ತಂದೆ - ಮಗನ ಸಂಬಂಧದ ನೋವು ನಲಿವು

ತಂದೆ - ಮಗನ ಸಂಬಂಧದ ನೋವು ನಲಿವು

ಅವಿನಾಶ್ ಪಿಯುಸಿಯಲ್ಲಿ ಅನುತ್ತೀರ್ಣನಾದ. ಅವನು ರಾಂಕ್ ಪಡೆಯುತ್ತಾನೆಂಬ ತಂದೆಯ ನಿರೀಕ್ಷೆ ತಲೆಕೆಳಗಾಯಿತು. ಪೂರಕ ಪರೀಕ್ಷೆಯಲ್ಲಿಯೂ ಅವಿನಾಶ್ ಎರಡು ವಿಷಯಗಳಲ್ಲಿ ಫೇಲ್ ಆದ. ಆಗಂತೂ ಅವನ ತಂದೆ ಕಂಗಾಲಾದರು.

ಅವಿನಾಶನ ನಿರ್ಭಾವುಕ ಮುಖ ನೋಡಿ ಅವರಿಗೆ ಬೇಸರವಾಯಿತು. ಕೊನೆಗೆ ಅವನನ್ನು ಮನೋವೈಜ್ನಾನಿಕ ವಿಶ್ಲೇಷಣೆಗೆ ಒಳಪಡಿಸಲಾಯಿತು. ಮೂರನೇ ಭೇಟಿಯಲ್ಲಿ ಪರಿಣತರಿಗೆ ಅವಿನಾಶನ ಫೇಲ್‍ನ ಕಾರಣದ ಸುಳಿವು ಕಂಡಿತು. ಅದೇನು?  ’ಅವಿನಾಶ್ ತನ್ನ ತಂದೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದ!’

ಅವಿನಾಶ್ ಎಂಟನೇ ತರಗತಿಯಲ್ಲಿ ಶೇಕಡಾ ೮೫ ಅಂಕ ಗಳಿಸಿದ್ದ. ಅದು ಅವನ ಹಿಂದಿನ ತರಗತಿಯ ಅಂಕಗಳಿಗಿಂತ ಕಡಿಮೆಯಾಗಿತ್ತು. "ನನ್ನ ಮರ್ಯಾದೆ ತೆಗೆದೆ, ನಿನ್ನಿಂದಾಗಿ ನಾನು ಯಾರಿಗೂ ಮುಖ ತೋರಿಸದಂತಾಗಿದೆ" ಎಂದು ತಂದೆ ಅವನ ಮೇಲೆ ರೇಗಾಡಿದ್ದರು. ಸಂಬಂಧಿಕರಲ್ಲರ ಎದುರು ಅವನನ್ನು ಅವಮಾನಿಸಿದ್ದರು. ಅವಿನಾಶ್ ಆಗಲೇ ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಮತ್ತೆಮತ್ತೆ ಪಿಯುಸಿಯಲ್ಲಿ ಫೇಲ್ ಆಗಿ ತಂದೆಗೆ ನಿಜಕ್ಕೂ ಮುಖವೆತ್ತಿ ತಿರುಗಾಡಲು ಸಾಧ್ಯವಾಗದಂತೆ ಮಾಡಿದ್ದ!

ಅಪ್ಪಮಗನ ಸಂಬಂಧವೇ ಹಾಗೆ. ಜೀವನದ ಯಾವ ಘಟ್ಟದಲ್ಲೇ ಇರಲಿ, ಇಬ್ಬರ ನಡುವಿನ ಕೊಂಡಿಗೆ ಕೊಂಚ ಏಟು ಬಿದ್ದರೂ "ಗಾಯ" ಮಾಯುವುದು ಸುಲಭದ ಮಾತಲ್ಲ.

