'ಆಲದ ಮರ' (ಕಥೆ) ಭಾಗ 2
ಗೌರಿ ಗಣೇಶನ ಹಬ್ಬಕ್ಕೆ ಊರಿಗೆ ಬರುವುದಾಗಿ ಸುರೇಂದ್ರ ಮನೆಗೆ ಕಾಗದ ಬರೆದಿದ್ದ. ಆತನ ಆಗಮನದ ನಿರೀಕ್ಷೆಯಲ್ಲಿ ಆತನ ಕುಟುಂಬ ವರ್ಗದವರು ಇದ್ದರು. ಆದರೆ ಆತ ಪತ್ರ ಬರೆದು ತಿಳಿಸಿದಂತೆ ಹಬ್ಬದ ಹಿಂದಿನ ದಿನ ಬರಲೆ ಇಲ್ಲ. ಆದರೆ ಗಣೇಶನ ಹಬ್ಬದ ದಿನ ಊರಿನ ದನಗಾಯಿ ತುಕ್ರ ರಾಮಪ್ಪನ ಮನೆಗೆ ಬಂದು ಅವರ ಮಗ ಸುರೇಂದ್ರನ ಶವ ಆಲದ ಮರದಲ್ಲಿ ನೇತಾಡುತ್ತಿರುವ ವಿಷಯ ತಿಳಿಸಿದ. ಗಾಬರಿಗೊಂಡ ರಾಮಪ್ಪನ ಮನೆಯವರು ಮತ್ತು ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದರು. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸುರೇಂದ್ರನ ಶವವಿತ್ತು. ಘಟನೆ ಬಗ್ಗೆ ಸುರಪುರದ ಜನ ವಿಷಾದ ವ್ಯಕ್ತ ಪಡಿಸಿದರು., ಅನೇಕರು ರಾಮಪ್ಚನ ಮನೆಗೆ ತೆರಳಿ ಅವನ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ಬಂದರು. ವಿಷಯ ತಿಳಿದು ಎಲ್ಲರಂತೆ ಸ್ಥಳಕ್ಕೆ ಬಂದ ವೆಂಕಟಪ್ಪ
' ಸುರೆಂದ್ರ ನಂತಹ ಹುಡುಗ ಈ ಸೀಮೆಯಲ್ಲಿಯೆ ಇರಲಿಲ್ಲ ' ಎಂತಹ ಅನರ್ಥ ಮಾಡಿಕೊಂಡ ಎಂದು ವಿಷಾದ ವ್ಯಕ್ತ ಪಡಿಸಿದ. ಆತನೆ ಮುಂದೆ ನಿಂತು ಹೊನ್ನಾಪುರ ಪೋಲೀಸ್ ಠಾಣೆಗೆ ಮಾಹಿತಿ ತಿಳಿಸಿ ದುರ್ಮರಣ ಪ್ರಕರಣ ದಾಖಲಿಸಿಸಿ, ಸ್ಥಳಕ್ಕೆ ವೈದ್ಯರನ್ನು ಕರೆಸಿ ಬೇಗನೆ ಮೃತನ ಪೋಸ್ಟ್ ಮಾರ್ಟಂ ಜರುಗಿಸಿಸಿ ಸುರೇಂದ್ರನ ಅಂತ್ಯ ಸಂಸ್ಕಾರ ಸಾಯಂಕಾಲ ದೊಳಗೆ ಜರುಗುವಂತೆ ರಾಮಪ್ಪನ ಕುಟುಂಬಕ್ಕೆ ಸಹಕಾರ ನೀಡಿದ, ಯಾವತ್ತೂ ಊರ ಜನರೊಟ್ಟಿಗೆ ಗತ್ತು ಗಾಂಭಿರ್ಯಗಳಿಂದ ವರ್ತಿಸುತ್ತಿದ್ದ ವೆಂಕಟಪ್ಪ ತನ್ನ ಮನೆಯ ಕಾರ್ಯವೆಂಬಂತೆ ರಾಮಪ್ಪನ ಮಗನ ಕ್ರಿಯಾ ಕರ್ಮಗಳಲ್ಲಿ ಭಾಗವಹಿಸಿದ. ವೆಂಕಟಪ್ಪನ ಮಾಗಿದ ವಯಸ್ಸು, ಮನಸ್ಸನ್ನೂ ಮಾಗಿಸಿರ ಬೇಕೆಂದು ಊರ ಜನ ಭಾವಿಸಿದರು. ಆದರೆ ವೆಂಕಟಪ್ಪ ಅಷ್ಟು ಸುಲಭದ ವ್ಯಕ್ತಿಯಾಗಿರಲಿಲ್ಲ. ಆತನೊಂದು ಹಿಂಸ್ರ ಪಶುಗಳಿಂದ ತುಂಬಿದ ದಟ್ಟ ಕಾನನ, ಅದರ ಅಭೇಧ್ಯತೆಗೆ ಯಾರೂ ಹೆದರಿ ಹಿಂದೆ ಸರಿಯಬೇಕು.
