267 ನೇ ನಂಬರಿನ ಕೋಣೆ

267 ನೇ ನಂಬರಿನ ಕೋಣೆ

        

     ಅದೊಂದು ಕಿರಿದಾದಕೋಣೆ, ಕೋಣೆಯ ಸುತ್ತಲೂ ಗಾಡಕತ್ತಲು ಕವಿದಿದೆ,. ಮಧ್ಯ ಭಾಗದಲ್ಲೊಂದು ಬೆಳಕು ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿದೆ. ಕೋಣೆಯ ನಾಲ್ಕೂ ಮೂಲೆಗಳಲ್ಲಿ ಯಾವುದೇ ಧನಿಯಿಲ್ಲ ತುಂಬಾ ನಿಶ್ಚಬ್ಧ ನಿಶ್ಚಲತೆ ಆವರಿಸಿದೆ. ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ?. ಗೋಡೆಗೆ ಕೈ ತಾಗಿಸುತ್ತೇನೆ, ತುಂಬಾ ಒರಟಾಗಿದೆ, ಅಲ್ಲಲ್ಲಿ ಕೆಂಪು ಕಲೆಗಳ ಗುರುತುಗಳಿವೆ. ಆ ಮಂದ ಬೆಳಕಿನಲ್ಲಿ ಗಾಯದ ಗುರುತುಗಳಂತೆ ಕಾಣುತ್ತವೆ. ಅವು ಕೆಂಪು ಕಲೆಯ ಗುರುತುಗಳೇ ಆದರೆ ಅವು ಇನ್ನೂ ಅಸಿಯಾಗಿ ಕೈಗೆ ಅಂಟುವ ಸ್ಥತಿಯಲ್ಲಿವೆ. ಬಹುಷಃ ಯಾರದೋ ರಕ್ತದ ಕಲೆಗಳಿರಬೇಕು. ಮುಂದೊಂದು ಭಾಗದ ಅಡಿಯಲ್ಲಿ ಎಂಥದ್ದೋ ಕಾಗದದ ಚೂರುಗಳು ಕೈತಾಗುತ್ತಿವೆ. ಇನ್ನೂ ಸ್ವಲ್ಪ ಹುಡುಕಿದಾಗ ಕಬ್ಬಿಣದ ಬಾಗಿಲೊಂದು ಸ್ವರ್ಷಿಸುತ್ತದೆ. ತುಂಬಾ ಉದ್ದವಾಗಿದೆ ಅದರ ಸರಳುಗಳುಗಳು. ಬಲಿಷ್ಟವಾದ ಕಬ್ಬಿಣದ ಬಾಗಿಲು. ಏನೂ ಅರ್ಥವಾದ ಸ್ಥತಿಯಿಂದ ನೋಡುತ್ತಿದ್ದೇನೆ. ಇಲ್ಲಿ ಕಬ್ಬಿಣದ ಬಾಗಿಲಾಕಿದೆ ಯಾವುದೀ ಕೋಣೆ ?

    ಇಂಥ ಕೋಣೆಯನ್ನು ನನ್ನ ಜೀವಮಾನದಲ್ಲೇ ಎಲ್ಲೂ ನೋಡಲಿಲ್ಲವಲ್ಲ. ಇದಕ್ಕೆ ಉತ್ತರಿಸಲು ನನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ. ನನ್ನ ಕೋಣೆಯ ತುಂಬಾ ಪುಸ್ತಕಗಳು ತುಂಬಿರುತ್ತಿದ್ದವು, ಕಬ್ಬಿಣದ ಕುರ್ಚಿಯೊಂದಿರಬೇಕಿತ್ತು. ಅದರ ಪಕ್ಕದಲ್ಲಿ ಮರದ ಪೆಟ್ಟಿಗೆ. ಅದರ ಕೊನೆಯಲ್ಲೊಂದು ಗಾಜಿನ ಶೀಷೆ, ಅಂದರೆ ನನ್ನ ಲೇಖನಿಗೆ ಮಸಿಯನ್ನು ತುಂಬಿಸುತ್ತಿದ್ದ ಶೀಷೆ. ಮೇಲೊಂದು ಸೀಮೆ ಎಣ್ಣೆಯ ದೀಪ. ಕರೆಂಟ್ ಇಲ್ಲಾದಾಗ ಅಚ್ಚುತ್ತಿದ್ದ ದೀಪ. ಗೋಡೆಗೆ ತಗುಲಿಸಿದ್ದ ಕ್ಯಾಲೆಂಡರ್ರು. ಮಧ್ಯಭಾಗದಲ್ಲಿ ಹಳೆಯ ಎರಡು ಮಣ್ಣಿನ ಕಪಾಟುಗಳು, ಅದರೊಳಗೆ ಮುಚ್ಚಿಟ್ಟಿದ್ದ ಚಿಲ್ಲರೆ ನಾಣ್ಯಗಳು. ಕಥೆ ಕವನ ಬರೆದಿಡುತ್ತಿದ್ದ ಹಾಳೆಗಳು. ಯಾವೂದೂ ಸಹ ಕಾಣುತ್ತಿಲ್ಲ. ನನ್ನ ಕೋಣೆಯಲ್ಲಿ ಮಂದವಾಗಿ ಬೆಳಗುತ್ತಿದ್ದ ಹೈಮಾಸ್ ದೀಪ, ರೋಸ್ ಹುಡ್ ಮರದಿಂದ ತಯಾರಿಸಿದ್ದ ಮರದ ಬಾಗಿಲು ಯಾವುದೂ ಇಲ್ಲ.ಈ ಸ್ಥಳ ನನಗೆ ತೀರ ಹೊಸದಂತಿದೆ. ಅಂದರೆ ನಾನು ಓದುತ್ತಿದ್ದ (julius fuchik) “ಜ್ಯೂಲಿಯಸ್ ಫ್ಯೂಚಿಕ್ ”ರ ಕಥೆಯನ್ನು ನೆನಪಿಸುವ ಕೋಣೆಯ ಹಾಗೆ. ಅವರ 267 ನೇ ನಂಬರಿನ ಖಾರಾಗೃಹದ ಕೋಣೆಯಯಂತೆ. ಹೌದು ಅದು ತುಂಬಾ ಭಯಾನಕ ಕೋಣೆ. ಜೂಲಿಯಸ್ಸರನ್ನು ಕ್ಷಣ ಕ್ಷಣವೂ ಹಿಂಸಿಸಿ ವಧೆಮಾಡಿದ ಕೋಣೆ. ಖಂಡಿತ ಅದು ಸಾವಿನ ಕೋಣೆ. ಅವರ ಪುಸ್ತಕದಲ್ಲೇ ಓದಿದ್ದೇನೆ. ಅದು 267 ನೇ ನಂಬರಿನ ಕೋಣೆ. ಜೂಲಿಯಸ್ಸರು ತಮ್ಮ ಜೀವನದ ಕಟ್ಟ ಕಡೆಯ ಕ್ಷಣಗಳನ್ನು ಆ ಕೋಣೆಯಲ್ಲೇ ಕಳೆದಿದ್ದರು. ತುಂಬಾ ದಯಾನೀಯ ಸ್ಥಿತಿಯಲ್ಲೂ. ಅವರು ಸಾವನ್ನೂ ಸಹ ಸರಳವಾಗಿ ತೆಗೆದುಕೊಂಡಂತ ಮಹಾತ್ಮರು. ಅವರ ನೋವು – ಕಷ್ಟಗಳು ಯಾವುದನ್ನೂ ಲೆಕ್ಕಿಸದೆ. ಪಾನ್ ಕ್ರಾಟ್ ಜೈಲಿನಲ್ಲಿ “ಕೊನ್ ಲಿಕ್ಸಿ” ಎಂಬ ಕಾವಲುಗಾರನ ಸಹಾಯದೊಂದಿಗೆ ರಹಸ್ಯವಾಗಿ ತರಿಸಿಕೊಂಡ “ಪೆನ್ಸಿಲ್ ಮತ್ತು ಕಾಗದ”ದ ಚೂರುಗಳಿಂದ ನಾಜಿ ಜೈಲೆಂಬ ಪಿಶಾಚ ಗೃಹದಲ್ಲಿನ ಕಂಡುಂಡ ಪ್ರತ್ಯಕ್ಷ ಅನುಭವದ ದಾಖಲು. ತನ್ನ ಕಟ್ಟ ಕಡೆಯ ದಿನಗಳ ಯಾತನಾ ದಿನಚರಿಯ ಟಿಪ್ಪಣಿಗಳ ಸಂಗ್ರಹ. ತನ್ನ ಪತ್ನಿಯಾದ ಆಗಸ್ಟಿನಾ ಫ್ಯೂಚಿಕ್ ಪ್ರಕಟಿಸಿದ್ದ ಪುಸ್ತಕ. ಹೌದು ಅದೇ ಪುಸ್ತಕದಲ್ಲಿ ಬರುವಂತ ಕೋಣೆ. ಅದರಲ್ಲಿ ಕೆಲವು ಘಟನೆಗಳು ನನ್ನ ಕಣ್ಣಮುಂದೆ ಸುಳಿದಾಡಿತ್ತವೆ ಜೂಲಿಯಸ್ ಫ್ಯೂಚಿಕ್ ರು ತಮ್ಮ ಸಮಗ್ರ ಬದುಕನ್ನೇ ಸಮರ್ಪಿಸಿಕೊಂಡ ಮಹಾ ಕೃತಿಯ ಕೊನೆಯ ಭಾಗದ ಅಧ್ಯಾಯವದು. ಆ ಪುಸ್ತಕವನ್ನು ಓದುತ್ತಿದ್ದ ಪ್ರತಿ ಬಾರಿಯೂ ನನ್ನ ಕಣ್ಣುಗಳು ಹನಿಗೂಡುತ್ತವೆ. ಕಾರಣ ಅವರನ್ನು ಅಷ್ಟೊಂದು ದಾರುಣ ಹಿಂಸೆಗೆ ಗುರಿಪಡಿಸಿ, ಪ್ರತಿಬಾರಿಯೂ ಚಿತ್ರ ವಧೆಮಾಡಿ, ಪ್ರಜ್ಞಾಶೂನ್ಯ ಸ್ಥಿತಿಯ ತನಕ ಬಡಿದು, ಕೊನೆಗೆ ಸಾಯಿಸಿಯೇ ಬಿಟ್ಟದ್ದು. ಆ ಘನ ಘೋರ ಚಿತ್ರವಧೆಯನ್ನು ನೆನೆಪಿಸಿಕೊಂಡರೆ ಹೃದಯ ತುಂಬಿಬರುತ್ತದೆ. ಯಾವುದೇ ಎದುರಾಳಿಗಳಿಗೂ ಅಂಥ ಗತಿ ಬರಬಾರದೆಂದುಕೊಳ್ಳುತ್ತೇನೆ. ನಿಮಗೆ ಗೊತ್ತಿಲ್ಲವೇನೋ!.

