ಕಥೆ/ಪ್ರಸ0ಗ - ಮುಪ್ಪು
ಅಂದು ಬೆಳಿಗ್ಗೆ ಎಂದಿನಂತೆ ಮೊಮ್ಮಗನನ್ನು ಕರೆದುಕೊಂಡು ಪಾರ್ಕಿಗೆ ವಾಕಿಂಗ್ ಗೆಂದು ಬಂದು ಒಂದು ಸುತ್ತು ಹೊಡೆದು ಎರಡನೇ ಸುತ್ತಿಗೆ ಹೊರಡುವ ಮುನ್ನ ಒಂದು ಸ್ವಲ್ಪ ಹೊತ್ತು ಕೂತು ಹೊರಡೋಣ ಎ೦ದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ಪ್ರತಿ ದಿನ ಅದೇ ಪಾರ್ಕಿನಲ್ಲಿ ವಾಕ್ ಮಾಡುತ್ತಿದ್ದರಿಂದ ಅಲ್ಲಿಗೆ ಬರುವ ಹೆಚ್ಚು ಕಡಿಮೆ ಎಲ್ಲರೂ ಪರಿಚಯ. ಎಲ್ಲರೂ ಪರಿಚಯದ ನಗೆ ಬೀರಿ ಕೈ ಬೀಸಿ ನಡೆಯುತ್ತಿದ್ದರೆ ಕೆಲವರು ಹತ್ತಿರ ಬಂದು ಮೊಮ್ಮಗನನ್ನು ಮಾತಾಡಿಸಿ ಹೋಗುತ್ತಿದ್ದರು. ಎರಡನೇ ಸುತ್ತಿಗೆ ಹೊರಡೋಣ ಎಂದು ಎದ್ದೆ. ಅಷ್ಟರಲ್ಲಿ ಮೊಮ್ಮಗ ತಾತಾ ಎರಡನೇ ರೌಂಡ್ ನೀನು ಹೋಗು ನಾನು ಇಲ್ಲೇ ಆಟ ಆಡ್ತಾ ಇರ್ತೀನಿ ಎಂದ. ಹುಷಾರು ರಸ್ತೆಗೆ ಹೋಗಬಾರದು ಇಲ್ಲೇ ಇರು ಎಂದು ವಾಕ್ ಶುರು ಮಾಡಿದೆ. ಹಿಂದಿನಿಂದ ಯಾರೋ ರಾಯರು ಎಂದು ಕೂಗಿದಂತಾಯಿತು. ನನ್ನನ್ನು ಬಲ್ಲವರು ಯಾರೂ ರಾಯರು ಎಂದು ಕರೆಯುತ್ತಿರಲಿಲ್ಲ. ಎಲ್ಲರೂ ಶ್ರೀನಿವಾಸ್ ಎಂದು ಹೆಸರಿಟ್ಟೆ ಕರೆಯುತ್ತಿದ್ದರು. ಇನ್ಯಾರನ್ನೋ ಕರೆಯುತ್ತಿದ್ದಾರೆ ಎಂದು ಮತ್ತೆ ನಡೆಯಲು ಶುರು ಮಾಡಿದೆ. ಮತ್ತೆ ಎರಡು ಮೂರು ಬಾರಿ ಅದೇ ರೀತಿ ರಾಯರು...ರಾಯರೇ ಎಂದು ಕರೆದಂತಾಯಿತು. ಈ ಬಾರಿ ನನ್ನನ್ನೇ ಕರೆಯುತ್ತಿದ್ದಾರೆ ಎಂದು ನಿಂತು ಹಿಂತಿರುಗಿ ನೋಡಿದೆ. ನನ್ನಷ್ಟೇ ವಯಸ್ಸಾದ ವ್ಯಕ್ತಿಯೊಬ್ಬರು ಕೈ ಮೇಲಕ್ಕೆತ್ತಿ ನನಗೆ ನಿಲ್ಲುವಂತೆ ಹೇಳಿ ನನ್ನೆಡೆಗೆ ಬರುತ್ತಿದ್ದಾರೆ. ನಾನು ನನ್ನ ಕನ್ನಡಕವನ್ನು ಸರಿ ಮಾಡಿಕೊಂಡು ಕತ್ತೆತ್ತಿ ನೋಡಿದೆ. ಯಾರಿದು? ನನ್ನನ್ನು ಯಾಕೆ ಕರೆಯುತ್ತಿದ್ದಾರೆ ಎಂದು ಅಲ್ಲೇ ನಿಂತೆ. ಆ ವ್ಯಕ್ತಿ ನಾನಿದ್ದಲ್ಲಿಗೆ ಬಂದು ಏನು ರಾಯರೇ ಆಗಿ೦ದ ಕರೀತಾ ಇದ್ದೀನಿ ನಿಲ್ಲೋದೇ ಇಲ್ಲ ಅಂತೀರಲ್ಲ.
