ಅಚ್ಚಳಿಯದ ಪ್ರಭಾವ ಬೀರಿದ ಅಧ್ಯಾಪಕರು

ಅಚ್ಚಳಿಯದ ಪ್ರಭಾವ ಬೀರಿದ ಅಧ್ಯಾಪಕರು

Addoor Shivashankar Raoತೊಂಭತ್ತು ವರುಷಗಳ ನನ್ನ ಬದುಕಿನ ಹಾದಿಯಲ್ಲಿ ಹಲವರನ್ನು ಹಾದು ಬಂದಿದ್ದೇನೆ. ಅವರಲ್ಲಿ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಕೆಲವೇ ಕೆಲವರು. ಅವರನ್ನು ನಾನೆಂದಿಗೂ ಮರೆಯಲಾರೆ.

ನನ್ನ ಮೇಲೆ ಪ್ರಭಾವ ಬೀರಿದ ಅಧ್ಯಾಪಕರ ಬಗ್ಗೆ ಈ ಬರಹ. ಕುಂದಾಪುರದ ಗೇಬ್ರಿಯಲ್ ಕೌಂಡ್ಸ್ ಮೊದಲಾಗಿ ನೆನಪಾಗುತ್ತಾರೆ. ಅವರೆಂದೂ ನನ್ನ ಟೀಚರ್ ಆಗಿರಲಿಲ್ಲ. ಆದರೂ ನನ್ನ ಮೇಲೆ ತೀವ್ರ ಪ್ರಭಾವ ಬೀರಿದರು. ಹಲವಾರು ವರುಷ ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಡ್ರಾಯಿಂಗ್ ಟೀಚರ್ ಆಗಿದ್ದರು. ಕುಂದಾಪುರ ಊರಿನಲ್ಲಿ ಅವರು ಡ್ರಾಯಿಂಗ್ ಮಾಸ್ಟರ್ ಎಂದೇ ಪರಿಚಿತರು. ಅವರು ಎರಡು ತಲೆಮಾರುಗಳ ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು. ಹಾಗಾಗಿ ಅವರ ವಿರುದ್ಧ ಹೆತ್ತವರ ಬಳಿ ವಿದ್ಯಾರ್ಥಿಗಳು ದೂರು ಕೊಟ್ಟರೆ, ಹೆತ್ತವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಕುಂದಾಪುರದ ಎಲ್ಲರೂ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಇವರನ್ನು ಗೌರವಿಸುತ್ತಿದ್ದರು. ಇವರ ಬಗ್ಗೆ ನಾನು ಕೇಳಿದ್ದ ಒಂದು ವಿಷಯ: ಯಾವನೇ ವಿದ್ಯಾರ್ಥಿ, ಅನಾರೋಗ್ಯ ಅಥವಾ ಬೇರೆ ಕಾರಣಕ್ಕಾಗಿ ಶಾಲೆಗೆ ಹಾಜರಾಗದಿದ್ದರೆ, ಡ್ರಾಯಿಂಗ್ ಮಾಸ್ಟರ್ ಅವನ ಮನೆಗೇ ಹೋಗಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಸೇವೆಯಿಂದ ನಿವೃತ್ತರಾದ ನಂತರವೂ ಡ್ರಾಯಿಂಗ್ ಮಾಸ್ಟರ್ ತಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದರು - ಮುಂಬೈಯಂತಹ ದೂರದ ನಗರಗಳಿಗೆ ಹೋದವರೊಂದಿಗೂ. ಡಾ. ಕೆ. ಶಿವರಾಮ ಕಾರಂತರು ತಮ್ಮ ಆತ್ಮಕತೆಯಲ್ಲಿ ಇವರ ಬಗ್ಗೆ ಬರೆದಿದ್ದಾರೆ.