ಕಾಲ ಕಳೆದಂತೆ ದುಃಖದ ತೀವ್ರತೆ ಕಡಿಮೆಯಾಗುತ್ತದೆ ನಿಜ, ಆದರೆ ಸುರೇಂದ್ರನ ಸಾವು ಸುವರ್ಣಳನ್ನು ಗೋಜಲಾಗಿ ಕಾಡ ತೊಡಗಿತು. ಆತನ ಸಾವಿನಿಂದ ಕಂಗೆಟ್ಟ ಸುವರ್ಣ ಸುರೆಂದ್ರನ ನೆನಪುಗಳ ಬೆಂಬತ್ತಿ ಪದೆ ಪದೆ ಆಲದ ಕಟ್ಟೆಯ ಹತ್ತಿರ ಹೋಗಿ ಕುಳಿತು ತಮ್ಮೀರ್ವರ ಭೇಟಿಗಳ ನೆನೆನಯವುಳು ಅಲ್ಲದೆ ತನಗೆ ತಾನೆ ನಗುವುದು ಅಳುವುದು ಮಾಡ ತೊಡಗಿದಳು. ಇದನ್ನು ಕಂಡು ವೆಂಕಟಪ್ಪ ಒಳಗೊಳಗೆ ವೇದನೆಯನ್ನು ಅನುಭವಿಸಿದ.ಊರವರು ಸುವರ್ಣಳಿಗೆ ಯಾವುದೋ ದೆವ್ವ ಹಿಡಿದಿದೆ ಎಂದು ಮತನಾಡ ತೊಡಗಿದರು. ವಾತಾವರಣ ಬದಲಾವಣೆಗೆಂದು ಮಗಳು ಸುವರ್ಣಳನ್ನು ವೆಂಕಟಪ್ಪ ಆಕೆಯ ಅಜ್ಜ ಮರಿಯಪ್ಪನ ಮನೆಗೆ ಕಳಿಸಿಕೊಟ್ಟ. ಸ್ಥಳ ಬದಲಾವಣೆ ಮತ್ತು ಆಕೆಯ ಅಜ್ಜನ ಮನೆಯವರ ಆರೈಕೆ ಕ್ರಮೇಣ ಸುವರ್ಣ ಸಹಜ ಸ್ಥಿತಿಗೆ ಮರಳಿದಳು. ಅದೇ ಸಕಾಲವೆಂದು ವೆಂಕಟಪ್ಪ ಮಗಳು ಸುವರ್ಣಳ ಮದುವೆಯನ್ನು ಕೋಣನಕೆರೆಯ ಚಂದ್ರಪ್ಪನ ಮಗ ಮುಕುಂದನೊಟ್ಟಿಗೆ ನಿಶ್ಚಯಮಾಡಿ ಹೊನ್ನಾಪುರದ ಕಲ್ಯಾಣ ಮಂಟಪದಲ್ಲಿ ಬಹಳ ವಿಜೃಂಭಣೆಯಿಂದ ಮದುವೆ ಕಾರ್ಯ ನೆರವೇರಿಸಿ ಮಗಳನ್ನು ಆಕೆಯ ಗಂಡನ ಮನೆಗೆ ಕಳಿಸಿಕೊಟ್ಟ.
