ಬಾಲ್ಯದ ಸ್ವಾತಂತ್ರದಿನ ಹೀಗಿತ್ತು...

ಬಾಲ್ಯದ ಸ್ವಾತಂತ್ರದಿನ ಹೀಗಿತ್ತು...

ನ್ಮಾನ್ಯ ಅಧ್ಯಕ್ಷರೆ, ಗುರುಗಳೇ...ಎಂದು ಆರಂಭಿಸಿ ಇವತ್ತು ನಾವು.....ವರುಷದ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಭಾಷಣ ಕಂಠ ಪಾಠ ಮಾಡಿಕೊಳ್ಳುವುದು.


'ಸಾರೆ ಜಹಾಂ ಸೆ ಅಚ್ಛಾ...' 'ವಂದೇ ಮಾತರಂ....' ಹೀಗೆ ನಾಲ್ಕೈದು ದೇಶಭಕ್ತಿಗೀತೆಗಳನ್ನು ಹಾಡುತ್ತಾ ಪ್ರಾಕ್ಟೀಸ್..., ಲೆಫ್ಟ್ ರೈಟ್ ಲೆಫ್ಟ್ ಅಂತಾ ಹೇಳುತ್ತಾ ಮಾರ್ಚ್್ಫಾಸ್ಟ್ ಪ್ರಾಕ್ಟೀಸ್....ಹೀಗೆ ಅಗಸ್ಟ್ 14ರಂದು ಗಮ್ಮತ್ತು ಹೇಳುವುದು ಬೇಡ. ನಾಳೆ ಸ್ವಾತಂತ್ರ್ಯ ದಿನಾಚರಣೆ...ನೀಟಾಗಿ ಯುನಿಫಾರಂ ಹಾಕಿ, ಕೇಸರಿ ಬಿಳಿ ಹಸಿರು ಬಳೆ ತೊಟ್ಟು ಶಾಲೆಗೆ ಹೋಗುವುದೆಂದರೆ ಅದೆಷ್ಟು ಖುಷಿಯಾಗ್ತಿತ್ತು ಗೊತ್ತಾ. ಶಾಲಾ ವಿದ್ಯಾರ್ಥಿ ಲೀಡರ್ ಆಗಿದ್ರೆ ಸ್ವಾತಂತ್ರ್ಯದಿನದಂದು ಶಾಲೆಯಲ್ಲಿ ಧ್ವಜಾರೋಹಣ ಸಮಾರಂಭಕ್ಕೆ ಬರುವ ಅತಿಥಿಗಳನ್ನು ಬರ ಮಾಡಿಕೊಳ್ಳಬೇಕು, ಅವತ್ತಿನ ಸ್ಪೆಷಲ್ ಅಸೆಂಬ್ಲಿಯ ನಾಯಕತ್ವ ವಹಿಸಬೇಕು ಹೀಗೆಲ್ಲಾ ಇರುತ್ತಿತ್ತು. ಪ್ರೈಮರಿ ಸ್ಕೂಲ್್ನಲ್ಲಿರುವಾಗ ಶಾಲೆಯಲ್ಲಿನ ಸ್ವಾತಂತ್ರ್ಯ ದಿನಾಚರಣೆಯನ್ನು ನೆನೆಸಿಕೊಂಡಾಗೆಲ್ಲಾ..ಅದೆಷ್ಟು ಸವಿಯಾಗಿತ್ತು ಅಂತಾ ಅನಿಸುತ್ತೆ.


