“ವಿಶ್ವಕೋಶ ಬ್ರಿಟಾನಿಕಾ” ಇನ್ನಿಲ್ಲ

“ವಿಶ್ವಕೋಶ ಬ್ರಿಟಾನಿಕಾ” ಇನ್ನಿಲ್ಲ

 

“ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ” ಇನ್ನಿಲ್ಲ. ೨೪೪ ವರ್ಷಗಳಿಂದ ಸತತವಾಗಿ ಪುಸ್ತಕ ಪ್ರಿಯರ ಫೇವರಿಟ್ ಆಗಿದ್ದ ಈ ವಿಶ್ವಕೋಶ ಆನ್ ಲೈನ್ ಆವೃತ್ತಿಯಾಗಿ ಮಾತ್ರ ಲಭ್ಯ. ನಮಗೆ ಬೇಕಾದ ವಿಷಯಗಳ, ಕುತೂಹಲದ ಬಗ್ಗೆ ಚಿತ್ರಗಳ ಸಮೇತ ವಿವರ ನೀಡುತ್ತಿದ್ದ ಈ ಗ್ರಂಥಶ್ರೇಣಿ ಆನ್ ಲೈನ್ ಧಾಳಿಗೆ ತುತ್ತಾಗಿ ಕೊನೆಯುಸಿರೆಳೆಯಿತು. ಈ ವಿಶ್ವ ಕೋಶ ವನ್ನು  ಸಾಮಾನ್ಯವಾಗಿ ಗ್ರಂಥಾಲಯಗಳಲ್ಲಿ ಅದಕ್ಕೆಂದೇ ಮಾಡಿಸಿದ ಗಾಜಿನ ಅಥವಾ ಮರದ ಬಾಕ್ಸ್ ನಲ್ಲಿ ಇಟ್ಟಿರುತ್ತಾರೆ. ಈ ಪುಸ್ತಕಗಳು ದುಬಾರಿ, ಏಕೆಂದರೆ ೩೨ ಗ್ರಂಥಗಳ ಈ ಶ್ರೇಣಿ ಆಧುನಿಕ ಪ್ರಿಂಟ್ ತಂತ್ರಜ್ಞಾನ ಉಪಯೋಗಿಸಿ ಕಲಾತ್ಮಕವಾಗಿಯೂ, ಸುಂದರವಾಗಿಯೂ ಓದುಗರ ಕೈ ಸೇರುತ್ತದೆ. ೧೭೬೮ ರಲ್ಲಿ ಬ್ರಿಟನ್ ದೇಶದ  edinburgh (ಉಚ್ಛಾರ, ಎಡಿನ್ ಬ್ರ ) ನಿಂದ ಪ್ರಕಾಶಿತವಾಗಲು ಆರಂಭಗೊಂಡ ಈ ವಿಶ್ವಕೋಶ ೨೪೪ ವರ್ಷಗಳ ಕಾಲ ವಿಶ್ವದಾದ್ಯಂತ ಮನ್ನಣೆ ಗಳಿಸಿಕೊಂಡಿತ್ತು. ನಮಗೆ ಸಿಗುವ ಸುದ್ದಿ ನಿಖರವಾದ್ದು ಎಂದು ಖಾತ್ರಿಯಾಗಬೇಕಿದ್ದರೆ ಅದು ಬೀ ಬೀ ಸೀ ಬಾಯಿಂದ ಬರಬೇಕು. ಅಷ್ಟೊಂದು ನಂಬುಗೆ ಇಟ್ಟುಕೊಂಡಿದ್ದ ಮಾಧ್ಯಮ ಬೀ ಬೀ ಸೀ. ಅದೇ ರೀತಿ ಈ ವಿಶ್ವಕೋಶದ ಬಗ್ಗೆಯೂ ಹೇಳಬಹುದು. ಕಲೆಯ ಬಗ್ಗೆಯಾಗಲೀ, ವೈಜ್ಞಾನಿಕ ವಿಷಯವೇ ಆಗಲೀ ಎಲ್ಲದಕ್ಕೂ “ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ” ದ್ದೇ ಕೊನೆಯ ಮಾತು. 
‘ವೆಬ್’ ಅನ್ನೋ ಹೆಬ್ಬಾವು ನಾವು ಪ್ರೀತಿಯಿಂದ ಸಾಕಿ ಕೊಂಡಿದ್ದವುಗಳನ್ನು ನುಂಗುತ್ತಾ ಬರುತ್ತಿದೆ. age old ಪೋಸ್ಟ್ ಹೋಗಿ “ಇ ಮೇಲ್”, ಜನರನ್ನು ಮುಖಾಮುಖಿ ಭೆಟ್ಟಿ ಯಾಗುತ್ತಿದ್ದ ಜಮಾನ ಹೋಗಿ ಫೇಸ್ ಬುಕ್, ಟ್ವಿಟರ್ ಮೂಲಕ ನಮ್ಮ ಸ್ಟೇಟಸ್ ಗಳ ವರದಿ, ಪತ್ರಿಕೆಗಳು ನಿಧಾನವಾಗಿ ಮಾಯವಾಗಿ ಆನ್ ಲೈನ್ ಆವೃತ್ತಿಗಳು. ಪುಸ್ತಕಗಳು ಮಾಯವಾಗಿ “ಇ ಪುಸ್ತಕ” ಗಳು...ಒಂದೇ, ಎರಡೇ? ಜೇಡನ ಮಾಯಾಜಾಲಕ್ಕೆ ಜನ ಸಿಲುಕಿ ಕೊಂಡರು. ಅತೀ ವೇಗದಲ್ಲಿ, ಸುಲಭವಾಗಿ ವಿಷಯ ತಿಳಿಯಲು ವೆಬ್ ಲೋಕ ಅನುವು ಮಾಡಿ ಕೊಟ್ಟಿತು.  ಆನ್ಲೈನ್ ಪ್ರಪಂಚದಲ್ಲಿ ನಮಗೆ ಬೇಕಾದ ವಿಷಯಗಳ ಬಗ್ಗೆ ತಿಳಿಯಲು ಯಾವುದೇ ದೊಡ್ಡ ದೊಡ್ಡ ಗ್ರಂಥದಲ್ಲಿ ಮುಖ ಹುದುಗಿಸಬೇಕಿಲ್ಲ. ಕೇವಲ ನಮ್ಮ ಬೆರಳ ತುದಿಗಳನ್ನು ಕೀಲಿ ಮಣೆ ಮೇಲೆ ಸವರಿದರೆ ಸಾಕು, ಅಲ್ಲಾವುದ್ದೀನನ ಮಾಂತ್ರಿಕ ದೀಪ ನಾಚಬೇಕು ಆ ರೀತಿ ಅನಾವರಣ ಗೊಳ್ಳುತ್ತದೆ ನಾವು ಬಯಸಿದ್ದು. ಇನ್ಸ್ಟಂಟ್ ಫುಡ್ ನಂತೆ ನಿಮಗೆ ವಿಷಯಗಳು ,ಮಾಹಿತಿಗಳು ಲಭ್ಯ; ಕೃಪೆ, ವಿಕಿಪೀಡಿಯಾ, ವೆಬ್ ಸೈಟುಗಳು, ಬ್ಲಾಗುಗಳು. ಇವೆಲ್ಲವೂ ಬೆರಳ ತುದಿಯ ಮೇಲೆ ನಿಂತಿರುವಾಗ ಯಾರಿಗೆ ಬೇಕು ಕಿಸೆಯೂ, ಕೈಗಳೂ ಹೊರಲಾರದ ಪುಸ್ತಕಗಳು?
ಪ್ರಪಂಚ ಬಹಳ ಫಾಸ್ಟ್ ಆಗಿ ಓಡುತ್ತಿದೆ. ನಾವ್ಯಾವುದನ್ನು ಹೊಸತು ಎಂದು ನಮ್ಮದನ್ನಾಗಿಸಿ ಕೊಳ್ಳುತ್ತೇವೆಯೋ ಅವು ಅಷ್ಟೇ ಫಾಸ್ಟ್ ಆಗಿ outdated ಆಗುತ್ತಿವೆ. ಆಂಟಿಕ್ ಆಗಿ ನಮ್ಮೊಂದಿಗೆ ಇರುವ ಕೆಲವು ವಸ್ತುಗಳಲ್ಲಿ ಬ್ರಿಟಾನಿಕ ವಿಶ್ವಕೋಶವೂ ಇದ್ದರೆ ಎಷ್ಟು ಚೆಂದ ಅಲ್ಲವೇ? ಭಾರತದಲ್ಲಿ ಸುಮಾರು ೬೫,೦೦೦ ರೂಪಾಯಿ ಗಳಿಗೆ ಈ ವಿಶ್ವಕೋಶ ಸಿಗುತ್ತದೆ. ನಾನು  ಗಂಭೀರವಾಗಿ ಯೋಚಿಸುತ್ತಿದ್ದೇನೆ ಒಂದನ್ನು ‘ಅಪ್ನಾ’ಯಿಸಲು. ಬ್ಯಾಂಕ್ ಏನಾದರೂ ಸಾಲ ಗೀಲ ಕೊಡಬಹುದೇ ? ಬಡ್ಡಿರಹಿತ ಸಾಲವನ್ನ ? ಅಂಥಾ ಸೌಲಭ್ಯವನ್ನೆನಾದರೂ ಬ್ಯಾಂಕೋ, ಸರಕಾರವೋ ಮಾಡಿದ್ದರೆ ನನಗೆ ‘ಜಾನ್ಕಾರಿ’ ಕೊಡಿ.
೧೮ ನೆ ಶತಮಾನದ ಒಂದು ಕನಸು, ೨೧ ನೆ ಶತಮಾನದಲ್ಲಿ ಅಂತ್ಯ. ಕಂಪ್ಯೂಟರ್ ಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ಸಂಪ್ರದಾಯಿಕ ಕಾಗದದ ಕಥೆ ಮುಗಿಯಿತು, ಪೇಪರ್ ಲೆಸ್ ಯುಗ ಆರಂಭ ಎಂದು ಜನ ಪುಳಕಿತರಾದರು. ಕಾಗದದ ಪುಸ್ತಕ, ಎಷ್ಟೊಂದು selfless ನೋಡಿ. ಬ್ಯಾಟರಿ ಕೇಳೋಲ್ಲ, ವಿದ್ಯುಚ್ಛಕ್ತಿ ಯನ್ನು ಬೇಡೋಲ್ಲ, ಚಾರ್ಜರ್ ಬಯಸೋಲ್ಲ, ನೇಣು ಹಾಕಿ ಕೊಳ್ಳೋಲ್ಲ (hang), ಬಿದ್ದರೆ ಕಾಲು ಮುರಿದುಕೊಂಡು ಮೂಲೆ ಸೇರೋಲ್ಲ, ಆದರೂ ಇದನ್ನು ಮನುಷ್ಯ ನಿರ್ದಯವಾಗಿ ಮೂಲೆ ಗುಂಪು ಮಾಡುವತ್ತ ದಾಪುಗಾಲು ಹಾಕುತ್ತಿದ್ದಾನೆ.     
ಚಿತ್ರ ಕೃಪೆ: https://picasaweb.google.com/

 

Rating
No votes yet

Comments