' ಯುಗಾದಿ ಒಂದು ಚಿಂತನೆ '
ಹಬ್ಬ ಎನ್ನುವ ಪದವೇ ಮನುಷ್ಯನನ್ನು ರೋಮಾಂಚನ ಗೊಳಿಸುವ ಶಕ್ತಿಯನ್ನು ಪಡೆದಿದೆ. ವಯಸ್ಸಿನ ಕಟ್ಟುಪಾಡುಗಳಿಲ್ಲದೆ ಲಿಂಗ ಬೇಧವಿಲ್ಲದೆ ಹಬ್ಬಗಳನ್ನು ಆಚರಿಸುತ್ತ ಬರಲಾಗಿದೆ. ಈ ಹಬ್ಬಗಳ ಆಚರಣೆ ಎಂದು ಮೊದಲಿಟ್ಟಿತು ಎಂದು ಖಚಿತವಾಗಿ ಹೇಳುವುದು ಕಷ್ಟ. ಇದು ಚಾರ್ಲ್ಸ ಡಾರ್ವಿನ್ ನ ವಿಕಾಸವಾದದಷ್ಟೆ ದೀರ್ಘವಾದ ಇತಿಹಾಸವನ್ನು ಪಡೆದಿದೆ ಎಂದು ಹೇಳಬಹುದು. ಭಾರತೀಯರ ಮಟ್ಟಿಗೆ ಹೇಳುವುದಾದರೆ ನಮ್ಮಲ್ಲಿ ಹಬ್ದಗಳ ಆಚರಣೆ ಬಹಳ. ಹಾಗೆ ನೋಡಿದರೆ ಪ್ರತಿ ಹುಣ್ಣಿಮೆ ಮತ್ತು ಅಮವಾಸ್ಯೆಗಳು ನಮಗೆ ಹಬ್ಬಗಳೆ ! ನಾವು ಆಚರಿಸುವ ಹಬ್ಬಗಳನ್ನು ಸ್ಥೂಲವಾಗಿ ಕೌಟುಂಬಿಕ ಸಾಮಾಜಿಕ ಧಾರ್ಮಿಕ ಮತ್ತು ರಾಷ್ಟ್ರೀಯ ಹಬ್ಬಗಳೆಂದು ವಿಂಗಡಿಸ ಬಹುದು. ಚೌಲ ಮುಂಜಿವೆ ಮದುವೆ ನಾಮ ಕರಣ ಮುಂತಾದವು ಕೌಟುಂಬಿಕ ಹಬ್ಬಗಳಾದರೆ, ಮಾರಿಹಬ್ಬ ಜಾತ್ರೆ ತೇರು ಮತ್ತು ಉರುಸುಗಳು ಸಾಮಾಜಿಕ ಹಬ್ಬಗಳು. ಕ್ರಿಸ್ಮಸ್ ರಂಜಾನ ಮೊಹರಂ ಬುದ್ಧ ಜಯಂತಿ ಬಸವ ಜಯಂತಿ ದಸರಾ ದೀಪಾವಳಿ ಮತ್ತು ಯುಗಾದಿ ಇತ್ಯಾದಿ ಹಬ್ಬಗಳು ಧಾರ್ಮಿಕ ಹಬ್ಬಗಳು. ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವಗಳನ್ನು ರಾಷ್ಟ್ರೀಯ ಹಬ್ಬಗಳೆಂದು ವಿಂಗಡಣೆ ಮಾಡಬಹುದು. ನಮ್ಮಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೂ ಒಂದಿಲ್ಲೊದು ಐತಿಹ್ಯವಿದೆ, ಪುರಾಣಗಳ ಲೇಪವಿದೆ. ಅದಾಗಿಯೂ ನಾಗರ ಪಂಚಮಿ, ದಸರಾ, ದೀಪಾವಳಿ ಮತ್ತು ಯುಗಾದಿ ಹಬ್ಬಗಳು ನಮ್ಮ ದೇಶ ವ್ಯಾಪಿ ಸರ್ವಮಾನ್ಯತೆಯನ್ನು ಪಡೆದ ಹಬ್ಬಗಳು. ಪ್ರಕೃತಿ ಆರಾಧಕನಾಗಿ ಪ್ರಕೃತಿಯನ್ನು ಸಹ ಹಬ್ಬಗಳ ಆಚರಣೆಗಳಲ್ಲಿ ತೆಗೆದುಕೊಂಡು ಬೌದ್ಧಿಕವಾಗಿ ವಿಕಸನ ಹೊಂದುತ್ತ ಸಾಗಿದ ನಮ್ಮ ಪೂರ್ವಜ ಮೊದಲಿಗೆ ಹಾವ ಭಾವ ಸಂಜ್ಞೆಗಳ ಮೂಲಕ ಮೂಕ ಭಾಷೆಯನ್ನು ಅಳವಡಿಸಿಕೊಂಡು, ಲಿಪಿಯನ್ನು ಕಂಡುಕೊಂಡು ಕ್ರಮೇಣ ಪ್ರಕೃತಿಯೊಡನೆ ಹಬ್ಬಗಳ ಆಚರಣೆಯನ್ನು ಋತುಮಾನಗಳಿಗೆ ಅನುಸಾರವಾಗಿ ವ್ಯವಸ್ಥಿತವಾಗಿ ತನ್ನ ಜೀವನ ಕ್ರಮದಲ್ಲಿ ಅಳವಡಿಸಿಕೊಂಡು ಬಂದ.
ಹಬ್ಬಗಳ ಆಚರಣೆಯನ್ನು ಕುರಿತಾಗಿ ನಾವು ಸ್ಥೂಲವಾಗಿ ಹೇಳುವುದಾದರೆ ಮನುಷ್ಯರು ತಮ್ಮ ಜೀವನದಲ್ಲಿ ಬರಬಹುದಾದ ಈರ್ಷೆ ಮತ್ಸರ ದ್ವೇಷಗಳನ್ನು ಮರೆತು ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಗಳನ್ನು ಗಟ್ಟಿಗೊಳಿಸಿಕೊಂಡು ಜೀವನವನ್ನು ಸಹನೀಯ ಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಿಬಂದ. ಕ್ರಮೇಣ ಹಬ್ಬಗಳ ಆಚರಣೆಗೆ ವೈಶಿಷ್ಟ್ಯತೆ ಪ್ರಾಪ್ತಿ ಯಾಗುತ್ತ ಬಂತು. ಇದಕ್ಕೆ ಕೆಲವು ಉದಾಹರಣೆಗಳನ್ನು ಕೊಡುವುದಾದರೆ ದಸರಾ ಹಬ್ಬದಲ್ಲಿ ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಆಲಂಗಿಸಿಕೊಡೋ ಇಲ್ಲ ಕೈ ಕುಲುಕಿಯೋ ' ಬನ್ನಿ ತಗೊಂಡು ಬಂಗಾರ ದ್ಹಾಂಗ ಇರೋಣ ' ಎಂದೂ, ಮಕರ ಸಂಕ್ರಮಣ ಹಬ್ಬದಂದು ಪರಸ್ಪರ ಎಳ್ಳು ಬೆಲ್ಲ ಕೊಟ್ಟುಕೊಂಡು ' ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ ' ಎಂದೂ, ಯುಗಾದಿಯಂದು ಬೇವುಬೆಲ್ಲ ತಿಂದು ಮಾನವೀಯ ಸಂಬಂಧಗಳನ್ನು ನವೀಕರಿಸಿಕೊಂಡು ಪ್ರೀತಿ ವಿಶ್ವಾಸ ಗಳನ್ನು ಸೌಹಾರ್ದಯುತ ವಾತಾವರಣದಲ್ಲಿ ಮುಂದುವರೆಸಿಕೊಂಡು ಹೋಗುವ ಉದ್ದೇಶ ಈ ಹಬ್ಬಗಳ ಆಚರಣೆಗಳ ಅಂತರಾಳದಲ್ಲಿದೆ.