ಮತ್ತೊಂದು ಹಸ್ತಕ್ಷೇಪ
ಅಮೆರಿಕೆಯ ಸಂಸತ್ತಿನಲ್ಲಿ ಒಂದು ನಿರ್ಣಯ ಮಂಡನೆ. ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಧಾರ್ಮಿಕ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಲು ಒತ್ತಾಯ. ಸಂಸತ್ ಸದಸ್ಯ ಕೀತ್ ಎಲ್ಲಿಸನ್ ರವರ ಈ ನಿರ್ಣಯ ಮಂಡನೆ ಅಚ್ಚರಿ ತರುತ್ತಿದೆ. ಗುಜರಾತಿನಲ್ಲಿ ೨೦೦೨ ರಲ್ಲಿ ನಡೆದ ಸಾಮೂಹಿಕ ನರಹತ್ಯೆ ನಂತರ, ಸಣ್ಣ ಪುಟ್ಟ ಘಟನೆ ಬಿಟ್ಟರೆ, ಯಾವುದೇ ದೊಡ್ಡ ರೀತಿಯ ಗಲಭೆಗಳು ನಡೆದಿಲ್ಲ. ಅಲ್ಲಿನ ಮುಸ್ಲಿಮರು ಸಾವಧಾನದಿಂದ ತಮ್ಮ ನುಚ್ಚು ನೂರಾದ ಬದುಕನ್ನು ಮರಳಿ ಕಟ್ಟಿ ಕೊಳ್ಳುವತ್ತ ಗಮನ ಕೇಂದ್ರೀಕರಿಸಿದ್ದಾರೆ. ಖ್ಯಾತ ಮುಸ್ಲಿಂ ವಿಧ್ವಾಂಸರಾದ ಮೌಲಾನಾ ವಾಸ್ತಾನ್ವಿ ಸಹ ಬದಲಾದ ಮೋದಿಯ ಮತ್ತು ಅಲ್ಲಿನ ಆಡಳಿತದ ಬಗ್ಗೆ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ. ಮೋದಿಯ ಆಡಳಿತದಡಿ ಮುಸ್ಲಿಮರು ಅಭಿವೃದ್ಧಿ ಸಾಧಿಸಿದ್ದಾರೆ ಎಂದು ಹೇಳಿದ MBA ಪದವೀಧರರೂ ಆದ ಮೌಲಾನ ವಾಸ್ತಾನ್ವಿ ಕೆಲವು ಮುಸ್ಲಿಂ ಪಂಡಿತರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಪ್ರತಿಭಾವಂತ ಮತ್ತು ಆಧುನಿಕ ಮನೋಭಾವದ ವಾಸ್ತಾನ್ವಿ ಗುಜರಾತಿನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಲು ಯಾರೂ ಆಮಿಷ ಒಡ್ಡಿರಲಿಕ್ಕಿಲ್ಲ. ಹಳತನ್ನು ಮರೆತು ಮುಂದಿನ ದಾರಿಯ ಕಡೆ ಗಮನ ಕೊಡುವತ್ತ ಮುಸ್ಲಿಮ್ ಸಮುದಾಯ ಯಾವಾಗಲೂ ಉತ್ಸುಕತೆ ತೋರಿದೆ. ಗತಕಾಲದಲ್ಲಿ ಆಗಿ ಹೋದ ಪ್ರಮಾದಗಳ ಬಗ್ಗೆ ಹಲುಬುತ್ತಾ ಕೂತರೆ ಯಾವ ಪ್ರಯೋಜನವೂ ಇಲ್ಲ ಎಂದು ಮುಸ್ಲಿಮರಿಗೆ ತಿಳಿದಿದೆ. ಪರಿಸ್ಥಿತಿ ಹೀಗಿರುವಾಗ, ನೋವನ್ನು ಅನುಭವಿಸಿದವರು ಎಲ್ಲ ಮರೆತು ಮುನ್ನಡೆಯ ಹಾದಿ ಹಿಡಿದಿರುವಾಗ, ಬಂತು ದೊಡ್ಡಣ್ಣನ ಮೂಗು ತೂರಿಸುವಿಕೆ. ಧಾರ್ಮಿಕ ಸ್ವಾತಂತ್ರ್ಯ ಮರಳಿ ಸ್ಥಾಪಿಸಬೇಕಂತೆ. ಕೀತ್ ಎಲ್ಲಿಸನ್ ರಿಗೆ ಯಾರು ಐಡಿಯಾ ಕೊಟ್ಟರು ಗುಜರಾತಿನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ ಎಂದು? ಅಲ್ಲಿ ಮಸೀದಿ, ಇಗರ್ಜಿಗಳಿವೆ. ಅದಾನ್ (ಮುಸ್ಲಿಂ ಪ್ರಾರ್ಥನಾ ಕರೆ) ಕರೆಗಳು ಮೊಳಗುತ್ತಿವೆ. ಸಾತ್ವಿಕ, ನೈತಿಕ ಬದುಕು ಹೇಗೆ ನಡೆಸಬೇಕೆಂದು ಎಳೆಯರಿಗೆ ಹೇಳಿ ಕೊಡುವ ‘ಮದ್ರಸಾ’ ಗಳಿವೆ. ಇನ್ನೇನು ಬೇಕು, ಸ್ವಾತಂತ್ರ್ಯ ಮೆರೆಯಲು? ಆಫ್ಘಾನಿಸ್ತಾನದಲ್ಲಿ ಅಮೆರಿಕೆಯ ಸೇನೆ ಆ ದೇಶವನ್ನು ಆಕ್ರಮಿಸಿ ಕೊಂಡಿದ್ದು ಮಾತ್ರವಲ್ಲದೆ ಮುಸ್ಲಿಮರು ಗೌರವಿಸುವ, ಆದರಿಸುವ ಪವಿತ್ರ ಕುರ್ ಆನ್ ಗ್ರಂಥಗಳನ್ನು ಸುಡುವುದನ್ನು, ಶೌಚಕ್ಕೆ ಬಿಸುಡುವುದನ್ನು, ನಾವು ಕಂಡಿಲ್ಲವೇ? ಆ ತೆರನಾದ ಪುಂಡಾಟಿಕೆ ಗುಜರಾತಿನಲ್ಲಾಗಲೀ, ಭಾರತದ ಇತರೆ ಭಾಗಗಳಲ್ಲಾಗಲೀ ನಡೆದಿಲ್ಲವಲ್ಲ? ಕಾಂಗ್ರೆಸ್ ಮ್ಯಾನ್ ಕೀತ್ ಎಲ್ಲಿಸನ್ ಇಸ್ಲಾಂ ಧರ್ಮ ಸ್ವೀಕರಿಸಿದ ಅಮೆರಿಕೆಯ ಪ್ರಜೆ. ಮುಸ್ಲಿಮ್ ಆದ ಒಂದೇ ಕಾರಣಕ್ಕೆ ಅವರಿಗೆ ಅಮೆರಿಕೆಯ ಅಧ್ಯಕ್ಷನಾಗಲು ಸಾಧ್ಯವೇ ಎನ್ನುವುದನ್ನು ಮೊದಲು ಅವರು ಪ್ರಶ್ನಿಸಿಕೊಳ್ಳಲಿ. ಅದಕ್ಕೆ ಉತ್ತರ ದೊರೆತ ಕೂಡಲೇ ನಮ್ಮ ದಿಕ್ಕಿಗೆ ಮುಖ ಮಾಡಿ ಮೂಗು ತೂರಿಸಲಿ.
ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ವಿಭಿನ್ನ ಸಂಸ್ಕೃತಿಗಳ ಜನ ಅಣ್ಣ ತಮ್ಮನ್ದಿರಂತೆ ಕಾದಾಡುತ್ತಾರೆ, ಕಾವಿಳಿದ ಕೂಡಲೇ ಒಂದಾಗುತ್ತಾರೆ. ನಮ್ಮ ದೇಶದಲ್ಲಿ ಇನ್ನೂ ಯಾವ ದೊಡ್ಡ ಉರಿಯೂ ಬಿದ್ದಿಲ್ಲ ಅಮೇರಿಕಾ ಇಲ್ಲಿ ಬಂದು ಚಳಿ ಕಾಯಿಸಿಕೊಳ್ಳಲು. ಮುಸ್ಲಿಂ, ಕ್ರೈಸ್ತ, ಬುದ್ಧ, ಸಿಖ್, ಯಹೂದ್ಯ ಧರ್ಮೀಯರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯಗಳಿವೆ. ಅವನ್ನು ವಿವೇಚನೆಯಿಂದ ಉಪಯೋಗಿಸಿಕೊಂಡು ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಬದುಕುವ ಕಲೆಯೂ ನಮ್ಮ ಜನರಿಗೆ ಕರಗತವಾಗಿದೆ. ಪ್ರಪಂಚದ ಭದ್ರತೆ, ನೆಮ್ಮದಿ, ಸುರಕ್ಷೆಯ ಉಸ್ತುವಾರಿ ಯಾರೂ ಹೊರಿಸದೆ ಹೊತ್ತು ಕೊಂಡು ಬೇಸ್ತು ಬಿದ್ದಿರುವ ಅಮೇರಿಕಾ ತಲೆ ಕೆಡಿಸಿಕೊಳ್ಳಲು ಬಹಳಷ್ಟು ವಿಷಯಗಳಿವೆ. ಅವುಗಳನ್ನ ಹೇಗೆ ನಿಭಾಯಿಸಿಕೊಂಡು ಹೋಗಬೇಕು ಎನ್ನುವುದರ ಕಡೆ ಗಮನ ಕೊಡಲಿ.
ಅಮೆರಿಕೆಗೆ ಯಾರೂ ಖಾಯಂ ಮಿತ್ರರಿಲ್ಲ ಎನ್ನುವುದು ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಅರಿವಿದ್ದೇ ಇರುತ್ತದೆ. ಹಾಗೇನಾದರೂ ಖಾಯಂ ಮಿತ್ರನಿದ್ದರೆ ಅದು ಗ್ರೇಟ್ ಬ್ರಿಟನ್ ಮಾತ್ರ. ಇವರಿಬ್ಬರೂ ವಿಶ್ವದ ರಾಷ್ಟ್ರಗಳನ್ನು ಸಾಕಷ್ಟು ಗೋಳು ಹೊಯ್ದು ಕೊಂಡವರು. "ಇಂಡಿಯಾ ಇಸ್ ಏ ವೆರಿ ಇಂಪಾರ್ಟೆಂಟ್ ಕಂಟ್ರಿ" ಎನ್ನುತ್ತಾ ಕಂತ್ರಿ ಬುದ್ಧಿ ತೋರಿಸೋದು ಇವರುಗಳ ಜಾಯಮಾನ. ನಾಯಿ ಬಾಲ ಸರಿ ಮಾಡಿ ವಿಜಯದ ನಗೆ ಬೀರಿದವರ ಕುರಿತು ಯಾರಲ್ಲೂ ವರದಿಯಿಲ್ಲ. ಭಾರತ ಇರಾಕ್ ದೇಶಕ್ಕೆ ಬಾಸ್ಮತಿ ಅಕ್ಕಿ ರಫ್ತು ಮಾಡಿದಾಗ ಭಾರತದ ಅಕ್ಕಿ ಕೊಳ್ಳಬೇಡಿ ಎಂದು ಅಮೆರಿಕೆಯ ತಾಕೀತು ಇರಾಕಿಗೆ. ತಂತ್ರಜ್ಞಾನದಲ್ಲಿ ಏಷಿಯಾದ ದೇಶಗಳು ಅಮೇರಿಕೆಯನ್ನು ಹಿಂದಕ್ಕೆ ಹಾಕಿದ್ದರಿಂದ ಈಗ ಅಮೆರಿಕೆಗೆ ಅಕ್ಕಿ ಮಾರಿ ಬದುಕುವ ಗತಿಗೇಡು. ಆದ್ದರಿಂದ ಇರಾಕಿಗೆ ತಾಕೀತು ಭಾರತದ ಅಕ್ಕಿ ಖರೀದಿಸಬೇಡಿ ಎಂದು.
ನಮ್ಮ ಪಾಡು ಮತ್ತೊಂದು ತೆರನಾದುದು. ಅಮೆರಿಕೆಯ ಈ ಹಸ್ತಕ್ಷೇಪಕ್ಕೆ ಚಾಟಿ ಏಟಿನ ಉತ್ತರ ಕೊಟ್ಟು ನಿಮ್ಮ ಕೆಲಸ ನೀವು ನೋಡಿ ಕೊಳ್ಳಿ ಎಂದು ಹೇಳುವ ಬೆನ್ನೆಲುಬು ನಾವಿನ್ನೂ ಬೆಳೆಸಿ ಕೊಂಡಿಲ್ಲ. ಅಲ್ಲಿಯವರೆಗೆ ಬಡವನ ಕೋಪ ದವಡೆಗೆ ಮೂಲ ಎಂದು ಹಲುಬುತ್ತಾ ಕೂರಬೇಕು ನಾವು.
Comments
ಉ: ಮತ್ತೊಂದು ಹಸ್ತಕ್ಷೇಪ
In reply to ಉ: ಮತ್ತೊಂದು ಹಸ್ತಕ್ಷೇಪ by manju787
ಉ: ಮತ್ತೊಂದು ಹಸ್ತಕ್ಷೇಪ