಂದಾದ ಮೇಲೆ ಈ ಮಾತಿನ ಕಡೆ ಸ್ವಲ್ಪ ಗಮನ ಅತ್ಯಗತ್ಯ.

“ಕಿಂಗ್ ಜೇಮ್ಸ್” ಬೈಬಲ್ ನ ೪೦೦ ವಾರ್ಷಿಕೋತ್ಸವದ ವೇಳೆ ‘ಚರ್ಚ್ ಆಫ್ ಇಂಗ್ಲೆಂಡ್’ ಗೆ ಸೇರಿದ ಪಾದ್ರಿಗಳನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು ಡೇವಿಡ್ ಕೆಮರೂನ್. ಇದೇ ಮಾತನ್ನು ನಮ್ಮ ದೇಶದ ಪ್ರಧಾನಿ ಹೇಳಿದ್ದಿದ್ದರೆ ಆಗುತ್ತಿದ್ದ ವೈಚಾರಿಕ ಅನಾಹುತ ಏನು ಎಂದು ಊಹಿಸಲು ಅಸಾಧ್ಯ. ಆದರೆ ಇಷ್ಟು ಮಾತ್ರ ಹೇಳಿ ಸುಮ್ಮನಾಗಲಿಲ್ಲ ಪ್ರಧಾನಿ. “ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಬೀಳಬೇಕಿಲ್ಲ... ನನ್ನನ್ನು ಅರ್ಥ ಮಾಡಿಕೊಳ್ಳಿ... ಮತ್ತೊಂದು ಧರ್ಮ ಅಥವಾ ಧರ್ಮವಿಲ್ಲದಿರುವಿಕೆಯ ವ್ಯವಸ್ಥೆ ಇರುವುದು ತಪ್ಪು ಎಂದು ನಾನು ಖಂಡಿತಾ ಹೇಳುತ್ತಿಲ್ಲ” ಇದು ಪ್ರಧಾನಿಗಳ ಪೂರ್ತಿ ಮಾತುಗಳು. ಈಗ ಸ್ವಲ್ಪ ಸಮಾಧಾನ. ಏಕೆಂದರೆ ಬ್ರಿಟನ್ ಬರೀ ಕ್ರೈಸ್ತರ ದೇಶವಲ್ಲ, ಅಲ್ಲಿ, ಹಿಂದೂಗಳೂ, ಮುಸ್ಲಿಮರೂ, ಯಹೂದಿಗಳೂ ಇನ್ನಿತರ ಹಲವು ಧರ್ಮೀಯರೂ, ಧರ್ಮವಿಲ್ಲದವರೂ ಸಾಮರಸ್ಯದಿಂದ ಬದುಕುವ ದೇಶ. ಹಾಗಾಗಿ ಎಲ್ಲರೂ, ಧರ್ಮವಿಲ್ಲದವರೂ, ತಾರತಮ್ಯವಿಲ್ಲದೆ ಸಮಾನಾವಕಾಶಗಳೊಂದಿಗೆ ಬದುಕಬಹುದು ಎನ್ನುವ ಆಶಯ ಪ್ರಧಾನಿಯದು. ಅದೇ ಅವರ ನಿರೀಕ್ಷೆಯೂ ಕೂಡಾ. ಆದರೆ ರಾಜಕಾರಣದಲ್ಲಿ ಧರ್ಮದ ಪಾತ್ರ ಎಷ್ಟಿರಬೇಕು ಎನ್ನುವುದು ಮುಗಿಯದ ಚರ್ಚೆ. “ರಾಜಕಾರಣ ಧರ್ಮವಲ್ಲ, ಅಥವಾ ಹಾಗೇನಾದರೂ ಆಗುವುದಾದರೆ ಅದು inquisition ಅಲ್ಲದೇ ಮತ್ತೇನೂ ಅಲ್ಲ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ದಾರ್ಶನಿಕ ಅಲ್ಬರ್ಟ್ ಕ್ಯಾಮು ಹೇಳುತ್ತಾರೆ ( Politics is not religion, or if it is, then it is nothing but the Inquisition – albert camus, french philosopher). 