 
ನಾನು ಚಿಕ್ಕವಳಿರುವಾಗ ಸ್ವಾತಂತ್ರ್ಯದಿನ ಬಂದ್ರೆ ಸಾಕು. ಭಾಷಣ ಮಾಡಲು ತುಂಬಾ ಖುಷಿ. ಪ್ರತಿ ಕ್ಲಾಸಿನಿಂದ ಇಬ್ಬರು ಭಾಷಣ ಮಾಡಲೇ ಬೇಕಾಗಿತ್ತು. ಹುಡುಗಿಯರಿಂದ ಯಾರು? ಎಂದು ಟೀಚರ್ ಕೇಳಿದರೆ ಸಾಕು. ನಾನಿದ್ದೇನೆ ಸಾ...ಅಂತ ಹೇಳುತ್ತಿದ್ದೆ. ಮೊದ ಮೊದಲು ಭಾಷಣವನ್ನು ಅಮ್ಮ ಬರೆದುಕೊಡುತ್ತಿದ್ದರು...ಎಲ್ಲರ ಭಾಷಣವೂ ಒಂದೇ ತೆರನಾಗಿರುತ್ತಿತ್ತು. ನಮಗೆ ಅಗಸ್ಟ್ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ, ನೆಹರು, ಭಗತ್ ಸಿಂಗ್..ಹೀಗೆ ಒಂದು ಹತ್ತು ಮಂದಿಯ ಹೆಸರು ಹೇಳಿ ಇವರೆಲ್ಲರೂ ಹೋರಾಡಿದರು. ಬ್ರಿಟಿಷರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು, ಕ್ವಿಟ್ ಇಂಡಿಯಾ ಚಳುವಳಿ, ಉಪ್ಪು ಸತ್ಯಾಗ್ರಹ, ಗಾಂಧೀಜಿಯ ಅಹಿಂಸೆ ಹೀಗೆ ಒಂದಿಷ್ಟು ವಿವರಣೆ ಕೊಟ್ಟಾದ ಮೇಲೆ ಇಲ್ಲಿಗೆ ಭಾಷಣವನ್ನು ಮುಗಿಸುತ್ತೇನೆ ..ಜೈ ಹಿಂದ್ ಅಂತಾ ಹೇಳಿ..ಸ್ಟೇಜ್ ಇಳಿದು ಬರುವ ಈ ಪ್ರಕ್ರಿಯೆ ಮಾಮೂಲಿಯಾಗಿತ್ತು.


 


ಅಪ್ಪರ್ ಪ್ರೈಮರಿ ಕ್ಲಾಸಿಗೆ ಬಂದಾಗ ಅಮ್ಮ ಬರೆದು ಕೊಡುವ ಭಾಷಣ ಯಾಕೋ ಬೋರು ಹೊಡೆಯುತ್ತಿತ್ತು. ಆವಾಗ ಭಾಷಣ ಮಾಡುವುದು ಹೇಗೆ? ಎಂಬ ಪುಸ್ತಕವನ್ನು ಖರೀದಿಸಿ ಅದರಲ್ಲಿರುವ ಭಾಷಣವನ್ನು ಕಂಠಪಾಠ ಮಾಡಿಕೊಂಡು, ಭಾಷಣ ಮಾಡುವ ರೀತಿಯನ್ನು ಕಲಿತುಕೊಂಡದ್ದು. ಭಾಷಣ ಮಾಡುವ ರೀತಿಯೇನೋ ಗೊತ್ತಾಯ್ತು ಆದರೆ 'ಗಟ್ಟಿ'ಯಾದ ವಿಷಯವೊಂದು ಬೇಕು ಅನಿಸಿದಾಗ ನನ್ನ ಅಪ್ಪ ಹೀಗೆ ಹೇಳು ಎಂದು ಒಂದಿಷ್ಟು ಸಲಹೆ ಕೊಟ್ಟರು. ಸ್ಟೇಜ್ ಮೇಲೆ ಭಾಷಣ ಮಾಡುವುದರ ಮುನ್ನ ನಮ್ಮ ಕ್ಲಾಸ್ ಟೀಚರ್್ರ ಮುಂದೆ ಭಾಷಣ ಮಾಡಬೇಕಾಗಿತ್ತು. ನಾನು ಹೀಗೆ ಭಾಷಣ ಮಾಡಿದಾಗ ಅಪ್ಪ ಹೇಳಿದ ಆ ಪಾಯಿಂಟ್ ಬಿಟ್ಟು ಬಾಕಿ ಎಲ್ಲಾ ಓಕೆ ಎಂದು ಟೀಚರ್ ಸಲಹೆ ಇತ್ತರು. ಸರಿ, ಹೋಗ್ಲಿ ಬಿಡಿ, ಮುಂದಿನ ಸ್ವಾತಂತ್ರ್ಯದಿನಕ್ಕೆ ಒಳ್ಳೆಯ ಭಾಷಣ ಮಾಡಿಯೇ ತೀರಬೇಕೆಂಬ ಹಠ ಹಿಡಿದೆ. ಹಾಗೆ 6ನೇ ಕ್ಲಾಸಿನಲ್ಲಿರುವಾಗ ನನ್ನ ಅಪ್ಪನ ಗೆಳೆಯರೊಬ್ಬರು ಭಾಷಣ ಬರೆದುಕೊಟ್ಟರು. ಅದರಲ್ಲಿ ಅಪ್ಪ ಹೇಳಿದ ಪಾಯಿಂಟ್ ಇತ್ತು ಆದರೆ ಹೇಳಿದ ಶೈಲಿ ಭಿನ್ನವಾಗಿದ್ದ ಕಾರಣ ಕ್ಲಾಸ್ ಟೀಚರ್ ಕೂಡಾ ಓಕೆ ಅಂದ್ರು. ನನ್ನ ಭಾಷಣ ಕೇಳಿದ ಟೀಚರ್ ನೀನೇ ಪ್ರಧಾನ ಭಾಷಣ ಮಾಡು ಅಂದು ಬಿಟ್ರು. ಆವಾಗ ಪ್ರಧಾನ ಭಾಷಣ ಮಾಡುವವರು ಅಂದರೆ 7ನೇ ಕ್ಲಾಸಿನ ವಿದ್ಯಾರ್ಥಿಗಳು(ಸೀನಿಯರ್). ನಾನು 6ನೇ ಕ್ಲಾಸಿನಲ್ಲಿರುವಾಗಲೇ ಪ್ರಧಾನ ಭಾಷಣ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿ ಚಪ್ಪಾಳೆ ಗಿಟ್ಟಿಸಿದಾಗ ಅಸೂಯೆ ಪಟ್ಟ ಸೀನಿಯರ್್ಗಳ ಮುಖ ಈಗಲೂ ನೆನಪಿದೆ.