ಕ್ಷಮಿಸಿ ನನ್ನನ್ನು ಯಾರೂ ರಾಯರು ಎಂದು ಕರೆಯುವುದಿಲ್ಲ ಹಾಗಾಗಿ ನಿಲ್ಲಲಿಲ್ಲ. ಅಂದಹಾಗೆ ತಾವು ಯಾರು ಅಂತ ತಿಳೀಲಿಲ್ಲ. ನನ್ನಿಂದ ಏನಾಗಬೇಕಿತ್ತು?
ರಾಯರೇ ತಮಗೆಷ್ಟು ವಯಸ್ಸು?
ಇನ್ನೇನು ಈ ಡಿಸೆಂಬರ್ ಬಂದರೆ ಎಪ್ಪತ್ತು ತುಂಬತ್ತೆ. ಅದು ಸರಿ ನನ್ನ ವಯಸ್ಸಿನಿಂದ ನಿಮಗೆ ಏನು ಆಗಬೇಕು. ನಿಮ್ಮನ್ನು ನೋಡಿದರೆ ನೀವೇನು ಇನ್ಸೂರೆನ್ಸ್ ಏಜೆಂಟ್ ಹಾಗೆ ಏನು ಕಾಣಲ್ಲ. ದಯವಿಟ್ಟು ತಮ್ಮ ಪರಿಚಯ ತಿಳಿಸಿಕೊಡ್ತೀರಾ. ನನಗೆ ಸಮಯ ಆಗುತ್ತಿದ್ದೆ. ಮೊಮ್ಮಗನನ್ನು ಮನೆಗೆ ಕರೆದೊಯ್ಯಬೇಕು.
ಲೇ ಸೀನ ನಾನು ಕಣೋ ಸಿದ್ರಾಮ ನಿನ್ನ ಜೊತೆ ಐದು ವರ್ಷ ಕೆಲಸ ಮಾಡಿದ್ದೆ ಐ.ಟಿ.ಐ ಫ್ಯಾಕ್ಟರಿ ಲಿ ನೆನಪಿದ್ಯ. ಸ್ವಲ್ಪ ಸರಿಯಾಗಿ ನೆನಪು ಮಾಡಿಕೊ.
ನಾನು ರಿಟೈರ್ ಆಗಿಯೇ ಹತ್ತು ವರ್ಷ ಆಯ್ತು. ಓಹ್ ಈಗ ನೆನಪಾಯ್ತು...ಏನೋ ಸಿದ್ರಾಮ ಹೇಗಿದ್ಯೋ. VRS ತಗೊಂಡು ಕೆಲಸ ಬಿಟ್ಟೆ ಆಲ್ವಾ ನೀನು. ಆಮೇಲಿಂದ ಒಂದೆರಡು ಸಲ ಫ್ಯಾಕ್ಟರಿ ಕಡೆ ಬಂದವನು ಆಮೇಲೆ ಪತ್ತೆ ಇಲ್ಲದೆ ಹೋಗಿಬಿಟ್ಟೆ. ಅದೂ ಅಲ್ಲದೆ ಆಗ ಒಳ್ಳೆ ಭೀಮನಂತೆ ಇದ್ದವನು ಇದೇನೋ ಹೀಗೆ ನರಪೇತಲ ನಾರಾಯಣ ಆದ ಹಾಗೆ ಆಗಿದ್ದೀಯ? ಬಾ ಅಲ್ಲಿ ಕೂತು ಮಾತಾಡೋಣ ಎಂದು ಒಂದು ಕಲ್ಲಿನ ಬೆಂಚಿನ ಮೇಲೆ ಕೂತೆವು.