Inquisition ಎಂದ ಕೂಡಲೇ ಕಣ್ಣ ಮುಂದೆ ಬರೋದು ವ್ಯಾಟಿಕನ್ ಬೆಂಬಲಿತ ಸಾಮೂಹಿಕ ಹಿಂಸೆ, ಬರ್ಬರ ಶಿಕ್ಷೆ. ಕ್ರೈಸ್ತರಲ್ಲದವರೂ, ಕ್ಯಾಥೊಲಿಕ್ ಧರ್ಮದ ಚೌಕಟ್ಟಿಗೆ ಬರದ ಕ್ರೈಸ್ತರೂ inquisition ನ ಬರ್ಬರತೆ ಅನುಭವಿಸಿದರು. ಹಾಗಾಗಿ ರಾಜಕಾರಣದಲ್ಲಿ ಧರ್ಮ ಕೂಡದು ಎಂದು ಪಾಶ್ಚಾತ್ಯ ರಾಷ್ಟ್ರಗಳ ನಿಲುವು. ಇದು ಬರೀ ನಿಲುವು ಮಾತ್ರ, ಯಥಾಸ್ಥಿತಿ ಬೇರೆಯೇ ಎಂದು ದಿನನಿತ್ಯದ ವಿದ್ಯಮಾನಗಳು ನಮಗೆ ಹೇಳುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಲ ಪಂಥೀಯ ಇವಾನ್ಜೆಲಿಸ್ಟ್ ಗಳು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದಲ್ಲಿರುವ ಅಮೆರಿಕೆಯಲ್ಲಿ ಇವರ ಅಬ್ಬರ ತುಸು ಹೆಚ್ಚು.  ರಾಜಕಾರಣಿಗಳ ಕೈಗೆ ಧರ್ಮ ಸಿಕ್ಕಾಗ ಅದು ಚಿನ್ನದ ಸೌಂದರ್ಯ ಕಳೆದು ಕೊಂಡು ಕಳಪೆ ಉಕ್ಕಿನ ರೂಪ ಪಡೆದು ಕೊಳ್ಳುತ್ತದೆ ಎನ್ನುತ್ತಾರೆ ಲೇಖಕಿ ಯಾಸ್ಮೀನ್ ಅಲಿ ಭಾಯಿ. ಈಕೆ ಬ್ರಿಟನ್ ದೇಶದ ಪ್ರಸಿದ್ಧ ಲೇಖಕಿ. ಆಕರ್ಷಕ ಹೆಸರುಗಳೊಂದಿಗೆ ರಾಜಕಾರಣದಲ್ಲಿ ಧರ್ಮವನ್ನು ನುಸುಳಿಸಲು ಹವಣಿಸುವವರಿಗೆ ಈ ಮಾತುಗಳು ಬಹುಶಃ ಪಥ್ಯವಾಗಲಾರದು.
ಧರ್ಮದ ಸಾರವನ್ನು, ಸತ್ವವನ್ನು ಸಂಪೂರ್ಣವಾಗಿ ಅರಿತ ಹಿಂದೂ, ಮುಸ್ಲಿಂ, ಕ್ರೈಸ್ತ ಇನ್ನಿತರ ಧಮೀಯರಿಂದ ಯಾವುದೇ ತೊಂದರೆಯಿಲ್ಲ, ಆದರೆ ಅರೆಬರೆ ಕಲಿತು ‘ಪಾರ್ಟ್ ಟೈಂ’ ಧರ್ಮಾನುಯಾಯಿಗಳಿಂದ ಗಂಡಾಂತರ ಹೆಚ್ಚು ಎಂದು ಚಾರಿತ್ರಿಕ ಘಟನೆಗಳು ಸಾಕ್ಷಿಯಾಗಿವೆ. ಧರ್ಮವನ್ನು ‘ಆಫೀಮ್’ ಎಂದು ಕಡೆಗಣಿಸುವುದಾಗಲೀ, ತನ್ನ ಧರ್ಮವೇ ಶ್ರೇಷ್ಠ ಎಂದು ಇತರರ ಬದುಕನ್ನು ದುರ್ಭರಗೊಳಿಸುವುದಾಗಲೀ ಕೂಡದು ಎನ್ನುವ ವಿವೇಚನೆಯಿದ್ದರೆ ಸಾತ್ವಿಕ ಬದುಕು ಸರಾಗ, ವೈಯಕ್ತಿಕ ಬದುಕಿನಲ್ಲೂ, ರಾಜಕೀಯ ಕ್ಷೇತ್ರದಲ್ಲೂ.         

 

Rating
No votes yet

Comments