ಕಂಪನ(ಪ್ರಿಯಸಖ-1)

ಕಂಪನ(ಪ್ರಿಯಸಖ-1)

ಕವನ

_____________________________________________________________________________

ಇದು ನನ್ನ  "ಪ್ರಿಯಸಖ" ಕವನ ಸರಣಿಯ ಒಂದು ಕವಿತೆ.
ಕೃಷ್ಣನಲ್ಲಿ ಅನುರಕ್ತಳಾದ ಗೋಪಿಕೆ  ತನ್ನ ಪ್ರೇಮವನ್ನು ಅವನಲ್ಲಿ  ನಿವೇದಿಸಲಾರದೆ ,ಸಖಿಯಲ್ಲಿ ತನ್ನ ಭಾವವನ್ನು  ವ್ಯಕ್ತಪಡಿಸುವ ಪರಿಯನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ..
ನೀವೇ ಒಮ್ಮೆ ಗೋಪಿಕೆಯಾಗಿ ಪರಕಾಯ ಪ್ರವೇಶ ಮಾಡಿ ಓದಿನೋಡಿ. ಹೇಗಿದೆ ಹೇಳಿ. :) ____________________________________________________________________________


ಹೊರಗೆ ತಂಗಾಳಿ
ಒಳಗೆ ಬಿರುಗಾಳಿ
ಈ ಮನವನೆಲ್ಲಿ ಕಟ್ಟಿಡಲೇ ನಾನು?

ಹೃದಯ ಆಸೆಯ ಕೂಪ
ಭುವಿಯು ಬೆಂದಿಹ ತಾಪ
ಶೃಂಗಾರ ಸಿಹಿಗನಸ ಬಚ್ಚಿ  ಇಡಲೇನು?

ನಭದಿ ನಗುವ ಪೂರ್ಣ
ಇದಿರು ನೀಲವರ್ಣ
ಧುಮ್ಮಿಕ್ಕುವಾಸೆಯಾ ಹೊಸಕಿ ಹಾಕಲೇನು?

ಸದಾ ಅವನ ಧ್ಯಾನ
ನೀನೆ ನನ್ನ ಪ್ರಾಣ
ತುಟಿ ಬಿರಿದು ನಗುವೊಂದ ಸೂಸಲಾರೆಯೇನು?

ಬರಿದು ಬರಿದೆ ಮುನಿಸು
ಅದೇ ತುಂಟ ಮನಸು
ನನ್ನೊಮ್ಮೆ ಬರಸೆಳೆದು ತಬ್ಬಿಹಿಡಿಯಬಾರದೇನು?

ನಿತ್ಯ ಹಾಸ ವದನ
ಇವನೇ ನನ್ನ ಮದನ
ಬಿಗಿದಪ್ಪಿ ಮುತ್ತಿಕ್ಕಿ ಸಂತೈಸನೆನು? 

Comments