ಮತ್ತೆ ಬ೦ದಿದೆ ಯುಗಾದಿ

ಮತ್ತೆ ಬ೦ದಿದೆ ಯುಗಾದಿ

ಹಳೆಯ ವರ್ಷದ ಮುಕ್ತಾಯ, ಹೊಸ ವರ್ಷದ ಆಗಮನ. ಚೈತ್ರಮಾಸ, ಋತುಗಳ ರಾಜ ವಸಂತನೊಂದಿಗೆ ಎಲ್ಲರೂ ಸಂಭ್ರಮಿಸುವ ದಿನ. ಈ ಹೊಸ ವರ್ಷದ ಪ್ರಕೃತಿಯ ನಗುವಿನ ಜೊತೆಯ್ಲಲೆ ‘ಯುಗಾದಿ’ಯ ಸಂಭ್ರಮದ ಕಾತರ. ಫಾಲ್ಗುಣ ಮಾಸದ ಅಮಾವಾಸ್ಯೆ ಮುಗಿದು ಚೈತ್ರ ಶುಕ್ಲ ಪ್ರತಿಪದೆಯ ದಿನವೇ ಯುಗಾದಿ ಹಬ್ಬ. ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲ ಪುರುಷನ ಹಾಗೂ ವರ್ಷಾಧಿಪತಿಯ ಆರಾಧನೆ, ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ.


ಈ ವರ್ಷ ಚಾಂದ್ರಮಾನ ಯುಗಾದಿಯು ಚೈತ್ರ ಮಾಸ ಶುಕ್ಲ ಪಕ್ಷ ಪ್ರತಿಪದೆ, ಮಾರ್ಚ್ ೨೩ರಂದು ಶುಕ್ರವಾರ ಸೂರ್ಯೋದಯಕ್ಕೆ ನಂದನ ಸಂವತ್ಸರದೊಂದಿಗೆ ಪ್ರಾರಂಭವಾಗುತ್ತದೆ.


ಕಲಿಯುಗದ ಪ್ರಾರಂಭದ ದಿನ, ಯುಗದ ಆದಿ -ಯುಗಾದಿ.  ಹಿಂದಿನ ವರ್ಷದ ಕಹಿ ಅನುಭವಗಳನ್ನು ಮರೆತು, ಸಿಹಿ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಮುಂದಿನ ದಿನಗಳು ನೆಮ್ಮದಿಯಿಂದ, ಆನಂದವಾಗಿ ಕಳೆಯುವಾ ಎಂಬ ಅಭಿಲಾಷೆ ಹೊತ್ತು ಯುಗಾದಿಯನ್ನು ಆಚರಿಸುತ್ತೇವೆ. ನಮ್ಮಲ್ಲಿ ಸೌರ-ಚಾಂದ್ರಮಾನ ಯುಗಾದಿಗಳು ಆಚರಣೆಯಲ್ಲಿದೆ.


ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರು. ಮಹಾರಾಷ್ಟ್ರದಲ್ಲಿ ಯುಗಾದಿ ಹಬ್ಬಕ್ಕೆ  "ಗುಡಿ ಪಾಡ್ವ" ಎಂದು ಕರೆಯುತ್ತಾರೆ. ಶ್ರೀರಾಮ ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಊರಿನ ಬಾಗಿಲಲಿ ಸಿಕ್ಕ ಒಂದು ಬಿದಿರಿನ ಕಡ್ಡಿಗೆ ವಸ್ತ್ರವೊಂದನ್ನು ಕಟ್ಟಿ ಜಯದ ಧ್ವಜವನ್ನು, ಚೈತ್ರ ಶುಕ್ಲ ಪಾಡ್ಯದಂದು ಹಾರಿಸಿದ್ದನಂತೆ. ಅದರ ಸಂಕೇತವಾಗಿ ಗುಡಿ-ಬಿದಿರಿನ ಕಡ್ಡಿಗೆ ರೇಷ್ಮೆಯ ಬಟ್ಟೆಯನ್ನು ಹೊದಿಸಿ ಅದಕ್ಕೆ ಹಾರವನ್ನು ಹಾಕಿ ಜಯದ ಸಂಕೇತವಾಗಿ ಮನೆಯ ಹೊಸ್ತಿಲ ಬಳಿ ಅಥವಾ ಮನೆಯ ಹಜಾರದಲ್ಲಿ ಇಡುವುದು ಪದ್ದತಿ. ಪಾಡ್ವ-ಪಾಡ್ಯ ಅಥ್ವಾ ಪಡುವ ಪದ. ಮಾವು-ಶುಂಠಿ ಪಾನಕ, ಕಡಲೆ ಉಸಲಿ, ಪೂರಣ್ ಪೋಳಿ ಊಟ ಹಬ್ಬದ ವಿಶೇಷತೆ. ಕರ್ನಾಟಕ-ಒಬ್ಬಟ್ಟು, ಆಂಧ್ರ ಬೊಬ್ಬಟ್ಲು ಅಥವಾ ಪೋಳೇಲು. ಒಟ್ಟಿನಲಿ ಸವಿ-ಸವಿ ಒಬ್ಬಟ್ಟೇ-ಬಂಬಾಟು. ಸಿಂಧ್ ಪ್ರಾಂತ್ಯದ ಜನರು ಇದನ್ನು "ಚೇತಿ ಚಾಂದ್" (ಚೈತ್ರ ಮಾಸದ ಚಂದ್ರ) ಎನ್ನುವ ಹೆಸರಿನಿಂದ ಹೊಸ ವರುಷದ ಮೊದಲ ದಿನವನ್ನಾಗಿ ಆಚರಿಸುತ್ತಾರೆ. ಮಣಿಪುರಿಯವರಿಗೂ ಕೂಡ ಯುಗಾದಿಯಂದು ಹೊಸವರುಷದ ಹೊಸ ಸಂಭ್ರಮ.



ಬೇವು-ಬೆಲ್ಲ ನಮ್ಮ ಜೀವನದುದ್ದಕ್ಕೂ ಕಾಣುವ ಸುಖ- ದುಃಖ, ಹಗಲು- ರಾತ್ರಿ, ನೋವು- ನಲಿವು, ಪ್ರೀತಿ- ದ್ವೇಷ, ಲಾಭ- ನಷ್ಟ ಇವುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಿ ವರ್ಷವಿಡೀ ಸಮರಸವಾಗಿರಲಿ ಎಂಬುದೇ ಇದರ ಐತಿಹ್ಯ. ಬೇವು ರೋಗ ನಿವಾರಕ, ಔಷಧೀಯ ಗುಣವುಳ್ಳದ್ದು. ಬೆಲ್ಲ ಉಷ್ಣಕಾರಕ ಹಾಗೂ ಜೀರ್ಣಕಾರಕ. ಬದುಕು ನಲಿವನ್ನು ಮಾತ್ರ ಹೊ೦ದಿಲ್ಲ. ನೋವು ಕೂಡ ನಲಿವಿನಲ್ಲಿ ಬೆಸೆದುಕೊ೦ಡಿದೆಯೆ೦ಬ ಭಾವನೆ. ಸುಖ - ದುಃಖ ನಾಣ್ಯದ ಎರಡು ಮುಖದ೦ತೆ. ಕಾಲ ಚಕ್ರದ ಗತಿಯೇ ಹಾಗೆ. ಯಾಂತ್ರಿಕ ಬದುಕಿನಲ್ಲಿ ಹಬ್ಬಗಳ ಆಚರಣೆಯೇ ಇಲ್ಲವಾಗುತ್ತಿದೆ. ಯುವಜನತೆಗಂತೂ ಹಬ್ಬದ ಆಚರಣೆಯ ಬಗ್ಗೆ ಆಸಕ್ತಿಯೇ ಇಲ್ಲ.  ಇದು ಕಳಕಳಿ ತರುವ ವಿಷಯ.


ಮತ್ತೆ ಬ೦ದಿದೆ ಯುಗಾದಿ
ಮತ್ತದೇ ಬಾಳ ಹಾದಿಯಲ್ಲಿ;
ಸ್ವೀಕರಿಸುವುದಷ್ಟೆ ನಮ್ಮ ಕೆಲಸ
ನೋವೋ, ನಲಿವೋ
ಅಳುವೋ, ನಗುವೋ
ಅದುವೆ ಸ೦ವತ್ಸರದ ರಸದೌತಣ"


ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ......


ವರಕವಿ ದ. ರಾ. ಬೇ೦ದ್ರೆಯವರ ಕವಿವಾಣಿಯ ನೆನೆದು,  ಯುಗಾದಿಯನ್ನು ಹರ್ಷ-ಸಂಭ್ರಮಗಳೊಂದಿಗೆ, ಋತುಗಳರಾಜ ಚೈತ್ರವನ್ನು ಹಾಗೂ ನಂದನನಾಮ ನಮ್ಮ ಮುಂದಿನ ಬದುಕಿನ ಪಯಣವನ್ನು ನಂದನವನವನ್ನಾಗಿಸಲಿ ಎಂಬ ಆಶಯ ಹೊತ್ತು, ಹೊಸ ಸಂವತ್ಸರವನ್ನು ಸ್ವಾಗತಿಸುವಾ ....


ಸಮಸ್ತ ಓದುಗರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.


 



 

Comments