ಅಪ್ಪ ತನ್ನ ಮಾತಿಗೆ ಬೆಲೆ ಕೊಡೋದಿಲ್ಲ, ಒಳ್ಳೆಯ ಕಾಲೇಜಿಗೆ ಕಳುಹಿಸಲಿಲ್ಲ, ಮೆಡಿಕಲ್ ಓದಿಸಲಿಲ್ಲ, ಸ್ವಂತ ವ್ಯವಹಾರ ಮಾಡಲು ಹಣ ಕೊಡಲಿಲ್ಲ, ಆಸ್ತಿ ಪಾಲು ಮಾಡಿ ಕೊಟ್ಟಿಲ್ಲ - ಹೀಗೆ ಅಪ್ಪನ ವಿರುದ್ಧ ಮಗ ನೀಡುವ ಆರೋಪಗಳ ಪಟ್ಟಿ ಬೆಳೆಯುತ್ತ ಹೋಗಬಹುದು. ಅಂತೆಯೇ, ಮಗ ನನ್ನ ಕಷ್ಟ ಅರ್ಥ ಮಾಡಿಕೊಳ್ಳಲಿಲ್ಲ, ತನಗೆ ಗೌರವ ಕೊಡೋದಿಲ್ಲ, ಶೋಕಿ ಮಾಡಿ ಹಣ ಖರ್ಚು ಮಾಡುತ್ತಾನೆ, ಸರಿಯಾಗಿ ಪಾಠ ಓದಲಿಲ್ಲ ಎಂದು ಅಪ್ಪನ ದೂರುಗಳು ಇರಬಹುದು. ಆದರೆ ಇಂತಹ ದೂರುಗಳಿಂದ ತಂದೆ-ಮಗನ ಸಂಬಂಧದಲ್ಲಿ ಕಂದರ ಬೆಳೆಯುತ್ತ ಹೋಗುತ್ತದೆ ಎಂಬುದಂತೂ ಸತ್ಯ.

ಅಪ್ಪ-ಮಗನ ನಡುವೆ ಸಂವಹನ ಹಾಗೂ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಇದ್ದರೆ ಇಂತಹ ಗೊಂದಲಗಳು ಉಂಟಾಗುವುದಿಲ್ಲ. ಇದಕ್ಕೆ ಉತ್ತರಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಘಟನೆ ಉದಾಹರಣೆ. ಅಲ್ಲಿನ ಹಳ್ಳಿಗರಿಗೆ ತಮಗಿರುವ ಅರ್ಧ ಎಕರೆ - ಒಂದೆಕರೆ ಅಡಿಕೆ ತೋಟವೇ ಜೀವನಾಧಾರ. ಅಡಿಕೆ ಬೆಲೆ ಕುಸಿದಾಗ ಅಲ್ಲಿ ವಾಸಿಸುತ್ತಿದ್ದ ಕುಟುಂಬವೊಂದರ ಬದುಕು ಅಡಿಮೇಲಾಗಿತ್ತು. ಹಿರಿಯ ಮಗ ಗುಣವಂತ, ತಂದೆಗೆ ತಕ್ಕಂತಿದ್ದ. ಸಿಇಟಿಯಲ್ಲಿ ಉತ್ತಮ ರಾಂಕ್ ಗಳಿಸಿದ್ದ ಅವನು ಮೆಡಿಕಲ್ ಕೋರ್ಸಿಗೆ ಸೇರಬಹುದಾಗಿತ್ತು. ಆ ಸಂದರ್ಭದಲ್ಲಿ ಅವನ ತಂದೆ ಮಗನಿಗೆ ಕುಟುಂಬದ ಆರ್ಥಿಕ ಪರಿಸ್ಥಿತಿ ಬಗ್ಗೆ ಮುಕ್ತವಾಗಿ ವಿವರಿಸಿದರು. ತಂದೆಗೆ ಮೆಡಿಕಲ್ ಕಾಲೇಜಿನ ಶುಲ್ಕ ಮತ್ತು ವೆಚ್ಚ ಭರಿಸಲು ಅಸಾಧ್ಯವೆಂದು ಅವನು ತಿಳಿದುಕೊಂಡ. ಆದ್ದರಿಂದ ಬೆಂಗಳೂರಿನಲ್ಲಿ ಬಿಎಸ್‍ಸಿ ಕೋರ್ಸಿಗೆ ಸೇರಿದ. ಮುಂದಿನ ವರುಷ ಅವನ ತಮ್ಮನೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ. ಆದರೆ ಕುಸಿದ ಅಡಿಕೆ ಬೆಲೆ ಏರಿರಲಿಲ್ಲ. ಹಾಗಾಗಿ ಅವನೂ ಕುಟುಂಬದ ಆರ್ಥಿಕ ಪರಿಸ್ಥಿತಿ ಮನಗಂಡು, ಉಚಿತ ಸಂಸ್ಕೃತ ಶಿಕ್ಷಣ ಪಡೆಯಲು ಮಠದ ಶಾಲೆಗೆ ಸೇರಿದ. ಈ ಕುಟುಂಬದಲ್ಲಿ ಅಪ್ಪ-ಮಗ ಪರಸ್ಪರ ಅರ್ಥ ಮಾಡಿಕೊಂಡದ್ದರಿಂದ ಕುಟುಂಬದ ಹಿತಾಸಕ್ತಿ ಕಾಯ್ದುಕೊಳ್ಳಲು ಸಾಧ್ಯವಾಯಿತು.