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಈ ಹಬ್ಬಗಳ ಆಚರಣೆಗಳು ಮಾಡುವ ಪರಿಣಾಮಗಳು ಮಾತ್ರ ಅನನ್ಯ. ಅವುಗಳ ಪೈಕಿ ಕೆಲವು ಹಬ್ಬಗಳು ನಮ್ಮ ಮನದಂತರರಾಳದಲ್ಲಿ ಚಿರಸ್ಥಾಯಿಯಾಗಿ ಉಳಿದು ಬಿಡುತ್ತವೆ. ವರ್ಷಗಳು ಗತಿಸಿದರೂ ನೆನಪಿನಂಗಳದಿಂದ ಜಾರಿ ಹೋಗುವುದಿಲ್ಲ. ಹೀಗೆ ನನ್ನ ನೆನಪಿನಂಗಳದಿಂದ ಚಿರಸ್ಥಾಯಿಯಾಗಿ ಉಳಿದು ಬಂದ ಹಬ್ಬಗಳ ಪೈಕಿ ಯುಗಾದಿ ಹಬ್ಬವೂ ಒಂದು. ಆ ಯುಗಾದಿ ಸಂದು ಅನೇಕ ಸಂವತ್ಸರಗಳೇ ಕಳೆದಿವೆ, ಆದರೂ ಆ ಯುಗಾದಿಯ ನೆನಪು ಅನನ್ಯ. ಪ್ರತಿ ಯುಗಾದಿ ಬಂದಾಗಲೂ ನನ್ನ ನೆನಪು ಆ ಹಿಂದಿನ ಯುಗಾದಿಗೆ ಜಾರುತ್ತದೆ. ಹಾಗೆ ನೋಡಿದರೆ ಅದರಲ್ಲಿ ಅಂತಹ ವಿಶೇಷವೇನೂ ಇಲ್ಲ. ಇದು ವ್ಯಕ್ತಿಗತ ಭಾವನಾ ಪ್ರಪಂಚಕ್ಕೆ ಸಂಬಂಧಿಸಿದ ವಿಷಯ. ನನ್ನದು ಉತ್ತರ ಕರ್ನಾಟಕದ ಒಂದು ಗ್ರಾಮ. ನಮಗೆ ನಮ್ಮ ನೆಲದ ಸೊಗಡಿನ ಕವಿ ಬೇಂದ್ರೆ ಯವರೆಂದರೆ ಅಚ್ಚುಮೆಚ್ಚು. ಹಾಗೆಯೆ ಅವರ ಕವನಗಳೂ ಸಹ. ಅವರ ಕೆಲವು ಕವನಗಳು ನಾನು ಓದುವಾಗ ಪಠ್ಯಗಳಾಗಿದ್ದವು. ಅವರ ಕವನಗಳ ವೈಶಿಷ್ಟ್ಯವೆಂದರೆ ಗ್ರಾಮ್ಯ ಜೀವನದ ಸೊಗಡು ದೇಶೀತನ ಶಬ್ದಗಳ ಅರ್ಥಪೂರ್ಣ ಬಳಕೆ ರಮ್ಯತೆ ಮತ್ತು ಚಲನಶೀಲ ಮನೋಗತಿಯೆಂದು ಸ್ಥೂಲವಾಗಿ ಹೇಳಬಹುದು. ಅವುಗಳ ಪೈಕಿ ಶ್ರಾವಣ, ಬೆಳಗು, ಯುಗಾದಿ ಕವನಗಳು ಇಂದಿಗೂ ನನ್ನ ತಲೆಯಲ್ಲಿ ರಿಂಗುಣಿಸುತ್ತಿವೆ.