*
ಅರಳಿಮರವನ್ನು ಕಂಡಾಗಲೆಲ್ಲ ವೆಂಕಟಪ್ಪನಿಗೆ ಯಾವುದೋ ಅನಿಷ್ಟವನ್ನು ಕಂಡಂತೆ ಅನಿಸ ತೊಡಗಿತು. ಅದರ ಅಸ್ತ್ತಿತ್ವ ಆತನನ್ನು ಬಲವಾಗಿ ಕಾಡ ತೊಡಗಿತು. ಕ್ರಮೇಣ ಆತ ಅಂತರ್ಮುಖಿಯಾಗುತ್ತ ಬಂದ. ಆಗಲೆ ಸುರಪುರ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಸುರೇಂದ್ರ ದೆವ್ವವಾಗಿ ಆಲದಮರದ ಸುತ್ತ ಮುತ್ತ ಅಲೆಯು ತ್ತಿದ್ದಾನೆ ಎಂಬ ವರ್ತಮಾನ ಹರಡುತ್ತ ಬಂತು. ಈ ಗಾಳಿ ವರ್ತಮಾನವನ್ನು ಯಾರು ಹುಟ್ಟು ಹಾಕಿದರೋ ಗೊತ್ತಿಲ್ಲ, ಆದರೆ ಈ ವರ್ತಮಾನ ಶರವೇಗದಲ್ಲಿ ಹರಡಿದ್ದು ಮಾತ್ರ ನಿಜ. ಜನರು ಒಟ್ಟಿಗೆ ಕಲೆಯುವ ಸ್ಥಳವಾಗಿದ್ದ ಆ ಆಲದಕಟ್ಟೆಯ ಕಡೆಗೆ ಜನ ಹೋಗುವುದನ್ನು ಕಡಿಮೆ ಮಾಡಿದರು. ಮರು ವರ್ಷದ ನವರಾತ್ರಿಯ ಹಬ್ಬದ ದಿನದಂದು ತುಕ್ರ ಊರ ದನಗಳನ್ನು ಮೇಯಿಸಲು ಎಂದಿನಂತೆ ಆಲದಕಟ್ಟೆಯ ಹತ್ತಿರ ಹಾದು ಹೋಗುವಾಗ ನಾಗರ ಹಾವೊಂದು ಕಚ್ಚಿ ಆತ ಸತ್ತ. ಆ ಆಲದಕಟ್ಟೆಯ ಹತ್ತಿರ ಒಂದು ವರ್ಷದಲ್ಲಿಯೆ ಎರಡು ಸಾವುಗಳು ಸಂಭವಿಸಿದ್ದು ಊರಿಗೆ ಗರ ಬಡಿದಂತಾಯಿತು. ಸುರಪುರದ ಗ್ರಾಮಸ್ಥರು ಆಲದಕಟ್ಟೆಯ ಹತ್ತಿರ ಸುಳಿಯುವುದನ್ನೆ ಬಿಟ್ಟುಬಿಟ್ಟರು. ಮಗಳ ಮದುವೆಯ ಸಮಸ್ಯೆಯನ್ನು ನಾಜೂಕಾಗಿ ಬಗೆಹರಿಸಿದ್ದ ವೆಂಕಟಪ್ಪ ಮಗ ಹರೀಶನ ಮದುವೆಯನ್ನು ಚಂದ್ರಪ್ಪನ ಮಗಳು ಸರೋಜಳೊಟ್ಟಿಗೆ ಮಾಡಿ ತನ್ನ ಮತ್ತು ಚಂದ್ರಪ್ಪನ ಬೀಗತನದ ಸಂಬಂಧವನ್ನು ಇನ್ನಷ್ಟು ಗಟ್ಟಿ ಗೊಳಿಸಿಕೊಂಡ.