ನನ್ನ ಮೇಲೆ ಅಗಾಧ ಪ್ರಭಾವ ಬೀರಿದ ಇನ್ನೊಬ್ಬರು ಅಧ್ಯಾಪಕರು ಕೆ.ಎಲ್. ಕಾರಂತರು. ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ವಿಜ್ನಾನ ಶಿಕ್ಷಕರಾಗಿದ್ದ ಇವರು ಡಾ. ಕೆ. ಶಿವರಾಮ ಕಾರಂತರ ಅಣ್ಣ. ವಿದ್ಯಾರ್ಥಿಗಳಲ್ಲಿ ವೈಜ್ನಾನಿಕ ಮನೋಭಾವ ಬೆಳೆಸಲಿಕ್ಕಾಗಿ ಅವರದು ನಿರಂತರ ಪ್ರಯತ್ನ. ಅವರು ಕುಂದಾಪುರದ ರಸ್ತೆಗಳ ಬದಿಯಲ್ಲಿ ಸಾಲು ಮರಗಳನ್ನು ನೆಟ್ಟು ಬೆಳೆಸಿದವರು. ಕಿಂಗ್ ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಮತ್ತು ಬೋರ್ಡ್ ಹೈಸ್ಕೂಲಿನಲ್ಲಿ ಗ್ರಂಥಾಲಯ ಆರಂಭಿಸಿ ನಡೆಸಿದ ಅವರ ಬಗ್ಗೆ ವಿದ್ಯಾರ್ಥಿಗಳಿಗೆ ಬಹಳ ಗೌರವ. ಅವರೂ ನನ್ನ ಗುರುಗಳಲ್ಲ. ಆದರೂ ನನಗೆ ಅವರ ಬಗ್ಗೆ ಅಪಾರ ಗೌರವ.

ಮಂಗಳೂರಿನ ಸೈಂಟ್ ಎಲೋಸಿಯಸ್ ಕಾಲೇಜಿನ ಗಣಿತದ ಪ್ರೊಫೆಸರ್ ಕೃಷ್ಣಮೂರ್ತಿ ಅವರನ್ನು ಮರೆಯುವಂತೆಯೇ ಇಲ್ಲ. ಅವರೂ ನನ್ನ ಗುರುಗಳಲ್ಲ. ಅವರಿಗೆ ತಮ್ಮ ಕಾಲೇಜಿನಲ್ಲಿ ಮಾತ್ರವಲ್ಲ, ಮಂಗಳೂರಿನ ಬುದ್ಧಿಜೀವಿಗಳ ವಲಯದಲ್ಲಿಯೂ ಬಹಳ ಮನ್ನಣೆ.

ಸುರತ್ಕಲಿನ ಎಂ. ವಾಸುದೇವ ರಾವ್ ಮತ್ತು ಕೋಟದ ವಿವೇಕ ಹೈಸ್ಕೂಲಿನ ಕೆ. ರಾಮಚಂದ್ರ ಉಡುಪ ಅವರನ್ನು ನೆನಪು ಮಾಡಿಕೊಳ್ಳಲೇ ಬೇಕು. ದಕ್ಷಿಣಕನ್ನಡದ ಅಸಾಮಾನ್ಯ ಹೆಡ್‍ಮಾಸ್ಟರುಗಳ ಸಾಲಿಗೆ ಸೇರಿದ ಇವರಿಬ್ಬರೂ "ಶಿಕ್ಷಕರ ರಾಷ್ಟ್ರ ಪ್ರಶಸ್ತಿ" ಪಡೆದವರು.

ರಘುನಾಥ ರಾವ್ ಎಂಬ ಅಸಾಮಾನ್ಯ ಹೆಡ್‍ಮಾಸ್ಟರರಿಗೆ ಸಂಬಂಧಿಸಿದ ಘಟನೆಯೊಂದನ್ನು ನಾನಿಲ್ಲಿ ಬರೆಯಲೇ ಬೇಕು. (ಅವರು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಹೆಡ್‍ಮಾಸ್ಟರ್ ಆಗಿದ್ದವರು.) ಅದು ನಾನೊಮ್ಮೆ ಮಂಗಳೂರು ರೈಲು ನಿಲ್ದಾಣಕ್ಕೆ ಹೋಗಿದ್ದಾಗ ನಡೆದ ಘಟನೆ. ಆ ಸಂದರ್ಭದಲ್ಲಿ ವೈಸರಾಯರ ಎಕ್ಸಿಕ್ಯೂಟಿವ್ ಕೌನ್ಸಿಲಿನಲ್ಲಿ ರೈಲ್ವೇಯ ಆರ್ಥಿಕ ಆಯುಕ್ತರಾಗಿದ್ದ ಪಣಂಬೂರು ರಾಘವೇಂದ್ರ ರಾವ್ ಅವರು ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಪ್ಲಾಟ್‍ಫಾರಂನಲ್ಲಿ ನಿಂತಿದ್ದ ಅವರನ್ನು ಹಲವರು ಸುತ್ತುವರಿದಿದ್ದರು. ಮುದುಕರೊಬ್ಬರು ರಾಘವೇಂದ್ರ ರಾಯರ ಹತ್ತಿರ ಹೋಗಲು ಪ್ರಯತ್ನಿಸುತ್ತಿದ್ದರೆ, ಅಧಿಕಾರಿಗಳು ಅವರನ್ನು ತಡೆಯುತ್ತಿದ್ದರು. ಅದು ಹೇಗೋ ಮಾಡಿ ಆ ಮುದುಕರು ಜನಸಂದಣಿಯ ನಡುವೆ ಒಳಬಂದು ರಾಘವೇಂದ್ರ ರಾಯರನ್ನು ಹೆಸರು ಹಿಡಿದು ಕರೆದರು. ಕೋಟು ತೊಟ್ಟು ಶುಭ್ರವಸನಧಾರಿಗಳಾಗಿದ್ದ ಆ ಗಣ್ಯವ್ಯಕ್ತಿ ತತ್‍ಕ್ಷಣವೇ ಫ್ಲಾಟ್‍ಫಾರಂನ ನೆಲದಲ್ಲಿಯೇ ಆ ಮುದುಕರ ಪಾದಗಳಿಗೆರಗಿ ನಮಸ್ಕರಿಸಿದರು. ಅಲ್ಲಿ ನೆರೆದಿದ್ದ ಎಲ್ಲರಿಗೂ ನನಗೂ ಅಚ್ಚರಿ. ಅ ಮುದುಕರು ಬೇರಾರೂ ಅಲ್ಲ, ಅವರೇ ರಘುನಾಥ ರಾವ್. ಅವರು ರಾಘವೇಂದ್ರರಾಯರ ಶಾಲಾದಿನಗಳ ಗುರುಗಳು. ವಿದ್ಯಾರ್ಥಿಯು ತನ್ನ ವೃತ್ತಿಯಲ್ಲಿ ಎಷ್ಟೇ ಉನ್ನತ ಹಂತಕ್ಕೆ ಏರಿದರೂ, ಒಳ್ಳೆಯ ಗುರುಗಳು ಹೇಗೆ ವಿದ್ಯಾರ್ಥಿಯ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದಕ್ಕೆ ಈ ಘಟನೆ ಒಂದು ನಿದರ್ಶನ. ಗುರುಶಿಷ್ಯರ ಸಂಬಂಧಕ್ಕೆ ಇದೊಂದು ಮಾದರಿ.