****
ಸುಮಾರು ನಾಲ್ವತ್ತಾರು ವರ್ಷಗಳ ಹಿಂದಿನ ಮಾತು, ಯುಗಾದಿಯ ಹೊತ್ತಿಗೆ ನನ್ನ ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿದಿತ್ತು. ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದ್ದು ಫಲಿತಾಂಶದ ನಿರೀಕ್ಷೆಯಲ್ಲಿದ್ದೆ. ಅದು ಯೌವನದ ಹೊಂಗನಸಿನ ಕಾಲ. ಆ ಯುಗಾದಿಯ ಬೆಳಗಿನಂದು ನಮ್ಮ ಊರ ಹೊರಗಿನ ಕೋಟೆ ಭಾವಿಯ ಕಡೆಗೆ ಸ್ನೇಹಿತರ ಜೊತೆ ಹಬ್ಬದ ಆಚರಣೆ ನಿಮಿತ್ತ ಬೇವಿನ ಎಲೆಗಳ ಟೊಂಗೆ ಚಿಗುರು ಮತ್ತು ಮುಗುಳುಗಳು ಹಾಗೂ ಮಾವಿನ ತಳಿರನ್ನು ತರಲು ಹೋಗಿದ್ದೆವು. ಬೀಸುತ್ತಿದ್ದ ತಂಬೆಲರು ಅರುಣೋದಯದ ಕಾಲ, ಮೂಡಣದಂಗಳದಲ್ಲಿ ಮೂಡಿದ್ದ ಕೆಂಬಣ್ಣದ ಛಾಯೆ, ಆಕಾಶದಲ್ಲಿ ಅಲ್ಲಲ್ಲಿ ಚದುರಿಕೊಂಡಿದ್ದ ಮೋಡಗಳ ಅಂಚಿಗೆ ಸುವರ್ಣದ ಚೌಕಟ್ಟು ನೀಡಿತ್ತು. ಗಿಡ ಗಂಟೆಗಳೆ ಡೆಯಿಂದ ಕೇಳಿ ಬರುತ್ತಿದ್ದ ಹಕ್ಕಿಗಳ ಕಲರವ. ಆ ಪ್ರಶಾಂತ ವಾತಾವರಣ ಹೊಸ ಚಿಗುರುಗಳನ್ನು ಹೊದ್ದು ನಿಂತಿದ್ದ ಮಾವು ಬೇವು ಹೊಂಗೆ ಮತ್ತು ಹುಣಸೆ ಮರಗಳು , ಆ ದಿವ್ಯ ವಾತಾವರಣ ಮನಕ್ಕೆ ಮುದ ನೀಡಿತ್ತು. ಆ ಸುಂದರ ಸನ್ನಿವೇಶದಲ್ಲಿ ಥಟ್ಟನೆ ನೆನಪಿಗೆ ಬಂದದ್ದು ಅಂಬಿಕಾತನಯದತ್ತರ ಸುಪ್ರಸಿದ್ಧ ಕವನ ' ಯುಗಾದಿ '. ಎಷ್ಟು ಸವಿವರ ವಾಗಿ ಮನದಾಳಕ್ಕೆ ಇಳಿದಿತ್ತು ಆ ಕವನ. ಹೆಮ್ಮೆ ಎನಿಸಿತ್ತು ಕನ್ನಡ ಕಾವ್ಯ ಪ್ರಪಂಚದ ಬಗ್ಗೆ. ಕನ್ನಡ ಸಾಹಿತ್ಯದ ಅಧ್ಯಯನದ ಆಶೆ ಒಂದು ಕ್ಷಣ ಮೂಡಿ ಮಾಯವಾಗಿತ್ತು. ವಾಸ್ತವದ ಪರಿವೆಯಿಲ್ಲದೆ ಕನಸಿನ ಲೋಕದಲ್ಲಿ ವಿಹರಿಸುವ ವಯಸ್ಸು