 


ಇನ್ನೊಂದು ಸ್ವಾರಸ್ಯಕರವಾದ ವಿಷಯವೇನೆಂದೆರೆ ಆ ದಿನದಂದು ನಮ್ಮ ಶಾಲೆಯಿಂದ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಹೋಗುವುದು. ಸುಮಾರು ಒಂದು ಕಿ.ಮೀ ಮೆರವಣಿಗೆ ಹೋಗಿ ಮತ್ತೆ ವಾಪಾಸ್ ಬರಬೇಕಾಗಿತ್ತು. ಮೆರವಣಿಗೆಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದರೆ ನಾವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದೇವೆ ಎಂಬ ಅನುಭವವಾಗುತ್ತಿತ್ತು. ಸ್ಕೌಟ್ ಡ್ರೆಸ್ ಧರಿಸಿದ ಅಣ್ಣ ಲೆಫ್ಟ್  ರೈಟ್ ಅಂತಾ ಹೇಳಿ ನಡೆಯುತ್ತಿದ್ದರೆ ನನಗೆ ಅವನು ಯೋಧನಂತೆ ಕಾಣುತ್ತಿದ್ದ. ಭಾರತ್ ಮಾತಾಕೀ ಜೈ.... ವಂದೇ ಮಾತರಂ ಎಂದು ಘೋಷಣೆ ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತಿತ್ತು. ಮೆರವಣಿಗೆ ಮುಗಿದ ನಂತರ ಅಸೆಂಬ್ಲಿ, ಧ್ವಜಾರೋಹಣ ಆಮೇಲೆ ಸಭಾ ಕಾರ್ಯಕ್ರಮ, ಸಿಹಿ ತಿಂಡಿ ವಿತರಣೆ ಹೀಗಿತ್ತು ನಮ್ಮ ಶಾಲೆಯ ಸ್ವಾತಂತ್ರ್ಯ ದಿನಾಚರಣೆ.


 


ಹೈಸ್ಕೂಲ್್ಗೆ ಬಂದಾಗ ಸರಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಪೆರೇಡ್್ನಲ್ಲಿ ಭಾಗವಹಿಸಿದ್ದು. ಜಿಲ್ಲೆಯ ಸ್ವಾತಂತ್ರ್ಯ ದಿನಾಚರಣೆ ಕಾಲೇಜು ಮೈದಾನದಲ್ಲಿ ಆಚರಿಸುತ್ತಿದ್ದುದರಿಂದ ಧ್ವಜಾರೋಹಣಕ್ಕೆ ಮುಖ್ಯ ಅತಿಥಿಗಳಾಗಿ ಸಚಿವರೋ, ಇತರ ಮೇಲಾಧಿಕಾರಿಗಳು ಬರುತ್ತಿದ್ದರು. ಆ ಪೆರೇಡ್್ನಲ್ಲಿ ಭಾಗವಹಿಸಿ ಶಾಲಾ ಗೈಡ್ ದಳವನ್ನು ಪ್ರತಿನಿಧೀಕರಿಸಿದಾಗ ಆದ ಅನುಭವ, ಸ್ವಾತಂತ್ರ್ಯ ಪ್ರಯುಕ್ತ ನಡೆದ ಸ್ಪರ್ಧೆಗಳಲ್ಲಿ ಗಳಿಸಿಕೊಂಡ ಬಹುಮಾನ ಇವೆಲ್ಲವೂ ಸ್ಮರಣೀಯ ಘಟನೆಗಳೇ. ಪ್ಲಸ್ ಟು ವರೆಗೆ ಶಾಲೆಗೆ ಹೋಗಿ ಸ್ವಾತಂತ್ರ್ಯ ದಿನಾ ಶಾಲೆಯಲ್ಲಿ ಸಂಭ್ರಮದಿಂದ ಕೊಂಡಾಡುವುದು ನಡೆದೇ ಇರುತ್ತಿತ್ತು. ಯಾವಾಗ ಕಾಲೇಜು ಮೆಟ್ಟಿಲು ಹತ್ತಿದೆನೋ ಎಲ್ಲವೂ ಬದಲಾಯಿತು. ಅಗಸ್ಟ್ 15 ಅಂದ್ರೆ ಟಿವಿ ನೋಡುವುದು, ಎಲ್ಲಾದರೂ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಇದ್ದರೆ ಭಾಗವಹಿಸುವುದು ಇಷ್ಟಕ್ಕೇ ಸೀಮಿತವಾಗಿತ್ತು. ಕಾಲೇಜು ತಲುಪಿದಾಗ ಭಾಷಣ ಯಾರೂ ಬರೆದುಕೊಡಬೇಕಾಗಿರಲಿಲ್ಲ. ಸ್ವಂತವಾಗಿಯೇ ಆಲೋಚಿಸಿ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯ ಸಿಕ್ಕಿದ್ದು ಕಾಲೇಜು ಸೇರಿದ ನಂತರವೇ.


 


ಟಿವಿ ವಿಷಯ ಹೇಳುವಾಗ ನೆನಪಿಗೆ ಬರುವುದೇ ಡಿಡಿ 1 ಕಾರ್ಯಕ್ರಮ. ಸ್ವಾತಂತ್ರ್ಯ ದಿನದಂದು ಎಲ್ಲಾ ವಿಶೇಷ ಕಾರ್ಯಕ್ರಮಗಳೇ. ದೆಹಲಿಯಲ್ಲಿನ ಧ್ವಜಾರೋಹಣ, ಪೆರೇಡ್, ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲಾ ನೋಡಲು ತುಂಬಾ ಖುಷಿಯಾಗ್ತಿತ್ತು. ಮಧ್ಯಾಹ್ನ  ದೇಶಭಕ್ತಿಯನ್ನು ಮೆರೆಯುವ ಸಿನಿಮಾ.. 'ರೋಜಾ' ಚಿತ್ರವಂತೂ ಸಾಕಷ್ಟು ಬಾರಿ ಪ್ರಸಾರವಾಗುತ್ತಿತ್ತು. ಅದರಂತೆಯೇ ತಿರಂಗಾ, ಲಗಾನ್, ಗದ್ದಾರ್, ಸ್ವದೇಶ್ ಚಿತ್ರಗಳೂ ಇಂತಹಾ ಮಹತ್ವದ ದಿನಗಳಲ್ಲೇ ಪ್ರಸಾರವಾಗುತ್ತಿತ್ತು. (ಈವಾಗ ಡಿಡಿ 1 ನೋಡುವುದೇ ಕಡಿಮೆ. ಆದ್ದರಿಂದ ಈಗಿನ ಸ್ಥಿತಿ ಬಗ್ಗೆ ನಂಗೊತ್ತಿಲ್ಲ). ಅದೇ ವೇಳೆ ಡಿಡಿ1 ನಲ್ಲಿ ಸಾಮರಸ್ಯವನ್ನು, ದೇಶಭಕ್ತಿಯನ್ನು ಸಾರುವ ಅದೆಷ್ಟೋ ಗೀತೆಗಳು ಆಗಾಗ ಪ್ರಸಾರವಾಗುತ್ತಿತ್ತು. ಸ್ವಾತಂತ್ರ್ಯದಿನ ಆದಿತ್ಯವಾರವಾಗಿದ್ದರೆ ರಂಗೋಲಿ ಕಾರ್ಯಕ್ರಮ 'ಮೇರೆ ದೇಶ್ ಕಿ ಧರ್್ತಿ....' ಗೀತೆಯಿಂದಲೇ ಆರಂಭವಾಗುತ್ತಿತ್ತು. ಆದಾಗ್ಯೂ, ಬಂಕಿಮ್ ಚಂದ್ರ ಚಟರ್ಜಿಯವರ ವಂದೇ ಮಾತರಂ...ಹಾಡು ನಿಧಾನವಾಗಿ ರಾಗ ಎಳೆಯಬೇಕಲ್ಲಾ ಎಂದು ಬೇಸರಿಸುತ್ತಿದ್ದವರಿಗೆ ಜೋಷ್ ತರಿಸಿದ್ದೇ ಎ ಆರ್ ರೆಹಮಾನ್್ರ 'ವಂದೇ ಮಾತರಂ....'ಹಾಡು. ಹೀಗೆ ಸ್ವಾತಂತ್ರ್ಯ ಆಚರಣೆಗೆ ವರುಷಗಳು ತುಂಬುತ್ತಿದ್ದಂತೆ ಹಾಡು, ರೀತಿ, ಆಚರಣೆಗಳು ಎಲ್ಲವೂ ಬದಲಾಗುತ್ತಲೇ ಬರುತ್ತಿದೆ. ಜೊತೆಗೆ ನಾವು ಕೂಡಾ...ರಾಷ್ಟ್ರಗೀತೆಯಾದ ಜನಗಣ ಮನ ಹಾಡು ಕೇಳಿದರೆ ಎದ್ದು ನಿಂತು ಗೌರವ ಸೂಚಿಸಬೇಕು ಎಂದು ಎಳವೆಯಲ್ಲೇ ಕಲಿಸಿಕೊಟ್ಟಿರುತ್ತಾರೆ. ರಾಷ್ಟ್ರಗೀತೆ ಕೇಳಿದ ಕೂಡಲೇ ಎದ್ದು ನಿಲ್ಲಬೇಕು ಅದು ರಾಷ್ಟ್ರಕ್ಕೆ ಸೂಚಿಸುವ ಗೌರವ. ಆದರೆ ಇದನ್ನೂ ನಾವು ಮರೆಯುತ್ತಿದ್ದೇವೆ, ಅದಿರಲಿ ಬಿಡಿ, ರಾಷ್ಟ್ರಗೀತೆ ಸರಿಯಾಗಿ ಹಾಡಲು ಬರದವರು ನಮ್ಮಲ್ಲಿ ಇದ್ದಾರೆ (ನನ್ನ ಹಾಸ್ಟೆಲ್ ಅನುಭವವಿದು)!


