ಅಚ್ಚಳಿಯದ ಪ್ರಭಾವ ಬೀರಿದ ವ್ಯಕ್ತಿಗಳು

ಅಚ್ಚಳಿಯದ ಪ್ರಭಾವ ಬೀರಿದ ವ್ಯಕ್ತಿಗಳು

ತೊಂಬತ್ತು ವರುಷಗಳ ನನ್ನ ತುಂಬು ಜೀವನದಲ್ಲಿ ಬಂದು ಹೋದವರೆಷ್ಟೋ ಜನರು. ಅವರಲ್ಲಿ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಬೆರಳೆಣಿಕೆಯ ವ್ಯಕ್ತಿಗಳು. ಅವರನ್ನು ನಾನು ಎಂತು ಮರೆಯಲಿ?

ಬೇರೊಂದು ಬರಹದಲ್ಲಿ, ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಅಧ್ಯಾಪಕರ ಬಗ್ಗೆ ಬರೆದಿದ್ದೇನೆ. ಅವರ ಹೊರತಾಗಿ ಮುಲ್ಕಿಯ ಪಿ. ಎಸ್. ಮುಂಡ್ಕೂರ್ ಮತ್ತು ಸೊವರಿನ್ ಟೈಲ್ ಫ್ಯಾಕ್ಟರಿಯ ಎಸ್. ಎಂ. ನಾಯಕ್ ಇವರಂತಹ ಕೆಲವು ಮಹನೀಯರು ನನ್ನ ಬದುಕಿನಲ್ಲಿ ಗಾಢ ಅಚ್ಚೊತ್ತಿದ್ದಾರೆ.

ಅವರೆಲ್ಲರೂ ಶುದ್ಧ ಚಾರಿತ್ರ್ಯದ ವ್ಯಕ್ತಿಗಳು. ಮುಲ್ಕಿಯ ಮುಂಡ್ಕೂರರು ಎಲ್ಲರ ಗೌರವ ಗಳಿಸಿದ ವ್ಯಕ್ತಿ. ಮುಲ್ಕಿಯ ಪ್ರಗತಿಗಾಗಿ, ಅಲ್ಲಿನ ಕಾಲೇಜಿಗಾಗಿ ಶ್ರಮಿಸಿದವರು. ಲಯನ್ಸ್ ಕ್ಲಬ್ ವತಿಯಿಂದ, ಡಾ. ಎಂ.ಸಿ. ಮೋದಿ ಅವರ ಮೂಲಕ ಕಣ್ಣು ಚಿಕಿತ್ಸಾ ಶಿಬಿರ ಜರಗಿಸಿದವರು.