ಅದು. ಕನಸೆಲ್ಲ ಚೆದುರಿ ವಾಸ್ತವ ಮುಂದೆ ನಿಂತಾಗ ಪ್ರಶ್ನೆ ಎದುರಾದದ್ದು ತುತ್ತು ಅನ್ನ ಗೇಣು ಬಟ್ಟೆಯದು. ನೀರಸ ಜೀವನ ಸಾಗುತ್ತಿತ್ತು, ವಸಂತವೆಂದರೆ ಹಳತು ಹೋಗಿ ಹೊಸತು ಬರುವ ಪ್ರಕೃತಿಯ ಕ್ರಿಯಾಶೀಲ ಕಾಲಘಟ್ಟವದು. ಪ್ರತಿ ಯುಗಾದಿ ಬಂದಾಗಲೂ ನನ್ನ ಸ್ಮೃತಿ ಪಟಲದ ಮೇಲೆ ಹಾದು ಹೋಗುವುದು ಗತಕಾಲದ ಆ ಯುಗಾದಿ. ನಂತರದ ಯಾವ ಯುಗಾದಿಗಳೂ ನನಗಷ್ಟು ಮುದ ನೀಡಿಲ್ಲ ಇಲ್ಲಿಯ ವರೆಗೂ ಎಷ್ಟು ಯುಗಾದಿಗಳು ಬಂದು ಹೋಗಿಲ್ಲ? ಆ ಯುಗಾದಿಯದೆ ಏನು ಅಂಥ ವಿಶೇಷ ? ಋತುಮಾನಕ್ಕನುಸರಿಸಿ ಪ್ರತಿ ವಸಂತಕ್ಕೂ ಮಾವು ಬೇವು ಹೊಂಗೆ ಹುಣಸೆಗಳು ಚಿಗುರತ್ತ ಬಂದಿವೆ ಮುಂದೆಯೂ ಚಿಗುರುತ್ತವೆ. ಅದಕ್ಕಿಂತ ಮಿಗಿಲಾದ ಸುಂದರ ದೃಶ್ಯ ವೈಭವವನ್ನು ಈ ಮಲೆನಾಡಿನಲ್ಲಿ ಎಷ್ಟು ನೋಡಿಲ್ಲ ? ಆದರೆ ಗತ ಆ ಯುಗಾದಿ ಯಂದು ಉಲ್ಲಾಸಗೊಂಡ, ಜಾಗೃತಾವಸ್ಥೆ ತಲುಪಿದ್ದಿರಬಹುದಾದ ಮನಸ್ಥಿತಿ ಇವಕ್ಕೆಲ್ಲ ಕಳಶ ಪೂರ್ವಕವಾಗಿ ಅರಳಿ ನಿಂತ ಪ್ರಕೃತಿ ಪರಿಸರ ಮರ ಗಿಡಗಳು ಗಗನದಂಚಿನಲ್ಲಿ ವಿಜ್ರಂಭಿಸಿದ್ದ ಸೂರ್ಯ, ಬೇಂದ್ರೆಯವರ ಕವನ ಯುಗಾದಿ ಮಾಡಿದ್ದ ಮೋಡಿ, ಆ ಸೃಷ್ಟಿ ಸೌಂದರ್ಯದ ಆಸ್ವಾದನೆಗೆ ತೆರೆದು ನಿಂತ ಮನ, ಸುಂದರ ವಾದುದನ್ನೆಲ್ಲ ಅನುಭವಿಸ ಬೇಕೆನ್ನುವ ಯೌವನದ ತವಕ, ಬಹುಶಃ ಇವೆಲ್ಲ ಸೇರಿ ಆ ಯುಗಾದಿ ನನಗೆ ಅವಿಸ್ಮರಣೀಯ ಅನುಭವ ನೀಡಿದ್ದಿರ ಬಹುದೆ ? ಇಲ್ಲ ದಾರ್ಶನಿಕರು ಹೇಳುವಂತೆ ಕಾಲ ಧರ್ಮ ಯೋಗ ಸಮ್ಮಿಳಿತಗೊಂಡ ಸಂಧರ್ಭ ಅದಾಗಿತ್ತೆ ? ಇವು ಗಳಲ್ಲಿ ಯವುದು ನಿಜ ? ಇಂದಿಗೂ ನನಗೆ ಸ್ಪಷ್ಟವಾಗಿಲ್ಲ.