ತಂದೆ-ಮಗನ ಪರಸ್ಪರ ನಿರೀಕ್ಷೆಗಳ ತಾಕಲಾಟಕ್ಕೆ ಮುಕ್ತಿ ದೊರೆತರೂ ಅವರಿಬ್ಬರ ಸಂಬಂಧ ಹಸನಾಗಬಹುದು. ಉದಾಹರಣೆಗೆ ಚಿಕ್ಕಮಗಳೂರಿನ ಹಿರಿಯರೊಬ್ಬರು ತನ್ನ ಆಸ್ತಿ ಪಾಲು ಮಾಡಿ, ಸುಮಾರು ೫೦ ಎಕರೆಗಳ ಎಸ್ಟೇಟನ್ನು ಕಿರಿಯ ಮಗನಿಗೆ ಕೊಟ್ಟಿದ್ದಾರೆ. ಕಿರಿಯ ಮಗ ಯಾವುದೇ ವೃತ್ತಿಯಲ್ಲಿಲ್ಲ; ಆದ್ದರಿಂದ ಎಸ್ಟೇಟ್‍ನ ಆದಾಯದಿಂದ ಅವನ ಜೀವನ ಸಾಗಲಿ ಎಂಬುದು ಅವರ ಯೋಚನೆ. ನಗರದಲ್ಲಿರುವ ತನ್ನ ಮನೆಯನ್ನು ಹಿರಿಯ ಮಗನ ಪಾಲಿಗೆ ಕೊಟ್ಟಿದ್ದಾರೆ. ಈತನ ವೃತ್ತಿ ಜೀವನ ಚೆನ್ನಾಗಿ ನಡೆಯುತ್ತಿದ್ದು, ನಗರದಲ್ಲೇ ಅವನು ವಾಸಿಸಲಿ ಎಂಬುದು ತಂದೆಯ ಆಶಯ. ತಂದೆಯವರ ಈ ನಿಲುವು ತಂದೆ-ಮಗನ ಸಂಬಂಧವನ್ನು ಹದಗೆಡಿಸಿಲ್ಲ; ಇನ್ನಷ್ಟು ಗಟ್ಟಿಗೊಳಿಸಿದೆ.

ತಂದೆ-ಮಗನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು  ಬಾಲ್ಯದಲ್ಲಿ ಮಗನನ್ನು ತಂದೆ ಹೇಗೆ ರೂಪಿಸಿದ್ದಾನೆ ಎನ್ನುವುದು ಮುಖ್ಯ ಕಾರಣವಾಗುತ್ತದೆ. ವಯಸ್ಸಿಗೆ ಬಂದ ಮಗ ಎದುರಾಡುತ್ತಾನೆಂದರೆ ಅವನಿಗೆ ಬಾಲ್ಯದಲ್ಲಿ ಸರಯಾದ ಮಾರ್ಗದರ್ಶನ ದೊರೆತಿಲ್ಲ ಎಂದರ್ಥ. ಪುತ್ರನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿ, ಅವನಲ್ಲಿ ಪ್ರೀತಿ-ವಿಶ್ವಾಸ, ಹಿರಿಯರ ಬಗ್ಗೆ ಗೌರವ ಮುಂತಾದ ಗುಣಗಳನ್ನು ಬೆಳೆಸುವ ಜವಾಬ್ದಾರಿ ತಂದೆಯದು. 

