ಕತೆ : ಶ್ರೀಹರಿ..ಶ್ರೀಹರಿ.. ಶ್ರೀಹರಿ

ಕತೆ : ಶ್ರೀಹರಿ..ಶ್ರೀಹರಿ.. ಶ್ರೀಹರಿ

ಶ್ರೀಹರಿ..ಶ್ರೀಹರಿ.. ಶ್ರೀಹರಿ ಶ್ರೀನಾಥ ಮಾನಸಿಕವಾಗಿ ತುಂಬ ಒತ್ತಡದಲ್ಲಿದ್ದ. ಎಲ್ಲರು ಸಡಗರದಲ್ಲಿದ್ದಾರೆ. ಶ್ರೀನಾಥನ ಅಪ್ಪ ಅಮ್ಮನಿಗಂತು ತಮ್ಮ ವಂಶದ ಮತ್ತೊಂದು ಕವಲು ಚಿಗುರೊಡೆಯಿತು ಎಂಬ ಸಂತಸ. ಶ್ರೀನಾಥನ ಪತ್ನಿ ಭೂಮಿಕ ಮುದದಿಂದ ನಗುತ್ತಿದ್ದಾಳೆ. ಈದಿನ ಅವರಿಬ್ಬರ ಚೊಚ್ಚಲ ಗಂಡು ಮಗುವಿನ ನಾಮಕರಣದ ಸಂಭ್ರಮ. ಭೂಮಿಕಳ ಅಪ್ಪ ಅಮ್ಮನಿಗೇನೊ ಅಸಮಾಧಾನ ಚೊಚ್ಚಲು ಗಂಡು ಮಗುವಾಗಿದ್ದರು ಎಲ್ಲವು ಸರಿಯಿದ್ದರು ಅಳಿಯಂದಿರು ಏಕೊ ಪೆಚ್ಚು ಪೆಚ್ಚಾಗಿದ್ದಾರೆ, ಅಂದರೆ ಇವಳು ಏನೊ ಮಾಡಿರುತ್ತಾಳೆ ಕೋತಿಯಂತವಳು ಎಂದು ತಮ್ಮ ಮಗಳ ಬಗ್ಗೆ ಮಾತನಾಡಿಕೊಂಡರು ಭೂಮಿಕ ಹಸಮಣೆಯ ಮೇಲೆ ಕುಳಿತಂತೆ ತೊಡೆಯ ಮೇಲೆ ಮಲಗಿದ್ದ ಮುದ್ದುಕಂದನನ್ನು ನೋಡಿದಳು, ಹಾಗೆಯೆ ಸಪ್ಪಗಿರುವ ಗಂಡನನ್ನು ಒಮ್ಮೆ ದಿಟ್ಟಿಸಿದಳು. ಅವಳಿಗೆ ಗೊತ್ತು ಗಂಡ ಏಕೆ ಹಾಗೆ ಸಪ್ಪಗಿದ್ದಾನೆ ಎಂದು, ಒಳಗೆ ನಕ್ಕಳು. ಅವರಿಬ್ಬರ ನಡುವೆ ಒಂದು ಒಪ್ಪಂದವಾಗಿತ್ತು ಒಮ್ಮೆ ಹೆಣ್ಣು ಮಗುವಾದರೆ ಶ್ರೀನಾಥನೆ ಹೆಸರನ್ನು ಆಯ್ಕೆ ಮಾಡುವುದು ಗಂಡಾದರೆ ಆಗ ಭೂಮಿಕ ಹೆಸರನ್ನು ಆಯ್ಕೆ ಮಾಡುವುದು, ಅಲ್ಲದೆ ಹಸೆಮಣೆಯ ಮೇಲೆರುವ ತನಕ ಆ ಹೆಸರನ್ನು ಗುಟ್ಟಾಗಿಡಬಹುದು ಎಂದು. ಈಗ ಗಂಡು ಮಗು ಅವಳು ಹೆಸರನ್ನು ನಿರ್ದರಿಸಿದ್ದಾಳೆ ಆದರೆ ಅದನ್ನು ಗಂಡನಿಗೆ ತಿಳಿಸಿಲ್ಲ. ಶ್ರೀನಾಥ ಒಳಗೆ ಅಂದು ಕೊಳ್ಳುತ್ತಿದ್ದಾನೆ ಒಂದು ವೇಳೆ ಅದೇ ಹೆಸರಾದರೆ, ತಾನು ಅಂದು ಕೊಳ್ಳುತ್ತಿರುವ ತನಗೆ ಗೊತ್ತಿರುವ ಅದೇ ಹೆಸರಾದರೆ?. ಪುರೋಹಿತರು ನಾಮಕರಣ ವಿದಿಗಳನ್ನೆಲ್ಲ ಪೂರೈಸಿ ಹೇಳುತ್ತಿದ್ದಾರೆ, ನಕ್ಷತ್ರ ನಾಮವಾಯ್ತು ಈಗ ವ್ಯವಹಾರನಾಮ ತಂದೆ ತಾಯಿ ಏನು ನಿರ್ದರಿಸಿದ್ದೀರಿ ಅದನ್ನು ಮಗುವಿನ ಕಿವಿಯಲ್ಲಿ ಮೂರುಬಾರಿ ಕರೆಯಿರಿ. ಶ್ರೀನಾಥ ಪತ್ನಿಯತ್ತ ನೋಡಿದ. ಕಣ್ಣಲ್ಲೆ ಕೇಳಿದ , ಏನು ಹೇಳು? . ಅವಳು ಗಂಡನತ್ತ ಬಗ್ಗಿದಳು, ಶ್ರೀನಾಥ ತನ್ನ ಕಿವಿಯನ್ನು ಕೆಂಪಾದ ಅವಳ ತುಟಿಯಬಳಿ ತಂದ. ಅವಳು ಸಣ್ಣ ದ್ವನಿಯಲ್ಲಿ ಮಗುವಿನ ಹೆಸರು ಹೇಳಿದಳು. ಶ್ರೀನಾಥ ಗರಬಡಿದವನಂತೆ ದಿಘ್ಮೂಡನಾಗಿ ಕುಳಿತುಬಿಟ್ಟ. ಅವನ ಮನಸ್ಸು ಚಿಂತಿಸುತ್ತಿತ್ತು, ಎರಡುವರ್ಷದ ಹಿಂದೆ ತಾನು ಕನಸು ಅಂದುಕೊಂಡಿದ್ದು ಕನಸಲ್ಲ ತಾನು ಅನುಭವಿಸಿದ್ದು ಭ್ರಮೆಯಲ್ಲ. ಯಾರ ಹತ್ತಿರ ಹೇಳಿದರು ನಂಬಿರಲಿಲ್ಲ. ಆದರೆ ಅದು ನಿಜ !. ಅವನು ಏಕೊ ಒಳಗೆ ನಡುಗಿಹೋದ. ಪುರೋಹಿತರು ಜೋರಾಗಿ ಕೂಗುತ್ತಿದ್ದಾರೆ, ರಾಯರೆ ಏನಾಯಿತು, ಮಗುವಿನ ಹೆಸರು ಕಿವಿಯಲ್ಲಿ ಮಗುವಿನ ಕಿವಿಯಲ್ಲಿ ಹೇಳಿ. ಸುತ್ತಲ್ಲಿದ್ದವರು ತುಸು ಹೆದರಿದಂತಿದ್ದ ಶ್ರೀನಾಥನ ಮುಖವನ್ನು ಆಶ್ಚರ್ಯದಿಂದ ನೋಡುತ್ತಿದ್ದಾರೆ. ಶ್ರೀನಾಥ ತುಸು ಬಗ್ಗಿ ಮಡದಿಯ ತೊಡೆಯ ಮೇಲೆ ಮಲಗಿದ್ದ ಪುಟ್ಟ ಮಗುವಿನ ಕಿವಿಯಲ್ಲಿ ನಿದಾನಕ್ಕೆ ಸಣ್ಣದ್ವನಿಯಲ್ಲಿ ಉಸುರಿದ. ಶ್ರೀಹರಿ....... ಶ್ರೀಹರಿ........ ಶ್ರೀಹರಿ. ಭೂತ ಕಾಲ:- ---------------- ಆಗಿನ್ನು ಶ್ರೀನಾಥ ಹಾಗು ಭೂಮಿಕ ಮದುವೆಯಾಗಿ ನಾಲ್ಕೈದು ತಿಂಗಳಾಗಿತ್ತೇನೊ, ಬೆಂಗಳೂರಿನ ಹೃದಯ ಜಯನಗರದ ಮನೆಯಲ್ಲಿ ವಾಸ. ಅವನ ಅಪ್ಪ ಅಮ್ಮ ಹಳ್ಳಿಗೆ ಹೋಗಿಬರುವದಾಗಿ ತಿಳಿಸಿ ಹೊರಟು ತಿಂಗಳೆ ಕಳೆದಿತ್ತು. ಮನೆಯಲ್ಲಿ ಇಬ್ಬರದೆ ಕಾರುಬಾರು. ಬಾನುವಾರ ಬೆಳಗ್ಗೆ ಸ್ನಾನ ಮುಗಿಸಿ ಮುಂದಿನ ಹಾಲಿನಲ್ಲಿ ಅಂದಿನ ಪೇಪರ್ ಹಿಡಿದು ಕುಳಿತ್ತಿದ್ದ. ಸಮಯ ಬೆಳಗಿನ 9.15 ಇರಬಹುದೇನೊ, ಅಡುಗೆಮನೆಯಿಂದ ಅವನ ಪತ್ನಿ ಚಪಾತಿ ಸಾಗು ತಂದು ಅವನ ಎದುರಿನ ತಟ್ಟೆಯಲ್ಲಿ ಹಾಕುತ್ತಿದ್ದಳು. ಹದವಾಗಿ ಮೆಣಸು ಒಡೆದು ಮಾಡಿದ ಸಾಗುವಿನ ರುಚಿ ಸವಿಯುತ್ತ ಆನಂದದಲ್ಲಿದ್ದ. ಸಾಕು ಎಂದರು ಕೇಳದೆ ಇನ್ನೊಂದು ಚಪಾತಿ ತರುವದಾಗಿ ತಿಳಿಸಿ ಅವನ ಪತ್ನಿ ಒಳಗೆ ಹೋಗಿದ್ದಳು. ಮುದ್ದಿನ ಹೊಸಪತ್ನಿಯ ಮಾತನ್ನು ಕೇಳದಿದ್ದರೆ ಹೇಗೆ? ಮುಂದಿನ ಬಾಗಿಲಿನಿಂದ ಅಪರಿಚಿತನೊಬ್ಬ ಒಳಬಂದ. ತಾನು ಬೋಲ್ಟ್ ಹಾಕಿದಂತೆ ನೆನಪು ಇವಳು ಯಾವಾಗಲೊ ತೆಗೆದುಬಿಟ್ಟಿದ್ದಾಳೆ ಅಂದು ಕೊಳ್ಳುತ್ತಿರುವಂತೆ . ಒಳಗೆ ಬಂದಾತ ಇವನ ಎದುರು ನಿಂತು ಅನುಮಾನವಾಗಿ "ಶ್ರೀನಾಥ...?" ಎಂದ. ಬಂದಾತ ತುಸು ತೆಳು ಅನ್ನಿಸಿದರು ಆರೋಗ್ಯಕರ ಮುಖಚಹರೆ. ನೀಳಕಾಯ , ದರಿಸಿದ್ದ ದಿರಸು ಮಾತ್ರ ಬೇರೆ. ಅಚ್ಚಬಿಳಿಯ ಬಣ್ಣದ ಯಾವುದೊ ಕಾರಿನ ರೇಸಿಗೆ ಸಿದ್ದವಾಗಿಬಂದಂತೆ ಕಾಣಿಸಿದ. ಶ್ರೀನಾಥ ಕೊಂಚ ಅನುಮಾನದಿಂದ "ಹೌದು ನಾನೆ ಶ್ರೀನಾಥ ತಾವು ಯಾರು?" ಎಂದ. "ಸ್ವಲ್ಪ ಹೊರಬರಲು ಸಾದ್ಯವೆ" ಎಂದ ಅವನು. ಶ್ರೀನಾಥ ಎದ್ದು ಸಿಂಕಿನಲ್ಲಿ ಕೈತೊಳೆದು ಹೊರಬಂದ ಮನಸಿನಲ್ಲಿ ಎಂತದೊ ಅನುಮಾನ. ಹೊರಬಂದವನಿಗೆ ಆಶ್ಚರ್ಯ ಕಾದಿತ್ತು. ಅವನ ಮನೆಯ ಹೊರಗೆ ಪೂರ್ತಿ ಮನೆ ಕಟ್ಟದೆ, ಮುಂಬಾಗದಲ್ಲಿ ಖಾಲಿ ಬಿಟ್ಟಿದ್ದರು. ಆ ಜಾಗದಲ್ಲಿ ದೊಡ್ಡ ಕಾರಿನಂತಹ ವಾಹನವೊಂದು ನಿಂತಿತ್ತು. ಅವನ ಆಶ್ಚರ್ಯ ಅದಕ್ಕಲ್ಲ ಅವರ ಮನೆಯ ಮುಂದಿನ ಕಾಂಪೋಡಿಗೆ ಇದ್ದ ಗೇಟ್ ಚಿಕ್ಕದು ಅಬ್ಬಬ್ಬಾ ಎಂದರೆ ಸ್ಕೂಟರ್ ಒಳಗೆ ತಳ್ಳಬಹುದು ಆದರೆ ಅಷ್ಟು ದೊಡ್ಡ ಕಾರು ಒಳಬಂದಿದು ಹೇಗೆ?. ಶ್ರೀನಾಥ ಅವನನ್ನು ಪ್ರಶ್ನಿಸಿದ "ಇವರೆ ನೀವು ಯಾರು ಎಲ್ಲಿಂದ ಬರುತ್ತಿದ್ದೀರಿ?" ಪ್ರತಿಯಾಗಿ ಅವನು "ನೋಡಿ ಇಲ್ಲಿ ಬಹಳ ಕಾಲ ನಾನು ನಿಲ್ಲುವಂತಿಲ್ಲ, ನಿಮ್ಮಿಂದ ಉಪಕಾರ ಒಂದನ್ನು ಬಯಸಿ ನಾವು ಬಂದಿದ್ದೀವಿ. ನೀವು ಹೆದರುವ ಕಾರಣವಿಲ್ಲ, ನಾವು ನಿಮ್ಮವರೆ, ದಯಾಮಾಡಿ ಕಾರಿನೊಳಗೆ ಬನ್ನಿ" ಶ್ರೀನಾಥನ ಮನಸಿಗೆ ಎಂತದೋ ಮಂಕು ಕವಿದಂತಾಗಿತ್ತು. ತಾನು ಅವರೊಡನೆ ಹೋಗುವುದೊ ಬೇಡವು ಎಂದು ನಿರ್ದರಿಸುವ ಮುನ್ನವೆ ಅವನು ಬಾಗಿಲು ತೆರೆದ ವಾಹನದಲ್ಲಿ ಕುಳಿತ. ಗಮನಿಸಿದ ಅಲ್ಲಿ ಇಬ್ಬರು ಮಾತ್ರ ಕೂಡಲು ಅವಕಾಶವಿದ್ದು, ಮುಂದಿನ ಡ್ರೈವರ್ ಇರುವ ಬಾಗವನ್ನು ಬಿಳಿಯ ಗೋಳಾಕಾರದ ಬಿಳಿಯ ಪರದೆಯಿಂದ ಪ್ರತ್ಯೇಕಿಸಲಾಗಿತ್ತು. ಏನು ಅಂದುಕೊಳ್ಳುವದರೊಳಗೆ ಬಾಗಿಲು ಮುಚ್ಚಿತ್ತು. ನೆನಪಿಸಿಕೊಂಡು ಕೂಗಿದ "ರೀ ಇವರೆ... ಒಂದು ನಿಮಿಶ ಒಳಗೆ ಹೋಗಿ ನನ್ನ ಪತ್ನಿಗೆ ತಿಳಿಸಿ ಬಂದುಬಿಡುವೆ ಬಾಗಿಲು ತೆರೆಯಿರಿ" ನಿದಾನವಾದ ದ್ವನಿ ಕೇಳಿಸಿತು. " ಗಾಭರಿಯಾಗಬೇಡಿ. ಬೇಗ ಹಿಂದೆ ಬಂದುಬಿಡೋಣ, ಈಗ ನಿದಾನವಾಗಿ ಹಿಂದೆ ಒರಗಿ ಅರಾಮವಾಗಿ ಕುಳಿತುಕೊಳ್ಳಿ" . ಕಿಟಕಿಯಿಂದ ಹೊರಗೆ ಏನು ಕಾಣಿಸದು. ಅಸಲಿಗೆ ಕಿಟಿಕಿಯಂತದು ಇದ್ದರೆ ತಾನೆ. ತಾನು ಕುಳಿತ ವಾಹನ ಹೊರಟಿತೆ?. ತಿಳಿಯದು. ಅವನಿಗೆ ತನ್ನಲ್ಲಿ ಎಂತದೊ ಬದಲಾವಣೆ ಆಗುತ್ತಿರುವಂತೆ ಅನ್ನಿಸಿತು, ನಿದಾನವಾಗಿ ನಿದ್ದೆ ಕವಿಯಿತ... ತಿಳಿಯಲಿಲ್ಲ. ಭವಿಷ್ಯಕ್ಕೆ ಪಯಣ :- ------------------------ ಸುಂದರ ಯುವಕ ತನ್ನನ್ನು ಅಲುಗಾಡಿಸಿ ಎಬ್ಬಿಸಿದಾಗ ಸ್ವಲ್ಪ ನಾಚಿಕೆಯಿಂದಲೆ ವಾಹನದಿಂದ ಹೊರಬಂದ ಶ್ರೀನಾಥ. ಸುತ್ತಲು ಗಮನಹರಿಸಿದರು ಜಾಗದ ಗುರುತು ಸಿಗುತ್ತಿಲ್ಲ. ಅವನು ಯಾವುದೊ ಕಟ್ಟಡದ ಒಳಬಾಗದಲ್ಲಿದ್ದ. ತನಗೆ ಸರಿಯಾಗಿ ಏನನ್ನು ತಿಳಿಸದೆ ತನ್ನನ್ನು ಅಪರಿಚಿತ ಜಾಗಕ್ಕೆ ಕರೆತಂದಿದ್ದಾರೆ. ಅಥವ ಇದು ಕಿಡ್ ನಾಪ್ ಕೇಸ್ ಇರಬಹುದಾ?. ಇವನ ಮುಖ ಗಮನಿಸುತ್ತಿದ್ದ , ಅವನು ನುಡಿದ "ಶ್ರ್ಣೀನಾಥರೆ ನೋಡಿ ಗಾಭರಿ ಅಥವ ಕೋಪ ಮಾಡಿಕೊಳ್ಳುವ ಅಗತ್ಯವಿಲ್ಲ , ಒಂದು ಅಗತ್ಯಕೆಲಸಕ್ಕಾಗಿ ನಿಮ್ಮ ಸಹಾಯ ಕೋರಿ ಕರೆತರಲಾಗಿದೆ. ನಿಮ್ಮನ್ನು ಪುನಃ ಪೂರ್ಣ ಸುರಕ್ಷತೆಯಿಂದ ತಲುಪಿಸುವುದು ನನ್ನ ಜವಾಬ್ದಾರಿ ಆಗಿರುತ್ತದೆ". ಶ್ರೀನಾಥ ಕೊಂಚ ಆಶ್ಚರ್ಯದಿಂದಲೆ ನುಡಿದ "ನನ್ನನ್ನು ಎಲ್ಲಿಗೆ ಕರೆತಂದಿರುವಿರಿ? ನೀವಿಬ್ಬರು ಯಾರು? ನನ್ನಿಂದ ಆಗಬೇಕಾದ ಸಹಾಯವಾದರು ಏನು?" ಅವರಿಬ್ಬರು ಮುಖನೋಡಿಕೊಂಡರು "ನೀವು ನಿಮ್ಮ ಸ್ಥಳದಲ್ಲಿಯೆ ಇದ್ದೀರಿ, ಕಾಲದಲ್ಲಿ ಸ್ವಲ್ಪ ವೆತ್ಯಾಸವಾಗಿದೆ ಅಷ್ಟೆ. ಒಳಗೆ ಬಂದು ನಮ್ಮ ಅತಿಥ್ಯ ಸ್ವೀಕರಿಸಬಹುದು ಅಲ್ಲವೆ" ಎಂದ ಆ ಯುವಕ. ಮತ್ತೊಬ್ಬ ಮೊದಲಿನಿಂದಲು ಒಂದು ಪದವನ್ನು ಮಾತನಾಡಿಲ್ಲ. ಶ್ರೀನಾಥನಿಗೆ ಮತ್ತೊಂದು ಆಶ್ಚರ್ಯವೆನಿಸಿದ್ದು, ಆ ಯುವಕ ಆಡುತ್ತಿದ್ದ ಕನ್ನಡದ ಶೈಲಿ. ಸ್ವಲ್ಪ ಹೆಚ್ಚು ಕಡಿಮೆ ಇಂಗ್ಲೀಷಿನಿಂದ ಕನ್ನಡಕ್ಕೆ ಬಾಷಾಂತರ ಮಾಡಿದಂತೆ ಕನ್ನಡ ಪದ ಜೋಡಿಸುತ್ತಿದ್ದ, ಅಂದರೆ ಸ್ವಲ್ಪ ಗೂಗಲ್ ಟ್ರಾನ್ಸ್ ಲೇಟರ್ ತರಹ!. ಯಾವುದೊ ಲ್ಯಾಬ್ ನಂತಿದ್ದ ಆ ಜಾಗದಿಂದ ಅವರಿಬ್ಬರು ಹೊರಟಾಗ ಅವನು ಅವರನ್ನು ಹಿಂಬಾಲಿಸಿ ಮೆಟ್ಟಿಲು ಹತ್ತಿದ, ಇವರಿಗೆ ಬಿಳಿಯಬಣ್ಣ ಎಂದರೆ ಇಷ್ಟವೇನೊ ಎಲ್ಲೆಲ್ಲಿಯು ಅದೇ ಅಂದುಕೊಳ್ಳುವಾಗಲೆ ಮೇಲಿನ ಹಜಾರ ಪ್ರವೇಶಿಸಿದ. ತಿಳಿ ಗುಲಾಬಿ ಬಣ್ಣದ ಗೋಡೆಯ ಹಜಾರ ಅಹ್ಲಾದಕಾರಿಯಾಗಿತ್ತು. ಮಧ್ಯದಲ್ಲಿ ಹಾಕಿದ್ದ ಸೋಪ ಎಲ್ಲವನ್ನು ದಿಟ್ಟಿಸಿದಾಗ ಇವನಿಗೆ ಅನ್ನಿಸಿತು ಇವರು ಸಾಕಷ್ಟು ಸ್ಥಿಥಿವಂತರು, ಖಂಡೀತ ಕೋಟ್ಯಾದಿಶರು, ಸಾಮಾನ್ಯ ಸರಕಾರದ ನಾಲಕ್ಕು ಅಂಕೆಯ ಸಂಬಳ ಪಡೆಯುವ ಕೆಲಸದಲ್ಲಿರುವ ನನ್ನಿಂದ ಇವರಿಗೆ ಏನು ಉಪಕಾರ ಆಗಬೇಕಾಗಿದೆ. ಒಳಗಿನಿಂದ ಯುವತಿಯೊಬ್ಬಳು ಬಂದಳು ಕೈಯಲ್ಲಿ ಟ್ರೇ ಮತ್ತು ಅದರಲ್ಲಿ ಪಾನೀಯದ ಲೋಟಗಳು. "ನಮಸ್ಕಾರ ಕುಳಿತುಕೊಳ್ಳಿ ಈ ಪಾನಿಯ ಕುಡಿಯಿರಿ" ಎಂದಳು. ನೋಡಿದರೆ ಗಾಜಿನ ಗೊಂಬೆ ಅನ್ನುತ್ತಾರಲ್ಲ ಅಂತ ಸುಂದರಿ, ಶ್ರೀನಾಥ ಕೊಂಚ ಮೆತ್ತಗಾದ, ಎಷ್ಟಾದರು ಹೆಣ್ಣಿನ ದ್ವನಿಯಲ್ಲವೆ ಏನು ಕೇಳದೆ ಪಾನಿಯ ಪಡೆದು ಕುಡಿದ. ಇದೇನೊ ಕಾಫಿಯಂತು ಅಲ್ಲ , ಬಿಸಿಯೂ ಇಲ್ಲ ಸ್ವಲ್ಪ ತಣ್ಣಗಿದೆ ಅಂದುಕೊಳ್ಳುವಾಗಲೆ ಆಕೆ ಅಂದಳು "ಅದು ವಿಟಮೀನ್ ಡ್ರಿಂಕ್ಸ್, ನೀವು ಟೈಮ್ ಮಿಷಿನ್ ನಲ್ಲಿ ಪ್ರಯಾಣಮಾಡಿ ಬಂದಿದ್ದೀರಿ ಅದಕ್ಕಾಗಿ" . ಶ್ರೀನಾಥ ಬೆಚ್ಚಿಬಿದ್ದ., ತನ್ನ ಮನಸನ್ನು ಓದಬಲ್ಲರ ಇವರು ಅನ್ನಿಸಿತು. ಆ ಯುವಕ ಈಗ ಒಳಗಿನಿಂದ ಬಂದ. ಅವನು ತನ್ನ ಬಟ್ಟೆ ಬದಲಾಯಿಸಿದ್ದ. "ನಮಸ್ಕಾರ , ಶ್ರೀನಾಥರೆ ನಿಮ್ಮನ್ನು ಏನೆಂದು ಕರೆಯುವುದು ನನಗೆ ತೋಚುತ್ತಿಲ್ಲ. ನೀವು ನನಗಿಂತ ಸಾಕಷ್ಟು ಹಿರಿಯರು. ನಾವು ಈಗ ಎದುರಿಸುತ್ತಿರುವ ಒಂದು ತೊಂದರೆಯಿಂದಾಗ ನಿಮ್ಮನ್ನು ಕರೆತರಬೇಕಾಯಿತು" ಎಂದ "ನೋಡಿ ಈ ರೀತಿ ಒಗಟಿನಂತೆ ಮಾತನಾಡಿದರೆ ಯಾವ ಉಪಯೋಗವು ಇಲ್ಲ. ನೇರವಾಗಿ ತಿಳಿಸಿದರೆ ಅನುಕೂಲ ಆಗುತ್ತೆ, ನೀವು ಯಾರು?. ಇವರೆಲ್ಲ ಯಾರು ? ನನ್ನನ್ನೇಕೆ ಕರೆತಂದಿರಿ ತಿಳಿಸಿ" ಎಂದ ಶ್ರೀನಾಥ. ಅದಕ್ಕೆ ಆ ಯುವಕ ನಗುತ್ತ "ಸರಿ ನೇರ ವಿಷಯಕ್ಕೆ ಬರುವೆ. ನನ್ನ ಹೆಸರು ಶ್ರೀನಿದಿ ಎಂದು ನಾನು ನಿಮ್ಮದೆ ತಲೆಮಾರಿನ ನಾಲ್ಕನೆಯವನು. ಈಕೆ ನನ್ನ ಪತ್ನಿ ಪ್ರಿಯಾ. ಇವನು ಆಕೆಯ ಸಹೋದರ ಡಾಕ್ಟರ್ ಸುಶಾಂತ್. ನಾವು ನಿಮ್ಮನ್ನು ಕಾಲಯಂತ್ರದಲ್ಲಿ 2120 ನೇ ವರ್ಷಕ್ಕೆ ಕರೆತಂದಿದ್ದೇವೆ. ಇದು ಅಕ್ಟೋಬರ್ ಮಾಸ 28 ನೇ ದಿನ. ನೀವು ಸಹಾಯಮಾಡಲು ಒಪ್ಪಿದರೆ ವಿಷಯ ತಿಳಿಸುವೆ" ಎಂದು ನನ್ನ ಮುಖ ನೋಡುತ್ತ ಕುಳಿತ. "ಏನು? ಕಾಲದಲ್ಲಿ ಪ್ರಯಾಣವೆ! ಇವನು ನನ್ನ ವಂಶದಲ್ಲಿ ನನ್ನಿಂದ ನಾಲ್ಕನೆಯವರು ಅಂದರೆ ನನ್ನ ಮಗನ ಮೊಮ್ಮಗ. ಆದರೆ ನನಗಿನ್ನು ಮಕ್ಕಳೆ ಇಲ್ಲ. ಅಥವ ಇವರು ಏನೊ ಆಟ ಆಡಿ ನನ್ನ ನಂಬಿಸುತ್ತಿದ್ದಾರ? " ಹೀಗೆಲ್ಲ ಯೋಚಿಸಿದ ಶ್ರೀನಾಥ ನುಡಿದ "ಏನು ಹೇಳುತ್ತಿದ್ದೀರಿ? ನಾನು ಕಾಲದಲ್ಲಿ ಪ್ರಯಾಣ ಮಾಡಿ ಭವಿಷ್ಯಕ್ಕೆ ಬಂದಿರುವೆನಾ?. ಇದನೆಲ್ಲ ನಂಬುವುದು ಹೇಗೆ ? ನಾನು ನಿಮಗೆ ಏನು ಸಹಾಯ ಮಾಡಬೇಕು?" ಶ್ರೀನಿದಿ ನುಡಿದ "ನೋಡಿ ನೀವು ನಮ್ಮ ತಲೆಮಾರಿನ ನಾಲ್ಕನೆಯ ತಲೆ ಅನ್ನುವುದು ನಿಜ. ನೀವು ನಂಬಲೆ ಬೇಕು. ನಿಮಗೆ ಸಮಸ್ಯೆ ವಿವರಿಸುವೆ. ನನ್ನ ಹಾಗು ಪ್ರಿಯಳ ಮದುವೆಯಾಗಿ ಸುಮಾರು ಮೂರುವರ್ಷಗಳಾದವು. ಮಕ್ಕಳು ಬೇಕು ಅನ್ನಿಸಿ ಸರ್ಕಾರಕ್ಕೆ ಒಪ್ಪಿಗೆಗಾಗಿ ರಿಕ್ವೆಸ್ಟ್ ಕಳಿಸಿದೆವು. ಮುಂದಿನ ತಿಂಗಳು ಫರ್ಲಿಲಿಟಿ ಟೆಷ್ಟ್ ಗಾಗಿ ಬರಬೇಕೆಂದು ಸಮಯಕೊಟ್ಟಿದ್ದಾರೆ. ಈ ಮಧ್ಯೆ ಇರಲಿ ಎಂದು ಸುಮ್ಮನೆ ನಮ್ಮ ಸುಶಾಂತ್ ನ ಸೀನಿಯರ್ ಮೇರಿ ಅಂತ ಡಾಕ್ಟರ್ ಒಬ್ಬರಿದ್ದಾರೆ. ಅವರಲ್ಲಿ ಪರೀಕ್ಷೆ ಮಾಡಿಸಿದೆವು. ಆದರೆ ಆ ಫರ್ಟಿಲಿಟಿ ಟೆಷ್ಟ್ ನಲ್ಲಿ ಒಂದು ಸಮಸ್ಯೆ ತಲೆದೋರಿದೆ. ನನಗೆ ಪೂರ್ಣ ಹೇಳಲು ತಿಳಿಯದು, ಆದರೆ ಜೀನಟಿಕ್ ಎಕ್ಸ್ ಪರ್ಟ್ ಆದ ಆಕೆ ಹೇಳುವ ಪ್ರಕಾರ ಕ್ರೋಮೊಸೋಮ್ ಗಳ ಕಾಂಬಿನೇಷನ್ ನಲ್ಲಿ ಎಂತದೊ ಏರುಪೇರಿದೆ. ಆದರೆ ಅದನ್ನು ಸಣ್ಣ ಅಪರೇಶನ್ ಮೂಲಕ ಅಂದರೆ ಕ್ರೋಮೊಸೋಮಿಕ್ ಕಸಿ ಮೂಲಕ ಸರಿಪಡಿಸಬಹುದು. ಆಗ ಶುಕ್ರಾಣುಗಳು ಸಹಜವಾಗುತ್ತವೆ. ಆದರೆ ನಮ್ಮ ವಂಶದಲ್ಲಿ ಯಾವ ಕಾಲದಲ್ಲಿ ಇಂತಹ ಸಮಸ್ಯೆ ತಲೆದೋರಿತು ಎಂದು ಕಂಪ್ಯೂಟರ್ ನಲ್ಲಿ ಅನಲೈಸ್ ಮಾಡಿದಾಗ ಅದು ನನ್ನಿಂದ ನಾಲ್ಕನೆ ತಲೆಮಾರಿಗೆ ಕೊಂಡೋಯ್ದಿದೆ, ಆಗಿನ ಯಾವುದೊ ಸಮಸ್ಯೆಯಿಂದ ಈಗ ಇಂತಹ ವೈಪರೀತ್ಯವಾಗಿದೆ. ನಾನು ಡಾಕ್ಟರಿಗೆ ಕೇಳಿದೆ ನಾಲ್ಕನೆ ತಲೆಮಾರು ಅಂದರೆ ನಿಮ್ಮನ್ನು ಕರೆತಂದರೆ ನೀವು ಸಣ್ಣದೊಂದು ಅಪರೇಷನಿಗೆ ಸಹಕರಿಸಿದರೆ ಸಮಸ್ಯೆ ಬಗೆಹರಿಯುತ್ತೆ ಅಂತ ಅಂದರು, ಅದೆಲ್ಲ ಕೆಲವು ನಿಮಿಶಗಳಲ್ಲಿ ಆಗುವ ಕೆಲಸ. ಅದರಿಂದ ನಿಮಗೆ ಯಾವುದೆ ತೊಂದರೆಯು ಆಗದು, ನಿಮ್ಮಿಂದ ಅಂಗಾಂಶ ತೆಗೆದು ಕಸಿ ಮಾಡಿ ನನಗೆ ಪೂರೈಸುತ್ತಾರೆ ಅಷ್ಟೆ, ಇದರಿಂದ ನಮಗೆ ಮಕ್ಕಳನ್ನು ಪಡೆಯಲು ಸಾದ್ಯವಾಗುತ್ತದೆ" ಎಂದ ಇದೆಂತಹ ವಿಪರೀತ! ನನಗೆ ಇನ್ನು ಮಕ್ಕಳಿಲ್ಲ ಆದರೆ ನನ್ನ ಮೊಮ್ಮಗನ ಮಗ ತಾನು ಮಗುವನ್ನು ಪಡೆಯಲು ನನ್ನ ಸಹಾಯ ಕೇಳುತ್ತಿದ್ದಾನೆ. ನಾನು ಕೇಳಿದೆ "ನಿಮ್ಮ ಮಾತು ನಿಜವಾದರೆ ನನ್ನ ಮಗ ಅಂದರೆ ನಿಮ್ಮ ತಾತನೆಲ್ಲಿ?" ಅವರು ತಮ್ಮ ಮುಖ ನೋಡಿಕೊಂಡರು. ಅವನೆಂದ "ಕ್ಷಮಿಸಿ ಅವರು ನಮ್ಮನ್ನು ಅಗಲಿ ಸುಮಾರು ಒಂಬತ್ತು ವರ್ಷಗಳಾದವೇನೊ, ಅವರು ತಮ್ಮ ನೂರ ಎಂಟನೆಯ ವಯಸ್ಸಿನಲ್ಲಿ ಮೃತರಾದರು. ಅಲ್ಲದೆ ಐದು ವರ್ಷಗಳ ಹಿಂದೆ ಟೈಮ್ ಮಿಶಿನ್ ಆಪರೇಶನ್ ನಲ್ಲಿ ನಮ್ಮ ತಂದೆ ತಾಯಿ ಇಬ್ಬರು ಸಮಯದಲ್ಲಿ ಕರಗಿಹೋದರು" ಶ್ರೀನಾಥನಿಗೇನೊ ಅರ್ಥವಾಗಲಿಲ್ಲ. "ಸಮಯದಲ್ಲಿ ಕರಗುವುದೆ? ಹಾಗೆಂದರೇನು?" ಎಂದ ಶ್ರೀನಿದಿಯ ದ್ವನಿಯಲ್ಲಿ ಎಂತದೊ ನೋವು, ಹೇಳಿದ "ನಿಮಗೆ ಸ್ವಲ್ಪ ವಿವರವಾಗಿ ಹೇಳಬೇಕು. ಸುಮಾರು ೨೦೮೦ ನೆ ವರ್ಷವಿರಬಹುದು, ವಿಜ್ಞಾನದಲ್ಲಿ ಹೊಸದೊಂದು ಅವಿಷ್ಕಾರವಾಯಿತು. ನಿಮ್ಮ ಕಾಲದಲ್ಲಿಯ ರೇಡಿಯೊ ಅಲೆಗಳನ್ನು ಪ್ರಸಾರಮಾಡುತ್ತಿದ್ದ ತಂತ್ರಕ್ಕೆ ಸ್ವಲ್ಪ ಹತ್ತಿರವಾದ ತಂತ್ರಜ್ಞಾನ, ಮನುಷ್ಯನ ದೇಹವನ್ನು ಬೆಳಕಿನ ವೇಗದ ಜೊತೆ ಹೊಂದಿಸಿದಾಗ ಅವನ ದೇಹವು ಒಂದು ಬೆಳಕಿನ ಅಲೆಯಂತೆ ವರ್ತಿಸುತ್ತಿತ್ತು, ನಂತರ ಅವನನ್ನು ಒಂದಡೆಯಿಂದ ಮತ್ತೊಂದಡೆ ಸಾಗಿಸುವುದು ಸುಲುಭವಾಯಿತು. ಹೀಗೆ ಸ್ಪೇಸ್ ವೆಹಿಕಲ್ಸ್ ಪ್ರಾರಂಬವಾದವು . ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಮನೋವೇಗದಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಹೋಗಬಹುದಿತ್ತು. ಹಾಗೆಯೆ ಹತ್ತಿರದ ಜಾಗಕ್ಕೆ ಚಲಿಸಲು ಎಲೆಕ್ಟ್ರಿಕ ವಾಹನಗಳು ಬಳಕೆಗೆ ಬಂದವು. ವಿಮಾನ ಸೇರಿದಂತೆ ಪೆಟ್ರೋಲ್ ಮತ್ತು ಡೀಸಲ್ ವಾಹನಗಳು ಮೂಲೆ ಸೇರಿದವು. ಹೀಗಾಗಿ ೨೦೮೦ರ ನಂತರ ವಾತವರಣ ಶುಭ್ರವಾಗತೊಡಗಿತು. ಸುಮಾರು ೨೦೫೦ ರಲ್ಲಿ ನಗರಗಳಲ್ಲಿ ನಿರ್ಮಿಸಿದ್ದ ಎಚ್.ಓ.ಜಿ.ಗಳು ಅಂದರೆ ಹೂಜ್ ಆಕ್ಸಿಜನ್ ಜನರೇಟರ್ ಗಳು ಕಾರ್ಯ ನಿಲ್ಲಿಸಿದವು" ಅವನು ಹೇಳುವದನ್ನು ಕೇಳುತ್ತಿದ್ದರೆ ಶ್ರೀನಾಥನಿಗೆ ಆಶ್ಚರ್ಯ. ಶ್ರೀನಿದಿ ಮುಂದುವರೆಸಿದ್ದ. "ನಮ್ಮ ತಂದೆ ಹಾಗು ತಾಯಿ ಇಬ್ಬರು ಈಗ ನಾನು ಕೆಲಸ ಮಾಡುತ್ತಿರುವ ಸ್ಪೇಸ್ ಮಿಶಿನ್ ವಾಹನಗಳ ಆರ್ ಅಂಡ್ ಡಿ ವಿಭಾಗದಲ್ಲಿದ್ದರು. ಸ್ಪೇಸ್ ವೆಹಿಕಲ್ಸ್ ನಲ್ಲಿ ಸಣ್ಣದೊಂದು ಸರ್ಕೀಟ್ ನ ಬದಲಾವಣೆಯಲ್ಲಿ ನಾವು ಕಾಲದಲ್ಲಿ ಚಲಿಸಬಹುದೆಂದು ಅವರು ಕಂಡುಕೊಂಡರು. ಆದರೆ ಆ ಪ್ರಯೋಗದ ಯಾವುದೋ ಹಂತದಲ್ಲಿ ಅವರು ಎಸಗಿದ ಸಣ್ಣ ತಪ್ಪಿನಿಂದ ಕಾಲದಲ್ಲಿ ಹೊರಟವರು ಹಿಂದೆ ಬರಲೆ ಇಲ್ಲ. ಶಾಶ್ವತವಾಗಿ ಕಾಲದಲ್ಲಿ ಕರಗಿಹೋದರು. ಆದರೆ ಟೈಮ್ ಮಿಷಿನ್ ಮಾತ್ರ ಹಿಂದೆ ಬಂದಿತು" ಶ್ರೀನಾಥ ಕೇಳಿದ " ಅದೇಕೆ ಹಾಗಾಯ್ತು, ನೀವು ಅದೇ ಯಂತ್ರದ ಸಹಾಯದಿಂದ ಹುಡುಕಬಹುದಲ್ಲ" ಶ್ರೀನಿದಿ ಎಂದ " ಇಲ್ಲ ಸಾದ್ಯವಾಗಲಿಲ್ಲ, ಅವರು ಕೊಟ್ಟ ದತ್ತಾಂಶದಲ್ಲಿ ಎಂತದೊ ತೊಂದರೆ ಇತ್ತು ಅನ್ನಿಸುತ್ತೆ, ಟೈಮ್ ಮಿಷಿನ್ ಅವರನ್ನು ಇನ್ ಫಿನಿಟಿಯತ್ತ ಅಂದರೆ ಕಾಲದ ಅನಂತತೆಯ ಕೊನೆಗೆ ನೂಕಿಬಿಟ್ಟಿತು, ಈಗ ನನಗೆ ಕಾಲದಲ್ಲಿ ನೆಗೆಟಿವ್ ಕೊನೆಗೆ ಹೋಗಬೇಕೊ ಅಥವ ಪಾಸಿಟೀವ್ ಕೊನೆ ಅಂದರೆ ಭವಿಷ್ಯಕ್ಕೆ ಹೋಗಿ ಅವರನ್ನು ಹುಡುಕಬೇಕೊ ತಿಳಿಯುತ್ತಿಲ್ಲ. ಅಲ್ಲದೆ ಮತ್ತು ಒಂದು ಸಮಸ್ಯೆ ಇದೆ ಕಾಲದ ಇನ್ ಫಿನಿಟಿಯಲ್ಲಿ ಅನ್ನುವಾಗ ಅಲ್ಲಿ ಸ್ಫೇಸ್ ಅಂದರೆ ಅವಕಾಶವೆ ಇಲ್ಲ. ನಾವು ಈಗಿರುವ ಈ ಸ್ಥಳ ಕಾಲದ ಅನಂತತೆಯ ತುದಿಯಲ್ಲಿ ಇರಲಿಲ್ಲ , ಹೀಗಾಗಿ ಅವರು ಕಾಲದಲ್ಲಿ ಕಳೆದುಹೋದರು. ಲೆಕ್ಕದ ಈ ಗಡಿಬಿಡಿಯಲ್ಲಿ ವಾಹನದ ಕಂಪ್ಯೂಟರ್ ಅಟೋಮೆಟಿಕ್ ಶಟ್ ಡೌನ್ ತೆಗೆದುಕೊಂಡು , ಹಿಂದೆ ಬಂದಿತು ನಮ್ಮ ಅಪ್ಪ ಅಮ್ಮನನ್ನು ಎಲ್ಲಿಯೊ ಬಿಟ್ಟು. ಒಮ್ಮೊಮ್ಮೆ ಈ ಮಿಷಿನ್ ಕಂಡಾಗ ನನಗೆ ಕೋಪಬರುತ್ತೆ " ಎಂದ. ಶ್ರೀನಾಥನಿಗೆ ಸ್ವಲ್ಪ ಗಾಭರಿ ಎನ್ನಿಸಿ "ಹಾಗಾದರೆ ಈಗ ನನ್ನ ಕತೆ , ಒಮ್ಮೆ ನಾನು ನನ್ನ ಕಾಲಕ್ಕೆ ಹೋಗಲಾಗದಿದ್ದರೆ?" ಎಂದ. ಶ್ರೀನಿದಿ " ಅಂತ ಭಯವೇನಿಲ್ಲ, ಈಗ ನಾನು ಇದನ್ನು ಸಾಕಷ್ಟು ಸುದಾರಿಸಿರುವೆ , ಹೊರಗಿನ ಪ್ರಪಂಚಕ್ಕೆ ಇನ್ನು ಪ್ರಚುರಪಡಿಸಿಲ್ಲ. ಸರ್ಕಾರಕ್ಕೆ ನಾನು ಈ ನಿಟ್ಟಿನಲ್ಲಿ ಪ್ರಯೋಗಮಾಡುತ್ತಿರುವುದು ತಿಳಿದಿದೆ ಆದರೆ ನಾನು ಯಾವ ಮಟ್ಟದಲ್ಲಿರುವೆ ಎಂದು ತಿಳಿದಿಲ್ಲ. ನಿಮ್ಮನ್ನು ನಾನು ಅಧಿಕೃತವಾಗಿ ಸರ್ಕಾರದ ಒಪ್ಪಿಗೆ ಪಡೆದು ಕರೆತಂದಿಲ್ಲ ಅದೊಂದೆ ತೊಂದರೆ" ಎಂದ. ಅವರು ಹೇಳುವದನ್ನೆಲ್ಲ ಕೇಳುವಾಗ ಶ್ರೀನಾಥನಿಗೆ ಅವನಿಗೆ ಸಹಾಯ ಮಾಡಲು ಒಪ್ಪಬಹುದು ಅನ್ನಿಸಿತು. ಅಲ್ಲದೆ ಸನಾತನ ಭಾರತೀಯ ಧರ್ಮದಂತೆ ನಮ್ಮ ವಂಶ ಬೆಳೆಸಲು ಸಹಾಯಮಾಡುವುದು ತನ್ನ ಕರ್ತವ್ಯ ಕೂಡ ಆಗಿದೆ ಅನ್ನಿಸಿತು. ಭವಿಷ್ಯದ ಲೋಕದಲ್ಲಿ:- ---------------------------- ಅವರು ಕೊಟ್ಟ ಹೊಸ ಬಟ್ಟೆ ಧರಿಸಿ ಹೊರಡಲು ಸಿದ್ದನಾದ ಶ್ರೀನಾಥ. ಶ್ರೀನಿದಿ, ಪ್ರೀಯಾ ಹಾಗು ಅವಳ ತಮ್ಮ ಸುಶಾಂತ್ ಜೊತೆ ಶ್ರೀನಾಥ ಹೊರಟ. ಪುನಃ ಕಾಲಯಂತ್ರದತ್ತ ಹೋಗಬೇಕೆನೊ ಅಂದುಕೊಳ್ಳುತ್ತ ಅವನು ಹೊರಡುವಾಗ ಅವರೆಲ್ಲ ಮನೆಯ ಹೊರಬಾಗಿಲತ್ತ ನಡೆದು ಮನೆಯಿಂದ ಹೊರಬಂದರು. ಸುತ್ತ ನೋಡಿದ ಶ್ರೀನಾಥ , ಸುಂದರವಾದ ವಿಶಾಲವಾದ ರಸ್ತೆ, ಶಿಸ್ತಾದ ಮನೆಗಳು, ಮನೆಮುಂದಿನ ಮರ ಲಾನ್ ಗಳು ಸೇರಿ ರಸ್ತೆ ಲಾಲಬಾಗ್ ನಡುವಿನ ಜಾಗದಂತಿತ್ತು. ಶ್ರೀನಾಥ ಕುತೂಹಲಕ್ಕೆ ಕೇಳಿದ "ಇದು ಯಾವ ನಗರ ? ನಾವಿರುವುದು ನಗರದ ಯಾವ ಬಾಗ?" ಶ್ರೀನಿದಿ ನಗುತ್ತಿದ್ದ "ಇದು ನೀವಿದ್ದ ಬೆಂಗಳೂರೆ , ಇದು ನಿಮ್ಮದೆ ಮನೆಯೆ ಈಗ ಹೀಗಿದೆ ಅಷ್ಟೆ" ಶ್ರೀನಾಥನಿಗೆ ಎಂತ ನಂಬಿಕೆಯು ಬರಲಿಲ್ಲ. ನಾನಿದ್ದ ಮನೆ ಹೇಗಾಗಲು ಸಾದ್ಯ ನಾನು ಈಗಲು ಇರುವೆನಲ್ಲ ಅನ್ನಿಸಿತು. ಕಾರಿನತ್ತ ನಡೆದು ಬಂದು ಮುಂದಿನ ಸೀಟಿನಲ್ಲಿ ಕುಳಿತ, ಹಿಂದೆ ಪ್ರಿಯಾ ಹಾಗು ಸುಶಾಂತ್ ಇದ್ದರು. ಡ್ರೈವಿಂಗ್ ಸೀಟಿನಲ್ಲಿ ಕುಳಿತ ಶ್ರೀನಿದಿ ಅವನ ಮುಂದಿದ್ದ ಡ್ಯಾಶ್ ಬೋರ್ಡ್ ನಲ್ಲಿದ್ದ ಟಚ್ ಸ್ರ್ಕೀನ್ ನಲ್ಲಿ ಬೆರಳಾಡಿಸುತ್ತಿದ್ದ. ಕುತೂಹಲಕ್ಕೆ ಕೇಳಿದ ಶ್ರೀನಾಥ "ಏನದು" ಎಂದು. ಇವನತ್ತ ತಿರುಗದೆ ಅವನು ನುಡಿದ "ಏನಿಲ್ಲ ಟ್ರಾಫಿಕ್ ಪೋಲಿಸರಿಂದ ರೂಟ್ ಪರ್ಮಿಶನ್ ಕೇಳಿದೆ ಅಷ್ಟೆ" ಶ್ರೀನಾಥನ ಕಣ್ಣು ಅಗಲವಾಯ್ತು "ಪ್ರತಿ ಬಾರಿ ಈ ರೀತಿ ಪರ್ಮಿಶನ್ ಕೇಳಲು ತೊಂದರೆಯಲ್ಲವ?" ಅಂದ "ಹಾಗೇನು ಇಲ್ಲ. ರೊಟಿನ್ ರೂಟ್ಗೆ ಕೇಳಬೇಕಿಲ್ಲ, ಅಡಿಶನಲ್ ಅಲ್ವ ಕೇಳಿದೆ" ಅಂದ ಯಾವುದೆ ಶಬ್ದವಿಲ್ಲದೆ ಹೊರಟ ಎಲೆಕ್ಟ್ರಿಕ್ ಕಾರು ರಸ್ತೆಯಲ್ಲಿ ಸಾಗುತ್ತಿತ್ತು. ಶ್ರೀನಾಥ ಇದ್ದಕ್ಕಿದ್ದಂತೆ ಕೇಳಿದ "ಈಗ ಭಾರತದಲ್ಲಿ ಜನಸಂಖ್ಯೆ ಎಷ್ಟು" . ಒತ್ತಡವಿಲ್ಲದ ಖಾಲಿ ರಸ್ತೆಯನ್ನು ಕಾಣುವಾಗ ಅವನಿಗೆ ಆಶ್ಛರ್ಯವಾಗಿತ್ತು. ಶ್ರೀನಿದಿ "ಕಳೆದ ವರ್ಷ ನೂರು ಕೋಟಿಯ ಹತ್ತಿರವಿತ್ತು, ಒಂದು ನಿಮಿಶ" ಅಂದವನೆ, ಎದುರಿನ ಸ್ಕ್ರೀನ್ ನಲ್ಲಿ ಬೆರಳು ಆಡಿಸಿ "ನೂರು ಕೋಟಿ ಹತ್ತು ಸಾವಿರದ ಹನ್ನೆರಡು" ಎಂದ. ಶ್ರೀನಾಥ "ಆದರೆ ಶ್ರೀನಿದಿಯವರೆ , ರಸ್ತೆಯಲ್ಲಿ ಜನವೆ ಕಾಣಲ್ವೆ ಬೆಂಗಳೂರಿನಂತ ನಗರದಲ್ಲಿ ಇದು ಹೇಗೆ ಸಾದ್ಯ?" ಎಂದ. ಶ್ರೀನಿದಿ ಎಂದ " ನೀವು ನನಗೆ ಅಷ್ಟೊಂದು ಮರ್ಯಾದೆಯಿಂದ ಕರೆಯಬೇಡಿ, ನಾನು ತುಂಬಾ ಚಿಕ್ಕವನು. ಆದರೆ ಈಗ ನೀವು ನನ್ನಗಿಂತ ಚಿಕ್ಕವರಾಗಿ ಕಾಣ್ತೀರಿ ಅದಕ್ಕೆ ನಿಮ್ಮ ಹೆಸರು ಹಿಡಿದು ಮಾತನಾಡಿಸುತ್ತ ಇದ್ದೇನೆ. ಮತ್ತೆ ವಿಷಯಕ್ಕೆ ಬಂದರೆ, ಪೆಟ್ರೋಲ್ ವಾಹನಗಳು ನಿಲ್ಲುತ್ತಲೆ ಅನಗತ್ಯ ಓಡಾಟಕ್ಕೆ ಕಡಿವಾಣ ಬಿತ್ತು. ಸಾದ್ಯವಾದ ಸರ್ಕಾರಿ ಹಾಗು ಕಂಪನಿಗಳ ಕೆಲಸಗಳೆಲ್ಲ ಮನೆಯಿಂದಲೆ ಆಗುತ್ತದೆ. ಹಳ್ಳಿ ಹಾಗು ಸಣ್ಣ ಪಟ್ಟಣಗಳನ್ನು ಸಾಕಷ್ಟು ಅಬಿವೃದ್ದಿಗೊಳಿಸಿ ನಗರದ ಮೇಲಿದ್ದ ಒತ್ತಡವನ್ನೆಲ್ಲ ನಿವಾರಿಸಲಾಯ್ತು. ಅಗತ್ಯಕಾರಣ ನೀಡದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುವದನ್ನು ನಿರ್ಬಂದಪಡಿಸಲಾಯ್ತು. ಬೆಂಗಳೂರಿನಂತ ನಗರದಲ್ಲಿ ಟ್ರಾಫಿಕ್ ಪೋಲಿಸ್ ಒಪ್ಪಿಗೆಯೊಂದಿಗೆ ಮಾತ್ರ ಓಡಾಡುವಂತೆ ಕಾನೂನುಗಳಾದವು. ನಮಗೆ ಬೇಕಾದ ವಸ್ತುಗಳೆಲ್ಲ ನಿಗದಿತ ಸಮಯದಲ್ಲಿ ಮನೆಗೆ ತಲುಪುತ್ತದೆ" ಎಂದ. ಶ್ರೀನಾಥನಿಗೆ ಮತ್ತು ಕುತೂಹಲ "ಅದು ಸರಿ ನಾವೀಗ ಪೋಲಿಸರಿಗೆ ತಿಳಿಸದೆ ಹೊರಟರೆ ಏನಾಗುತ್ತೆ, ಟ್ರಾಫಿಕ್ ಪೋಲಿಸ್ ಹಿಡಿಯುತ್ತಾನ ಅವನಿಗೆ ಹೇಗೆ ತಿಳಿಯುತ್ತೆ " ಅಂತ ಕೇಳಿದ. ಶ್ರೀನಿದಿ ಅವನ ಮುಖ ನೋಡುತ್ತ ಹೇಳಿದ "ಅದು ಹೇಗೆ ಸಾದ್ಯ? ಎಲ್ಲ ವಾಹನಗಳಲ್ಲಿ ಸೆನ್ಸಾರ್ ಅಳವಡಿಸಿರುತ್ತೆ. ಟ್ರಾಫಿಕ್ ಪೋಲಿಸ್ ಕಂಪ್ಯೂಟರ್ ನಮ್ಮನ್ನು ಟ್ರಾಕ್ ಮಾಡ್ತಿರುತ್ತೆ". ಶ್ರೀನಾಥನಿಗೆ ಏಕೊ ತನ್ನ ಪ್ರಶ್ನೆ ತೀರ ಬಾಲಿಶ ಅನ್ನಿಸಿ ನಾಚಿಕೆ ಆಯಿತು. ಇವನನ್ನೆ ನೋಡುತ್ತ ಶ್ರೀನಿದಿ ಹೇಳಿದ "ಈಗಲು ಕೆಲವು ಪಬ್ಲಿಕ್ ಟ್ರಾನ್ಸ್ ಪೋರ್ಟ್ , ಮೆಟ್ರೋನಂತದು ಉಳಿಸಿ ಕೊಳ್ಳಲಾಗಿದೆ" ಸುಮಾರು ನಲವತ್ತು ಕಿಮೀ ದೂರದಲ್ಲಿದ್ದ ನರ್ಸಿಂಗ್ ಹೋಮ್ ತಲುಪಲು ಅವರು ತೆಗೆದುಕೊಂಡ ಸಮಯ ಇಪ್ಪತೈದು ನಿಮಿಶ. ಶ್ರೀನಾಥ ಇದು ನಿಜಕ್ಕು ಬೆಂಗಳೂರ ಅಂದು ಕೊಂಡು ಅವರ ಜೊತೆ ಒಳನಡೆದ. ಸುಶಾಂತನ ಸೀನಿಯರ್ ಮೇರಿ ಶ್ರೀನಾಥನತ್ತ ತುಸು ಕುತೂಹಲದಿಂದ ನೋಡುತ್ತಲೆ ಸ್ವಾಗತಿಸಿದರು. ಅವರಿಗೆ ಮೊದಲೆ ಎಲ್ಲವು ತಿಳಿದಿತ್ತು. ಶ್ರೀನಾಥನಿಗೆ ಕುಡಿಯಲು ವಿಟಮೀನ್ ಡ್ರಿಂಕ್ಸ್ ಅಫರ್ ಮಾಡಿದರು ಅವನು ತುಸು ಸಂಕೋಚದಿಂದಲೆ ಎಂದ "ಈಗಿನ್ನು ಆಯಿತು, ಅದರ ಬದಲು ಸ್ವಲ್ಪ ಕಾಫಿ ಇದ್ದರೆ ಸಿಗಬಹುದಾ?" ಎಂದು ಆಕೆ ಜೋರಾಗಿ ನಕ್ಕುಬಿಟ್ಟರು , ಅವರು ಕಾಲೇಜಿನಲ್ಲಿ ಓದುವಾಗ ಕಾಫಿಯ ಬಗ್ಗೆ ತಿಳಿದಿದ್ದರು "ಬೆಂಗಳೂರಿನಲ್ಲಿ ಕಾಫಿಯ , ಬಹುಷಃ ಸಿಗಲಾರದು. ಈಗ ಅದು ಸಿಗುವುದು ವಿಶ್ವಕೋಶದಲ್ಲಿ ಮಾತ್ರ" ಶ್ರೀನಿದಿ ಹೇಳಿದ್ದು ನಿಜವಿತ್ತು ಅಲ್ಲಿಯ ಎಲ್ಲ ಕಾರ್ಯಗಳನ್ನು ಪೂರೈಸಲು ಅರ್ದಗಂಟೆಗಿಂತ ಕಡಿಮೆ ಸಮಯ ಸಾಕಾಯ್ತು. ತೃಪ್ತಿಯಿಂದ ತಲೆ ಆಡಿಸಿದ ಮೇರಿ ಶ್ರೀನಿದಿಯನ್ನು ಕುರಿತು "ನಾನು ಕೆಲವು ಸಿದ್ದತೆ ನಡೆಸುವೆ ನೀವು ನಾಳೆ ಸಂಜೆ ಆರಕ್ಕೆ ಬಂದರೆ ಸಾಕು. ಇವರನ್ನು ಬೇಕಿದ್ದಲಿ 'ಮರಳಿ ಭೂತಕ್ಕೆ' ಕಳಿಸಿರಿ" ಎಂದರು. ಶ್ರೀನಾಥ ತುಸು ವಿರಾಮಕ್ಕೆ ಕುಳಿತು ಮೇರಿಯವರಲ್ಲಿ ಪ್ರಶ್ನಿಸಿದ "ಆದರೆ ಡಾಕ್ಟರ್ ಇದೆಂತ ಸಮಸ್ಯೆ ನನ್ನಲ್ಲಿ ಇಲ್ಲದ ಜೀನ್ಸ್ ಕ್ರೋಮೊಸೋಮ್ಸ್ ಸಮಸ್ಯೆ ನನ್ನ ನಾಲ್ಕನೆ ತಲೆಮಾರಿಗೆ ಹೇಗೆ ಬಂದಿದೆ ಹಾಗೆ ಮಕ್ಕಳಾದರೆ ಏನಾಗುತ್ತಿತ್ತು" ಎಂದನು ಆಕೆ 'ಇದೊಂದು ಅಪರೂಪದ ಪ್ರಕರಣ, ಮಕ್ಕಳಾಗಲು ಒಪ್ಪಿಗೆ ಸಿಗುತ್ತಿರಲಿಲ್ಲ, ಅಲ್ಲದೆ ಒಂದು ವೇಳೆ ಮಕ್ಕಳಾದರು ಸಹಜವಾಗಿ ಹುಟ್ಟುವ ಸಾದ್ಯತೆ ಕಡಿಮೆ ಇತ್ತು. ಇದಕ್ಕೆ ಕಾರಣ ಶ್ರೀನಿದಿಯ ಜೀನ್ಸ್ ನಲ್ಲಿಯ ಕ್ರೋಮೊಸೋಮ್ಸ್ ಗಳ ಜೋಡಣೆಯಲ್ಲಿದ್ದ ಏರುಪೇರು. ನಾನು ಕಂಪ್ಯೂಟರ್ ನಲ್ಲಿ ಅನಲೈಸ್ ಮಾಡಿ ನೋಡಿದೆ, ಅದು ಅವನಿಂದ ನಾಲ್ಕನೆ ತಲೆಮಾರಿನಲ್ಲಿ ನಡೆದಿರಬಹುದಾದ ಒಂದು ಜಿನಟಿಕ್ ಆಪರೇಶನ್ ಅದಕ್ಕೆ ಕಾರಣ. ನನಗೆ ಸ್ವಲ್ಪ ಆಶ್ಚರ್ಯವು ಇದೆ , ಏಕೆಂದರೆ ಇಂತಹ ವೈದ್ಯಕೀಯ ತಂತ್ರಜ್ಞಾನ ಬೆಳೆದು ಕೇವಲ ಇಪ್ಪತೈದು ವರ್ಷಗಳಾಗಿದೆ ಆದರೆ ಸುಮಾರು ನೂರು ವರ್ಷಗಳ ಹಿಂದೆ ಇಂತ ಅಪರೇಶನ್ ಆಗಿರಬಹುದಾದ ಸಾದ್ಯತೆಯನ್ನು ಕಂಪ್ಯೂಟರ್ ತೋರಿಸುತ್ತಿದೆ ಅದು ನನಗೆ ಅರ್ಥವಾಗುತ್ತಿಲ್ಲ " ಎಂದರು. ಪುನಃ ಕಾರಿನಲ್ಲಿ ಕುಳಿತುಕೊಳ್ಳುವಾಗ ಶ್ರೀನಾಥ ಕೇಳಿದ "ಈಗ ವಿಮಾನ ನಿಲ್ದಾಣದಂತದು ಇಲ್ಲ ಕಡೆಗೆ ಬಸ್ ನಿಲ್ಡಾಣ ಹೇಗಿರುತ್ತೆ ನೋಡಿ ಹೋಗಬಹುದಾ? " ಎಂದ. ಶ್ರೀನಿದಿ ಎದುರಿನ ಡ್ಯಾಶ್ ಬೋರ್ಡ್ ನಲ್ಲಿ ಕೈಆಡಿಸಿದ. ಶ್ರೀನಾಥ ಪ್ರಶ್ನೆ ಕೇಳಲು ಹೋಗಲಿಲ್ಲ ಅವನಿಗೆ ಅರ್ಥವಾಗಿತ್ತು , ಟ್ರಾಫಿಕ್ ಪೋಲಿಸರ ಹತ್ತಿರ ರೂಟ್ ಮಾಡಿಫಿಕೇಶನ್ ಅಂದರೆ ಮಾರ್ಗ ಬದಲಾವಣೆ ಕೇಳುತ್ತಿದ್ದಾನೆ ಎಂದು. ಬಸ್ ನಿಲ್ದಾಣದಲ್ಲಿ ಅಂತಹ ಜನಜಂಗುಳಿ ಏನಿರಲಿಲ್ಲ. ಕೈಬೆರಳು ಮಡಚಿ ಏಣಿಸಬಹುದಾದ ಜನ ಅಷ್ಟೆ. ಅಲ್ಲಿ ಬಸ್ಸಿನ ಬದಲಿಗೆ ಸಾಲಾಗಿ ಲಿಪ್ಟ್ ನಂತ ಕೆಲವು ರಚನೆಗಳಿದ್ದವು. ಮೇಲೆ ಸೂಚನೆಯ ಫಲಕ 'ಎನ್ ಎಸ್ ವಿ' ಮತ್ತು 'ಐ ಎಸ್ ವಿ ' ಎಂದು, ಅಂದರೆ 'ನ್ಯಾಶನಲ್ ಸ್ಪೇಸ್ ವೆಹಿಕಲ್' , 'ಇಂಟರ್ನ್ಯಾಶನಲ್ ಸ್ಪೇಸ್ ವೆಹಿಕಲ್' . ಹೊರಗಿದ್ದ ವ್ಯಕ್ತಿ ಒಳಗೆ ಹೋದೊಡನೆ ಕೆಂಪು ದೀಪ ಹಳದಿಯಾಗುತ್ತಿತ್ತು. ಪಕ್ಕದಲ್ಲಿದ್ದ ಶ್ರೀನಿದಿ ಪಿಸುಗುಟ್ಟಿದ " ಏನು ಪ್ರಶ್ನೆ ಕೇಳಬೇಡಿ ಕೆಲವರು ನಿಮ್ಮನ್ನು ಗಮನಿಸುತ್ತಿದ್ದಾರೆ, ಬನ್ನಿಹೋಗೋಣ " ಎಂದ ಕಾರು ತಲುಪಿದಂತೆ ಶ್ರೀನಾಥ "ಅದೇಕೆ ಅಷ್ಟು ಗಾಭರಿ ನಾನು ಸ್ಪೇಸ್ ವೆಹಿಕಲ್ ಬಗ್ಗೆ ಕೇಳುವನಿದ್ದೆ ಅಷ್ಟೆ " ಎಂದ ಅದಕ್ಕೆ ಶ್ರೀನಿದಿ "ಹಾಗಲ್ಲ , ನಾನು ನಿಮ್ಮನ್ನು ಅಧಿಕೃತವಾಗಿ ಕರೆತಂದಿಲ್ಲ, ನಿಮ್ಮ ಆಗಮನ ಸರ್ಕಾರದ ಗಮದಲ್ಲಿಲ್ಲ ಏನಾದರು ತೊಂದರೆಯಾದಿತು ಎಂದು ಅಷ್ಟೆ. ವಾಹನದ ಬಗ್ಗೆ ಹೇಳಬೇಕೆಂದರೆ ನಿಮಗೆ ಮೊದಲೆ ತಿಳಿಸಿದಂತೆ ಮನುಷ್ಯನ ದೇಹವನ್ನು ಬೆಳಕಿನ ವೇಗದೊಂದಿಗೆ ಸಮನ್ವಯಗೊಳಿಸಿದಾಗ, ಅವನು ಬೆಳಕಿನ ಕಿರಣದಂತೆ ಆಗುತ್ತಾನೆ ಆಗ ಬೇಕಾದ ಕಡೆ ಟ್ರಾಸ್ ಮಿಟ್ ಮಾಡಿ, ಅಲ್ಲಿ ಪುನಃ ರಿಸೀವ್ ಮಾಡ್ತಾರೆ ಅಷ್ತೆ. ಎನ್ ಎಸ್ ವಿ ಗೂ ಐ ಎಸ್ ವಿ ಗಳಿಗು ವೆತ್ಯಾಸವೇನಿಲ್ಲ ಎರಡು ಒಂದೆ. ಈ ಸ್ಪೇಸ್ ವೆಹಿಕಲ್ಸ್ ನಲ್ಲಿ ಸ್ಪೇಸ್ ಕೋರ್ಡಿನೇಟ್ ಬದಲಾದರೆ ಟೈಮ್ ಮಿಷಿನ್ ನಲ್ಲಿ ಟೈಮ್ ಕೋರ್ಡಿನೇಟ್ ಬದಲಾಗುತ್ತೆ ಅಷ್ಟೆ " ಎಂದ. ಕಾರ್ಯ ಕಾರಣ ಎರಡು ಒಂದೆ! ========================= ಎಲ್ಲರ ಕೃತಜ್ಞತೆ ಸ್ವೀಕರಿಸಿ ಪುನಃ ಅದೇ ಕಾಲಯಂತ್ರದಲ್ಲಿ ಶ್ರೀನಿದಿ ಜೊತೆ ಕುಳಿತ. ಕೆಲವು ನಿಮಿಶದ ನಂತರ ಶ್ರೀನಿದಿ ನುಡಿದ "ಶ್ರೀನಾಥರೆ ಸಣ್ಣ ತೊಂದರೆ ಇದೆ, ಒಂದೆರಡು ತಾಸು ತಡವಾಗಬಹುದು. ಬೇಸರ ಪಡಬೇಡಿ ಮೇಲಿನ ಹಾಲಿನಲ್ಲಿ ಪ್ರಿಯಾ ಜೊತೆ ಕುಳಿತಿರಿ " ಎಂದ. ಶ್ರೀನಾಥ ಗಾಭರಿಯಿಂದ " ಏಕೆ ತಡ ನಾನು ಹೋಗಲು ಸಾದ್ಯವಾಗುವದಿಲ್ಲವ , ಏನು ತೊಂದರೆ " ಎಂದ . ಶ್ರೀನಿದಿ ನಗುತ್ತ "ಅಷ್ಟೊಂದು ಗಾಭರಿ ಏನಿಲ್ಲ. ನೀವು ಹಿಂದಿರುಗುವುದು ಖಚಿತ ಭೂತದಿಂದ ಭವಿಷ್ಯಕ್ಕೆ ಬರುವಾಗ ನಿಮ್ಮ ದೇಹವನ್ನು ಕಾಲಯಂತ್ರ ಸರಿಯಾಗಿ ಅನಲೈಸ್ ಮಾಡಿತ್ತು, ಈಗ ಮರಳಿ ಭೂತಕ್ಕೆ ಹೋಗುವಾಗ ನಿಮ್ಮ ದೇಹವನ್ನು ಸರಿಯಾಗಿ ಅನಲೈಸ್ ಮಾಡುತ್ತಿಲ್ಲ, ನಿಮ್ಮದು ನೂರುವರ್ಷಗಳ ಹಳೆಯ ದೇಹವಲ್ಲವೆ . ಕೆಲವು ನಿಮಿಶದಲ್ಲಿ ಪ್ರೋಗ್ರಾಮ್ ಬದಲಾಯಿಸುತ್ತೇನೆ" ಎಂದ. ತನ್ನನ್ನು ನೂರುವರ್ಷಗಳ ಹಳೆಯ ದೇಹ ಎಂದಿದ್ದು ಶ್ರೀನಾಥನಿಗೆ ಮುಜುಗರವಾಗಿತ್ತು ಮೇಲೆ ಬಂದು ಪ್ರಿಯಾ ಜೊತೆ ಮಾತಿಗೆ ನಿಂತ. ಕುತೂಹಲಕ್ಕೆ ಕೇಳಿದ "ನನ್ನ ಮಗ ಅಂದರೆ ಶ್ರೀನಿದಿಯ ತಾತನ ಪೋಟೊ ಏನಾದರು ಇದೆಯ " ಆಕೆ ಅವನನ್ನು ತನ್ನ ರೂಮಿಗೆ ಕರೆದೋಯ್ದಳು. ಅಲ್ಲಿ ಕಂಪ್ಯೂಟರ್ ಆನ್ ಮಾಡಿ ಅದರಲ್ಲಿ ಅಲ್ಬಮ್ ತೆಗೆದು ಶ್ರೀನಿದಿಯ ಅಪ್ಪ ತಾತ ಎಲ್ಲರ ಪೋಟೋ ತೋರಿಸಿ "ಇವರೆ ನಿಮ್ಮ ಮಗ ಅಂದರೆ ಶ್ರೀನಿದಿಯ ತಾತ " ಎಂದಳು. ಶ್ರೀನಾಥ ಎಂದುಕೊಂಡ 'ನಮ್ಮ ಅಪ್ಪನನ್ನು ನೋಡಿದ ಹಾಗೆ ಆಗುತ್ತೆ' ಅಂತ. ಮತ್ತೆ ಕೇಳಿದ "ಇವರ ಅಲ್ಲ ಅಲ್ಲ ಇವನ ಹೆಸರೇನು " . ಆಕೆ ನಗುತ್ತ ಅಂದಳು 'ಶ್ರೀಹರಿ' . ಶ್ರೀನಾಥನಿಗೆ ಫೋಟೊಗಳನ್ನು ನೋಡುತ್ತಿರುವಂತೆ , ಏಕೋ ಡಾಕ್ಟರ್ ಮೇರಿಯವರ ಮಾತು ನೆನಪಿಗೆ ಬಂದಿತು. ನೂರು ವರ್ಷದ ಹಿಂದೆ ನಡೆದಿರಬಹುದಾದ ಅಪರೇಶನ್ ನಿಂದ ಈ ರೀತಿಯ ಕ್ರೋಮೊಸೋಮ್ ನ ಜೋಡಣೆಯ ಸಮಸ್ಯೆ ತಲೆದೋರಿದೆ ಆದರೆ ನೂರುವರ್ಷಗಳ ಹಿಂದೆ ಈ ವೈದ್ಯಕೀಯ ಅವಿಷ್ಕಾರವೆ ಆಗಿರಲಿಲ್ಲ ಅಂತ ಅಶ್ಚರ್ಯಪಟ್ಟಿದ್ದರು ಅವರು. ಶ್ರೀನಾಥ ಎಗರಿಬಿದ್ದ ಅವನಿಗೆ ತಕ್ಷಣ ಅರ್ಥವಾಗಿತ್ತು, ನೂರುವರ್ಷದ ಹಿಂದಿನ ವ್ಯಕ್ತಿಯ ಮೇಲೆ ನಡೆದಿದ್ದ ಅಪರೇಶನ್ ಅಂದರೆ ಅದು ನನ್ನ ಮೇಲೆ ನಡೆದಿರುವ ಆಪರೇಷನ್ , ನನ್ನ ಮೇಲೆ ಇಂದು ನಡೆದಿರುವ ಅಪರೇಶನ್ ಕಾರಣದಿಂದ ಈ ಸಮಸ್ಯೆ ತಲೆದೋರಿದೆ. ಈದಿನದ ಅಪರೇಶನ್ ನಿಂದ ತನಗೇನು ಆಗದು ಆದರೆ ನನ್ನಿಂದ ನಾಲ್ಕನೆ ತಲೆಮಾರಿನಲ್ಲಿ ಸಮಸ್ಯೆ ತಲೆದೋರಿದೆ. ಅಂದರೆ ಶ್ರೀನಿದಿಯ ಜೀನ್ ನ ಕ್ರೋಮೊಸೋಮ್ ನ ಕ್ರಮದಲ್ಲಿ ಏನೊ ತೊಂದರೆ ಆಗಿದೆ. ಆದರೆ ಇದೆಂತ ಆಶ್ಚರ್ಯ ಯಾವ ಅಪರೇಶನ್ ಶ್ರೀನಿದಿಯ ಸಮಸ್ಯೆ ಪರಿಹಾರಮಾಡಲು ಆಗಿದೆಯೊ ಅದೇ ಅಪರೇಶನ್ ಅವನ ಸಮಸ್ಯೆಗು ಕಾರಣವಾಗಿದೆ!. ಕಾರ್ಯ ಹಾಗು ಕಾರಣ ಎರಡು ಒಂದೆ !. ಅದನ್ನು ಅರ್ಥಮಾಡಿಕೊಳ್ಳಲು ಶ್ರೀನಾಥನಿಗೆ ಸಾದ್ಯವಾಗಲಿಲ್ಲ. ಅದೊಂದು ಕಾಲದ ಸರ್ಪಬಂಧ ಅಷ್ಟೆ ಅನ್ನಿಸಿತು. ಕೆಳಗೆ ಓಡಿಬಂದ ಶ್ರೀನಾಥ , ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದ ಶ್ರೀನಿದಿಗೆ ವಿಷಯ ತಿಳಿಸಿದ. ಅವನು ಸಹ ಕ್ಷಣಕಾಲ ಅವಕ್ಕಾಗಿ ಕುಳಿತ. ಇದೆಂತಹ ವಿಚಿತ್ರ ಇದನ್ನು ಸಮನ್ವಯ ಗೊಳಿಸುವುದು ಅರ್ಥಮಾಡಿಕೊಳ್ಳೂವುದು ಹೇಗೆ ಎಂದು ಅರ್ಥವಾಗದೆ ಕುಳಿತ. ಮರಳಿ ಭೂತಕ್ಕೆ::- ------------------------ ಶ್ರೀನಾಥ ಅಷ್ಟು ಕಾಲ ಕಳೆದಿದ್ದರು ಅವನನ್ನು ಪುನಃ ಅವರು ಕರೆತಂದಿದ್ದು , ಅವರು ಭೂತದಿಂದ ಹೊರಟ ಸಮಯಕ್ಕೆ ಅಂದರೆ ಬೆಳಗಿನ 9.20 ಕ್ಕೆ ಅವನು ತನ್ನ ಮನೆ ತಲುಪಿದ್ದ. ಅವರು ಒಳಗೆ ಬರದೆ ಆತುರವಾಗಿ ಹೊರಟುಹೋದರು. ಅವನು ಮನೆಯ ಒಳಗೆ ಬಂದಾಗ ಚಪಾತಿ ಹಿಡಿದು ಬಂದ ಭೂಮಿಕ ಅಂದಳು. "ಇದೇನು ಚಪಾತಿ ತರುವದರೊಳಗೆ ಹೀಗೆ ಓಡಾಡುತ್ತಿದ್ದೀರಿ ಒಂದೆರಡು ನಿಮಿಶ ಕೂಡುವಷ್ಟು ಸಹನೆ ಇಲ್ಲವ?" ಶ್ರೀನಾಥ ಬೆರಗಾಗಿದ್ದ ತಾನು ಕಾಲವಾಹನದಲ್ಲಿ ಹೋಗಿದ್ದು , ತನ್ನ ಮಕ್ಕಳು ಮೊಮ್ಮಕ್ಕಳ ವಿಷಯ ಎಲ್ಲ ತಿಳಿಸಿದ. ಭೂಮಿಕ ಜೋರಾಗಿ ನಗಲು ಪ್ರಾರಂಬಿಸಿದಳು "ಸರಿ ಹೋಯ್ತು ನಾನು ಚಪಾತಿ ತರುವದರೊಳಗೆ ತೂಕಡಿಸಿ ಕನಸು ಕಂಡಿದ್ದೀರಿ. ಹಗಲಲ್ಲೆ ಸ್ಲೀಪ್ ವಾಕ್ ಬೇರೆ ಮಾಡ್ತಿದ್ದೀರಿ. ಎಲ್ಲಿ ನಿಮ್ಮ ಟೈಮ್ ಕಾರನ್ನು ತೋರಿಸಿ ನಾನು ನೋಡ್ತೀನಿ" ಎಂದಳು. ಶ್ರೀನಾಥನಿಗೆ ಅರ್ಥವಾಗಿ ಹೋಗಿತ್ತು ತನ್ನ ಮಾತು ಯಾರು ನಂಬುವದಿಲ್ಲ. ಅವನು ಸುಮ್ಮನಾಗಿ ಹೋಗಿದ್ದ. ಅವನು ನಿರ್ದರಿಸಿದ್ದ ಏನಾದರು ಆಗಲಿ ತನ್ನ ಮಕ್ಕಳಿಗೆ ತಾನು ಮಾತ್ರ ಹೆಸರಿಡುವದಿಲ್ಲ , ನೋಡೋಣ ತಾನು ಕಂಡ ಕನಸು ನಿಜವೊ ಅನುಭವವೊ ಎಂದು ಕಾಯುತ್ತಿದ್ದ. ವರ್ತಮಾನ : ------------------ ಪುರೋಹಿತರು ಜೋರಾಗಿ ಕೂಗುತ್ತಿದ್ದರು.'ಇನ್ನು ಶಾಸ್ರವೆಲ್ಲ ಮುಗಿಯಿತು. ಹಸೆಮಣೆಯ ಮೇಲಿರುವ ಇವರಿಗೆ ಆರತಿ ಮಾಡಿ. ಉಡುಗರೆಕೊಡುವರೆಲ್ಲ ಓದಿಸಬಹುದು ' ಎಲ್ಲರಿಗು ಸಂಭ್ರಮ. ಶ್ರೀನಾಥ ನಿದಾನಕ್ಕೆ ಚೇತರಿಸಿಕೊಂಡ. ತಲೆಕೊಡವಿ ಮೇಲೆದ್ದ. ಇದು ಚಿಂತಿಸುವ ಸಮಯವಲ್ಲ ಅಷ್ಟಕ್ಕು ಎಲ್ಲವು ಶುಭವೆ. ತನ್ನ ಮಗ ನೂರುವರ್ಷ ಮೀರಿ ಬದುಕುವುದು ಸತ್ಯ ಎಂದು ತಿಳಿದಿದೆ. ಎಲ್ಲ ಯೋಚಿಸಿ ನಗುನಗುತ್ತ ಎಲ್ಲರೊಡನೆ ಬೆರೆತ. - ಮುಗಿಯಿತು.
Rating
No votes yet

Comments