ಮತ್ತೆ ಇನ್ನೇನೋ ಸೀನ ಸಮಾಚಾರ. ನೀನು ಮಾತ್ರ ಹಾಗೆ ಇದ್ದೀಯ ನೋಡು. ತಲೆ ಕೂದಲು ಮಾತ್ರ ಸ್ವಲ್ಪ ಬೆಳ್ಳಗಾಗಿದೆ ಅನ್ನೋದು ಬಿಟ್ರೆ ಒಂಚೂರು ವ್ಯತ್ಯಾಸ ಇಲ್ಲ. ಅದಕ್ಕೆ ನಿನ್ನನ್ನು ನೋಡಿದ ತಕ್ಷಣ ಗುರುತು ಹಿಡಿದು ಬಿಟ್ಟೆ. ಕೂಡಲೇ ಸೀನ ಎಂದು ಕರೆಯೋಣ ಎಂದುಕೊಂಡೆ. ಯಾವುದಕ್ಕೂ ಮೊದಲು ಹತ್ತಿರದಿಂದ ಖಚಿತ ಪಡಿಸಿಕೊಳ್ಳೋಣ ಎಂದು ರಾಯರು ಎಂದು ಕೂಗಿದೆ. ಹೇಳಪ್ಪ ಏನು ಸಮಾಚಾರ ಹೇಗಿದೆ ರಿಟೈರ್ ಲೈಫ್, ಮಕ್ಳು, ಮನೆ ಅವರು ಹೇಗಿದ್ದಾರೆ? ಮಕ್ಕಳು ಏನು ಮಾಡ್ತಾ ಇದಾರೆ.
ನಂದೇನು ಹೇಳಿಕೊಳ್ಳುವಂಥಹ ವಿಶೇಷ ಏನೂ ಇಲ್ಲ ಸಿದ್ದ. ರಿಟೈರ್ ಆದಮೇಲೆ ಮೊದಮೊದಲು ಬಹಳ ಕಷ್ಟ ಪಟ್ಟೆ. ಸಮಯ ಕಳೆಯುವುದು ಎಷ್ಟು ಕಷ್ಟ ಆಗುತ್ತಿತ್ತು ಎಂದರೆ ಅಷ್ಟು ಕಷ್ಟ ಆಗುತ್ತಿತ್ತು. ಮತ್ತೆ ಎಲ್ಲಾದರೂ ಕೆಲಸ ಮಾಡೋಣ ಎಂದುಕೊಂಡರೆ ಮನೆಯಲ್ಲಿ ಮಕ್ಕಳು ಒಪ್ಪಲಿಲ್ಲ. ಇಷ್ಟು ವರ್ಷ ನೀವು ದುಡಿದಿದ್ದೀರ? ಇನ್ನು ಮು೦ದೆ ನೀವು ಆರಾಮಾಗಿ ಇರಿ. ನಾವು ದುಡಿಯುತ್ತೇವೆ ಎಂದು ಬಿಟ್ಟರು ಮಕ್ಕಳು. ಇನ್ನು ಈ ವಯಸ್ಸಿನಲ್ಲಿ ಮಕ್ಕಳ ಮಾತು ಕೇಳಲೇ ಬೇಕಲ್ಲಪ್ಪ. ಇನ್ನು ನಾನು ಕೆಲಸದಲ್ಲಿದ್ದಾಗಲೇ ಮಗಳು ಹಾಗೂ ಒಬ್ಬ ಮಗನಿಗೆ ಮದುವೆ ಮಾಡಿದ್ದೆ. ಇನ್ನೊಬ್ಬ ಮಗನಿಗೆ ರಿಟೈರ್ ಆದ ಒಂದು ವರ್ಷಕ್ಕೆ ಮದುವೆ ಮಾಡಿದೆ. ಮಗಳಿಗೆ ಒಬ್ಬಳು ಮಗಳು ಒಬ್ಬ ಮಗ, ಅವರು ಇಲ್ಲೇ ಯಶವಂತಪುರದಲ್ಲಿ ಇದ್ದಾರೆ. ವಾರಕ್ಕೊಂದು ಸಲ ಬಂದು ನೋಡಿಕೊಂಡು ಹೋಗ್ತಾರೆ. ಇನ್ನು