ಅಧ್ಯಾಪನ ವೃತ್ತಿಯಲ್ಲಿ ಪ್ರಸಿದ್ಧರಾದ ಇನ್ನೂ ಹಲವರಿದ್ದಾರೆ. ಅವರಲ್ಲಿ ಆರ್. ಎನ್. ಭಿಡೆ ಮತ್ತು ಎಂ. ಶಿರಿ ಇವರು ತಮ್ಮ ಸಮಾಜ ಸೇವೆಗೆ ಹೆಸರಾದವರು. ಇವರಂತೆಯೇ ಹೆಸರಾದ  ಇನ್ನೊಬ್ಬರು ವಿಜ್ನಾನ ಶಿಕ್ಷಕ ಹೆಜಮಾಡಿ ಮುದ್ದಣ್ಣ  ಶೆಟ್ಟಿ. ಇಂತಹ ಇನ್ನೂ ಅನೇಕರು ಇರಬಹುದು. ಆದರೆ ನನಗೆ ಅವರ ಬಗ್ಗೆ ತಿಳಿದಿಲ್ಲ.

ಹೈಸ್ಕೂಲಿನಲ್ಲಿ ವಿಜ್ನಾನ ಶಿಕ್ಷಕರಾಗಿದ್ದ ಮುದ್ದಣ್ಣ ಶೆಟ್ಟಿ ಅನಂತರ ಸರಕಾರಿ ಸೇವೆ ಸೇರಿದರು. ನಾನು ಕೃಷಿಗೆ ತೊಡಗಿದಾಗ ಅವರು ಮಂಗಳೂರಿನ ಬಿಡಿಓ (ಬ್ಲಾಕ್ ಡೆವಲಪ್‍ಮೆಂಟ್ ಆಫೀಸರ್).   ವೈಜ್ನಾನಿಕ ಕೃಷಿಯ ವಿಷಯಗಳನ್ನು ವಿಜ್ನಾನದಂತೆಯೇ ವಿವರಿಸಿ, ಎಲ್ಲರಿಗೂ ಮನದಟ್ಟು ಮಾಡುತ್ತಿದ್ದರು. ಕೃಷಿಕರಿಗೆ ಅವು ಯಾಕೆ ಪ್ರಯೋಜನಕಾರಿ ಎಂದು ತಿಳಿಸುತ್ತಿದ್ದರು. ಭತ್ತದ ಕೃಷಿಯ ಜಪಾನೀ ಪದ್ಧತಿಯಲ್ಲಿ ಅವರು ಪರಿಣತರು. ಮಂಡಿಯ ತನಕ ಪ್ಯಾಂಟ್ ಮೇಲಕ್ಕೆ ಮಡಚಿ ಕೆಸರು ತುಂಬಿದ ಗದ್ದೆಗಿಳಿದು ಸಾಲಿನಲ್ಲಿ ಭತ್ತದ ಸಸಿ ನೆಡಲು ಸಹಕರಿಸುತ್ತಿದ್ದರು. ಹೆಸರುವಾಸಿ ಕೃಷಿಕರಾದ ಮಂಜೇಶ್ವರ ಫಿರ್ಕಾದ ಕುಣಿಬೈಲು ಸೀತಾರಾಮ ಶೆಟ್ಟಿ, ಮಣೇಲಿನ ವಿಟ್ಟಪ್ಪ ನಾಯಕ್, ನೀರುಮಾರ್ಗದ ಜೇಮ್ಸ್ ಡಿ’ಸೋಜ ಹಾಗೂ ಇತರ ಹಲವರು ಅವರ ಶಿಷ್ಯರು.