ಅನೇಕ ತಂದೆಯಂದಿರು ತಮ್ಮ ಕೆಲಸದ ಒತ್ತಡಗಳಿಂದಾಗಿ ಮಗನೊಂದಿಗೆ ಸಂವಹನವನ್ನು ಬೆಳೆಸಿಕೊಳ್ಳುವುದಿಲ್ಲ. ಆಗ ತಂದೆಯಿಂದ ಮಗ ಭಾವನಾತ್ಮಕವಾಗಿ ದೂರಾಗುತ್ತಾನೆ. ಹೀಗಾಗದಂತೆ ನೋಡಿಕೊಳ್ಳಲು ತಂದೆಯಾದವನು ಮುಂಚಿನಿಂದಲೇ ಪ್ರಯತ್ನಿಸಬೇಕು. ತನ್ನ ಕೆಲಸ-ಕಾರ್ಯಗಳ ಮಧ್ಯೆಯೂ ಮಗನಿಗಾಗಿ ಕೆಲವು ನಿಮಿಷಗಳನ್ನು ಮೀಸಲಿಡಬೇಕು. ಇಂತಹ ಸಂವಹನದಿಂದ ಪರಸ್ಪರ ತಿಳಿವಳಿಕೆ ಹೆಚ್ಚುತ್ತದೆ.

ಕೆಲವು ತಂದೆಯಂದಿರು ಮಗನ ಮೇಲಿನ ಅತಿಯಾದ ಪ್ರೀತಿಯಿಂದ ರಕ್ಷಿತ ವಾತಾವರಣದಲ್ಲಿ ಮಗನನ್ನು ಬೆಳೆಸುತ್ತಾರೆ. ಆದರೆ ಆ ಮಗುವಿಗೆ ಮುಂದೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಸಮಸ್ಯೆಯಾದೀತು. ಇಂತಹ ಮಗು ಬೆಳೆದು ಹೊರ ಪ್ರಪಂಚಕ್ಕೆ ಕಾಲಿರಿಸಿದಾಗ ತಾನು ಇತರರಿಗಿಂತ ದುರ್ಬಲ ಎಂದು ಭಾವಿಸಿ ಹತಾಶನಾಗಬಹುದು. ಇಂತಹ ಹತಾಶೆಯೂ ಕೋಪವಾಗಿ ಪರಿವರ್ತನೆಗೊಂಡು ತಂದೆ-ಮಗನ ಸಂಬಂಧಕ್ಕೆ ಧಕ್ಕೆ ಉಂಟು ಮಾಡಬಹುದು.

ಉಚಿತ ಸ್ವ-ಉದ್ಯೋಗ ತರಬೇತಿಗೆ ಆಯ್ಕೆಗಾಗಿ ನಿರುದ್ಯೋಗಿ ಯುವಕರ ಸಂದರ್ಶನ ನಡೆಸುತ್ತಿದ್ದೆ. ಸುಮಾರು ೫೫ ವರುಷ ವಯಸ್ಸಿನ ವ್ಯಕ್ತಿಯೊಬ್ಬರು ಒಳಬಂದರು. "ನೀವು ತರಬೇತಿಗೆ ಬರುತ್ತೀರಾ?" ಎಂದು ಕೇಳಿದೆ. ತಲೆಯಾಡಿಸುತ್ತ, "ಇಲ್ಲ, ಇಲ್ಲ, ನನ್ನ ಮಗನನ್ನು ಕಳಿಸೋಣ ಅಂತಿದೀನಿ" ಎಂದರು. "ಎಲ್ಲಿದ್ದಾರೆ ನಿಮ್ಮ ಮಗ" ಎಂಬ ಪ್ರಶ್ನೆಗೆ ಅವರ ಉತ್ತರ, "ಮನೆಯಲ್ಲಿದ್ದಾನೆ." ನಾನು "ಇಲ್ಲಿಗೆ ಅವನನ್ನೇ ಕಳುಹಿಸಬೇಕಾಗಿತ್ತು" ಎಂದಾಗ ಅವರ ಪ್ರತಿಕ್ರಿಯೆ, "ಅವನಿನ್ನೂ ಹುಡುಗ! ಅವನಿಗೇನು ಗೊತ್ತಾಗುತ್ತೆ? ಅದಕ್ಕೆ ನಾನೇ ಬಂದೆ." ಅವರ ಮಗನಿಗೆ ೨೨ ವರುಷ ವಯಸ್ಸು. ಈ ತಂದೆ ತನ್ನ ಮಗನನ್ನು ಹೇಗೆ ಬೆಳೆಸಿರಬಹುದು? ಆ ಮಗನ ಮನೋಸ್ಥಿತಿ ಹೇಗಿದ್ದೀತು?