ದೊಡ್ಡ ಮಗನಿಗೆ ಒಬ್ಬಳು ಮಗಳು, ಇನ್ನು ಚಿಕ್ಕವನಿಗೆ ಅಲ್ಲಿ ನೋಡು ಅಲ್ಲಿ ಆಟ ಆಡ್ತಾ ಇದಾನಲ್ಲ ಅವನೊಬ್ಬ ಮಗ. ಮದುವೆ ಆದ ಮೇಲೆ ಇಬ್ಬರು ಮಕ್ಕಳಿಗೆ ಹೇಳಿದೆ ನೋಡ್ರಪ್ಪ ಇನ್ನು ನಿಮ್ಮ ನಿಮ್ಮ ಇಷ್ಟ ಬೇರೆ ಹೋಗಬೇಕೆಂದರೆ ಹೋಗಬಹುದು ನಮ್ಮದು ಏನೂ ಅಡ್ಡಿ ಇಲ್ಲ ಅಂತ, ಆದರೆ ಇಬ್ಬರು ಮಕ್ಕಳೂ ಕೇಳಲಿಲ್ಲ. ಬದಲಿಗೆ ಅವರಿಬ್ಬರೇ ದುಡ್ಡು ಹಾಕಿ ಒಂದು ಮನೆ ಕಟ್ಟಿಸಿ ಕೆಳಗಡೆ ನಾನೂ ನನ್ನ ಹೆ೦ಡತಿ, ಮೇಲಿನ ಮನೆಗಳಲ್ಲಿ ಅವರು ಇರುತ್ತಾರೆ. ಊಟ ತಿಂಡಿ ಎಲ್ಲ ಸೊಸೇರು ನೋಡ್ಕೋತಾರೆ. ಇವಳಿಗೂ ಈಗ ಕೈಲಿ ಆಗಲ್ಲ.. ನನಗೆ ಇವಳಿಗೆ ಏನೂ ಕೆಲಸ ಇಲ್ಲದೆ ಸೋಂಬೇರಿಗಳು ಆಗಿ ಬಿಟ್ಟಿದ್ದೇವೆ. ಮೊದ ಮೊದಲು ನನ್ನ ಮಕ್ಕಳು ಸರಿಯಾಗಿ ಓದದೆ, ಒಂದು ಕಡೆ ಸರಿಯಾಗಿ ಕೆಲಸ ಮಾಡದೆ ಇದ್ದದ್ದು ನೋಡಿ ನನಗೆ ಭಯ ಆಗಿ ಬಿಟ್ಟಿತ್ತು. ಹೇಗಪ್ಪ ಮುಂದೆ ಜೀವನ ಎಂದು ಆಲೋಚಿಸುತ್ತಿದ್ದೆ ಆದರೆ ದೇವರ ದಯದಿಂದ ಹಾಗೇನೂ ಆಗದೆ ಎಲ್ಲಾ ಚೆನಾಗಿ ಇದೆ. ನೀನು ಹೇಗಿದ್ದೀಯ? ನಿನ್ನ ಅವತಾರ ನೋಡಿ ನನಗೆ ಗುರ್ತೇ ಹಿಡಿಯಲು ಆಗಲಿಲ್ಲ. ಒಳ್ಳೆ ಆ ಪಾಟಿ ಸೈಜ್ ಇದ್ದವನು ಒಳ್ಳೆ ಕಡ್ಡಿ ಆದ ಹಾಗೆ ಆಗಿದ್ದೀಯ. ಏನು ಫುಲ್ ಡಯಟ್ತಾ? ಅದು ಸರಿ ಮಕ್ಕಳು ಹೇಗಿದಾರೆ? ಎಷ್ಟು ಜನ ಮೊಮ್ಮಕ್ಕಳು? ದುಡ್ಡಿಗಂತೂ ನಿನಗೆ ಯೋಚನೆ ಇಲ್ಲ ಬಿಡು. ಆಗಲೇ ನಿನ್ನ ಮಕ್ಕಳು ಅಮೆರಿಕ ಲಿ ಇದ್ದರು ಅಲ್ವಾ. ಅದಕ್ಕೆ ನೀನೂನು ಆರಾಮಾಗಿ VRS ತಗೊಂಡು ಬಿಟ್ಟೆ ಅಲ್ವಾ..