    ಜ್ಯೂಲಿಯಸ್ ಫ್ಯೂಚಿಕ್ ಕ್ಕರು ಪ್ರಾಗ್ ನ ಸ್ಮಿಚಾವ್ ಎಂಬ ಊರಿನವರು. ಚೆಕೋಸ್ಲೊವಾಕ್ ಸಾಹಿತ್ಯದಲ್ಲಿ ಉನ್ನತ ದರ್ಜೆಯ ಕೇಖಕರು. ಶ್ರೇಷ್ಠ ವಿಚಾರವಾದಿ – ಪತ್ರಕರ್ತ ಮತ್ತು ಸಣ್ಣ ಕಥೆಗಾರರೂ ಕೂಡ. ಎಲ್ಲಕ್ಕೂ ಮಿಗಿಲಾಗಿ ಇವರೊಬ್ಬ ಹೋರಾಟಗಾರರು. ನಾಟ್ಸಿಗಳು ಆಕ್ರಮಿಸಿಕೊಂಡ ದೇಶವನ್ನು ಶತ್ರುಗಳ ಕೈಯಿಂದ ಪಾರುಮಾಡಲು ನಡೆಸಿದ ಕ್ರಾಂತಿಯಲ್ಲಿ ಇವರದು ಮಹತ್ತರ ಪಾತ್ರವಿತ್ತು. ಅವರನ್ನು ಫಾಸಿಸ್ಟ್ ನರರಾಕ್ಷಸರು ಬರ್ಲಿನ್ನಿನ ಜೈಲಿನಲ್ಲಿ ದೀರ್ಘಾವಧಿ ಚಿತ್ರಹಿಂಸೆಗೆ ಒಳಪಡಿಸಿದಾಗ ಅವರ ಚಿತ್ರಹಿಂಸೆಯನ್ನೂ ಲೆಕ್ಕಿಸದೆ ಹೀಗೆ ಹೇಳಿಕೊಳ್ಳುತ್ತಾರೆ, “{ನನಗೆ ಬದುಕಿನ ಮೇಲೆ ಬಹಳ ಪ್ರೀತಿಯಿತ್ತು. ಅದರ ಚಲುವಿಗೆ ಮನಸೋತು ನಾನು ಹೋರಾಟದ ಕಣಕ್ಕೆ ಇಳಿದೆ. ಓ ಜನತೆಯೇ! ನಾನು ನಿಮ್ಮನ್ನು ಪ್ರೀತಿಸಿದೆ. ನೀವದನ್ನು ಸ್ವೀಕರಿಸಿ ಪ್ರತಿಯಾಗಿ ನನ್ನನ್ನು ಪ್ರೀತಿಸಿದಾಗ ನನಗೆ ಸುಖವೆನಿಸಿತು. ನೀವು ನನ್ನ ಬಗ್ಗೆ ತಪ್ಪು ಭಾವಿಸಿದಾಗ ನನಗೆ ಕೆಡುಕೆನಿಸಿತು}” ಇವರ ಈ ಮಾತುಗಳಲ್ಲಿ ದೇಶ ಪ್ರೇಮವಿದೆ. ಪ್ರಜಾ ಪ್ರೇಮವನ್ನು ನಾವು ಅವಲೋಕಿಸಬಹುದು. 1943 ನೇ ಸೆಪ್ಟೆಂಬರ್ ತಿಂಗಳಲ್ಲಿ ಅವರನ್ನು ನಾಟ್ಸಿಗಳು ಬರ್ಬರವಾಗಿ ಕೊಂದು ಸಾಯಿಸುತ್ತಾರೆ. ಒಂದು ಹಂತದಲ್ಲಿ ಅವರ ಸಾವು ತೀರ ದಯಾನೀಯ. ಅದು ಮುಗಿದುಹೋದ ಅಧ್ಯಾಯ. ವಾಸ್ಥವದ ಸ್ಥತಿಗೆ ಬಂದಾಗ ನಾನ್ಯಾಕೆ ಈ ಕೋಣೆಯಲ್ಲಿದ್ದೇನೆ. ಈ ಕೋಣೆ ಯಾವುದು ನಾನೆಲ್ಲಿದೇನೆ ಹಲವು ಪ್ರಶ್ನೆಗಳನ್ನು ನನ್ನನ್ನು ಸುತ್ತುವರೆದು ನಿಂತಿವೆ ?

