ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೧)

ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೧)

                                                         ಸಾಮಾನ್ಯ ಪರಿಚಯ

ತತ್ವಜ್ಞಾನದ ಅವಶ್ಯಕತೆ
    ಬುದ್ಧಿವಂತನಾದ ಒಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಬಯಕೆಗಳು ಒಮ್ಮೆ ಈಡೇರಿದರೆ ಅವನು ಸಹಜವಾಗಿ ಜೀವನದ ಉದ್ದೇಶವೇನು ಎಂದು ಅನ್ವೇಷಿಸತೊಡಗುತ್ತಾನೆ. ಈ ಅನ್ವೇಷಣೆಯ ಪರಿಣಾಮವೇ ತತ್ವಜ್ಞಾನ ಅಥವಾ ತತ್ವಶಾಸ್ತ್ರ. ಸಾಮಾನ್ಯ ಅರ್ಥದಲ್ಲಿ ತತ್ವಶಾಸ್ತ್ರವೆಂದರೆ "ಜ್ಞಾನದ ಬಗೆಗಿನ ಪ್ರೀತಿ" ಎನ್ನುವುದು. ಆದರೆ, ಭಾರತೀಯ ಚಿಂತಕರು ಬೌದ್ಧಿಕ ಕಸರತ್ತಿನಿಂದ ದೊರೆಯ ಬಹುದಾದ ಈ ರೀತಿಯ ಜ್ಞಾನದ ಬಗೆಗಿನ ಪ್ರೀತಿಯನ್ನು ಬದಿಗಿರಿಸಿ ಮುಂದೆ ಸಾಗಿ ಹೋಗಿ ತಮಗೆ ಜೀವನದ  ಔನ್ನತ್ಯವನ್ನು ತಿಳಿಸಿಕೊಡುವ ಅತೀಂದ್ರಿಯ ಅನುಭವದ ಹೊಸ್ತಿಲಿನಲ್ಲಿ ಬಂದು ನಿಂತರು. ಈ  ರೀತಿಯ ವಿಶೇಷವಾದ ಅನುಭೂತಿಯಿಂದಲೇ ಅವರಿಗೆ ಅಂತಿಮ "ದರ್ಶನ"ವಾದದ್ದು (ಗೋಚರಿಸಿದ್ದು ಅಥವಾ ಅನುಭವವಾದದ್ದು.)

ದರ್ಶನಗಳ ಮೂಲಭೂತ ಉದ್ದೇಶ
    ಬಹುತೇಕ ಎಲ್ಲ ದರ್ಶನಗಳೂ, ಅತ್ಯಂತ ಕಠಿಣ ಪರಿಶ್ರಮವನ್ನು ಕೈಗೊಂಡಾಗಲೂ ಕೂಡ ಮಾನವನ ಜೀವನ ದುಗುಡದಿಂದ ಕೂಡಿದ್ದನ್ನು ಕಂಡುಕೊಂಡವು. ಆದ್ದರಿಂದ ಮಾನವನು ಈ ರೀತಿಯ ಬವಣೆಗಳಿಂದ ಕೇವಲ ಈ ಹೊತ್ತು ಅಥವಾ ನಾಳೆಗೆ ಮಾತ್ರವೇ ಬಿಡುಗಡೆಯನ್ನು ಪಡೆಯದೆ; ಎಲ್ಲ ಕಾಲಕ್ಕೂ ಶಾಶ್ವತವಾದ ಮುಕ್ತಿಯನ್ನು ಪಡೆಯ ಬೇಕು ಎನ್ನುವ ಮಹೋನ್ನತ ಗುರಿಯನ್ನು ಎಲ್ಲ ದರ್ಶನಗಳೂ ತಮ್ಮ ಮೂಲಭೂತ ಉದ್ದೇಶವನ್ನಾಗಿ ಹೊಂದಿದ್ದವು.

ಅನುಸರಿಸಿದ ವಿಧಾನಗಳು
    ಜೀವನದ ನಿಜವಾದ ಅರ್ಥವನ್ನು ತಿಳಿಯಲು ನಾವು ಹೊರಗೆ ಹುಡುಕದೆ ಅದಕ್ಕೆ ಉತ್ತರವನ್ನು ತಮ್ಮೊಳಗೆ ಕಂಡುಕೊಳ್ಳಬೇಕೆನ್ನುವುದನ್ನು ಬಹುಶಃ ಮನುಷ್ಯನಲ್ಲಿರುವ ಅಂತರಾಳದ ತುಮುಲವೊಂದು (ಒಂದು ಒಳದನಿ) ಅಥವಾ ತನ್ನರಿವಿಗೆ ಬಾರದ ಆಧ್ಯಾತ್ಮದ ಬಯಕೆಯೊಂದು; ಹಿಂದೂ ತತ್ವಶಾಸ್ತ್ರಜ್ಞರನ್ನು ಆತ್ಮಾವಲೋಕನದ ದಾರಿಯೆಡೆಗೆ ಕೊಂಡೊಯ್ದಿರಬೇಕು. ಈಗ ನಾವು ಷಡ್ದರ್ಶನಗಳೆಂದು ಕರೆಯುವ ಆರು ವಿಧಾನಗಳ ಮೂಲಕ ಅವರು ಆ ಹಾದಿಯಲ್ಲಿ ಸಾಗಿದರು.
     ಜೀವನದ ಸಮಸ್ಯೆಗಳ ನಿವಾರಣೆಗೆ ಒಂದು ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲು ಒಮ್ಮೆ ಜ್ಞಾನ ಪಿಪಾಸುಗಳು ಮತ್ತು ಋಷಿಮುನಿಗಳು ಒಂದೆಡೆ ಸಭೆ ಸೇರಿದರು. ವಿಪರ್ಯಾಸವೆಂದರೆ, ಈ ಸಮಸ್ಯೆಗೆ ಉತ್ತರವನ್ನು ಏಕಾಂತ ತಪಸ್ಸಿನ ಮೂಲಕ ಕಂಡುಕೊಳ್ಳಬೇಕೆನ್ನುವುದನ್ನು ಆ ಸಭೆಯು ಅಂಗೀಕರಿಸಿತೆಂದು ಶ್ವೇತಾಶ್ವತರ ಉಪನಿಷತ್ತಿನ ಒಂದು ಶ್ಲೋಕ (೧-೧.೩) ತಿಳಿಸುತ್ತದೆ.
    ಹೀಗಾಗಿ "ತಪಸ್ಸು" (ಪರಿಶುದ್ಧವಾದ ಜೀವನವನ್ನು ನಡೆಸುವುದು), "ಶ್ರವಣ" (ಮಹತ್ತಾದ ಸತ್ಯಗಳ ಬಗ್ಗೆ ಋಷಿಮುನಿಗಳಿಂದ ಕೇಳಿ ತಿಳಿದುಕೊಳ್ಳುವುದು) ಮತ್ತು "ಮನನ" (ಕೇಳಿದ ವಿಷಯದ ಬಗ್ಗೆ ದೀರ್ಘವಾದ ಚಿಂತನೆಯನ್ನು ನಡೆಸುವುದು) ಮಾಡುವುದು ಹಿಂದೂ ತತ್ವಶಾಸ್ತ್ರಜ್ಞರ ಮುಖ್ಯವಿಧಾನವಾಗಿತ್ತು.

ಶ್ರುತಿ ಅಥವಾ ವೇದಗಳ ಸ್ಥಾನ
    ವಿವಿಧ ದರ್ಶನಗಳನ್ನು ಪ್ರತಿಪಾದಿಸಿದ ಅಥವಾ ಸ್ಥಾಪಿಸಿದ ಋಷಿಮುನಿಗಳು (ದ್ರಷ್ಠಾರರು) ಬಹುಬೇಗನೇ ಮಾನವನ ಬುದ್ಧಿಮತ್ತೆಯನ್ನು ಅವಲಂಬಿಸಿದ ತರ್ಕದ ಮಿತಿಯನ್ನು ಅರಿತುಕೊಂಡರು; ಹಾಗಾಗಿ ಅವರು ಜ್ಞಾನದ ಆಗರಗಳಾಗಿದ್ದ ಶ್ರುತಿ ಅಥವಾ ವೇದಗಳೆಡೆಗೆ ತಮ್ಮ ದೃಷ್ಟಿಯನ್ನು ಸಾರಿಸಿದರು. ವೇದಗಳನ್ನು ಹೊರತು ಪಡಿಸಿ ಸ್ವತಂತ್ರವಾಗಿ ತರ್ಕಿಸುವುದರಿಂದ ನಿಜವಾದ ಜ್ಞಾನವುಂಟಾಗುತ್ತದೆಂಬ ತಮ್ಮ ನಂಬಿಕೆ ಶುಷ್ಕವೆನಿಸತೊಡಗಿದ್ದರಿಂದ ಅವರು ತಮ್ಮ ದೃಷ್ಟಿಯನ್ನು ವೇದಗಳ ಮೇಲೆ ಕೇಂದ್ರೀಕರಿಸಿದರು ಮತ್ತು ಅಲ್ಲಿ ತಮ್ಮ ಪ್ರತಿಪಾದನೆಗಳಿಗೆ  ಹೆಚ್ಚಿನ ವಿವರಣೆ ಮತ್ತು ಅರ್ಥಗಳನ್ನು ಕಂಡುಕೊಂಡರು.
    ಒಂದು ತಿನಿಸಿನ ರುಚಿಯನ್ನು ತಿಳಿಯಬೇಕಾದರೆ ಅದನ್ನು ಸವಿದಲ್ಲದೆ ಅದರ ರುಚಿ ತಿಳಿಯದು. ಹಾಗಾಗಿ ಆ ದಾರ್ಶನಿಕರು ವೇದಗಳಲ್ಲಿ ತಿಳಿಸಲ್ಪಟ್ಟ ಅನುಸರಣ ಯೋಗ್ಯವಾದ ನಿಯಮಗಳನ್ನು ಪಾಲಿಸಿ ಮುಕ್ತಿಯನ್ನು ಅಂದರೆ ತಮ್ಮ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಂಡರು. ಆದರೆ ವೇದಗಳನ್ನು ಆ ದಾರ್ಶನಿಕರು ವಿವಿಧಕೋನಗಳಿಂದ ಅರ್ಥೈಸಿದ್ದರಿಂದ ಹಲವಾರು ಶಾಖೆಗಳು ಉದ್ಭವಿಸಿ ಈಗ ಪ್ರಚಲಿತವಿರುವ ಆರು ದರ್ಶನಗಳಿಗೆ ಎಡೆಮಾಡಿಕೊಟ್ಟಿತು.
                                                                                                 .........................ಮುಂದುವರೆಯುವುದು

ವಿ.ಸೂ.: ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ General Introductionನ 1 ರಿಂದ 3ನೆಯ ಪುಟದ ಅನುವಾದದ ಭಾಗ.
ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧ ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%A7/23/03/2012/36095

Rating
No votes yet

Comments