ಇಲ್ಲ ಸೀನ ನೀನು ಅಂದುಕೊಂಡ ಹಾಗೆ ಏನೂ ಇಲ್ಲ. ದುಡ್ಡಿಗೆ ತೊಂದರೆ ಅಂತೂ ಇಲ್ಲ ನಿಜ ಆದರೆ ಅದಕ್ಕಿಂತ ಮಿಗಿಲಾದ ಪ್ರೀತಿ ಇಲ್ಲ ಕಣೋ. ನಾನು VRS ತಗೊಂಡ ಕಾರಣ ನನಗೆ ಹೃದಯದ ಸಮಸ್ಯೆ ಇತ್ತು ಅಂತ. VRS ಆದ ಮೇಲೆ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು. ಮಕ್ಕಳಿಗೆ ಫೋನ್ ಮಾಡಿದರೆ ಯಾವುದಾದರೂ ಒಳ್ಳೆ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳಿ ಹಣ ನಾವು ಕಳುಹಿಸುತ್ತೇವೆ ಎಂದರು. ಆಸ್ಪತ್ರೆಗೆ ತೋರಿಸಿದರೆ ಹಾರ್ಟಲ್ಲಿ ಬ್ಲಾಕ್ ಆಗಿದೆ. ಬೈ ಪಾಸ್ ಮಾಡಬೇಕು ಎಂದರು. ಇದೆ ವಿಷಯವನ್ನು ಮಕ್ಕಳಿಗೆ ಹೇಳಿದರೆ ನಮಗೆ ಸದ್ಯಕ್ಕೆ ರಜೆ ಇಲ್ಲ ನೀವು ಆಪರೇಷನ್ ಮಾಡಿಸಿಕೊಳ್ಳಿ ನಾವು ಡಿಸೆಂಬರ್ ನಲ್ಲಿ ಕ್ರಿಸ್ಮಸ್ ರಜಕ್ಕೆ ಬರುತ್ತೇವೆ ಎಂದು ಬಿಟ್ಟರು. ನನ್ನವಳು ಹುಷಾರಾಗಿ ಇದ್ದಿದ್ದರೆ ನನಗೆ ಮಕ್ಕಳ ಅವಶ್ಯಕತೆ ಇರಲಿಲ್ಲ. ಆದರೆ ಅವಳಿಗೂ ಒಂದು ದಿನ ಇದ್ದ ಹಾಗೆ ಇನ್ನೊಂದು ದಿನ ಇರುತ್ತಿರಲಿಲ್ಲ. ಅವಳು ಮಂಡಿ ನೋವಿನಿಂದ ಒದ್ದಾಡುತ್ತಿರುತ್ತಾಳೆ. ಆರು ತಿಂಗಳು ನಾವು ಪಟ್ಟ ನರಕ ಯಾತನೆ ಯಾರಿಗೂ ಬೇಡಪ್ಪ. ಬಂಧುಗಳು ಬಂದು ನೋಡಿಕೊಂಡು ಹೋಗುತ್ತಿದ್ದರು. ಅವರ ಕೈಲಾದ ಸಹಾಯ ಮಾಡುತ್ತಿದ್ದರು. ಆದರೆ ಅವರು ಎಷ್ಟು ದಿನ ಅಂತ ಇರುತ್ತಾರೆ. ಹಾಗೋ ಹೀಗೋ ಸುಧಾರಿಸಿಕೊಂಡೆ. ನಂತರ ಡಿಸೆಂಬರ್ ನಲ್ಲಿ ಮಕ್ಕಳು ಬಂದರು. ನಾನು ನನ್ನವಳಿಗೆ ಮೊದಲೇ ಹೇಳಿದ್ದೆ. ಜಾಸ್ತಿ ಏನೂ ಮಾತಾಡಬೇಡ. ಅವರ ಇಷ್ಟ ಹೇಗೋ ಹಾಗೆ ಮಾಡಲಿ ಎಂದು. ಆದರೆ ಅವಳ ಮನಸ್ಸು ಕೇಳಬೇಕಲ್ಲ. ಮಕ್ಕಳನ್ನು ಕೂಡಿಸಿಕೊಂಡು ನೋಡ್ರಪ್ಪ ನಿಮ್ಮನ್ನು ಚಿಕ್ಕಂದಿನಿಂದ ಓದಿಸಿ ದೊಡ್ಡವರನ್ನಾಗಿ ಮಾಡಿ ಒಳ್ಳೆಯ ಕೆಲಸಕ್ಕೆ ಸೇರಿಸಿದ ನಿಮ್ಮ ತಂದೆಗೆ ಹುಷಾರಿಲ್ಲ ಎಂದಾಗ ಬಂದು ನೋಡಿಕೊಳ್ಳಬೇಕು ಎಂದು ತಿಳೀಲಿಲ್ವಾ. ನೀವು ಅಮೆರಿಕಾಕ್ಕೆ ಹೋಗಬೇಕಾದರೆ ಏನೆ೦ದು ಹೇಳಿದ್ದು. ಒಂದು ಐದು ವರ್ಷ ಅಲ್ಲಿ ದುಡಿದು ವಾಪಸ್ ಭಾರತಕ್ಕೆ ಬಂದು ಬಿಡುತ್ತೇವೆ ಅಂತ ಹೇಳಿದ್ದು. ಆದರೆ ನೀವು ಅಲ್ಲಿಗೆ ಹೋಗಿ ಹತ್ತು ವರ್ಷದ ಮೇಲಾಯ್ತು ಅದರ ಬಗ್ಗೆ ಕೇಳಿದಾಗಲೆಲ್ಲ ಆಗ ಬರುತ್ತೇವೆ ಈಗ ಬರುತ್ತೇವೆ ಎನ್ನುತ್ತಿದ್ದೀರಾ. ಈಗಲಾದರೂ ಸ್ವಲ್ಪ ಸೀರಿಯಸ್ ಆಗಿ ಯೋಚನೆ ಮಾಡಿ ನನಗೂ ಮುಂಚಿನ ಹಾಗೆ ಕೈಲಿ ಆಗಲ್ಲ. ಮಕ್ಕಳು ಸೊಸೆಯಂದಿರು ಮನೆಯಲ್ಲಿ ಇದ್ದಾರೆ ವಯಸ್ಸಾದ ಕಾಲದಲ್ಲಿ ನಮಗೂ ಸ್ವಲ್ಪ ಸಹಾಯ ಆಗುತ್ತದೆ. ದಯವಿಟ್ಟು ಈಗಲಾದರೂ ಭಾರತಕ್ಕೆ ಬಂದು ಬಿಡಿ ಎಂದಳು. ಅದಕ್ಕೆ ಮಕ್ಕಳು ಕಪಾಳಕ್ಕೆ ಹೊಡೆದ ಹಾಗೆ ಉತ್ತರ ಕೊಟ್ಟರು. ಅಮ್ಮ, ನಾವು ಇನ್ನು ಮುಂದೆ ಅಲ್ಲೇ ಇರಲು ನಿರ್ಧರಿಸಿದ್ದೇವೆ. ಇಲ್ಲಿ ಒಂದು ವರ್ಷದಲ್ಲಿ ದುಡಿಯೋದನ್ನು ಅಲ್ಲಿ ಒಂದು ತಿಂಗಳಲ್ಲಿ ದುಡಿಯುತ್ತಿದ್ದೇವೆ. ಈಗ ಇಲ್ಲಿ ಬಂದು ಒದ್ದಾಡು ಅಂತ ಹೇಳ್ತೀಯ. ಅದೆಲ್ಲ ಆಗಲ್ಲ. ಒಂದು ಕೆಲಸ ಮಾಡಿ. ನೀವೇ ಅಲ್ಲಿಗೆ ಬಂದು ಬಿಡಿ ಎಂದರು.