    ಏಳು ಹೆಜ್ಜೆ ಮುಂದೆ ಗೋಡೆಯ ಪಕ್ಕದಲ್ಲಿ ಮಡಿಸುವ ಒಂದು ಮಲಗುದಾಣವಿದೆ, ಇನ್ನೊಂದೆಡೆ ಮಂಕುಹಿಡಿದ ಕಂದು ಕಪಾಟು, ಅದರಲ್ಲೊಂದು ಮಣ್ಣಿನ ಪ್ರಾತ್ರೆ. ಹೌದು ಅದು ನನಗೆ ಗೊತ್ತಾಗುತ್ತಿದೆ. ಬಲ ಭಾಗದ ಗೋಡೆಯ ಬಳಿ ಒಂದು ಹಳೆಯ ತುಕ್ಕುಹಿಡಿದ ಮಂಚವಿದೆ. ತನ್ನ ಅಸ್ಥಿತ್ವವನ್ನೇ ಕಳೆದುಕೊಂಡಂತೆ ತೋರುತ್ತಿದೆ. ನನ್ನ ಮೇಲೊಂದು ಕಿಟಕಿ, ಕೆಳಗೆ ಹುಲ್ಲು ಹಾಸಿಗೆ. ಅದರ ಮೇಲೆ ನಿಶ್ಚಲವಾಗಿ ಕೂತಿದ್ದೇನೆ. ಆ ಹಾಸಿಗೆ ನನ್ನನ್ನು ಯಾವುದೋ ಕಥೆ ನೆನಪಿಸಿದಂತೆ ಮೆದುವಾಗಿ ಚರ್ಮವನ್ನು ಒತ್ತುತ್ತಿದೆ. ಕೈಗೆಟಕುವ ಅಂತರದಲ್ಲೊಂದು ಸಣ್ಣ ನೀರಿನ ಹೂಜಿ. ಅಂದರೆ ಜೂಲಿಯಸ್ಸರನ್ನು ಬಂಧಿಸಿಟ್ಟ ಕೋಣೆಯಲ್ಲಿ ಇದ್ದಂತ ಹೂಜಿಯೇ ಅದು, ಇಲ್ಲು ಇದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಆ ಮಣ್ಣ ಹೂಜಿಯಿಂದಲೇ ನೀರು ಕುಡಿಯುತ್ತಿದ್ದರು. ಕಂದು ಬಣ್ಣದ ಗೋಡೆ ಬಣ್ಣವನ್ನು ಬಳಿದು ವರ್ಷಗಳೇ ಕಳೆದುಹೋಗಿರಬಹುದು. ಖಂಡಿತ ಇದು ಸೆರೆಮೆನೆಯೇ !!! ನನ್ನ ಎಡಭಾಗದಲ್ಲಿ ಒಂದು ಕುಬ್ಜಗೋಡೆ ಕಾಣುತ್ತಿದೆ. ಅದರ ಒಳಗಿಂದ ಅಸಹ್ಯಕರವಾದ ವಾಸನೆ ಮೂಗಿಗೆ ಅಪ್ಪಳಿಸುತ್ತೆ. ಅದು ಶೌಚಗೃಹ. ಎಲ್ಲವೂ ಜೂಲಿಯಸ್ ರ ಕಾರಗೃಹವನ್ನು ನೆನಪಿಸುತ್ತಿದೆ. ಅದೇ ಸ್ಥಳವಿದು, ಹೌದು ಅದೇ ಸ್ಥಳ !. ನಾನಂತೂ ಯಾವ ತಪ್ಪನ್ನೂ ಮಾಡಿಲ್ಲ ಜೂಲಿಯಸ್ ಸ್ಸರ ಕಥೆಯನ್ನೊಂದು ಓದಿದ್ದನ್ನು ಬಿಟ್ಟು ಮತ್ಯಾವ ತಪ್ಪನ್ನೂ ಮಾಡಲಿಲ್ಲ. ಅದು ಸಹ ಪಾಪವಾಯಿತ ಫಾಸಿಸ್ಟ್ ನರರಾಕ್ಷಸರ ಪಾಲಿಗೆ ?