ಮಂಗಳೂರಿನ ಬಿಇಎಂ ಹೈಸ್ಕೂಲಿನ ವಿಜ್ನಾನ ಶಿಕ್ಷಕರಾಗಿದ್ದು ನಿವೃತ್ತರಾದವರು ಆರ್. ಎಂ. ಶಿರಿ. ಅನಂತರ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನ ಸೇರಿದರು. ಇವರೂ ವೈಜ್ನಾನಿಕ ಕೃಷಿ ಪದ್ದತಿಗಳನ್ನು  ಜನಪ್ರಿಯಗೊಳಿಸಲು ಶ್ರಮಿಸಿದರು.

ಆದರ್ಶ ಅಧ್ಯಾಪಕರೆಂದು ನೆನಪಾಗುವ ಮಗದೊಬ್ಬರು ದಿವಂಗತ ಆರ್. ಎನ್. ಭಿಡೆ. ತನ್ನ ನೇರನುಡಿಗಳಿಂದಾಗಿ ಅವರು ಕೆಲವರನ್ನು ನೋಯಿಸಿರಲೂ ಬಹುದು. ಉಜಿರೆಯ "ರತ್ನಮಾನಸ" ಕೃಷಿ ವಸತಿ ಶಾಲೆಗೆ ಇವರೇ ಪ್ರೇರಣೆ. ಆದರ್ಶ ಉದ್ದೇಶಗಳೊಂದಿಗೆ ಎರಡು ಶಾಲೆಗಳನ್ನು ತನ್ನ ಜೀವಿತಾವಧಿಯಲ್ಲಿ ಆರಂಭಿಸಿದರು. ಒಂದು ಮಾದರಿ ಕೃಷಿಫಾರ್ಮ್ ಸ್ಥಾಪಿಸಬೇಕೆಂದು ತನ್ನದೆಲ್ಲವನ್ನೂ ಧಾರೆಯೆರೆದರು; ಆದರೆ ಅದು ಯಶಸ್ವಿ ಅಗಲಿಲ್ಲ ಎಂಬುದು ನೋವಿನ ಸಂಗತಿ. ದಕ್ಷಿಣಕನ್ನಡದಲ್ಲಿ ಪರಿಸರ ಆಂದೋಲನಕ್ಕೂ ಅವರೇ ಪ್ರೇರಣೆ. ನಮ್ಮ ಜಿಲ್ಲೆಯಲ್ಲಿ ತೋರಿಕೆಯ ಗಾಂಧೀವಾದಿಗಳು ಹಲವರಿದ್ದಾರೆ; ಆರ್. ಎನ್. ಭಿಡೆ ಅಂಥವರಲ್ಲ. ಅವರೊಬ್ಬ ಪರಿಪೂರ್ಣ ಗಾಂಧಿವಾದಿ ಎನ್ನಬಹುದು. ಎಲ್ಲರೂ ಮೆಚ್ಚಿ ಗೌರವಿಸುವ ವ್ಯಕ್ತಿಯಾಗಿ ಅವರು ಬದುಕಿ ಬಾಳಿದರು.

ಇವರು ಯಾರೂ ನನಗೆ ಶಾಲೆಯಲ್ಲಿ ಪಾಠ ಕಲಿಸಲಿಲ್ಲ. ಆದರೂ ಈ ಹಿರಿಯರಿಂದ ನಾನು ಜೀವನದ ಪಾಠಗಳನ್ನು ಕಲಿತೆ. ಈಗಿನ ಯುವಸಮುದಾಯದವರು ಇವರೆಲ್ಲರಿಂದ ಜೀವನದ ಮೌಲ್ಯಗಳನ್ನು ತಿಳಿಯುವಂತಾಗಲಿ ಎಂಬ ಆಶಯ ನನ್ನದು.

Comments