ಮಂಗಳೂರಿನ ಬೊಕ್ಕಪಟ್ಣದ ಸೊವೆರಿನ ಟೈಲ್ ಫ್ಯಾಕ್ಟರಿಯ ನಿರ್ವಾಹಕರಾಗಿದ್ದವರು ಎಸ್. ಎಂ.ನಾಯಕ್. ಭಂಡವಾಳಷಾಹಿ ಕುಟುಂಬಕ್ಕೆ ಸೇರಿದವರಾದರೂ ಮಾರ್ಕ್ಸ್ ಸಿದ್ಧಾಂತದಲ್ಲಿ ನಂಬಿಕೆಯಿದ್ದವರು. ಯೌವನದಲ್ಲಿ ಅವರು ಬೆಂಗಳೂರಿನಲ್ಲಿ ಕುಟುಂಬದ ವ್ಯವಹಾರಕ್ಕೆ ಹೊರತಾದ ಒಂದು ಉದ್ಯೋಗದಲ್ಲಿದ್ದರು. ಅಲ್ಲಿ ಅವರನ್ನು ನಾನು ಮೊದಲ ಬಾರಿ ಭೇಟಿಯಾದೆ. ಮಾರ್ಕ್ಸ್ ಸಿದ್ಧಾಂತಗಳನ್ನು ಪ್ರಚಾರ ಮಾಡಲಿಕ್ಕಾಗಿ ಸಂಸ್ಥೆಯೊಂದನ್ನು ಕಟ್ಟಲು ಪ್ರಯತ್ನಿಸುತ್ತಿದ್ದರು ಅವರು. ಹಂಪನಕಟ್ಟೆಯ ಇ.ಎ.ಪೈ ಕಟ್ಟಡದಲ್ಲಿ ೧೯೫೦ರ ಆರಂಭದಲ್ಲಿ ವಾಚನಾಲಯವನ್ನು ಸ್ಥಾಪಿಸಲು ನಮಗೆ ಸಾಧ್ಯವಾದದ್ದು ಅವರ ನೆರವಿನಿಂದಲೇ. ಆಗಿನ ಆಗುಹೋಗುಗಳ ಬಗ್ಗೆ ಚರ್ಚಾಕೂಟಗಳನ್ನು ಅಲ್ಲಿ ನಡೆಸುತ್ತಿದ್ದೆವು. ಅನಂತರ ಅವರ ಕುಟುಂಬ ವರ್ಗದವರು ಸೊವೆರಿನ ಟೈಲ್ ಫ್ಯಾಕ್ಟರಿಯ ಉಸ್ತುವಾರಿಯನ್ನು ಅವರು ವಹಿಸಿಕೊಳ್ಳಬೇಕೆಂದು ಒತ್ತಾಯಿಸಿದರು. ಆದರೆ ಅವರು ಭಂಡವಾಳಷಾಹಿ ಕಲ್ಪನೆಗಳಿಗೆ ಒಗ್ಗಿಕೊಳ್ಳಲೇ ಇಲ್ಲ. ಅಂತಹ ಚಾರಿತ್ರ್ಯ ಹಾಗೂ ಸಾಮರ್ಥ್ಯದ ಕೆಲವೇ ಕೆಲವು ವ್ಯಕ್ತಿಗಳನ್ನು ಮಾತ್ರ ನಾನು ಕಂಡಿದ್ದೇನೆ.

ಮಂಗಳೂರಿನ ಬೋಳೂರಿನ ಅಕ್ಕಿ ಗಿರಣಿಯ ಮಾಲೀಕರಾದ ಪಂಚಮಹಲ್ ಅಚ್ಚುತ ಪ್ರಭು ನೆನಪಿಗೆ ಬರುವ ಇನ್ನೊಬ್ಬ ವ್ಯಕ್ತಿ. ಅವರು ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತ. ಮಂಗಳೂರು ಮುನಿಸಿಪಾಲಿಟಿಯ ಕೌನ್ಸಿಲರ್ ಆಗಿದ್ದವರು. ನಾವು ಕೆಲವು ಪ್ರಗತಿಪರ ಕೃಷಿಕರು ಸ್ಥಾಪಿಸಿದ್ದ ಕೃಷಿ ಅನುಭವ ಕೂಟವನ್ನು ಅವರು ಸೇರಿಕೊಂಡಾಗ, ಅವರೊಂದಿಗೆ ನನ್ನ ಸಂಪರ್ಕ ಆರಂಭ. ಮಾಹಿತಿ ವಿನಿಮಯಕ್ಕಾಗಿ ತಿಂಗಳಿಗೊಂದು ಸಭೆ ಜರಗಿಸುವ ಚರ್ಚಾಕ್ಲಬ್ ಆಗಿದ್ದ ಕೃಷಿ ಅನುಭವ ಕೂಟಕ್ಕೆ ಹೊಸ ರೂಪ ನೀಡಿದವರು ಅಚ್ಚುತ ಪ್ರಭುಗಳು. ಅವರ ಮುಂದಾಳುತನದಲ್ಲಿ ಒಂದು ಸೆಮಿನಾರು, ಜಾನುವಾರು ಪ್ರದರ್ಶನ ಹಾಗೂ ಪುರಭವನದಲ್ಲಿ ಕಾರ್ಯಕ್ರಮ ಏರ್ಪಡಿಸಿದೆವು. ನಮ್ಮ ಸೆಮಿನಾರ್ ಜರಗಿಸಿದ್ದು ಮೋತಿಮಹಲ್ ಹೋಟೆಲಿನಲ್ಲಿ. ಅದಕ್ಕೆ ರೂಪಾಯಿ ಐದರ ಟಿಕೆಟ್ ಖರೀದಿಸಬೇಕಾಗಿತ್ತು (ಆಗಿನ ಕಾಲಕ್ಕೆ ಅದು ದುಬಾರಿ.) ಸೆಮಿನಾರಿನಲ್ಲಿ ಭಾಗವಹಿಸಿದವರು ಸುಮಾರು ೨೦೦ ಜನರು.