ಎಲ್ಲ ಜವಾಬ್ದಾರಿಗಳಿಂದ ಮುಕ್ತನಾದ ವೆಂಕಟಪ್ಪ ವಿಷಯ ಲೋಲುಪ್ತತೆಯಿಂದ ಮಾತ್ರ ಮುಕ್ತನಾಗಲಿಲ್ಲ. ಸುರಪುರದ ಊರ ಮುಂದಿನ ಆಲದಕಟ್ಟೆಯ ಬಯಲಲ್ಲಿ ವೆಂಕಟಪ್ಪ ಚಂದ್ರಿಯರ ಪ್ರಣಯ ಕೇಳಿಗಳು ನಿರಾತಂಕ ವಾಗಿ ಮುಂದುವರಿದವು. ಒಂದು ದಿನ ಚಂದ್ರಿ ಅವರ ಸಮಾಗಮದ ಸಂಧರ್ಭದಲ್ಲಿ ತಾನು ಬಸುರಿಯಾದ ವಿಷಯವನ್ನು ವೆಂಕಟಪ್ಪನ ಕಿವಿಯಲ್ಲಿ ಮೆಲ್ಲನೆ ಪಿಸುಗುಟ್ಟಿದಳು. ಅಂತಹ ನೀರವ ರಾತ್ರಿಯ ವೇಳೆಯಲ್ಲಿಯೂ ವೆಂಕಟಪ್ಪ ಜಿಲ್ಲನೆ ಬೆವೆತು ಹೋದ. ದೂರದ ಶಹರಕ್ಕೆ ಹೋಗಿ ಗರ್ಭವನ್ನು ತೆಗೆಸಿ ಬರೋಣ ಎಂದು ಆಕೆಯ ಮನ ಒಲಿಸಲು ನೋಡಿದ. ಆದರೆ ಚಂದ್ರಿ ಆತನ ಮಾತಿಗೆ ಒಪ್ಪದೆ
' ನಿನ್ನನ್ನು ನಂಬಿ ತಾಳಿ ಕಟ್ಟಿದ ಗಂಡನನ್ನೆ ಬಿಟ್ಟು ಬಂದೆ ಮುಪ್ಪಿನಲ್ಲಿ ನನಗೆ ಗತಿಯಾರು ?ನಾನು ಗರ್ಭವನ್ನು ತೆಗೆಸಿ ಕೊಳಳುವುದಿಲ್ಲ ' ಎಂದು ಹಟ ಹಿಡಿದಳು.
ಅದಕ್ಕೆ ವೆಂಕಟಪ್ಪ ' ನಾನು ನಿನಗೆ ನಾಲ್ಕು ಎಕರೆ ಗದ್ದೆಯನ್ನು ತೆಗೆದು ಕೊಡುತ್ತೇನೆ ' ಎಂದು ಆಕೆಯನ್ನು ಪುಸಲಾಯಿಸಲು ನೋಡಿದ. ಆತನ ಗಿಲೀಟಿನ ಮಾತುಗಳಿಗೆ ಮರುಳಾಗದ ಚಂದ್ರಿ
' ವೃದ್ಧಾಪ್ಯದಲ್ಲಿ ಆ ಜಮೀನನ್ನು ಉತ್ತು ಬಿತ್ತು ಬೆಳೆದು ನನ್ನನ್ನು ಸಾಕಲಾದರು ಒಂದು ಮಗು ಬೇಡವೆ ' ಎಂದು ಮರು ಪ್ರಶ್ನಿಸಿ ಗರ್ಭ ತೆಗೆಸಿಕೊಳ್ಳುವುದಿಲ್ಲ ಎಂಬ ತನ್ನ ನಿಲುವಿಗೆ ಅಂಟಿಕೊಂಡಳು.
ಆಕೆಯ ಅಚಲ ನಿರ್ಧಾರ ಆತನನ್ನು ಫಜೀತಿಗಿಟ್ಟು ಕೊಳ್ಳುವಂತೆ ಮಾಡಿತು. ಚಂದ್ರಿ ಮತ್ತು ತನ್ನ ಸಂಬಂಧ ಇಡೀ ಊರಿಗೆ ಗೊತ್ತಿದೆ, ಆದರೆ ಯಾರೂ ತನ್ನ ಎದುರು ಆಡುವುದಿಲ್ಲ ಅಷ್ಟೆ, ಅದು ಆತನಿಗೆ ಹೊಳೆಯದ ಸಂಗತಿ ಏನಲ್ಲ. ತನ್ನ ಪ್ರತಿಷ್ಟೆ ಮತ್ತು ಗೌರವಕ್ಕೆ ಧಕ್ಕೆ ತರುವ ಯಾವುದನ್ನೂ ನಿವಾರಿಸಿ ಕೊಳ್ಳುವ ಛಾತಿಯ ಕಟು ಸ್ವಭಾವ ಮತ್ತು ವ್ಯಕ್ತಿತ್ವದ ವೆಂಕಟಪ್ಪನಿಗೆ ಚಂದ್ರಿಯ ವಿಷಯದಲ್ಲಿ ಕಟುಕನಾಗಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹದಿನೈದು ಇಪ್ಪತ್ತು ವರ್ಷಗಳಿಂದ ತನಗೆ ಅನುಕೂಲೆಯಾಗಿ ಬಾಳಿದವಳಲ್ಲವೆ? ತನ್ನ ನಿಲುವನ್ನು ಬದಲಾಯಿಸಿಕೊಳ್ಳದ ಚಂದ್ರಿ ಶಿವರಾತ್ರಿ ಅಮವಾಸ್ಯೆಯ ರಾತ್ರಿ ಆಲದಮರದ ಬುಡದಲ್ಲಿ ನಿಗೂಢ ರೀತಿಯಲ್ಲಿ ಸಾವನಪ್ಪಿದಳು. ಹಿಂದೆ ಮುಂದೆ ಯಾರೂ ಇಲ್ಲದ ಆಕೆ ಸುರಪುರದ ಮಸಣದಲ್ಲಿ ಮಣ್ಣಾದಳು.
*
ಸುರೇಂದ್ರ ತುಕ್ರ ಮತ್ತು ಚಂದ್ರಿಯರ ಸಾವುಗಳು ಸುರಪುರದ ಹತ್ತಿರದ ಆಲದಕಟ್ಟೆಯ ಹತ್ತಿರವೆ ಸಂಭವಿಸಿದ್ದು, ಆ ಆಲದಮರ ಸುರ್ಪುರದ ಸಮಸ್ಯೆಯ ಕೆಂದ್ರವಾಯಿತು. ಆಲದಮರದ ಸುತ್ತ ಮುತ್ತಲಿನ ಫಾಸಲೆಯಲ್ಲಿ ಅನೇಕ ವೀರಗಲ್ಲುಗಳು ಮತ್ತು ಮಾಸತಿಕಲ್ಲುಗಳು ಹಗೂ ಪಾಳು ಬಿದ್ದ ದೇಗುಲಗಳಿದ್ದು ದೆವ್ವ ಪ್ರೇತಗಳು ಆ ಆಲದಮರದಲ್ಲಿ ವಾಸವಾಗಿವೆ, ಅವುಗಳೆ ಸುರೇಂದ್ರ, ತುಕ್ರ ಮತ್ತು ಚಂದ್ರಿಯರ ಸಾವಿಗೆ ಕಾರಣವೆಂದು ಸುರಪುರದ ಜನರು ಅಂತಿಮ ತೀರ್ಮಾನಕ್ಕೆ ಬಂದರು. ಯುಗಾದಿ ಹಬ್ಬದ ದಿನ ಗ್ರಾಮ ದೇವತೆಯ ಗುಡಿಯಲ್ಲಿ ಆಲದಮರದ ಕುರಿತಂತೆ ಪಂಚಾಯ್ತಿಯನ್ನು ಸೇರಿಸಿದರು. ಊರ ಪ್ರಮುಖರ ಹೆಳಿಕೆಗಳನ್ನು ಆಲೈಸಿದ ಗ್ರಾಮದ ಮುಖ್ಯಸ್ಥ ವೆಂಕಟಪ್ಪ ಒಂದು ತೀರ್ಮಾನಕ್ಕೆ ಬಂದ. ಪಾಳು ದೇಗುಲಗಳ ಹತ್ತಿರವಿರುವ ಆ ಬೃಹತ್ತಾದ ಆಲದಮರವನ್ನು ಕಡಿಯಬೇಕು, ನಂತರ ಆ ಆಲದಕಟ್ಟೆಯ ಜಂಬಿಟ್ಟಿಗೆ ಮತ್ತು ಕರಿ ಕಲ್ಲುಗಳನ್ನು ಕಿತ್ತು ತಂದು ಸುರಪುರದ ಗ್ರಾಮದೇವಿಯ ಗುಡಿಯ ಸುತ್ತ ಕಂಪೌಂಡ್ ಗೋಡೆಯನ್ನು ಕಟ್ಟಬೇಕು. ಮನೆಗೊದು ಗಂಡಾಳಿನಂತೆ ಜನ ಈ ಗ್ರಾಮದ ಕೆಲಸಕ್ಕೆ ಸಹಕರಿಸ ಬೇಕೆಂದು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಅನುಕೂಲಸ್ಥರು ತಮ್ಮ ಯಥಾನುಶಕ್ತಿಗೆ ಅನುಸಾರವಾಗಿ ಹಣ ನೀಡ ಬೇಕೆಂದು ಇದಕ್ಕಾಗಿ ತಾನು ಸಾವಿರದಾ ಒಂದು ನೂರಾ ಹನ್ನೊಂದು ರೂಪಾಯಹಿಗಳನ್ನು ಕೊಡುವದಾಗಿ ವಾಗ್ದಾನ ಮಾಡಿದ. ಎಲ್ಲರೂ ವೆಂಕಟಪ್ಪನ ತೀರ್ಮಾನವನ್ನು ಒಪ್ಪಿದರು.
ಸುರೇಂದ್ರ ತುಕ್ರ ಮತ್ತು ಚಂದ್ರಿಯರ ಸಾವಿಗೆ ಆ ಆಲದಮರ ಎಷ್ಟರ ಮಟ್ಟಿಗೆ ಕಾರಣ ಎನ್ನುವುದು ಒಂದು ಚಿದಂಬರ ರಹಸ್ಯ. ಸುರೇಂದ್ರ ಮತ್ತು ಚಂದ್ರಿಯರ ಸಾವಿನ ಕಾರಣ ವೆಂಕಟಪ್ಪ ಆಲದಮರ ಮತ್ತು ಆ ದೇವರಿಗಷ್ಟೆ ಗೊತ್ತಿರುವಂತಹುದು. ಇನ್ನು ತುಕ್ರ ನಾಗರಹಾವು ಕಚ್ಚಿ ಸತ್ತ ವಿಷಯ, ಶತಮಾನಗಳ ಕಾಲದಿಂದ ಉಳಿದು ಬಂದ ಆ ಆಲದಕಟ್ಟೆ ಸರಿಯಾದ ಉಸ್ತುವಾರಿಯಿಲ್ಲದೆ ಶಿಥಿಲಾವಸ್ಥೆಯಲ್ಲಿದ್ದು ಹಾವುಗಳ ಆವಾಸ ಸ್ಥಾನವಾಗಿದೆ. ಎಂದಿನಂತೆ ತುಕ್ರ ದನಕಾಯಲು