ಹುಟ್ಟಿದೂರನು ತೊರೆದು ಸಂವತ್ಸರಗಳೇ ಕಳೆದಿವೆ, ಕೋಟೆ ಬಾವಿ ಆಗಲೆ ಜನ ಸಂಪರ್ಕ ಕಳೆದುಕೊಂಡು ಮಲೆತ ನೀರಿನ ನಿರುಪಯೋಗಿ ಬಾವಿಯಾಗುತ್ತ ಬಂದಿದ್ದು, ಅದು ಈಗ ಇನ್ನೂ ಅಧ್ವಾನವಾಗಿ ಗತಕಾಲದ ಸಾಕ್ಷಿ ಯಾಗಿ ಹಳೆಯದನ್ನು ನೆನೆಯುತ್ತ ನನ್ನಂತೆ ಅವಸಾನದತ್ತ ಸಾಗಿರಬಹುದು. ಆಗ ಇದ್ದ ಮಾವು ಬೇವು ಹೊಂಗೆ ಹುಣಸೆ ಮರಗಳು ಈಗಲೂ ಇರಬಹುದೆ? ಪ್ರತಿ ವಸಂತದಲ್ಲಿ ಚಿಗುರುತ್ತ ಇನ್ನೂ ಜೀವಂತಿಕೆ ಉಳಿಸಿ ಕೊಂಡಿರ ಬಹುದೆ? ಬಹುಶಃ ಇರಲಿಕ್ಕಿಲ್ಲ. ಏರುತ್ತಿರುವ ಜನಸಂಖ್ಯೆ ಬೆಳೆದಿರಬಹುದಾದ ಗ್ರಾಮ ಜನರ ವಸತಿ ಸೌಕರ್ಯಕ್ಕೊ ಉರುವಲಿಗೊ ಮರದ ಉಪಕರಣಗಳ ತಯಾರಿಕೆಗೊ ಅವುಗಳು ಬಲಿಯಾಗಿರ ಬಹುದು. ಬಹುಶಃ ಈ ಊಹೆ ನಿಜ ವೆನಿಸುತ್ತದೆ. ಹಾಗಾಗಿರಲಿಕ್ಕಿಲ್ಲವೆಂಬ ಕ್ಷೀಣ ಆಶೆಯೂ ಮನದ ಮೂಲೆಯಲ್ಲಿದೆ. ಸಾವಿನಂಚಿಗೆ ಸರಿಯುವ ಮುನ್ನ ಶಕ್ತಿ ಉಡುಗುವ ಮೊದಲು ಒದು ಸಲವಾದರೂ ನನ್ನ ಊರನ್ನು ನೋಡಿ ಬರುವಾಶೆ ಹುಟ್ಟಿ ಹೆಮ್ಮರವಾಗುತ್ತಿದೆ. ದೀರ್ಘ ಕಾಲದ ಅಗಲಿಕೆಯಿಂದಾಗಿ ಈಗ ನಾನೆ ಆ ಊರಿಗೆ ಅಪರಿಚಿತ ನಾಗಿರಬಹುದು. ನನ್ನದೆನ್ನುವುದು ಏನೂ ಇಲ್ಲದ ಬರಿ ಭಾವನಾತ್ಮಕ ಸಮ್ಮಂಧ ಮಾತ್ರ ಉಳಿದು ಕೊಂಡಿರುವ ಆ ಊರಿಗೆ ನಾನು ಹೋದರೆ ಅನಾಮಧೇಯ ನಂತೆ ಸಾಗಿ ಹೋಗಬಹುದು. ಇದ್ದಿರಬಹುದಾದ ಕೆಲವೆ ಕೆಲವು ಓರಿಗೆಯವರು ಭೇಟಿಯಾದರೂ ಥಟ್ಟನೆ ಪರಸ್ಪರ ಗುರುತು ಹಿಡಿಯುವುದು ಕಷ್ಟವಾಗಬಹುದು. ಅವರಿಗೆ ನಾನಾಗಿಯೆ ನನ್ನ ಪರಿಚಯ ಮಾಡಿಕೊಂಡರೆ ಹಳೆಯ ಸ್ನೇಹ ನೆನೆಸಿಕೊಂಡು ಆತ್ಮೀಯತೆಯನ್ನು ತೋರಬಹುದು ಇಲ್ಲ ಹೌದಾ ಎಂದು ಚುಟುಕಿನಲ್ಲಿ ಮಾತು ಮುಗಿಸ ಬಹುದು.