ಅದರ ಸಂಪನ್ಮೂಲ ವ್ಯಕ್ತಿಗಳು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳು. ಅದು ದಕ್ಷಿಣಕನ್ನಡದಲ್ಲಿ ಸರಕಾರೇತರ ಸಂಸ್ಥೆಯೊಂದು ಸಂಘಟಿಸಿದ ಮೊದಲನೆಯ ಕೃಷಿಕರ ಕಾರ್ಯಕ್ರಮ. ದುಬಾರಿ ಹೋಟೆಲ್ ಎನಿಸಿದ್ದ ಮೋತಿಮಹಲಿನಲ್ಲಿ ಕೃಷಿಕರು ಕಾರ್ಯಕ್ರಮ ಏರ್ಪಡಿಸಿದ ಬಗ್ಗೆ ಕೆಲವರು ಟೀಕೆ ಮಾಡಿದರು. ನಾವು ಈ ಕಾರ್ಯಕ್ರಮಗಳನ್ನು ನಡೆಸಿದ ನಂತರವೇ ಲಯನ್ಸ್ ಕ್ಲಬ್, ಸಿಂಡಿಕೇಟ್ ಕೃಷಿ ಪ್ರತಿಷ್ಠಾನ ಇತ್ಯಾದಿ ಸರಕಾರೇತರ ಸಂಸ್ಥೆಗಳು ಇಂತಹ ಕೃಷಿಕರ ಕಾರ್ಯಕ್ರಮಗಳನ್ನು ಜರಗಿಸಲು ತೊಡಗಿದವು.

ನಾವು ನೆಹರೂ ಮೈದಾನಿನಲ್ಲಿ ಏರ್ಪಡಿಸಿದ್ದ ಜಾನುವಾರು ಪ್ರದರ್ಶನದಲ್ಲಿ ಅತ್ಯುತ್ತಮ ಜಾನುವಾರುಗಳಿಗೆ ಬಹುಮಾನ ಇತ್ತೆವು. ಅಂದು ಸಂಜೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸಭೆಗೆ ಜಿಲ್ಲಾಧಿಕಾರಿಯಾಗಿದ್ದ ಎಚ್. ಎಲ್. ನಾಗೇಗೌಡರ ಅಧ್ಯಕ್ಷತೆ. ದಕ್ಷಿಣಕನ್ನಡದ ಸೀ-ಐಲ್ಯಾಂಡ್ ಹತ್ತಿ ಬೆಳೆಗಾರರ ಸಂಘದ ಅಧ್ಯಕ್ಷರೂ, ಅತ್ಯುತ್ತಮ ಕೃಷಿಕರೂ ಆಗಿದ್ದ ಯೆಕ್ಕಾರು ಸುಬ್ಬಯ್ಯ ಹೆಗಡೆಯವರಿಗೆ ಅಂದು ಚಿನ್ನದ ಪದಕ ನೀಡಿ ಸನ್ಮಾನಿಸಿದೆವು.

