ಹೆಜ್ಜೆ ಗುರುತು
ಸಾಗಿದರು ನಮ್ಮನಗಲಿ ಅವರೆಲ್ಲರೆನುತ
ಸಾಗಲನುವಾಗದಿರು ನೀ ಅವರ ಹಿಂದೆ
ಸಾಗಲಾಗದು ನಮ್ಮ ಲೆಕ್ಕ ಮುಗಿವತನಕ
ಮೌನದಲೆ ಸಾಗಿದರೆನುತ ಅಳಲದಿರು
ಮೌನದಿಂ ಕೊರಗಿ ನೀ ಸೊರಗದಿರು
ಮುಗಿಸಿಹರು ಅವರೆಲ್ಲರಿಲ್ಲಿಯ ಪಯಣ
ಮುಗಿದಿಲ್ಲವಿನ್ನು ಇಲ್ಲಿಯ ನಮ್ಮ ಪಯಣ
ಸವೆಸಿದರು ಅವರವರ ಕರ್ಮದಾರಿಯನವರೆ
ಸವೆಸಬೇಕಿನ್ನು ನಮ್ಮ ಕರ್ಮದ ಪಥವ ನಾವು
ಸವೆಸದನಿತು ಬಿಡುಗಡೆಯೆಂಬುದಿಲ್ಲ ನಮಗೆ
ಸವೆಸಿದೊಡೆ ಸಾಗುವೆವು ನಾವವರ ಹಿಂದೆ
ಅವರಿಲ್ಲವೆಂದು ಕೊರಗದಿರು
ಅವರಿಹರು ನವ್ಮೊಳಗೆ ಹೊರಗೆ
ಅವರೆಸಗಿದ ಪ್ರತಿ ಕಾರ್ಯಗಳೊಳಗೆ
ಇಂದವರು ಮುಂದೆ
ನಾಳೆ ನಾವವರ ಹಿಂದೆ
ನಮ್ಮವರೆ ನಿಂತಿಹರು ನಮ್ಮ ಹಿಂದೆ
ಜವರಾಯ ಸಮವರ್ತಿ ಯಾರನು ಬಿಡನಿಲ್ಲಿ
ಮೊದಲ್ಯಾರೊ ಕೊನೆಯಾರೊ ಬಲ್ಲವರು ಯಾರು?
ಅವರ ಹಿಂದಿನ ಹಾದಿಯ ತುಳಿದಿಹರು ಇಂದು
ಅವರ ಹಿಂದಿನ ಹಾದಿಯ ಬಿಟ್ಟಿಹರು ನಮಗಿಂದು
ಅವರು ಸಾಗಿದ ದಾರಿ ಎಷ್ಟು ದೂರಿಹುದೊ ಏನೋ
ಆ ದಾರಿಯ ಸವೆಸಿ ನಾವವರ ಸೇರುವುದು ಎಂದೋ?
ಅದಬಲ್ಲವರು ಯಾರು? ಬಲ್ಲವರು ಎಲ್ಲಿಹರೊ ಏನೊ?
ಆ ದಿನವು ಬರುವವರೆಗೆ ಕಾಯಬೇಕು
ಅವರು ಸಾಗಿದ ಹಾದಿಯ ಸವೆಸ ಬೇಕು
ಆ ಹಾದಿಯ ಗುರುತ ನಾವುಳಿಸ ಬೇಕು
ಆ ದಾರಿ ಮುಗಿಯೆ ಕ್ಷಣಕಾಲ ತಡವಿಲ್ಲ
ಅವರ ಸೇರಿದೆಡೆಗೆ ಸಾಗುವೆವು ನಾವು
ಸಾಗಿದರು ನಮ್ಮ ಬಿಟ್ಟವರೆಲ್ಲರೆನುತ ನೀ
ಸಾಗಲಾಗದು ಇಂದೇ ನಮ್ಮವರ ಹಿಂದೆ
ಸಾಗುವ ಮುನ್ನ ನೀ ಕೊರಗುಳಸದಿರು
ಸಾಗುವ ನಿನ್ನ ದಾರಿಯ ಸುಗಮಗೊಳಿಸು
ಸಾಗಿದಾ ಹಾದಿಯ ನೀ ಸಾರ್ಥಕಗೊಳಿಸು
********
ಚಿತ್ರ ಕೃಪೆ ಗೂಗಲ್
Comments
ಉ: ಹೆಜ್ಜೆ ಗುರುತು
In reply to ಉ: ಹೆಜ್ಜೆ ಗುರುತು by venkatb83
ಉ: ಹೆಜ್ಜೆ ಗುರುತು