ನಿಮಗೂ ಈ ಅನುಭವ........?

ನಿಮಗೂ ಈ ಅನುಭವ........?

ನಿಮಗೂ ಈ ಅನುಭವ........?

ಸುಮಾರು ಒಂದು ವರ್ಷದ ಹಿಂದೆ ಮೈಸೂರಿಗೆ ಹೋಗಲು ಬೆಳಗಾವಿ ರೈಲು ನಿಲ್ದಾಣಕ್ಕೆ ಬೆಳಗ್ಗೆಯೇ ಹೋಗಿ ಟಿಕೆಟ್ ತೆಗೆದುಕೊಂಡು ಹೊರಬರುತ್ತಿರುವಾಗ "ಸರ್ ನಿಮಗೆ ಕನ್ನಡ ಬರುತ್ತಾ " ಎಂಬ ಧ್ವನಿ ಕೇಳಿಬಂತು. ಸುಮಾರು 17-18 ವಯಸ್ಸಿನ ಹುಡುಗ ಈ ಪ್ರಶ್ನೆ ಕೇಳಿದ."ಹೌದು" ಎಂದೆ."ಸರ್ ನಿಮ್ಮಿಂದ ಒಂದು ಉಪಕಾರ ಆಗಬೇಕು, ನಾನು ನಮ್ಮ ಅಜ್ಜಿ , ತಂದೆ, ತಮ್ಮ ಮತ್ತು ತಂಗಿಯ ಜೊತೆ ಕೊಲ್ಲಾಪುರ ಮತ್ತು ಶಿರಡಿಗೆ ಹೋಗುತ್ತಿದ್ದೆವು. ಕೊಲ್ಲಾಪುರದಲ್ಲಿ ಮಹಾಲಕ್ಶ್ಮಿಯ ದರ್ಶನ ಮಾಡಿ ಕುಳಿತಿದ್ದಾಗ ಯಾರೋ ನಮ್ಮ ಅಜ್ಜಿಯ ಚೀಲದಲ್ಲಿದ್ದ ಹತ್ತು ಸಾವಿರ ರೂಪಾಯಿಯನ್ನು ಕದ್ದಿದ್ದಾರೆ. ಇರುವ ಅಲ್ಪ-ಸ್ವಲ್ಪ ದುಡ್ಡಿನಲ್ಲಿ ಇಲ್ಲಿಗೆ (ಬೆಳಗಾವಿ) ಬಂದು ತಲುಪಿದ್ದೇವೆ. ಇನ್ನೂ ನಮ್ಮೂರಾದ ದಾವಣಗೆರೆಗೆ ಬೇರೆ ತಲುಪಬೇಕು.ಕೈಯಲ್ಲಿ ಸ್ವಲ್ಪವೂ ದುಡ್ಡಿಲ್ಲ. ಬೆಳಗಿನಿಂದ ಯಾರೂ ಏನನ್ನೂ ತಿಂದಿಲ್ಲ. ಇವರು ನಮ್ಮತಂದೆ,ಇವರು........ಎಂದು ಒಬ್ಬೊಬ್ಬರನ್ನೇ ಪರಿಚಯಿಸಿದ. ಅವರ ಅಜ್ಜಿಯೂ "ಹೌದು ಸ್ವಾಮಿ,ನೋಡಿ ಹೀಗಾಯ್ತು.....ನೋಡಿ ನೀವೇ ಏನಾದರೂ ಸಹಾಯ ಮಾಡಿದರೆ ಪುಣ್ಯ ಬರುತ್ತೆ " ಅಂತು. ದೀನತೆಯಿಂದ ತುಂಬಿದ್ದ ಆ ಮುಖಗಳನ್ನು ನೋಡಿ ಕರಳು ಚುರುಕ್ಕೆಂದಿತು."ಬನ್ನಿ ಹಾಗಾದರೆ ಮೊದಲು ತಿಂಡಿ ತಿನ್ನಿಸುತ್ತೇನೆ " ಎಂದು ಹೇಳಿದೆ. ಅವರುಗಳ ಜೊತೆಯಲ್ಲಿ ಬಹಳ ಲಗೇಜ್ ಬೇರೆ ಇತ್ತು. "ಈ ಲಗೇಜ್ ಹೇಗೆ ಬಿಟ್ಟು ಹೋಗೋದು,ಬೇಡ ಬಿಡಿ ಸ್ವಾಮಿ"ಎಂದಿತು ಅಜ್ಜಿ.