ಎಷ್ಟು ಮುಜುಗರವಲ್ಲವೆ? ಎಂತಹ ವಿಚಿತ್ರ ಈ ಬದುಕು? ಯಾಂತ್ರಿಕ ಜೀವನ, ಕಾರ್ಯ ಒತ್ತಡ, ವ್ಯಾವಹಾರಿಕ ನೆಲೆಯಲ್ಲಿ ಕುಬ್ಜವಾಗುತ್ತಿರುವ ಮಾನವೀಯ ಮೌಲ್ಯಗಳು ಎಲ್ಲಕ್ಕೂ ಮಿಗಿಲಾಗಿ ಗತಿಸುತ್ತಿರುವ ಕಾಲ,ಸೀನಿಕ ವಾಗುತ್ತಿರುವ ಮಾನಸಿಕ ಸ್ಥಿತಿ, ದುರ್ಬಲವಾಗುತ್ತಿರುವ ದೇಹ ಇವುಗಳ ಜಂಜಾಟದಲ್ಲಿ ಮನಸ್ಸು ವಾಸ್ತವದ ಕಟುತ್ವಕ್ಕಿಂತ ಗತಕಾಲದ ನವಿರಾದ ಹಸಿರು ನೆನಪಿಗೆ ಜಾರುತ್ತದೆ. ಆ ಸಿಹಿ ನೆನಪೆ ಸಾಕಲ್ಲವೆ ಆಗಾಗ ಮೆಲುಕು ಹಾಕಲು. ಯುಗಾದಿ ಬಗ್ಗೆ ವರಕವಿ ಬೇಂದ್ರೆಯವರು ಎಷ್ಟು ಅರ್ಥಪೂರ್ಣವಾಗಿ ಬರೆದಿದ್ದಾರೆ ಅಲ್ಲವೆ?
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳಿ ಬರುತಿದೆ
ಎಂದು ಪ್ರಾರಂಭ ವಾಗುವ ಈ ಕವನದಲ್ಲಿ ಎಲ್ಲ ಜೀವ ಸೆಲೆಯೊಡನೆ ಆಗಮಿಸಿದ ವಸಂತ ಅರಳಿ ನಿಂತ ಪ್ರಕೃತಿ, ಇಂತಹ ವಸಂತದಲ್ಲಿ ಬಂದ ಯುಗಾದಿ ಇಲ್ಲಿ ಕವಿ ಭಾವ ಲಹರಿಯನ್ನೆ ಹರಿಸಿದ್ದಾನೆ. ಸಂಭ್ರಮದ ಸಂವೇದನೆ ಯೊಡನೆ ಪ್ರಾರಂಭವಾಗುವ ಕವನದಲ್ಲಿ ಕಾಲ ಮತ್ತೆ ಮತ್ತೆ ಪ್ರಕೃತಿಯನ್ನು ಹೊಸದಾಗಿಸುತ್ತದೆ ಎನ್ನುವ ಬೇಂದ್ರೆಯವರು
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ ?
ಎಂದು ವಿಷಾದಿಸಿದ್ದಾರೆ. ಇಲ್ಲಿ ಮನುಷ್ಯನ ಮೂಲಭೂತ ದುರಂತವಾದ ಸಾವಿನ ಅನಿವಾರ್ಯತೆಯನ್ನು
ಬೇಂದ್ರೆ ನಮಗೆ ಮುಖಾಮುಖಿ ಯಾಗಿಸುತ್ತಾರೆ. ದೇವರ ಸೃಷ್ಟಿಯಾಗಿರುವ ನಮಗೆ ಗೋಚರಿಸುವ ಪ್ರಕೃತಿಗೆ ವರುಷಕೊಂದು ಹೊಸ ಜನ್ಮವಾದರೆ ಮಾನವರಾದ ನಮಗೆ ಒಂದೆ ಬಾಲ್ಯ ಒಂದೆ ಹರೆಯ ಏಕೆ? ಕಾಲ ಎಲ್ಲ ಪ್ರಕೃತಿಗೆ ಹೊಸತನ್ನು ನವ ಚೈತನ್ಯವನ್ನು ತಂದಿದೆ, ಆದರೆ ನಮ್ಮನಷ್ಟೆ ಮರೆತಿದೆ ಎನ್ನುವ ಬೇಂದ್ರೆಯವರು ನಿಜ ಸತ್ಯವನ್ನೆ ಹೇಳಿದ್ದಾರೆ. ಆದರೆ ನಾವು ಇಲ್ಲಿ ಸಹ ಪ್ರತಿ ಯುಗಾದಿಯನ್ನು ನಮಗೆ ದೊರೆತ ಹೊಸ ಜನ್ಮವೆಂದು ಭಾವಿಸಿ ಜೀವನವನ್ನು