ಆ ಸಂದರ್ಭದಲ್ಲಿ ನಾನು ಕೃಷಿ ಅನುಭವ ಕೂಟದ ಕಾರ್ಯದರ್ಶಿ ಆಗಿದ್ದೆ. ಈ ಅಸಾಧಾರಣ ಕಾರ್ಯಕ್ರಮ ಸಾಧ್ಯವಾದದ್ದು ಅಚ್ಚುತ ಪ್ರಭುಗಳ ಕ್ರಿಯಾಶೀಲತೆಯಿಂದ; ಅವರಿಗೆ ಸಮರ್ಥ ನೆರವು ಇತ್ತವರು ಬಂಟ್ವಾಳದ ಎಸ್. ಡಿ. ಕೊಂಬ್ರಬೈಲ್ ಮತ್ತು ಕಿನ್ಯಾದ ಇ. ವಿಠಲ ರಾವ್. ಇದಾದ ನಂತರ ಅಚ್ಚುತ ಪ್ರಭುಗಳು ಒಂದು ಡೈರಿ ಆರಂಭಿಸಿದರು. ಅಗ ಅವರ ಅಕ್ಕಿ ಗಿರಣಿಯಲ್ಲಿ ಡೈರಿ ಬಗ್ಗೆ ಜಿಲ್ಲೆಯ ಕೃಷಿಕರ ಸಭೆ ನಡೆಸಿದೆವು. ಇದು ದಕ್ಷಿಣಕನ್ನಡದಲ್ಲಿ ಹೈನೋದ್ಯಮಕ್ಕೆ ಒತ್ತಾಸೆ ನೀಡಿತು. ಅನಂತರ ಅಚ್ಚುತ ಪ್ರಭುಗಳು ಕಿನ್ಯಾದಲ್ಲಿ ಒಂದು ಕೃಷಿ ಫಾರ್ಮ್ ಮಾಡಿದರು. ಅಲ್ಲಿ ಜರಗಿಸಿದ ಕ್ಷೇತ್ರೋತ್ಸವವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಆ ಫಾರ್ಮಿನಲ್ಲಿ ಗೇರು ತೋಟ, ಗೇರು ಸಂಸ್ಕರಣಾ ಘಟಕ ಹಾಗೂ ಕೋಳಿ ಸಾಕಣೆ ಘಟಕ ಸ್ಥಾಪಿಸಿದರು. ಅವರು ಮಂಗಳೂರಿನಲ್ಲಿ ಕೃಷಿ ಉಪಕರಣಗಳ ಉತ್ಪಾದನಾ ಘಟಕ ಆರಂಭಿಸಿದರೂ, ತರುವಾಯ ಅದನ್ನು ಮುಚ್ಚಬೇಕಾಯಿತು. ಕೃಷಿಯ ಎಲ್ಲ ಅಂಗಗಳಲ್ಲಿಯೂ ಜ್ನಾನ ಹಾಗೂ ಅನುಭವ ಸಂಪನ್ನರಾಗಿದ್ದವರು ಅಚ್ಚುತ ಪ್ರಭುಗಳು.