ತಂದೆ -ಮಗನ ನೆಮ್ಮದಿಗಾಗಿ .....ತಂದೆ-ಮಗನ ಸಂಬಂಧ ಹದಗೆಟ್ಟರೆ ಅದನ್ನು ಸುಧಾರಿಸಲು ಖಂಡಿತ ಸಾಧ್ಯವಿದೆ. ಈ ಅಂಶಗಳಿಂದ ಅದಕ್ಕೆ ಸಹಾಯವಾದೀತು.
*  ಕುಟುಂಬದಲ್ಲಿ ಭಿನ್ನಾಭಿಪ್ರಯಗಳು ತಲೆದೋರಿದಾಗ ತಂದೆ-ಮಗ ಇಬ್ಬರೂ ಆತ್ಮವಿಮರ್ಶೆ ಮಾಡಿಕೊಂಡು ತಮ್ಮ ವರ್ತನೆ ತಿದ್ದಿಕೊಳ್ಳಬೇಕು. ತಾನೇ ಸರಿ ಎಂದು ಹಟಕ್ಕೆ ಬಿದ್ದರೆ ಭಿನ್ನಭಿಪ್ರಾಯ ಹೆಚ್ಚಾಗುತ್ತದೆ.
*  ವಯಸ್ಸಿನಲ್ಲಿ ಹಿರಿಯರಾದ ತಂದೆ, ವರ್ತನೆಯಲ್ಲಿಯೂ ಹಿರಿತನ ತೋರಬೇಕು. ಬದುಕಿನ ಬಗ್ಗೆ ತನ್ನ ಧೋರಣೆಗಳನ್ನೇ ಮಗನಲ್ಲಿ ನಿರೀಕ್ಶಿಸಬಾರದು. ವಯಸ್ಸಾದಂತೆ ಮನೆಯ ಪ್ರತಿಯೊಂದು ನಿರ್ಧಾರದಲ್ಲಿಯೂ ಮೂಗು ತೂರಿಸುವುದನ್ನು ಬಿಟ್ಟು ಹಾಯಾಗಿರಲು ಕಲಿಯಬೇಕು. ಮುಖ್ಯವಾಗಿ, ’ಮಗನಿಗೆ ಅವನದೇ ಆದ ಬದುಕು ಇದೆ’ ಎಂಬುದನ್ನು ಒಪ್ಪಿಕೊಂಡು, ಅದನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಬೇಕು.
*  ಮಗನೂ ತಂದೆಯ ಬಗ್ಗೆ ತನ್ನ ಧೋರಣೆಗಳನ್ನು ಸಕಾರಾತ್ಮಕವಾಗಿ ಬೆಳೆಸಿಕೊಳ್ಳಬೇಕು. ತಂದೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮಗ ಆದ್ಯತೆ ನೀಡಬೇಕು. ಬದುಕಿನಲ್ಲಿ ಹಣ್ಣಾದ ತಂದೆಯ ನಡವಳಿಕೆ ಬದಲಾಯಿಸುವ ಭ್ರಮೆ ಬಿಡಬೇಕು. "ಬದಲಾಗಬೇಕಾದ್ದು ತಂದೆಯಲ್ಲ, ನಾನು" ಎಂಬ ಸೂತ್ರ ಅಳವಡಿಕೊಳ್ಳಬೇಕು.

ಇವುಗಳನ್ನು ಅಳವಡಿಸಿಕೊಂಡರೆ, ತಂದೆ-ಮಗನ ಸಂಬಂಧದಲ್ಲಿ ನೋವಿಗಿಂತ ನಲಿವು ಜಾಸ್ತಿಯಾಗಲು ಸಾಧ್ಯ.

ಕಾರ್ಟೂನ್ ರಚನೆ: ಎಚ್. ಎಸ್. ವಿಶ್ವನಾಥ್

 

Comments