ಅನುಭವಿಸಬೇಕು. ಮುಂದೆ ಎಂದೋ ಬರಬಹುದಾದ ಸಾವನ್ನು ಸ್ಥಿತಪ್ರಜ್ಞರಾಗಿ ಎದುರಿಸುವ ಮನೋಧಾಡ್ರ್ಯವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಕವಿಯ ಆಶಯವೂ ಇದೇ ಆಗಿರಬಹುದಲ್ಲವೆ? ಕಾರಣ ಅಪ್ರಿಯವಾದ ಸಾವನ್ನು ಕುರಿತು ಚಿಂತಿಸದೆ ಅದನ್ನು ದೂರಇಟ್ಟು ಜೀವನದಲ್ಲಿ ಬರಬಹುದಾದ ಒಳಿತು ಕೆಡಕು ಗಳನ್ನು ಸಮಭಾವದಿಂದ ಸ್ವೀಕರಿಸಿ ಮುನ್ನಡೆಯೋಣ. ಬದುಕಿನ ಸುಖ ದುಃಖಗಳೆ ಯುಗಾದಿ ಹಬ್ಬದ ಆಚರಣೆ ಯಲ್ಲವೆ?
( ಎಲ್ಲ ಸಂಪದ ಬಳಗದ ಸ್ನೇಹಿತರಿಗೆ ಯುಗಾದಿ ಹಬ್ದದ ಶುಭಾಶಯಗಳು )
*****
Comments
ಉ: ' ಯುಗಾದಿ ಒಂದು ಚಿಂತನೆ '
In reply to ಉ: ' ಯುಗಾದಿ ಒಂದು ಚಿಂತನೆ ' by venkatesh
ಉ: ' ಯುಗಾದಿ ಒಂದು ಚಿಂತನೆ '
ಉ: ' ಯುಗಾದಿ ಒಂದು ಚಿಂತನೆ '
In reply to ಉ: ' ಯುಗಾದಿ ಒಂದು ಚಿಂತನೆ ' by venkatb83
ಉ: ' ಯುಗಾದಿ ಒಂದು ಚಿಂತನೆ '
ಉ: ' ಯುಗಾದಿ ಒಂದು ಚಿಂತನೆ '
In reply to ಉ: ' ಯುಗಾದಿ ಒಂದು ಚಿಂತನೆ ' by RAMAMOHANA
ಉ: ' ಯುಗಾದಿ ಒಂದು ಚಿಂತನೆ '
ಉ: ' ಯುಗಾದಿ ಒಂದು ಚಿಂತನೆ '
In reply to ಉ: ' ಯುಗಾದಿ ಒಂದು ಚಿಂತನೆ ' by makara
ಉ: ' ಯುಗಾದಿ ಒಂದು ಚಿಂತನೆ '
ಉ: ' ಯುಗಾದಿ ಒಂದು ಚಿಂತನೆ '
In reply to ಉ: ' ಯುಗಾದಿ ಒಂದು ಚಿಂತನೆ ' by partha1059
ಉ: ' ಯುಗಾದಿ ಒಂದು ಚಿಂತನೆ '
In reply to ಉ: ' ಯುಗಾದಿ ಒಂದು ಚಿಂತನೆ ' by venkatesh
ಉ: ' ಯುಗಾದಿ ಒಂದು ಚಿಂತನೆ '
ಉ: ' ಯುಗಾದಿ ಒಂದು ಚಿಂತನೆ '
In reply to ಉ: ' ಯುಗಾದಿ ಒಂದು ಚಿಂತನೆ ' by padma.A
ಉ: ' ಯುಗಾದಿ ಒಂದು ಚಿಂತನೆ '
ಉ: ' ಯುಗಾದಿ ಒಂದು ಚಿಂತನೆ '
In reply to ಉ: ' ಯುಗಾದಿ ಒಂದು ಚಿಂತನೆ ' by swara kamath
ಉ: ' ಯುಗಾದಿ ಒಂದು ಚಿಂತನೆ '