ದಿವಂಗತ ಬಂಟ್ವಾಳ ನಾರಾಯಣ ನಾಯಕರು ಮಂಗಳೂರಿನ ಇನ್ನೊಬ್ಬ ಮೇರು ವ್ಯಕ್ತಿ. ಹಲವಾರು ವರುಷ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ದಕ್ಷಿಣಕನ್ನಡ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿದ್ದರು. ಅವರು ಜೀವಮಾನವಿಡೀ ಕಾಂಗ್ರೆಸ್ ಹುರಿಯಾಳು. ಎಲ್ಲರೂ ಮೆಚ್ಚುವ ಕೆಲವೇ ರಾಜಕಾರಣಿಗಳಲ್ಲಿ ಅವರೊಬ್ಬರು. ಕೃಷಿಕರ ಎಲ್ಲ ಕಾರ್ಯಕ್ರಮಗಳಿಗೂ ಅವರ ಪ್ರೋತ್ಸಾಹ. ದಕ್ಷಿಣಕನ್ನಡ ಕೃಷಿ ಅಭಿವೃದ್ಧಿ ಸಂಘ, ಕ್ಯಾಂಪ್ಕೋ ಮತ್ತು ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯ ಸ್ಥಾಪನೆಗೆ ಮುಂದಾಳುತನ ವಹಿಸಿದವರಲ್ಲಿ ಪ್ರಮುಖರು. ಅವರೊಂದಿಗೆ ನನ್ನ ಮೊದಲ ಸಂಪರ್ಕ ೧೯೪೧ರಲ್ಲಿ ನಾನು ವಿದ್ಯಾರ್ಥಿ ಸಂಘದ ಸಕ್ರಿಯ ಕಾರ್ಯಕರ್ತನಾಗಿದ್ದಾಗ. ಲೈಟ್ ಹೌಸ್ ಹಿಲ್‍ನಲ್ಲಿದ್ದ ತನ್ನ ಮನೆಯಿಂದ ನಮ್ಮ ಹಾಸ್ಟೆಲಿಗೆ ನಡೆದು ಬರುತ್ತಿದ್ದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಲ್ಲಿ ನಮ್ಮ ಕೃಷಿ ಅನುಭವ ಕೂಟದ ತಿಂಗಳ ಸಭೆಗಳನ್ನು ನಡೆಸಲು ಶುಲ್ಕರಹಿತವಾಗಿ ಜಾಗ ನೀಡಿದ್ದರು. ಅವರ ಬಗ್ಗೆ ಬಹಳಷ್ಟು ಬರೆಯಬಹುದು; ಆದರೆ ಇಷ್ಟು ಸಾಕು. ಸಹಕಾರಿ ಸಂಸ್ಥೆಗಳ ಕಾರ್ಯಕರ್ತರ ಸಭೆಯೊಂದರಲ್ಲಿ ಭಾಷಣ ಮಾಡಿ, ಅಲ್ಲಿಂದ ಇನ್ನೊಂದು ಸಭೆಗೆ ಸಾಗುತ್ತಿರುವಾಗ ಅವರು ಹಾದಿಯಲ್ಲೇ ತೀರಿಕೊಂಡರು.

ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಇನ್ನು ಕೆಲವರು: ಚೇರ್ಕಾಡಿ ರಾಮಚಂದ್ರ ರಾವ್, ಕೆ. ಎಂ. ಉಡುಪ, ಮೂಡಬಿದ್ರೆಯ ಡಾ. ಎಲ್. ಸಿ. ಸೋನ್ಸ್, ಎಡಪದವಿನ ಜೀವಂಧರ್ ಕುಮಾರ್ ಮತ್ತು ಕೊಕ್ಕರ್ಣೆಯ ಭಾಸ್ಕರ ಕಾಮತ್. ಅವರಂತೆಯೇ ಎಸ್. ಡಿ. ಕೊಂಬ್ರಬೈಲ್, ಇ. ವಿಠಲ ರಾವ್, ಕೆ. ಆರ್. ಭಾಗವತ್, ಶಾಂತಾರಾಮ ಪೈ ಮತ್ತು ಬಿ. ವಿ. ಕಕ್ಕಿಲಾಯರನ್ನೂ ಮರೆಯುವಂತಿಲ್ಲ.

ಇವರೆಲ್ಲರೂ ಸಮಾಜದ ಹಿತಕ್ಕಾಗಿ ದುಡಿದ ದೊಡ್ಡವರು. ಇವರ ಬದುಕಿನಿಂದ ಪ್ರೇರಣೆ ಪಡೆದು ಹೆಚ್ಚೆಚ್ಚು ಜನರು ಸಾರ್ಥಕವಾಗಿ ಜೀವನ ನಡೆಸುವಂತಾಗಲಿ.

 

Comments