 


ಇಂತಿರುವಾಗ ಕೇವಲ ಕ್ರಿಕೆಟ್ ಗ್ರೌಂಡ್್ನಲ್ಲಿ ಮಾತ್ರ ಭಾರತದ ಧ್ವಜ ಹಿಡಿದು ಇಂಡಿಯಾ...ಇಂಡಿಯಾ ಎಂದು ಕೂಗಿ ಕರೆದು...ಮೇರ ಭಾರತ್ ಮಹಾನ್ ಅಂತಾ ಬೋರ್ಡ್ ಹಿಡಿದು ಪೋಸ್ ಕೊಟ್ಟರೆ ದೇಶಕ್ಕೆ ಗೌರವ ಸೂಚಿಸಿದಂತಾಗುವುದೇ? ದೇಶಕ್ಕಾಗಿ ನನ್ನ ಪ್ರಾಣವನ್ನೇ ಮುಡಿಪಾಗಿಡುತ್ತೇನೆ ಎಂದು ಪ್ರತಿಜ್ಞೆಯ ಸಾಲಲ್ಲಿ ಹೇಳುತ್ತಾ ಬಂದವರು ನಾವು. ಆದರೆ ಅಧಿಕಾರ ದಾಹಿಗಳಾಗಿ ಇನ್ನೊಬ್ಬರ ಪ್ರಾಣ ತೆಗೆಯಲು ಹೊಂಚು ಹಾಕುತ್ತಿದ್ದೇವೆ. ಸ್ವಾತಂತ್ರ್ಯ ಲಭಿಸಿ 63 ವರ್ಷಗಳಾದರೂ ನಿಜವಾದ ಸ್ವಾತಂತ್ರ್ಯ ಅಂದರೆ ಯಾವುದು? ಅದನ್ನು ಅನುಭವಿಸಿದವರು ಯಾರು? ಎಂದು ಕೇಳಿದರೆ ಸ್ವಲ್ಪ ಮಂಡೆ ಖರ್ಚು ಮಾಡಬೇಕಾಗುತ್ತದೆ.  ಸದ್ಯ ಬಾಲ್ಯದ ನೆನಪುಗಳೇ ಮಧುರ ಅವುಗಳನ್ನು ಮೆಲುಕು ಹಾಕಿದರೆ ಕೆಲಸದ ಒತ್ತಡದಲ್ಲೂ ಸ್ವಲ್ಪ ಸಂತೋಷ ಸಿಗಬಹುದು ಅಲ್ವಾ....


 


 

Rating
No votes yet

Comments