ಇವಳು ಮಹಾ ಸ್ವಾಭಿಮಾನಿ ಮೊದಲೇ, ನೋಡ್ರೋ ನಾವು ಈ ದೇಶ ಬಿಟ್ಟು ಬೇರೆ ಎಲ್ಲೂ ಬರಲ್ಲ. ನಿಮಗೆ ಅಪ್ಪ ಅಮ್ಮನ ಪ್ರೀತಿ ಬೇಕಾದರೆ ನೀವೇ ಇಲ್ಲಿಗೆ ಬನ್ನಿ ಇಲ್ಲವಾದರೆ ನಿಮ್ಮಿಷ್ಟ ಎಂದು ಬಿಟ್ಟಳು. ಅಂದು ವಾಪಸ್ ಹೋದ ಮಕ್ಕಳು ಇದುವರೆಗೂ ಮತ್ತೆ ಈ ಕಡೆ ಬಂದಿಲ್ಲ. ಒಂದೆರಡು ಸಲ ದೊಡ್ಡ ಮಗನ ಮಗ ಬಂದು ಹೋಗಿದ್ದ. ಆಮೇಲೆ ನಾನು ಎರಡು ಸಲ ಅಲ್ಲಿಗೆ ಹೋಗಿದ್ದೆ. ಆದರೆ ಇವಳು ಮಾತ್ರ ಬರಲಿಲ್ಲ. ಈಗಲೂ ತಿಂಗಳಿಗೆ ಸರಿಯಾಗಿ ಹಣ ಮಾತ್ರ ಕಳುಹಿಸುತ್ತಾರೆ ಆದರೆ ನಮಗೆ ನಿಜವಾದ ಅವಶ್ಯಕತೆ ಇರುವುದು ಹಣವಲ್ಲ ಅವರ ಪ್ರೀತಿ ಎನ್ನುವುದು ಅವರಿಗೆ ಅರ್ಥ ಯಾವಾಗ ಆಗತ್ತೋ ಅಥವಾ ಆಗುವುದೇ ಇಲ್ಲವೋ ಗೊತ್ತಿಲ್ಲ. ಕಳೆದ ವಾರವಷ್ಟೇ ಬೊಮ್ಮಸಂದ್ರದಿಂದ ಈ ಏರಿಯಾ ಗೆ ಶಿಫ್ಟ್ ಆದೆವು. ನೆನ್ನೆ ಈ ಕಡೆ ಬಂದಾಗ ಈ ಪಾರ್ಕ್ ನೋಡಿದೆ. ವಾಕ್ ಮಾಡಲು ಒಳ್ಳೆಯ ಜಾಗ ಎಂದು ಇಲ್ಲಿಗೆ ಬಂದೆ. ನೀನು ಸಿಕ್ಕಿದೆ. ಇಷ್ಟು ನೋಡಪ್ಪ ನನ್ನ ಕಥೆ.
ಅಲ್ಲವೋ ಸಿದ್ದ ಇಷ್ಟೆಲ್ಲಾ ಕೊರಗು ಇಟ್ಟುಕೊಂಡು ನಾವೆಲ್ಲಾ ನೆನಪಾಗಲಿಲ್ಲವ ನಿನಗೆ?
ಹಾಗಲ್ಲ ಕಣೋ ಸೀನ ಹೆತ್ತ ಮಕ್ಕಳೇ ಕೈ ಬಿಟ್ಟಾಗ ನಮಗೆ ಏನು ಮಾಡಬೇಕೋ ತೋಚಲಿಲ್ಲ ಕಣೋ...ಬಿಡು ಈಗ ಹೇಗಿದ್ದರೂ ಸಿಕ್ಕಿದೆಯಲ್ಲ...
ಅದು ಸರಿ ಸಿದ್ದ ಈಗ ಹೇಗಿದೆ ನಿನ್ನ ಹೃದಯದ ತೊಂದರೆ.?
ನನಗೂ ಹೃದಯ ಇದೆ ಎಂದು ನೆನಪು ಮಾಡಕ್ಕೆ ಆಗೊಮ್ಮೆ ಈಗೊಮ್ಮೆ ನೋವು ಬರ್ತಾ ಇರತ್ತೆ. ಆ ಸಮಯದಲ್ಲಿ ಮಾತ್ರೆ ಹಾಕೊಂಡರೆ ಸರಿ ಹೋಗತ್ತೆ. ಆಪರೇಷನ್ ಆದಾಗಿನಿಂದ ಊಟಕ್ಕಿಂತ ಮಾತ್ರೆಗಳೇ ಜಾಸ್ತಿ ಆಗೋಗಿದೆ.