    ಕಬ್ಬಿಣದ ಬಾಗಿಲನ್ನು ಇಣುಕಿನೋಡುತ್ತೇನೆ ಹೊರಭಾಗದಿಂದ ಯಾವುದೋ ನೆರಳು ನನ್ನತ್ತ ಸುಳಿಯುತ್ತಿದೆ. ಬಹುಷಃ ಅದು ಈ ಜೈಲಿನ ಅಧಿಕಾರಿಯ ನೆರಳಿರಬೇಕು. ವಿಧಿಯಿಲ್ಲ ಅವರನ್ನೇ ಕೇಳಬೇಕು. “ನನ್ನನ್ಯಾಕೆ ಬಂಧಿಸಿಟ್ಟೀದೀರಿ ಸ್ವಾಮಿ” “ನಾನ್ಯಾವ ತಪ್ಪು ಮಾಡಿದ್ದೇನೆ” ಎಂದು ದಬಾಯಿಸಬೇಕು. ಯಾವುದೇ ಕಾರಣಕ್ಕೂ ಈ ಕೋಣೆಯಲ್ಲಿ ನಾನಿರಲಾರೆ. ಕಾರಣವಿಲ್ಲದೆ ನನ್ನನ್ನು ಬಂಧಿಸಿ ಈ ಕೊಠಡಿಯಲ್ಲಿಡಲಾಗಿದೆ ಅಂಥಲೂ ತಿಳಿಸಬೇಕು. ಹೌದು ಆ ನೆರಳು ನನ್ನತ್ತ ಬರುತ್ತಿದೆ ಬರಲಿ. ಅಯ್ಯೋ ಅದು ಬರಿ ನೆರಳು ಅದಕ್ಕೆ ಹೊಂದಿಕೊಂಡ ದೇಹವೆಲ್ಲಿ ?. ದೇಹವಿಲ್ಲದ ನೆರಳೇ !! ಪರಮಾಶ್ಚರ್ಯ !!. ಅದು ನನ್ನನ್ನು ದಾಟಿ ಮುಂದೆ ಸಾಗುತ್ತಿದೆ. ಅದು ಜೂಲಿಯಸ್ಸರ ಮುಖವನ್ನು ಹೋಲುತ್ತಿದೆ. ಅಂದರೆ ಅದೇ ನೆರಳು. ಖಂಡಿತ ಅವರೇ, “ಜೂಲಿಯಸ್ಸರು” ಬಹುಷಃ ನನ್ನನ್ನು ಬಿಡಿಸಲು ಬಂದಿರಬಹುದು. ಈ ಸರಳುಗಳ ಮಧ್ಯ ನನ್ನ ಮುಖ ಅವರಿಗೆ ಕಾಣುತ್ತಿಲ್ಲವೇನೋ ?. ಅವರನ್ನು ತಡೆಯಬೇಕು. ಹೌದು ಅವರನ್ನು ತಡಿಯಲೇ ಬೇಕು… ಆದರೆ ಅವರು ನಿಲ್ಲುತ್ತಲೇ ಇಲ್ಲವಲ್ಲ.  ಕೂಗೋಣವೆಂದರೆ ಗಂಟಲಿಂದ ಮಾತೇ ಒರ ಬರುತ್ತಿಲ್ಲ. ಮತ್ತಷ್ಟು ದೂರ ಸಾಗಿಹೋಗುತ್ತಿದ್ದಾರೆ. ಕೂಗಲೇಬೇಕು ಜೂಲಿಯಸ್ಸರೇ,,,,,,, !!!! ನಿಲ್ಲಿ.,,,,,,,, ನಿಲ್ಲಿ,,,,,,,,!!!! ನನ್ನತ್ತ ಮುಖಮಾಡಿ !!. ನಾನು ಈ 267ನೇ ನಂಬರಿನ ಕೋಣೆಯಲ್ಲಿದ್ದೇನೆ. ನನ್ನನ್ನು ವಿನಾಕಾರಣ ಈ ಕೋಣೆಯಲ್ಲಿ ಬಂಧಿಸಿಡಲಾಗಿದೆ. ಧಯವಿಟ್ಟು ರಕ್ಷಿಸಿ. ಜೂಲಿಯಸ್ಸರೇ……!! ನಿಲ್ಲಿ……!! ಹೋಗದಿರಿ….. ನನಗೆ ಭಯವಾಗುತ್ತಿದೆ !. ನಾನೂ ನಿಮ್ಮೊಂದಿಗೆ ಬರುತ್ತೇನೆ. ಅಯ್ಯೋ ದೇವರೇ ಅವರು ನಿಲ್ಲುತ್ತಿಲೇ ಇಲ್ಲವಲ್ಲ. ಜೂಲಿಯಸ್ಸರೇ….. ನನ್ನ ನಾಲಿಗೆ ಹರಿದುಹೋಗುವಂತೆ ಕಿರುಚುತ್ತಿದ್ದೇನೆ !!. ಮತ್ತಷ್ಟು ಗಟ್ಟಿಯಾಗಿ… ಅಮ್ಮ ನನ್ನನ್ನು ತಟ್ಟಿ ಎಬ್ಬಿಸುವವರೆಗೂ ಕೂಗಿಕೊಳ್ಳುತ್ತಲೇ ಇದ್ದೇನೆ.

    

    ಚಿತ್ರಕೃಪೆ.ಎಚ್.ಕೆ ರಾಮಚಂದ್ರಮೂರ್ತಿ

    

     (ಇದು ನನ್ನ ಮೊದಲ ಸಣ್ಣ ಕಥೆ ನಿಮಗೇನಾದರೂ ಹೇಳಬೇಕೆನಿಸಿದರೆ ಖಂಡಿತ ತಿಳಿಸಿ)

 

Comments