"ದಾವಣಗೆರೆಯಲ್ಲಿ ಎಲ್ಲಿ ಇರೋದು ನೀವು" ಎಂದಾಗ ಅಡ್ರೆಸ್ ಹೇಳಿದರು, ಅದನ್ನು ಬರೆದುಕೊಂಡೆ. ಆ ಹುಡುಗನ ಮೊಬೈಲ್ ನಂಬರ್ ಕೂಡಾ ತೆಗೆದುಕೊಂಡೆ. ರಿಂಗ್ ಕೂಡಾ ಮಾಡಿದೆ, ನನ್ನ ನಂಬರ್ ಅವನ ಮೊಬೈಲ್ ನಲ್ಲಿ ಬಂದಿತ್ತು. "ಸರಿ ಈಗ ಎಸ್ಟು ದುಡ್ಡು ಬೇಕು" ಎಂದು ಕೇಳಿದೆ. ಆ ಹುಡುಗ " ಸರ್ ರೈಲಿನಲ್ಲಿ ಹೋದರೂ ಸುಮಾರು ಒಂದು 800ರಿಂದ1000ಸಾವಿರ ಆಗಬಹುದು. ಊರಿಗೆ ಹೋದ ಸ್ವಲ್ಪ ದಿವಸಕ್ಕೇ ವಾಪಸ್ ಕಳಿಹಿಸುತ್ತೇವೆ. ದಯಮಾಡಿ ಇಲ್ಲ ಎನ್ನಬೇಡಿ ಸರ್" ಎಂದು ಅಂಗಲಾಚತೊಡಗಿದ. ಇನ್ನುಳಿದ ಮುಖಗಳೂ "ದಯವಿಟ್ಟು ನಮ್ಮ ಕೈ ಬಿಡಬೇಡಿ" ಎನ್ನುವಂತೆ ನನ್ನೆಡೆ ನೋಡುತ್ತಿದ್ದವು. ನನ್ನ ಹತ್ತಿರ ಆಗ ಅಷ್ಟೊಂದು ಹಣವಿರಲಿಲ್ಲ. ಏನು ಮಾಡುವುದು ಎಂದು ಯೋಚಿಸತೊಡಗಿದೆ. ಸಹಾಯ ಮಾಡೋಣ ಎಂದುಕೊಂಡು ಅಲ್ಲಿಯೇ ಇದ್ದ A.T.M ನಲ್ಲಿ ಪ್ರಯತ್ನಿಸಿದರೆ ಅಲ್ಲಿ ಹಣ ಖಾಲಿಯಾಗಿತ್ತು. ಆ ಹುಡುಗನನ್ನು ಬೈಕಿನಲ್ಲಿ ಇನ್ನೊಂದು A.T.M ಹತ್ತಿರ ಕರೆದುಕೊಂಡು ಹೋಗಿ, ಹಣ ತೆಗೆದು, ಒಂದು ಸಾವಿರ ಅವನ ಕೈಯಲ್ಲಿಟ್ಟು "ಹುಷಾರಾಗಿ ಊರಿಗೆ ಹೋಗಿ ತಲುಪಿ, ಸ್ವಲ್ಪ ದಿನದಲ್ಲಿ ಹಣ ವಾಪಸ್ ಕಳುಹಿಸಿ"ಎಂದೆ. ಅವನು "ಊರಿಗೆ ಹೋದ ಮೇಲೆ ಫೋನ್ ಮಾಡಿ ಅಕೌಂಟ್ ನಂಬರ್ ತೆಗೆದುಕೊಂಡು ನಿಮ್ಮ ಹಣ ವಾಪಾಸ್ ಕಳಿಹಿಸುತ್ತೇನೆ ಸರ್ ತುಂಬಾ ಉಪಕಾರವಾಯ್ತು....."ಎಂದ. ಅವನನ್ನು ಮತ್ತೆ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಎಲ್ಲರಿಂದಲೂ "ತುಂಬಾ ಉಪಕಾರವಾಯ್ತು ಸರ್ " ಎಂಬ ನುಡಿಗಳನ್ನು ಕೇಳಿ ಮನೆಗೆ ಹಿಂತಿರುಗಿದೆ.

. ಸ್ವಲ್ಪ ದಿವಸಾದ ಮೇಲೆ ಅವರುಗಳು ಕೊಟ್ಟಿದ್ದ ಮೊಬೈಲ್ಗೆ ಫೋನ್ ಮಾಡಿದರೆ ಉತ್ತರವಿಲ್ಲ.ಯಾರ ಹತ್ತಿರವೂ ಈ ವಿಚಾರ ಹೇಳಿಕೊಳ್ಳಲಿಲ್ಲ.ಹೆಂಡತಿಯ ಹತ್ತಿರದಲ್ಲೂ ಸಹಾ.....! ಅವರುಗಳು ತಮ್ಮ ಕಥೆ-ವ್ಯಥೆ ಹೇಳಿಕೊಳ್ಳುತ್ತಿರುವಾಗಲೂ ನನಗೆ ಅವರುಗಳ ಬಗ್ಗೆ ಸಂಶಯ ಬರಲಿಲ್ಲ. ದಾವಣಗೆರೆಯಲ್ಲಿ ಗೊತ್ತಿರುವವರಿಗೆ ಫೋನ್ ಮಾಡಿ ಆ ಅಡ್ಡ್ರೆಸ್ ಬಗ್ಗೆ ವಿಚಾರಿಸಿದರೆ ಆ ಅಡ್ಡ್ರೆಸ್ಸಿನವರಾರೂ ಅಲ್ಲಿ ಪತ್ತೆಯಿಲ್ಲ........! ಇಲ್ಲಿಯವರೆಗೂ ಅವರುಗಳಿಂದ ಒಂದು ಫೋನ್ ಕೂಡಾ ಬಂದಿಲ್ಲ. ಇನ್ನು ಬರುವುದೂ ಇಲ್ಲ.

ಹೇಳಿ...ನಿಮಗೇನಾದರೂ ಇಂತ (ಅ)ಹಿತ ಅನುಭವವಾಗಿದೆಯೇ................!?

Rating
No votes yet

Comments