ಅಷ್ಟರಲ್ಲಿ ನನ್ನ ಮೊಮ್ಮಗ ಓಡಿ ಬಂದು ತಾತಾ...ತಾತಾ...ಅಪ್ಪ ಬಂದಿದ್ದಾರೆ ಕರೀತಾ ಇದಾರೆ ಎಂದು ಕೂಗಿ ಗೇಟ್ ಕಡೆ ಓಡಿ ಹೋದ. ಓಹ್ ನೋಡು ಸಿದ್ದ ನಿನ್ನ ಜೊತೆ ಮಾತಾಡ್ತಾ ಆಡ್ತಾ ಸಮಯ ಹೋಗಿದ್ದೆ ಗೊತ್ತಾಗಿಲ್ಲ ಅದಕ್ಕೆ ಮಗನೆ ಹುಡುಕಿಕೊಂಡು ಬಂದಿದಾನೆ ಬಾ ನನ್ನ ಮಗನ್ನ ಪರಿಚಯ ಮಾಡಿಸ್ತೀನಿ. ಗೇಟ್ ಬಳಿ ಮಗ ಗಾಡಿ ನಿಲ್ಲಿಸಿಕೊಂಡು ನಿಂತಿದ್ದ. ನನ್ನನ್ನು ನೋಡುತ್ತಿದ್ದ ಹಾಗೆ ಕೆಳಗಿಳಿದು ಬಂದು ಅಪ್ಪ ನಿಮಗೆ ಎಷ್ಟು ಸಲ ಹೇಳಿದೀನಿ ವಾಕಿಂಗ್ ಹೋಗಬೇಕಾದರೆ ಮೊಬೈಲ್ ತೆಗೆದುಕೊಂಡು ಹೋಗಿ ಅಂತ. ಮಾತೆ ಕೇಳಲ್ಲ ಅಂತೀರಾ. ಅದೂ ಅಲ್ಲದೆ ೯ ಘಂಟೆಗೆ ಮಾತ್ರೆ ತಗೋಬೇಕು ಈಗ ಟೈಮ್ ೯.೩೦ ಆಗಿದೆ. ಸ್ವಲ್ಪನೂ ಕಾಳಜಿ ಇಲ್ಲ ನಿಮಗೆ ಆರೋಗ್ಯದ ಬಗ್ಗೆ ಎಂದ. ನಿಮ್ಮಪ್ಪನಿಗೇನು ಬಿಡಪ್ಪ ಉಕ್ಕಿನಂಥ ಮನುಷ್ಯ, ಜೊತೆಯಲ್ಲಿ ಬಂಗಾರದಂಥ ಮಕ್ಕಳು ನೀವು ಇದ್ದೀರಾ ನೋಡಿಕೊಳ್ಳಕ್ಕೆ ಅವನಿಗೇನೂ ಆಗಲ್ಲ ಅಂದ ಸಿದ್ದ.
ಸಿದ್ದನನ್ನು ಮಗನಿಗೆ ಪರಿಚಯ ಮಾಡಿಕೊಟ್ಟು ನಡೀ ಮನೆಗೆ ಹೋಗೋಣ ಎಂದರೆ, ಇಲ್ಲ ಮನೆಯಲ್ಲಿ ಇವಳು ಕಾಯುತ್ತಿರುತ್ತಾಳೆ ಇನ್ನೊಮ್ಮೆ ಖಂಡಿತ ಬರುತ್ತೇನೆ ಎಂದು ಮನೆಯ ಕಡೆ ಹೆಜ್ಜೆ ಹಾಕಿದ ಸಿದ್ದ. ಯಾಕೋ ಸಿದ್ಧನ ಕಥೆ ಕೇಳಿ ಮನಸು ಚುರಕ್ ಎಂದಿತು..
Comments
ಉ: ಕಥೆ/ಪ್ರಸ0ಗ - ಮುಪ್ಪು
In reply to ಉ: ಕಥೆ/ಪ್ರಸ0ಗ - ಮುಪ್ಪು by venkatb83
ಉ: ಕಥೆ/ಪ್ರಸ0ಗ - ಮುಪ್ಪು
ಉ: ಕಥೆ/ಪ್ರಸ0ಗ - ಮುಪ್ಪು
In reply to ಉ: ಕಥೆ/ಪ್ರಸ0ಗ - ಮುಪ್ಪು by kavinagaraj
ಉ: ಕಥೆ/ಪ್ರಸ0ಗ - ಮುಪ್ಪು
In reply to ಉ: ಕಥೆ/ಪ್ರಸ0ಗ - ಮುಪ್ಪು by Jayanth Ramachar
ಉ: ಕಥೆ/ಪ್ರಸ0ಗ - ಮುಪ್ಪು
In reply to ಉ: ಕಥೆ/ಪ್ರಸ0ಗ - ಮುಪ್ಪು by ಗಣೇಶ
ಉ: ಕಥೆ/ಪ್ರಸ0ಗ - ಮುಪ್ಪು
ಉ: ಕಥೆ/ಪ್ರಸ0ಗ - ಮುಪ್ಪು
In reply to ಉ: ಕಥೆ/ಪ್ರಸ0ಗ - ಮುಪ್ಪು by makara
ಉ: ಕಥೆ/ಪ್ರಸ0ಗ - ಮುಪ್ಪು