ಆಲದಕಟ್ಟೆಯ ಹತ್ತಿರ ಹಾಯ್ದು ಹೋಗುವಾಗ ಕಾಣದೆ ಯವುದೋ ನಾಗರಹಾವನ್ನು ಮೆಟ್ಟಿದ್ದಾನೆ, ಆಗ ಹಾವು ಕಚ್ಚಿದೆ ತತ್ಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ತುಕ್ರ ಸತ್ತಿದ್ದಾನೆ. ಇದು ಅಕಸ್ಮಿಕವಾಗಿ ಆದಂತಹ ಒಂದು ಘಟನೆ. ತುಕ್ರನ ಸಾವಿಗೂ ಆಲದಮರದಲ್ಲಿ ಇದ್ದಿರಬಹುದಾದ ದೆವ್ವಗಳಿಗೂ ಎಲ್ಲಿದೆಲ್ಲಿಯ ಸಂಬಂಧ? ಈ ಜಗತ್ತಿನಲ್ಲಿ ಮನುಷ್ಯನಿಗೆ ಮಿಗಿಲಾದ ದೆವ್ವ ಮತ್ತು ವಿಷಜಂತು ಯಾವುದಿದೆ? ಮನುಷ್ಯನಿಗೆ ದೇವರು ಆಲೋಚನಾ ಶಕ್ತಿಯನ್ನು ಕೊಟ್ಟಿದ್ದಾನೆ, ಅದನ್ನು ಆತ ಇಲ್ಲಿಯ ವರೆಗೆ ಎಷ್ಟು ದುರುಪಯೋಗ ಪಡಿಸಿಕೊಂಡಿಲ್ಲ? ಪ್ರಕೃತಿ ಪರಿಸರಗಳನ್ನು ಹಾಳುಗಡೆವಿಲ್ಲ? ಭೂಮಿಯನ್ನು ನರಕದ ಕೂಪವನ್ನಾಗಿ ಮಾಡಿಲ್ಲ? ಬುದ್ಧಿಪೂರ್ವಕವಾಗಿ ಒಂದು ಮರದ ಸಸಿಯನ್ನು ನೆಟ್ಟು ನೀರೆರೆದು ಪೋಷಿಸ ಲಾಗದವನಿಗೆ, ಪ್ರಕೃತಿಯಲ್ಲಿ ತಾನಾಗಿಯೆ ಹುಟ್ಟಿ ಶತಮಾನಗಳ ಕಾಲದಿಂದ ಬೃಹತ್ತಾಗಿ ಬೆಳೆದು ನಿಂತ, ಅದು ಇಲ್ಲಿಯ ವರೆಗೆ ಅದು ಕಂಡಿರಬಹುದಾದ ಮಕ್ಕಳಾಟ ಹುಡುಗಾಟ ಅಲ್ಲದೆ ನೂರಾರು ಕೇಳಿಗಳನ್ನು ಕಂಡು ಕೇಳಿ ತನ್ನ ಹೃದಯದಲ್ಲಿ ಅಡಗಿಸಿಟ್ಟುಕೊಂಡು ಕಳೆಯ ಪೀಳಿಗೆಗೆ ವಿದಾಯ ಹೇಳುತ್ತ ಹೊಸ ಪೀಳಿಗೆಗೆ ಶುಭ ಕೋರುತ್ತ ನಿಂತ ಮರವನ್ನು ಕಡಿದು ಹಾಕುವ ಅಧಿಕಾರ ವನ್ನು ಕೊಟ್ಟವರು ಯಾರು? ಮರ ಮತನಾಡಲಾರದು ಎಂದು ಈ ದೌಜನ್ಯವೆ? ಸುರೇಂದ್ರ ಮತ್ತು ಚಂದ್ರಿಯರ ಸಾವು ವೆಂಕಟಪ್ಪನಿಗೆ ಭೂತವಾಗಿ ಕಾಡಿದ ಮಾತ್ರಕ್ಕೆ ನಿರಪರಾಧಿ ಮರ ಬಲಿಯಾಗಬೇಕೆ? ಈ ವೆಂಕಟಪ್ಪನೇನು ಶಾಶ್ವತವೆ? ಇಂದು ಬಿದ್ದರೆ ನಾಳೆ ಮಣ್ಣು ಸೇರಬೇಕು. ಒಂದು ವಸ್ತುವನ್ನು ಸೃಷ್ಟಿಸುವ ಶಕ್ತಿ ಇಲ್ಲದವರು ಅದರ ನಾಶಕ್ಕೂ ಹೋಗ ಬಾರದು. ಆಲದಮರ ಕಡಿದ ಮಾತ್ರಕ್ಕೆ ಅದರ ಸಂತತಿ ನಶಿಸಿ ಹೋಗುವುದೆ? ಮತ್ತೊಂದು ಆಲದ ಸಸಿ ಹುಟ್ಟಿ ಹೆಮ್ಮರವಾಗಿ ಬೆಳೆದು ಸುಗುಣ ಸುರೇಂದ್ರ ರಂತಹವರ ಭೇಟಿ ಮತ್ತು ವೆಂಕಟಪ್ಪ ಚಂದ್ರಿಯಂತಹವರ ಬೇಟಗಳ ತಾಣವಾಗುತ್ತೆ. ಇಂತಹ ಆಲದಮರಗಳನ್ನು ವೆಂಕಟಪ್ಪ ನಂತಹವರು ಎಷ್ಟೇ ಕಡಿದರೂ ಆಲಗಳು ಮರುಹುಟ್ಟಿ ಹೆಮ್ಮರವಾಗಿ ಬೆಳೆಯುತ್ತವೆ ಜಗದ ಚಲನಶೀಲತೆಗೆ ಸಾಕ್ಷಿಯಗಿ ನಿಲ್ಲುತ್ತವೆ. ಆದರೂ ಸುರಪುರದ ಆಲದಮರ ವೆಂಕಟಪ್ಪನ ಕುತಂತ್ರಕ್ಕೆ ಬಲಿಯಾಗಿ ನೆಲಕ್ಕೊರಗಿತು. ಶತಮಾನಗಳ ಕಾಲದಿಂದ ಆಲದಮರಕ್ಕೂ ಮತ್ತು ಸುರಪುರಕ್ಕೂ ಇದ್ದ ನಂಟು ಕೊನೆ ಗೊಂಡಿತು.
*****
Comments
ಉ: 'ಆಲದ ಮರ' (ಕಥೆ) ಭಾಗ 2
In reply to ಉ: 'ಆಲದ ಮರ' (ಕಥೆ) ಭಾಗ 2 by swara kamath
ಉ: 'ಆಲದ ಮರ' (ಕಥೆ) ಭಾಗ 2
ಉ: 'ಆಲದ ಮರ' (ಕಥೆ) ಭಾಗ 2
In reply to ಉ: 'ಆಲದ ಮರ' (ಕಥೆ) ಭಾಗ 2 by venkatb83
ಉ: 'ಆಲದ ಮರ' (ಕಥೆ) ಭಾಗ 2
ಉ: 'ಆಲದ ಮರ' (ಕಥೆ) ಭಾಗ 2
In reply to ಉ: 'ಆಲದ ಮರ' (ಕಥೆ) ಭಾಗ 2 by bhalle
ಉ: 'ಆಲದ ಮರ' (ಕಥೆ) ಭಾಗ 2
ಉ: 'ಆಲದ ಮರ' (ಕಥೆ) ಭಾಗ 2
In reply to ಉ: 'ಆಲದ ಮರ' (ಕಥೆ) ಭಾಗ 2 by kavinagaraj
ಉ: 'ಆಲದ ಮರ' (ಕಥೆ) ಭಾಗ 2